ಕಥೆಗಾರ ಬಯಲಾದ!
ಕಥೆಗಾರ ಬಯಲಾದ!
ಕಥೆಯೊಂದರ ಹುಡುಕಾಟದಲ್ಲಿದ್ದ ಕಥೆಗಾರ. ನನಗೋ ಅವನ ಅಂತರಂಗವನ್ನು ಬಯಲುಮಾಡದೆ ಸಮಾಧಾನವಿಲ್ಲ! ಯಾವಾಗಲೂ ಒಂದೇ ರೀತಿಯ ಕಥೆಗಳನ್ನು ಬರೆದು - ತನ್ನಿಷ್ಟದವರಿಂದ ಹೇಳಿಸಿಕೊಳ್ಳುವುದು ಅವನಿಗೊಂದು ಹಾಬಿಯಾಗಿದೆ! ಅದನ್ನು ನಿಲ್ಲಿಸಿ ವ್ಯತ್ಯಸ್ತವಾದ ಕಥೆಗಳನ್ನು ಬರೆಯಲು ಪ್ರೇರೇಪಿಸಬೇಕೆಂಬ ಆಸೆ!
“ಹಲೋ!” ಎಂದೆ. ತಿರುಗಿ ನೋಡಿ ಮುಗುಳು ನಕ್ಕ!
“ಭಾರಿ ಹುಡುಕಾಟದಲ್ಲಿರುವಂತಿದೆ?” ಎಂದೆ.
“ನಾನೇನು ಹುಡುಕುತ್ತಿದ್ದೇನೆಂದು ಓದುಗರಿಗೆ ಹೇಳಿ- ನನ್ನಲ್ಲಿ ಯಾಕೆ ಈ ಪ್ರಶ್ನೆ?” ಎಂದ.
“ಸಿಕ್ಕಿತಾ?” ಎಂದೆ.
“ಇವತ್ತಿಗೆ ನೀನು ಸಾಕು!” ಎಂದ. ಇಬ್ಬರೂ ವಿರಾಮವಾಗಿ ಕುಳಿತುಕೊಂಡೆವು.
“ಹೇಳೀಗ! ಯಾಕೆ ಯಾವಾಗಲೂ ಒಂದೇ ರೀತಿಯ ಕಥೆಗಳನ್ನು ಬರೆಯುತ್ತೀಯ?” ಎಂದೆ.
“ನಿಜಕ್ಕೂ ಬರೆದ ಅಷ್ಟೂ ಕಥೆಗಳು ಒಂದೇ ರೀತಿ ಇದೆಯಾ?” ಎಂದ. ಗೊಂದಲವಾಯಿತು!
“ಇಲ್ಲವಾ?” ಎಂದೆ.
“ಓದುಗರೇ ಹೇಳಿದಮೇಲೆ ಡೌಟೇಕೆ! ಇದೆ ಎಂದೇ ತೆಗೆದುಕೊಳ್ಳೋಣ!” ಎಂದ.
ನಾನೇನೂ ಮಾತನಾಡಲಿಲ್ಲ. ಅವನೇ ಹೇಳಿದ…,
“ಬರೆದ ಅಷ್ಟೂ ಕಥೆಗಳು ಬೇರೆಬೇರೆಯೇ…! ಕೆಲವೇ ಕೆಲವೊಂದು ಕಥೆಗಳಲ್ಲಿ ಒಂದೇ ರೀತಿಯ ಅಂಶಗಳಿದೆ ಅಷ್ಟೆ! ಆದರೆ…, ಓದುಗರ ಮನಸ್ಸಿಗೆ ವಿರುದ್ಧವಾದ ಅಂಶ ಹೆಚ್ಚಿರುವುದರಿಂದ- ಪ್ರತಿ ಕಥೆಯೂ ಅವರ ಊಹೆಗೆ ವಿರುದ್ಧವಾದ್ದರಿಂದ- ಒಂದೇ ರೀತಿ ಅನ್ನಿಸುತ್ತದೆ!”
“ಅರ್ಥವಾಗುವಂತೆ ಹೇಳು ಮಾರಾಯ!” ಎಂದೆ.
“ನವರಸಗಳಿರುವ ಒಂದು ಕಥೆಯನ್ನು ಬರೆದೆ ಅಂದುಕೋ…, ನಂತರ ಬರೆಯುವ ಒಂಬತ್ತು ಕಥೆಗೆಳು ಒಂದೊಂದು ರಸದ್ದು ಅಂದುಕೋ…, ಒಂದೇ ರೀತಿಯ ಕಥೆಗಳೇ?” ಎಂದ. ನಾನೇನೂ ಮಾತನಾಡಲಿಲ್ಲ! ಅವನೇ..,
“ಪ್ರತಿಯೊಂದರಲ್ಲೂ…, ಅಂದರೆ…, ಆಪ್ತರ ದುಃಖ, ಆಪ್ತರ ಮರಣದಲ್ಲೂ ಕಥೆಗಳನ್ನು ಹುಡುಕುವವ ಕಥೆಗಾರ! ನೋಡುವ, ಕಾಣುವ, ಅನುಭವಿಸುವ ಪ್ರತಿಯೊಂದರಲ್ಲೂ ಅವನಿಗೆ ಕಥೆಯೇ ಕಾಣಿಸುತ್ತದೆ! ಕಥೆಗಾರನಿಗೆ ಅವನದೇ ಆದ ಬದುಕಿಲ್ಲ! ಇದ್ದರದು ಕಥೆ ಬರೆಯುವ ಬದುಕಷ್ಟೇ ಹೊರತು- ಕಥೆಯೇ ಅವನ ಬದುಕಲ್ಲ!” ಎಂದು ನಿಲ್ಲಿಸಿ…,
“ಅಲ್ಲಲ್ಲಿನ ಘಟನೆಗಳನ್ನು ಅಲ್ಲಲ್ಲಿ ಬಿಡುವವನು ನಾನು! ಮತ್ತೆ ಹೇಗೆ ಕಥೆಗಳೆಲ್ಲಾ ಒಂದೇ ರೀತಿ ಅನ್ನಿಸುತ್ತದೆ ಅನ್ನುವ ಗೊಂದಲ ನನಗೂ ಇತ್ತು!” ಎಂದ.
“ನಿನಗೆ ಗೊತ್ತಿಲ್ಲ! ನೀನು ಪ್ರತಿಯೊಂದನ್ನೂ ಡೀಪ್ ಆಗಿ ತೆಗೆದುಕೊಳ್ಳುತ್ತೀಯ- ಕ್ಯಾರಿ ಮಾಡುತ್ತೀಯ!” ಎಂದೆ. ನಕ್ಕ!
“ಬರೆಯುವ ನನಗೆ ಹಾಗೆ ಅನ್ನಿಸುವುದಿಲ್ಲವಲ್ಲ!” ಎಂದ.
ಇಬ್ಬರೂ ಮೌನವಾಗಿ ಕುಳಿತಿದ್ದೆವು! ಅವನು ದೀರ್ಘವಾದ ಯೋಚನೆಯಲ್ಲಿದ್ದ. ಅವನ ಸಮರ್ಥನೆಯನ್ನು ಅವನೇ ಮಾಡಬೇಕು! ಸಮರ್ಥನೆಯಲ್ಲಿ ಹುರುಳಿಲ್ಲದಿದ್ದರೆ ಕೆಣಕುವುದಷ್ಟೇ ನನ್ನ ಕೆಲಸ. ನಿಧಾನವಾಗಿ ನನ್ನೆಡೆಗೆ ನೋಡಿ…,
“ರೇಪ್ ಅನ್ನುವ ವಿಷಯವನ್ನು ತೆಗೆದುಕೊಳ್ಳೋಣ! ಮೂರುವರ್ಷದ ಪಾಪುವಿನ ರೇಪ್! ಅಪ್ರಾಪ್ತ ಹುಡುಗಿಯನ್ನು ಮೂರು ಜನ ಸೇರಿ ರೇಪ್ ಮಾಡಿದರು! ಏಳು ಜನರಿಂದ ಯುವತಿಯ ರೇಪ್! ಬಸ್ಸಿನಲ್ಲಿ ರೇಪ್! ಟ್ರೈನಿನಲ್ಲಿ ರೇಪ್! ಮನೆಯಲ್ಲಿ ಒಬ್ಬಳೇ ಇದ್ದಾಗ ರೇಪ್…! ಉಫ್! ಎಷ್ಟೊಂದು ನ್ಯೂಸ್‌ಗಳು! ಓದಿದಾಗಲೆಲ್ಲಾ ಕಥೆಯ ರೂಪ ತಾಳುತ್ತದೆ! ಮೂರುವರ್ಷದ ಪಾಪುವಿನ ರೇಪ್ ಅನ್ನುವ ಕಥೆ ಬರೆದು ಅದನ್ನು ಅಲ್ಲಿಯೇ ಬಿಡುತ್ತೇನೆ! ನಂತರ ಬೇರೆಬೇರೆ ಘಟನೆಗಳೂ- ನೆನಪಿರಲಿ ಘಟನೆಗಳು ಬೇರೆಬೇರೆ, ವಿಷಯ ಒಂದೇ- ಕಥೆಯಾಗುತ್ತದೆ! ಅದನ್ನು ಕ್ಯಾರಿ ಮಾಡುವುದು ಅನ್ನುತ್ತೀಯ?” ಎಂದ. ನಾನೇನೂ ಮಾತನಾಡಲಿಲ್ಲ. ಅವನೇ ಮುಂದುವರೆಸಿದ…,
“ನೂರಾ ಐವತ್ತು ಕಥೆಗಳನ್ನು ಬರೆದಿದ್ದೇನೆ ಅಂದುಕೋ! ರೇಪ್‌ಗೆ ಸಂಬಂಧಪಟ್ಟಂತೆ ಹತ್ತು ಕಥೆಗಳು, ಪ್ರೇಮಕ್ಕೆ ಸಂಬಂಧಪಟ್ಟಂತೆ ಹತ್ತು ಕಥೆಗಳು, ಕಾಮಕ್ಕೆ ಸಂಬಂಧಪಟ್ಟಂತೆ ಹತ್ತು ಕಥೆಗಳು, ಪುರಾಣಕ್ಕೆ ಸಂಬಂಧಪಟ್ಟಂತೆ ಇಪ್ಪತ್ತು ಕಥೆಗಳು, ದೆವ್ವದ ಕಥೆಗಳು ಹತ್ತು, ಕಲ್ಪನೆಗಳು ಇಪ್ಪತ್ತು…, ರಾಜಕೀಯ ಹತ್ತು, ತತ್ತ್ವಗಳು ಒಂದಷ್ಟು…! ನೋಡಿದೆಯಾ…, ಅಷ್ಟೂ ಕಥೆಗಳು ಬೇರೆಬೇರೆಯೇ! ಕ್ಯಾರಿಫಾರ್ವರ್ಡ್ ಆದ ಕಥೆಗಳಲ್ಲ! ಒಂದೊಂದು ಕಥೆಯೂ ಸ್ವತಂತ್ರ! ಆದರೆ ಹತ್ತು ಕಥೆಯ ವಿಷಯ ಒಂದೇ ಅನ್ನಿಸುತ್ತದೆ! ತೀರಾ ಅಪರೂಪಕ್ಕೆ…, ಬರೆದು ಮುಗಿಸಿದ ಕಥೆಗೆ ಸಂಬಂಧಪಟ್ಟ ಅಪ್‌ಡೇಟ್ ಇದ್ದರೆ ಇನ್ನೊಂದು ಕಥೆಯಲ್ಲಿ ಅದನ್ನು ಬಿಂಬಿಸುತ್ತೇನೆ…, ಅಂದರೆ…, ತಪ್ಪು ಎಂದು ನಿರ್ಣಯಿಸಿ ಬರೆದ ಕಥೆಗೆ ಕಾರಣವಾದ ಘಟನೆ ತಪ್ಪಲ್ಲ ಎಂದು ನಿರೂಪಿತವಾದರೆ…, ಅದನ್ನು ನಾನು ಹೇಳಲೇ ಬೇಕು! ಏನು ಮಾಡುವುದು?” ಎಂದ.
“ನನ್ನನ್ನು ಕೇಳಿದರೆ ನಾನೇನು ಹೇಳಲಿ?” ಎಂದೆ.
“ಐಡಲ್ಸ್ ಮೈಂಡ್ ಎಂದರು ನನ್ನಮ್ಮ! ಇದರಿಂದ ನೀನು ಹೊರಕ್ಕೆ ಬರುವುದಿಲ್ಲ ಅಂದಳು ಗೆಳತಿ! ನೀನು ನೋಡಿದರೆ, ನಾನು ಮನಸ್ಸಿಗೆ ಡೀಪ್ ಆಗಿ ತೆಗೆದುಕೊಂಡು ಕ್ಯಾರಿ ಮಾಡುತ್ತೇನೆ ಅನ್ನುತ್ತಿದ್ದೀಯ…!” ಎಂದು ನಿಲ್ಲಿಸಿ…,
“ಕಥೆಗಾರ ಯಾವೊಂದು ವಿಷಯವನ್ನೂ ಕ್ಯಾರಿಫಾರ್ವರ್ಡ್ ಮಾಡುವುದಿಲ್ಲ! ಮನಸ್ಸಿಗಂತೂ ಹಚ್ಚಿಕೊಳ್ಳವುದೇ ಇಲ್ಲ! ಹಾಗೆ ಮಾಡುವವನಾಗಿದ್ದರೆ ಇಷ್ಟರಲ್ಲಿ ನಾನು ಹುಚ್ಚಾಸ್ಪತ್ರೆಯಲ್ಲಿ ಇರಬೇಕಿತ್ತು! ಕಥೆಗಾರ ಬರೆಯುವ ಅಷ್ಟೂ ಕಥೆಗಳು ಅವನ ಬದುಕಿಗೆ ಸಂಬಂಧಪಟ್ಟ ಘಟನೆಗಳು ಅನ್ನಿಸುವುದು ಒಂದು ರೀತಿಯಲ್ಲಿ ಕಥೆಗಾರನ ಗೆಲುವು! ಆದರೆ ಪ್ರತಿ ಕಥೆಯನ್ನೂ ಅವನಿಗೆ ಅನ್ವಯಿಸಿದಾಗ- ಒಂದೇ ರೀತಿಯಲ್ಲಿ ಕಾಣಿಸುತ್ತದೆ!” ಎಂದು ನಿಲ್ಲಿಸಿ…, ಏನೋ ಹೊಳೆದಂತೆ ನಕ್ಕು…,
“ಮೇಲೆ ಹೇಳಿದ ಘಟನೆ- ವಿಷಯಗಳಿಗೆ ಸಂಬಂಧಪಟ್ಟ ಕಥೆಗಳ ಬಗ್ಗೆ ಯಾರಿಗೂ ಯಾವ ತಕರಾರೂ ಇಲ್ಲ! ಅಂದರೆ, ಬರೆದ ನೂರಾ ಐವತ್ತು ಕಥೆಗಳಲ್ಲಿ ನೂರಾ ನಲವತ್ತು ಕಥೆಗಳಿಗೆ ಸಂಬಂಧಪಟ್ಟಂತೆ ಯಾರಿಗೂ ಏನೂ ತಕರಾರಿಲ್ಲ! ತಕರಾರಿರುವುದು 'ಹೆಣ್ಣು' ಅನ್ನುವ ವಿಷಯಕ್ಕೆ ನಾನು ಬರೆದ ಕಥೆಗಳಿಗೆ!” ಎಂದ.
ಅವನ ಸಮರ್ಥನೆ ಏನಿರಬಹುದೆನ್ನುವ ಕುತೂಹಲದಲ್ಲಿ ಅವನ ಮುಖವನ್ನು ನೋಡಿದೆ. ಮುಗುಳುನಕ್ಕ. ಹೇಳಲೋ ಬೇಡವೋ ಅನ್ನುವ ಭಾವ.
“ಹೇಳಿಬಿಡು!” ಎಂದೆ.
“ಎರಡು ವಿಷಯವಿದೆ!” ಎಂದು ನಿಲ್ಲಿಸಿ,
“ಮೊದಲನೆಯದಾಗಿ…, ನಾನು ಬರೆಯತೊಡಗಿದಾಗ ಸೋಶಿಯಲ್ ಮೀಡಿಯ ಇಷ್ಟೊಂದು ಪ್ರಚಲಿತದಲ್ಲಿರಲಿಲ್ಲ! ಆದ್ದರಿಂದ ನನ್ನ ಮೊದಮೊದಲ ಕಥೆಗಳನ್ನು ಯಾರೂ ಓದಿಲ್ಲ! ಓದ ತೊಡಗಿದ ಮೊದಮೊದಲ ಓದುಗರು ಯಾರೋ ಈಗಲೂ ಅವರೇ ನನ್ನ ಓದುಗರು! ಎರಡನೆಯದಾಗಿ…, ಅವರು ಓದುವ ಕಥೆಗಳಲ್ಲಿ ಬೇರೆ ಬೇರೆ ಕಥೆಗಳಿದ್ದರೂ ಹೆಣ್ಣು ವಿಜೃಂಭಿಸುವ ಕಥೆಗಳು ಹೆಚ್ಚು ಮನಸ್ಸಿನಲ್ಲಿ ಅಚ್ಚೊತ್ತುತ್ತದೆ! ಕಾರಣ…, ಅಷ್ಟೂ ಕಥೆಗಳಲ್ಲಿನ ನಾಯಕಿಯರಿಗೆ…, ಓದುಗರ ಪ್ರಕಾರ ನಾಯಕ- ಕಥೆಗಾರನೇ!” ಎಂದ.
“ಅಂದರೆ…?” ಎಂದು ಕೇಳಿದೆ.
“ಹೆಣ್ಣಿನಬಗ್ಗೆ ನಾನು ಬರೆದ ಕಥೆಗಳಲ್ಲಿ…, ಒಂದೊಂದು ಕಥೆಯೂ ಬೇರೆ ಬೇರೆ ಹೆಣ್ಣಿಗೆ ಸಂಬಂಧಪಟ್ಟದ್ದು!” ಎಂದು ನನ್ನ ಮುಖವನ್ನು ನೋಡಿ…,
“ಆದರೆ…, ಕಥೆ ಬರೆಯುವಾಗ ಪ್ರಥಮ ಪುರುಷ ಕಥೆಗಾರನೇ ಆಗಿರುವುದರಿಂದ ಓದುಗರಿಗೆ…, ಪ್ರತಿ ಕಥೆಯೂ ಕಥೆಗಾರನಿಗೇ ಸಂಬಂಧಪಟ್ಟದ್ದು ಅನ್ನಿಸುತ್ತದೆ!” ಎಂದ.
“ಅಲ್ಲವಾ…?” ಎಂದೆ.
“ಒಂದೇ ರೇಪ್‌ಗೆ ಸಂಬಂಧಪಟ್ಟ ಬೇರೆ ಬೇರೆ ಕಥೆಗಳನ್ನು ಹೇಗೆ ಬರೆಯುವುದಿಲ್ಲವೋ ಹಾಗೆಯೇ…, ಒಬ್ಬಳೇ ಹೆಣ್ಣಿಗೆ ಸಂಬಂಧಪಟ್ಟ ಕಥೆಗಳನ್ನೂ ನಾನು ಬರೆಯುವುದಿಲ್ಲ! ಆದರೆ ಆ ಅಷ್ಟೂ ಹೆಣ್ಣಿನ ಕಥೆಗಳು ಕಥೆಗಾರನಿಗೆ ಸಂಬಧಿಸಿದಂತೆ ಬಿಂಬಿಸಲ್ಪಟ್ಟಿರುವುದರಿಂದ ಒಂದೇ ರೀತಿ ಅನ್ನಿಸುತ್ತದೆ!” ಎಂದ. ನಾನೇನೂ ಮಾತನಾಡಲಿಲ್ಲ! ಅವನೇ…,
“ಕಥೆಗಾರನನ್ನು ಹೊರಗಿಟ್ಟು ಕಥೆ ಓದಿದರೆ ಓದುಗರಿಗೆ ಬೇರೆಯದೇ ಅನುಭವ ಸಿಗುತ್ತದೇನೋ!?” ಎಂದ.
“ಹಾಗಿದ್ದರೇ…, ಹೆಣ್ಣಿನ ಬಗ್ಗೆ ನೀನು ಬರೆದ ಅಷ್ಟೂ ಕಥೆಗಳು ಬೇರೆ ಬೇರೆ ಹೆಣ್ಣಿನಬಗ್ಗೆಯಾ…?” ಎಂದೆ- ಕಣ್ಣು ಮಿಟುಕಿಸಿ! ಅವನ ಮುಖದಲ್ಲಿ ಗೇಲಿ ಮಾಡುವ ನಗುವಿತ್ತು!
“ನೋಡಿದೆಯಾ…? ತಮಾಷೆಯಂತೆ ಹೇಳಿದರೂ ನೀನೂ ಇದನ್ನು ಕಥೆಗಾರನಿಗೇ ಅನ್ವಯಿಸಿದೆ! ಕೆಲವರೊಂದಿಗಿನ ನನ್ನ ಮಾತುಕಥೆ ಕಥೆಯಾಗಿದೆ, ಕೆಲವು ಗೆಳೆಯರ ಅನುಭವಗಳು ಕಥೆಯಾಗಿದೆ, ಕೆಲವರೊಂದಿಗಿನ ನನ್ನ ಒಡನಾಟವೂ ಕಥೆಯಾಗಿದೆ. ಕೆಲವರೊಂದಿಗೆ ನೇರವಾದ ಸಂಬಂಧವಿಲ್ಲದಿದ್ದರೂ ಅವರ ಅನುಭವಗಳು ನನ್ನ ಕಥೆಯಾಗಿದೆ! ಹೆಣ್ಣಿನಬಗೆಗಿನ ಗೊಂದಲಗಳು ಕಥೆಯಾಗಿದೆ! ದೊರೆತ ಉತ್ತರಗಳು ಬೇರೆಯದೇ ಕಥೆಯಾಗಿದೆ! ಹೆಣ್ಣಿನಬಗ್ಗೆ ಬರೆದಿರುವ ಅಷ್ಟೂ ಕಥೆಗಳ ಅನುಭವ ಒಬ್ಬಳೇ ಹೆಣ್ಣಿನೊಂದಿಗೆ ಅಸಾಧ್ಯ! ಹಾಗೆಯೇ…, ಎಲ್ಲವೂ ನನ್ನೊಬ್ಬನದೇ ಅನುಭವ ಅನ್ನುವುದೂ ಅಸಂಭವ!” ಎಂದ.
“ಕನ್‌ಕ್ಲೂಷನ್ ಹೇಳು!” ಎಂದೆ.
“ಮುಂಚೆ ನನ್ನ ಅಮ್ಮ ಒಬ್ಬರು ಹೇಳಿದ್ದರು…, ನೀನು ಸಮಾಜದಲ್ಲಿ ನಡೆಯುವ ಕೆಟ್ಟದ್ದನ್ನು ಮಾತ್ರ ಹೇಳುತ್ತೀ, ಒಳ್ಳೆಯದನ್ನೂ ಹೇಳು- ಎಂದು. ಹಾಗೆಯೇ…, ನೀನು ಹೆಣ್ಣಿನಬಗ್ಗೆ ಮಾತ್ರ ಬರೆಯುತ್ತೀ, ಬೇರೆಯೂ ಬರಿ- ಅನ್ನುವ ಉಪದೇಶವಾಗಿ ಇದನ್ನು ತೆಗೆದುಕೊಳ್ಳುತ್ತೇನೆ!” ಎಂದು ನಿಲ್ಲಿಸಿದ.
“ಹೆಣ್ಣಿನಿಂದ ಹೊರಕ್ಕೆ ಬಾ!” ಎಂದೆ ಗೇಲಿ ಮಾಡುವಂತೆ.
“ಒಂದೊಂದು ಕಥೆಯಿಂದಲೂ ಹೊರಬಂದು ಮತ್ತೊಂದು ಕಥೆ ಬರೆಯುತ್ತೇನೆಯೇ ಹೊರತು- ಅದೇ ಕಥೆಯನ್ನು ಮುಂದುವರೆಸುವುದಿಲ್ಲ! ಹಾಗೆಯೇ…, ಒಬ್ಬೊಬ್ಬಳು ಹೆಣ್ಣಿನಿಂದಲೂ ಹೊರಬರುತ್ತಿದ್ದೇನೆಯೇ ಹೊರತು- ಒಬ್ಬಳಿಂದಲೇ ಹಲವುಬಾರಿ ಅಲ್ಲ!” ಎಂದ.
ಕಥೆಗೆ ಅನ್ವಯಿಸಿ ಹೇಳಿದನೋ, ಅವನ ಬದುಕಿಗೆ ಅಂಟಿಕೊಂಡಿರುವ ಅಷ್ಟೂ ಹೆಣ್ಣಿನಬಗ್ಗೆ ಹೇಳಿದನೋ ಅನ್ನುವ ಗೊಂದಲದಲ್ಲಿ ಎದ್ದುಬಂದೆ!
Comments
Post a Comment