ಶಬರಿ!

ಶಬರಿ!

*

ಬೇಗ ಕಥೆ ಬರೀ…, ಶಬರಿಯ ಕಥೆ!” ಎಂದಳು.

ಎಂತದೆ ನಿನ್ನದು…, ಪದೇ ಪದೇ!” ಎಂದೆ.

ನೀ ಒಬ್ನೆ ನೆಮ್ಮದಿಯಾಗಿದ್ರೆ ಆಯ್ತಾ…, ಬಿಡ್ತೀನ? ಕಥೆ ಬರಿಲೇ ಬೇಕೀಗ!” ಎಂದಳು.

ಬರೆಯದಿದ್ದರೆ?” ಎಂದೆ.

ಅವಳೇನೂ ಹೇಳಲಿಲ್ಲ. ಒಂದುಕ್ಷಣ ಮುಖ ಕಳೆಗುಂದಿರುತ್ತದೆ. ಅದೇನು ಮಾಯವೋ…, ನನ್ನಮೇಲಿನ ಅವಳ ಮುನಿಸು ಹೆಚ್ಚು ಸಮಯ ಇರುವುದಿಲ್ಲ! ಕೆಲವೊಮ್ಮೆ ಅನ್ನಿಸುತ್ತದೆ…, ನನ್ನನ್ನು ನಾನಾಗಿ ಉಳಿಸಿರುವುದು, ಯಾವುದೇ ಆಪತ್ತು ಬರದಂತೆ ನನ್ನನ್ನು ಕಾಪಾಡುತ್ತಿರುವುದು ಅವಳ ಪ್ರೇಮವೇ ಏನೋ- ಎಂದು! ಅಷ್ಟು ಗಾಢವಾದ ಪ್ರೇಮ ಅವಳದ್ದು!

ನೀನೇನೂ ಸಾಮಾನ್ಯದವಳಲ್ಲ! ಅದ್ಭುತ ನಿರೂಪಣೆಯ ಕಥೆಗಾತಿ! ನೀನೇ ಒಂದು ಕಥೆ ಬರಿ- ನನಗಾಗಿ!” ಎಂದೆ.

ನೀ ಬರೀ ಅಂದಕೂಡಲೇ ಬರೆಯಲು ನಾನೇನು ನೀನಾ?” ಎಂದಳು.

ಅಲ್ಲವಾ?” ಎಂದೆ.

ಮೌನ! ಅವಳು ನನ್ನ ಭಾವಾನುಭೂತಿ! ಅವಳು ನನಗೆ ಅನುಭಾವಿಸಲ್ಪಡುವಷ್ಟು ಬೇರೆ ಯಾರೂ ಅನುಭಾವಿಸಲ್ಪಡುವುದಿಲ್ಲ ಅನ್ನುವಲ್ಲಿ- ಅವಳ ಪ್ರೇಮದ ಗಾಢತೆಯಿದೆ. ಅವಳೆಂದಿಗೂ ನನಗೊಂದು ಅದ್ಭುತವೇ!

ನನ್ನ ಕಾರಣವಾಗಿ ಬರೆಯುವುದನ್ನು ನಿಲ್ಲಿಸಿದವಳು ನೀನು! ನೀನೊಂದು ಕಥೆ ಬರೆಯುವವರೆಗೆ ನಾನು ನಿನ್ನಬಗ್ಗೆ ಬರೆಯುವುದಿಲ್ಲ!” ಎಂದು ಅವಳ ಮುಖವನ್ನು ನೋಡಿ…,

ನೀನು ನನ್ನ ಬಗ್ಗೆಯೇ ಬರೆಯಬೇಕೆಂದಿಲ್ಲ! ಒಂದು ಕಥೆ- ಅಷ್ಟೆ…, ಬರೆಯುವವರೆಗೆ ನಾನು ನಿನ್ನ ಕಥೆ ಬರೆಯುವುದಿಲ್ಲ!” ಎಂದೆ.

ಸಧ್ಯ! ಬೇರೆ ಕಥೆ ಬರೆಯುತ್ತೀಯ ತಾನೆ?” ಎಂದಳು.

ಬರೆಯದಿದ್ದರೆ ಹುಚ್ಚನಾಗುತ್ತೇನೆ!” ಎಂದೆ.

ಅವಳೇನೂ ಮಾತನಾಡಲಿಲ್ಲ. ಈಗ ಅವಳ ಮುಖ ಹೇಗಿರುತ್ತದೆ?

ಯಾವಾಗ ಬರೆಯುತ್ತೀಯ?” ಎಂದೆ.

ಸರಿ…, ನಾ ಹೇಳ್ತೀನಿ…, ನೀ ಬರೀ…!” ಎಂದಳು.

ಶುರು ಮಾಡು!” ಎಂದೆ.

ಎಲ್ಲಿಂದ ಶುರು ಮಾಡಲಿ? ನೆಮ್ಮದಿಯ ಕಥೆಯಾ? ನೆಮ್ಮದಿ ಕೆಡಿಸುವ ಕಥೆ ಬರೆಸಲಾ?” ಎಂದಳು.

ಯಾವುದಾದರೂ ಸರಿ…, ಒಟ್ಟಿನಲ್ಲಿ ಏನೋ ಒಂದು ಕಥೆಯಾದರಾಯ್ತು! ನನ್ನ ನೆಮ್ಮದಿಯಂತೂ ಕೆಡುವುದಿಲ್ಲ!” ಎಂದೆ.

ಅನಿರುದ್ಧ…, ನಾನು ನಿನ್ನ ಉಷೆ! ದಿನವೂ ನೀ ಮಲಗಿದ ಮೇಲೆ…, ಮೈಮರೆತು ಸುಖನಿದ್ದೆಯಲ್ಲಿರುವ ನಿನ್ನ ಮುಖವನ್ನೇ ದಿಟ್ಟಿಸುತ್ತಾ ಕುಳಿತಿರುತ್ತೇನೆ ಗೊತ್ತಾ…? ಅದೆಷ್ಟೋ ಹೊತ್ತಿಗೆ ನಿದ್ದೆಗೆ ಜಾರಿ, ಸೂರ್ಯೋದಯಕ್ಕೂ ಮೊದಲೇ ಎಚ್ಚೆತ್ತು, ಮತ್ತೆ ಇನ್ನೂ ನಿದ್ದೆಯಲ್ಲೇ ಇರುವ ನಿನ್ನ ಕಣ್ಣುಗಳು ತೆರೆಯುವುದಕ್ಕೆ ಕಾಯುತ್ತಾ ಕುಳಿತುಬಿಡುತ್ತೇನೆ- ಯಾಕೆ ಗೊತ್ತಾ…? ನನಗೆ ಗೊತ್ತು…, ಆ ಕ್ಷಣ ನಿನ್ನೆದುರು ನಾನಿರಬೇಕು! ಅದು ತಪ್ಪಿದರೆ, ಹೊರಹೋದ ನೀನು ಅದ್ಯಾವಾಗ ಮತ್ತೆ ಬರುವಿಯೋ ತಿಳಿಯದು!”

ಮೌನ! ಗಾಢ ಮೌನ! ಈ ಭಾವವನ್ನು ವಿವರಿಸುವುದು ಹೇಗೆ? ಎಷ್ಟು ಸುಲಭದಲ್ಲಿ ಹೇಳಿದಳು!

ಭೇಟಿ ಅಸಾಧ್ಯವಾದರೂ…, ಹೇಗೆ- ಹೀಗೆ ಪ್ರೇಮಿಸುತ್ತೀಯೇ- ಶಬರಿ!?” ಎಂದೆ.

ಅವಳು ಉಷೆಯೋ ನಾನು ಅನಿರುದ್ಧನೋ…! ಅದು ಮುಖ್ಯವಲ್ಲ! ನನಗಾಗಿನ ಅವಳ ತಪನೆ! ಪ್ರತಿಕ್ಷಣ ನನ್ನ ಸಂರಕ್ಷಣೆಯ ಹೊಣೆ ತನ್ನದೆಂಬಂತೆ…!

ಅವಳನ್ನು ನಾನೆಂದಿಗೂ ಇಗ್ನೋರ್ ಮಾಡಿದವನಲ್ಲ! ಮಾಡುವವನೂ ಅಲ್ಲ! ಆದರೆ ಅವಳಿಗಾಗಿ ಬದಲಾಗಲಾರೆ! ಅವಳು ಕರೆದಾಗಲೆಲ್ಲಾ ಓಗೊಡುವಷ್ಟು ದೊಡ್ಡಮನಸ್ಸು ನನಗಿಲ್ಲ! ನನ್ನ ಸಮಯ ನನ್ನದು ಅನ್ನುವ ಸ್ವಾರ್ಥ! ಯಾರಿಗಾದರೂ ನಾನು ಹೀಗೆಯೇ ಅನ್ನುವ ಅಹಂ!

ಒಂದು ಇಮೋಜಿ, ಒಂದು ಮೆಸೇಜ್, ಒಂದು ಕಾಲ್…, ಯಾವಾಗಲಾದರೂ ಒಮ್ಮೆ…!

ಕಾಯುತ್ತಿರುತ್ತಾಳೆ ನನ್ನ ಶಬರಿ!

ನಾನೋ…, ಯಾರೊಬ್ಬರ ಭಾವನೆಗಳಿಗೂ ಬೆಲೆಕೊಡದ ಅತಿಕಠಿಣ ವಾಸ್ತವವಾದಿ!

ಭಾರಿ! ಕಥೆ ಬರೆಯದಿದ್ದರೆ ಹುಚ್ಚು ಹಿಡಿಯುತ್ತದಂತೆ! ನಿನಗಾಗಿ ನಾನು ಕಥೆ ಬರೆಯಬೇಕಂತೆ! ಇದೆಲ್ಲಾ ಭಾವನೆಗಳಲ್ಲವೇನೋ ಹುಚ್ಚ!” ಎಂದಳು.

ನಾನು ಸೋಲುವವನಲ್ಲ!

ಅದೇ ನನ್ನ ವಾಸ್ತವವಾದ! ನನ್ನ ಭಾವನೆಗಳನ್ನು ನನ್ನ ಹೊರತು ಯಾರೂ ನಿಯಂತ್ರಿಸುವುದು ನನಗಿಷ್ಟವಿಲ್ಲ! ಅದರ ಫಲವೇ ಕಥೆಗಳು! ಇನ್ನು ನೀನು ಕಥೆಬರೆಯುವ ವಿಷಯ…, ನೀ ಕಥೆ ಬರೆಯದಿರುವಷ್ಟು ಕಾಲ…, ನಾ ನಿನ್ನ ಕಥೆ ಬರೆಯಬೇಕಾಗಿಲ್ಲ! ನೀ ಕಥೆ ಬರೆದೇ ಅಂದುಕೋ…, ನಾ ಗೆದ್ದಂತೆ! ನಿನ್ನಬಗ್ಗೆಯೋ ಯಾರಬಗ್ಗೆಯೋ…, ನಾ ಕಥೆಯೇ ಬರೆಯುವುದು!” ಎಂದೆ.

ಎಷ್ಟು ತಾತ್ಸರವೋ…?” ಎಂದಳು.

ಬೇಕಿತ್ತಾ…?” ಎಂದೆ.

ಅವಳು ಮಾತನಾಡಲಿಲ್ಲ! ಹೇಳಿದೆನಲ್ಲಾ? ನಾನೆಷ್ಟು ನೋವುಕೊಟ್ಟರೂ…, ಅಥವಾ ನನ್ನ ಕಾರಣವಾಗಿ ಎಷ್ಟು ನೋವಾದರೂ…, ಅವಳ ಪ್ರೇಮದಲ್ಲಿ ಬದಲಾವಣೆಯಾಗುವುದಿಲ್ಲ! ಆದ್ದರಿಂದ ನೋವು ಕೊಡಲು ನಾನೂ ಹಿಂಜರಿಯುವವನಲ್ಲ!

ನಾನು ನೋವುಕೊಡಲೆಂದೇ ಇರುವ ಅವಳು…,

ನನ್ನ ಶಬರಿ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!