ನಂಬಿಕೆ!

ನಂಬಿಕೆ!

ಏಕಾಂತ- ಎಷ್ಟು ಚಂದ!

ಅದೊಂದು ಸ್ಥಳ! ನಿರ್ಜನವಾದ ಸ್ಥಳ! ಜನ ಅಲ್ಲಿಗೆ ಬರಲು ಹೆದರುತ್ತಾರೆ! ವಿಚಿತ್ರವೆಂದರೆ…, ಅಲ್ಲೊಂದು ದೇವಿಯ ವಿಗ್ರಹವಿರುವ ಗುಡಿಯಿದೆ! ಯಾವಕಾಲದಲ್ಲಿ- ಯಾವ ಪುಣ್ಯಾತ್ಮ ಕಟ್ಟಿಸಿದನೋ ಏನೋ…! ದೇವಿಯ ಗುಡಿಯಿದ್ದೂ ಅಲ್ಲಿಗೆ ಬರಲು ಹೆದರುತ್ತಾರೆಂದರೆ…, ನಂಬಿಕೆ ಪ್ರಶ್ನಿಸಲ್ಪಡುತ್ತದೆ!

ನನಗೋ…, ಅದೊಂದು ಸ್ವರ್ಗ!

ಧ್ಯಾನಿಸುತ್ತಾ ಕುಳಿತೆನೆಂದರೆ…, ಪ್ರಪಂಚದ ಇರವೂ ಅರಿವಿಗೆ ಬರುವುದಿಲ್ಲ!

ಧ್ಯಾನದ ಕೊನೆಗೆ ದೇವಿಯೊಂದಿಗೆ ಸಂಭಾಷಿಸುತ್ತೇನೆ!

ಅಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ನಡೆಯುತ್ತದೆ! ಒಬ್ಬರ ಸರಿ ಮತ್ತೊಬ್ಬರ ತಪ್ಪು ಹೇಗಾಗುತ್ತದೆ…, ಕೈಮೀರಿ ಮಾಡುವ ತಪ್ಪುಗಳ ಪರಿಣಾಮವೇನು…, ನಮ್ಮರಿವಿಲ್ಲದೆ ನಮ್ಮಿಂದಾಗುವ ತಪ್ಪುಗಳು ಯಾವುದು…, ತಪ್ಪುಗಳಿಗೆ ಪ್ರಾಯಶ್ಚಿತ್ತಗಳೇನು…, ಕೊನೆಗೆ…, ನಿಜವಾಗಿಯೂ ತಪ್ಪು ಅಂದರೆ ಏನು ಅನ್ನುವುದನ್ನು ಕೂಡ ಚರ್ಚಿಸುತ್ತೇ(ನೆ)ವೆ!

ನಿಷ್ಕಾಮ ಕರ್ಮದ ಬಗ್ಗೆಯೂ, ಮತಗಳಿಗೂ ಧರ್ಮಕ್ಕೂ ಇರುವ ವತ್ಯಾಸದ ಬಗ್ಗೆಯೂ ಸಂಸ್ಕೃತಿ, ಸಂಸ್ಕಾರಗಳಬಗ್ಗೆಯೂ…, ಹ್ಹೊ…, ಕೆಲವೊಮ್ಮೆ ನನಗನ್ನಿಸುತ್ತದೆ…, ಹೊರ ಪ್ರಪಂಚವನ್ನು ನೋಡಿ ನಾವು ಕಲಿಯುವುದಕ್ಕಿಂತ ಹೆಚ್ಚಿನ ಅರಿವು ನಮ್ಮೊಳಗೆ ನಾವು ಶೋಧಿಸಿದರೆ ದಕ್ಕುತ್ತದೆಂದು!

ಆತ್ಮಸಾಕ್ಷಿಗನುಗುಣವಾಗಿ ಬದುಕಿದರೆ ಸಾಕು…, ಪ್ರಪಂಚದ ಅಸ್ತಿತ್ವವೇ ಬದಲಾಗುತ್ತದೆ!

ಚಿಕ್ಕ ವಯಸ್ಸಿನ ಗಂಡ- ಹೆಂಡತಿ…, ಒಂದು ವರ್ಷವೂ ಆಗಿಲ್ಲ ಅನ್ನಿಸಿತು…, ಪುಟಾಣಿ ಪಾಪು!

ಬಿಸಿಲಿಗೆ ಒಣಗಿ…, ಆ ಹೆಣ್ಣು ತನ್ನ ಸೀರೆಯ ಸೆರಗಿನಿಂದ ಪಾಪುವನ್ನು ಹೊದಿಸಲು ಶ್ರಮಿಸುತ್ತಿದ್ದಳು.

ಕಣ್ಣು ಬಿಡಲಾಗದಷ್ಟು ಬಿಸಿಲು!

ನಾನು ನೋಡುತ್ತಿರುವುದು ಕಂಡು ಗಂಡಿನ ಮುಖದಲ್ಲಿ ಗೊಂದಲ! ಮುಂದುವರೆಯಲೋ ಬೇಡವೋ…!

ಅವರಿಗೇನೋ ಸಹಾಯದ ಅಗತ್ಯವಿದೆ ಅನ್ನಿಸಿತು. ಕೆಲಸವೋ…, ತಂಗಲು ಸ್ಥಳವೋ…, ನನ್ನ ಕಣ್ಣಿನಲ್ಲಿ ಪ್ರಶ್ನೆ ಕಾಣಿಸಿತೇನೋ…, ಏನೋ ಕೇಳಲು ಬಂದ…, ಅವನೊಳಗಿನ ಗೊಂದಲ ಅರ್ಥವಾಯಿತು! ಸಧ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೋ…, ಅಥವಾ…, ಅನ್ನುವ ಭಾವ!

ಹಣ ಕೇಳಲು ಹಿಂಜರಿಕೆ- ಏನು ಕೇಳಬೇಕೆಂದರಿಯದ ಗೊಂದಲ!

ನಾನವನ ಹೆಂಡತಿಯನ್ನು ನೋಡಿದೆ. ಒಂದೆರಡು ಸೆಕೆಂಡ್ ಹೆಚ್ಚು ಅವಳಲ್ಲಿ ನನ್ನ ನೋಟ ಸಿಕ್ಕಿಕೊಂಡಿತೇನೋ…, ಅವನ ಕಣ್ಣಲ್ಲಿ ನೋವು- ಅಸಹನೆ- ನಿಸ್ಸಹಾಯಕತೆ!

ಬನ್ನಿ!” ಎಂದು ಮುಂದಕ್ಕೆ ಹೆಜ್ಜೆ ಹಾಕಿದೆ. ಐವತ್ತೈದು ವರ್ಷದ ನನ್ನ ದಾರ್ಷ್ಟ್ಯದ ಮುಂದೆ- ಹಿಂಜರಿಕೆಯಿದ್ದರೂ- ಅವರಿಗೆ ಗೊಂದಲಕ್ಕೆ ಎಡೆಯಿರಲಿಲ್ಲ! ವಿದೇಯರಂತೆ ಹಿಂದೆಯೇ ಹೆಜ್ಜೆಹಾಕಿದರು.

ಊಟ ಮುಗಿಸುವುದರೊಳಗೆ ಅವರಬಗ್ಗೆ ಮಾಹಿತಿ ದೊರಕಿತು.

ಇಬ್ಬರೂ ಒಂದೇ ಊರಿನವರು. ಬಡ ಕುಟುಂಬದ ಕುಡಿಗಳು. ಎರಡು ಕುಟುಂಬಗಳ ಸ್ನೇಹದ ಸಂಕೇತವಾಗಿ ಇವರಿಬ್ಬರ ಮದುವೆ. ಹುಡುಗ ಡಿಗ್ರಿ ಮುಗಿಸಿದ್ದಾನೆ- ಹುಡುಗಿಗೆ ಅಲ್ಪಸ್ವಲ್ಪ ವಿಧ್ಯಾಭ್ಯಾಸವಿದೆ. ಸ್ವಲ್ಪ ದಿನ ಮುಂಚೆ ನಡೆದ ಮಹಾ ಪ್ರಳಯದಲ್ಲಿ ಪಾಪುವನ್ನು ಜೋಪಾನ ಮಾಡುವ ವ್ಯವಧಾನದಲ್ಲಿ ಮನೆಯವರೊಂದಿಗೆ- ಮನೆ ಮಠ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ!

ಬದುಕು ಅತಿ ದೊಡ್ಡ ಪ್ರಶ್ನೆಯಾದಾಗ…, ಊರುಬಿಟ್ಟು ಬಂದಿದ್ದಾರೆ!

ನಿಮ್ಮ ಜೀವನವನ್ನು ನೀವು ನೋಡಿಕೊಳ್ಳುತ್ತೀರೆನ್ನುವ ನಂಬಿಕೆ ಬರುವವರೆಗೆ ಇಲ್ಲಿರಬಹುದು!” ಎಂದೆ.

ಹುಡುಗನಿಗೊಂದು ಕೆಲಸ ಕೊಡಿಸಿದೆ. ಹುಡುಗಿ ಹೆಚ್ಚು ಓದಲನುವಾಗುವಂತೆ ವ್ಯವಸ್ತೆ ಮಾಡಿದೆ.

ಇಲ್ಲಿ ಪ್ರತಿಯೊಂದು ಖರ್ಚುವೆಚ್ಚವೂ ಲೆಕ್ಕವಿಡಲ್ಪಡುತ್ತದೆ! ಸಾಲವನ್ನು ಹೆಚ್ಚು ದಿನ ಉಳಿಸದಂತೆ ನೊಡಿಕೊಳ್ಳಿ!” ಎಂದೆ.

ಅವನನ್ನು ನಾನು ತಪ್ಪು ಹೇಳುವುದಿಲ್ಲ! ಪ್ರಪಂಚದ ದೃಷ್ಟಿಕೋನವೇ ಅದು! ಅವನ ಹೆಂಡತಿಯಲ್ಲಿ ನಾನು ತೋರುವ ಅತಿ ಆಸಕ್ತಿ ಅವನನ್ನು ಕೆರಳಿಸುವುದರಲ್ಲಿ ಅತಿಶಯವೇನು? ಜೊತೆಗೆ ಖರ್ಚು- ಸಾಲದ ಲೆಕ್ಕ ಬೇರೆ!

ಆದಷ್ಟು ಬೇಗ ಬೆಳೆಯಿರಿ…, ನಾನೇನೋ ಅವರಿಗೆ ಮಾಡಿದ್ದೇನೆ ಅಂದುಕೊಂಡಿರುವ ಒಳಿತನ್ನು ಬೇರೆಯವರಿಗೆ ಮಾಡುವಂತಾಗಿ ಅನ್ನುವ ನನ್ನ ಉದ್ದೇಶವನ್ನು ಅರಿಯುವ ವಯಸ್ಸೂ ಅವರದ್ದಲ್ಲವೇನೋ…!?

ಇಪ್ಪತ್ತು ವರ್ಷ ಮುಂಚೆ ನನ್ನನ್ನಗಲಿದ ನನ್ನ ಮಗಳು- ಆ ಹುಡುಗಿಯಲ್ಲಿ ಕಾಣಿಸಿದ್ದಕ್ಕೆ ಹೊಣೆಯಾರು?

ಅವನಿಗೆ ಅವನ ಹೆಂಡತಿಯಮೇಲಿರುವ ಪ್ರೀತಿ- ಎಲ್ಲಿ ನನ್ನಿಂದ ಅವಳಿಗೆ ತೊಂದರೆಯಾಗುತ್ತದೋ ಅನ್ನುವ ಹೆದರಿಕೆ…, ಹೇಳಿದೆನಲ್ಲಾ…, ಅವನನ್ನು ನಾನು ತಪ್ಪು ಹೇಳುವುದಿಲ್ಲ!

ಇಲ್ಲೊಂದು ದೇವೀಸ್ಥಾನವಿರುವುದು ಯಾರಿಗೂ ಗೊತ್ತಿಲ್ಲ! ಗೊತ್ತಿರುವವರೂ ಕೂಡ ಹೆಚ್ಚಾಗಿ ಇಲ್ಲಿಗೆ ಬರುವುದಿಲ್ಲ! ಏನೇನೋ ಚಲನೆಗಳು, ಮಾತನಾಡುವ ಶಬ್ದಗಳು ಕೇಳಿಸುತ್ತದಂತೆ! ಇಲ್ಲಿ ಯಾರದೋ ಕೊಲೆಯಾಗಿದೆಯೆಂದು ವದಂತಿ!” ಅನ್ನುವ ಮಾತುಗಳನ್ನು ಕೇಳಿ ಹೊರಕ್ಕೆ ಇಣುಕಿದೆ.

ಹೇ…, ನಿಜಕ್ಕೂ ಹೆದರಿಕೆಯಾಗುತ್ತಿದೆಯೋ…! ಯಾರೋ ನಮ್ಮನ್ನು ನೋಡುತ್ತಿದ್ದಾರೆ ಅನ್ನಿಸ್ತಿದೆ…, ಪ್ಲೀಸ್ ಬೇರೆ ಕಡೆ ಹೋಗೋಣ!”

ನಡೆದು ಹೋಗುತ್ತಿರುವ ಜೋಡಿಯಿಂದ ಕಣ್ಣು ತೆಗೆದು…, ದೇವರಮೇಲಿರುವ ನಂಬಿಕೆಗಿಂತ, ದೆವ್ವದಮೇಲಿರುವ ಹೆದರಿಕೆ ಹೆಚ್ಚು ಅನ್ನುವಲ್ಲಿ…, ನಮ್ಮಲ್ಲಿ ಯಾರು ಶ್ರೇಷ್ಠ ಅನ್ನುವಂತೆ ದೇವಿಯನ್ನು ನೋಡಿ ನಕ್ಕೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!