ಅಹಂಕಾರ!
ಅಹಂಕಾರ!
ಹದಿಮೂರು ವರ್ಷದಿಂದ ಚಾಮುಂಡಿಬೆಟ್ಟ ಹತ್ತುತ್ತಿದ್ದೇನೆ! ಪ್ರತಿ ದಿನ ಹತ್ತುತ್ತಿದ್ದವನು ಕೊರೋನ ಸಮಯದಲ್ಲಿ ಕಾಲಿಗೆ ಬಿದ್ದ ಪೆಟ್ಟಿನಿಂದಾಗಿ, ಲಿಗಮೆಂಟ್ ಕಟ್ಟಾಗಿ, ಆಪರೇಷನ್ ಮಾಡಿಸಿಕೊಂಡನಂತರ…, ವಾರಕ್ಕೆ ನಾಲ್ಕು- ಐದು ದಿನ ಹತ್ತುತ್ತೇನೆ! ವ್ಯಾಯಾಮವೇ ಉದ್ದೇಶ. ಬೆಳಕು ಮೂಡುವ ಮುನ್ನ ಹತ್ತಿ ಇಳಿಯುವುದು ಅಭ್ಯಾಸ! ಬೆಳಗ್ಗಿನ ಐದು ಗಂಟೆಗೆ ಅಲ್ಲಿ ತಲುಪಿ, ಮೆಟ್ಟಿಲು ಹತ್ತಲು ಶುರು ಮಾಡುವ ಮೊದಲು- ಹತ್ತುನಿಮಿಷ ವಾರ್ಮ್‌ಅಪ್ ಮಾಡುತ್ತೇನೆ! ನಂತರ ಒಂಬೈನೂರು ಮೆಟ್ಟಿಲು ದಾಟಿದಮೇಲೆ, ಹನುಮಂತನ ಗುಡಿಯಬಳಿ- ಹತ್ತು ನಿಮಿಷ ಕಠಿಣ ವ್ಯಾಯಾಮ ಮಾಡುತ್ತೇನೆ. ಅದರಲ್ಲಿ…, ಅಂಗಾತನೆ ಮಲಗಿ, ಕಾಲನ್ನು ಮಾತ್ರ ಮೇಲಕ್ಕೆ ಎತ್ತಿ, ಪುನಃ ನೆಲಕ್ಕೆ ತಾಗದಂತೆ ಕೆಳಕ್ಕೆ ತಂದು, ಪುನಃ ಮೇಲಕ್ಕೆ…, ಹೀಗೆ…, ಇಪ್ಪತ್ತೈದು ಸಾರಿ ಮಾಡಿ ಏಳಲೆಂದು ಪಕ್ಕಕ್ಕೆ ತಿರುಗುವಾಗ ಸರಿಯಾಗಿ, ಯಾರೋ ನನ್ನನ್ನೇ ನೋಡುತ್ತಾ ನಿಂತಿರುವ ಅನುಭವವಾಗುತ್ತದೆ! ಪ್ರತಿ ದಿನ! ಅಂಗಾತನೆ ಮಲಗುವಾಗ ಅಂದುಕೊಳ್ಳುತ್ತೇನೆ…, ಇವತ್ತು ಹೆದರಬಾರದೆಂದು! ಆದರೆ ಏಳುವಾಗ- ಅತಿ ಸ್ಪಷ್ಟವಾಗಿ- ಅಷ್ಟು ಹತ್ತಿರ- ನನ್ನನ್ನೇ ದಿಟ್ಟಿಸುತ್ತಾ! ಬೆಚ್ಚಿ ಎದ್ದುನಿಲ್ಲುವಷ್ಟರಲ್ಲಿ ಮಾಯ! ಏನಿರಬಹುದು ಈ ರಹಸ್ಯ?
*
ಈ ನನ್ನ ಅನುಭವವನ್ನು ಬರೆದು ಫೇಸ್‌ಬುಕ್‌ನಲ್ಲಿ ಹಾಕಿದೆ! ಅದನ್ನು ಓದಿದ ಗೆಳೆಯ…,
“ಬಿಲ್ಡಪ್ ತಗೋತೀಯಾ…!?” ಎಂದ.
*
ಎಂದಿನಂತೆ…, ಬೆಳಗ್ಗೆ ಐದು ಗಂಟೆ! ವಾರ್ಮ್‌ಅಪ್ ಮುಗಿಸಿ ಟಕಟಕಾಂತ ಮೆಟ್ಟಿಲು ಹತ್ತಿ ಹೋದೆ!
ಹತ್ತಲು ಶುರು ಮಾಡುವಾಗಲೇ ನೋಡಿದ್ದೆ…, ಅಪ್ಪ ಅಮ್ಮ ಮಗಳು ಅನ್ನುವ ಒಂದು ಕುಟುಂಬ ಉಸ್ಸಪ್ಪಾ ಅಂತ ಹತ್ತುತ್ತಿದ್ದರು!
ನಾನು ಇಳಿಯುವಾಗ ಇವರು ಎಲ್ಲಿಯವರೆಗೆ ತಲುಪಿರಬಹುದು?
ಅಹಂಕಾರ- ನನ್ನ ಆಜನ್ಮಸಿದ್ಧ ಹಕ್ಕು!
ಎಂದಿನಂತೆ ವ್ಯಾಯಾಮ ಮುಗಿಸಿ ಏಳುವಾಗ…, ನನ್ನನ್ನೇ ನೋಡುತ್ತಿರುವ ರೂಪ! ಅಥವಾ ನನ್ನ ಭ್ರಮೆ!
ಇವತ್ತು ಹೆದರಲಿಲ್ಲ! ಕಲ್ಪನೆಯಲ್ಲಿ ಹೀಗೊಂದು ಸಂಭಾಷಣೆ ನಡೆಯಿತು!
“ಹೆದರಲ್ವಾ…? ಇರು ಮಾಡ್ತೀನಿ!”
“ಅದೇನು ಮಾಡ್ತೀಯ ಮಾಡ್ಕೋ ಹೋಗು!”
“ನಿನಗೆ ಸ್ವಲ್ಪ ಅಹಂಕಾರ! ಹೆದರದಿದ್ದರೆ ಬೇಡ…, ಬೆಟ್ಟ ಬೆಟ್ಟ ಬೆಟ್ಟ ಅಂತ ಬೆಟ್ಟದ ರಹಸ್ಯಗಳನ್ನೆಲ್ಲಾ ಹೊರ ಹಾಕ್ತೀಯಲ್ಲ- ಯಾಕೆ?”
“ಹಾಕಿದರೇನು?”
“ಹಾಕು! ಆದರೆ ಅತಿಯಾಗಿ ಹಾಕಬೇಡ!”
“ಅತಿಯಾಗಿಯೇ ಹಾಕ್ತೀನಿ! ಏನ್ಮಾಡ್ತೀಯ?”
“ಸರಿ…, ಹೋಗಿಬಾ!”
ಎಂದಿಗಿಂತ ಇಂದು ಸ್ಪೀಡ್ ಸ್ವಲ್ಪ ಜಾಸ್ತಿ ಇದೆ ಅನ್ನಿಸಿತು! ಕಾಲಿನ ಆಪರೇಷನ್ ನಂತರ…, ಅತಿ ಕಡಿಮೆ ಸಮಯವೆಂಬ ರೆಕಾರ್ಡ್ ಇವತ್ತೇ ಮಾಡಬಹುದೆಂಬ ಆಸೆಯಲ್ಲಿ- ರನ್ನಿಂಗ್‌ನಲ್ಲಿ ದೇವಸ್ಥಾನವನ್ನೊಂದು ಸುತ್ತು ಹೊಡೆದು ಅದೇ ವೇಗದಲ್ಲಿ ಮೆಟ್ಟಿಲು ಇಳಿಯುತ್ತಿದ್ದೆ!
ನಂದಿ ತಲುಪಿದರೂ ಆ ಕುಟುಂಬ ಕಾಣಿಸಲಿಲ್ಲ! ಅಹಂಕಾರ ನೆತ್ತಿಗೇರಿತು!
ಮತ್ತಷ್ಟು ವೇಗದಲ್ಲಿ ಇಳಿಯುವಾಗ…, ಆಗತಾನೆ ಮೂಡುತ್ತಿದ್ದ ಬೆಳಕಿನಲ್ಲಿ…, ಅಪ್ಪ ಅಮ್ಮನಿಗಾಗಿ ಕಾಯುತ್ತಾ ನಿಂತಿದ್ದ ಹುಡುಗಿ- ಯಾರೋ ಬರುತ್ತಿರುವ ಸೂಚನೆಯಿಂದ ತಲೆಯೆತ್ತಿ ನೋಡಿದಳು!
ಎಷ್ಟು ಚಂದ- ಅವಳು!
ಆ ಕುಟುಂಬವನ್ನು ದಾಟಿ…, ಅವಳೇನಾದರೂ ತಿರುಗಿ ನೋಡಬಹುದೇ ಅನ್ನುವ ಆಸೆಯಿಂದ ಒಂದು ಸೆಕೆಂಡ್ ತಿರುಗಿದೆ…, ಕಾಲು ಟ್ವಿಸ್ಟ್ ಆಗಿ…, ಕಳಕ್ ಅಂತ ಕುಳಿತು ಸ್ಪ್ರಿಂಗ್‌ನಂತೆ ಎದ್ದವನು…, ಮಣಿಕಟ್ಟನ್ನು ಊದಿಸಿಕೊಂಡು ಹೇಗೋ ಕೆಳಗೆ ತಲುಪಿ ಸಮಯವನ್ನು ನೋಡಿಕೊಂಡರೆ…, ಅತಿ ಹೆಚ್ಚು ಸಮಯವನ್ನು ತೆಗೆದುಕೊಂಡ ರೆಕಾರ್ಡ್!!
ಇನ್ನು ಬೆಟ್ಟದ ರಹಸ್ಯಗಳನ್ನು ಹೇಳುವುದಿರಲಿ…, ಸ್ವಲ್ಪದಿನಕ್ಕೆ…,
ಬೆಟ್ಟ ಅಂದರೇನು??!!
Comments
Post a Comment