ಭ್ರಮೆ ಕಳಚಿದಾಗ!
ಭ್ರಮೆ ಕಳಚಿದಾಗ!
ಕೆಲವೊಂದು ಭ್ರಮೆಗಳನ್ನು ಕಳಚಿಕೊಳ್ಳಲು ಪ್ರತ್ಯೇಕ ಕಾರಣಗಳೇನೂ ಬೇಕಿಲ್ಲ! ಹಾಗೆಯೇ…, ಯಾವುದೋ ಘಟನೆ, ಚಿಂತನೆಗಳು ಇನ್ಯಾವುದೋ ಪ್ರಶ್ನೆಗಳಿಗೆ ಉತ್ತರವಾಗುತ್ತದೆ!
*
“ನಿನಗೆ ಫೇಸ್‌ಬುಕ್ ಸೆಟ್ ಆಗುವುದಿಲ್ಲ ಮಾರಾಯ! ಒಬ್ಬನೇ ಎಲ್ಲಾದರೂ ಹಾಳಾಗಿ ಹೋಗು- ಸನ್ಯಾಸಿ!” ಎಂದಳು.
“ಅದೇ ಯೋಚನೆಯಲ್ಲಿದ್ದೇನೆ!” ಎಂದೆ.
“ಅದು ಹೇಗಾದರೂ ಮನಸ್ಸು ಬರುತ್ತೋ…? ನೀನೇನೋ ಭಾರಿ- ಯಾರು ಏನಂದುಕೊಂಡರೆ ನನಗೇನು ನಾನಿರುವುದೇ ಹೀಗೆ- ಅನ್ನುವವ! ಹಾಗೆಂದು ನಿನ್ನ ಬದುಕಿಗಂಟಿಕೊಂಡವರ ಕಥೆಯೇನು?” ಎಂದಳು.
ನಾನೇನೂ ಮಾತನಾಡಲಿಲ್ಲ.
“ಎಲ್ಲರೂ ನಿನ್ನ ಮನಸ್ಸಿನಂಥವರೇ ಆಗಬೇಕೆಂದಿಲ್ಲವೋ…! ನೀ ಏನೇ ಬರೆದರೂ ಅದು ನಿನ್ನ ಪರ್ಸನಲ್ ಎಂದೇ ಬಿಂಬಿತವಾಗುವುದು! ಯಾರನ್ನು ಉದ್ದೇಶಿಸಿ ಬರೆದಿದ್ದೀಯ ಎಂದೂ ಊಹಿಸುತ್ತಾರೆ!” ಎಂದಳು.
ಅದು ನನಗೆ ಗೊತ್ತಿರುವ ವಿಷಯವೇ! ನಾನು ಯಾವತ್ತೂ ಪ್ರಪಂಚದ ಮುಂದೆ ತೆರೆದುಕೊಳ್ಳಲು ಹಿಂಜರಿದವನಲ್ಲ. ಮನುಷ್ಯ ಅಂದಮೇಲೆ ಕೆಟ್ಟದ್ದು ಒಳ್ಳೆಯದ್ದು ಎರಡೂ ಇರುತ್ತದೆ! ಕೇವಲ ಒಳ್ಳೆಯದನ್ನು ಮಾತ್ರ ಬಿಂಬಿಸಿ- ನಾನು ಭಾರಿ ಒಳ್ಳೆಯವ- ಅನ್ನಿಸಿಕೊಳ್ಳುವುದರಲ್ಲಿರುವ ಪುರುಷಾರ್ಥ ನನಗರ್ಥವಾಗುವುದಿಲ್ಲ!
“ನಾನೇನು ಮಾಡಲೆ? ನಿನ್ನ ಕೇಳಿದೆ ತಾನೆ? ನೀನು ಮಾಡಿದ್ದು ಸರಿಯಾ- ಎಂದು? ನೀನೇನೂ ಉತ್ತರಿಸದಿದ್ದರೆ ನಾನೇನು ಮಾಡಲಿ? ನನಗೆ ಉತ್ತರ ಬೇಕು! ಕಥೆಯಂತೆ ಬರೆಯುತ್ತೇನೆ! ಯಾವುದು ಸರಿ ಯಾವುದು ತಪ್ಪು ಎಂದು ಬಿಂಬಿತವಾಗುತ್ತದೆ!” ಎಂದೆ.
“ಆತ್ಮ ಸಾಕ್ಷಿಯನ್ನು ಕೇಳಿ ನೋಡು- ಕಲಿ! ನಿನಗೆ ಗೊತ್ತು- ನೀನು ಬರೆಯುವ ರೀತಿಯಿಂದ ಪ್ರಪಂಚ ನಿನ್ನೆಡೆಗೆ ಸಿಂಪತಿಯನ್ನೂ- ನಿನಗೆ ಸಂಬಂಧಪಟ್ಟವರೆಡೆಗೆ ತಿರಸ್ಕಾರವನ್ನೂ ಬೆಳೆಸುತ್ತದೆ! ನೀನು ಸರಿಯೋ ಅವರು ಸರಿಯೋ ಅನ್ನುವುದು ಮುಖ್ಯವಲ್ಲ! ನೀನಿದನ್ನು ಹೇಳಬೇಕಿತ್ತಾ ಅನ್ನುವುದು ಪ್ರಶ್ನೆ!” ಎಂದಳು.
“ಇಲ್ಲ! ನಿನ್ನ ಮಾತನ್ನು ಒಪ್ಪಲಾಗುವುದಿಲ್ಲ! ನಾನು ಬರೆದ ಕಥೆಗಳನ್ನು ಅಷ್ಟು ಸುಲಭದಲ್ಲಿ ಯಾರೂ ಒಪ್ಪುವುದಿಲ್ಲ ಅನ್ನುವಲ್ಲಿ- ನನ್ನೆಡೆಗೆ ಸಿಂಪತಿ ಅಂದರೇನು?” ಎಂದೆ.
“ಹಾಗಲ್ಲವೋ…, ಈಗ…, ಯಾರಿಂದಲೋ ನಿನಗೆ ಇರಿಸುಮುರಿಸಾಗಿರುತ್ತದೆ! ನೀನದನ್ನು ಕಥೆಯಂತೆ ಬರೆಯುತ್ತೀಯ! ನಿನಗಾದ ಇರಿಸುಮುರಿಸು ಅವರಿಗೂ ಆಗಬೇಕು ಅನ್ನುವ ಅಹಂ! ಸ್ಯಾಡಿಸಂ!” ಎಂದಳು.
“ಹಾಗಿದ್ದರೆ ನಾನೇನೂ ಬರೆಯುವಂತೆಯೇ ಇಲ್ಲ!” ಎಂದು ಅವಳ ಮುಖವನ್ನು ನೋಡಿ…,
“ಅಲ್ಲವೇ…! ನನಗೊಬ್ಬರಿಂದ ಇರಿಸುಮುರಿಸಾಯಿತು! ಅದನ್ನು ನಾನು ಅವರಿಗೆ ನೇರವಾಗಿ ಹೇಳಿದೆ! ಅವರು ಅದನ್ನು ಒಪ್ಪದೆ- ಸಮರ್ಥಿಸಿದರು…, ಅಥವಾ…, ಮೌನವಾದರು! ಅದರ ಅರ್ಥವೇನು? ಅವರಿಗೆ ಅವರೇ ಸರಿ- ಎಂದಲ್ಲವೇ? ಆಗ ನನಗೂ ಗೊಂದಲವಾಗುತ್ತದೆ! ಅವರೇ ಸರಿಯೇನೋ ಎಂದು! ನಾನು ಇರುವುದನ್ನು ಇರುವಂತೆ ಬರೆಯುತ್ತೇನೆ! ಅಲ್ಲಿ ನನ್ನನ್ನು ಸಮರ್ಥಿಸುವಂತೆಯೋ ಅವರನ್ನು ನಿಷೇಧಿಸುವಂತೆಯೋ ಬರೆಯುವುದಿಲ್ಲ- ನಡೆದದ್ದನ್ನು ನಡೆದಂತೆ ಬರೆಯುತ್ತೇನೆ! ಅದು ಅವರಿಗೆ ಮುಜುಗರವಾಗುವಂತಿದ್ದರೇ…, ಅನ್ನುವಲ್ಲಿ ನನ್ನ ಉತ್ತರವಿದೆ! ಇನ್ನೊಂದು ವಿಷಯವೇನೆಂದರೆ…, ಹೆಚ್ಚುಕಥೆಗಳಲ್ಲಿ ನನ್ನನ್ನು ಯಾರೂ ಒಪ್ಪಿಲ್ಲ- ಅನ್ನುವುದು! ಕೆಲವೇ ಕೆಲವು ಕಥೆಗಳಲ್ಲಿ- ನೀನೇ ಸರಿ ಅನ್ನುವಂತ ಅಭಿಪ್ರಾಯಗಳು ಬಂದಿದೆ ಅಷ್ಟೆ! ಉತ್ತರ ದೊರಕಿದ, ಇನ್ನೊಬ್ಬರಿಗೆ ಮುಜುಗರವನ್ನು ಉಂಟುಮಾಡಬಹುದಾದ ಆ ಕಥೆಗಳನ್ನು ನಾನು ತಕ್ಷಣವೇ ಡಿಲಿಟ್ ಮಾಡುತ್ತೇನೆ!” ಎಂದೆ.
“ನಿನ್ನೊಂದಿಗೆ ಮಾತನಾಡಿ ಪ್ರಯೋಜನವಿಲ್ಲ!” ಎಂದಳು.
“ಈಗ ನೋಡು…, ಅವಳು ಮಾಡಿದ್ದು ಸರಿಯಾ?” ಎಂದೆ.
“ಈಗೇನು ಹೊಸ ಸಮಸ್ಯೆ!?” ಎಂದಳು.
“ನಾನೊಂದು ಪೋಸ್ಟ್ ಹಾಕಿದ್ದೆ- ನಿನಗೆ ಗೊತ್ತು! “ರಾಜಕೀಯ ಪಕ್ಷಗಳ ಹೆಸರುಗಳು ಮಾತ್ರ ಬೇರೆ ಬೇರೆ ಹೊರತು ಪ್ರತಿನಿಧಿಗಳೆಲ್ಲಾ ಒಂದೇ…! ಆದರೂ ಒಂದು ಪಕ್ಷ ಮೆಜಾರಿಟಿ ಪಡೆದಿದೆಯೆಂದರೆ ಕಾರಣ ಅದು ಹೊರಡಿಸಿದ- ಬಿಟ್ಟಿ ಭಾಗ್ಯ- ಅನ್ನುವ ಪ್ರಣಾಳಿಕೆಯೇ ಹೊರತು ಬೇರೇನೂ ಅಲ್ಲ!” ಎಂದು. ಆ ಪೋಸ್ಟ್ ಅನ್ನು ಓದಿದ ಗೆಳತಿಯೊಬ್ಬಳು ಸ್ಟಾಟಸ್ ಹಾಕಿಕೊಂಡಿದ್ದಳು!”
“ಏನಂತ?”
“ಹೆಂಡತಿ ಮಕ್ಕಳನ್ನು ಸಾಕಲಾಗದ ಅಯೋಗ್ಯರೆಲ್ಲಾ ದೇಶದ ಹಿತದ ಬಗ್ಗೆ ಮಾತನಾಡುತ್ತಾರೆ! ಸ್ವಂತವಾಗಿ ದುಡಿದು ತಿನ್ನೋ ಯೋಗ್ಯತೆ ಇಲ್ಲ! ಅಪ್ಪ ಅಮ್ಮ ಮಾಡಿಟ್ಟಿದ್ದರಲ್ಲಿ ಬದುಕುತ್ತಾ…, ಕಥೆ ಕಾದಂಬರಿ ಬರೆಯುತ್ತಾ…, ಬಡವರಿಗೆ ಉಚಿತವಾಗಿ ಕೊಡುವುದನ್ನು ಬಿಟ್ಟಿ ಎಂದು ಹೇಳಿ ಅವಮಾನ ಬೇರೆ ಮಾಡುತ್ತಾರೆ!” ಎಂದು.
“ಹಾಕಿಕೊಂಡರೆ ಹಾಕಿಕೊಂಡಳು- ಅದರಲ್ಲಿ ನಿನ್ನದೇನು?”
“ನನ್ನದೇನೂ ಇಲ್ಲ! ಅಮ್ಮ ಹೇಳಿದರು- ನೋಡೋ ಅವಳೇಕೆ ಹಾಗೆ ಸ್ಟಾಟಸ್ ಹಾಕಿಕಕೊಂಡಿದ್ದಾಳೆ? ನಿನ್ನನ್ನು ಉದ್ದೇಶಿಸಿಯೇ ಹಾಕಿದಂತಿದೆ- ಎಂದು! ನಾನವಳನ್ನು ನೇರವಾಗಿಯೇ ಕೇಳಿದೆ- ಅಮ್ಮ ಹೀಗೆ ಹೇಳ್ತಿದಾರಲ್ಲೇ…, ಅವರು ಹೇಳಿದಂತೆಯೇ ಇದೆ! ಯಾರಿಗಾಗಿ ಈ ಸ್ಟಾಟಸ್?- ಎಂದು! ನೀನೇಕೆ ಹೆಗಲುಮುಟ್ಟಿ ನೋಡ್ಕೋತೀಯ? ಎಂದಳು. ಹಾಗಿದ್ದರೆ ನನಗಾಗಿ ಅಲ್ಲ ಅನ್ನು- ಅಂದರೆ…, ನೀನು ಅಂತವನಾದರೆ ನಿನಗೂ ಸೇರಿಯೇ ಹಾಕಿದ್ದು- ಎಂದಳು. ಗೊಂದಲವಾಯಿತು! ನೇರಾಗಿ ಹೇಳು…, ಅದನ್ನು ಹಾಕುವಾಗ ನಾನು ನಿನ್ನ ಮನದಲ್ಲಿ ಇದ್ದೆನಾ? ಎಂದರೆ…, ಹೌದು- ಎಂದಳು.” ಎಂದು ನಿಲ್ಲಿಸಿದೆ.
ಎರಡು ಕ್ಷಣಗಳ ಮೌನ!
“ಈಗ ನನ್ನ ಧರ್ಮವೇನು? ಅದರಲ್ಲೂ ಅವಳಿಗೆ ಗೊತ್ತಿರುವಷ್ಟು ಸ್ಪಷ್ಟವಾಗಿ ನನ್ನ ಬದುಕು ಬೇರೆ ಯಾರಿಗೂ ಗೊತ್ತಿಲ್ಲ ಅನ್ನುವಲ್ಲಿ- ಅವಳು ಹಾಗೆ ಸ್ಟಾಟಸ್ ಹಾಕಿದ್ದರ ಉದ್ದೇಶವೇನು?” ಎಂದೆ.
“ಸುಮ್ಮನೆ ಬಿಟ್ಟು ಬಿಡೋ ಕಲಿ! ಇನ್ನು ಅದಕ್ಕೆ ಸೇಡು ತೀರಿಸಿಕೊಳ್ಳಲು ಹೋಗಬೇಡ!” ಎಂದಳು.
“ಇಲ್ಲಿ ಸೇಡು ತೀರಿಸಿಕೊಳ್ಳುವುದು ಅನ್ನುವುದು ಇಲ್ಲವೇ! ನನ್ನ ಧ್ಯೇಯವನ್ನೂ ಅಪ್ಪ ಅಮ್ಮನನ್ನೂ ಬಿಟ್ಟು, ಅವಳ ಹಿಂದೆ ಗುಲಾಮನಂತೆ ಹೋಗಲಾರೆ ಅನ್ನುವುದು ಖಚಿತವಾದಾಗ, ನನ್ನನ್ನು ಬಿಟ್ಟು ಹೋದವಳು ನನ್ನ ಹೆಂಡತಿ! ಅದು ಸ್ಟಾಟಸ್ ಹಾಕಿದ ಗೆಳತಿಗೆ ಚೆನ್ನಾಗಿ ಗೊತ್ತು! ಹಾಗೆ ಗೊತ್ತಿದ್ದೂ…, ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲಾಗದ ಅಯೋಗ್ಯ- ಅಂದರೆ ಅರ್ಥವೇನು?” ಎಂದೆ.
“ನೀನೇ ಹೇಳಪ್ಪ- ಸಕಲಕಲಾವಲ್ಲಭ!” ಎಂದಳು.
“ಕಾಂಪ್ಲೆಕ್ಸ್!” ಎಂದೆ.
“ಇದರಲ್ಲೇನು ಕಾಂಪ್ಲೆಕ್ಸ್?” ಎಂದಳು.
“ಅವಳ ಸರ್ಕಾರಿ ಉದ್ಯೋಗವನ್ನು ಕಂಡು…, ವಿಧವೆಯಾದ ಹೆತ್ತಮ್ಮನನ್ನು ಕಾಲ ಕಸದಂತೆ ತಿರಸ್ಕರಿಸಿ…, ಅವಳನ್ನು ಮದುವೆಯಾದವನು ಅವಳ ಗಂಡ! ನಲವತ್ತು ವರ್ಷವಾದರೂ ಯಾವುದೇ ದ್ಯೇಯೋದ್ದೇಶವಿಲ್ಲದೆ- ಯಾವುದೇ ಕೆಲಸವಿಲ್ಲದೆ- ಮೂರು ಹೊತ್ತೂ ಕುಡಿಯುತ್ತಾ ಹೆಂಡತಿಯ ಮಡಿಲಲ್ಲಿ ಮಲಗಿ ರೋಧಿಸುತ್ತಿರುವುದು ಅವನ ಕೆಲಸ! ಹೀಗಿರುವಾಗ…, ಅವಳು ಯಾರನ್ನು ಉದ್ದೇಶಿಸಿಯೇ ಆಗಲಿ ಆ ಸ್ಟಾಟಸ್ ಹಾಕಬಾರದು!” ಎಂದೆ.
ತಲೆಯಮೇಲೆ ಕೈಹೊತ್ತು ಕುಳಿತಳು!
“ಇದು ತೀರಾ ಕಠಿಣವೆನ್ನಿಸಲಿಲ್ಲವಾ ನಿನಗೆ?” ಎಂದಳು.
“ಇಲ್ಲ! ಇದು ಅವಳ ತಪ್ಪಲ್ಲ!” ಎಂದೆ.
ಆಶ್ಚರ್ಯದಿಂದ ನನ್ನ ಮುಖವನ್ನು ನೋಡಿದಳು!
“ಶತಮಾನ ಶತಮಾನಗಳಿಂದ ಪ್ರಚಲಿತದಲ್ಲಿರುವ ಗುಲಾಮತೆಯ ಸಂಕೇತ- ಅವಳು!” ಎಂದೆ.
“ನಿನ್ನ ತಲೆ! ಗುಲಾಮತೆಗೂ ಅವಳಿಗೂ ಏನು ಸಂಬಂಧ ತಂದೆ…!” ಎಂದಳು.
“ನೀನು ಕಲಿಯ ಹೆಂಡತಿ- ಅಲಕ್ಷ್ಮಿ- ಗಂಡನನ್ನು ತಂದೆ ಅನ್ನಬಾರದು!” ಎಂದು ನಿಲ್ಲಿಸಿ…,
“ನಾನೊಂದು ಹೊಸಾ ಸತ್ಯವನ್ನು ಕಂಡುಕೊಂಡಿದ್ದೇನೆ!” ಎಂದೆ.
“ದೇವರೇ
ಕಾಪಾಡು!” ಎಂದು
ದೀರ್ಘವಾದ ನಿಟ್ಟುಸಿರು
ಬಿಟ್ಟು…,
“ಹೇಳಪ್ಪಾ
ಹೇಳು- ಅದೇನು
ಹೊಸಾ ಸತ್ಯ!” ಎಂದಳು.
*
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ- ಹೊಸ ಸತ್ಯವನ್ನು ಕಂಡುಕೊಂಡೆ ಅನ್ನುವುದಕ್ಕಿಂತ…, ಹೊಸ ಪಾಠವನ್ನು ಕಲಿತೆ ಅನ್ನುವುದು ಸರಿಯೇನೋ!
ಭ್ರಮೆ ಕಳಚಿತು ಅನ್ನಬಹುದೇ…?
ಇಲ್ಲ…, ಇದು ಭ್ರಮೆ ಕಳಚಿದ್ದಲ್ಲ…, ವಾಸ್ತವತೆಯ ವಿಸ್ತಾರ! ಇದುವರೆಗಿನ ಅರಿವನ್ನು ಮತ್ತೊಮ್ಮೆ ಪರಿಶೀಲಿಸಿ- ವಿಸ್ತಾರಗೊಳಿಸಲೊಂದು ಅವಕಾಶ!
ರಾಜಕೀಯ ನನಗೆ ಯಾವತ್ತಿಗೂ ದೂರವೇ! ಅದರ ಸಹವಾಸವೇ ಬೇಡ- ಅಂದುಕೊಂಡಿದ್ದವನು! ನನ್ನ ನೆಚ್ಚಿನ ಲೇಖಕರೊಬ್ಬರ ಪುಸ್ತಕವನ್ನು ಓದಿದಮೇಲೆ- ಅಲ್ಲ, ಅವರ ಆ ಪುಸ್ತಕವನ್ನು ಓದಿದಮೇಲೆಯೇ ಅವರು ನನ್ನ ನೆಚ್ಚಿನ ಲೇಖಕರಾಗಿದ್ದು, ಅವರ ಪರಿಚಯವೇ ಆಗಿದ್ದು! ಅವರ ಹೆಸರನ್ನು ಹೇಳುವುದು ಬೇಡ ಅಂದುಕೊಳ್ಳುತ್ತೇನೆ- ಅವರ ಪುಸ್ತಕವನ್ನು ಓದಿದಮೇಲೆ…, ರಾಜಕೀಯದಲ್ಲಿ ಸ್ವಲ್ಪ ಆಸಕ್ತಿ ಹುಟ್ಟಿತು ಅನ್ನಬಹುದು! ಅವರ ರಾಜಕೀಯ ವಿಶ್ಲೇಷಣೆಗಳನ್ನು ಗಮನಿಸುತ್ತಾ ಬಂದಿದ್ದೇನೆ…, ಈಬಾರಿಯ ಚುನಾವಣೆಯನ್ನು ದೇವರೂ ಸರಿಯಾಗಿ ವಿಶ್ಲೇಷಿಸಲಾರ- ಎಂದಿದ್ದರು! ಯಾವ ತೀರ್ಮಾನಕ್ಕೂ ಬರಲಾಗದು ಅನ್ನುವ ಅಭಿಪ್ರಾಯ! ಚುನಾವಣಾ ಫಲಿತಾಂಶದ ನಂತರ…,
“ಇದು ಧರ್ಮರಾಜಕೀಯದಮೇಲೆ ಜಾತಿರಾಜಕೀಯದ ಗೆಲುವು!” ಎಂದರು.
ಅತಿ ಸಣ್ಣ ವಾಕ್ಯ! ನನ್ನ ಇದುವರೆಗಿನ ಒಟ್ಟು ನಂಬಿಕೆಯೊಂದನ್ನೇ ಬುಡಮೇಲು ಮಾಡಿದ- ಅತಿ ಸಣ್ಣ ವಾಕ್ಯ!
ಧರ್ಮ ಅನ್ನುವ ಪದದ ನಿಜವಾದ ಅರ್ಥ ಬೇರೆಯಿದೆ! ಅದನ್ನು ಆಮೇಲೆ ನೋಡೋಣ! ಲೇಖಕರು- ಈಗಿನ ಕಾಲದಲ್ಲಿ ಧರ್ಮ ಅನ್ನುವುದು ಯಾವ ಅರ್ಥವನ್ನು ಹೊಂದಿದೆಯೋ ಅದಕ್ಕನುಗುಣವಾಗಿ ಹೇಳಿದ್ದಾರೆ! ನನ್ನ ಈ ಕತೆಯಲ್ಲಿ ಧರ್ಮ ಅನ್ನುವ ಪದವನ್ನು ತೆಗೆದು ಮತ ಎಂದು ಹಾಕಿಕೊಳ್ಳುತ್ತೇನೆ! ಯಾಕೆಂದರೆ…, ನನ್ನ ಬುಡಮೇಲಾದ ನಂಬಿಕೆ- ಮತವನ್ನು ಅವಲಂಬಿಸಿದೆ!
“ವಿಷಯವನ್ನು ಹೇಳು ಕಲಿ!” ಎಂದಳು.
“ಕೆಲವೊಂದು ಕಥೆಗಳು ಪೀಠಿಕೆಯನ್ನು ಕೇಳುತ್ತವೆ!” ಎಂದೆ.
“ಈಗ ನೀನು ಹೇಳುತ್ತಿರುವುದಕ್ಕೂ ಅವಳ ಗುಲಾಮತೆಗೂ ಏನು ಸಂಬಂಧ ದೊರೆ?”
“ಪ್ರತಿ ಹೆಣ್ಣಿನ ಸಮಸ್ಯೆ ಇದು!” ಎಂದೆ.
“ಯಾವುದು?”
“ಆತುರ!”
“ಕೇವಲ ಹೆಣ್ಣಿನ ಸಮಸ್ಯೆಯೇ? ಹೆಣ್ಣು ಹೆಣ್ಣು ಅಂತ ಕೀಳು ಮಾಡದಿರು!”
“ಇಲ್ಲವೇ…, ಪರಂಪರಪರಂಪರೆಯಾಗಿ ಕೆಲವೊಂದು ಗುಣಗಳು ಹೀಗೆಯೇ ಎಂದು ನಿರ್ಧರಿಸಲ್ಪಟ್ಟಿರುತ್ತದೆ! ಆತುರ, ಅಸೂಯೆ, ಸ್ವಾರ್ಥ…, ಎಲ್ಲವೂ ಎಲ್ಲರಲ್ಲೂ ಇದೆ! ಆದರೆ ಹೆಣ್ಣಿನಲ್ಲಿ ಹೆಚ್ಚು!”
“ನಿನ್ನ ತಲೆ! ಕಥೆಯನ್ನು ಮುಗಿಸು…, ಆಮೇಲೆ ಜಗಳ ಮಾಡೋಣ! ಪ್ರತಿ ಹೆಣ್ಣಿನ ಸಮಸ್ಯೆಯಂತೆ ಪ್ರತಿ ಹೆಣ್ಣಿನ ಸಮಸ್ಯೆ!”
“ನೀ ಹೀಗೆ ಮಧ್ಯೆ ಮಧ್ಯೆ ಬಂದು ಡಿಸ್ಟರ್ಬ್ ಮಾಡಬೇಡ!”
“ಡಿಸ್ಟರ್ಬ್! ನಾನು!?”
“ಇನ್ನೇನಿದು?”
“ಸರಿ…, ಹೇಳಪ್ಪಾ!”
“ಈ ಹೆಣ್ಣಿನ ಸಮಸ್ಯೆ ಅನ್ನುವುದನ್ನು ಈಗ ನಾನು ಹೇಳಲಿರುವ ವಿಷಯಕ್ಕೂ ಅನ್ವಯಿಸಿಕೋ- ಸಮಸ್ಯೆ ಅಂತಲ್ಲ, ಮುಂಚೆಯಿಂದಲೂ ಬಂದಿರುವುದು- ಅನ್ನುವಂತೆ!”
*
ಹಿಂದೂಧರ್ಮ ಅನ್ನುವುದು ಇಲ್ಲ! ಅದು ಹಿಂದೂಗಳ- ಧರ್ಮ!
ಹಾಗಿದ್ದರೆ…,
ಹಿಂದೂಗಳು ಅಂದರೆ ಯಾರು?
ಧರ್ಮ ಎಂದರೇನು?
ಪರ್ಷಿಯಾದಿಂದ ಬಂದ ಇಸ್ಲಾಂ ಅರಸನೊಬ್ಬ…, ಸಿಂಧೂ ನದಿಯನ್ನು ಸಿಂಧೂ ಎಂದು ಉಚ್ಛರಿಸಲಾಗದೆ…, ಹಿಂದೂ ಅನ್ನುವ ಪದವನ್ನು ಬಳಸಿ…, ಹಿಂದೂ ನದಿಯನ್ನು ಮೂಲವಾಗಿ ಉಳ್ಳವರು- ಅಲ್ ಹಿಂದ್- ಎಂದ! ಅಂದರೆ…, ಭಾರತದಲ್ಲಿ (ಆತನ ಪ್ರಕಾರ ಸಿಂಧೂನದಿಯ ಆಚೆ ಇರುವವರು- ಸಿಂಧೂ ನದಿಯನ್ನು ಮೂಲವಾಗಿ ಇರುವವರು) ನೆಲೆಸಿರುವವರೆಲ್ಲಾ ಹಿಂದೂಗಳು! ಇದು ಪರ್ಷಿಯಾದ ಅರಸ ಕೊಟ್ಟ ಹೆಸರು!
ಹೊರಗಿನವರ ದೃಷ್ಟಿಯಲ್ಲಿ ಭಾರತೀಯರೆಲ್ಲಾ ಹಿಂದೂಗಳೆ!
ಇನ್ನು ಧರ್ಮದ ವಿಷಯಕ್ಕೆ ಬಂದರೆ…,
ಮನುಷ್ಯನಾದವನು ಮಾಡಲೇ ಬೇಕಾದ ಕರ್ಮ ಅಥವಾ ಕರ್ತವ್ಯವನ್ನು ಧರ್ಮ ಎನ್ನಬಹುದು!
ಮಾತೃಧರ್ಮ, ಪಿತೃಧರ್ಮ, ಬ್ರಾತೃಧರ್ಮ, ಮಿತ್ರಧರ್ಮ, ಪುತ್ರಧರ್ಮ, “ರಾಷ್ಟ್ರ ಧರ್ಮ…,” ಪ್ರತಿಯೊಬ್ಬರೂ ಆಚರಿಸಲೇ ಬೇಕಾದ ಒಟ್ಟು ಧರ್ಮಗಳು- ಹಿಂದೂವಿನ ಧರ್ಮ! ಅಥವಾ ಸನಾತನ ಧರ್ಮ! ಇಲ್ಲಿ…, ಸಂದರ್ಭಕ್ಕೆ ಅನುಗುಣವಾಗಿ ಒಬ್ಬನೇ ವ್ಯಕ್ತಿ ಹಲವು ಧರ್ಮಗಳನ್ನು ನೆರವೇರಿಸಬೇಕಾಗುತ್ತದೆ.
ಈ ಸನಾತನ ಧರ್ಮವನ್ನು ಕೇವಲ ಮತಗಳೊಂದಿಗೆ ಹೋಲಿಸುವುದೇ ಆಭಾಸ!
ಸಿದ್ಧಾರ್ಥನೆಂಬ ವ್ಯಕ್ತಿ ಕಂಡುಕೊಂಡ ಸತ್ಯಗಳು, ಆತನದೇ ಆದ ಅಭಿಪ್ರಾಯಗಳನ್ನು ಹೊಂದಿರುವ ಸಿದ್ಧಾರ್ಥನ ಮತ- ಬೌದ್ಧಮತವಾಯಿತು! ಇದು ಸಿದ್ಧಾರ್ಥ ಎನ್ನುವ ವ್ಯಕ್ತಿಯ ಅಭಿಪ್ರಾಯ ಅಥವಾ ಮತ!
ಏಸುಕ್ರಿಸ್ತ ಅನ್ನುವ ವ್ಯಕ್ತಿಯ ಮತದಿಂದ ಕ್ರಿಸ್ತುಮತ!
ಮೊಹಮ್ಮದ್ ಪೈಗಂಬರ್ ಅನ್ನುವ ವ್ಯಕ್ತಿಯ ಅಭಿಪ್ರಾಯಗಳಿಂದ ಇಸ್ಲಾಂ ಮತ!
ಈ ರೀತಿಯಾಗಿ ನೋಡಿದರೆ…, ಭಾರತದ ಸಂಸ್ಕಾರ ಯಾವೊಂದು ವ್ಯಕ್ತಿಯಿಂದ ರೂಪುಗೊಂಡದ್ದಲ್ಲ! ಯಾವೊಂದು ವ್ಯಕ್ತಿಯನ್ನು ಅವಲಂಬಿಸಿಲ್ಲ! ಸಾವಿರಾರು ಆಚಾರ, ವಿಚಾರ, ಮತಗಳನ್ನು ಒಳಗೊಂಡಿದ್ದೇ ಸನಾತನ ಧರ್ಮ ಅಥವಾ ಹಿಂದೂಧರ್ಮ! ಈ ಹಿಂದೂಧರ್ಮವನ್ನು ಒಬ್ಬ ವ್ಯಕ್ತಿಯಿಂದ ರೂಪುಗೊಂಡ ಇಸ್ಲಾಂಗಾಗಲಿ, ಕ್ರಿಶ್ಚಿಯನ್‌ಗಾಗಲಿ, ಬೌದ್ಧಮತಕ್ಕಾಗಲಿ ಹೋಲಿಸಲಾಗುವುದಿಲ್ಲ! ಭಾರದಲ್ಲಿರುವ ಸಾವಿರಾರು ಮತಗಳಂತೆ- ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತಗಳೇ ಹೊರತು ಭಾರತದ ಅಷ್ಟೂ ಮತಗಳನ್ನು ಕೇವಲ ಇವುಗಳೊಂದಕ್ಕೆ ಹೋಲಿಸಲಾಗದು! ಇಸ್ಲಾಂ ಮತ್ತು ಕ್ರಿಶ್ಚಿಯನ್‌ಮತಗಳು ಭಾರತದ ಹೊರಗಿನಿಂದ ಬಂದವು ಅನ್ನುವುದಷ್ಟೇ ಅದರ ಪ್ರತ್ಯೇಕತೆ!
ಇಸ್ಲಾಂ ಮತ್ತು ಕ್ರೈಸ್ತಮತಗಳು ಭಾರತೀಯ ಮೂಲದ್ದಲ್ಲ- ಅನ್ನುವಲ್ಲಿ ಇಷ್ಟು ದಿನ ನನ್ನ ಅಭಿಪ್ರಾಯಬೇಧವಿತ್ತು!
ನನ್ನ ಪ್ರಶ್ನೆ ಇಷ್ಟೆ…,
“ನೀನು ಭಾರತೀಯನೋ- ಮತವೋ?”
“ನನಗೆ ದೇಶಕ್ಕಿಂತ ಮತ ಮುಖ್ಯ!” ಅನ್ನುವವನು ನನಗೆ ಶತ್ರು!
“ನನಗೆ ಮತಕ್ಕಿಂತ ದೇಶ ಮುಖ್ಯ- ನಾನು ಭಾರತೀಯ!” ಅನ್ನುವವನು ಯಾರೇ ಆಗಿರಲಿ- ನನ್ನ ಮಿತ್ರ!
ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ…, ವಿವಿಧ ಮತಗಳವರನ್ನು ಮಾತ್ರವಲ್ಲದೆ…, ಕಸುಬಿನ ಆದಾರದಲ್ಲಿ ರೂಪುಗೊಂಡ ಜಾತಿಯವರೂ….,
“ನಿನಗೆ ಜಾತಿ ಮುಖ್ಯವಾ…, ದೇಶ ಮುಖ್ಯವಾ?” ಅನ್ನುವ ಪ್ರಶ್ನೆಯನ್ನೇ ಕೇಳದಿರುವಂತೆ ತಮ್ಮ ನಿಯತ್ತನ್ನು ತೋರಿಸಿಬಿಟ್ಟಿದ್ದಾರೆ!
ಈಗ…, ನನಗೆ ಇಸ್ಲಾಂ ಬೇರೆಯಲ್ಲ, ಕ್ರಿಶ್ಚಿಯನ್ ಬೇರೆಯಲ್ಲ, ಬೌದ್ಧ ಬೇರೆಯಲ್ಲ, ಲಿಂಗಾಯತ ಬೇರೆಯಲ್ಲ, ವಿವಿಧ ಜಾತಿಗಳೂ ಬೇರೆಯಲ್ಲ!
ಭಾರತೀಯರು ನಾವೆಲ್ಲಾ ಒಂದು ಎನ್ನುವ ನಂಬಿಕೆಯಲ್ಲಿದ್ದ ನನಗೆ…, ಇಲ್ಲಾ…, ನಮ್ಮ ನಮ್ಮ ಜಾತಿಯವರು ನಾವೆಲ್ಲಾ ಒಂದು ಎನ್ನುವ ಸ್ಪಷ್ಟ ಉತ್ತರವನ್ನು ಕೊಟ್ಟ ಜಾತಿವಾದಿಗಳು (ಜಾತ್ಯಾತೀತರು!!??) ಒಂದೊಳ್ಳೆಯ ಪಾಠವನ್ನು ಕಲಿಸಿದ್ದಾರೆ!
ಇದು ಸ್ಪಷ್ಟಾಗಿ ರಾಷ್ಟ್ರಧರ್ಮದಮೇಲಿನ- ಮತ, ಜಾತಿಗಳ ಗೆಲುವು!
ಈಗ ನನ್ನ ಧರ್ಮವೇನು?
*
“ಅದೆಲ್ಲಾ ಇರ್ಲಿ! ಅವಳಬಗ್ಗೆ ಹೇಳು!” ಎಂದಳು.
“ಅಯ್ಯೋ ಕರ್ಮವೇ! ಇಷ್ಟು ಸ್ಪಷ್ಟವಾಗಿ ಹೇಳಿದ ನಂತರವೂ…!” ಎಂದವನನ್ನು ತಡೆದು…,
“ಎಲ್ಲರೂ ನಿನ್ನಷ್ಟು ಪ್ರಬುದ್ಧರಲ್ಲ ದೊರೆಯೇ!” ಎಂದಳು.
“ನಾನು ಬರೆಯುತ್ತಿರುವ ಕಥೆಯಲ್ಲಿ…, ನೀನು ನನ್ನನ್ನು ಪ್ರಬುದ್ಧ ಎಂದು ಕರೆದರೆ…, ಅದು ನನ್ನ ಅಹಂಕಾರವನ್ನು ಸೂಚಿಸುವುದಿಲ್ಲವೇ- ನನ್ನನ್ನು ನಾನು ಹೊಗಳಿಕೊಂಡಂತೆ ಆಗುವುದಿಲ್ಲವೇ?” ಎಂದೆ.
ಅವಳಿಗೆ ಅರ್ಥವೇ ಆಗಲಿಲ್ಲ! ಹಾಗಿದ್ದರೆ ಆ ಅಹಂಕಾರ ಇರಲಿ ಅಂದುಕೊಂಡು…,
“ಅವಳೊಬ್ಬಳು ಕಪ್ಪು ಹುಡುಗಿ! ಜೊತೆಗೆ, ತಾವು ಬೆಳೆಯದಿರಲು ಇತರರು ಕಾರಣ ಎಂದು ಹೇಳುವ ಗುಲಾಮಿ ವರ್ಗಕ್ಕೆ ಸೇರಿದವಳು! ನಿನಗೆ ಗೊತ್ತು…, ಕಪ್ಪೆಂದರೆ ನನಗೆ ಎಷ್ಟು ಇಷ್ಟವೆಂದು! ಆ ಇಷ್ಟದ ಸಂಕೇತವಾಗಿ ಅವಳನ್ನು ನಾನು ಕರ್ಪಿ ಎಂದರೆ…, ಕಪ್ಪುಬಣ್ಣದ ಕಾರಣವಾಗಿ ತನ್ನನ್ನು ಕೀಳಾಗಿ ಕಾಣಲು ಹೀಗೆ ಕರೆಯುತ್ತಿದ್ದೇನೆ- ಅಂದರೆ ಏನು ಮಾಡುವುದು?”
“ಅವಳಿಗೆ ಇಷ್ಟವಿಲ್ಲದಿದ್ದರೆ ಕರೆಯದಿದ್ದರಾಯಿತು!”
“ನಿನ್ನ ತಲೆ! ಅವಳಮೇಲಿನ ನನ್ನ ಪ್ರೀತಿಯ ಸಂಕೇತವನ್ನು ಹಾಗೆ ತೆಗೆದುಕೊಂಡರೆ ಏನು ಮಾಡುವುದು ಅನ್ನುವುದು ಪ್ರಶ್ನೆ!” ಎಂದೆ.
“ಇದು ಗುಲಾಮತೆಯ ಸಂಕೇತವಾ? ಅದಕ್ಕೂ ಅವಳು ಹಾಕಿಕೊಂಡ ಸ್ಟಾಟಸ್‌ಗೂ ಏನು ಸಂಬಂಧ?” ಎಂದಳು.
“ಅಡ್ಡಬಿದ್ದೆ ತಾಯಿ! ಈಗ…, ನೀನು ನನ್ನನ್ನು ನಿಮ್ಮ ಮನೆಯ ಪೂಜೆಗೆ ಕರೆಯುತ್ತೀಯ ಅಂದುಕೋ! ನಾನು ಬರುವುದಿಲ್ಲ ಅನ್ನುತ್ತೇನೆ! ನೀನೇನು ಮಾಡ್ತೀಯ?”
“ಒಂದೋ ಬಲವಂತ ಮಾಡ್ತೀನಿ! ಹಾಗೂ ಬರಲಿಲ್ಲ ಅಂದ್ರೆ ಹೋಗ್ಲಿ ಬಿಡು- ಅಂತೀನಿ!”
“ಅವಳಾದರೆ…, ಅವಳ ಜಾತಿಯ ಕಾರಣವಾಗಿ ನಾನು ಹೋಗಲ್ಲ ಅಂದೆ- ಅನ್ಕೋತಾಳೆ! ಯಾರಿಗಾದರೂ ನನ್ನ ಉತ್ತರ ಅದೇ ಅಂತ ಅವಳ ತಲೆಗೆ ಹೋಗುವುದಿಲ್ಲ! ಅದನ್ನೇ ಕಾಂಪ್ಲೆಕ್ಸ್ ಎನ್ನುವುದು! ಈಗ ನೋಡು…, ನನ್ನ ಬಗ್ಗೆ ಅತಿ ಸ್ಪಷ್ಟವಾಗಿ ಗೊತ್ತಿದ್ದೂ ಕೂಡ, ಯಾವ ಕುಂದುಕೊರತೆಯಿಲ್ಲದೆ ನೋಡಿಕೊಂಡರೂ…, ತನ್ನ ಮಾತನ್ನು ಕೇಳುತ್ತಿಲ್ಲ, ತನ್ನ ಗುಲಾಮನಾಗುತ್ತಿಲ್ಲ ಅನ್ನುವ ಒಂದೇ ಒಂದು ಕಾರಣಕ್ಕೆ ಬಿಟ್ಟು ಹೋದ ಹೆಂಡತಿಯ ಪರವಾಗಿ…, ಅವನಿಂದ ಅವಳನ್ನು ಸಾಕಲಾಗಲಿಲ್ಲ- ಅದಕ್ಕೇ ಅವಳು ಹೋದಳು- ಅನ್ನುವುದು…!” ಎಂದು ನಿಲ್ಲಿಸಿ ಅವಳ ಮುಖವನ್ನೇ ದಿಟ್ಟಿಸಿ ನೋಡುತ್ತಾ…,
“ಪ್ರಪಂಚದಲ್ಲಿ ಬದುಕಲು ಸಮಾನ ಅವಕಾಶಗಳಿದ್ದೂ…, ತಾನು ಏಳಿಗೆಯನ್ನು ಹೊಂದದಿರಲು ಇತರರು ತುಳಿಯುತ್ತಿರುವುದೇ ಕಾರಣ ಅನ್ನುವುದಕ್ಕೆ ಸಮನಲ್ಲವಾ?” ಎಂದೆ.
ಅವಳಿಗೆ ಊಹೆ ಸಿಕ್ಕಿತು…, ಆದರೆ ಸ್ಪಷ್ಟವಾಗಲಿಲ್ಲ!
“ಅವಳಿಗೂ ಗೊತ್ತು…, ಈ ಬಿಟ್ಟಿ ಯೋಜನೆಯಲ್ಲಿ ಬಡವರ ಹೊಟ್ಟೆ ತುಂಬಿಸುವ ಏನೂ ಇಲ್ಲ! ಹಾಗೆಯೇ ಬಿಟ್ಟಿ ಯೋಜನೆಯನ್ನು ಘೋಷಿಸಿರುವ ಜನಪ್ರತಿನಿಧಿಗಳ ಆಸ್ತಿಯಿಂದ ನಮ್ಮ ರಾಜ್ಯದ ಅಷ್ಟೂ ಬಡವರ ಹೊಟ್ಟೆಯನ್ನು ಪರ್ಮನೆಂಟಾಗಿ ತುಂಬಿಸಬಹುದು! ಆದರೂ ಈ ಯೋಜನೆಯನ್ನು ಸಮರ್ಥಿಸುತ್ತಿದ್ದಾಳೆಂದರೆ…!”
“ಯಾವ ಕಾರಣಕ್ಕೂ ಅವಳು ಬದಲಾಗುವುದಿಲ್ಲ!” ಎಂದಳು.
“ಯಾರೂ!” ಎಂದೆ.
Comments
Post a Comment