ಪಾಠ
ಪಾಠ!
“ಹುಡುಗ ಒಳ್ಳೆಯವನೇ…, ಪಾಪ! ತುಂಬಾ ಬಡತನದ ಕುಟುಂಬ…, ಆ ಅವಸ್ತೆಯಿಂದ ಅವನು ಈಗ ಇಲ್ಲಿ ತಲುಪಿದ್ದಾನೆಂದರೆ…, ಗ್ರೇಟ್!” ಎಂದಳು.
“ಹುಡುಗ ಒಳ್ಳೆಯವನೇ…, ಆದರೆ ಸ್ವಲ್ಪ ಅಹಂ ಸೇರಿದೆಯಾ ಅನ್ನುವ ಡೌಟು!” ಎಂದೆ.
“ಕಷ್ಟದಿಂದ ಬಂದವರಿಗೆ ಅಷ್ಟಾದರೂ ಅಹಂ ಇಲ್ಲದಿದ್ದರೆ ಹೇಗೆ?” ಎಂದಳು.
“ಮತ್ತೊಬ್ಬರ ಅಭಿಪ್ರಾಯಕ್ಕೆ ಮನ್ನಣೆಯನ್ನೇ ಕೊಡದಿರುವಷ್ಟಾ?” ಎಂದೆ.
ಅವಳೇನೂ ಮಾತನಾಡಲಿಲ್ಲ.
“ಈಗ ಹೊರಗಿನ- ಯಾರು ಏನು ಹೇಳಿದರೂ ಅದು ಅವನ ಏಳಿಗೆಯನ್ನು ಕಂಡು ಸಹಿಸದೆ ಹೀಯಾಳಿಸುತ್ತಿರುವುದು ಎಂದೇ ಅವನ ಮನಸ್ಸಿಗೆ ಹೋಗುತ್ತದೆ! ಆದರೆ…, ಹುಡುಗ ಒಳ್ಳೆಯವ…, ಯಾಕೋ…, ಎಲ್ಲರನ್ನೂ ಕಳೆದುಕೊಳ್ಳುತ್ತಾನೆ ಅನ್ನಿಸುತ್ತಿದೆ. ನೀನವನ ಆತ್ಮೀಯಳು, ನಿನಗವನು ರೆಸ್ಪೆಕ್ಟ್ ಕೊಡುತ್ತಾನೆ! ಸ್ವಲ್ಪ ಬಿಡಿಸಿ ಹೇಳು!” ಎಂದೆ.
“ಈಗ ಏನಾಯಿತು ಅದನ್ನು ಹೇಳು!” ಎಂದಳು.
“ಹುಡುಗನ ಬ್ಯುಸಿನೆಸ್ ಸ್ಟ್ರಾಟಜಿ!” ಎಂದು ನಿಲ್ಲಿಸಿ ಅವಳ ಮುಖವನ್ನು ನೋಡಿ ಮುಂದುವರೆಸಿದೆ,
“ಈ ಹುಡುಗನ ಪುಸ್ತಕದಬಗ್ಗೆ ನಾನು ಬರೆದ ನೆಗೆಟಿವ್ ಅಭಿಪ್ರಾಯವನ್ನು ಓದಿ- ನನ್ನ ಕಥೆಗಾರ ಗೆಳೆಯನೊಬ್ಬ ಕಾಲ್ ಮಾಡಿದ್ದ. ಈ ಹುಡುಗ ಅವನಿಗೆ ಪರಿಚಯವಂತೆ. ಯಾವುದೋ ಪುಸ್ತಕ ಮಾರಾಟಗಾರರು ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದನಂತೆ. ಗೆಳೆಯನ ನಂಬರ್ ತೆಗೆದುಕೊಂಡು…, ನನ್ನ ಪುಸ್ತಕವೊಂದು ಕಳಿಸುತ್ತೇನೆ ಓದಿ ಅಭಿಪ್ರಾಯ ತಿಳಿಸಿ ಅಂದನಂತೆ! ಗೆಳೆಯ ಸರಿ ಅಂದಿದ್ದಾನೆ. ಪುಸ್ತಕ ಬಂದಿದೆ. ಗೆಳೆಯನಿಗದೇನೂ ಓದಬೇಕು ಅನ್ನಿಸಿಲ್ಲ. ಆದರೆ…, ಬರಹಗಾರನ ಕಷ್ಟ ಅವನಿಗೂ ಗೊತ್ತು. ಪುಸ್ತಕದ ಹಣವನ್ನು ಗೂಗಲ್‌ಪೇ ಮಾಡಿದ್ದಾನೆ!” ಎಂದು ನಿಲ್ಲಿಸಿದೆ.
“ಇದರಲ್ಲೇನಿದೆ…?” ಎಂದಳು.
“ಅದೇ ಹುಡುಗನಿಂದ ಗೆಳೆಯನಿಗೆ ಮತ್ತೆ ಮೂರು ಪುಸ್ತಕಗಳು ಹೋಗಿದೆ! ಗೆಳೆಯ ಅದನ್ನು ಇಗ್ನೋರ್ ಮಾಡಿದ್ದಾನೆ. ಹುಡುಗನೇ ಕಾಲ್ ಮಾಡಿ- ಪುಸ್ತಕ ತಲುಪಿದ್ದರೆ ಹಣ ಕಳಿಸಿ ಅಂದನಂತೆ! ಗೆಳೆಯ ಪ್ರಶ್ನಿಸಿದಾಗ ಬರಹಗಾರರು ಪರಸ್ಪರ ಸಹಕಾರ ನೀಡಬೇಕಲ್ಲವಾ ಅಂದಿದ್ದಾನೆ. ಇನ್ನು ಮೇಲೆ ಹೀಗೆ ಅನುಮತಿಯಿಲ್ಲದೆ ಪುಸ್ತಕ ಕಳಿಸಬೇಡಿ ಎಂದು ಹೇಳಿ, ಪುಸ್ತಕದ ಹಣವನ್ನು ಹಾಕಿದ್ದಾನೆ ಗೆಳೆಯ!” ಎಂದು ನಿಲ್ಲಿಸಿ…,
“ಗೆಳೆಯ ಹುಡುಗನಿಗಿಂತ ತುಂಬಾ ಹಿರಿಯ ಕಥೆಗಾರ. ಒಂದು ಪುಸ್ತಕ ಬರೆಯಲು ಎರಡುಮೂರು ವರ್ಷ ತೆಗೆದುಕೊಳ್ಳುತ್ತಾನೆ. ಇದುವರೆಗೆ ಎರಡೋ ಮೂರೋ ಪುಸ್ತಕವನ್ನಷ್ಟೆ ಪ್ರಕಟಿಸಿದ್ದಾನೆ. ಹುಡುಗನಾದರೋ… ವರ್ಷಕ್ಕೆ ನಾಲ್ಕು! ಎಷ್ಟಾದರೂ ಬರೆಯಲಿ…, ಇನ್ನೂ ಸ್ವಲ್ಪ ಸಮಯ ತೆಗೆದುಕೊಂಡು- ಮತ್ತಷ್ಟು ಪ್ರಭಾವಯುತವಾಗಿ ಬರಿ ಎಂದರೆ- ಅದು ಹೊಟ್ಟೆ ಉರಿಯಿಂದ ಹೇಳಿದ್ದು ಅನ್ನಬಹುದೇ?!” ಎಂದು ನಿಲ್ಲಿಸಿ ಅವಳ ಮುಖವನ್ನೇ ದಿಟ್ಟಿಸಿದೆ.
ಹೊರಟು ಹೋದಳು.
ಮಾರನೆಯ ದಿನ ನನ್ನ ಗೆಳೆಯನಿಂದ ಮೆಸೇಜ್ ಬಂತು!
“ಆ ಹುಡುಗನಬಗ್ಗೆ ನಾವು ಮಾತನಾಡಿಕೊಂಡಿದ್ದು ಅವನಿಗೆ ಹೇಳಿದೆಯಾ?” ಎಂದು!
“ಏನಾಯಿತು? ಅವನಿಗೆ ಹೇಳಲಿಲ್ಲ- ಅವನ ಅಕ್ಕನಂತಾ ಗೆಳತಿಗೆ ಹೇಳಿದ್ದೆ. ನೋಡು ಹೀಗೆ ಹೀಗೆ ಆಗಿದೆ…, ನೀನು ಹುಡುಗನಿಗೆ ತಿಳಿಸಿ ಹೇಳು ಅಂತ!” ಎಂದೆ.
ಗೆಳೆಯ ಸ್ಕ್ರೀನ್‌ಷಾಟ್ ಕಳಿಸಿದ!
ಹುಡುಗ ಗೆಳೆಯನ ಅಕೌಂಟ್‌ಗೆ ದುಡ್ಡು ಮರಳಿಸಿ ಮೆಸೇಜ್ ಒಂದನ್ನು ಮಾಡಿದ್ದಾನೆ!
“ನಾನೇನೂ ಹಣಕ್ಕಾಗಿ ನಿಮಗೆ ಪುಸ್ತಕ ಕಳಿಸಲಿಲ್ಲ! ಬರಹಗಾರರು ಪರಸ್ಪರ ಸಹಕಾರ ನೀಡಬೇಕು ಅನ್ನುವ ಕಾರಣಕ್ಕೆ ಕಳಿಸಿದೆ. ನಿಮ್ಮ ಹಣವನ್ನು ಮರಳಿಸಿದ್ದೇನೆ! ಪುಸ್ತಕಗಳನ್ನು ಕಾಂಪ್ಲಿಮೆಂಟರಿಯಾಗಿಯೇ ತೆಗೆದುಕೊಳ್ಳಿ! ಅಭಿಪ್ರಾಯ ತಿಳಿಸಿ!” ಎಂದು.
“ಮುಜುಗರಕ್ಕೆ ಹಾಕಿಬಿಟ್ಟೆಯಲ್ಲೇ ಗೆಳತಿ! ಪುನಃ ವಿಷಯ ರೊಟೇಟ್ ಆಗುವುದು ಬೇಡ- ಗುಡ್‌ಬೈ!” ಎಂದು ಗೆಳತಿಗೆ ಮೆಸೇಜ್ ಮಾಡಿದೆ!
ವಿಷಯ ಅರ್ಥವಾಯಿತೋ…, ಅಥವಾ…, ಅವಳಿಗೂ ನಾನೊಬ್ಬ ಅಹಂಕಾರಿಯೆಂದು ಅನ್ನಿಸಿತೋ- ಏನೋಪ್ಪ!
ಸೈಲೆಂಟ್ ಆದಳು!
ಇದೊಂದು ಪಾಠ! ಎಷ್ಟು ಕಲಿತರೂ ಅಳವಡಿಸಿಕೊಳ್ಳದ ಪಾಠ! ಎಲ್ಲರೂ ನನ್ನವರೇ ಅಂದುಕೊಂಡು ವರ್ತಿಸುವಾಗ ಬೀಳುವ ಈ ಏಟುಗಳು ನಮ್ಮನ್ನು ಬದಲಿಸಿದರೆ- ನಿಜವಾದ ನಮ್ಮವರಿಗೆ ನಾವೊಂದು ಕೊರತೆಯಾದಂತೆ!! ಆದ್ದರಿಂದ… ಸಲಹೆಗಳು ಮುಂದುವುರೆಯುತ್ತದೆ!
Comments
Post a Comment