ದೇವೀಪುತ್ರನೆಂದರೆ...!

ದೇವೀಪುತ್ರನೆಂದರೆ...!

ಹಾಗೆ…, ಜೀವನದಲ್ಲಿ ಎರಡು ಹಂತಗಳು ಮುಗಿದವು! ಅದನ್ನು ಆಶ್ರಮಗಳೆಂದು ಕರೆದರೆ…, ಬ್ರಹ್ಮಚರ್ಯ, ಗೃಹಸ್ಥ ಮುಗಿದು ವಾನಪ್ರಸ್ಥಕ್ಕೆ!

ಇಪ್ಪತ್ತೈದು ವರ್ಷಗಳ ನಾಲಕ್ಕು ಆಶ್ರಮಗಳು- ನನ್ನ ಬದುಕಿನಲ್ಲಿ…, ಮೊದಲ ಆಶ್ರಮ ಮಾತ್ರ ಇಪತ್ತೈದು ವರ್ಷ! ಎರಡನೆಯದ್ದು ಏಳು ಪ್ಲಸ್ ನಾಲಕ್ಕು ಹನ್ನೊಂದು ವರ್ಷ! ಮೂರನೆಯದ್ದು ಹದಿನೈದು ವರ್ಷ! ನಾಲ್ಕನೆಯದ್ದು ಹತ್ತು!

ಒಟ್ಟು ಅರವತ್ತೊಂದು ವರ್ಷದ ಬದುಕು!

ಭೂತಕಾಲದ ಅನುಭವದಲ್ಲಿ ಭವಿಷ್ಯವನ್ನು ನಿರ್ಧರಿಸಿ ವರ್ತಮಾನದಲ್ಲಿ ಬದುಕಬೇಕಂತೆ!

ನನ್ನ ಭೂತಕಾಲದ ಬದುಕೇನು?

ಅದನ್ನು ಹೀಗೆ ಹೇಳಬಹುದು…,

ಗೃಹಸ್ಥಕ್ಕೆ ಕಾಲಿಡುವವರೆಗೆ ನಾನು ಬರೆದ ಕಥೆಗಳ ಸಂಖ್ಯೆ- ನಲವತ್ತು! ಜೊತೆಗೆ ಸಂಪೂರ್ಣವಾಗಿ ಕಾದಂಬರಿಯೊಂದರ ರೂಪುರೇಷೆ!

ಗೃಹಸ್ಥ- ನರಕ!

ಏಳು ವರ್ಷಗಳಲ್ಲಿ ನಾನು ಬರೆದದ್ದು ಕಾದಂಬರಿ ಮಾತ್ರ! ಅದೂ ಕೂಡ ಪೂರ್ಣವಾಗಿ ರೂಪುರೇಷೆ ತಯಾರಾಗಿದ್ದ ಕಾದಂಬರಿ!

ನಂತರ ಹೆಂಡತಿ ಬಿಟ್ಟು ಹೋದ ನಾಲ್ಕು ವರ್ಷದಲ್ಲಿ ನಾನು ಬರೆದ ಕಥೆಗಳ ಸಂಖ್ಯೆ ನೂರು ಮತ್ತು ಒಂದು ಕಾದಂಬರಿ ಮತ್ತು ಮೂರು ಸಿನೆಮಾಗಾಗಿನ ಸ್ಕ್ರಿಪ್ಟ್!

*

ಇದುವರೆಗಿನ ನನ್ನನ್ನು ನಾನು ಹೊರ ಹಾಕದೆ ಹೊಸ ನಾನು ರೂಪುಗೊಳ್ಳುವುದು ಕಷ್ಟ!

ಯಾವುದು ಸರಿ, ಯಾವುದು ತಪ್ಪು ನಿರ್ಧರಿಸುವವರಾರು?

ನನ್ನ ಬದುಕು ನನ್ನದು!

ನೆನಪುದಿಸಿದಾಗಿನಿಂದಲೂ ಏಕಾಂತವನ್ನು ಇಷ್ಟಪಟ್ಟವನು ನಾನು! ಅಂತರ್ಮುಖಿ!

ಹತ್ತೊಂಬತ್ತನೆಯ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಹೀರೋ ಆಗಲು ಹೋದೆ! ಎಷ್ಟೇ ಬಾಲಿಶವೆನಿಸಿದರೂ…, ನನ್ನ ಬದುಕಿನ ಸಂಧಿಘಟ್ಟ ಅದು!

ನೀನೆಂದರೆ ನನಗೆ ಪ್ರಾಣ! ನಿನ್ನನ್ನಾದರೆ ನನ್ನ ಬದುಕಿನಲ್ಲಿ ಮದುವೆ! ಹಾಗೆಂದು ನೀನು ನನ್ನನ್ನೇ ಮದುವೆಯಾಗಬೇಕೆನ್ನುವ ನಿಯಮವೇನೂ ಇಲ್ಲ! ಭವಿಷ್ಯದಲ್ಲಿ ನನಗನ್ನಿಸಬಾರದು- ಮುಂಚೆಯೇ ನನ್ನ ಇಷ್ಟವನ್ನು ತಿಳಿಸಿದ್ದರೆ ಅವಳು ಸಿಗುತ್ತಿದ್ದಳೇನೋ ಎಂದು! ಅದಕ್ಕೇ ಹೇಳಿದೆ!”

ಆಗ ಅವಳೇನೂ ಹೇಳಿರಲಿಲ್ಲ! ವರ್ಷಗಳು ಮೂರು ಕಳೆದು ಡಿಗ್ರಿ ಮುಗಿಸಿ ಬಿಎಡ್‌ಗೆ ಹೋಗುವ ಸಮಯದಲ್ಲಿ ಅವಳೆಂದಳು…,

ಒಂದೂವರೆ ವರ್ಷ ಮುಂಚೆ ನಾನೊಬ್ಬ ಹುಡುಗನನ್ನು ಪರಿಚಯವಾದೆ! ಇಂಜಿನಿಯರ್! ಪ್ರೇಮಿಸುತ್ತಿದ್ದೇವೆ!”

ನನ್ನ ಪ್ರಪೋಸಲ್ ನಡೆದು ಒಂದೂವರೆ ವರ್ಷದ ನಂತರ ಪರಿಚಯವಾದ ಹುಡುಗ! ಗುಡ್! ಇರಲಿ!

ನೋಡೂ…, ನಾನು ನಿನ್ನನ್ನು ಪ್ರೇಮಿಸುತ್ತಿದ್ದೇನೆ! ಹಾಗಿದ್ದಮೇಲೆ ನಿನ್ನ ಸಂತೋಷವೇ ನನ್ನ ಸಂತೋಷ! ಇವನೊಬ್ಬ ಇದ್ದಾನೆನ್ನುವ ಚಿಂತೆ ಯಾವತ್ತಿಗೂ ಇರಲಿ- ಇರುತ್ತೇನೆ! ಒಳ್ಳೆಯದಾಗಲಿ ನಿನಗೆ!” ಎಂದು ಹೇಳಿ ಹೊರಟುಬಂದಿದ್ದೆ!

*

ನಂತರದ ಮೂರು ವರ್ಷ ಒಂದು ಪರ್ವ! ನಿರ್ದೇಶಕನಾಗಬೇಕೆಂಬ ಹೋರಾಟ ಪರ್ವ! ಸಿನೆಮಾದೊಂದಿಗೆ ಯಾವುದೇ ಸಂಬಂಧವಿಲ್ಲ! ದುಡ್ಡಿಲ್ಲ! ಬಂಡವಾಳವಾಗಿ ಇರುವುದು ಬರಹವೊಂದೇ! ಯಾರನ್ನು ಭೇಟಿಯಾಗುವುದು ಯಾರ ಮೂಲಕ ಭೇಟಿಯಾಗುವುದು ಒಂದೂ ತಿಳಿಯದು!

ಸುತ್ತಾಟದ ಕೊನೆಗೆ ಸಿನೆಮಾ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಯೊಬ್ಬನಿಂದ ಅಪಮಾನಿತನಾಗಿ…, ನಿರ್ದೇಶಕನೇ ಆಗಬೇಕೆಂಬ ಹಠ ಹುಟ್ಟಿದ ಸಮಯದಲ್ಲಿ ಮೆಸೇಜೊಂದು ಬಂತು!

ಓಡಿ ಹೋಗೋಣವಾ?”

ಇರುತ್ತೇನೆನ್ನುವ ಮಾತು ಕೊಟ್ಟಿದ್ದೇನೆ! ವಿಷಯವೇನೋ ತಿಳಿದುಕೊಳ್ಳಬೇಕೆಂದು ಹೋದೆ!

ಪ್ರೇಮಿಸಿದ ಹುಡುಗ ಕೈಕೊಟ್ಟ! ಅಪ್ಪ ಅಮ್ಮ ನೋಡಿದ ಮತ್ತೊಬ್ಬನೊಂದಿಗೆ ಎಂಗೇಜ್‌ಮೆಂಟ್ ಆಗಿ ಆತನೂ ಕೈಕೊಟ್ಟ! ಅಪಮಾನದಿಂದ ಹೊರಬರಬೇಕು! ಏನು ಮಾಡುವುದು?

ನನ್ನ ಪ್ರಪೋಸಲ್ ನೆನಪಾಗಿದೆ!

ನೋಡೂ…, ನಾನೊಬ್ಬ ಫಕೀರನಿದ್ದಂತೆ! ಯಾವುದೇ ಕೆಲಸವಿಲ್ಲ ಕಾರ್ಯವಿಲ್ಲ! ಸಿನೆಮಾ ನಿರ್ದೇಶಕನಾಗಬೇಕೆಂಬ ಹಠ ನರನರವನ್ನು ಸೇರಿದೆ! ನೀನು ನಿನ್ನ ಬದುಕಿನ ಈ ಕೆಟ್ಟ ಸಂದರ್ಭದಿಂದ ಹೊರಬರಲು ನನ್ನನ್ನು ಮದುವೆಯಾಗಬೇಡ! ಯೋಚಿಸು!”

ಅವಳ ಮನಸ್ಸಿನಲ್ಲಿ ಏನಿತ್ತೋ ಏನೋ…, ಹೇಳಿದ್ದು ಮಾತ್ರ ಹೀಗೆ…,

ನಾನೂ ಓದಿಕೊಂಡಿರುವವಳು! ನಾನು ಕೆಲಸಕ್ಕೆ ಹೋಗುತ್ತೇನೆ! ನಿನ್ನ ಗುರಿಯೇ ನನ್ನ ಗುರಿ! ನಾನಿರುತ್ತೇನೆ!”

ಮದುವೆಯಾದ ಮಾರನೆಯ ದಿನದಿಂದ ಶುರುವಾಯಿತು ರೋಧನೆ!

ಸಿನೆಮಾ ನಮಗೆ ಹೇಳಿದ್ದಲ್ಲ! ಅದು ನಡೆಯುವುದಿಲ್ಲ! ನೀನು ಗಲ್ಫ್‌ಗೆ ಹೋಗು! ದುಡ್ಡುಮಾಡು...” ಎಂದು ಮುಂದುವರೆದು…,

ನಿನಗೆ ಸಿನೆಮಾನೇ ಹೆಚ್ಚು…, ಕಥೆಯೇ ಹೆಚ್ಚು…, ನನ್ನ ಮೇಲೆ ಪ್ರೀತಿಯೇ ಇಲ್ಲ! ಇದ್ದರೆ "ನಾನು ಹೇಳಿದಂತೆ" ಕೇಳುತ್ತಿದ್ದೆ…!”

ಕೆಲಸಕ್ಕೆ ಸೇರುತ್ತೇನೆಂದವಳು ನಾನೇ ಕೆಲಸಕ್ಕೆ ಹೋಗುವಂತೆ ಮಾಡಿ…, ದಿನದಲ್ಲಿ ಹದಿನಾಲ್ಕು ಗಂಟೆ ಸಮಯ ಕೆಲಸ, ಉಳಿದ ಸಮಯದಲ್ಲಿ ಕಾದಂಬರಿ…, ಸಿನೆಮಾಗಾಗಿನ ಪ್ರಯತ್ನ…, ಅದೊಂದು ಯುಗ!

ಏಳು ವರ್ಷಗಳು!

ಗರ್ಬಿಣಿಯಾದ ಹೆಂಡತಿಗೆ ತವರಿಗೆ ಹೋಗಬೇಕೆಂಬ ಆಸೆ! ಈ ಏಳು ವರ್ಷದಲ್ಲಿ ಒಂದೆಂದರೆ ಒಂದು ದಿನವೂ ತಿರುಗಿಯೂ ನೋಡದ ಅವಳ ತಂದೇತಾಯಿ ಹೇಳಿದ್ದು ಒಂದೇಮಾತು!

ಬಂದರೆ ನೋಡಿಕೊಳ್ಳುತ್ತೇವೆ ಹೊರತು ಬಂದು ಕರೆದೊಯ್ಯುವುದಿಲ್ಲ!”

ನಾನೂ ಹೇಳಿದೆ!

ನಾನು ಕರೆದುಕೊಂಡು ಹೋಗುವುದಿಲ್ಲ! ನೀನು ತವರಿಗೆ ಹೋಗುವುದು ನನಗಿಷ್ಟವಿಲ್ಲ! ಹಾಗೆಂದು ಹೋಗಲೇ ಬೇಡವೆಂದು ಒತ್ತಡ ಹೇರಲಾರೆ!”

ಅವಳು ಅಪ್ಪ ಅಮ್ಮನಲ್ಲಿ ಅತ್ತಳು ಬೇಡಿದಳು…, ಕೊನೆಗೆ ಅವಳ ದೊಡ್ಡಪ್ಪನ ಮಗ ಮತ್ತು ಕುಟುಂಬ ಅವಳನ್ನು ಕರೆದೊಯ್ದರು!

ಹೋಗುವಾಗ ಅವಳು ಸ್ಪಷ್ಟವಾಗಿ ಹೇಳಿದ್ದಳು…,

ನೀನು ನಮ್ಮ ಮನೆಗೆ ಬರಬೇಡ! ನಮ್ಮ ಅಪ್ಪ ಅಮ್ಮ ನಿನ್ನನ್ನು ಅಪಮಾನಿಸುವುದು ನೋಡುವುದು ನನ್ನಿಂದಾಗದು! ನಿನಗೆ ನೋಡಬೇಕೆನ್ನಿಸಿದರೆ ಹೇಳು…, ನಾನು ನನ್ನ ಅಕ್ಕನ ಮನೆಗೆ ಹೋಗಿರುತ್ತೇನೆ- ಬಾ!”

ಹೋಗಿದ್ದು ತವರಿಗಲ್ಲವೇ…?

ಅಷ್ಟು ನೋಡಬೇಕೆನ್ನಿಸಿದರೆ ಇಲ್ಲಿಗೇ ಬಾ!” ಅನ್ನುವಷ್ಟು ಬದಲಾದಳು!

ಹೋಗಲಿಲ್ಲ! ಗುರಿಸೇರುವ ಪ್ರಯತ್ನ ಮುಂದುವರೆಸಿದೆ.

ಮಗುವಾಯಿತು. ಹೋಗದಿರುವುದು ಹೇಗೆ? ಹೋದೆ…,

ಗಂಡಸಾಗಿದ್ದರೆ ಗಲ್ಫ್‌ಗೆ ಹೋಗಿ ನಾಲ್ಕು ಕಾಸು ಸಂಪಾದಿಸಿ ಬಾ! ಅಲ್ಲಿಯವರೆಗೆ ನನ್ನ ಮಗಳು ನನ್ನ ಮನೆಯಲ್ಲೇ ಇರುತ್ತಾಳೆ!”

ಮಾತಿಗೆ ಮಾತು ಬೆಳೆದು ಕೊನೆಗೆ ಹೆಂಡತಿಯ ಅಪ್ಪ ನನ್ನನ್ನು ಹೊಡೆಯಲು ಮುನ್ನುಗ್ಗಿ ಬಂದಾಗ ನಡುವೆ ಬಂದ ಹೆಂಡತಿ ಹೇಳಿದಳು…,

ನನಗೆ ನನ್ನ ಅಪ್ಪನೇ ಎಲ್ಲಾ…, ದಯವಿಟ್ಟು ಆಗಾಗ ಬಂದು ಹೀಗೆ ತೊಂದರೆ ಕೊಡದಿರು!”

*

ನಂತರದ ದಿನಗಳೆಷ್ಟು ಚಂದ!

ಸ್ವತಂತ್ರವಾಗಿ ಸಿನೆಮಾ ನಿರ್ದೇಶಿಸಲು ದಿನಾಂಕವೊಂದನ್ನು ನಿಶ್ಚಯಿಸಿದಾಗ…, ಕೊರೋನ!

ಹೇಗೋ ಬ್ರೇಕ್ ಒಂದು ಸಿಕ್ಕಿ ಪುನಃ ಶುರುಮಾಡಬೇಕೆಂದುಕೊಂಡಾಗ ಆಕ್ಸಿಡೆಂಟ್ ಆಗಿ ಕಾಲಿನ ಆಪರೇಷನ್!

ನಡೆಯುವ ಅವಸ್ತೆಗೆ ಬಂದು ಪುನಃ ಶರು ಮಾಡಬೇಕೆಂದುಕೊಂಡಾಗ…, ರೂಪಿಸಿದ್ದ ಟೀಂ ಚದುರಿಹೋಗಿತ್ತು!

ಪುನಃ ಪ್ರಯತ್ನವಾರಂಭಿಸಿದಾಗ…, ಅಪ್ಪನ ಮರಣ!

ಆ ನೋವಿನಿಂದ ಹೊರಬರುವ ಶ್ರಮದಲ್ಲಿದ್ದಾಗ…,

ಡಿವೋರ್ಸ್ ನೋಟೀಸ್!

ಹೆಣ್ಣಿಗನ್ವಯವಾಗಿರುವ ಕಾನೂನಿನ ಲೂಪ್‌ಹೋಲ್‌ಗಳನ್ನು ಬಳಸಿ…, ಮಗು ಅಮ್ಮನೊಂದಿಗಿರುತ್ತದೆ! ಗಂಡ ಹೆಂಡಿರ ಮಧ್ಯೆ ಯಾವುದೇ ಕೊಡು ಕೊಳ್ಳು ಇರುವುದಿಲ್ಲ ಅನ್ನುವ ಶರತ್ತಿನಲ್ಲಿ ಡಿವೋರ್ಸ್‌ ಮುಗಿದು ಹೋಯಿತು!

*

ಅಮ್ಮ ಮಗ ಅನ್ನುವ ಪ್ರಪಂಚಲ್ಲಿ ಅಮ್ಮನಿಗೆ ಹೇಳಿದ್ದು ಇಷ್ಟೇ…,

ಸಿನೆಮಾ ನನ್ನ ಗುರಿ! ಅದು ನಡೆದು ನಾನೇನಾದರೂ ಸಂಪಾದಿಸುವವನಾದರೆ…, ಅದರಿಂದ ಬಂದ ಹಣವನ್ನೆಲ್ಲಾ ಮಕ್ಕಳ ಏಳಿಗೆಗೆ, ಅನಾಥರಿಗೆ, ಮತ್ತು ದೇಶದ ಏಳಿಗೆಗೆ ಬಳಸುತ್ತೇನೆ ಹೊರತು…, ಸಿನೆಮಾ ನಡೆಯದಿದ್ದರೆ…, ನೀವಿರುವವರೆಗೆ ನಿಮ್ಮೊಂದಿಗಿರುತ್ತೇನೆ- ಅಥವಾ ನಾನೇ ಮೊದಲು ಹೋಗುವವನಾದರೆ- ಹೋಗುವವರೆಗೆ ನಿಮ್ಮೊಂದಿಗಿರುತ್ತೇನೆ! ಮೊದಲನೆಯದಾದರೆ…, ನಂತರದ ನನ್ನ ಜೀವನ ನನಗೆ ಹೊರೆಯಲ್ಲ! ದೇಶ ವಿಶಾಲವಾಗಿದೆ!”

ಕಥೆ ಇಲ್ಲಿಗೇ ಮುಗಿದರೆ ಅದರಲ್ಲೇನು ಮಜವಿದೆ?

ಅಷ್ಟು ಸುಲಭದಲ್ಲಿ ನಿನ್ನನ್ನು ಬದುಕಲು ಬಿಡುವುದಿಲ್ಲ ಅನ್ನುವಂತೆ…,

ಮಗುವಿಗೆ ಜೀವನಾಂಶ ಕೊಡಬೇಕೆಂದು ಸಮನ್ಸ್ ಬಂದಿದೆ!!!

*

ಈಗ…, ನಿಮಯಮವಿಲ್ಲದ ಬದುಕು ನನ್ನದು! ಕಟ್ಟುಪಾಡುಗಳಿಗೆ ಒಳಗಾಗಲು ನಾನು ತಯಾರಿಲ್ಲ! ಪ್ರೇಮದಿಂದಲೋ…, ಭಾವನೆಗಳಿಂದಲೋ ನನ್ನನ್ನು ಬಂಧಿಸಲು ಬಂದರೆ- ಅವರಿಗೆ ನೋವು ಮಾತ್ರ! ನನಗೆ ಎಲ್ಲರೂ ಬೇಕು ಆದರೆ ಯಾರೂ ಬೇಡ! ನನ್ನ ಹೃದಯವನ್ನು ಅರಿತವರು ಇರುತ್ತಾರೆ- ಅರಿಯದವರು ಇರುವುದಿಲ್ಲ! ಅದು ಕುಟುಂಬವಾದರೂ ಗೆಳೆಯರಾದರೂ ಯಾರೇ ಆದರೂ…!

ಭಾವನೆಗಳಿಲ್ಲವಾ ಅಂದರೆ ಇದೆ! ಆದರೆ ಎಷ್ಟೇ ಪೆಟ್ಟುಬಿದ್ದರೂ ಏನೂ ಅನ್ನಿಸದಷ್ಟು ಮರಗಟ್ಟಿ ಹೋಗಿದೆ!

ಜನ್ಮದಾತೆಯಿಂದ ದೇಶಮಾತೆಗೆ ಹರಡಿದ ಪ್ರೇಮ! ಲೆಕ್ಕ ಹೇಳಲೋ ಕೇಳಲೋ ಯಾರೂ.., ಯಾರೂ ಅಲ್ಲ!

ನನಗೆ ನಾನೇ! ಸಂಕುಚಿತತೆಯಿಂದ ವಿಶಾಲತೆಗೆ ಪರಿಪಕ್ವವಾಗಿ ಕೈ ಹಿಡಿದು ನಡೆಸಿದ- ಜೊತೆಬಿಟ್ಟು ಹೋಗದ ದೇವಿಯ ಮಗ…,

ದೇವೀಪುತ್ರ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!