ಶಿವೋಹಂ!

ಶಿವೋಹಂ!

ಸಣ್ಣಸಣ್ಣ ಘಟನೆಗಳು ನನ್ನ ಮೇಲೆ ಬೀರುವ ಪ್ರಭಾವ ದೊಡ್ಡದೊಡ್ಡ ಘಟನೆಗಳು ಬೀರುವುದಿಲ್ಲ! ಹಾಗೆಯೇ ಸಣ್ಣಸಣ್ಣ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವಷ್ಟು ದೊಡ್ಡದೊಡ್ಡ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ!

ಈಗೊಂದು ಸಣ್ಣ ಸಮಸ್ಯೆ ತಲೆ ತಿನ್ನುತ್ತಿದೆ!

ದೇವರೆಂದರೆ ಏನು- ಯಾರು?

ಹುಟ್ಟಿದೂರಿಗೆ ಗೆಳೆಯರೊಂದಿಗೆ ಹೋಗಿದ್ದೆ. ಚಿಕ್ಕವನಿದ್ದಾಗ ನೋಡದ ತೋಟ- ಕಾಡು ಸುತ್ತಬೇಕೆಂಬ ಆಸೆ! ಈಗಲೂ ಅಲ್ಲಿಯ ಜನ ಕಾಡಿನೊಳಕ್ಕೆ ಹೋಗಲು ಹೆದರುತ್ತಾರೆ! ಏನೇನೋ ಕಲ್ಪನೆಗಳು, ಕಥೆಗಳು ಅದಕ್ಕೆ ಕಾರಣ!

ನೀವು ಬರದಿದ್ದರೂ ನಾನು ಹೋಗಿ ಬರುತ್ತೇನೆ ಅನ್ನುವ ನನ್ನ ಮಾತಿಗೆ ಕಟ್ಟುಬಿದ್ದು ಗೆಳೆಯರೂ ನನ್ನೊಂದಿಗೆ ಬಂದಿದ್ದರು.

ನನ್ನ ಯಾವತ್ತಿನ ಗೊಂದಲ ಅದು…, ಯಾವ ಜಾಗದಲ್ಲಿ ಯಾವ ನಾಗರೀಕತೆ ಆಗಿ ಹೋಗಿದೆಯೋ ಯಾರಿಗೆ ಗೊತ್ತು- ಅನ್ನುವುದು!

ಎಷ್ಟು ದೂರ ಚಲಿಸಿದ್ದೆವು ಅನ್ನುವ ಅರಿವಿಲ್ಲ. ಕಾಡಿನ ದಟ್ಟತೆಯನ್ನು ಕಂಡು…,

ನನಗೆ ಹೆದರಿಕೆಯಾಗುತ್ತಿದೆ! ವಾಪಸ್ ಹೋಗೋಣ!” ಎಂದ ಒಬ್ಬ ಗೆಳೆಯ.

ಇನ್ನೊಂದಷ್ಟು ದೂರ ಹೋಗಿ ನೋಡೋಣ!” ಎಂದೆ ನಾನು.

ನೀನೇನೋ ಮಾಡಪ್ಪ! ಸುಮ್ಮನೆ ಯಾಕೆ ಇಲ್ಲದ ರಿಸ್ಕು! ನಾವು ವಾಪಸ್ ಹೋಗ್ತೀವಿ!” ಎಂದ ಮತ್ತೊಬ್ಬ ಗೆಳೆಯ.

ಅವರು ಮರಳಿದರೆ ನಾನೂ ಅವರೊಂದಿಗೆ ಮರಳುತ್ತೇನೆನ್ನುವ ನಂಬಿಕೆ ಅವರಿಗೆ!

ಸರಿ…, ನೀವು ಹೋಗಿರಿ…, ನಾನು ಬರ್ತೀನಿ!” ಎಂದೆ.

ನಾನಿಲ್ಲದೆ ಹಿಂದಿರುಗಲು ಹಿಂಜರಿದರೂ ಕೊನೆಗೆ ಹೆದರಿಕೆಯೇ ಗೆದ್ದಿತು! ಅವರು ಮರಳಿದರು.

ನನ್ನೊಳಗೆ ಯಾವುದೋ ಕರೆ. ಏನೋ ಇದೆ ಇಲ್ಲಿ! ಮತ್ತಷ್ಟು ಮುಂದಕ್ಕೆ ನಡೆದೆ.

ಅದೊಂದು ಪುರಾತನ ದೇವಸ್ಥಾನ! ಈ ದಟ್ಟ ಕಾಡಿನ ಮಧ್ಯದಲ್ಲಿ ದೇವಸ್ಥಾನ ಹೇಗೆ ಬಂತು ಅನ್ನುವುದೊಂದು ಗೊಂದಲ! ಪಾಳುಬಿದ್ದಿರುವ ದೇವಸ್ಥಾನದ ಒಳಕ್ಕೆ ಹೋದೆ. ಕತ್ತಲು. ಹೊಸ ಚಲನೆಯಿಂದಾಗಿ ಇಚ್ಛಾಭಂಗಗೊಂಡ ಬಾವಲಿಗಳು ಪಟಪಟನೆ ಹಾರಿ ಹೋದವು! ಎರಡು ನಿಮಿಷ ಬೇಕಾಯಿತು ಕಣ್ಣು ಕತ್ತಲಿಗೆ ಹೊಂದಿಕೊಳ್ಳಲು. ಗರ್ಭಗುಡಿಯೆಡೆಗೆ ನಡೆದೆ. ಹೊರಗಿನಿಂದ ನೋಡಿದರೆ ಪಾಳು ಬಿದ್ದಿರುವ ದೇವಸ್ಥಾನವಾದರೂ ಗರ್ಭಗುಡಿಯೊಳಗಿನ ಲಿಂಗಕ್ಕೆ ಅದ್ಭುತ ಕಳೆ!

ಹೌದು…, ಲಿಂಗಕ್ಕೆ!

ಕಾಲಮೇಲೆ ಏನೋ ಚಲಿಸುತ್ತಿರುವಂತಾಗಿ ಬಗ್ಗಿ ನೋಡಿದೆ. ನಾನು ಚಲಿಸಲಿಲ್ಲ- ಹಾವಾಗಿದ್ದರೆ?

ತೀರಾ ಸೂಕ್ಷ್ಮವಾಗಿ ನೋಡಿದಾಗ ಅರಿವಾಯಿತು…, ಹೌದು…, ಹಾವು- ನಾಗರಹಾವು!

ಅದು ಹಾದು ಹೋಗುವವರೆಗೆ ಕಾದಿದ್ದು…, ನಿಧಾನಕ್ಕೆ ಗರ್ಭಗುಡಿಯೊಳಕ್ಕೆ ನಡೆದೆ.

ಕೆಲವೊಮ್ಮೆ ಹಾಗೆಯೇ…, ಸಂದರ್ಭಕ್ಕೆ ಹೊಂದದ ಯೋಚನೆಗಳು ಬರುತ್ತದೆ! ನಡೆಯುತ್ತಿರುವ ಘಟನೆಗೂ ನಮ್ಮ ಮನಸ್ಸಿಗೂ ಸಂಬಂಧವೇ ಇರುವುದಿಲ್ಲ!

ಹದಿನಾಲಕ್ಕು ಮಹಡಿ ಎತ್ತರದ ಕಟ್ಟಡದ- ಟರಸಿನಮೇಲೆ ನಿಂತು ಕೆಳಕ್ಕೆ ನೋಡುತ್ತಿದ್ದೇನೆ! ಬೀಸುತ್ತಿರುವ ಗಾಳಿ…, ನಾನು ಕೆಳಕ್ಕೆ ಹಾರಿದರೂ ನನ್ನನ್ನು ಹಕ್ಕಿಯಂತೆ ತೇಲಿಸುತ್ತದೇನೋ- ಅನ್ನುವಂತಿದೆ! ಆದರೆ ಮನಸ್ಸಿನಲ್ಲಿ ಕಥೆ! ಚಿಕ್ಕವನಿದ್ದಾಗ ಓದಿದ ಸಣ್ಣ ಕಥೆ!

ವೃದ್ಧನೊಬ್ಬ ದೇವಸ್ಥಾನದ ದ್ವಾರದಮುಂದೆ, ದೇವರ ದಿಕ್ಕಿಗೆ ಕಾಲು ನೀಡಿ ಮಲಗಿದ್ದಾನೆ! ಇದನ್ನು ಕಂಡ ವ್ಯಕ್ತಿಯೊಬ್ಬ…,

ಏನು ಹಿರಿಯರೇ…, ಅಷ್ಟೂ ಅರಿವಿಲ್ಲವೇ…? ದೇವರಿಗೆ ಕಾಲು ತೋರಿಸಿ ಮಲಗಿದ್ದೀರಲ್ಲ!” ಎಂದ.

ಅಯ್ಯೋ…, ಅಪಚಾರವಾಯಿತು! ಆದರೇನು ಮಾಡಲಿ…? ನಾನು ಚಲಿಸಲಾರೆ! ದಯವಿಟ್ಟು ನನ್ನ ಕಾಲುಗಳನ್ನು ಬೇರೆ ದಿಕ್ಕಿಗೆ ತಿರುಗಿಸಿಟ್ಟು ಹೋಗಿ!” ಎಂದರಾ ವೃದ್ಧ!

ವ್ಯಕ್ತಿ ಗೌರವಪೂರ್ಣವಾಗಿಯೇ ಅವರನ್ನು ಎತ್ತಲು ಶ್ರಮಿಸಿದ. ಸಾಧ್ಯವಾಗಲಿಲ್ಲ. ನಂತರ ಕಾಲುಗಳನ್ನು ಮಾತ್ರ ಕಷ್ಟದಲ್ಲಿ ಎತ್ತಿ ಬೇರೆ ದಿಕ್ಕಿಗೆ ತಿರುಗಿಸಿಟ್ಟು ನೋಡುತ್ತಾನೆ…, ದೇವಸ್ಥಾನ ಅಲ್ಲಿದೆ! ತಾನು ನಿಜಕ್ಕೂ ಆತನನ್ನು ತಿರುಗಿಸಲಿಲ್ಲವೇ ಅನ್ನುವ ಗೊಂದಲದಲ್ಲಿ ಮತ್ತೊಮ್ಮೆ ಕಾಲುಗಳನ್ನು ತಬ್ಬಿಕೊಂಡು ತಿರುಗುತ್ತಾನೆ…, ಆತನೊಂದಿಗೆ ಭೂಮಿಯೇ ತಿರುಗಿದ ಭಾವ!

ಆತನೊಳಗೊಂದು ಪುಳಕ! ದೇವರಿಲ್ಲದ ದಿಕ್ಕದಾವುದು?

ವೃದ್ಧನ ಪಾದಕ್ಕೆ ಹಣೆ ತಾಗಿಸಿ ಹೊರಟು ಹೋದ!

ಕಥೆಯಿಂದ ಹೊರಬಂದು ಮತ್ತೊಮ್ಮೆ ಬಗ್ಗಿ ನೋಡಿದೆ! ಹಿಂದಿನಿಂದ ಒಂದು ಕರೆ…,

ಮಗಾ…! ನಿಮ್ಮೂರಿಗೆ ಇನ್ನೊಂದ್ಸಾರಿ ಹೋಗೋಣ ಅಂತಿದಾರೆ ಎಲ್ಲಾ!” ಎಂದ ಗೆಳೆಯ.

ಕೆಳಕ್ಕೆ ಹಾರಿ…, ದೇವರಿದ್ದರೆ ಸಾಯುವುದಿಲ್ಲ ಅನ್ನುವ ಪರೀಕ್ಷೆ ಮಾಡಬೇಕೆಂದುಕೊಂಡವನು…, ಅನಿರೀಕ್ಷಿತವಾಗಿ ಬಂದ ಗೆಳೆಯ- ದೇವರೇ ಬಂದು ಬೇಡ ಎಂದು ಹೇಳಿದಂತೆ ಭಾವಿಸಿ…, ಹಾಗೂ ಹಾರಿದರೆ ಸಾಯುತ್ತೇನೆ ಅನ್ನುವ ತೀರ್ಮಾನಕ್ಕೆ ಬಂದು…,

ಯಾವಾಗ ಹೋಗೋಣ?” ಎಂದೆ.

ಮೊಬೈಲನ್ನು ನಂಬಿ ಟಾರ್ಚ್ ತರದೇ ಹೋದದ್ದು ನನ್ನದೇ ತಪ್ಪು! ಅಮವಾಸ್ಯೆ! ಸ್ವಿಚ್‌ಆಫ್ ಆದ ಮೊಬೈಲನ್ನು ಮತ್ತೊಮ್ಮೆ ಆನ್ ಮಾಡಲು ಶ್ರಮಿಸಿ ನೋಡಿದೆ. ಆಗಲಿಲ್ಲ. ಅದನ್ನು ಜೇಬಿಗೆ ಹಾಕಿ ನಿಧಾನವಾಗಿ ನಡೆದೆ. ಕಾಲನ್ನು ಉಜ್ಜುವಂತೆಯೇ ನಡೆಯುತ್ತಿದ್ದೆ. ಏನಾದರೂ ಎಡವಿದರೆ ಕಷ್ಟ!

ಹೊಟ್ಟೆತುಂಬಾ ನೀರು ಕುಡಿದದ್ದರ ಪರಿಣಾಮ ಕಾಣಿಸಿಕೊಂಡಿತು.

ಎಲ್ಲಿ ಮಾಡಲಿ?

ಯಾವ ದಿಕ್ಕಿನಲ್ಲಿ ಏನಿದೆಯೋ!

ಕೊನೆಗೂ ತಡೆದುಕೊಳ್ಳಲಾಗದೆ ಸ್ವಲ್ಪವೇ ಸ್ವಲ್ಪ ಪಕ್ಕಕ್ಕೆ ತಿರುಗಿ ಮೂತ್ರವಿಸರ್ಜನೆಯನ್ನು ಮಾಡಿದೆ.

ಆಹಾ…, ಏನು ನೆಮ್ಮದಿ!

ಪುನಃ ನಡೆಯಲು ತಿರುಗಿದಾಗ ಗೊಂದಲ…, ಇಷ್ಟು ತಿರುಗಿದ್ದೆನೆ?

ಗೆಳೆಯರು ರೂಮಿನಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದರು. ನಾನು ಒಬ್ಬನೇ ದೇವಸ್ಥಾನಕ್ಕೆ ಹೋಗಿದ್ದೆ. ಅದ್ಭುತ ಶಾಂತ ವಾತಾವರಣದಲ್ಲಿ…, ಶಿವನ ಮುಂದೆ ಕುಳಿತು ಧ್ಯಾನಿಸದಿದ್ದರೆ ಹೇಗೆ?

ಸಮಯ ಸರಿದದ್ದು ತಿಳಿಯಲಿಲ್ಲ. ಕಣ್ಣು ಬಿಟ್ಟಾಗ ಮಸುಕು ಬೆಳಕು. ಸೂರ್ಯ ಅಸ್ತಮಿಸಿ ಎಷ್ಟು ಸಮಯವಾಗಿತ್ತೋ ಏನೋ!

ದೇವಸ್ಥಾನದಿಂದ ಎಷ್ಟು ದೂರ ಬಂದಿದ್ದೇನೆಂಬ ಅರಿವಿಲ್ಲ! ಈಗ ದೇವಸ್ಥಾನಕ್ಕೇ ಮರಳಿ, ಬೆಳಗ್ಗೆ ಎದ್ದು ಹೋದರೆ ಹೇಗೆ ಅನ್ನುವ ಚಿಂತೆ ಬಂದರೂ…, ದೇವಸ್ಥಾನದ ದಾರಿಯೂ ತಪ್ಪಿದರೆ ಕಷ್ಟ!

ಒಂದು ಕ್ಷಣ ನಿಂತೆ! ದೇವರ ಇರವನ್ನು ಪರೀಕ್ಷಿಸಲು ಒಳ್ಳೆಯ ಸಂದರ್ಭ! ಲೆಕ್ಕವಿಟ್ಟುಕೊಳ್ಳದೆ ನಿಂತಲ್ಲಿಯೇ ಬುಗುರಿಯಂತೆ ತಿರುಗಿದೆ. ತಲೆ ಸುತ್ತುವಂತಾದಾಗ ನಿಂತು…, ದೇಹದ ನಿಯಂತ್ರಣವನ್ನು ತಂದುಕೊಂಡು ಹೆಜ್ಜೆ ಹಾಕಲಾರಂಭಿಸಿದೆ. ನಾನು ನಡೆಯುವ ದಿಕ್ಕು ರೂಮನ್ನು ತಲುಪಿದರೆ ದೇವರಿಲ್ಲ! ದೇವಸ್ಥಾನವನ್ನು ತಲುಪಿದರೆ ದೇವರಿದ್ದಾರೆ!

ಇದು ದೇವಸ್ಥಾನದೆಡೆಗಿನ ನನ್ನ ಸೆಳೆತವನ್ನು ಸೂಚಿಸಿದರೂ…, ರೂಮಿಗೆ ತಲುಪಿದರೆ ದೇವರಿದ್ದಾರೆ ಅನ್ನುವುದು ಯಾಕೋ ವಿರೋಧಾಭಾಸವಾಗಿ ತೋರಿತು! ದೇವಸ್ಥಾನ ತಲುಪಿದರೇನೇ ದೇವರು!

ಮುಂದಕ್ಕೆ ನಡೆದಷ್ಟೂ ಯಾವುದೋ ಅವ್ಯಕ್ತ ಶಬ್ದವೊಂದು ನನ್ನೆಡೆಗೆ ಬರುತ್ತಿರುವ ಅನುಭವ!

ಇನ್ನೊಂದೆರಡು ಹೆಜ್ಜೆ…, ಆನೆ!

ದೆವ್ವ ಬೂತಗಳಬಗ್ಗೆ ಹೆದರಿಕೆಯಿಲ್ಲ! ಅವುಗಳಿಂದ ತಪ್ಪಿಸಿಕೊಳ್ಳಲೂಬಹುದು! ಆದರೆ ಪ್ರಾಣಿಗಳು?

ಹಿಂದಿರುಗಿ ಓಡಿದರೆ…, ಮುಂದಿನಿಂದ ಬರುತ್ತಿರುವ ಆನೆಗೆ ನಾನೇ- ನನ್ನನ್ನು ಹಿಂಬಾಲಿಸು- ಅಂದಂತಾಗುತ್ತದೆಂದು ಎಡಕ್ಕೆ ತಿರುಗಿ ಓಡಿದೆ. ಸ್ವಲ್ಪ ದೂರ…, ಕಲ್ಲೊಂದಕ್ಕೆ ಎಡವಿ ದೊಪ್ಪನೆ ಬಿದ್ದೆ.

ಮೂತ್ರದ ವಾಸನೆ!!

ಪ್ರಕೃತಿಯೂ ಅದರ ನಿಯಮವೂ! ಎಲ್ಲವೂ ನಾವಂದುಕೊಂಡಂತೆ ನಡೆದರೆ ಅವ್ಯಕ್ತತೆಗೆ ಅರ್ಥವೇನು?!

ನಾನು ಸಹಜವಾಗಿ ಮಾಡುತ್ತಿದ್ದ ತಪ್ಪು…, ದೇವರ ಇರುವಿಕೆಯನ್ನು ಹೊರಗಡೆ ಹುಡುಕುತ್ತಿದ್ದದ್ದು! ಯಾವುದೇ ಪ್ರಶ್ನೆಗಳಿಗೆ ಉತ್ತರ ನಮ್ಮ ಒಳಗೆ ಇರುತ್ತದೆಯೇ ಹೊರತು ಹೊರಗಲ್ಲ!

ದೇವಸ್ಥಾನಗಳೂ ವಿಗ್ರಹಗಳೂ ನಂಬಿಕೆಗಳೂ ನಮ್ಮ ಮನಸ್ಸನ್ನು ಅದರಲ್ಲಿ ಕೇಂದ್ರೀಕರಿಸಲು ಇರುವ ಸಲಕರಣೆಗಳು, ನಮ್ಮದೇ ಸೃಷ್ಟಿಗಳು, ಹೊರತು ಅವುಗಳೇ ಉತ್ತರಗಳಲ್ಲ!

ಹಾಗಿದ್ದರೆ ದೇವರಿದ್ದಾನೆಯೇ? ಎಲ್ಲಿ?

ಊರಿನಿಂದ ಮರಳುವಾಗ ಗೆಳೆಯರ ಒತ್ತಡಕ್ಕೆ ಮಣಿದು ಅವರೊಂದಿಗೆ ಬಂದಿದ್ದೆ…, ಪ್ರಶಸ್ತವಾದ ಶಿವನ ದೇವಸ್ಥಾನ!

ಇಲ್ಲಿ ಅವರಿಗೆ ಯಾವ ಹೆದರಿಕೆಯೂ ಇಲ್ಲ! ಮನುಷ್ಯನ ನಂಬಿಕೆಗಳೇ ಅರ್ಥವಾಗುವುದಿಲ್ಲ!

ನೀವು ಒಳಕ್ಕೆ ಹೋಗಿ ಬನ್ನಿ ನಾನು ಹೊರಗಿರುತ್ತೇನೆ!” ಎಂದೆ.

ಅವರಿಗೆ ಗೊತ್ತು! ಬಲವಂತಕ್ಕೆ ನಾನು ಮಣಿಯುವುದಿಲ್ಲ! ಒಮ್ಮೆ ತೀರ್ಮಾನಿಸಿದರೆ ಮುಗಿಯಿತು!

ನನ್ನ ದೃಷ್ಟಿ…, ದೇವಸ್ಥಾನದ ದಿಕ್ಕಿಗೆ ಕಾಲು ನೀಡಿ ಕುಳಿತಿರುವ ವೃದ್ಧನ ಮೇಲಿತ್ತು.

ಗೆಳೆಯರು ಕ್ಯೂವನ್ನು ಸೇರಿದರು. ನಾನು ವೃದ್ಧನನ್ನು!

ಆತನಂತೆಯೇ ಕಾಲು ನೀಡಿ ಕುಳಿತೆ. ನನ್ನನ್ನು ನೋಡಿ ನಕ್ಕರು.

ಉತ್ತರ ಸಿಕ್ಕಿತೆ?” ಎಂದರು.

ಸ್ವಲ್ಪ!” ಎಂದೆ.

ಅಹಂ ಬ್ರಹ್ಮಾಸ್ಮಿ ಅಂದರೇನು ಗೊತ್ತಾ?” ಎಂದರು.

ನಾನೇನೂ ಮಾತನಾಡಲಿಲ್ಲ.

ಕಾಡಿನೊಳಗೊಂದು ದೇವಸ್ಥಾನ! ಅದರೊಳಗೆ ಪಳಪಳನೆ ಹೊಳೆಯುವ ಶಿವಲಿಂಗ! ಆ ಲಿಂಗವನ್ನು ಬೇರೆ ಎಲ್ಲಿ ನೋಡಿದೆ?” ಎಂದರು.

ಅವರಿಗೆ ತಿಳಿದಿದೆಯೆಂಬ ಭಾವ ಸ್ವಲ್ಪ ಮುಜುಗರವುಂಟುಮಾಡಿದರೂ…, ಅಹಂ ಬ್ರಹ್ಮಾಸ್ಮಿ ಎಂದೆಮೇಲೆ…, ಪ್ರತಿಯೊಂದೂ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು ಅನ್ನುವಲ್ಲಿ…, ಅವ್ಯಕ್ತವಾಗಿ ಏನೋ ಹೊಳೆದಂತಾಯಿತು!

ಆದರೆ…, ನಾನು ಮೂತ್ರವಿಸರ್ಜನೆ ಮಾಡುವಾಗ ಅಲ್ಲಿ ಶಿವಲಿಂಗವಿರುತ್ತದೆನ್ನುವ ಕಲ್ಪನೆಯಾದರೂ ಹೇಗೆ ಬರುತ್ತದೆ? ಅಷ್ಟು ಕತ್ತಲಿತ್ತಲ್ಲಾ…?” ಎಂದೆ.

ಬ್ರಹ್ಮಾಂಡವೇ ಪ್ರತಿಧ್ವನಿಸುವಂತೆ ನಕ್ಕರು ಆತ!

ಮೂತ್ರವಿಸರ್ಜನೆಯನ್ನು ಯಾವುದರಮೇಲೆ ಮಾಡಿದೆ ಅನ್ನುವುದಲ್ಲವೋ…, ಯಾವುದರಿಂದ ಮಾಡಿದೆ ಅನ್ನುವುದು ಪ್ರಶ್ನೆ!” ಎಂದರು.

ನನ್ನ ಜೀವನದಲ್ಲಿಯೇ ನನಗಷ್ಟು ಗೊಂದಲವಾಗಿರಲಿಲ್ಲ!

ಶಿವೋಹಂ!” ಎಂದರು.

ಇಲ್ಲ ಎನ್ನುವಂತೆ ಅಡ್ಡಡ್ಡಲಾಗಿ ತಲೆಯಾಡಿಸಿದೆ.

ಲಿಂಗವಿರುವುದರಿಂದ ಶಿವೋಹಂ- ನಾನೇ ಶಿವ- ಅನ್ನುವಹಾಗಿದ್ದರೆ…, ಹೆಣ್ಣು?” ಎಂದೆ.

ಮತ್ತೊಮ್ಮೆ ಗಹಗಹಿಸಿ ನಕ್ಕರು ಆತ…,

ಪುರುಷನೆಂಬ ಲಿಂಗ ನೆಲೆಗೊಂಡಿರುವುದೇ ಪ್ರಕೃತಿಯೆಂಬ ಯೋನಿಯ ಮಧ್ಯೆ- ಅಲ್ಲವೇನೋ ಶಿವನೇ…!”

ಗಾಢಮೌನ!

ಅಹಂಬ್ರಹ್ಮಾಸ್ಮಿ!! ನಾನೂ ಬ್ರಹ್ಮ! ಬ್ರಹ್ಮದಲ್ಲಿ ಒಂದು ಭಾಗ! ಅಖಂಡಬ್ರಹ್ಮಾಂಡವನ್ನು ತೆಗೆದುಕೊಂಡರೆ…, ನಾನು ಬ್ರಹ್ಮ!

ವೈಯುಕ್ತಿಕವಾಗಿ ತೆಗೆದುಕೊಂಡರೆ- ಯಾವ ರೂಪದಲ್ಲಿ ನಾನು ಬ್ರಹ್ಮ?

ಶಿವೋಹಂ!!

ಪ್ರಕೃತಿಯ ಕಂಪನವೊಂದು ಹೃದಯದಲ್ಲಿ ಪ್ರತಿಧ್ವನಿಸುತ್ತಿದ್ದಾಗ…, ಯಾರೋ ನನ್ನನ್ನು ಅಲ್ಲಾಡಿಸಿ ಕರೆಯುತ್ತಿದ್ದರು…,

ನಿದ್ರೆ ಮಾಡಿದ್ಯೇನೋ…? ಮಧ್ಯೆ ಮಂಗಳಾರತಿಗೆಂದು ಗರ್ಭಗುಡಿ ಮುಚ್ಚಿದ್ದರು…, ಸೋ ಲೇಟಾಯ್ತು! ಬಾ ಹೋಗೋಣ!”

Comments

  1. ಅದ್ಭುತ ಕಥೆ ತುಂಬಾ ಚಂದವಿದೆ 👌👌🌹🙏

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!