ದೊಡ್ಡ ಕಥೆ!

ದೊಡ್ಡ ಕಥೆ!

*

ಅಂಗಾತನೆ ಮಲಗಿದ್ದೇನೆ- ಮುಳುಗುವುದಿಲ್ಲವಾಗಲಿ ಪೂರ್ತಿಯಾಗಿ ಒದ್ದೆಯಾಗುವಂತೆ! ಉರುಳುರುಳಿ ಬರುವ ಅಲೆಗಳು ತೋಯಿಸಿ ಮರಳುತ್ತಿದೆ. ನಾಲಕ್ಕು ಗಂಟೆಯ ಬಿಸಿಲು! ತೀರದ ಮರಳೆಲ್ಲಾ ಹಾರಾಡುವಂತೆ- ಬಿಸಿಗಾಳಿ. ಯಾರೆಂದರೆ ಯಾರೂ ಇಲ್ಲದ ಸಮಯ!

ಒಬ್ಬನೇ…!

ಮಲಗಿದ್ದೇನೆ- ಅಂದೆ. ಮಲಗುವಾಗ ನಾರ್ಮಲ್ ಆಗಿದ್ದೆ. ಮಲಗಿ ಸ್ವಲ್ಪ ಹೊತ್ತಿಗೆ ದೇಹದ ಸತ್ವವೆಲ್ಲಾ ಇಳಿದು ಹೋದಂತೆ- ಹಗುರ! ದೇಹ ಚಲಿಸದಿದ್ದರೂ ಮನಸ್ಸಿಗೇನು? ಸಮುದ್ರಕ್ಕಿಂತಲೂ ವಿಶಾಲ!

ಬಿಸಿಲಿನ ಝಳವಾಗಲಿ, ಗಾಳಿಯ ಗಾಢತೆಯಾಗಲಿ, ಅಲೆಗಳ ತೋಯುವಿಕೆಯಾಗಲಿ ಅನುಭವಕ್ಕೆ ಬರುತ್ತಿಲ್ಲ. ಸೂರ್ಯಕಿರಣ ಚುಚ್ಚದಂತೆ ಕಣ್ಣು ಮುಚ್ಚಿದ್ದೇನೆ.

ಈ ಅನುಭವವನ್ನು ಹೇಗೆ ವಿವರಿಸುವುದು?

ಅನುಭವಿಸಿಯೇ ಅರಿಯಬೇಕು ಅನ್ನಲೇ- ಅನುಭವಿಸಬಾರದು ಅನ್ನಲೆ?

ಆ ಅವಸ್ತೆಯಲ್ಲಿ ಎಷ್ಟು ಹೊತ್ತಿದ್ದೆನೋ…,

ಯಾರದು? ಇಷ್ಟು ಹೊತ್ತಿನಲ್ಲಿ?” ಎಂದು ಯಾರೋ ಕೇಳಿದರು.

ಕಣ್ಣು ತೆರೆದೆ. ಕತ್ತಲು. ಆಕಾಶದ ತುಂಬಾ ನಕ್ಷತ್ರಗಳು. ಸಮುದ್ರದ ಮೊರೆತ. ಕಣ್ಣ ರೆಪ್ಪೆ ಚಲಿಸುತ್ತಿದೆ- ಶಬ್ದ ಬಂದ ದಿಕ್ಕಿಗೆ ತಿರುಗಿದೆ! ಪರವಾಗಿಲ್ಲ- ಮುಖ ತಿರಗಿಸಬಹುದು! ಕೈ ಅಲ್ಲಾಡಿಸಲು ಶ್ರಮಿಸಿದೆ- ಕೈಯ್ಯ ಇರವೇ ಇಲ್ಲ! ಅಂದರೆ ಕುತ್ತಿಗೆಯ ಕೆಳಗೆ- ದೇಹ ಸ್ಪಂದಿಸುತ್ತಿಲ್ಲ.

ಹತ್ತಿರ ತಲುಪಿದ್ದ ವ್ಯಕ್ತಿ ಕೈಯ್ಯಲ್ಲಿದ್ದ ದೊಣ್ಣೆಯಿಂದ ನನ್ನ ಎದೆಯನ್ನು ತಿವಿಯುತ್ತಾ,

ಇಷ್ಟು ಹೊತ್ತಿಗೆ ಇಲ್ಲಿ ಯಾರೂ ಇರಬಾರದು ಅಂತ ಗೊತ್ತಿಲ್ವ? ಹೊರಡಿ!” ಎಂದ.

ಸ್ವಲ್ಪ ಸಮಯ ಕೊಡಿ! ದೇಹವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳತ್ತೇನೆ!” ಎಂದೆ. ಸದ್ಯ ನಾಲಿಗೆಯೂ ಚಲಿಸುತ್ತಿದೆ!

ಆತ ಗೊಂದಲದಿಂದ ನೋಡಿದ.

ದೇಹ ಮರಗಟ್ಟಿ ಹೋಗಿದೆ…, ಸ್ವಲ್ಪ ಸಮಯದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಎದ್ದು ಹೋಗುತ್ತೇನೆ!” ಎಂದೆ.

ಆತ ನನ್ನ ಮುಖದ ಬಳಿಗೆ ಬಗ್ಗಿ ನೋಡಿದ. ಕುಡಿದು ಬಿದ್ದಿದ್ದೇನೆಯೇ ಅನ್ನುವ ಸಂಶಯವಿರಬೇಕು.

ನಿಮಗೆ ಅರ್ಥವಾಗುವುದಿಲ್ಲ! ಅದೊಂದು ಅವಸ್ತೆ! ಬ್ರಹ್ಮಾಂಡಕ್ಕೂ ನಮಗೂ ಇರುವ ನಂಟನ್ನು ಸೂಚಿಸುವುದು!” ಎಂದೆ.

ಪಕ್ಕದಲ್ಲಿ ಕುಳಿತ. ಆತ ಮಾತನಾಡುವ ಮೊದಲೇ…,

ಜನಸಂಚಾರವೇ ಇಲ್ಲದ ಈ ಸ್ಥಳದಲ್ಲಿ- ಇಷ್ಟು ಹೊತ್ತಿಗೆ ಇಲ್ಲಿ ಯಾರೂ ಇರಬಾರದು ಅನ್ನುವ ಮಾತಿನ ಅರ್ಥವೇನು?” ಎಂದೆ.

ನಿಜಕ್ಕೂ ನಿಮಗೆ ಚಲಿಸಲಾಗುತ್ತಿಲ್ಲವೇ?” ಎಂದ.

ನಾನೇನೂ ಮಾತನಾಡಲಿಲ್ಲ. ಅವನೇ ನನ್ನ ಕೈಯ್ಯನ್ನು ಎತ್ತಲು ನೋಡಿದ! ಭಾರವಾಯಿತೇನೋ…, ಆಶ್ಚರ್ಯದಿಂದ ನೋಡಿದ. ಎರಡೂ ಕೈಯಿಂದ ಶ್ರಮಿಸಿದ.

ನನಗೇಕೋ ಹನುಮಂತನ ಬಾಲ ಸರಿಸಲು ಪ್ರಯತ್ನಿಸಿದ ಭೀಮನ ನೆನಪಾಯಿತು!

ಕೈ ಎತ್ತಲು ಸಾಧ್ಯವಾಗುತ್ತಿಲ್ಲವೇ?” ಎಂದೆ.

ಇಲ್ಲ! ನಿಮ್ಮ ದೇಹ ಕಬ್ಬಿಣದಂತಿದೆ!” ಎಂದ.

ಹೆಣದಂತೆ!” ಎಂದು ನಕ್ಕು…,

ಸ್ವಲ್ಪ ಸಮಯದ ನಂತರ ಸರಿಹೋಗಬಹುದು!” ಎಂದೆ.

ಏನು ಗ್ಯಾರಂಟಿ?” ಎಂದ.

ಸ್ವಲ್ಪ ಹೊತ್ತಿನ ಮುಂಚೆ ಮುಚ್ಚಿದ ಕಣ್ಣು ತೆರೆಯಲಾಗುತ್ತಿರಲಿಲ್ಲ. ತಲೆಯನ್ನೂ ಅಲ್ಲಾಡಿಸಲಾಗುತ್ತಿರಲಿಲ್ಲ!” ಎಂದೆ.

ಅವನಿಗೆ ಕುತೂಹಲವಾಯಿತು. ವಿರಾಮವಾಗಿ ಕುಳಿತು…,

ಜನಸಂಚಾರವಿಲ್ಲದ ಈ ಸ್ಥಳಕ್ಕೆ ಯಾವಾಗ ಬಂದಿರಿ? ಯಾಕೆ ಬಂದಿರಿ? ಎಷ್ಟೋ ದಿನಗಳ ನಂತರ- ಮನುಷ್ಯ ಸಂಚಾರವಾಗಿದೆ ಇಲ್ಲಿ!” ಎಂದ.

ಯಾಕೆ? ಜನ ಯಾಕೆ ಬರುವುದಿಲ್ಲ?” ಎಂದೆ.

ಅದು ಗೊತ್ತಿಲ್ಲ. ಜನರೇ ಇಲ್ಲದ ಎಷ್ಟೋ ತೀರವಿದೆ!” ಎಂದ.

ಸಮುದ್ರಕ್ಕಿರುವುದೊಂದೇ ತೀರ!” ಎಂದೆ. ನಕ್ಕ.

ಇರಬಹುದು! ಆದರೆ ನಮಗೆ ನಾವು ಯಾವ ಜಾಗದಲ್ಲಿ ಇರುತ್ತೇವೋ ಅದೊಂದು ತೀರ! ನಿರ್ದಿಷ್ಟ ದೂರಕ್ಕೆ ಒಂದೊಂದು ತೀರ!” ಎಂದ.

ಯಾಕೋ ನೀವು ಅಸಾಮಾನ್ಯರು ಅನ್ನಿಸುತ್ತಿದೆ! ನೀವೇಕೆ ಇಲ್ಲಿಗೆ ಬಂದಿರಿ?” ಎಂದೆ.

ಅದೊಂದು ದೊಡ್ಡ ಕಥೆ!” ಎಂದ.

ದೇಹದ ಚಲನೆ ಮರಳಿ ಸಿಕ್ಕುವವರೆಗೆ ಸಮಯವಿದೆ! ಹೇಳಿ!” ಎಂದೆ.

*

ನನ್ನ ಹೆಸರು ವಿಧಿ! ನನ್ನದೊಂದು ಕನಸು! ಆ ಕನಸಿನಬಗ್ಗೆ ಆಮೇಲೆ ಹೇಳುತ್ತೇನೆ. ನನ್ನ ಮನೆಯಲ್ಲಿ ನಾನು ಅಮ್ಮ ಅಕ್ಕ- ಮೂರೇ ಜನ! ಅಕ್ಕನಿಗೆ ಮದುವೆಯಾಗಿ ಹೋದಮೇಲೆ- ನಾನೂ ಅಮ್ಮ ಅನ್ನುವ ನಮ್ಮ ಪ್ರಪಂಚ! ಒಂದುದಿನ ಅಕ್ಕ ಕಣ್ಮರೆಯಾದ ಸುದ್ದಿ!” ಎಂದು ನಿಲ್ಲಿಸಿದ.

ನನ್ನೊಳಗೊಂದು ಸಣ್ಣ ತುಮುಲ ಪ್ರಾರಂಭವಾಯಿತು.

ಏನಾದರು?- ಎಂದು ಹುಡುಕಿದೆ. ಭಾವನನ್ನು ಕೇಳಿದಾಗ…, ಯಾರೊಂದಿಗೋ ಓಡಿ ಹೋದಳು- ಎಂದರು. ಯಾರೆಂದು ಅವರಿಗೂ ಗೊತ್ತಿಲ್ಲವಂತೆ!” ಎಂದು ಪುನಃ ನಿಲ್ಲಿಸಿದ.

ನನ್ನ ಮುಖವನ್ನು ನೋಡಿದ. ಬಾಕಿ ಹೇಳಿ ಅನ್ನುವಂತೆ ನೋಡಿದೆ.

ಹುಡುಕಾಟವನ್ನು ನಿಲ್ಲಿಸಲಿಲ್ಲ! ನಂತರ ಅರಿವಾಯಿತು…, ಭಾವನನ್ನೊಳಗೊಂಡ ಒಂದು ದೊಡ್ಡ ಮಾಫಿಯಾ ಇದರ ಹಿಂದೆ ಇದೆ! ಹೆಣ್ಣುಮಕ್ಕಳನ್ನು ಮಾರಾಟ ಮಾಡುವ ಮಾಫಿಯಾ!” ಎಂದು ನಿಲ್ಲಿಸಿದ.

ಅವನೇಕೆ ಪದೇ ಪದೇ ನಿಲ್ಲಿಸುತ್ತಿದ್ದಾನೆಂದು ತಿಳಿಯಲಿಲ್ಲ.

ಹೆಣ್ಣುಮಕ್ಕಳನ್ನು ತಲುಪಿಸಿಕೊಡುವುದಷ್ಟೆ ಭಾವನ ಕೆಲಸ. ಭಾವನನ್ನು ನಿಯಂತ್ರಿಸುತ್ತಿದ್ದ ಒಬ್ಬನನ್ನು ಕಂಡು ಹಿಡಿದೆ. ಆತ ನನ್ನ ಕನಸಿಗೆ ಸಂಬಂಧಪಟ್ಟಾತ! ಕನಸೆಂದರೆ ನಾವು ನಿದ್ರೆಮಾಡುವಾಗ ಕಾಣುವ ಕನಸೋ…, ಹಗಲುಗನಸೋ ಅಲ್ಲ! ನನ್ನ ಗುರಿ! ಒಬ್ಬ ಹಿಪ್ನಾಟಿಸ್ಟ್ ಆಗಬೇಕೆನ್ನುವುದು ನನ್ನ ಕನಸು!” ಎಂದ.

ನನ್ನ ಬಲಗೈಯ ಕಿರುಬೆರಳು ಚಲಿಸಿತು. ಮುಂದಕ್ಕೆ ಹೇಳು ಅನ್ನುವಂತೆ ಕಾದೆ.

ಹಿಪ್ನಾಟಿಸಂ ಮೂಲಕ ನಾವು ಒಬ್ಬ ವ್ಯಕ್ತಿಯನ್ನು ನಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳಬಹುದು!” ಎಂದ.

ಅದಕ್ಕೆ ಆ ವ್ಯಕ್ತಿಯ ಅನುಮತಿ ಬೇಕು!” ಎಂದೆ.

ಅನುಮತಿ ಅನ್ನುವುದಕ್ಕಿಂತ…, ಆತನ ಮನಸ್ಸು ಏನೆಂದು ಅರ್ಥವಾದರೆ ಸಾಕು!” ಎಂದ.

ಹಾ…, ಅವರಿಗನುಗುಣವಾಗಿ ಅವರೊಳಗೆ ಪ್ರವೇಶ! ಬಾಕಿ ಹೇಳಿ!” ಎಂದೆ.

ನಾನೊಬ್ಬ ಹಿಪ್ನಾಟಿಸ್ಟ್ ಎಂದು ಹೇಳಿಕೊಳ್ಳುತ್ತಿದ್ದ ಆ ವ್ಯಕ್ತಿ…, ಎಷ್ಟು ದುರ್ಬಲ ಮನಸ್ಸಿನವನೆಂದರೆ…, ಆತ ಹೆಣ್ಣುಮಕ್ಕಳನ್ನು ಸ್ಮಗ್ಲಿಂಗ್ ಮಾಡುವ ಮಾಫಿಯಾಗೆ ಸಂಬಂಧಪಟ್ಟವನು ಎಂದು ಅನ್ನಿಸುವುದೇ ಇಲ್ಲ! ಆತನಿಗೆ ನಾನು ಶಿಷ್ಯನಾದೆ!” ಎಂದ.

ನನ್ನ ಮನದೊಳಗಿನ ತುಮುಲ ದುಗುಡವಾಗಿ ಮಾರ್ಪಡತೊಡಗಿತು!

ಇತರರನ್ನು ಹಿಪ್ನಾಟಿಸ್ ಮಾಡುವುದರೊಂದಿಗೆ ಸೆಲ್ಫ್‌ಹಿಪ್ನಾಟಿಸಂ ಬಗ್ಗೆಯೂ ಕಲಿಸಿದ!” ಎಂದ.

ನನ್ನ ಬಲಗೈಯ ಹಸ್ತವನ್ನು ಆಚೆ ಈಚೆ ಚಲಿಸುವ ಹಂತಕ್ಕೆ ಬಂದೆ.

ಈ ತೀರಕ್ಕೆ ಬಂದು ಆ ಸೆಲ್ಫ್ ಹಿಪ್ನಾಟಿಸಂ ಅನ್ನು ಪರೀಕ್ಷಿಸುತ್ತಿದ್ದೇನೆ!” ಎಂದು ನನ್ನ ಮುಖವನ್ನು ನೋಡಿ…,

ಕಥೆ ಮುಗೀತು!” ಎಂದ.

*

ಕಥೆ ಮುಗೀತು! ನನ್ನ ಕಥೆ!

ಹಸ್ತದಿಂದ ಮೇಲಕ್ಕೆ ಚಲನೆ ಶುರುವಾಗುವ ಸಮಯಕ್ಕೆ ಸರಿಯಾಗಿ ಹಸ್ತದಿಂದ ಸ್ವಲ್ಪ ಮೇಲೆ- ನರವನ್ನು ಕತ್ತರಿಸಿ ಹೋಗಿದ್ದಾನೆ ದ್ರೋಹಿ!

ಅವನು ಹೇಳಿದ ಕಥೆ- ಸತ್ಯವೇ! ಆದರೆ ಕಥಾನಾಯಕ ಅವನಲ್ಲ- ನಾನು! ಅವನು ಆ ಹಿಪ್ನಾಟಿಸ್ಟ್‌ ಅನ್ನೂ ಕಂಟ್ರೋಲ್ ಮಾಡುವ ಮಾಫಿಯಾದ ಲೀಡರ್! ಅವನು ಹೇಳಿದ ಕಥೆ- ಅವನು ಹೇಳಿದರೆ…, ಅರ್ಥವಾಗುವುದು ನನಗೆ ಮಾತ್ರ! ನಾನೀಗ ಅದನ್ನು ರಿಪೀಟ್ ಮಾಡಿದರೆ…, ಬೇರೆ ಅರ್ಥದ ಕಥೆಯಾಗುತ್ತದೆ! ಮರಣಕ್ಕೆ ಎಷ್ಟು ಸಮಯ ಇದೆಯೋ ಏನೋ…, ...ಇದು ಕಥೆ…!

*

ನನ್ನ ಹೆಸರು ಮೃತ್ಯುಂಜಯ! ನನ್ನದೊಂದು ಕನಸು! ಆ ಕನಸಿನಬಗ್ಗೆ ಆಮೇಲೆ ಹೇಳುತ್ತೇನೆ. ನನ್ನ ಮನೆಯಲ್ಲಿ ನಾನು ಅಮ್ಮ ಅಕ್ಕ- ಮೂರೇ ಜನ! ಅಕ್ಕನಿಗೆ ಮದುವೆಯಾಗಿ ಹೋದಮೇಲೆ- ನಾನೂ ಅಮ್ಮ ಅನ್ನುವ ನಮ್ಮ ಪ್ರಪಂಚ! ಒಂದುದಿನ ಅಕ್ಕ ಕಣ್ಮರೆಯಾದ ಸುದ್ದಿ! ಏನಾದರು ಎಂದು ಹುಡುಕಿದೆ. ಭಾವನನ್ನು ಕೇಳಿದಾಗ…, ಯಾರೊಂದಿಗೋ ಓಡಿ ಹೋದಳು- ಎಂದರು. ಯಾರೊಂದಿಗೆ ಎಂದು ಅವರಿಗೂ ಗೊತ್ತಿಲ್ಲವಂತೆ! ನನ್ನ ಹುಡುಕಾಟವನ್ನು ನಿಲ್ಲಿಸಲಿಲ್ಲ! ನಂತರ ಅರಿವಾಯಿತು…, ಭಾವನನ್ನೊಳಗೊಂಡ ಒಂದು ದೊಡ್ಡ ಮಾಫಿಯಾ ಇದರ ಹಿಂದೆ ಇದೆ! ಹೆಣ್ಣುಮಕ್ಕಳನ್ನು ಮಾರಾಟ ಮಾಡುವ ಮಾಫಿಯಾ! ಹೆಣ್ಣುಮಕ್ಕಳನ್ನು ತಲುಪಿಸಿಕೊಡುವುದಷ್ಟೆ ಭಾವನ ಕೆಲಸ. ಭಾವನನ್ನು ನಿಯಂತ್ರಿಸುತ್ತಿದ್ದ ಒಬ್ಬನನ್ನು ಕಂಡು ಹಿಡಿದೆ. ಆತ ನನ್ನ ಕನಸಿಗೆ ಸಂಬಂಧಪಟ್ಟಾತ! ಕನಸೆಂದರೆ ನಾವು ನಿದ್ರೆಮಾಡುವಾಗ ಕಾಣುವ ಕನಸೋ…, ಹಗಲುಗನಸೋ ಅಲ್ಲ! ನನ್ನ ಗುರಿ! ಒಬ್ಬ ಹಿಪ್ನಾಟಿಸ್ಟ್ ಆಗಬೇಕೆನ್ನುವುದು ನನ್ನ ಕನಸು! ಆತನ ಶಿಷ್ಯನಾದೆ! ಹಿಪ್ನಾಟಿಸಂನ್ನು ಕಲಿಯುವುದರೊಂದಿಗೆ ಮಾಫಿಯಾದೊಂದಿಗಿನ ಆತನ ಸಂಬಂಧವನ್ನೂ ಕಂಡು ಹಿಡಿಯುತ್ತಿದ್ದೆ. ಆತ ಸೆಲ್ಫ್ ಹಿಪ್ನಾಟಿಸಂ ಬಗ್ಗೆಯೂ ಅದನ್ನು ಪ್ರಾಕ್ಟೀಸ್ ಮಾಡುವುದರಬಗ್ಗೆಯೂ ಕಲಿಸಿದ. ಜೊತೆಗೆ…, ಹೆಣ್ಣುಮಕ್ಕಳನ್ನು ಎಲ್ಲಿಂದ ಸಾಗಿಸುತ್ತಾರೆ ಅನ್ನುವುದನ್ನೂ ಹೇಳಿದ. ಇನ್ನೂ ಇಪ್ಪತ್ತನಾಲ್ಕು ಗಂಟೆ ಸಮಯ ಕಳೆಯಬೇಕಿತ್ತು! ಜೊತೆಗೆ ಹಿಪ್ನಾಟಿಸಂ ಪ್ರಾಕ್ಟೀಸ್ ಮಾಡಿದಂತೆಯೂ ಆಗುತ್ತದೆಂದು ಇಲ್ಲಿಗೆ ಬಂದೆ. ಇನ್ನೂ ಹನ್ನೆರಡು ಗಂಟೆ ಸಮಯ ಕಳೆದಿದ್ದರೆ…, ಇದೇ ಸ್ಥಳಕ್ಕೆ ಹಡಗೊಂದು ಬರುತ್ತಿತ್ತು! ನನ್ನ ಹಿಪ್ನಾಟಿಸಂಕೂಡ ಪೂರ್ತಿಯಾಗುತ್ತಿತ್ತು! ಆದರೆ…, ನಾವೊಬ್ಬರೇ ಬುದ್ಧಿವಂತರೆನ್ನುವ ಭ್ರಮೆ ಹೋಗಲಾಡಿಸುವಂತೆ ಈತ ಬಂದ- ಮಾಫಿಯಾ ಲೀಡರ್! ಕಥೆ ಹೇಳಿದ!

ಪ್ರತಿ ಕಥೆಯೂ ಸುಖಾಂತ ಕಾಣುವುದಿಲ್ಲ! ಪ್ರತಿ ನಾಯಕನೂ ಗೆಲ್ಲುವುದಿಲ್ಲ! ಗೆದ್ದು ನಾಯಕನಾಗಬೇಕು ಅಂದುಕೊಂಡವನು ಕಥೆ ಮುಗಿಯುವವರೆಗೆ ಬದುಕಿರಬೇಕೆಂದೂ ಇಲ್ಲ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!