ಆತ್ಮರತಿ!
ಆತ್ಮರತಿ!
ಕೆಲವೊಂದು ಕಥೆಗಳು ಹಾಗೆಯೇ! ಯಾವಾಗ ಹೇಗೆ ಹುಟ್ಟುತ್ತದೆಂದೇ ತಿಳಿಯುವುದಿಲ್ಲ! ಇನ್ನು ಸ್ವಲ್ಪದಿನಕ್ಕೆ ಏನೂ ಬರೆಯಬಾರದು ಅಂದುಕೊಂಡಾಗ ಒಂದು ಒತ್ತಡ ಉಂಟಾಗುತ್ತದೆ! ಈಗಲೇ ಬರೆಯಬೇಕೆಂದು! ಬಲವಂತವಾಗಿ ಬರೆಯಲಾರೆ! ಹಾಗೆಯೇ ಬಲವಂತವಾಗಿ ಬರೆಯದೆಯೂ ಇರಲಾರೆ! ಅದೊಂದು ಒತ್ತಡ!
ಕೆಲವೊಂದು ಕಥೆಗಳು ಪಕ್ಕಾ ಡೈರಿ ಬರೆದಂತೆ ಇರುತ್ತದೆ! ಆದರೆ ಅದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಅನ್ನುವುದು ಕಥೆಗಾರನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಡೈರಿಯಲ್ಲಿಯೂ ಹಾಗೆಯೇ! ಕನಸುಗಳು, ಭ್ರಮೆಗಳು, ವಾಸ್ತವಗಳು ಎಲ್ಲವೂ ಕಲಸುಮೇಲೋಗರವಾಗಿ…, ಡೈರಿ ಓದಿ- ಬರೆದವನನ್ನು ತೀರ್ಮಾನಿಸುತ್ತೇನೆಂದರೆ…, ಶೇಖಡಾ ಇಪ್ಪತ್ತಾದರೂ ದಕ್ಕುತ್ತಾನೋ ಇಲ್ಲವೋ!
ಇನ್ನು ಈ ದಕ್ಕುವ ವಿಷಯಕ್ಕೆ ಬಂದರೆ…,
ನಾವೆಷ್ಟೇ ವಿವರಣೆ ಕೊಟ್ಟರೂ ನಮ್ಮನ್ನು ನಾವು ಬಿಂಬಿಸಲಾಗುವುದಿಲ್ಲ- ಅರ್ಥವಾಗುವುದಿಲ್ಲ!
ಇನ್ನೊಬ್ಬರ ವಿವರಣೆಯಿಂಂದ ಅವರನ್ನು ದಕ್ಕಿಸಿಕೊಳ್ಳಲೂ ಆಗುವುದಿಲ್ಲ!
ನಾವೇನೋ ಆ ದೃಷ್ಟಿಕೋನದಲ್ಲೇ ಅವರನ್ನು ಅಳೆಯುವುದು!
ಹಾಗೆಯೇ…,
ಅವರೇನೋ ಆ ದೃಷ್ಟಿಕೋನದಲ್ಲೇ ಅವರು ನಮ್ಮನ್ನು ಅಳೆಯುವುದು!
ದಕ್ಕುವುದು ಅನ್ನುವುದು, ವ್ಯಕ್ತಿತ್ವ- ವಿವೇಚನೆಗಳ ಆಚೆ- ಹೃದಯಸ್ಪಂದನೆಯನ್ನು ಅವಲಂಬಿಸಿದ ವಿಷಯ! ಬುದ್ಧಿಗನುಗುಣವಾಗಿ ಒಬ್ಬರನ್ನು ಅರಿಯುತ್ತೇವೆ ಅಂದುಕೊಳ್ಳುವುದಿಕ್ಕಿಂತ, ಅಭಿಪ್ರಾಯ ವ್ಯತ್ಯಾಸಗಳು ಎಷ್ಟೇ ಇದ್ದರು…, ಹೃದಯಕ್ಕೆ ಅನುಗುಣವಾಗಿ, ಹೃದಯ ಕೊಟ್ಟ ಸೂಚನೆಗೆ ಅನುಗುಣವಾಗಿ ಒಬ್ಬರನ್ನು ಅರಿತೆವೋ…, ಗೆದ್ದೆವು!
ಇನ್ನು ಕಥೆಯ ವಿಷಯಕ್ಕೆ ಬಂದರೆ…,
ಆತ್ಮರತಿ ಅನ್ನುವುದು ಆತ್ಮದೊಂದಿಗಿನ ಅನುಭೂತಿ- ಅದು ಪರಮಾತ್ಮನದ್ದಾದರೂ, ನಮ್ಮದಾದರೂ, ಇನ್ನೊಬ್ಬರದ್ದಾದರೂ!
*
“ನೀನು ತಪ್ಪು!” ಎಂದರು.
“ಯಾರು ತಪ್ಪು ಅನ್ನುವುದನ್ನು ಕಾಲವೇ ನಿರ್ಧರಿಸುತ್ತದೆ!” ಎಂದೆ.
ನಾನು ತಪ್ಪು ಎಂದು ಹೇಳಿದ ಅವರು ಯಾರು- ಅನ್ನುವುದು ಪ್ರಶ್ನೆ!
ಹಿತೈಷಿ? ಶತ್ರು?
ಯಾರು ಹೇಳಿದರೂ…, ಕೆಲವೊಮ್ಮೆ ಕಾಲವೂ ಉತ್ತರ ಹೇಳುವುದಿಲ್ಲ!
ಅವರಿಗೆ ಅವರು ಸರಿ ನನಗೆ ನಾನು ಸರಿ ಅನ್ನುವುದೇ ಉಳಿದುಬಿಡುತ್ತದೆ!
ತಪ್ಪು ಒಪ್ಪುಗಳು ಸಮಯ, ಸಂದರ್ಭ ಮತ್ತು ಕಾರಣಕರ್ತರನ್ನು ಅವಲಂಬಿಸಿರುತ್ತದೆ!
ಆದರೆ ನನ್ನ ವಿಷಯದಲ್ಲಿ…, ಇನ್ನೊಬ್ಬರ ವಿಷಯಕ್ಕೆ ತಲೆ ಹಾಕದಿರುವಷ್ಟು ದಿನ…, ನಾನು ತಪ್ಪಾಗಲು ಸಾಧ್ಯವೇ ಇಲ್ಲ!
ನಾವು ಹುಡುಗರು…, ಹೇಗೋ ಪರಿಚಯವಾಗುತ್ತೇವೆ! ಒಂದೇ ದೋಣಿಯವರಾದ್ದರಿಂದ ಹೆಚ್ಚು ತಕರಾರಿಲ್ಲದೆ ಆ ಸಂಬಂಧ ಶಾಶ್ವತವಾಗಿ ಉಳಿದುಹೋಗುತ್ತದೆ! ಕೆಲವೊಮ್ಮೆ ನಮ್ಮ ಅತಿಯಾದ ಒಡನಾಟದಿಂದ ಸಲಹೆ ನೀಡುವುದೋ, ಅಭಿಪ್ರಾಯ ಹೇಳುವುದೋ ಮಾಡಿದಾಗ- ಅಹಂಗೆ ಪೆಟ್ಟುಬಿದ್ದರೆ ಮಾತ್ರ…, ದೂರವಾಗುತ್ತೇವೆ!
ಆ ಸಲಹೆ ನೀಡುವುದು, ಅಭಿಪ್ರಾಯ ಹೇಳುವುದು ಅನ್ನುವುದು ನಮ್ಮ ತಪ್ಪು- ಅಂತೆ!
ಇನ್ನು ಹೆಣ್ಣಿನ ವಿಷಯಕ್ಕೆ ಬಂದರೆ…, ಅಪ್ಪ ಮಗಳು, ಅಮ್ಮ ಮಗ ಅನ್ನುವುದೇ ಶೇಖಡಾವಾರು ಹೆಚ್ಚು ಕಾಂಬಿನೇಷನ್! ಇದನ್ನೇ ಗಂಡು ಹೆಣ್ಣಿಗೆ ಅನ್ವಯಿಸಿದರೆ ಕಾಂಟ್ರವರ್ಸಿ! ಪ್ರಪಂಚ ಏನಾಗಿದೆಯೆಂದರೆ…, ಗಂಡು ಹೆಣ್ಣು ಆತ್ಮೀಯವಾಗಿ ಒಡನಾಡುತ್ತಿದೆಯೆಂದರೆ ಅದನ್ನು ಕಾಮಕ್ಕೆ ಗಂಟು ಹಾಕುತ್ತದೆ! ಒಂದೊಳ್ಳೆಯ ಆತ್ಮಬಂಧಕ್ಕೆ ಕಾರಣವಾಗಬೇಕಾದ ಬಂಧ…, ಈ ಒಂದು ಹೆದರಿಕೆಯಿಂದ ಇಲ್ಲವಾಗುತ್ತದೆ!
ಹೆಣ್ಣಿಗೆ ಐ ಲವ್ ಯು ಹೇಳಿದರೆ ಮೂರು ರೀತಿಯ ಪ್ರತಿಕ್ರಿಯೆ ದೊರೆಯುತ್ತದೆ!
ಒಂದು- ಸ್ಪಂದನೆ!
ಎರಡು- ಮೌನವಾಗಿ ದೂರ ಇದ್ದುಬಿಡುವುದು!
ಮೂರು- ವಿರುದ್ಧ ಪ್ರತಿಸ್ಪಂದನೆ!
ಎರಡು ಮತ್ತು ಮೂರನೆಯ ಫಲಿತಾಂಶವೇ ಹೆಚ್ಚಾದ್ದರಿಂದ ಯಾರೂ ಐ ಲವ್ ಯು ಹೇಳುವುದಿಲ್ಲ! ಅಥವಾ ಹಿಂಜರಿಯುತ್ತಾರೆ!
ಈ ಮೂರು ಪ್ರತಿಕ್ರಿಯೆಗಳಿಗೂ ನಾನೊಂದು ವಿವರಣೆಯನ್ನು ನೀಡುತ್ತೇನೆ!
ಯಾಕೆ ಹೇಳಿದೆ, ಹೆಣ್ಣಿನಿಂದ ನನಗೆ ಪರ್ಟಿಕ್ಯುಲರಾಗಿ ಏನು ಬೇಕು…,
ಅರ್ಥವಾದ ಹೆಣ್ಣು ಶಾಶ್ವತವಾಗಿ ಉಳಿದುಬಿಡುತ್ತಾಳೆ!
ಇವನದ್ದು ದೈಹಿಕಕ್ಕೆ ಸಂಬಂಧಪಟ್ಟದ್ದಲ್ಲ…, ಮನಸ್ಸಿಗೆ ಸಂಬಂಧಪಟ್ಟದ್ದು ಅನ್ನುವ ಅರಿವು- ನಂಬಿಕೆ…, ಹೆಣ್ಣನ್ನು ಎಷ್ಟು ಹತ್ತಿರ ಮಾಡುತ್ತದೆಂದರೆ…, ಆ ಒಂದು ಒಡನಾಟದ ಅನುಭೂತಿ ಅನುಭವಿಸಿಯೇ ಅರಿಯಬೇಕು!
ಇದನ್ನು ನಾನು ಆತ್ಮರತಿ ಎಂದು ಕರೆಯುತ್ತೇನೆ!
ಸಾಮಾನ್ಯ ಅರ್ಥದಲ್ಲಿ ನನ್ನೊಂದಿಗೆ ನಾನು ರಮಿಸುವುದು ಅನ್ನುವ ಅರ್ಥವನ್ನು ಕೊಡುವ ಈ ಪದ…,
ಯಾರದೇ ಆದರು ಆತ್ಮದೊಂದಿಗಿನ ಒಡನಾಟ! ಇಲ್ಲಿ ಬೇರೆ ಏನೂ ಇಲ್ಲ!
ಇದನ್ನು ಅರಿತುಕೊಳ್ಳುವುದು ಅಷ್ಟು ಸುಲಭವಲ್ಲ ಅನ್ನಿಸುತ್ತದೆ!
ಪ್ರಕೃತಿ ಮತ್ತು ಪುರುಷ ಅನ್ನುವ ಯಾರೂ ನಿಷೇಧಿಸಲಾಗದ ಆಧ್ಯಾತ್ಮಿಕ ತತ್ತ್ವ ನಿಂತಿರುವುದೇ ಈ ಆತ್ಮಾನುಭೂತಿಯಲ್ಲಿ- ಆತ್ಮರತಿಯಲ್ಲಿ!
*
“ಇನ್ನೊಬ್ಬರ ವಿಷಯಕ್ಕೆ ತಲೆ ಹಾಕಬಾರದೆನ್ನುವ ಸಾಮಾನ್ಯ ಜ್ಞಾನವನ್ನು ಕಲಿತೆ ತಾನೆ?” ಎಂದರು ಅಮ್ಮ.
“ಹೂಂ!” ಎಂದೆ. ಬಿಗುಮಾನ ನನಗೆ!
“ಹಾಗೆ ತಲೆ ಹಾಕಲು ಕಾರಣವೇನು?” ಎಂದರು.
“ಅನ್ನಿಸಿತು!” ಎಂದೆ.
“ಅದೇ ಯಾಕೆ?”
ತಿಳಿಯಲಿಲ್ಲ! ಗೊಂದಲಗೊಂಡೆ! ಯಾಕೆ ತಲೆಹಾಕಿದೆ?
“ಅಹಂ!” ಎಂದರು ಅಮ್ಮ!
“ನಿನಗೆಲ್ಲಾ ಗೊತ್ತು, ಎಲ್ಲವನ್ನೂ ನೀನು ಅರಗಿಸಿಕೊಂಡಿದ್ದೀಯ ಅನ್ನುವ ಅಹಂ!” ಎಂದರು.
“ಇನ್ನೊಬ್ಬರ ವಿಷಯಕ್ಕೆ ತಲೆ ಹಾಕಬಾರದು ಅನ್ನುವ ವಿಷಯ ನಾನು ಕಲಿತ ಪಾಠ! ಈ ಅನುಭವವಾಗದಿದ್ದರೆ ಆ ಪಾಠ ಕಲಿಯುತ್ತಿರಲಿಲ್ಲ! ಆದರೆ ತಲೆ ಹಾಕಿದ್ದು ತಪ್ಪೆ?” ಎಂದು ಕೇಳಿದೆ.
“ನೀನು ಪಾಠ ಕಲಿತೆ ಅನ್ನುವಲ್ಲಿ ತಪ್ಪಲ್ಲ! ಆದರೆ…, ಆ ಪಾಠವನ್ನು ಕಲಿಯಲು ಇನ್ನೊಬ್ಬರ ಆತ್ಮಾಭಿಮಾನಕ್ಕೆ ಪೆಟ್ಟು ಕೊಟ್ಟದ್ದು ತಪ್ಪು! ಅದು ಅವರ ಆತ್ಮಾಭಿಮಾನಕ್ಕೆ ಪೆಟ್ಟು ಕೊಡುತ್ತದೆನ್ನುವುದು ನಿನಗೆ ಅರಿವಿರಬೇಕಿತ್ತು!” ಎಂದರು.
“ಕಾರಣವನ್ನೂ ಅರ್ಹತೆಯನ್ನೂ ತಿಳಿಸಿ ಹೇಳಿ…, ಇನ್ನೊಬ್ಬರ ವಿಷಯಕ್ಕೆ ತಲೆ ಹಾಕಿದ್ದು ತಪ್ಪು ಅನ್ನುವುದಾದರೆ…, ಅಮ್ಮಾ…, ಈ ಪ್ರಪಂಚದಲ್ಲಿ ಯಾರೊಬ್ಬರೂ ಯಾರೊಬ್ಬರ ವಿಷಯಕ್ಕೂ ತಲೆ ಹಾಕುವ ಹಾಗಿಲ್ಲ ಅಲ್ಲವೇ?” ಎಂದೆ.
ಯೋಚಿಸತೊಡಗಿದರು ಅಮ್ಮ! ಇಂಥಾ ಮಗನನ್ನು ಪಡೆದು ಎಷ್ಟು ಕಷ್ಟ ಅನ್ನಿಸಿರಬೇಕು!
“ನನ್ನನ್ನೇ ಹೆರಲು ನಾನು ಹೇಳಲಿಲ್ಲ! ಹೆತ್ತಿರಿ! ಬೆಳೆಸಿದಿರಿ! ಜ್ಞಾನವನ್ನು ನೀಡಿದಿರಿ! ಈಗ ನಾನು ಸ್ವತಂತ್ರನಾಗಿದ್ದೇನೆ! ಆದರೂ…, ಪಾಠ ಕಲಿತೆಯಾ ಅನ್ನುತ್ತಿದ್ದೀರಿ! ತಪ್ಪಲ್ಲವಾ?” ಎಂದೆ.
ನಕ್ಕರು ಅಮ್ಮ! ಅವರಿಗೆ ಬೇಸರವಾಗುವುದಿಲ್ಲ! ಅವರ ಆತ್ಮದ ಒಂದು ಭಾಗವಲ್ಲವಾ ನಾನು? ಅವರಿಗೆ ತಿಳಿಯದ ನಾನೆ?
“ಅರ್ಥವಾಯಿತು!” ಎಂದರು.
“ಅಷ್ಟೆ!” ಎಂದು ಹೇಳಿ ಅವರ ಪಾದನ್ನು ಹಿಡಿದು ಕುಳಿತೆ!
*
ಪ್ರಪಂಚ ಒಂದು ನಿಯಮಕ್ಕೆ ಬದ್ಧವಾಗಿದೆ! ಗಂಡು ಹೆಣ್ಣು, ಗಂಡು ಗಂಡು, ಹೆಣ್ಣು ಹೆಣ್ಣು…, ಸಕಲ ಪ್ರಾಣಿಪಕ್ಷಿಸಂಕುಲ…, ಒಂದಕ್ಕೊಂದು ಪೂರಕ! ಆ ಪೂರಕ ಅನ್ನುವುದರಲ್ಲಿ ಕೆಲವದ್ದರ ನಡುವೆ ವೈರುಧ್ಯಗಳಿರುತ್ತದೆ ಅಷ್ಟೆ!
ಪರಾಗಸ್ಪರ್ಶದಿಂದ ಹೊಸ ಸೃಷ್ಟಿ! ಹಾಗೆಂದು ಪರಾಗ ಸ್ಪರ್ಷವಾಗದಿದ್ದರೆ ದುಂಬಿಯೂ ಹೂವೂ ಇಲ್ಲವೆಂದು ಅರ್ಥವಲ್ಲ! ಹೂವಿನಮೇಲೆ ದುಂಬಿ ಕುಳಿತಾಗಲೆಲ್ಲಾ ಪರಾಗಸ್ಪರ್ಶ ಎಂದೂ ಅರ್ಥವಲ್ಲ!
ಒಬ್ಬರ ವಿಷಯದಲ್ಲಿ ನಾವು ತಲೆ ಹಾಕುವುದೆನ್ನುವುದು ತಪ್ಪಲ್ಲ! ಅದರ ಪ್ರತ್ಯಾಘಾತ ಹೀಗೇ ಇರಬೇಕು ಅಂದುಕೊಳ್ಳುವುದು ತಪ್ಪು! ವೈಯಕ್ತಿಕ ನಿಂದೆ ತಪ್ಪು! ಆದರೆ ಒಬ್ಬರ ವಿಷಯದಲ್ಲಿ ತಲೆ ಹಾಕುವಾಗ ಅದು ವೈಯಕ್ತಿಕ ನಿಂದೆಯಾಗಿರದೆ…, ಆ ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗಬೇಕಿದ್ದು- ಆ ವ್ಯಕ್ತಿಗೆ ಅದು ವೈಯಕ್ತಿಕ ನಿಂದೆಯಂತೆ ಅನ್ನಿಸಿ, ತಾನು ತುಳಿತಕ್ಕೊಳಗಾಗುತ್ತಿದ್ದೇನೆನ್ನುವ ಭಾವ ಬಂದರೆ ಯಾರು ತಪ್ಪು?
ಕೆಲವೊಂದು ಪರಿಣಾಮಗಳಿಗೆ ಕಾರಣ ಇರಲೇ ಬೇಕು! ಆ ಕಾರಣ ನಮಗೋ ಅವರಿಗೋ ಒಂದು ಪಾಠವಾದರೆ…, ಅದಕ್ಕಿಂತ ಏನು ಬೇಕು?
*
ಆತ್ಮರತಿಯ ಹೊರತು ಇಲ್ಲಿ ಯಾರೂ ಯಾರಿಗೂ ಹೊಣೆಯಲ್ಲ- ಕಾರಣರೂ ಅಲ್ಲ!
ಆತ್ಮರತಿ ಎಂದು ಬಂದಾಗ…, ಪ್ರತಿಯೊಬ್ಬರೂ ಪರಸ್ಪರ ಕಾರಣರು- ಹೊಣೆಗಾರರು!
ನಾವು ಬುದ್ಧಿಗೆ ಪ್ರಾಧಾನ್ಯತೆಯನ್ನು ಕೊಡುತ್ತೇವೋ, ಬುದ್ಧಿಗೆ ಎಟುಕದ ಆತ್ಮಾನುಭೂತಿಗೆ ಪ್ರಾಧಾನ್ಯತೆಯನ್ನು ಕೊಡುತ್ತೇವೋ ಅನ್ನುವುದರಮೇಲೆ…, ತಪ್ಪು ಸರಿಗಳು ನಿಂತಿದೆ!
ಸದ್ಯಕ್ಕೆ…, ನನ್ನನ್ನು ಹುಚ್ಚನೆಂದು ಪರಿಗಣಿಸಿರುವ ಪ್ರಪಂಚ ಒಂದು ಕಡೆ! ಅದನ್ನು ಒಪ್ಪಿ- ಎಲ್ಲವನ್ನೂ, ಎಲ್ಲರನ್ನೂ ಆತ್ಮದಿಂದ ಅರಿಯಲು ಶ್ರಮಿಸುತ್ತಿರುವ ನಾನು ಒಂದುಕಡೆ…!
ನನ್ನದೇ ಆತ್ಮದೊಂದಿಗಿನ ಅನುಭೂತಿ ಒಂದು! ಇತರರ ಆತ್ಮದೊಂದಿಗಿನ ಅನುಭೂತಿ ಒಂದು! ಯಾವುದಕ್ಕೂ ಸೇರದ- ಅಥವಾ ಎಲ್ಲವನ್ನೂ ಒಳಗೊಂಡ ಬ್ರಹ್ಮಾಂಡದೊಂದಿಗಿನ ಅನುಭೂತಿ ಒಂದು!
ಮೂರೂ ಪರಸ್ಪರ ಬೆಸೆದುಕೊಂಡಿದೆ ಅನ್ನುವ ಅರಿವು ಮೂಡಿದಂದು ಜನ್ಮ ಸಾರ್ಥಕ!
Comments
Post a Comment