ಪ್ರೇಮ ಪರೀಕ್ಷೆ!
ಪ್ರೇಮ ಪರೀಕ್ಷೆ!
ಅವಳ (ಹೆಣ್ಣಿನ) ಪಾದವನ್ನು ನನ್ನ ಹೃದಯದಲ್ಲಿಟ್ಟು ಆರಾಧಿಸಿದೆ!
ಅವಳೆಂದಳು…,
“ಅಂತೂ ನೀನು ಬದಲಾಗುವುದಿಲ್ಲ! ಯಾರು ಇದ್ದರೇನು, ಬಿಟ್ಟರೇನು, ನೀನು ಮಾತ್ರ…, ಅವಳು ಬಿಟ್ಟರೆ ಇವಳು, ಇವಳು ಬಿಟ್ಟರೆ ಅವಳು ಅಂತ ಸುಖವಾಗಿರ್ತೀಯ! ಅವಳೂ ಬೇಕು ಇವಳೂ ಬೇಕು ನೀನೂ ಇರು ಎನ್ನುವ ಕೆಟಗರಿ ನಾನಲ್ಲ! ನನ್ನ ಹೃದಯ ಪ್ರೇಮದ ಘನತೆ, ಹಿರಿಮೆಗೆ ತಕ್ಕವನಲ್ಲ- ಯೋಗ್ಯನಲ್ಲ ನೀನು! ಯಾವಳನ್ನೋ ಇಟ್ಟುಕೊಂಡವ ಕಟ್ಟಿಕೊಂಡವಳಿಗೆ- ನಿನಗೇನು ಕಡಿಮೆ ಮಾಡಿದ್ದೇನೆ- ಎಂಬುವವನಿಗಿಂತ ನಿಕೃಷ್ಟ ನೀನು! ಅವಳ ಹೆಸರೇ ನನಗೆ ಮೈ ಉರಿಯುವಾಗ, ಅವಳಲ್ಲೇ ಬಿದ್ದು ಹೊರಳಾಡುವುದು ನಿನಗೆ ಸುಖ! ಒಂದೋ ನಾನು ಅಥಾವಾ ಅವಳು ಎನ್ನುವ ಕಾನ್ಸೆಪ್ಟ್ ಇತ್ತು…! ಊಹೂಂ, ನೀನು ಬದಲಾಗುವ ಜಾತಿಯಲ್ಲ! ನಾಯಿನ ಕರೆದುಕೊಂಡು ಹೋಗಿ ಸಿಂಹಾಸನದಲ್ಲಿ ಕೂರಿಸಿದರೆ ಹೊಲಸು ಕಾಣುವಾಗ ಮತ್ತೆ ಹಾರಿತಂತೆ- ಅಂತಹ ನಿಕೃಷ್ಟ ಮನಸ್ಥಿತಿಯವನು ನೀನು! ಯಾವುದೇ ಕಾರಣಕ್ಕೂ ನನಗೆ ಜೀವ ಇರುವವರೆಗೆ ನಿನ್ನ ಮುಖ ತೋರಿಸಬೇಡ- ಹಾಳಾಗಿ ಹೋಗು!! ನೀನು ಮಾತ್ರ ಸರ್ವನಾಶ ಆಗಿ ಹೋಗಬೇಕು- ನನ್ನ ಕಣ್ಣಮುಂದೆಯೇ…! ನನ್ನಿಂದ ನಿನ್ನೆಡೆಗೆ ಹರಿದ ಅಷ್ಟೂ ಒಳಗಿನ ಪವಿತ್ರ ಭಾವಕ್ಕೆ ದ್ರೋಹ ಬಗೆದ ನಿನಗೆ ಒಳ್ಳೆಯದಾಗಬಾರದು…! ನಿನಗೇನು ದ್ರೋಹ ಬಗೆದೆ ಅನ್ನುತ್ತೀಯಲ್ಲ…, ನಿನ್ನೆಡೆಗೆ ಹರಿಸಿದ ಅಷ್ಟೂ ಭಾವವನ್ನು ಮತ್ತೂ ಬೇರೆಡೆ ಹುಡುಕಿಕೊಂಡು…, ಅಲ್ಲೂ ಬೇಕು ಇಲ್ಲೂ ಬೇಕು ಎಂದೆನುತ, ಒಂದು ನಾಯಿ ಹೆಣ್ಣಾದರೂ ಪ್ರೇಮದ ಹೆಸರಿನಲ್ಲಿ ಕಾಮಿಸುವ ನಿನಗೆ ನನ್ನ ಕ್ಷಮೆಯಿಲ್ಲ!! ಮಣ್ಣು ತಿಂದು ಹೋಗು ಎನ್ನುವ ಶಾಪವೇ ಸದಾ ನಿನಗೆ…! ನನಗೇ ಅಸಹ್ಯ ಅನಿಸುವಷ್ಟು ಥರ್ಡ್ ಕ್ಲಾಸ್ ನೀನು!”
*
ಇಂತಹ ಪದಪುಂಜ ಬಳಸಿ ಬೈಯ್ಯುವವಳಾದರೂ ಹೆಣ್ಣೆಂದರೆ ನನಗೆ ಪ್ರಾಣ!ಒಲವು ಯಾವ ಕಡೆಯಿಂದ ಬಂದರೂ ಬೇಡ ಅನ್ನುವವನಲ್ಲ! ಕಾಮಕ್ಕೆ ಪ್ರಸಕ್ತಿಯನ್ನೇ ಕೊಡದವನು! ಪ್ರತಿ ಹೆಣ್ಣನ್ನು ಹೃದಯದಲ್ಲಿಟ್ಟು ಆರಾಧಿಸುವವನು! ಹೆಣ್ಣೆಂದರೆ ದೇವಿ ನನಗೆ! ಆದರೆ…, ಯಾವೊಂದು ಕಟ್ಟುಪಾಡುಗಳಿಗೂ ಒಳಗಾಗದೆ ಆರಾಧಿಸುವುದು, ಪ್ರೇಮಿಸುವುದು, ನಿಯತ್ತಿನಿಂದಿರುವುದು ನನ್ನ ತತ್ತ್ವ!
ಅವಳ ಮೇಲಿನ ನನ್ನ ಪ್ರೇಮ ನಿಜ! ಮುಂಚಿನಿಂದಲೂ ಅವಳೊಂದಿಗೆ ಹೇಗಿದ್ದೇನೂ ಈಗಲೂ ಹಾಗೆಯೇ ಇದ್ದೇನೆ! ಸಮಸ್ಯೆ…, ಮತ್ತೊಬ್ಬಳೊಂದಿಗಿನ ನನ್ನ ಒಡನಾಟ!
ಇಲ್ಲಿ ನನಗೆ ಅವಳ ಮೇಲಿರುವ ಪ್ರೇಮ- ಅವಳು ಹೇಳಿದಂತೆಯೇ ಆಗಿದೆ ಅಂದುಕೊಳ್ಳೋಣ- ಅವಳಿಗೆ ನನ್ನ ಮೇಲಿರುವ ಪ್ರೇಮ? ಅವಳು ನನ್ನನ್ನು ಪ್ರೇಮಿಸಿದ್ದರೆ ಇಷ್ಟು ಕಠಿಣವಾಗಿ ಆಕ್ಷೇಪಿಸುತ್ತಿದ್ದಳೆ?
ಇದನ್ನು ಹೇಗೆ ತೆಗೆದುಕೊಳ್ಳಲಿ? ಅದರಲ್ಲೂ…, ಆರೋಗ್ಯವಂತ ಗಂಡನೂ, ಮಕ್ಕಳೂ ಇರುವವಳು!
ನನಗರ್ಥವಾಗುವುದಿಲ್ಲ!
ನಾನೇನೂ ನೀನೇ…, ನೀನೊಬ್ಬಳೇ ಅಂದವನಲ್ಲ! ಪ್ರತಿ ಹೆಣ್ಣಿನಲ್ಲಿ ಪ್ರೇಮ ಮೂಡುತ್ತದೆ ಎಂದು ಮುಂಚೆಯೇ ಸ್ಪಷ್ಟವಾಗಿ ಹೇಳಿರುವವ! ನನ್ನ ಬದುಕೊಂದು ತೆರೆದ ಪುಸ್ತಕದಂತೆ! ಹಾಗಿರುವಾಗ…, ನಾನೇನೋ ದ್ರೋಹ ಮಾಡಿದೆ ಅನ್ನುವಂತೆ ಇಷ್ಟು ನೀಚವಾಗಿ ಪದಗಳ ಬಳಕೆ ಮಾಡುತ್ತಾಳೆಂದರೆ…, ಏನೋಪ್ಪ!
ಇದು ಸಮರ್ಥನೆಯಲ್ಲ! ಇವ ಹೀಗೆಯೇ ಎಂದು ಗೊತ್ತಿದ್ದೂ ಅಂಟಿಕೊಂಡವಳು…, ನಿಜವಾಗಿಯೂ ಹಾಗೆಯೇ ಎಂದು ಅರಿವಾದಾಗ ಒಂದೋ ಇದ್ದಿಬಿಡಬೇಕು! ಅಥವಾ ಬಿಟ್ಟು ಹೋಗಬೇಕು! ಅದುಬಿಟ್ಟು ನಿಜವಾದ ಅವಳನ್ನು ತೋರಿಸಿಕೊಡುವುದಲ್ಲ!!
ಇವಳು ಹೀಗೆಂದು ಉಳಿದವರ ಮೇಲಿನ ಗೌರವವನ್ನು ಕಳೆದುಕೊಳ್ಳಲೇ? ಎಲ್ಲರೂ ಹೀಗೆಯೇ ಎಂದು ಹೆಣ್ಣು ಕುಲವನ್ನೇ ಕೀಳಾಗಿ ಕಾಣಲೇ…?
ಅದಸಾಧ್ಯ!
ಎಲ್ಲಿ ಅವಳ ಮೇಲಿನ ನನ್ನ ಪ್ರೇಮ ನಿಜವೇ ಆಗಿದ್ದು ಅವಳ ಶಾಪ ಅವಳಿಗೇ ತಿರುಗುಬಾಣವಾಗುತ್ತದೋ ಅನ್ನುವ ಹೆದರಿಕೆ ನನಗೆ!
ದೇವರೇ…, ಅವಳ ನಂಬಿಕೆಯಂತೆ…, ಅವಳ ಮೇಲಿನ ನನ್ನ ಪ್ರೇಮ ಸುಳ್ಳಾಗಿರಲಿ…, ಅವಳ ಶಾಪ ಫಲಿಸಲಿ ಅನ್ನೋಣವೆಂದರೆ…,
ಪ್ರತಿ ಹೆಣ್ಣಿನಲ್ಲಿ ನನಗಿರುವ ಪ್ರೇಮ ನಿಜ…,
ಹೆಣ್ಣನ್ನು ದೇವಿಯಂತೆ ಆರಾಧಿಸುತ್ತೇನೆ ಅನ್ನುವಲ್ಲಿ…,
ಅಸೂಯೆಮೂಲವಾದ ಅವಳ ಶಾಪದ ಪ್ರಸಕ್ತಿಯೇನು?
Comments
Post a Comment