ಅಮವಾಸ್ಯೆ!
ಬಲಗಣ್ಣು ಅದುರುತ್ತಿತ್ತು…, ಕಿವಿಯೊಳಗೆ ಗೆಳೆಯನ ಮಾತುಗಳು ಮೊರೆಯುತ್ತಿತ್ತು!
“ನಾಳೆ ಅಮವಾಸ್ಯೆ ಮನು! ಒಬ್ಬನೆ ಹೊರಗಡೆ ಸುತ್ತಾಡಬೇಡ! ಅದರಲ್ಲೂ ಕತ್ತಲಲ್ಲಿ ಬೆಟ್ಟ ಹತ್ತಬೇಡ!”
ಸಾಮಾನ್ಯರ ನಂಬಿಕೆಯ ಪ್ರಕಾರ…, ಯಾವ ಕಣ್ಣು ಅದುರಿದರೆ ಒಳ್ಳೆಯದು ಯಾವುದು ಕೆಟ್ಟದು ಎಂದು ಕೂಡ ಅರಿಯದವ ನಾನು! ನನಗೆಂತ ಅಮವಾಸ್ಯೆ- ಹುಣ್ಣಿಮೆ!?
ಬೆಟ್ಟ…!
ನನ್ನ ಬದುಕಿನ ಅವಿಭಾಜ್ಯ ಅಂಗ!
ದೈಹಿಕವಾಗಿಯೂ ಮಾನಸಿಕವಾಗಿಯೂ ನಾನಿಂದು ಇಷ್ಟು ದೃಢವಾಗಿದ್ದೇನೆಂದರೆ ಅದರ ಮೂಲ ಕಾರಣ- ಬೆಟ್ಟ!
ಕತ್ತಲಲ್ಲಿಯೇ ಶುರುಮಾಡಿ ಕತ್ತಲಿರುವಾಗಲೇ ಮುಗಿಸದಿದ್ದರೆ ಬೆಟ್ಟ ಹತ್ತಿದಂತೆಯೇ ಅನ್ನಿಸುವುದಿಲ್ಲ!
ಅದಕ್ಕೆ ಕಾರಣ…, ಅಷ್ಟು ಹೊತ್ತಿಗೆ ಯಾರೆಂದರೆ ಯಾರೂ ಇರುವುದಿಲ್ಲ ಅನ್ನುವುದು!
ಬೆಟ್ಟ ಹತ್ತುವಾಗ…, ಆ ದಟ್ಟ ಕತ್ತಲಲ್ಲಿ, ಕಾಡಿನಲ್ಲಿ, ಬಾವಲಿ, ಮುಳ್ಳುಹಂದಿ, ಮೊಲ, ಮುಂಗುಸಿ, ನಾಯಿ…, ಇದಿಷ್ಟು ಅರಿವಿಗೆ ಬಂದಿರುವುದು! ಇದಲ್ಲದೆ ಅತಿಥಿಯಂತೆ ಅಪರೂಪಕ್ಕೆ ಬರುವ ಚಿರತೆ…, ಅರಿವಿಗೆ ಎಟುಕದ ವಿಚಿತ್ರ ಶಬ್ದಗಳನ್ನು ಹೊರಡಿಸುವ ಪಕ್ಷಿ ಕ್ರಿಮಿ ಕೀಟಗಳು, ಪೊದೆಗಳ ಅಲುಗಾಟಕ್ಕೆ ಕಾರಣವಾಗುವ ಜಂತುಗಳು ಮತ್ತು ನಾನು!!!
ಅದೊಂದು ಅದ್ಭುತ ಅನುಭವ!
ಬೆಟ್ಟ ಇಳಿದು…, ಕೊನೆಯ ಹಂತಕ್ಕೆ ತಲುಪಿದಾಗ…, ಆಗ ಹತ್ತಲು ಶರು ಮಾಡುವ ಜನ ನನ್ನನ್ನು ಆಶ್ಚರ್ಯದಿಂದ ನೋಡಬೇಕು! ಅದೊಂದು ಅಹಂ!
ಗೆಳೆಯನ ಮಾತುಗಳನ್ನು ಕಡೆಗಣಿಸಿ…, ಎಂದಿನಂತೆ ಬೆಳಗ್ಗೆ ಐದುಗಂಟೆಗೆ ಬೆಟ್ಟದ ತಪ್ಪಲನ್ನು ತಲುಪಿದೆ.
ಅಮವಾಸ್ಯೆಯ ಕತ್ತಲು! ಗೆಳೆಯನ ಮಾತಿನ ಪ್ರಭಾವದಿಂದ ಹೊರಬರಲು…, ನಿನ್ನೆ ಬರೆದ ಕಥೆಯಬಗ್ಗೆ ಯೋಚಿಸಲಾರಂಭಿಸಿದೆ!
ಕಥೆಗಾರ ಹಾಗೆ ಮಾಡಬಹುದೆ?
ಯಾರೋ ನಮಗೆ ನಂಬಿಕೆಯಿಂದ ಹೇಳಿದ ಮಾತುಗಳನ್ನು ಕಥೆಯ ರೂಪದಲ್ಲಿ ಬರೆಯಬಹುದೇ?
ಯಾರದೋ ಅನುಭವಗಳನ್ನು ನಮ್ಮ ಅನುಭವದಂತೆ ಬರೆದರೇನು ತಪ್ಪು?
ನಿನ್ನೆಯ ಕಥೆಯಲ್ಲಿ ವ್ಯಕ್ತಿಯೊಬ್ಬ ಹೇಳಿದ ತನ್ನ ಮಾನಸಿಕ ಸಮಸ್ಯೆಯನ್ನು…, ಹೆಣ್ಣಿನೆಡೆಗಿನ ಆತನ ಆಕರ್ಷಣೆ…, ಅದರಿಂದ ಅನುಭವಿಸಬೇಕಾಗಿ ಬಂದ ಮಾನಸಿಕ ತುಮುಲಗಳನ್ನು ನಾನು ನನ್ನದೇ ಧಾಟಿಯಲ್ಲಿ ಕಥೆಯಾಗಿ ಬರೆದೆ! ಕಥೆಯ ಕೊನೆಯಲ್ಲಿ…, ಆ ಸಮಸ್ಯೆಯಿಂದ ಹೊರಬರುವುದೆನ್ನುವುದು ಅಸಾಧ್ಯವೆಂದೂ…, ಮರಣದ ಹೊರತು ಬೇರೆ ದಾರಿಯಿಲ್ಲವೆಂದೂ ಬರೆದಿದ್ದೆ!!
“ಏನ್ಸಾರ್…, ನಾನು ಹೇಳಿದ ವಿಷಯವನ್ನು ಕಥೆಯಾಗಿ ಬರೆದುಬಿಟ್ಟಿದ್ದೀರ?” ಎಂದು ಅಮಾಯಕವಾಗಿ ನಗಾಡಿದ್ದ!
ಒಂದುಕ್ಷಣ ಸಣ್ಣ ಕೀಳರಿಮೆಯೊಂದು ಮನದಲ್ಲಿ ಹಾದು ಹೋದರೂ…,
“ಕೆಲವರಾದರೂ ಆ ಮನಸ್ಥಿತಿಯನ್ನು ಅರಿತು ಅದರಿಂದ ಹೊರಬಂದರೆ ಒಳ್ಳೆಯದಲ್ಲವಾ?” ಎಂದೆ.
ಆತನೇನೂ ಮಾತನಾಡಲಿಲ್ಲ. ಮುಗುಳುನಕ್ಕು ಸುಮ್ಮನಾಗಿದ್ದ.
ಕೆಲವೊಮ್ಮೆ ನಾವು ಬರೆಯುವ ಕಥೆಗಳ ಪರಿಣಾಮದ ಅರಿವು ನಮಗಿರುವುದಿಲ್ಲ!
ಕೆಲವು ಕಥೆಗಳನ್ನು ಬರೆದನಂತರ ಆ ಒಂದು ಟ್ರಾನ್ಸ್‌ನಿಂದ ಹೊರಬರಲು ಕಥೆಗಾರನಿಗೇ ಅಷ್ಟು ಕಷ್ಟವಾಗುವಾಗ…, ಅದನ್ನು ಓದಿದವರಿಗೂ ಖಂಡಿತಾ ಅದರ ಪ್ರಭಾವ ತಟ್ಟುತ್ತದೆ!
ಅದರಲ್ಲೂ ಆ ಬರಹ ತಮ್ಮ ಅನುಭವವಾಗಿದ್ದು- ಇನ್ನೊಬ್ಬರು ಬರೆದರೆ?
ಯೋಚನೆಯಿಂದ ಹೊರತರುವಂತೆ ಹಂದಿಯೊಂದು ಗುಟುರು ಹಾಕಿತು! ಸಾಮಾನ್ಯವಾಗಿ ನನ್ನ ಮುಂದೆಯೇ ಹಾದು ಹೋಗುವ ಮುಳ್ಳು ಹಂದಿಗಳಿಗೆ ಯಾವುದೇ ಆತುರವೋ, ಹೆದರಿಕೆಯೋ ಇರುವುದಿಲ್ಲ! ಇಂದೇಕೋ ತನ್ನ ಮುಳ್ಳುಗಳನ್ನು ನಿಮಿರಿಸಿಕೊಂಡು ಗಾಬರಿಯಿಂದ ಓಡಿತು!
ಸ್ವಲ್ಪ ಹೆದರಿಕೆ ಮನವನ್ನಾಕ್ರಮಿಸಿತು!
ಚಿರತೆಯೇನಾದರೂ….?!
ಏಕಾಗ್ರತೆಯಿಂದ ಆಲಿಸಿದೆ. ಇಲ್ಲ…, ಯಾವುದೇ ಶಬ್ದವಿಲ್ಲ!
ಸಾಮಾನ್ಯವಾಗಿ ವಾಸನೆಯಿಂದಲೇ ಯಾವ ಪ್ರಾಣಿಗಳೆಂದು ಕಂಡು ಹಿಡಿಯುವವ ನಾನು! ಆದರೆ ಕಳೆದ ಎರಡು ವರ್ಷದಿಂದ ಮೂಗಿಗೆ ಸೈನಸೈಟಿಸ್ ಆಗಿ ವಾಸನೆಯೇ ಬರುವುದಿಲ್ಲ!
ಆಪರೇಷನ್ ಇಲ್ಲದೆಯೇ ವಾಸಿ ಮಾಡಬೇಕೆಂಬ ಹಠ! ಅದಕ್ಕೋ ವಾಸಿಯಾಗುವುದಿಲ್ಲವೆಂಬ ಹಠ! ಆದ್ದರಿಂದ ಈಗ ಸುತ್ತಮುತ್ತಲಿನ ಪರಿಣಾಮವನ್ನು ಅರಿಯಲು ಕಿವಿಯನ್ನು ಅವಲಂಬಿಸಬೇಕಾಗಿದೆ!
ಮುನ್ನೂರನೇ ಮೆಟ್ಟಿಲನ್ನು ದಾಟಿದಾಗ…, ನಾಲ್ಕೈದು ನಾಯಿಗಳು ವಿಕಾರವಾಗಿ ಕೂಗುತ್ತಾ ಓಡಿ ಹೋದವು!!
ಮೊದಲೇ ಏದುಸಿರಿನ ಹೃದಯಬಡಿತ! ಅದರೊಂದಿಗೆ ಎಂದಿನ ತಾಳವಲ್ಲದೆ ಪ್ರಕೃತಿಯಲ್ಲೇನೋ ವ್ಯತ್ಯಾಸ! ಹೃದಯ ಸಾಮಾನ್ಯಕ್ಕಿಂತ ಹೆಚ್ಚಾಗಿ ಬಡಿಯಲಾರಂಬಿಸಿತು! ಮೊಬೈಲ್ ಟಾರ್ಚ್ ಹಾಕೋಣವೆಂದರೆ- ಅಹಂ!!
ಹಿಂದಿರುಗುವ ಮನಸ್ಸಾಗದೆ ಹತ್ತಿದೆ!
ಮಧ್ಯೆ ಮಧ್ಯೆ ಕಾಡಿನೊಳಗೆ ಹೆದರಿಕೆಯಿಂದ ಪ್ರಾಣಿಗಳು ಓಡುತ್ತಿರುವ ಭಾವ ಬರುವ ಪೊದೆಗಳ ಚಲನೆಯ ಹೊರತು ಬೇರೆ ಡಿಸ್ಟರ್ಬೆನ್ಸ್ ಯಾವುದೂ ಇರಲಿಲ್ಲ!
ಸಾವಿರದ ಮೆಟ್ಟಿಲು ದಾಟಿದಮೇಲೆ ನಿರಾಳ! ಸ್ಟ್ರೀಟ್ ಲೈಟ್ ಇರುತ್ತದೆ! ಬೆಟ್ಟದ ಮೇಲೆ ವಾಸಿಸುವ ಜನರ ಸಣ್ಣ ಅಲುಗಾಟ ಶುರುವಾಗಿರುತ್ತದೆ!
ದೇವಸ್ಥಾನವನ್ನೊಂದು ಸುತ್ತು ಹೊಡೆದು ಇಳಿಯಲಾರಂಬಿಸಿದೆ.
ಎಂದಿನ ರಾತ್ರಿ ಕೀಟಗಳ ಸದ್ದು, ಎಂದಿನ ಸಣ್ಣ ಪುಟ್ಟ ಚಲನೆಗಳ ಹೊರತು ಪ್ರತ್ಯೇಕ ಅನುಭವವೇನೂ ಆಗಲಿಲ್ಲ.
ನೂರನೇ ಮೆಟ್ಟಿಲಿನಿಂದ ಕೆಳಕ್ಕೆ ಇಳಿಯುವಾಗ ಒಬ್ಬರು ಇಬ್ಬರಂತೆ ಜನ ಹತ್ತಲು ಶುರು ಮಾಡಿದ್ದರು. ನಾನು ಕೊನೆಯ ಮೆಟ್ಟಿಲಿನಮೇಲೆ ಕುಳಿತೆ. ನಾಯಿಯೊಂದು ನನ್ನನ್ನು ನೋಡಿ ಬೊಗಳಲಾರಂಬಿಸಿತು!
ಅದನ್ನು ಸವರಿದೆ.
ನನ್ನ ಸುತ್ತಲೂ ಸುತ್ತತೊಡಗಿತು.
ಪ್ರತಿದಿನ ಮೆಟ್ಟಿಲಿನ ಎರಡೂಕಡೆಯ ಕಟ್ಟೆಯಮೇಲೆ ಕುಳಿತು ಹರಟೆ ಹೊಡೆಯುವ ನಾಲ್ವರು ವೃದ್ಧರ ಆಗಮನವಾಯಿತು!
“ಈ ನಾಯಿಗೇನು ಬಂತು ರೋಗ!” ಎಂದರು ಒಬ್ಬರು.
“ಎಲ್ಲಿಯೋ ನೋಡಿ ಬೊಗಳುವ ನಾಯಿಯನ್ನು ಕಂಡರೆ ನನಗೆ ಹೆದರಿಕೆ! ಅವುಗಳ ಗ್ರಹಣ ಶಕ್ತಿ ತುಂಬಾ ಜಾಸ್ತಿಯಂತೆ!” ಎಂದರು ಇನ್ನೊಬ್ಬರು!
“ಅದೂ ಅಲ್ಲದೆ ನಿಂತಕಡೆಯೇ ಅದು ಸುತ್ತುತ್ತಿರೋದು ನೋಡಿ! ನಿನ್ನೆ ತಾನೆ ಅಮವಾಸ್ಯೆ ಮುಗಿದಿದೆ!” ಎಂದರು ಮತ್ತೊಬ್ಬರು!
“ನಿನ್ನೆ ಆ ಹುಡುಗನ ಮರ್ಡರ್ ಬೇರೆ ಆಗಿದೆ! ಅದೇ…, ನಾವು ಬರುವಾಗ ಸರಿಯಾಗಿ ಇಳಿದು ಹೋಗ್ತಾನಲ್ಲ ಅವನು! ಅವನೊಬ್ಬ ಕಥೆಗಾರನಂತೆ! ಯಾರೋ ಹೇಳಿದ ವಿಷಯವನ್ನು ಕಥೆಯಾಗಿ ಬರೆದನಂತೆ! ಅದು ಆ ವಿಷಯವನ್ನು ಹೇಳಿದವನಿಗೆ ಹಿಡಿಸಲಿಲ್ಲವಂತೆ! ಅವಮಾನ ಆಯ್ತು ಅಂತ ಬೆಳ್‌ಬೆಳ್ಗೇನೆ ಹಿಂಬಾಲಿಸಿಕೊಂಡು ಬಂದು ಕೊಂದುಬಿಟ್ಟನಂತೆ…!” ನಾಲ್ಕನೆಯವರು ಹೇಳುತ್ತಿದ್ದರು!
ನಾನು ಅವರನ್ನೊಮ್ಮೆ ನೋಡಿ ನಕ್ಕೆ! ಅದು ಕಾಣಲು…, ಪ್ರಾಣಿಗಳಿಗಿರುವ ಗ್ರಹಣಶಕ್ತಿ ಅವರಿಗೆಲ್ಲಿದೆ!
ನನ್ನ ಹಿಂದೆಯೇ ಬೊಗಳುತ್ತಾ ಬಂದ ನಾಯಿಯನ್ನು ಕಲ್ಲೆಸೆದು ಓಡಿಸಿದರು!
ನಾನು ನಾಳೆಗಾಗಿ ಕಾಯುತ್ತಿದ್ದೇನೆ!
Comments
Post a Comment