ಹುಡುಗ, ಪುಸ್ತಕ, ಗುಲಾಮಗಿರಿ & ತುಳಿತ!
ಪ್ರಶ್ನೆ ಮತ್ತು ಗುಲಾಮಗಿರಿ!
೧
ನನ್ನರಿವಿನಲ್ಲಿ ವರ್ತಮಾನ ಅನ್ನುವ ಪದಕ್ಕೆ ಎರಡು ಅರ್ಥವಿದೆ! ಒಂದು ವರ್ತಮಾನ ಕಾಲ! ಇನ್ನೊಂದು ಸಮಾಚಾರ- ಅಥವಾ ಮಾತುಕತೆ! ಸಣ್ಣ ಸಣ್ಣ ಸಂಭಾಷಣೆಗಳು, ಚರ್ಚೆಗಳು, ಅಭಿಪ್ರಾಯಗಳು, ವಾದ ವಿವಾದಗಳು ನಮ್ಮನ್ನು ನಾವು ಬೆಳೆಸಲು ಎಷ್ಟು ಸಹಾಯಕವಾಗುತ್ತದೆ ಅನ್ನುವುದಕ್ಕೆ ಒಂದು ಉದಾಹರಣೆ ಈ ಕಥೆ! ಇದು ಕಥೆಯಾ ಅಂದರೆ ಹೌದು! ವಾಸ್ತವವಾ ಅಂದರೆ ಅದೂ ಹೌದು! ಒಂದು ವಾಸ್ತವ ಕಥೆ!
ನನಗೊಂದು ಅಹಂಕಾರವಿದೆ! ಏನು ಅಹಂಕಾರ? ಸಾವಿರ ಪುಸ್ತಕಗಳನ್ನು ಓದಿದ್ದೇನೆನ್ನುವ ಅಹಂಕಾರ! ಓದಿದ ಪುಸ್ತಕದ ಹೆಸರನ್ನೂ, ಬರೆದವರ ಹೆಸರನ್ನೂ, ಪುಸ್ತಕದ ಸಂಖ್ಯೆಯನ್ನೂ ಬರೆದಿಟ್ಟುಕೊಳ್ಳತೊಡಗಿದ್ದು ಇಪ್ಪತ್ತೊಂದನೇ ವಯಸ್ಸಿನಿಂದ! ಹದಿನೈದು ವರ್ಷದಲ್ಲಿ ಸಾವಿರ ಪುಸ್ತಕ! ನಿಜ ಹೇಳಬೇಕೆಂದರೆ ಇಪ್ಪತ್ತೊಂದನೇ ವಯಸ್ಸಿನವರೆಗೆ ನಾನು ಓದಿದ ಪುಸ್ತಕದ ಸಂಖ್ಯೆಯೇ ಹೆಚ್ಚು! ಆದರದು ಲೆಕ್ಕಕ್ಕೆ ಇಲ್ಲ!
ಕಾದಂಬರಿಗಳು, ಪುರಾಣಗಳು, ಇತಿಹಾಸಗಳು, ಸಿದ್ಧಾಂತಗಳು…, ಇಂತದ್ದೇ ವಿಷಯವೆಂದೇನೂ ಇಲ್ಲ! ಓದುವುದಷ್ಟೆ!
ಒಮ್ಮೆ ಅಪ್ಪ ಕೇಳಿದ್ದರು…,
“ಯಾವಾಗ ನೋಡಿದರೂ ಪುಸ್ತಕ ಹಿಡಿದು ಕೂತಿರುತ್ತೀಯಲ್ಲ…, ನಿನ್ನ ಓದಿನ ಉದ್ದೇಶವೇನು?” ಎಂದು.
ನಿಜಕ್ಕೂ ಗಲಿಬಿಲಿಗೊಂಡೆ! ಓದಬೇಕೆನ್ನಿಸುತ್ತದೆ- ಓದುತ್ತೇನೆ! ಓದುವುದರಲ್ಲಿ ಉದ್ದೇಶವೇನು?
ನನ್ನ ಮೌನವನ್ನು ಕಂಡು ನಕ್ಕರು ಅಪ್ಪ.
“ಓದು ಒಳ್ಳೆಯದೇ…! ಆದರೆ ಅದನ್ನು ಅರಗಿಸಿಕೊಳ್ಳಬೇಕು! ಓದಿದ ಪ್ರತಿಯೊಂದನ್ನೂ ಹಾಗೆಯೇ ಒಪ್ಪದೆ ನಿನ್ನದೇ ಆದ ರೀತಿಯಲ್ಲಿ ವಿಮರ್ಶೆ ಮಾಡಬೇಕು! ನಿನ್ನದೇ ಆದ ಅಭಿಪ್ರಾಯವನ್ನು ಬೆಳೆಸಿಕೊಳ್ಳಬೇಕು! ಸರಿ ತಪ್ಪುಗಳ ವಿವೇಚನೆ ಮಾಡಬೇಕು! ಸಾಧ್ಯವಾದರೆ ಒಂದು ಹೊಸಾ ದೃಷ್ಟಿಕೋನವನ್ನು ಪ್ರಪಂಚಕ್ಕೆ ನೀಡಬೇಕು! ಒಂದು ಹಂತದವರೆಗೆ ಹೀಗೆ ಮಾಡಿದರೆ…, ನಂತರ ಪಕ್ವತೆ ಅನ್ನುವುದು ಅಪ್‌ಡೇಟ್ ಆಗುತ್ತಾ ಹೋಗುತ್ತದೆ! ಪ್ರಪಂಚ ನಿನಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ! ನೀನು ಎಷ್ಟು ಓದಿದೆ, ಎಷ್ಟು ಪ್ರಪಂಚ ಸುತ್ತಿದೆ ಅನ್ನುವುದಲ್ಲ ಮುಖ್ಯ! ಓದಿದ್ದರಲ್ಲಿ ಎಷ್ಟು ಅರಗಿಸಿಕೊಂಡೆ, ಸುತ್ತಿದ ಪ್ರಪಂಚದಲ್ಲಿ ತೀರಾ ಹತ್ತಿರದಿಂದ ಏನು ಕಂಡೆ- ಎಷ್ಟು ಅನುಭವ ಹೊಂದಿದೆ ಅನ್ನವುದು ಮುಖ್ಯ!” ಎಂದರು.
ಆ ರೀತಿಯಲ್ಲಿ ಸಾವಿರ ಪುಸ್ತಕವನ್ನು ಓದಿ ಮುಗಿಸಿದ್ದೇನೆಂದರೆ…, ಅದು ನನ್ನ ಅಹಂಕಾರವೇ!
೨
ದೊಡ್ಡದೊಡ್ಡ ವಿಷಯಗಳಿಗೆ ಯಾವತ್ತಿಗೂ ಹೆಚ್ಚು ತಲೆ ಕೆಡಿಸಿಕೊಂಡವನಲ್ಲ! ಆದರೆ ಸಣ್ಣಸಣ್ಣ ವಿಷಯಗಳನ್ನು ಹೆಚ್ಚು ವಿಮರ್ಶೆಗೆ ಒಳಪಡಿಸುತ್ತೇನೆ! ಯಾವುದು ಸರಿ, ಯಾವುದು ತಪ್ಪು ಅನ್ನುವ ಗೊಂದಲ ಉಂಟಾದಾಗ- ಕಥೆ ಬರೆಯುತ್ತೇನೆ! ಓದಿದವರ ಅಭಿಪ್ರಾಯ ನನಗೆ ಉತ್ತರವನ್ನು ಒದಗಿಸುತ್ತದೆ!
ಸದ್ಯಕ್ಕೆ ಆ ರೀತಿಯ ಸಣ್ಣ ಗೊಂದಲಕ್ಕೆ ಒಳಗಾಗಿದ್ದೇನೆ! ಈ ಗೊಂದಲ ನನ್ನ ಪ್ರಶ್ನೆಯೊಂದಕ್ಕೆ ಉತ್ತರದಂತೆಯೂ ಇದೆ!
ಗೊಂದಲ…, ಹುಡುಗನೊಬ್ಬ ಬರೆದ ಪುಸ್ತಕದಬಗ್ಗೆ ನಾನು ಅಭಿಪ್ರಾಯ ಹೇಳಬಾರದಿತ್ತೇ? ಹೇಳಿದ್ದು ಸರಿಯೇ? ತಪ್ಪೇ?- ಅನ್ನುವುದು!
ಪ್ರಶ್ನೆ…, ವರ್ತಮಾನ ಕಾಲದಲ್ಲಿ ಗುಲಾಮಗಿರಿ ಅಂದರೆ ಏನು? ತುಳಿಯುವುದು ಅಂದರೆ ಏನು?- ಅನ್ನುವುದು!
ಪ್ರಶ್ನೆಗೆ ಅಪ್ಪ ಸ್ಪಷ್ಟ ಉತ್ತರ ಕೊಟ್ಟಿದ್ದಾರಾದರೂ…, ಈಗಿನ ಕಾಲಕ್ಕೆ ಅನ್ವಯಿಸುತ್ತದೆಯೇ ಅನ್ನುವುದು ಪ್ರಶ್ನೆ!
ಅಪ್ಪ ಕೊಟ್ಟ ಉತ್ತರ…,
“ಗುಲಾಮಗಿರಿಯೆಂದರೆ…, ನೀನು ತಿಂದ ಅನ್ನದ ತಟ್ಟೆಯನ್ನು ಇನ್ನೊಬ್ಬನಿಂದ ಬಲವಂತವಾಗಿ ಎತ್ತಿಸುವುದು! ತುಳಿಯುವುದೆಂದರೆ…, ನೀನು ತಿಂದ ಅನ್ನದ ತಟ್ಟೆಯನ್ನು ನೀನೇ ಎತ್ತಿಡುವುದು!”
“ಅದು ಹೇಗೆ ತುಳಿಯುವುದಾಗುತ್ತದೆ?” ಎಂದಿದ್ದೆ.
“ಇಷ್ಟು ಕಾಲ ಅವನಿಂದ ಎತ್ತಿಸಿ ಈಗ ನೀನೇ ಎತ್ತಿಡುವುದೆಂದರೆ…!” ಎಂದು ನಗಾಡಿದ್ದರು ಅಪ್ಪ.
ನೀವಿನ್ನೂ ಪರಿಪಕ್ವವಾಗಬೇಕು! ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ನಾನು ಆ ಹುಡುಗನಿಗೆ ಹೇಳಿದ ಮಾತು ಎಲ್ಲಿಯವರೆಗೆ ಹೋಯಿತು ಅನ್ನುವುದರಲ್ಲಿ- ನನ್ನ ಉತ್ತರವಿದೆ!
ನನಗೇಕೆ ಬೇಕಿತ್ತು?
೩
ಗೆಳತಿಯೊಬ್ಬಳು ಪೇಸ್‌ಬುಕ್‌ನಲ್ಲಿ ಪುಸ್ತಕವೊಂದರಬಗ್ಗೆ ಅಭಿಪ್ರಾಯ ಬರೆದಿದ್ದಳು. ಆ ಅಭಿಪ್ರಾಯದಲ್ಲಿ ಪುಸ್ತಕವನ್ನು ಓದಿದೆ ಅನ್ನುವ ಬಿಂಬವಿತ್ತೇ ಹೊರತು- ಪುಸ್ತಕವನ್ನು ಓದಿ ಅನ್ನುವ ಬಿಂಬವಿರಲಿಲ್ಲ!
ನಾನೊಂದು ಕಮೆಂಟ್ ಮಾಡಿದೆ…,
“ಅವರ ಪುಸ್ತಕವನ್ನು ಓದಿದ್ದೆ..., ಚಿಕ್ಕಂದಿನಲ್ಲಿ ಚಂದಾಮಾಮ ಓದುತ್ತಿದ್ದಾಗಿನ ಫೀಲ್..., ಆದರೆ ನಾನು ಪ್ರಬುದ್ಧನೆಂದು ತೋರಿಸಿಕೊಳ್ಳಲು ಕೆಲವು "ದೊಡ್ಡದೊಡ್ಡ" ಪದಗಳನ್ನು ಬಳಸಿದ್ದಾರೆ! ಅದು ನಮಗೆ ಮುಗುಳುನಗು ತರಿಸುವಂತದ್ದು! ಆ ಕಥೆಗಾರನಮೇಲೆ ಒಂದುರೀತಿಯ ಆತ್ಮೀಯತೆ ಬೆಳೆದಿತ್ತು- ತಮ್ಮನಂತಾ ಫೀಲ್! ವಯಸ್ಸು ನೋಡಿದಾಗ ಹುಡುಗನೇ! ಅವರ ದೃಷ್ಟಿಕೋನ ವಿಶಾಲವಾಗಬೇಕು- (ಬದಲಾಗಬೇಕು ಅಲ್ಲ!) ಒಂದೇ ದೃಷ್ಟಿಕೋನದಲ್ಲಿ ಯೋಚಿಸುತ್ತಿದ್ದಾರೆ ಅನ್ನಿಸಿ ಅವರ ಬರಹಗಳಿಗೆ ಕೆಲವು ಕಮೆಂಟ್‌ಗಳನ್ನು ಮಾಡಿದ್ದೆ! ಆಫ್‌ಕೋರ್ಸ್- ಕಾಲೆಳೆಯುವಂತೆ! ಅದು ಅವರಿಗೆ ಅರ್ಥವಾಗಲಿಲ್ಲ..., ಸಹಿಸಲಾಗಲಿಲ್ಲ! ಅವರನ್ನು ಹೀಯಾಳಿಸುತ್ತಿದ್ದೇನೆ, ಅವರನ್ನು "ಟಾರ್ಗೆಟ್" ಮಾಡುತ್ತಿದ್ದೇನೆ- ಅವರು ಬರೆದದ್ದು ಅಷ್ಟು ಶ್ರೇಷ್ಠವಾಗಿದ್ದು ಅದನ್ನು ಸಹಿಸದೆ ಹೀಗೆ ಹೇಳುತ್ತಿದ್ದೇನೆ ಅನ್ನುವಂತೆ ಫೀಲ್ ಆದರು! ಅವರ ಮೊದಲ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಇನ್ನೂ ಮೂರು ಪುಸ್ತಕಗಳು ಬಂದಿದೆ! ಬರಹದ ಶೈಲಿ ಚೆನ್ನಾಗಿದೆ... ಆದರೆ ಒಂದು ಪುಸ್ತಕಕ್ಕು ಮತ್ತೊಂದು ಪುಸ್ತಕಕ್ಕೂ ನಡುವೆ ಸ್ವಲ್ಪ ಗ್ಯಾಪ್ ಕೊಟ್ಟರೆ ಒಳ್ಳೆಯದು ಅನ್ನಿಸಿತ್ತು...! ಫೇಸ್‌ಬುಕ್ ವಾಲ್‌ಗಳಲ್ಲಿ ಹಾಕಲಿ, ನಾಲ್ಕು ಜನರ ಅಭಿಪ್ರಾಯ ತಿಳಿಯಲಿ- ನಂತರ ಪುಸ್ತಕ ಮಾಡಲಿ ಅನ್ನೋದೊಂದು ಸಣ್ಣ ಸಲಹೆ! ಕಥೆಗಾರನಾದವನು ತಮ್ಮ ಬರಹಕ್ಕೆ- ತಾವು ಮಂಡಿಸಿದ ಅಭಿಪ್ರಾಯಕ್ಕೆ- ಹೆಚ್ಚು ನೆಗೆಟಿವ್ ಅಭಿಪ್ರಾಯ ಹೇಳುವ ಅಥವಾ ಇರುವುದನ್ನು ಇರುವಂತೆ ಹೇಳುವವರಿಗೆ ಹೆಚ್ಚು ರೆಸ್ಪೆಕ್ಟ್ ಕೊಟ್ಟರೆ ಒಳ್ಳೆಯದು! ಪ್ರಶ್ನೆ- ಚರ್ಚೆ- ವಾದ ವಿವಾದ- ಜಗಳ ಮಾಡಿಯಾದರೂ ಹೊಸಹೊಸದನ್ನು ಸ್ವಂತ ಮಾಡಿಕೊಳ್ಳಬೇಕು..., ಆದರೆ ಈ ಹುಡುಗ ತಮ್ಮ ಅಭಿಪ್ರಾಯಕ್ಕೆ ವಿರುದ್ದವಾಗಿ ಹೇಳುವವರನ್ನು ಕಡೆಗಣಿಸುತ್ತಾರೆ....! ಅದು ಒಳ್ಳೆಯದಲ್ಲ...! ವ್ಯಕ್ತಿತ್ವ ಬೇರೆ, ಅಭಿಪ್ರಾಯದಲ್ಲಿನ ವ್ಯತ್ಯಾಸ ಬೇರೆ! ಅವರಬಗ್ಗೆ ಪ್ರೀತಿಯಿದೆ..., ಒಮ್ಮೆ ನಮ್ಮಬಗ್ಗೆ ಒಂದು ಇಂಪ್ರೆಶನ್ ಬಿದ್ದರೆ ಅದನ್ನು ಬದಲಿಸುವುದು ತುಂಬಾ ಕಷ್ಟ! ಆದ್ದರಿಂದ ನೇರವಾಗಿ ಅವರಿಗೆ ಹೇಳಲು ಹೋಗಿ ಸೋತು ಇಲ್ಲಿ ಹೇಳಿದ್ದೇನೆ! ಅವರು ವಿಷಯವನ್ನು ಹೇಳುವುದಿಲ್ಲ- ಮಂಡಿಸುತ್ತಾರೆ! ಆತ ಮಂಡಿಸಿದ ವಿಷಯಕ್ಕೆ ವಿರುದ್ಧವಾಗಿ ಹೇಳಿದರೆ…, ಅವನ ಶ್ರೇಷ್ಠತೆಯನ್ನು ಸಹಿಸದೆ ಹಾಗೆ ಹೇಳುತ್ತಿದ್ದೇವೆ ಅಂದುಕೊಳ್ಳುತ್ತಿದ್ದಾರೆ! NB : ಅವರ ಪುಸ್ತಕಗಳಬಗ್ಗೆ ಹಲವರು ಬರೆದ ಅಭಿಪ್ರಾಯವನ್ನು ಓದಿದ್ದೇನೆ...! ಆದರೆ ಯಾಕೋ ಬೇರೆ ಪುಸ್ತಕಗಳನ್ನು ಓದಬೇಕು ಅನ್ನಿಸಿಲ್ಲ! ಈ ನಿಮ್ಮ ಅಭಿಪ್ರಾಯವನ್ನು ಓದಿಯೂ!”
ಅದಕ್ಕೆ ಗೆಳತಿ ಉತ್ತಮ ರೀತಿಯಲ್ಲಿ ಸ್ಪಂದಿಸಿದಳು…,
“ವೈಯಕ್ತಿಕವಾಗಿ ಅನಿಸಿದ್ದನ್ನು ಜನರ ಮುಂದೆ ಅವಮಾನಕರವಾಗಿ ತೆರೆದಿಡುವುದು ತಪ್ಪು. ಬರಹಗಾರರಿಗೆ ಪ್ರೋತ್ಸಾಹ ತುಂಬಾ ಮುಖ್ಯ- ನೀವು ನನ್ನನ್ನು ಪ್ರೋತ್ಸಾಹಿಸಿದಂತೆ. ನಮ್ಮ ಅನಿಸಿಕೆ ಅಥವಾ ಅವರ ತಪ್ಪುಗಳನ್ನು ಹೇಳುವಾಗ ಅಥವಾ ತಿದ್ದುವಾಗ ಒಂದು ಸಣ್ಣ ಚಾಲಾಕಿತನ, ಮೃದುತ್ವ ಬೇಕಾಗುತ್ತದೆ. ಈ ಕಾಮೆಂಟ್ ನೋಡಿ ನನಗೇ ಬೇಸರ ಆಯಿತು. ಇನ್ನು ಅವರು..., ಯೋಚಿಸಿ!”
ನಾನು ಮೊದಲಬಾರಿ ಆ ಹುಡುಗನಿಗೆ ಹೇಳುವ ಮಾತು ಇದಾಗಿದ್ದರೆ ಗೆಳತಿಯ ಮಾತನ್ನು ಒಪ್ಪುತ್ತಿದ್ದೆ. ಆದರೆ ಆತನಿಗೆ ಮೊದಲೇ ಹೇಳಲು ಶ್ರಮಿಸಿದ್ದೆ! ಆತ ಕಿವಿಗೊಡಲಿಲ್ಲ! ಆತನ ಹಿತೈಷಿಗಳು ಮುಜುಗರಕ್ಕೆ ಒಳಗಾಗಿ ಕೇವಲ ಹೊಗಳುತ್ತಿದ್ದು ಹುಡುಗ ತಾನು ಯಶಸ್ಸಿನ ಭ್ರಮೆಗೆ ಒಳಗಾಗಬಾರದು ಅನ್ನುವ ಉದ್ದೇಶಕ್ಕೆ ಹೇಳಿದೆ…,
“ನಿಜವೇ..., ನಾನು ಆತನಬಗ್ಗೆ ಅಭಿಪ್ರಾಯ ಹೇಳದೇ ಇರಬಹುದು! ಚೆನ್ನಾಗಿದೆ ಎಂದು ಸುಮ್ಮನಾಗಬಹುದು! ಆದರೆ ನೆಗೆಟಿವ್ ಅಭಿಪ್ರಾಯ ಹೇಳಬೇಕು- ಹೇಳಲೇ ಬೇಕು ಅನ್ನಿಸಬೇಕಾದರೆ ಅದು ಅವರ ಮೇಲಿನ ಪ್ರೀತಿಯೇ ಹೊರತು ಬೇರೆಯಲ್ಲ..., ಹೇಳಿದ್ದೆ..., ನನ್ನ ಕಥೆಗಳನ್ನು ಓದಿ ಸ್ವಂತ ಅಮ್ಮನೇ…, ಇದೆಂತಾ ಕಥೆ, ಚೆನ್ನಾಗಿಲ್ಲ ಎಂದು ಮುಖ ಮೂತಿ ನೋಡದೆ ಹೇಳುತ್ತಿದ್ದರು..., ಈಗಲೂ ಹೇಳುತ್ತಾರೆ..., ಬೇರೆ ಹಿತೈಷಿಗಳೂ ಹೇಳುತ್ತಾರೆ..., ಗೆಳೆಯರು ಓಪನ್ ಕಮೆಂಟ್ ಮಾಡುತ್ತಾರೆ! ಹಾಗೆಂದು ಬರಹ ನಿಲ್ಲಿಸಲಾಗುತ್ತದೆಯೇ? ಅವರನ್ನು ದೂರಲಾಗುತ್ತದೆಯೇ? ಹಾಗೆಯೇ ನಿಮಗೂ ಒಂದು ಸಲಹೆ..., ಅಭಿಪ್ರಾಯವನ್ನು ಹೇಳುವಾಗ ಆತ್ಮಸಾಕ್ಷಿಗೆ ಅನುಗುಣವಾಗಿ ಹೇಳಿ! ಆತ್ಮಸಾಕ್ಷಿಗೆ ವಿರುದ್ಧವಾದರೆ ಹೇಳಲು ಹೋಗಬೇಡಿ- ಅದು ಉತ್ತೇಜನವಾಗುವುದಿಲ್ಲ... ಬರಹಗಾರನಿಗೆ ಮಾಡುವ ದ್ರೋಹವಾಗುತ್ತದೆ!"
ಅದಕ್ಕೆ ಗೆಳತಿ...,
"ಸಾದ್ಯಂತ ಸತ್ಯಗಳನ್ನ ಮಾತ್ರ ನಾ ಹೇಳುತ್ತೇನೆ. ಆತ್ಮಸಾಕ್ಷಿ ವಿರುದ್ಧ ಬರೆಯುವುದಿದ್ದರೆ ಓದದೇ ಎರಡು ತಿಂಗಳ ಹಿಂದೆಯೇ ಬರೆಯುತ್ತಿದ್ದೆ." ಎಂದರು.
ಅಲ್ಲಿಗೆ ನನ್ನ ಅವರ ಚರ್ಚೆ ಮುಗಿದಿತ್ತು! ನಾವು ಯಾವ ಹುಡುಗನಬಗ್ಗೆ ಮಾತನಾಡುತ್ತಿದ್ದವೋ ಆ ಹುಡುಗನ ಪ್ರವೇಶವಾಯಿತು!
"ನಾನು ಏನು ಎಂದು ಕೆಲವರಿಗಾದರೂ ಗೊತ್ತು ಮಿ..... ನಿಮಗೆ ನಾನೇನು ಅಂತ ಪ್ರೂವ್ ಮಾಡಿಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ! ಬಕೆಟ್ ಹಿಡಿದು ಬೆಳೆದು ಬಂದವನಲ್ಲ ಈ ನಾನು.. ಚಿಕ್ಕ ವಯಸ್ಸಿಗೆ ಇತರರ ಪೋಸ್ಟುಗಳಿಗೆ ಸಲ್ಲದ ಕಮೆಂಟ್ ಹಾಕಿ ಕಾಲೆಳೆಯಲು ಕಾಯುವ ನಿಮ್ಮಂಥವರನ್ನು ಬಹಳ ನೋಡಿದ್ದೇನೆ.. ಎದ್ದು ಬಿದ್ದು ನೋವು ತಿಂದು ಬೆಳೆದ ದೇಹ ಇದು.. ನಿಮ್ಮಂಥವರ ಕಮೆಂಟುಗಳನ್ನು ಸಲೀಸಾಗಿ ಅರಗಿಸಿಕೊಳ್ಳುತ್ತೇನೆ. ಇಂಥವೆಲ್ಲ ಮೆಟ್ಟಿ, ಮೀರಿ ನಿಂತಾಗಲೇ ಅವರವರ ಬಲ ಏನು ಅಂತ ಗೊತ್ತಾಗೋದು.. ಇನ್ನೊಂದು ವಿಷ್ಯ ನಿಮ್ಮ ಮನಸಿಗೆ ನೋವು ಮಾಡಬಾರದು ಅಂತ ಹೇಳಿರಲಿಲ್ಲ. ನಿಮ್ಮ ಕಾಸನೋವ ಪುಸ್ತಕ ತರಿಸಿಕೊಂಡಾಗಲೇ ನಾನು ಓದಲು ಶುರುಮಾಡಿದ್ದೆ. ಆದರೆ ನಾಲ್ಕು ಪುಟಗಳನ್ನೂ ಓದಲಾಗಲಿಲ್ಲ. ಬರಹದ ಶೈಲಿ ನನ್ನನ್ನು ಸೆಳೆಯಲಿಲ್ಲ. ಮಡಚಿಟ್ಟೆ.. ಮತ್ತೆ ತೆರೆಯಲು ಮನಸು ಬರಲಿಲ್ಲ. ಬೇರೆಯವರಾದರೂ ಓದಲಿ ಅಂತ ಗೆಳೆಯರಿಗೆ ಕೊಟ್ಟಿದ್ದೇನೆ.. ಮತ್ತೊಂದು ನಿಮ್ಮ ಗಮನಕ್ಕಿರಲಿ.. ನೀವು ಈ ಕಮೆಂಟಿನಿಂದ ನನ್ನ ಆತ್ಮಬಲವನ್ನು ಹೆಚ್ಚು ಮಾಡಿದಿರಿ.. (ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲದ ಕಮೆಂಟ್ ಇದು. ಬನ್ನಿ ನನಗೆ ಹೇಳಿ. ಅದನ್ನು ಬಿಟ್ಟು ಉತ್ತರಕುಮಾರನಹಾಗೆ ಬೇರೊಬ್ಬರ ಪೋಸ್ಟಿಗೆ ಹಾಕುವ ಕಮೆಂಟ್ ಇದಲ್ಲ!)
ನನ್ನ ಕೆಲಸಗಳೇನು? ಗುರುತೇನು ಅಂತ ನನ್ನ ಪುಸ್ತಕಾಲಯ ಮಾತನಾಡುತ್ತದೆ. ನೀವು ಸಾಧ್ಯವಾದಷ್ಟು ಇತರರ ಕಾಲೆಳೆಯುವುದನ್ನು ಬಿಟ್ಟು ಬರಹ ಮತ್ತು ಓದಿನ ಮೇಲೆ ಗಮನಹರಿಸಿ.. ಕೃತಿಗಳು ಮತ್ತಷ್ಟು ಜನರನ್ನು ತಲುಪಲಿ.. ಹೀಗೇ ಬೇರೆಯವರ ಕಾಲಾಹರಣ ಮಾಡುತ್ತಾ ಕೂರಬೇಡಿ.. ನಿಮ್ಮ ಹೆಸರಿಗೂ ನಿಮಗೂ ಸಂಬಂಧವೇ ಇಲ್ಲದ ಹಾಗೆ ನಿಮ್ಮ ನಡವಳಿಕೆ ಇದೆ. ಮೊದಲು ಇತರರಿಗೆ ಹೇಳೋ ಮೊದಲು ನಿಮ್ಮೊಳಗಿರುವವನನ್ನು ರಿಪೇರಿ ಮಾಡಿಕೊಳ್ಳಿ.. ಆಗ ಸುತ್ತಲಿನವರು ನಿಮ್ಮನ್ನು ಗೌರವಿಸಲು ಶುರುಮಾಡುತ್ತಾರೆ. ಇಲ್ಲವಾದರೆ ಕಾಮೆಂಟ್ ಮಾಡುತ್ತಾ ಹೀಗೇ ಕಾಲ ಕಳೀರಿ.. ಕಾಲವೇ ಉತ್ತರಿಸುತ್ತದೆ. ಶುಭವಾಗಲಿ ನಿಮಗೆ.."
ಅವನಿಗೆ ಉತ್ತರವನ್ನು ಕೊಡಲೋ ಬೇಡವೋ ಅನ್ನುವ ಗೊಂದಲ! ಏನಿದೆಯೋ ಹೇಳಿಬಿಡುವುದು ಒಳ್ಳೆಯದು ಅನ್ನಿಸಿ...,
"ಮೆಚ್ಯುರಿಟಿ ಲೆವಲ್! ಸಾಧನೆಯ ದಾರಿಯಲ್ಲಿದ್ದೀರಿ ಅಂದುಕೊಂಡೆ! ಆಲ್ರೆಡಿ ಸಾಧಕನಾಗಿದ್ದೀರಿ! ಒಳಿತಾಗಲಿ ಅನ್ನುವ ಹಾಗೂ ಇಲ್ಲ! ಆಲ್ರೆಡಿ ಆಗಿದೆ! ಅನ್‌ಫ್ರೆಂಡೂ ಮಾಡಿದಿರಿ! ಇನ್ನೇನು...? ಏನೂ ಹೇಳುವ ಹಾಗೆ ಇಲ್ಲ! ಅಷ್ಟು ಮೇಲಿದ್ದೀರಿ!
ಬೀಳದಿರಿ ಜೋಪಾನ ಅನ್ನಬಹುದೆ? ಬೇಡ! ಅದಕ್ಕಿರುವ ಯೋಗ್ಯತೆಯೂ ನನಗಿಲ್ಲ! ನಿಮ್ಮ ಬಗೆಗಿನ ಅಭಿಪ್ರಾಯವೂ ನಿಮ್ಮ ಪುಸ್ತಕದ ಬಗೆಗಿನ ಅಭಿಪ್ರಾಯವೂ ಬೇರೆಬೇರೆ ಅನ್ನುವುದು ನಿಮ್ಮ ಗಮನಕ್ಕೆ ಬಂದಿಲ್ಲ ಅನ್ನುವಲ್ಲಿ- ಅಹಂ ಕಣ್ಣನ್ನು ಮುಚ್ಚಿದೆ! ಏನೋ ಮಾಡಿ! ಹೇಳುವುದು ನಮ್ಮ ಧರ್ಮ..., ಹೇಳಿದ್ದೇನೆ..., ಅದನ್ನು ಹೇಗೆ ತೆಗೆದುಕೊಳ್ಳಬೇಕು ಅನ್ನುವುದು ನಿಮಗೆ ಬಿಟ್ಟದ್ದು! ಅಭಿಪ್ರಾಯದಲ್ಲಿ ಯಾವ ವ್ಯತ್ಯಾಸವೂ ಇಲ್ಲ- ಅದು ನಿಮ್ಮ ಆತ್ಮಬಲವನ್ನು ಹೆಚ್ಚಿಸಿದೆ ಅನ್ನುವಲ್ಲಿ ಗೆಲುವಿದೆಯಾದರೂ ತೆಗೆದುಕೊಂಡ ರೀತಿ ನನ್ನನ್ನೇ ಸಮರ್ಥಿಸುತ್ತದೆ! ಇನ್ನು ಕಾಸನೋವ! ಓದಿ ಅತಿ ಕೆಟ್ಟ ವಿಮರ್ಶೆಯೊಂದನ್ನು ಮಾಡುತ್ತೀರಿ ಅನ್ನುವ ನಿರೀಕ್ಷೆಯಲ್ಲಿದ್ದೆ! ಓದಲೇ ಆಗದಷ್ಟು ಕೆಟ್ಟದಾಗಿದೆ ಎಂದು ಹೇಳಿದ್ದು ಮಜ ಅನ್ನಿಸಿತು! ಸಾಧ್ಯವಾದರೆ ಇದನ್ನೇ ಒಂದು ಪೋಸ್ಟ್ ಹಾಕಿ! ಮೂರು ಪುಟವೂ ಓದಲಾಗದಷ್ಟು ಕೆಟ್ಟ ಪುಸ್ತಕ- ಇವರೆಲ್ಲ ಯಾಕೆ ಬರೆಯುತ್ತಾರೋ ಎಂದು! ಟ್ಯಾಗ್ ಮಾಡಿ..., ನಾ ಯಾರ ಟ್ಯಾಗೂ ಆಕ್ಸೆಪ್ಟ್ ಮಾಡಿಲ್ಲ- ಇದನ್ನು ಮಾಡುತ್ತೇನೆ...,
ಇಲ್ಲ ನಿಮಗೆ ಏನೂ ಹೇಳುವ ಹಾಗಿಲ್ಲ- ದೇವರು ನೀವು!"
ಎಂದು ನಿಲ್ಲಿಸಿ, ನಾನು ಯಾರ ಪೋಸ್ಟ್‌ಗೆ ಕಮೆಂಟ್ ಮಾಡಿದ್ದೆನೋ ಅವರಿಗೆ...,
"ಕ್ಷಮೆಯಿರಲಿ ಗೆಳತಿಯೇ! ಇನ್ನು ಕಮೆಂಟ್ ಮಾಡಬಾರದು ಅಂದುಕೊಂಡಿದ್ದೆ! ಇವರು ರಿಪ್ಲೆ ಮಾಡದಿರುವಷ್ಟು ಪ್ರಬುದ್ಧರು ಅಂದುಕೊಂಡಿದ್ದೆ! ಮಾಡಿದ್ದಾರೆ! ಅದರಲ್ಲಿ ಅವರ ಸ್ಪಷ್ಟ ಅಭಿಪ್ರಾಯವಿದೆ..., ಪುಸ್ತಕದಬಗ್ಗೆಯೋ ಹುಡುಗನಬಗ್ಗೆಯೋ ಹೇಳಬೇಕಾದ ಅಗತ್ಯವಿರಲಿಲ್ಲ! ಅಂದರೆ ಈ ಚರ್ಚೆಯ ಅಗತ್ಯವಿರಲಿಲ್ಲ..., ಆದರೂ ಹೇಳಿ ಆಗಿ ಹೋಗಿದೆ- ಉದ್ದೇಶ ಆತನ ಒಳಿತೇ ಹೊರತು...! ಹೇಳಿದ್ದು ನನ್ನದೇ ತಪ್ಪು!” ಎಂದು ಮುಗಿಸಿದ್ದೆ.
ಹುಡುಗ ಮತ್ತೆ ಬಂದ!
“ನಿಮ್ಮ ಹಾಗೆ ನಮಗೆ ಪುಂಗಲಿಕ್ಕೆ ಬರುವುದಿಲ್ಲ ಸಾಮಿ! ನೀವು ಪುಂಗ್ತಾನೇ ಇರಿ..., ಹೌದು ನಾನು ಸಾಧಕನೇ.. ಇಲ್ಲಿ ಪ್ರತಿಯೊಬ್ಬನೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ಸಾಧಕನೇ.. ಅದನ್ನು ಸಹಿಸದ ನಿಮ್ಮಂಥವರಿಂದ ಈ ಪೋಸ್ಟ್ ಹಾಕಿದವರೂ ದೂರ ಇರಬೇಕಾಗುತ್ತದೆ. ಪ್ರತಿಕ್ರಿಯೆ ಕೊಡಬೇಕಾದಾಗ ಕೊಡದೆ, ಸಲ್ಲದ ಸಮಯದಲ್ಲಿ, ಜಾಗದಲ್ಲಿ ಪ್ರತಿಕ್ರಿಯೆ ಕೊಡುವುದು ರಾಜಕಾರಣಿಗಳನ್ನು ಬಿಟ್ಟರೆ ನಿಮ್ಮಲ್ಲೇ ನೋಡಿದ್ದು.. ನನ್ನ ಬಗ್ಗೆ ವಿಚಾರ ಬಂದಾಗ ನಾನು ಪ್ರತಿಕ್ರಿಯಿಸಲೇಬೇಕು.. ಇಲ್ಲದಿದ್ದರೆ ನಿಮ್ಮಂಥ ಕಮೆಂಟುದಾರರು ಹೇಳಿದ್ದೆಲ್ಲ ತೀರ್ಥ ಪ್ರಸಾದವಾಗಲು ನಾವು ಬಿಡುವುದಿಲ್ಲ.. ನಿಮಗೂ ಒಳ್ಳೆಯದಾಗಲಿ.. ಮೊದಲು ಯಾರು ಮೆಚುರಿಟಿ ಲೆವೆಲ್ ಹೆಚ್ಚಿಸಿಕೊಳ್ಳಬೇಕು ಎಂಬುದು ಅನ್ಯರೊಬ್ಬರ ಪೋಸ್ಟಿಗೆ ಬಂದು ಕಮೆಂಟ್ ಮಾಡಿದಾಗಲೇ ನಿಮ್ಮ ಅರಿವಿಗೆ ಬರಬೇಕಿತ್ತು.. ನೀವು ಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದರೆ ಪ್ರೆಂಡ್ ಆಗಿ ಇರುತ್ತಿದ್ದೀರಿ.. ಅದನ್ನು ಉಳಿಸಿಕೊಳ್ಳುವ ಇರಾದೆ ನಿಮಗಿಲ್ಲವೆಂದಮೇಲೆ ನಿಮ್ಮಂಥವರ ಸಹವಾಸ ಮಾಡಲು ನಾವೂ ಸೂಕ್ತ ಅಲ್ಲ ಬಿಡಿ.. ಶುಭವಾಗಲಿ.. ಇನ್ನು ಏನು ಏನು ಬೊಗಳಿದರೂ ನನ್ನಿಂದ ಪ್ರತಿಕ್ರಿಯೆ ಬರದು!” ಎಂದು ಹೇಳಿ ಪೋಸ್ಟ್ ಹಾಕಿದ್ದವರಿಗೆ…,
“….ಅವರೇ ಕ್ಷಮೆಯಿರಲಿ.. ನೀವು ನಿಮ್ಮ ಹುಷಾರಿನಲ್ಲಿರಿ..!" ಎಂದು ಮುಗಿಸಿದ್ದ!
ನಾನು ಬಾಯಿಗೆ ಝಿಪ್ ಹಾಕಿಕೊಂಡೆ!
೪
ಆತ ಹೇಳಿದ್ದು ನಿಜವೇ! ಆತನಬಗ್ಗೆ ಹೇಳಲು ನಾನು ಯಾರು? ಆತ ಆನೆ ನಾನು ನಾಯಿ! ಆ ಅರಿವು ನನಗಿರಬೇಕಿತ್ತು!
ಇದು ನನಗೊಂದು ಪಾಠ! ಉದ್ದೇಶ ಏನೇ ಇರಲಿ..., ನಮ್ಮ ಅಭಿಪ್ರಾಯವನ್ನು ಅವರ ಮನಸ್ಸಿಗೆ ಅನುಗುಣವಾಗಿ ತೆಗೆದುಕೊಳ್ಳುತ್ತಾರೆ ಹೊರತು ನಾವು ಹೇಳುವ ರೀತಿಯಿಂದ ಅಲ್ಲ!
ಇದರಲ್ಲಿ ನನಗೆ ಬೇಕಾದ ಉತ್ತರವಿದೆ!
ತುಳಿಯುವುದೆಂದರೆ- ಸ್ಪಷ್ಟ ಅಭಿಪ್ರಾಯವನ್ನು ಹೇಳುವುದು! ನಿಜವನ್ನು ಹೇಳುವುದು!
ಇಲ್ಲಿ ಯಾವುದು ಸರಿ ಯಾವುದು ತಪ್ಪು ಅನ್ನುವುದಕ್ಕೆ ಪ್ರಸಕ್ತಿಯಿಲ್ಲ!
ಅವನ ಪುಸ್ತಕದಬಗ್ಗೆ ಅಭಿಪ್ರಾಯ ಹೇಳಬೇಕಾದ ಅಗತ್ಯ ನನಗಿರಲಿಲ್ಲ! ಯಾಕೆ ಹೇಳಿದೆ? ಅವನ ಏಳಿಗೆಗೆ! ಆದರೆ ಅವನ ಪ್ರಕಾರ ಅವನ ಏಳಿಗೆ ಆಗಿ ಹೋಗಿದೆ! ಅವನು ನನಗಿಂತ ಮೇಲಿದ್ದಾನೆ! ನಾನು ಅಭಿಪ್ರಾಯ ಹೇಳಿದ್ದರ ಉದ್ದೇಶ ಅವನ ಪ್ರಕಾರ..., ಅವನ ಮೇಲಿನ ಅಸೂಯೆ! ಅವನ ಏಳಿಗೆಯನ್ನು ಕಂಡು ಕಣ್ಣು ಮಂಜಾಗಿ...!!
೫
ಗೊಂದಲಕ್ಕೆ ಉತ್ತರ ಸಿಕ್ಕಿತು...,
ಎಷ್ಟು ಪುಸ್ತಕವನ್ನು ಓದಿ ಏನು ಪ್ರಯೋಜನ? ಪ್ರಪಂಚವನ್ನು ಎಷ್ಟು ಸುತ್ತಿ ಏನು ಪ್ರಯೋಜನ?
ಯಾರಿಗೆ ಏನು ಹೇಳಬೇಕು ಅನ್ನುವ ಅರಿವು ಮೂಡದಿದ್ದರೆ?
ನಾನು ಅಭಿಪ್ರಾಯ ಹೇಳಬಾರದಿತ್ತು- ಆದರೆ ಹೇಳಿದ್ದು ತಪ್ಪಲ್ಲ!
ಇನ್ನು ನನ್ನ ಪ್ರಶ್ನೆ, ಆ ಪ್ರಶ್ನೆಗೆ ಉತ್ತರ..., ಅಪ್ಪ ಹೇಳಿದ್ದನ್ನೇ ಇನ್ನೊಂದು ರೀತಿಯಲ್ಲಿ ಹೇಳಿದರೆ...,
ಇಬ್ಬರು ಗೆಳೆಯರು..., ಇಬ್ಬರೂ ಅವರ ಮನೆಯ ಪೂಜೆಗೆ ಕರೆದರು! ನಾನು ಬರುವುದಿಲ್ಲವೆಂದೆ! ಮೊದಲನೆಯವನು ಸರಿ- ಅಂದ! ಎರಡನೆಯವನು..., ನಾನು ಕೀಳು ಜಾತಿಯವನಾದ್ದರಿಂದಲೇ ಬರಲ್ಲ ಅಲ್ವಾ?- ಎಂದ! ಅದು ವ್ಯತ್ಯಾಸ! ಅವರವರ ಕಾಂಪ್ಲೆಕ್ಸ್‌ಗೆ ಅನುಸಾರ ಮನಸ್ತಿತಿ! ಇದನ್ನು ಬದಲು ಮಾಡಲಾಗುವುದಿಲ್ಲ! ಅವರೇ ಬದಲಾಗದ ಹೊರತು! ಇಬ್ಬರಿಗೂ ಒಂದೇ ಉತ್ತರ ಕೊಟ್ಟಿದ್ದೇನೆ ಅನ್ನುವಲ್ಲಿ ಒಬ್ಬನಿಗೆ ಒಂದು ರೀತಿ, ಇನ್ನೊಬ್ಬನಿಗೆ ಇನ್ನೊಂದು ರೀತಿ ಅನ್ನಿಸಬೇಕೆಂದರೇ...!
ಹಾಗೆಯೇ ಬರಹಗಾರರ ಕಥೆ!
ನಮ್ಮ ಉತ್ತರ ಇಬ್ಬರಿಗೂ ಒಂದೇ ಆಗಿರುವಲ್ಲಿ...,
ಚರ್ಚೆ ವಾದ ವಿವಾದ ಎಷ್ಟೇ ಮಾಡಿದರೂ..., ಓದುಗರ ಅಭಿಪ್ರಾಯವನ್ನು ಮನ್ನಿಸುವವರು- ಮೊದಲ ವರ್ಗ!
ಓದುಗರ ಅಭಿಪ್ರಾಯವನ್ನು ಪುಂಗಿ ಊದುವುದಾಗಿಯೂ, ಬೊಗಳುವುದಾಗಿಯೂ ತೆಗೆದುಕೊಳ್ಳುವುದು- ಎರಡನೆಯ ವರ್ಗ!
ತನ್ನ ಕೈಯ್ಯಲ್ಲಾಗದ ತನದಿಂದಲೂ, ತನಗೆಲ್ಲಾ ಉಚಿತವಾಗಿ ಬೇಕೆನ್ನುವ ಕಾರಣದಿಂದಲೂ, ಕಷ್ಟಪಟ್ಟು ಮೇಲೆ ಬರುವವರನ್ನು- ತುಳಿಯುವವರು ಎಂದು ಹೇಳುವ ಗುಲಾಮರಿಗೂ, ತನ್ನ ಏಳಿಗೆಗಾಗಿ ಹೇಳುತ್ತಿದ್ದರೂ ಅದನ್ನರಿಯದೆ ಕೊಟ್ಟ ಮಹತ್ವಕ್ಕಿಂತ ತಾವು ಕೀಳು ಎಂದು ಸಾಬೀತು ಮಾಡುವ ಇವರಿಗೂ ವ್ಯತ್ಯಾಸವೇನೂ ಇಲ್ಲ!!
Comments
Post a Comment