ಬ್ಯುಸಿ!
ಬ್ಯುಸಿ!
“ಅಲ್ಲಯೋ ದೇವೀ…!”
“ಇರು ಇರು…, ಬ್ಯುಸಿಯಾಗಿದ್ದೀನಿ!”
“ವಾ! ನಾನಲ್ಲದೆಯೂ ಬ್ಯುಸಿಯೋ?”
“ನೀನೆಂಬ ಬ್ಯುಸಿಯಿಂದ ಮುಕ್ತಳಾಗಿದ್ದೀನಿ!”
“ಹೇಗೆ?”
“ಹೇಗಾ…! ಜೀವನವೆನ್ನುವುದು ಕಾರಣ- ಪರಿಣಾಮಗಳ ಸರಣಿ!”
“ಇದೇನು ದೇವಿ! ನಾನು ಇತರರಿಗೆ ಹೇಳುವ ಕಥೆಯಂತೆ…, ಸುತ್ತಿ ಬಳಸಿ ಹೇಳುತ್ತಿರುವುದು!”
“ಇಷ್ಟು ದಿನ ನೀನು ಗಮನಿಸಿರಲಿಲ್ಲ! ನಾನು ಹೀಗಾದ್ದರಿಂದಲೇ ನೀನು ಹಾಗೆ! ಆದ್ದರಿಂದಲೇ ಹೇಳಿದ್ದು! ನೀನೆಂಬ ಬ್ಯುಸಿಯಿಂದ ಮುಕ್ತಳಾಗಿದ್ದೀನಿ!”
“ನನಗರ್ಥವಾಗಲಿಲ್ಲ! ಬದುಕಿರುವವರೆಗೂ ಜೊತೆಗಿರುತ್ತೇನೆಂದವಳು!”
“ಪುತ್ರಾ…! ನಿನ್ನೊಂದಿಗೆ ಇರುವುದಿಲ್ಲಾ ಎಂದೆನೆ? ಇಲ್ಲದಿರುವುದು ಅಂದರೆ ಏನು?”
“ಅದೇ ಯೋಚಿಸುತ್ತಿದ್ದೇನೆ! ಈ ದೇವಿಗೇನಾಯಿತು ಸಡನ್ನಾಗಿ ಅಂತ!”
ನಕ್ಕರು ದೇವಿ. ಎರಡೂ ಕೈಯಿಂದ ಬಾಚಿ ತಮ್ಮೆದೆಯೊಳಕ್ಕೆ ಅದುಮಿಕೊಂಡರು.
ನೆಮ್ಮದಿ!
“ಅರ್ಥವಾಯಿತಾ?” ಎಂದರು.
ಮುಗುಳುನಕ್ಕೆ!
*
ಅಹಂಬ್ರಹ್ಮಾಸ್ಮಿ! ಎಷ್ಟೇ ಅಹಂಬ್ರಹ್ಮಾಸ್ಮಿ ಅಂದುಕೊಂಡರೂ ದ್ವೈತವನ್ನು ಆಚರಿಸುವ ಅದ್ವೈತಿ ನಾನು!
ಅದೇನು ಮಾಯವೋ ಏನೋ…, ಚಿಕ್ಕಂದಿನಿಂದಲೂ ಅದೃಶ್ಯವಾಗಿ ಯಾರೋ ನನ್ನೊಂದಿಗಿರುವ ಭಾವ! ಹೊರಗೆ ಇದ್ದಾರೆಂದರೆ ಖಂಡಿತಾ ನಾನು ದ್ವೈತಿ! ಆದರೆ ನನಗೋ…, ಈ ಬ್ರಹ್ಮಾಂಡದಲ್ಲಿ ನಾನೂ ಒಂದು ಅಂಶ ಅಂದಮೇಲೆ ದ್ವೈತಿ ಹೇಗೆ ಅನ್ನುವ ಗೊಂದಲ! ಯಾವುದೂ ನನ್ನಿಂದ ಹೊರತಲ್ಲ! ಅಥವಾ ಯಾವುದರಿಂದಲೂ ನಾನು ಹೊರತಲ್ಲ ಅನ್ನುವ ಭಾವ!
ಅದೃಶ್ಯವಾಗಿ ಯಾರೋ ನನ್ನೊಂದಿಗೆ ಇದ್ದಾರೆ ಅನ್ನುವುದನ್ನು…, ನನ್ನೊಳಗೆ ಇರುವಂತೆ ಮಾಡಿದೆ!
ಹೇಗೆ ಮಾಡಿದೆ?
*
“ಉದ್ಧವಾ…! ಯುದ್ಧ ಸಮಯದಲ್ಲಿ ನಾನು ಅರ್ಜುನನಿಗೆ ಹೇಳಿದ್ದು ಇದನ್ನೇ!! ನೀನು ಕೊಲ್ಲುವುದೆನ್ನುವುದು ಇಲ್ಲ! ಅಥವಾ ಇನ್ನೊಬ್ಬರಿಂದ ನೀನು ಸಾಯುವುದೆನ್ನುವುದೂ ಇಲ್ಲ! ಕಣ್ಣಿಗೆ ಕಾಣಿಸದ…, ಕಿವಿಗೆ ಕೇಳಿಸದ…, ಮುಟ್ಟಲಾಗದ, ಆಘ್ರಾಣಿಸಲಾಗದ, ರುಚಿಸಲಾಗದ…, ಆದರೆ ಬ್ರಹ್ಮಾಂಡವನ್ನೇ ಆವರಿಸಿರುವ ಒಂದು- ನಮ್ಮನ್ನು ಜನನ ಮರಣಗಳಿಂದ ಅತೀತವನ್ನಾಗಿಸಿದೆ!” ಎಂದು!
“ಹಾಗಿದ್ದರೆ ಅದರ ಇರವನ್ನು ಅರಿಯುವುದು ಹೇಗೆ ಕೃಷ್ಣ?” ಎಂದು ಕೇಳಿದ ಉದ್ಧವ!
“ಗಮನಿಸು…, ನೀನು ಜನಿಸುವ ಮುಂಚೆ ಎಲ್ಲಿದ್ದೆ- ಹೇಗಿದ್ದೆ? ಹುಟ್ಟುವಾಗ ಎಲ್ಲಿದ್ದೆ- ಹೇಗಿದ್ದೆ? ಈಗ ಎಲ್ಲಿದ್ದೀಯ- ಹೇಗಿದ್ದೀಯ? ಈಗಿನ ನಿನ್ನನ್ನು ನೋಡಿ ನಿನ್ನ ಬಾಲ್ಯವನ್ನು ನಿಷೇಧಿಸಬಹುದೆ? ಹುಟ್ಟುವ ಮುಂಚಿನಿಂದ ಸಾವಿನ ನಂತರದ ಹಂತದವರೆಗಿನ ಪಯಣದಲ್ಲಿ- ಬುದ್ಧಿಗೆ ಎಟುಕದ ಆದರೆ ಹೃದಯದ ಅನುಭವಕ್ಕೆ ಬರುವ ಒಂದು ಸ್ಪಂದನೆಯಿದೆ! ಅದು ಬ್ರಹ್ಮಾಂಡದೊಂದಿಗಿನ ನಮ್ಮ ಅನುಭಾವ!” ಎಂದ ಕೃಷ್ಣ!
*
ಪಂಚೇಂದ್ರಿಯಕ್ಕೆ ಅತೀತವಾಗಿ ಯಾರೋ ನನ್ನೊಂದಿಗೆ ಇದ್ದಾರೆನ್ನುವ ಈ ಅನುಭವಕ್ಕೆ ದೇವಿಯ ರೂಪವನ್ನು ಕೊಟ್ಟು ಹೃದಯದಲ್ಲಿ ಪ್ರತಿಷ್ಠಾಪಿಸಿದೆ! ಆಗಾಗ ಆ ರೂಪವನ್ನು ಹೊರಕ್ಕೆ ಹಾಕಿ ಆಲಿಂಗನಕ್ಕೆ ಒಳಗಾಗುವುದೊಂದು ಅಭ್ಯಾಸ!
*
“ಅಷ್ಟೇ…! ಇಷ್ಟು ದಿನ ನಿನ್ನ ಮನಸ್ಸು ಪ್ರಕ್ಷುಬ್ಧವಾಗುತ್ತಿತ್ತು! ಪ್ರಕ್ಷುಬ್ಧವಾಗುವುದೆನ್ನುವುದು ಪರಿಣಾಮ! ಆ ಪರಿಣಾಮಕ್ಕೆ ಕಾರಣವಾದ ಘಟನೆಗಳೇ ಅನುಭವಗಳು- ಜೀವನಾನುಭವಗಳು!! ಈಗ ನೀನು ಪ್ರಕ್ಷುಬ್ಧನಾಗುವ ಹಂತವನ್ನು ಮೀರಿದ್ದೀಯ! ಅಂದರೆ ಯಾವ ಕಾರಣದಿಂದಲೂ ನಿನ್ನ ಮನಸ್ಸು ಸ್ತಿಮಿತವನ್ನು ಕಳೆದುಕೊಳ್ಳವುದಿಲ್ಲ! ಅದಕ್ಕೆ ಕಾರಣ ನಿನ್ನಲ್ಲಿ ನಾನು ಬ್ಯುಸಿಯಾಗಿದ್ದದ್ದು! ನೀನು ಪ್ರಕ್ಷುಬ್ಧಗೊಂಡಾಗಲೆಲ್ಲಾ ಅದನ್ನು ನಿವಾರಿಸಿ- ನಿನ್ನನ್ನು ಸ್ಥಿತಪ್ರಜ್ಞನಾಗಿರುವಂತೆ ಮಾಡಲು ನಾನು ಪಟ್ಟ ಶ್ರಮ! ಈಗ ಪ್ರಕ್ಷುಬ್ಧನೇ ಆಗುವುದಿಲ್ಲವೆಂದಮೇಲೆ ನಿನ್ನ ವಿಷಯದಲ್ಲಿ ನಾನು ಹೇಗೆ ಬ್ಯುಸಿಯಾಗಲಿ?”
“ಹಾಗಿದ್ದರೆ ಈಗ ನನ್ನ ಧರ್ಮವೇನು ದೇವಿ?”
“ಪುತ್ರಾ…, ಈ ನಾನು- ನನ್ನವರೆಂಬ ವ್ಯಾಮೋಹವಿದೆಯಲ್ಲಾ…, ಇರು ಮಧ್ಯ ಬಾಯಿ ಹಾಕಬೇಡ! ಅದು ವ್ಯಾಮೋಹವೇ…! ಆ ವ್ಯಾಮೋಹದಿಂದ ಮುಕ್ತನಾಗದ ಹೊರತು ನೀನು ಗುರಿ ಸೇರುವುದಿಲ್ಲ!”
“ಅರ್ಥವಾಯಿತು ದೇವಿ! ಭಾವಾನುಭೂತಿಯನ್ನು ಮೀರಿ ಗುರಿಯನ್ನು ಸೇರುವವರೆಗೆ- ನಾನೆಂಬ ಬ್ಯುಸಿಯಿಂದ ನಿನಗೆ ಮುಕ್ತಿಯಿಲ್ಲ!”
“ತಥಾಸ್ತು!”
ಅಬ್ಬಾ ಅದ್ಭುತ ಬರಹ 🙏🙏🙏 🙇♂️🙇♂️🙇♂️ಅಲ್ಲಿರುವ ಪ್ರಶ್ನೆಗಳ ಉತ್ತರಕ್ಕಾಗಿ ಕಾಯುತಲಿರುತ್ತೇವೆ.. ಸಿಗುತ್ತೆ ಅನ್ನುವ ಆಶಾಭಾವದಲ್ಲಿ 😊😊 ಆದರೆ ವ್ಯಾಮೋಹವನ್ನು ಪೂರ್ತಿ ಅನುಭವಿಸಿ ಶಮನಗೊಳಿಸಿದಾಗಲೇ ಸಾಧ್ಯ.ಬಿಟ್ಟು ಹೋಗಿರುವ ಸಿಗದೇ ಇರುವ ವ್ಯಾಮೋಹವನ್ನು ಪೂರ್ತಿ ಬಿಟ್ಟು, ಸಿಗುವಲ್ಲಿ ಪಡೆದುಕೊಂಡು ಪೂರ್ತಿ ಶಮನಗೊಳಿಸಿ ಗುರಿ ಸಾದಿಸಿದ ಮೇಲೆ ಪಡೆಯುವಂತದ್ದು.ಇಲ್ಲ ಅಂದರೆ ಸಾಧ್ಯವಿಲ್ಲಾ. ಮತ್ತೆ ಅದರ ಸುಳಿಯೊಳಗೆ ಹೇಗೆ ಅಂದರೆ ಸನ್ಯಾಸಿ ಮತ್ತೆ ಸಂಸಾರಿ ಆದಂತೆ😊
ReplyDelete