ಪ್ರಜ್ಞೆ!

ಪ್ರಜ್ಞೆ!

ತಿರುಗುತ್ತಿರುವ ಬುಗುರಿಯನ್ನೇ ನೋಡುತ್ತಿದ್ದೆ. ಅದೆಷ್ಟು ಸಾರಿ ಶ್ರಮಿಸಿದೆ- ಹಾಗೆ ತಿರುಗುವಂತೆ ಬಿಡಲು? ಮೊಟ್ಟ ಮೊದಲು ಯಾರು ಬಿಟ್ಟಿರಬೇಕು? ಅವರಿಗೆ ಹೇಗೆ ಗೊತ್ತಿತ್ತು ಹೀಗೆ ದಾರವನ್ನು ಸುತ್ತಿ ಬಿಟ್ಟರೆ ಬುಗುರಿ ತಿರುಗುತ್ತದೆಂದು? ಬುಗುರಿಯನ್ನೇ ನೋಡುತ್ತಿದ್ದವನು ಬುಗುರಿಯಂತೆ ತಲೆಯೂ ತಿರುಗಿ- ಪ್ರಪಂಚವೇ ಗಿರಕಿ ಹೊಡೆದಂತಾಗಿ ಬಿದ್ದುಬಿಟ್ಟೆ!

*

ಎದೆಯಮೇಲೆ ಭಾರ. ಕಣ್ಣುಬಿಟ್ಟೆ. ಗಿಡುಗವೊಂದು ನಾನು ಕಣ್ಣು ತೆರೆಯುವುದನ್ನೇ ಕಾಯುತ್ತಾ ನಿಂತಿದೆ. ಎಡಗಣ್ಣು ಕುಕ್ಕಿ ಇನ್ನೇನು ಬಲಗಣ್ಣೂ ಹೋಗಬೇಕು…, ಅದನ್ನು ತಳ್ಳಿದೆ. ಹಾರಿಹೋಯಿತು.

*

ಮೊದಲು ಅರ್ಥವಾಗಲಿಲ್ಲ! ನಂತರ ಅರಿವಿಗೆ ಬಂತು! ಬಾವಲಿಯೊಂದು ನನ್ನ ಕಾಲಿನ ಬೆರಳನ್ನು ಕಚ್ಚಿಹಿಡಿದು ನೇತಾಡುತ್ತಿದೆ! ಕಾಲನ್ನು ಒದರಿದೆ. ಪಟಪಟನೆ ಹಾರಿ ಹೋಯಿತು.

*

ಯಾಕೆ ಏಳಲಾಗುತ್ತಿಲ್ಲ ಅನ್ನುವುದೇ ಹೊಳೆಯುತ್ತಿಲ್ಲ! ಎಡಗೈ ಚಲಿಸಿದರೆ ಬಲಗೈ ಚಲಿಸುವುದಿಲ್ಲ. ಒಂದು ಕಾಲು ಚಲಿಸಿದರೆ ಮತ್ತೊಂದು ಕಾಲು ಚಲಿಸುವುದಿಲ್ಲ! ಹಾಗೇ ನಿಧಾನಕ್ಕೆ ಅರಿವಿಗೆ ಬಂತು- ಮೆದುಳು ಪ್ರವರ್ತಿಸುತ್ತಿದೆ ಹೊರತು ಅದಕ್ಕೆ ಅನುಗುಣವಾಗಿ ದೇಹ ಸ್ಪಂದಿಸುತ್ತಿಲ್ಲ!

ಏನು ಮಾಡಲಿ?

*

ನಂಬಿಕೆ ಅಪನಂಬಿಕೆಗಳು ಅವರವರ ಅನುಭವಗಳನ್ನು ಅವಲಂಬಿಸಿದೆ ಅನ್ನುತ್ತೇನೆ! ಕೆಲವೊಮ್ಮೆ ಮತ್ತೊಬ್ಬರ ಅನುಭವಗಳೂ ನಮ್ಮ ನಂಬಿಕೆ ಅಪನಂಬಿಕೆಗಳಿಗೆ ಕಾರಣವಾಗಬಹುದಾದರೂ ಅದನ್ನು ಪರೀಕ್ಷಿಸಿ ನಮ್ಮ ಅನುಭವಕ್ಕೆ ದಕ್ಕಿಸಿಕೊಂಡರೆ ಒಳ್ಳೆಯದು!

*

ಬುಗುರಿಯೊಂದು ನನ್ನ ಹಣೆಯಮೇಲೆಯೇ ತಿರುಗುತ್ತಿರುವಂತೆ!

ಏನಾಯಿತು ನನಗೆ?

ಮಧ್ಯರಾತ್ರಿ ಹನ್ನೆರಡು ಗಂಟೆ! ಏಕಾಂತವಾದ ಜಾಗದಲ್ಲಿ ಏಕಾಂಗಿಯಾಗಿ ಕುಳಿತಿರಬೇಕೆನ್ನುವ ಆಸೆ! ಮನೆಯಿಂದ ನಡೆದೇ ಹೊರಟೆ.

ಆಕಾಶದಲ್ಲೊಂದು ಬೆಂಕಿ ಸಿಡಿಯಿತು. ಉಲ್ಕೆ ಇರಬಹುದು! ಹಾಗೆಯೇ ನಡೆಯುತ್ತಿರುವಾಗ ನಕ್ಷತ್ರವೊಂದು ಚಲಿಸಿತು. ಓ…, ಉಪಗ್ರಹ! ಆ ಉಪಗ್ರಹ ನನ್ನ ಪಟವನ್ನು ಮುದ್ರಿಸಿಕೊಂಡಿರಬಹದೆ?

ಕತ್ತಲು! ಕಣ್ಣು ಕತ್ತಲಿಗೆ ಒಗ್ಗಿಕೊಂಡಿತು ಹೊರತು ಬೆಳಕಿಲ್ಲ! ನಿಧಾನಕ್ಕೆ ನಡೆದೆ.

*

ಮರ. ಆಲದ ಮರ. ಮುನ್ನೂರು ವರ್ಷವಾದರೂ ಆಗಿರಬೇಕು! ನೆಲಕ್ಕೆ ತಾಕುವಂತೆ ಜೋತುಬಿದ್ದಿರುವ ಬೇರುಗಳು. ಮೊದಲೇ ಕತ್ತಲು. ಗುಹೆಯಂತಿದೆ…, ಕಾಂಡಕ್ಕೆ ಒರಗಿ ಕುಳಿತೆ.

ಗೂಬೆಯೊಂದು ಕೂಗಿತು. ಬಾವಲಿಗಳ ಕಚಪಿಚ. ನನ್ನ ಆಗಮನ ಅವುಗಳಿಗೆ ಹಿಡಿಸಲಿಲ್ಲವೋ ಏನೋ!

ಬಾಕಿ ಹೇಳು!” ಎನ್ನುವ ಹೆಣ್ಣು ಶಬ್ದ ಕೇಳಿ ಚಕಿತಗೊಂಡೆ!

ಪಾಪ! ಏಕಾಂತ ಅರಸಿ ಬಂದಿದ್ದಾನೆ! ಅವನು ಹೋಗುವವರೆಗೆ ನಿಶ್ಶಬ್ದವಾಗಿರು!” ಎಂದಿತು ಗಂಡು ದನಿ.

ನಿಮ್ಮ ಮಾತುಗಳು ನನ್ನ ಏಕಾಂತಕ್ಕೆ ಧಕ್ಕೆಯಲ್ಲ!” ಎಂದೆ.

ಆಶ್ಚರ್ಯ ಅವರಿಗಾಯಿತೇನೋ- ಅನ್ನುವಂತೆ ಒಂದುಕ್ಷಣ ನಿಶ್ಶಬ್ದ!

ನಮ್ಮ ಮಾತು ನಿನಗೆ ಅರ್ಥವಾಗುತ್ತಿದೆಯೆಂದರೆ ನೀನು ಅಸಾಮಾನ್ಯನೇ ಇರಬೇಕು!” ಎಂದಿತು ಗಂಡು ದನಿ!

ಪ್ರಪಂಚದಲ್ಲಿರುವವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅಸಾಮಾನ್ಯರೇ!” ಎಂದೆ.

ಅಲ್ಲಿಂದ ಎದ್ದುಬರುವುದಿಲ್ಲ ಅನ್ನುವ ಮಾತು ಕೊಟ್ಟರೆ ನಮ್ಮ ಕಥೆ ಮುಂದುವರೆಸುತ್ತೇವೆ!” ಎಂದ ಗಂಡು!

ಹೇಳಲಾಗುವುದಿಲ್ಲ!” ಎಂದೆ.

ಮೌನ! ಕುತೂಹಲ ಕೆರಳಿಸುವ ಮೌನ! ಅಸಹನೀಯವೆನಿಸಿ…,

ಸರಿ! ಎದ್ದುಬರುವುದಿಲ್ಲ! ಕಥೆ ಮುಂದುವರೆಸಿ! ಮೊದಲಿಂದ ಹೇಳಿದರೆ ನನಗೂ ಕುತೂಹಲ ತಣಿಯುತ್ತಿತ್ತು!” ಎಂದೆ.

ಮುನ್ನೂರು ವರ್ಷದಿಂದ ಹೇಳುತ್ತಿರುವ ಕಥೆ! ಇನ್ನೊಂದು ಕ್ಷಣದಲ್ಲಿ ಮುಗಿಯುತ್ತದೆ! ಪುನಃ ಶರು ಮಾಡಲೇ?”

ಬೇಡ! ಮುಗಿಸಿಕೊಳ್ಳಿ!” ಎಂದೆ.

ಆದರೆ ಎದ್ದುಬಂದರೆ ಮಾತ್ರ…, ಪರಿಣಾಮಕ್ಕೆ ನಾವು ಹೊಣೆಯಲ್ಲ!” ಎಂದ ಗಂಡು.

ಸರಿ!” ಎಂದೆ.

ಇದೇ ಮರ ಅದು! ಅಂದು ಗಿಡವಾಗಿತ್ತು! ನೆಟ್ಟಿದ್ದು ನನ್ನ ತಾತ! ಅದೇ…, ಅವಳ ಎದೆಯ ಭಾಗದಲ್ಲಿ!”

ಪಾಪ! ಬದುಕಿದ್ದಾಗಲೇ ಹೂತು…, ಗಿಡ ನೆಡುವುದೆಂದರೆ…, ಮನುಷ್ಯ ಆಗಿನಿಂದಲೂ ಕ್ರೂರಿಯೇ ಅಲ್ಲವಾ?”

ಯಾವಾಗ ಅಲ್ಲ?”

ಸರಿ…, ಮುಂದೆ?”

ಅವಳೇ ಗೊಬ್ಬರವಾಗಿ ಬೆಳೆದ ಈ ಮರ- ಅವಳ ಸ್ವಭಾವವನ್ನೂ ಹೊಂದಿದೆ!”

ಅಸಂಭವ!”

ಈ ಬ್ರಹ್ಮಾಂಡದಲ್ಲಿ ಅಸಂಭವ ಅನ್ನವುದು ಯಾವುದೂ ಇಲ್ಲ! ನೋಡು…, ನಮ್ಮ ಮಾತನ್ನು ಆಚೆ ಇರವವ ಕೇಳಿಸಿಕೊಳ್ಳುತ್ತಾನೆ ಅಂದುಕೊಂಡಿದ್ದೆವೆ?”

ಅವನನ್ನು ಬಿಡು! ಪ್ರತಿಯೊಂದನ್ನೂ ಪರೀಕ್ಷಿಸಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುವವ! ಮುಂದಿನ ಪರಿಣಾಮದ ಅರಿವಿದ್ದಿದ್ದರೆ ಈಗ ಇಲ್ಲಿ ಬಂದು ಮತ್ತೊಬ್ಬರ ಮಾತಿಗೆ ಕಿವಿಯಾಗುತ್ತಿದ್ದನೆ?”

ಅವನೆಲ್ಲಿ ಕಿವಿಯಾದ? ಪಾಪ ಏಕಾಂತ ಅರಸಿ ಬಂದ! ಹಾಗೆಂದು ಮುಂದಿನ ಪರಿಣಾಮ ಕೆಟ್ಟದ್ದೇನೂ ಅಲ್ಲವಲ್ಲ!”

ಮೌನ! ಗಾಢ ಮೌನ!

ಮುಗಿಯಿತೇ ನಿಮ್ಮ ಕಥೆ?” ಎಂದೆ.

ಉತ್ತರವಿಲ್ಲ. ಗೊಂದಲವಾಯಿತು!

ಇನ್ನಾದರೂ ನಾನು ಎದ್ದು ಬರಬಹುದೇ?” ಎಂದೆ.

ಮೌನ.

ಅವರು ಕಥೆ ಹೇಳುವಾಗ ಎದ್ದುಬರಬಾರದು ಹೊರತು- ಈಗ ಹೋಗಬಹುದು ಅನ್ನುವ ತರ್ಕದೊಂದಿಗೆ ಎದ್ದು ಮರದ ಆಚೆಬದಿಗೆ ಹೋದೆ.

ಕತ್ತಲಿನೊಂದಿಗೆ ಕತ್ತಲಾಗಿ ಬೆರೆತುಕೊಂಡಿದ್ದ ಎರಡು ಕಲ್ಲುಗಳು ನನ್ನ ಕಣ್ಣ ಮುಂದೆಯೇ ಕತ್ತಲಿನಲ್ಲಿ ಲೀನವಾದವು!

ಒಂದುಕ್ಷಣದ ಗೊಂದಲ. ಮರಳಿ ಮೊದಲಿದ್ದ ಜಾಗಕ್ಕೆ ಹೋಗಲೋ ಇಲ್ಲೇ ಕುಳಿತುಕೊಳ್ಳಲೋ…!

ಯಾರೋ ಕೈ ಹಿಡಿದು ಎಳೆದಂತಾಯಿತು- ಜೋತು ಬಿದ್ದಿರುವ ಬೇರು!

ಅಲ್ಲೇ ಕುಳಿತುಕೊಂಡೆ.

ನಿದ್ದೆ ಮಾಡಿದೆನೆ?

ಸಮಯವೆಷ್ಟಾಗಿರಬಹದು? ಬೆಳಕು ಹರಿಯುವ ಸಮಯವಾಯಿತೇ?

ಅಲ್ಲಿಂದ ಚಲಿಸಬೇಕು ಅನ್ನಿಸಲಿಲ್ಲ! ಬದಲಿಗೆ ಈ ರಾತ್ರಿ ಶಾಶ್ವತವಾಗಬಾರದೆ ಅನ್ನಿಸಿತು!

ಕೇಳು!” ಅನ್ನುವ ಹೆಣ್ಣು ಧ್ವನಿ!

ಭೂಮಿ ತಿರುಗುತ್ತಿದೆ- ತನ್ನಸುತ್ತ, ಸೂರ್ಯನ ಸುತ್ತು! ಭೂಮಿ ಚಲಿಸುತ್ತಿದೆ- ಸೂರ್ಯನೊಂದಿಗೆ!” ಎಂದಳು.

ಎಂದಳು! ಯಾರು? ತಿಳಿಯದು! ಹೆಣ್ಣು ಶಬ್ದವಾದ್ದರಿಂದ- ಎಂದಳು.

ಅದಕ್ಕೀಗ ನಾನೇನು ಮಾಡಲಿ?” ಎಂದೆ.

ಮಾಡಬೇಡ ಅಂದಿದ್ದು ಮಾಡಿದವ ನೀನು!”

ನೀನೇನು ಮಾಡಬೇಡವೆಂದೆ? ನಾನೇನು ಮಾಡಿದೆ?”

ನಾ ಹೇಳಲಿಲ್ಲ! ಅವರು ಹೇಳಿದ್ದರಲ್ಲ- ಎದ್ದು ಬಂದರೆ ಪರಿಣಾಮಕ್ಕೆ ಹೊಣೆ ಅಲ್ಲವೆಂದು!”

ಪರಿಣಾಮ ಕೆಟ್ಟದ್ದೇನೂ ಅಲ್ಲವೆಂದಿದ್ದರು! ಆದರೂ ನನ್ನ ಸೌಜನ್ಯಕ್ಕೆ- ಕೇಳಿಯೇ ತಾನೆ ಎದ್ದು ಬಂದದ್ದು?”

ಹೋಗಲಿ ಬಿಡು! ಪರಿಣಾಮಕ್ಕೆ ನೀನು ಹೆದರುವವನಲ್ಲ! ಅವರೂ ಹೊಣೆಯಲ್ಲ- ನಾನು!” ಎಂದಳು.

ಹೇಗೆ?”

ಬೇರೆ ಯಾರೂ ಇಷ್ಟು ಮಟ್ಟಿನ ಧೈರ್ಯದಿಂದ…, ಇಷ್ಟು ಹೊತ್ತಿನಲ್ಲಿ ಇಲ್ಲಿ ಕುಳಿತಿಲ್ಲ! ನೀನು ಕುಳಿತಿರುವುದೇ ಅಲ್ಲದೆ…, ಈ ದಿನ ಶಾಶ್ವತವಾಗಲಿ ಎಂದುಬೇರೆ ಬೇಡಿಕೊಳ್ಳುತ್ತಿದ್ದೀಯ…, ಅಂದರೆ ನೀನು ಅವನೇ ಇರಬೇಕು!” ಎಂದಳು.

ಯಾರು?”

ಮುನ್ನೂರು ವರ್ಷಗಳಿಗು ಮುಂಚೆ ಈ ಜಾಗ ಹೇಗಿತ್ತು ಅನ್ನುವ ಕಲ್ಪನೆಯಾದರೂ ನಿನಗಿದೆಯಾ?”

ಕಲ್ಪಿಸಲು ಹೋಗಿಲ್ಲ! ಹೇಗಿತ್ತು?”

ಈಗ ಫಾರೆಸ್ಟ್ ರೇಂಜ್‌ಗೆ ಬರುವ ಈ ಜಾಗ…, ಒಂದು ಪಟ್ಟಣವಾಗಿತ್ತು!”

ಅದಕ್ಕೆ?”

ಸರಿ…, ಹೊರಡು ನೀನು! ಆಸಕ್ತಿ ಅನ್ನುವುದೇ ಇಲ್ಲದಿದ್ದಮೇಲೆ ಏನು ಹೇಳಿ ಏನು ಪ್ರಯೋಜನ?”

ಮೊದಲಿದ್ದ ಜಾಗಕ್ಕೇ ಬಂದು ಕುಳಿತುಕೊಂಡೆ! ಮನದಲ್ಲಿ ಭೂಮಿಯೇ ಬುಗುರಿಯಾಗಿ ತಿರುಗುತ್ತಿತ್ತು! ನನ್ನರಿವಿಲ್ಲದೆ ನಿದ್ದೆಗೆ ಜಾರಿದೆ!

*

ಮುಖದಮೇಲೆ ಯಾರೋ ನೀರೆರಚಿದರು. ಮತ್ತೆಯಾರೋ ಕುಲುಕಿದರು. ಯಾರೋ ಕೆನ್ನೆಯನ್ನು ತಟ್ಟುತ್ತಿದ್ದರು.

ಯಾರ್‌ರ್ರಿ ಇವನು…, ಈಪಾಟಿ ನಿದ್ದೆ! ಮುಂಚೆಯೆಲ್ಲೂ ನೋಡಿಲ್ಲ! ಮೊದಲು ಹೆಣ ಅನ್ಕೊಂಡೆ! ಆಮೇಲೆ ನೋಡಿದ್ರೆ ಉಸಿರಾಡ್ತಿದ್ದ!” ಎನ್ನುವ ಮಾತುಗಳು.

ಕಣ್ಣುಬಿಟ್ಟೆ. ನನಗೇನೂ ಅರ್ಥವಾಗಲಿಲ್ಲ! ಯಾರೋ ಇಬ್ಬರು ಎರಡೂ ತೋಳಿಗೆ ಕೈಹಾಕಿ ಎಬ್ಬಿಸಲು ಶ್ರಮಿಸಿದರು! ಸಾಧ್ಯವಾಗದೆ ಕಾಂಡಕ್ಕೆ ಒರಗಿಸಿ ಕೂರಿಸಿದರು.

ನಿನ್ನೆಯೇ ನೋಡಿದ್ದೆ! ಯಾರೋ ನಿದ್ರೆ ಮಾಡ್ತಿದಾರೆ ಅನ್ಕೊಂಡೆ! ಇವತ್ತೂ ನೋಡಿದ್ನಾ ಡೌಟಾಯ್ತು!” ಎಂದ ಯಾರೋ!

ನಾನು ಮೊನ್ನೆ ನೋಡಿದ್ದೆ. ನಿನ್ನೆ ಈಕಡೆ ಬರಲಿಲ್ಲ!” ಎಂದ ಮತ್ತೊಬ್ಬ.

*

ಸುತ್ತಲೂ ನೋಡಿದೆ. ಅಪರಿಚಿತ ಜಾಗವಾದರೂ…, ಈ ಜಾಗ ನನಗೆ ಗೊತ್ತು! ಏಳಲು ಶ್ರಮಿಸಿದವನಿಗೆ ನೆರೆದಿದ್ದ ಜನ ಸಹಕರಿಸಿದರು. ಮೊದಲು ತೂರಾಡುವಂತಾದರೂ ಸಂಬಾಳಿಸಿಕೊಂಡೆ. ಎಲ್ಲರ ಕಡೆಗೆ ಕೈಮುಗಿದು…,

ಥ್ಯಾಂಕ್ಯು…, ಥ್ಯಾಂಕ್ಯು!” ಎಂದೆ.

ಹೋಗುವ ಮನಸ್ಸಿಲ್ಲದಿದ್ದರೂ ಕುತೂಹಲದಿಂದ ನೋಡುತ್ತಾ ಹೊರಟು ಹೋದರು ಜನ.

ಒಂದು ದೊಡ್ಡ ಮೈದಾನ. ಮೈದಾನದ ಮಧ್ಯೆ ಆಲದ ಮರ. ಸೂರ್ಯನಿರುವ ದಿಕ್ಕು ಪೂರ್ವವೋ ಪಶ್ಚಿಮವೋ ತಿಳಿಯಲಿಲ್ಲ.

ಎಷ್ಟು ದಿನವಾಯಿತು ನಾನಿಲ್ಲಿಗೆ ಬಂದು?

ಜನರ ಮಾತಿನ ಪ್ರಕಾರ ಕಡಿಮೆಯೆಂದರೂ ಮೂರು ದಿನವಾಗಿದೆ!

ಯಾವ ಅವಸ್ತೆಯಲ್ಲಿದ್ದೆ?

ಯಾಕೆ?

ಸೂರ್ಯ ಮೇಲಕ್ಕೆ ಏರದೆ ಕೆಳಕ್ಕೆ ಇಳಿಯುತ್ತಿದ್ದ! ಅಂದರೆ ಸೂರ್ಯನಿರುವ ದಿಕ್ಕು ಪಶ್ಚಿಮ! ಮೈದಾನದ ಪಶ್ಚಿಮ ದಿಕ್ಕಿಗೆ ನಡೆದೆ. ಜಾಗವೊಂದು ತಲುಪಿದಾಗ ಗಿಡುಗನ ಶಬ್ದ ಕೇಳಿಸಿತು. ನಿಂತೆ. ಮಂಡಿಯೂರಿ ಕುಳಿತೆ. ನೆಲವನ್ನು ಮುಟ್ಟಿ ಕಣ್ಣು ಮುಚ್ಚಿದೆ. ಕನಸಿನಲ್ಲಿ- ಇಲ್ಲಿ ಮಲಗಿದ್ದಾಗಲೇ ಗಿಡುಗ ಕಣ್ಣು ಕಿತ್ತದ್ದು! ಈ ಜಾಗವನ್ನು ಅಗೆಯಬೇಕು ಅನ್ನಿಸಿತು. ಆಲದ ಮರದ ಕಡೆಯಿಂದ ತಣ್ಣನೆಯ ಗಾಳಿ ಬೀಸಿತು. ಸುತ್ತಲೂ ನೋಡಿದೆ. ಕಣ್ಣಳತೆಯಲ್ಲಿ ಮನೆಗಳಿಲ್ಲ. ಜನಸಂಚಾರವೂ ಇಲ್ಲ. ಅಪರೂಪಕ್ಕಲ್ಲದೆ ಜನ ಈಕಡೆ ಬರುವುದಿಲ್ಲ ಅನ್ನಿಸಿತು. ಹೆಚ್ಚು ಹೊತ್ತು ಇರಬಾರದೆಂಬ ಉದ್ದೇಶದಿಂದಲೇ ನಾನು ಥ್ಯಾಂಕ್ಯು ಹೇಳಿದ ಕೂಡಲೆ ಹೊರಟು ಹೋದರು.

ದೂರದಿಂದ ಯಾರೋ ನಡೆದುಬರುತ್ತಿರುವುದು ಕಾಣಿಸಿತು. ಬಿಸಿಲಿನ ಜಳಕ್ಕೆ ನೆಲದಿಂದ ಆವಿ ಎದ್ದು…, ಜೊತೆಗೆ ಗಾಳಿ! ಬರುತ್ತಿರುವುದು ಹೆಣ್ಣು! ಸೀರೆಯುಟ್ಟಿದ್ದಾಳೆ. ನಡುವಿನಲ್ಲೊಂದು ಕೊಡವಿದೆ. ಕೈಯ್ಯಲ್ಲಿ ಗುದ್ದಲಿ!

ಅವಳಕಡೆಗೆ ನಡೆದೆ. ಅಲ್ಲೇ ಇರು ಅನ್ನುವಂತೆ ಸಂಜ್ಞೆ ಮಾಡಿದಳು.

ಅವಳು ಸುರಿದ ನೀರನ್ನು ಕುಡಿದು- ಗುದ್ದಲಿಗಾಗಿ ಕೈ ನೀಡಿದೆ.

ನಿಮಗಾಗಿ ತಂದೆನೆಂದು ಹೇಗೆ ತಿಳಿಯಿತು?” ಎಂದಳು.

ನನಗಾಗಿ ತರಲಿಲ್ಲವೇ?” ಎಂದೆ.

ಅದೇ…, ಹೇಗೆ ತಿಳಿಯಿತು?”

ನಿಮಗೆ ತರಬೇಕು- ಅನ್ನಿಸಿದಂತೆ!” ಎಂದೆ.

ಮುಗುಳು ನಕ್ಕಳು. ಅವಳ ಮುಖದಲ್ಲಿ ಏನೋ ಹೇಳಬೇಕೆಂಬ ಭಾವ. ಏನು ಅನ್ನುವಂತೆ ಹುಬ್ಬು ಕುಣಿಸಿದೆ.

ಈ ಮೈದಾನಕ್ಕೊಂದು ವಿಶೇಷತೆಯಿದೆ. ಹೆಣ್ಣುಮಕ್ಕಳು ಈ ಮೈದಾನದಲ್ಲಿ ಓಡಾಡಿದರೆ ಸಮಸ್ಯೆಯೇನೂ ಇರುವುದಿಲ್ಲ! ಗಂಡಸರು ಕಾರಣವಿಲ್ಲದೆ ಓಡಾಡಿದರೆ ಏನಾದರೂ ಕೆಟ್ಟದ್ದಾಗುತ್ತದೆ. ಅದಕ್ಕೇ ನೀರು ಕೊಟ್ಟು ಕಳಿಸಿದರು. ನೀವೂ ಜಾಸ್ತಿ ಹೊತ್ತು ಇಲ್ಲಿರಬಾರದಂತೆ!” ಎಂದಳು.

ನಿಮಗೇನನ್ನಿಸುತ್ತದೆ?” ಎಂದೆ.

ಈ ಜಾಗದ ರಹಸ್ಯ ನನಗೆ ಗೊತ್ತು! ಆ ವ್ಯಕ್ತಿ ನೀವೇ ಆದರೆ ಕಂಡುಕೊಳ್ಳುತ್ತೀರಿ!” ಎಂದಳು.

*

ಅಷ್ಟೇನೂ ಕಷ್ಟವಾಗಲಿಲ್ಲ. ಹೆಚ್ಚು ಅಗೆದಂತೆಯೂ ಅನ್ನಿಸಲಿಲ್ಲ. ಆದರೂ ಸುಮಾರು ಹನ್ನೆರಡು ಅಡಿ ಆಳಕ್ಕೆ ಅಗೆದಿರಬೇಕು! ಒಂದು ಅಸ್ಥಿಪಂಜರ ಸಿಕ್ಕಿತು. ಅದಕ್ಕೆ ಏಟಾಗದಂತೆ ಪೂರ್ತಿಯಾಗಿ ಮಣ್ಣು ಸರಿಸಿದೆ. ಹೆಣೆಯಮೇಲೆ ಡ್ರಿಲ್ಲಿಂಗ್ ಮಿಷಿನ್ ತಿರುಗಿಸಿದಂತೆ ಗುರುತು!

ಈ ಮೈದಾನಕ್ಕೆ ಸಂಬಂಧಪಟ್ಟಂತೆ ಏನಾದರೂ ಕಥೆಯಿದೆಯಾ?” ಎಂದೆ.

ಅವಳೇನೂ ಮಾತನಾಡಲಿಲ್ಲ. ಹಿಪ್ನಾಟಿಸಂಗೆ ಒಳಗಾದವಳಂತೆ- ಪ್ರಜ್ಞೆ ಇಲ್ಲದವಳಂತೆ ನಿಂತಿದ್ದಳು. ಕೊಡದಿಂದ ನೀರು ಬಗ್ಗಿಸಿಕೊಂಡು ಅವಳ ಮುಖಕ್ಕೆ ಎರಚಿದೆ.

ಬೆಚ್ಚಿದವಳಂತೆ ವಾಸ್ತವಕ್ಕೆ ಬಂದಳು.

ಈ ಮೈದಾನಕ್ಕೆ ಸಂಬಂಧಪಟ್ಟಂತೆ ಏನಾದರೂ ಕಥೆಯಿದೆಯಾ?” ಎಂದೆ ಮತ್ತೊಮ್ಮೆ.

ಈಗ ಫಾರೆಸ್ಟ್ ರೇಂಜ್‌ಗೆ ಬರುವ ಈ ಜಾಗ…, ಒಂದು ಪಟ್ಟಣವಾಗಿತ್ತು!” ಎಂದಳು.

ಆಶ್ಚರ್ಯದಿಂದ ಅವಳ ಮುಖವನ್ನು ನೋಡಿದೆ. ಅವಳೂ ನನ್ನ ಮುಖವನ್ನೇ ಸೂಕ್ಷ್ಮವಾಗಿ ನೋಡುತ್ತಿದ್ದಳು.

ನಿಮ್ಮನ್ನು ನನಗೆ ಗೊತ್ತು!” ಎಂದಳು.

ಹೇಗೆ?” ಎಂದೆ ಆಶ್ಚರ್ಯದಿಂದ!

ಅದು ಗೊತ್ತಿಲ್ಲ!” ಎಂದಳು.

ಬನ್ನಿ!” ಎಂದು ಅವಳ ಕೈ ಹಿಡಿದು ಮರದ ಕಡೆಗೆ ನಡೆದೆ.

ನಾನು ಮೊದಲು ಕುಳಿತಿದ್ದಲ್ಲಿಯೂ ಅವಳು ಕಾಂಡದ ಮತ್ತೊಂದು ಭಾಗದಲ್ಲಿಯೂ ಕುಳಿತಳು.

ನನ್ನ ಸ್ವಭಾವವನ್ನು ಹೊಂದಿರುವ ಮರ!” ಎಂದು ನಿಲ್ಲಿಸಿ…,

ಇದರ ಬುಡದಲ್ಲಿ ನನ್ನ ಅಸ್ಥಿಪಂಜರ ಇರಬಹುದೇನೋ?” ಎಂದಳು.

*

ಕೆಲವೊಂದು ಇತಿಹಾಸಗಳು ನಮಗೆ ತಿಳಿಯದೇ ಇರುವುದೇ ಒಳ್ಳೆಯದು!

ನಮ್ಮ ಪ್ರಜ್ಞೆ ಮತ್ತು ಸುಪ್ತಪ್ರಜ್ಞೆಗಳನ್ನು ವಾಸ್ತವ ಮತ್ತು ಕನಸು ಎಂದು ಪರಿಗಣಿಸಿದರೆ…, ವಾಸ್ತವದಲ್ಲಿದ್ದಾಗ ಒಂದು ಬದುಕು, ಕನಸಿನಲ್ಲಿ ಒಂದು ಬದುಕು! ವಾಸ್ತವ ವಾಸ್ತವವೇ ಆದರೂ ನಾವು ಕನಸಿನಲ್ಲಿರುವಾಗ ಆ ಪ್ರಪಂಚವೂ ನಿಜವೇ! ಕೆಲವೊಮ್ಮೆ ನಿಜವಾವುದು ಕನಸಾವುದು ಗೊಂದಲವಾಗುತ್ತದೆ!

ಆ ಗೊಂದಲಕ್ಕೆ ಉತ್ತರ ಹುಡುಕುವ ಬದಲು- ಬಿಟ್ಟುಬಿಡುವುದು ಒಳ್ಳೆಯದು!

ನಾನು ಪುರಾತತ್ತ್ವಶಾಸ್ತ್ರದಲ್ಲಿ ಮಾಸ್ಟರ್ ಆದರೆ ಅವಳು ಮಾನವಶಾಸ್ತ್ರದಲ್ಲಿ ಮಾಸ್ಟರ್!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!