ಧೈರ್ಯ!
ಧೈರ್ಯ!
“ನಿಜವಾದ ಅಪರಾಧಿಗಳು ಟ್ಯಾಕ್ಸ್ ಪೇಯರ್ಸ್ಉ!” ಎಂದೆ.
“ನಿನ್ನ ತಲೆ! ಏಳು ಬಣ್ಣಗಳಿಗೆ ಹೊರತಾದ ಬಣ್ಣ ಇಲ್ಲ ಅಂದಿದ್ದೆ ಅವತ್ತು!” ಎಂದ ಗೆಳಯ.
“ನಿಜಾನೋ…! ನಮ್ಮ ದೇಶದಲ್ಲಿ ಬಡತನವನ್ನು ಜಾತಿ-ಮತಗಳು ನಿರ್ಧರಿಸುತ್ತದೆಯೇ ಹೊರತು ಆರ್ಥಿಕ ಪರಿಸ್ತಿತಿಯಲ್ಲ!” ಎಂದೆ.
“ಕಪ್ಪು- ಬಣ್ಣವೇ ಅಲ್ಲವಂತೆ?” ಎಂದ ಗೆಳಯ!
“ಈಗ ನೋಡು…, ಟ್ಯಾಕ್ಸ್ ಕಟ್ಟುವವರು ಯಾವೊಂದು ಬೆನಿಫಿಟ್‌ಗೆ ಅರ್ಹರಲ್ಲವಂತೆ! ಅವರು ಕಟ್ಟುವ ಟ್ಯಾಕ್ಸ್ ಯಾವುದೋ ಜಾತಿ-ಮತಗಳನ್ನು ಪೊರೆಯಲು ಅಂತೆ! ಆ ಜಾತಿ-ಮತದವರು ಎಷ್ಟೇ ಶ್ರೀಮಂತರಾಗಿರಲಿ- ಒಂದು ಕಾರ್ಡ್ ಹೊಂದಿದ್ದರೆ ಸಾಕು!” ಎಂದೆ.
ಅವನೇನೂ ಮಾತನಾಡಲಿಲ್ಲ! ಅವನಿಗೆ ಅರ್ಥವಾಯಿತು! ನಾನು ಸೋಲುವುದಿಲ್ಲ! ಕೆಲವೊಮ್ಮೆ ನಾವು ಹೀಗೆಯೇ! ತಲೆಬುಡವಿಲ್ಲದೆ ಮಾತನಾಡುತ್ತೇವೆ!
“ಈಗ ನೋಡು! ನಾನು ಟ್ಯಾಕ್ಸ್ ಕಟ್ಟುವಷ್ಟು ಸಂಪಾದನೆ ಮಾಡುವವನಲ್ಲ! ಹಾಗೆಂದು ಬೆನಿಫಿಟ್‌ಗೆ ಅರ್ಹನಾ…? ಅದೂ ಅಲ್ಲ! ಎಂತ ಸಾವು ಮಾರಾಯ! ಎಲ್ಲರೂ ಒಂದೇ ಅಂದಮೇಲೆ- ನಿಯಮವೂ ಎಲ್ಲರಿಗೂ ಒಂದೇ ಇರಬೇಕಲ್ಲವಾ? ಟ್ಯಾಕ್ಸ್‌ಪೇಯರ್ಸ್‌ಏ ವಿಕ್ಟಿಮ್‌ಗಳು ಎಂದಿರುವಾಗ…, ಶಿಕ್ಷೆಯೂ ಅವರಿಗೇನೇ ಅನ್ನುವುದು ಯಾವ ನ್ಯಾಯ?” ಎಂದೆ.
ಏನು ಹೇಳಿದರೆ ನಾನು ಸೋಲುತ್ತೇನೆ ಅನ್ನುವ ಅರಿವಿರುವ ಗೆಳೆಯನೆಂದ…,
“ಮಗಾ…, ಧೈರ್ಯ ಯಾವ ರಸಕ್ಕೆ ಬರುತ್ತದೆ?”
“ಗೊತ್ತಿಲ್ಲವೋ…! ವೀರರಸಕ್ಕೆ ಇರಬಹದು!” ಎಂದೆ. ನನ್ನರಿವಿಲ್ಲದೆ ಅವನ ಟ್ರಾಕ್‌ಗೆ ಬಂದಿದ್ದೆ.
“ಹೋಗಲಿ…, ಧೈರ್ಯದ ಲಕ್ಷಣಗಳನ್ನು ಹೇಳು ಸಾಕು!” ಎಂದ.
“ಸಾವಿಗೆ ಹೆದರದವನು ಯಾವುದಕ್ಕೂ ಹೆದರಲಾರ!” ಎಂದೆ.
“ಅದಕ್ಕೂ ಧೈರ್ಯಕ್ಕೂ ಏನು ಸಂಬಂಧ?” ಎಂದ.
“ಹೆದರದಿರುವುದೇ ಧೈರ್ಯವಲ್ಲವಾ?” ಎಂದೆ.
ಮುಖಕ್ಕೆ ಹೊಡೆಯುವಂತೆ ರಪ್ಪನೆ ಕೈ ಬೀಸಿದ. ಬೆಚ್ಚಿ ಹಿಂದಕ್ಕೆ ಸರಿದೆ.
“ಇದನ್ನು ಹೆದರಿಕೆ- ಧೈರ್ಯವಿಲ್ಲದಿರುವುದು ಅನ್ನಬಹುದಾ?” ಎಂದ.
ಯೋಚಿಸತೊಡಗಿದೆ. ಕೊನೆಗೆ…,
“ಏನೇಬಂದರೂ ಎದುರಿಸುವುದು ಧೈರ್ಯ! ಅಂಜಿಕೆಯಿಲ್ಲದೆ ಮುಂದಕ್ಕೆ ಹೆಜ್ಜೆ ಇಡುವುದು ಧೈರ್ಯ! ಮಧ್ಯರಾತ್ರಿಗಳಲ್ಲಿ ಒಬ್ಬನೇ ಇರಲು ಹೆದರದಿರುವುದು ಧೈರ್ಯ…!” ಎಂದು ಇನ್ನೂ ಉದಾಹರಣೆಗಳನ್ನು ಹೇಳುತ್ತಿದ್ದೆನೋ ಏನೋ…,
“ಸುಮ್ಮನೆ ಬೋರ್ ಹೊಡೆಸಬೇಡ ಇಂದ್ರ! ಇದೆಲ್ಲಾ ಧೈರ್ಯದ ಕ್ಯಾಟಗರಿಯೇ ಹೊರತು- ನಿಜವಾದ ಧೈರ್ಯ ಅಂದರೇನು?” ಎಂದ.
“ನೀನೇ ಹೇಳು- ಶನಿ!” ಎಂದೆ.
“ಒಂದು ಕಥೆ ಹೇಳುತ್ತೇನೆ! ಗಮನವಿಟ್ಟು ಕೇಳು!” ಎಂದ.
*
“ಸುಮಾರು ಹತ್ತು ವರ್ಷಗಳಾಗಿರಬಹುದು. ಒಂದೂರು. ಅಲ್ಲಿ ಅಪ್ಪ ಅಮ್ಮ ಮಗಳು ಅನ್ನುವ ಚೊಕ್ಕ ಕುಟುಂಬ. ಆ ಮಗಳೋ…, ಇಪ್ಪತ್ತು ತುಂಬಿದ್ದರೂ ಮಹಾ ಮುಗ್ಧೆ. ಹಾಗೆಂದು ಮೂರ್ಖಳಲ್ಲ. ಅವಳಿಗೆ ಪ್ರಪಂಚವೆಲ್ಲಾ ಚಂದವೇ! ಪ್ರತಿಯೊಂದನ್ನೂ- ಪ್ರತಿಯೊಬ್ಬರನ್ನೂ ಇಷ್ಟಪಡುತ್ತಾಳೆ. ಪ್ರತಿಯೊಬ್ಬರನ್ನೂ ಅಂಧವಾಗಿ ನಂಬುತ್ತಾಳೆ. ಹೀಗಿರುವಾಗ ಅವಳೊಬ್ಬ ಹುಡುಗನನ್ನು ಪರಿಚಯವಾದಳು. ಹೇಳಬೇಕ? ಹರೆಯ ಮುಗಿದಿದ್ದರೂ- ಅರಿಯದ ಆಕರ್ಷಣೆ. ಅವಳೆಷ್ಟು ಗಾಢವಾಗಿ ಪ್ರೀತಿಸಿದಳೆಂದರೆ…, ಯಾವ ಕಾರಣಕ್ಕೂ- ಪ್ರಪಂಚವೇ ಮುಳುಗಿದರೂ ಅವಳ ಪ್ರೀತಿ ಅವನನ್ನು ಕಾಪಾಡುವಷ್ಟು! ವಯಸ್ಸು!- ಪ್ರೇಮ!- ಗಂಡು- ಹೆಣ್ಣು! ಪ್ರಕೃತಿ ನಿಯಮದಂತೆ ಏನು ನಡಯಬೇಕೋ ನಡೆಯಿತು! ಅವಳು ಗರ್ಭಿಣಿಯಾದಳು. ಅವನು ಮಾಯ! ಅಪ್ಪ ಅಮ್ಮ ಕೊರಗಿ ಕೊರಗಿ ಇಲ್ಲವಾದರು. ಅವಳೊಬ್ಬಳೇ…! ನೀನು ಹೇಳಿದಂತೆ ಯಾವ ಟ್ಯಾಕ್ಸ್‌ಪೇಯರನ ಬೆನಿಫಿಟ್‌ಟ್ಟೂ ಅವಳಿಗಿಲ್ಲ! ಹೊಟ್ಟೆಯಲ್ಲೊಂದು ಜೀವ- ತಾನು ಸಾಯುವಂತೆಯೂ ಇಲ್ಲ! ಒಬ್ಬಳೇ ಹೆಣ್ಣಿರುವಕಡೆ ಹೊರ ಪ್ರಪಂಚದ ಗಂಡು- ಗೊತ್ತಲ್ಲಾ…! ಜೀವನವನ್ನು ಕಟ್ಟಿಕೊಳ್ಳತೊಡಗಿದಳು! ಹಾಗೆಂದು ಪ್ರಪಂಚ ಪೂರ್ತಿ ಕೆಟ್ಟದ್ದೇನೂ ಅಲ್ಲ. ಅಂತಃಕರಣವಿರುವ ಗಂಡೊಬ್ಬ ಅವಳಿಗೆ ಆಸರೆಯಾದ!” ಎಂದು ನಿಲ್ಲಿಸಿ ನನ್ನ ಮುಖವನ್ನು ನೋಡಿ ಮುಂದುವರೆಸಿದ…,
“ದೇಶದ ಕುಂದುಕೊರತೆಗಳು ಸಾಕಷ್ಟು! ಈಗಿನ ಕಾಲದಲ್ಲಿ ರಾಜಕಾರಣವೆಂದರೆ ಅಧಿಕಾರವೇ ಹೊರತು ಸೇವೆಯಲ್ಲ! ಅಧಿಕಾರದಿಂದ ಹಣ! ಹಣದಿಂದ ಅಧಿಕಾರ! ಹೇಳುವುದಕ್ಕೂ ಮಾಡುವುದಕ್ಕೂ ಏನೇನೂ ಸಂಬಂಧವಿಲ್ಲ! ಜಾತಿ- ಮತಗಳನ್ನು ಇಟ್ಟುಕೊಂಡು ತಮ್ಮ ಸಾಮ್ರಾಜ್ಯವನ್ನು ಕಟ್ಟುತ್ತಾರೆ ಹೊರತು ದೇಶದ ಚಿಂತೆ ಯಾವೊಬ್ಬನಿಗೂ ಇಲ್ಲ!” ಎಂದು ನಿಲ್ಲಿಸಿ…, ದೀರ್ಘವಾದ ಉಸಿರು ತೆಗೆದುಕೊಂಡು…,
“ಯಾವಾಗ ಒಬ್ಬ ವ್ಯಕ್ತಿ ತನ್ನೊಳಗನ್ನೊಮ್ಮೆ ಇಣುಕುತ್ತಾನೋ…, ವಾಸ್ತವವನ್ನು ಒಪ್ಪುತ್ತಾನೋ…, ಅದು ಧೈರ್ಯ! ಹೊರಗಿನ ಕುಂದು ಕೊರತೆಗಳನ್ನು ಹೆದರಿಕೆಯಿಲ್ಲದೆ ಹೇಳುವುದಲ್ಲ- ಎದುರಿಸುವುದಲ್ಲ! ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುವುದಿದೆಯಲ್ಲಾ…, ಅದು ಧೈರ್ಯ! ಪ್ರಪಂಚದ ತೊಂಬತ್ತುಭಾಗ ಯಾರಿಗೂ ಈ ಧೈರ್ಯವಿಲ್ಲ- ತೀರಾ ಧೈರ್ಯವಿಲ್ಲದವರೆಂದರೆ…, ರಾಜಕಾರಣಿಗಳು! ಅವರಿಗೆ ಆತ್ಮಸಾಕ್ಷಿ ಎಂದರೇನೆಂದೇ ತಿಳಿಯದು!” ಎಂದ.
ನಾನೇನೂ ಮಾತನಾಡಲಿಲ್ಲ. ಅವನು ತನ್ನ ಮನೆಯಕಡೆ ತಿರುಗಿ…,
“ಅಹಲ್ಯಾ…!” ಎಂದು ಕರೆದು ನನ್ನ ಮುಖವನ್ನು ನೋಡಿದ.
ನಿಧಾನವಾಗಿ ನಡೆದುಬಂದಳು ಅಹಲ್ಯ!
“ಈಗ ಹೇಳು ಧೈರ್ಯ ಅಂದರೇನು? ನೀನು ಹೇಡಿಯೋ- ವೀರನೋ?” ಎಂದ.
ಹೇಡಿಯೆಂದು ಹೇಳಲಿಲ್ಲ! ಮತ್ತೊಮ್ಮೆ ಸಾಬೀತು ಮಾಡಿದೆ- ಹತ್ತುವರ್ಷ ಮುಂಚಿನಂತೆ ಮಾಯವಾಗಿ!
Comments
Post a Comment