ಗಲಗಲಗಲಗಲ!
ಗಲಗಲಗಲಗಲ!
೧
ಇದೊಂದು ಕಥೆ!
ಕಥೆಯ ಮೂಲ- ಒಂದು ಕನಸು!
ಕಥೆಗೆ ಊರುಗೋಲು ಅನ್ನುವ ಹೆಸರಿಡಬೇಕೋ, ಮುಕ್ತಿ ಅನ್ನುವ ಹೆಸರಿಡಬೇಕೋ, ಅಥವಾ ಗಲಗಲಗಲಗಲ ಅನ್ನುವ ಹೆಸರಿಡಬೇಕೋ ಗೊಂದಲ!
ಕೊನೆಗೆ…,
ಮೂರೂ ಅವಳೇ ಆದರೂ ಕಥೆ ಪೂರ್ತಿ ಅವಳ ಗಲಗಲಗಲಗಲವಾದ್ದರಿಂದ ಅದೇ ಹೆಸರು!
ವಾನಪ್ರಸ್ಥ ಎಂದು ಇಡಬಹುದಿತ್ತು! ಆದರೆ…, ಅದಕ್ಕೆ ಸಂಬಂಧಿಸಿದ ಕಥೆಯಾದರೂ ವಾನಪ್ರಸ್ಥಕ್ಕೆ ಪ್ರವೇಶಿಸಲು ಬೇಕಾದ ಪಕ್ವತೆ ಇಲ್ಲದ್ದರಿಂದ ಬೇಡ!
ಪ್ರೇಮ ಪರೀಕ್ಷೆ ಅನ್ನುವ ಹೆಸರು…, ಯಾಕೋ ಹಿಡಿಸಲಿಲ್ಲ!
ಪ್ರೇಮ ಶಿಲೆ ಅನ್ನುವ ಹೆಸರು…, ತುಂಬಾ ಸಾಮಾನ್ಯ ಅನ್ನಿಸಿತು!
ಇನ್ನು…, ಈ ಕಥೆ ನಡೆಯುವುದು ಈಗಲ್ಲ…, ಎರಡುಸಾವಿರದ ನಲವತ್ತೆಂಟನೇ ಇಸವಿಯಲ್ಲಿ!
ಅದೇನು ವಿಚಿತ್ರವೋ…, ನನ್ನ ಅರವತ್ತೊಂದನೇ ವಯಸ್ಸಿನಲ್ಲಿಯೇ ಸತ್ತುಹೋಗುತ್ತೇನೆನ್ನುವ ನಂಬಿಕೆ ನನ್ನದು!
ಬದುಕಿರುವವರೆಗೂ ಆರೋಗ್ಯದೃಢ ಗಾತ್ರನಾಗಿದ್ದು- ಒಂದೇ ಸಾರಿಗೆ ಹೊರಟು ಹೋಗುವುದು!
ಹೇಗೆ ಎಂದು ಕೇಳಿದರೆ ಗೊತ್ತಿಲ್ಲ!
ಆ ನಂಬಿಕೆಗೂ ಈ ಕನಸಿಗೂ ಏನಾದರೂ ಸಂಬಂಧವಿದೆಯೇ ಅಂದರೆ…, ಅದೂ ಗೊತ್ತಿಲ್ಲ!
೨
ಅವಳು ನನಗಿಂತ ಕಿರಿಯಳೋ ಹಿರಿಯಳೋ!
ಕನಸಿನಲ್ಲಿ…,
ಅವಳನ್ನು ಮೊದಲು ಭೇಟಿಯಾದಾಗ ಹೇಗಿದ್ದಳೋ ಹಾಗೇ ಇದ್ದಳು! ನನಗೆ ಮಾತ್ರ ವಯಸ್ಸಾಗಿತ್ತು! ಊರುಗೋಲಿಗೆ ಬದಲಾಗಿ ಅವಳೇ ನನ್ನ ಕೈ ಹಿಡಿದು ನಡೆಯುತ್ತಿದ್ದಳು! ಅವಳು ನಡೆಸಿದ್ದೇ ದಾರಿ!
“ಎಷ್ಟು ಹೇಳಿದರೂ ಅರ್ಥ ಆಗೋದಿಲ್ಲನಾ? ಯಾವಾಗ ನೋಡಿದರೂ ಯಾರನ್ನಾದರೂ ರೇಗಿಸೋದು- ಅವರ ಕೆಂಪು ಮುಖ ನೋಡಿ ಗೇಲಿ ಮಾಡೋದು! ಇನ್ನೂ ಹುಡುಗ ಅಂದುಕೊಂಡಿದ್ದೀರ? ವಯಸ್ಸಾಯಿತು!” ಎಂದಳು.
“ಎಲ್ಲಿ ಈಕಡೆ ತಿರುಗಿ ಹೇಳು ನೋಡೋಣ!” ಎಂದೆ.
“ಹೇ…! ಹೋಗಿ! ಇವತ್ತಂತೂ ನಾನು ನನ್ ಮೂತಿ ಕೊಡಲ್ಲ!” ಎಂದಳು.
“ಮೂತೀನೇ ಬೇಕಂತಿಲ್ಲ!” ಎಂದೆ.
“ಸುಮ್ನೆ ಬನ್ನಿ!” ಎಂದಳು.
“ಸಾಯೋಕೆ ಹೋಗುವಾಗ ಇದೆಲ್ಲಾ ಕೇಳಬಾರದಾ?” ಎಂದೆ.
ನಿಂತಳು. ತಿರುಗಲಿಲ್ಲ! ತಿರುಗಲಿಲ್ಲವೆಂದರೆ ಅರ್ಥ ಕೋಪದಲ್ಲಿದ್ದಾಳೆಂದು!
ತಿರುಗಿದರೆ ಕೋಪ ದುಃಖವಾಗುತ್ತದೆ!
ಅವಳ ದುಃಖ ನನಗಿಷ್ಟ! ಪುಟಾಣಿ ಪಾಪುವಿನಂತೆ ಕಾಣುತ್ತಾಳೆ! ಮುದ್ದು ಮಾಡುವುದು ಚಂದ!
“ನನಗೇನೂ ಕೋಪ ಬಂದಿಲ್ಲ! ಇಪ್ಪತ್ತಾರು ವರ್ಷದಿಂದ ನೋಡ್ತಿದೀನಿ! ಅಷ್ಟೂ ಗೊತ್ತಿಲ್ವ ನಿಮ್ಮನ್ನ?” ಎಂದಳು.
ನಾನೇನೂ ಮಾತನಾಡಲಿಲ್ಲ. ಮುಂದಕ್ಕೆ ಹೆಜ್ಜೆ ಹಾಕುತ್ತಾ…,
“ನಾನು ಕಥೆ ಓದುವುದಿಲ್ಲ ಅಂದರೂ ಯಾಕೆ ಲಿಂಕ್ ಹಾಕಿದ್ದು ಅವತ್ತು?” ಎಂದಳು.
ನಾನು ತೇಲುಗಣ್ಣುಮಾಡಿದೆ. ನನ್ನ ಮೆಮರಿ ಪವರ್ ಟೂಜಿಬಿ (2GB) ಆದರೆ ಅವಳದ್ದು ಅನ್‌ಲಿಮಿಟೆಡ್! ಜೊತೆಗೆ…, ನನ್ನಲ್ಲಿ ವಿಷಯಗಳು ಕಲಸುಮೇಲೋಗರವಾದರೆ ಅವಳದ್ದು ಒಂದೊಂದು ವಿಷಯಕ್ಕೂ ಒಂದೊಂದು ಫೋಲ್ಡರ್!
ನನ್ನ ಮೌನದ ಅರ್ಥ ಅವಳಿಗೆ ತಿಳಿಯಿತು!
“ನಿಮಗೆ ನೆನಪಿಲ್ಲನಾ? ಗಲಗಲಗಲಗಲ ಅನ್ನೋ ಕಥೆ ಬರೀತಿದೀನಿ ಅಂದಾಗ…, ನಾನು ಓದಲ್ಲ ನಿಮ್ಮ ಕಥೆ ಅಂದಿದ್ದೆ! ಆದರೂ ಲಿಂಕ್ ಹಾಕಿದ್ದಿರಿ…, ಯಾಕೆ?”
“ಹೀಗೆ ಕೇಳಿದರೆ ಹೇಗೆ ಹೇಳುವುದು? ಮೂತಿ ಕೊಡು! ಉತ್ತರ ಕೊಡ್ತೀನಿ!”
“ನಿಮ್ಮ ತಲೆ! ಹೋಗಿ! ಬರೀ ನೋವು ಕೊಡೋದೇ ಕೆಲಸ ನಿಮಗೆ!”
“ಈಗ ನಾನೇನೇ ಮಾಡ್ದೆ? ಖುಷಿಪಡ್ಸೋಣ ಅಂದ್ರೆ ನೋವು ಕೊಡ್ತಿದೀನಿ ಅನ್ತೀಯ?”
“ನಾನು ಅವತ್ತಿನ ವಿಷಯ ಹೇಳ್ತಿದೀನಿ!” ಎಂದು ಹೇಳಿ ಒಂದು ದೀರ್ಘವಾದ ನಿಟ್ಟುಸಿರು ಬಿಟ್ಟು…,
“ನಿಜಕ್ಕೂ ಹೊರಟೇ ಹೋಗಿದ್ದೆ! ನೀವು ಮೊದಲ ಮುತ್ತು ಕೊಟ್ಟಾಗ! ಅಮಾಯಕಳು ನನಗೆ ಯಾಕೆ ಬಲವಂತದಿಂದ ಮುತ್ತು ಕೊಟ್ಟಿದ್ದು? ಒಮ್ಮೆ ಹಾಗೆ ನಿಮಗಂಟಿದರೆ ಯಾವ ಕಾರಣಕ್ಕೂ ಇನ್ನೊಬ್ಬರ ಯೋಚನೆ ನನಗೆ ಬರಲ್ಲ ಅಂತಾನಾ? ಚಿಟ್ಟೆಯಂತೆ ಬೇರೆ ಬೇರೆ ಹೂಗಳನ್ನು ಹುಡುಕಿ ಹೋಗುವ ನಿಮ್ಮ ಗುಣಕ್ಕೆ ವಿರುದ್ಧ ಗುಣ! ಉಳಿದವರ ವಿಷಯ ನನಗೆ ಗೊತ್ತಿಲ್ಲ…! ನನ್ನಯಾಕೆ ಹಾಗೆ ಮಾಡಿದಿರಿ? ಉಳಿದವರನ್ನಾದರೆ ಬಲವಂತ ಮಾಡಬೇಕಾಗಿಲ್ಲ- ಅನ್ನಬೇಡಿ!” ಅವಳು ನಿಲ್ಲಿಸದೆ ಮಾತನಾಡುತ್ತಿದ್ದಳು! ನನಗೆ ಉತ್ತರ ಕೊಡಬೇಕಿತ್ತು! ನಿಂತೆ! ಕೈ ಹಿಡಿದು ಮುಂದೆ ನಡೆಯುತ್ತಿದ್ದವಳು ತಿರುಗಿ ನೋಡಿದಳು. ಕೈ ಬಿಡಿಸಿ ಬೊಗಸೆಯಲ್ಲಿ ಅವಳ ಮುಖವನ್ನು ತೆಗೆದುಕೊಂಡು ತುಟಿ ಊದುವಂತೆ ಮುತ್ತು ಕೊಟ್ಟು…,
“ಈಗಲೂ ಹೀಗೆ ಮಾಡುವುದಕ್ಕೆ ನೀನು ಉಳಿಯಲು!” ಎಂದೆ.
೩
ಇನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ಅವಳು ಮಾತನಾಡುವುದಿಲ್ಲ! ಅವಳ ಗಲಗಲಗಲಗಲದಿಂದ ಮುಕ್ತಿ! ಆದರೆ ಆ ಮುಕ್ತಿ ನನಗೆ ಇಷ್ಟವಿಲ್ಲ! ಅವಳ ಗಲಗಲಗಲಗಲವೇ ನನ್ನ ಮುಕ್ತಿ! ಆದರೂ…, ಅವಳನ್ನು ಮೌನಕ್ಕೆ ಬಿಟ್ಟೆ! ಅದು ಅರ್ಥವಾಯಿತು ಅನ್ನುವಂತೆ…,
“ಏನಾದರೂ ಹೇಳುವಾಗ ಹೀಗೆ ತಟ್ಟನೆ ಮಾತು ನಿಲ್ಲಿಸುವಂತೆ ಯಾಕೆ ಮಾಡುತ್ತೀರ?” ಎಂದಳು.
“ಸ್ವಲ್ಪ ಹೊತ್ತಿನ ಮಟ್ಟಿಗೆ ಅವಳು ಮಾತನಾಡುವುದಿಲ್ಲವೆಂದು- ಕಥೆಯಲ್ಲಿ ಹೇಳಿಬಿಟ್ಟೆನಲ್ಲೆ?” ಎಂದೆ.
“ಅದಕ್ಕೆ ನಾನೇನು ಮಾಡಲಿ? ನಾನು ಹೇಳಿದ್ನ- ಹೇಳೋಕೆ?” ಎಂದಳು.
ನನ್ನ ಅಭಿಪ್ರಾಯವನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ! ಆದರೆ ಅವಳ ಮಾತಿಗೆ ಸ್ವಲ್ಪ ಮಟ್ಟಿಗಾದರೂ ತಡೆ ಒಡ್ಡಬೇಕು ಅನ್ನುವ ಹಠವಂತೂ ಹುಟ್ಟಿತು! ಅವಳು ಮುಂದುವರೆಸಿದಳು…,
“ಮಕ್ಕಳಾದಾಗಲಾದರೂ ಬದಲಾಗುತ್ತೀರ ಅಂದುಕೊಂಡೆ!” ಅಂದವಳನ್ನು ಮುಂದುವರೆಸಲು ಬಿಡಲಿಲ್ಲ!
ಅವಳನ್ನು ಮೌನವಾಗಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ಸಿಕ್ಕದು!
“ಸರಿ ಅದನ್ನಾದರೂ ಹೇಳು!” ಎಂದೆ.
“ಯಾವುದು?” ಎಂದಳು ಗೊಂದಲದಿಂದ!
“ಮಕ್ಕಳಾಗಿದ್ದು ಹೇಗೆ?” ಎಂದೆ.
ಮೌನ!!
೪
ಆತ್ಮಸಾಕ್ಷಿಗೆ ಹೆಣ್ಣು ರೂಪ ಕೊಟ್ಟರೆ ಅವಳಂತೆ ಕಾಣುತ್ತದೆ! ಅವಳ ಹೃದಯಕ್ಕೆ ವಯಸ್ಸಾಗುವುದಿಲ್ಲ!
ನನ್ನ ಬದುಕಿಗಂಟಿದ ಯಾರೇ…, ನನ್ನಲ್ಲಿನ ಕೆಟ್ಟದ್ದನ್ನು ಅಥವಾ ನಾನು ಮಾಡಿದ ತಪ್ಪನ್ನು ಎತ್ತಿ ತೋರಿಸಿದರೆ…,
“ನೀನೇನು ಸಾಚಾನ?” ಅನ್ನುವ ದಾರ್ಷ್ಟ್ಯ ನನಗೆ!
ಆದರೆ ಇವಳ ವಿಷಯದಲ್ಲಿ ಅದು ಸಾಧ್ಯವೇ ಇಲ್ಲ ಅನ್ನುವಲ್ಲಿ ನನ್ನ ಸೋಲು ಗೆಲುವಿನ ಗೆರೆಯಿದೆ!
ಅಷ್ಟು ಮುಗ್ಧೆ- ಅಷ್ಟು ಪರಿಶುದ್ಧೆ!
ಪ್ರತಿ ಸಾರಿ ನನ್ನ ಅಹಂ ಅನ್ನು ಬಡಿದಾಗಲೂ ಅವಳ ಪ್ರಾಣವೇ ವಿಲವಿಲ ಅನ್ನುವಂತೆ ನೋಯಿಸುವುದು ನನ್ನ ವಾಡಿಕೆ!
ಜಗಳಮಾಡಲು- ಕೋಪಿಸಿಕೊಳ್ಳಲು ಮಾತ್ರ ಅವಳು ನನಗೆ! ಅದಕ್ಕೊಂದು ಅದ್ಭುತ ಕಾರಣವನ್ನು ಕಂಡುಕೊಂಡಿದ್ದೆ!
ಪ್ರೀತಿ ಇಲ್ಲದವರೊಂದಿಗೆ ಹೀಗೆ ಜಗಳ ಸಾಧ್ಯವೇ? ಅದರಲ್ಲೂ ಈ ಮಟ್ಟಿಗೆ? ಜಗಳ ಮಾತ್ರ- ಅಂದರೆ ಏನರ್ಥ?!
ಅರ್ಥ ಏನೇ ಆದರೂ ಅದೊಂದು ದಿನ ನನ್ನ ವರ್ತನೆಯ ಹೊಡೆತ ತಾಳಲಾರದೆ ಬಿಟ್ಟು ಹೊರಟೇ ಹೋಗಿದ್ದಳು! ಅವಳೇ ದೂರ ಹೋಗಬೇಕೆಂದರೆ ನಾನು ಕೊಟ್ಟ ಹೊಡೆತ ಅದೆಷ್ಟು ನೋವು ನೀಡಿರಬಹುದು…?
ಆದರೂ…,
ಯಾವ ಕಾರಣವೂ ನಮ್ಮನ್ನು ದೂರ ಮಾಡುವಷ್ಟು ದೊಡ್ಡದಲ್ಲ ಅನ್ನುವ ಅತಿಯಾದ ನಂಬಿಕೆ ನನ್ನದಾಗಿತ್ತು!
೫
ಮೌನ ಅಸಹನೀಯವಾಯಿತೇನೋ…,
“ಮತ್ತೆ…, ನೀವು ಯಾಕೆ ಹಾಗೆ ಹೇಳಿದ್ದು?” ಎಂದಳು.
“ನ್ತದೆ ನೀನು! ವಿಷಯವನ್ನೇ ಹೇಳದೆ ಹೀಗೆ ಪ್ರಶ್ನೆ ಕೇಳಿದರೆ ಏನು ಉತ್ತರ ಹೇಳುವುದು?” ಎಂದೆ.
“ಅವತ್ತು ನಾನು ದೂರ ಹೋದಾಗ…, ನಮ್ಮಲ್ಲಿ ಯಾರೊಬ್ಬರ ಪ್ರೇಮ ನಿಜವಾದರೂ ನಾನು ಮರಳಿ ನಿಮ್ಮಲ್ಲಿಗೆ ಬರುತ್ತೇನೆಂದು ಯಾಕೆ ಹೇಳಿದಿರಿ?” ಎಂದಳು.
“ಇವಳೊಬ್ಬಳು ಪ್ರಶ್ನೆಗಳ ಭಂಡಾರ!” ಎಂದೆ.
“ಹೇಳಿ! ನಾನು ಮರಳಿ ಬರುತ್ತೇನೆ ಅನ್ನುವ ನಂಬಿಕೆ ಇದ್ದೇ ಹಾಗೆ ಹೇಳಿದ್ರ ಅಥವಾ ಬರಲೆಂದು ಹೇಳಿದಿರ?” ಎಂದಳು.
“ಇಲ್ಲವೇ…! ನಿಜಕ್ಕೂ ಅದೊಂದು ಅಗ್ನಿಪರೀಕ್ಷೆ! ಇಬ್ಬರಲ್ಲಿ ಒಬ್ಬರ ಪ್ರೇಮ ಅನ್ನುವುದು ನಿನಗೆ ಹೇಳಿದ್ದು ಮಾತ್ರ! ಪರೀಕ್ಷೆಗೆ ಒಡ್ಡಿಕೊಂಡಿದ್ದು ನನ್ನ ಪ್ರೇಮವನ್ನು! ಕಾರಣ…, ನಿನ್ನ ಪ್ರೇಮ ನಿಜ ಅನ್ನುವ ಪರಿಪೂರ್ಣ ನಂಬಿಕೆ ನನಗಿತ್ತು!” ಎಂದೆ.
“ಅಂದರೆ…, ನನ್ನ ಮೇಲಿನ ನಿಮ್ಮ ಪ್ರೇಮ ನಿಜವಾದರೆ ನಾನು ಮರಳಿ ಬರುತ್ತೇನೆ! ಬರದಿದ್ದರೆ ನಿಮ್ಮ ಪ್ರೇಮವೇ ಸುಳ್ಳು ಅಂತ?”
“ಹೂಂ!” ಎಂದೆ.
೬
ನಾವು ಮನೆಯಿಂದ ಹೊರಟು ಬಂದಿದ್ದೆವು. ನಮ್ಮ ಪ್ರೇಮದ ಕುಡಿಗಳಿಗೆ ನಾವು ಯಾವತ್ತೂ ಹೊರೆಯಲ್ಲ! ಆದರೆ ಇದು ನಮ್ಮ ನಿರ್ಧಾರ! ಅವರನ್ನು ಒಪ್ಪಿಸಿ ಬರಲು ಕಷ್ಟವಾಯಿತು ಹೊರತು- ಅಪ್ಪ ಅಮ್ಮ ಹೊರೆ ಅನ್ನುವ ಮಕ್ಕಳು ನಮ್ಮದಲ್ಲ!
ಯಾವುದೋ ಸಮುದ್ರ ತೀರವನ್ನು ತಲುಪಿದ್ದೆವು! ಕಾಲು ಮಾತ್ರ ತೋಯುವಂತೆ ಕುಳಿತೆವು!
ನಾವು ಪರಿಚಯವಾದಂದಿನಿಂದ ಇಂದಿನವರೆಗಿನ ಘಟನೆಗಳನ್ನು ಅವಳು ಗಲಗಲಗಲಗಲನೆ ಹೇಳುತ್ತಲೇ ಇದ್ದಳು.
ಪಡುವಣದಂಚಿನಲ್ಲಿ ಸೂರ್ಯ- ಹನುಮಂತ ಕಿತ್ತು ತರಲು ಹಾರಿದ ಹಣ್ಣಿನಂತೆ ಕಾಣುತ್ತಿದ್ದ!
ನನ್ನ ನಂಬಿಕೆಯಮೇಲೆ ಅವಳಿಗೂ ಅತಿಯಾದ ನಂಬಿಕೆ! ಅರವತ್ತೊಂದಕ್ಕೆ ಸಾಯುತ್ತೇನೆಂದರೆ ಸತ್ತೇ ಹೋಗುತ್ತೇನೆ ಅನ್ನುವಷ್ಟು! ಆದ್ದರಿಂದಲೇ ಅವಳು ಸಮಯದ ನೆನಪು ಬಾರದಂತೆ ಮಾತನಾಡುತ್ತಲೇ ಇದ್ದಳು.
ಕೊನೆಗೆ ಏನೋ ಹೊಳೆದಂತೆ ತಟ್ಟನೆ ನನ್ನೆಡೆಗೆ ತಿರುಗಿದಳು. ಅವಳ ಕಣ್ಣಿನಲ್ಲಿ ಅದ್ಭುತ ಹೊಳಪು!
ನನ್ನನ್ನು ಬಾಚಿ ತಬ್ಬಿಕೊಂಡಳು. ಎಷ್ಟು ಗಾಢವಾಗಿ ತಬ್ಬಿದಳೆಂದರೆ ನನಗೇ ಉಸಿರುಕಟ್ಟುವಷ್ಟು! ನಂತರ ನನ್ನ ಮೂಗಿಗೆ ತನ್ನ ಮೂಗನ್ನು ತಾಗಿಸಿ…, ಕಣ್ಣನ್ನೇ ನೋಡುತ್ತಾ ಅವಳೆಂದಳು…,
“ನಿಮ್ಮ ಮೇಲಿನ ನನ್ನ ಪ್ರೇಮ ನಿಜವೇ ಆದರೆ…, ನೂರು ತುಂಬದೆ ನೀವು ಸಾಯುವುದಿಲ್ಲ!”
ಮುಂದಿನ ನಲವತ್ತು ವರ್ಷಗಳಲ್ಲಿ ಸುತ್ತಬಹುದಾದ ಪ್ರದೇಶಗಳ ಯೋಚನೆಗೆ ಬಿದ್ದೆ!
ಎಚ್ಚರವಾಗುವ ಸಮಯಕ್ಕೆ…, ಅವಳು ಅಪ್ಪಿಕೊಂಡಂತೆಯೇ ನಾವು ಶಿಲೆಯಾದೆವು! ಯಾವ ಅಣುಬಾಂಬ್ ಹಾಕಿದರೂ ಛಿದ್ರವಾಗದ ಶಿಲೆ! ನೂರಲ್ಲ ಸಾವಿರ ಕೋಟಿ ವರ್ಷವಾದರೂ ಈ ಪ್ರೇಮ ಸಾಯುವುದಿಲ್ಲ ಅನ್ನುವಂತೆ…, ಸಮುದ್ರವನ್ನೂ ಬ್ರಹ್ಮಾಂಡವನ್ನೂ ಆ ಶಿಲೆ ಆವರಿಸಿಕೊಂಡಿತು!
ಗಲಗಲಗಲಗಲಗಲ ಅಂತ ಏನು ಇಲ್ಲ ಘಲೋ ಅಂತ ಆಗಿ ಎಲ್ಲ ಮೌನ
ReplyDelete