ಅಮ್ಮ ಮಗನ ರಹಸ್ಯ!

 

ರಿಸ್ಕ್ ಬೇಕ ಅಣ್ಣಾ?” ಎಂದ ತಮ್ಮ.

ರಹಸ್ಯ ಬೇಧಿಸಿಯಾಯಿತಲ್ಲ? ಇನ್ನೇನು ಹೆದರಿಕೆ?” ಎಂದೆ.

ಆದರೂ…! ಸಾವಿರದ ಒಂಬೈನೂರ ಎಪ್ಪತ್ತ ಎರಡರಲ್ಲಿ ಕೊಲೆಯಾದವಳು! ಇಷ್ಟು ದಿನ- ಅಂದರೆ ಎರಡುಸಾವಿರದ ಇಪ್ಪತ್ತ ಎರಡರವರೆಗೆ…, ಐವತ್ತು ವರ್ಷ- ಇದೇ ಬಿಲ್ಡಿಂಗಲ್ಲಿ ಇದ್ದಳೆಂದರೆ…! ಅದೇ ಮನೆ ಬೇಕ?” ಎಂದ.

ಕೊಲೆಯಾದವಳು ಇದ್ದಳು- ಅಂದರೆ ಏನರ್ಥ!?” ಎಂದೆ.

ಮತ್ತೆ? ಇಷ್ಟುದಿನ ಆ ಮನೆಯಲ್ಲಿ ಅಸಹಜವಾಗಿ ನಡೆಯುತ್ತಿದ್ದ ಘಟನೆಗಳಬಗ್ಗೆ ನಿನಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ!?”

ಅದೆಲ್ಲಾ ಕಟ್ಟು ಕಥೆಯೋ…! ಆ ಸ್ಕೆಲ್ಟನ್ ಸಿಕ್ಕ ನಂತರ ಹುಟ್ಟಿಕೊಂಡಿದ್ದು!” ಎಂದೆ.

ಆದರೂ…!” ಎಂದ.

ನೋಡೇ ಬಿಡೋಣ! ಏನಾಗುತ್ತದೆಂದು!” ಎಂದೆ.

ಒಬ್ಬನೇ ಮನೆಯನ್ನು ಪ್ರವೇಶಿಸಿದೆ. ಕೊನೆಯ ಕ್ಷಣದಲ್ಲಿ ತಮ್ಮ ಕೈಕೊಟ್ಟ! ಹೆದರಿಕೆ! ನನಗೋ ಅದೇ ಮನೆಬೇಕು! ಹಾರರ್‌ ಸಿನೆಮಾದ ಶೂಟಿಂಗ್‌ಗೆ ಹೇಳಿ ಮಾಡಿಸಿದಂತಹ ಮನೆ. ಆರು ತಿಂಗಳಿಗೆ ಬಾಡಿಗೆಗೆ ತೆಗೆದುಕೊಂಡಿದ್ದೆ.

ಈ ಮನೆಯಬಗ್ಗೆ ಏನೇನೋ ಕಥೆಗಳು ಹುಟ್ಟಿಕೊಂಡಿತ್ತು. ಅದಕ್ಕೆ ಆಧಾರವಾಗಿ ಆ ಮನೆಯಿಂದ ಮೊನ್ನೆಮೊನ್ನೆತಾನೆ ರಹಸ್ಯವೊಂದನ್ನು ಕಂಡುಕೊಂಡಿದ್ದರು.

ಬಟ್ಟೆ ಒಗೆಯಲು ನಿರ್ಮಿಸಿದ್ದ ಕಟ್ಟೆ- ಕಾಂಕ್ರೀಟ್ ಕಟ್ಟೆ! ಬಿರುಕು ಬಿಟ್ಟು ಅದರಲ್ಲಿದ್ದ ಮಾನವನ ಅಸ್ಥಿಪಂಜರ ಕಾಣಿಸಿಕೊಂಡಿತ್ತು! ಪರೀಕ್ಷೆ ನಡೆಸಿದಾಗ- ಮೂವತ್ತು ವರ್ಷದ ಹೆಣ್ಣಿನ ಸ್ಕೆಲ್ಟನ್! ಮತ್ತೂ ಸಂಶೋಧನೆ ನಡೆಸಿದಾಗ…, ಅದೇ ಮನೆಯಲ್ಲಿ ಐವತ್ತು ವರ್ಷ ಮುಂಚೆ ವಾಸವಿದ್ದ ಹೆಣ್ಣಿನ ಅಸ್ಥಿಪಂಜರ!

ಆಕೆಯಬಗ್ಗೆ ಹುಡುಕಾಟಗಳು ನಡೆದ ಕಥೆಗಳು, ಪ್ರಿಯಕರನೊಂದಿಗೆ ಓಡಿಹೋಗಿರಬಹುದೆಂಬ ಶಂಕೆ! ಕೊನೆಗೆ ಗಂಡ ಆತ್ಮಹತ್ಯೆಗೆ ಶ್ರಮಿಸಿ ಹೇಗೋ ಬದುಕಿ ಮನೆಯನ್ನು ಮಾರಿ ಒಂದು ವರ್ಷದ ಮಗನೊಂದಿಗೆ ಹೊರದೇಶಕ್ಕೆ ಹೊರಟುಹೋಗಿದ್ದು…, ಎಲ್ಲವೂ ಇತಿಹಾಸ!

ಗಂಡನೇನೋ ಮನೆ ಮಾರಿದ! ಆದರೆ ಕೊಂಡುಕೊಂಡವರಿಗೆ ಆ ಮನೆಯಲ್ಲಿ ಇರಲಾಗದೆ ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದರು! ಯಾರೊಬ್ಬರೂ ಕೂಡ ಒಂದು ತಿಂಗಳಿಗಿಂತ ಹೆಚ್ಚು ಇರಲಿಲ್ಲ!

ಆ ಮನೆಯಲ್ಲಿ ಯಾರೋ ಇರುವಂತೆ! ಹೆಣ್ಣಿನ ಅಸಹಜ ಶಬ್ದ ಕೇಳಿಸಿದಂತೆ! ಯಾರೋ ಅಳುತ್ತಿರುವಂತೆ! ಕೆಲವೊಮ್ಮೆ ನಗುತ್ತಿರುವಂತೆ! ನೆರಳುಗಳು ಓಡಾಡಿದಂತೆ! ಸೆಜ್ಜೆಯಮೇಲೆ ಯಾರೋ ಕುಳಿತುಕೊಂಡಿರುವಂತೆ…, ಹೀಗೆ ಏನೇನೋ ಕಥೆಗಳು!

ಕೊನೆಗೆ ಆ ಮನೆ ಅನಾಥವಾಗಿ ಕೊಂಡುಕೊಂಡವರಿಗೆ ಹೊರೆಯಾಗಿ ಬಿದ್ದುಕೊಂಡಿತ್ತು!

ಈಗಲೂ ಅವರು ಆ ಮನೆಯನ್ನು ನನಗೆ ಕಡಿಮೆ ರೇಟಿಗೆ ಆಫರ್ ಮಾಡಿದ್ದರು! ನನಗೆ ಮನೆಯ ಅಗತ್ಯವಿರಲಿಲ್ಲ..! ಆದರೂ…, ಆರುತಿಂಗಳು ಇದ್ದು ನೋಡುತ್ತೇನೆ- ಹಿಡಿಸಿದರೆ ಕೊಂಡುಕೊಳ್ಳುತ್ತೇನೆ- ಅಂದಿದ್ದೆ.

ಒಂದು ಏಕರೆ ಪ್ರದೇಶ. ರಬ್ಬರ್‌ತೋಟ ಮೇಂಟೆನೆನ್ಸ್ ಇಲ್ಲದೆ ಕಾಡುಬಿದ್ದು ಹೋಗಿತ್ತು. ಜೇಡರ ಬಲೆಗಳು, ಹುತ್ತಗಳು, ಉದುರಿದ ಎಲೆಗಳು…, ನನಗೇಕೋ ಆ ಪ್ರದೇಶ ತುಂಬಾ ಇಷ್ಟವಾಯಿತು.

ಈ ಸಿನೆಮಾದ ಶೂಟಿಂಗ್‌ನ ನಂತರ ಮನೆಯನ್ನೂ ಮನೆಯ ಸುತ್ತಮುತ್ತಲೂ ಕ್ಲೀನ್ ಮಾಡಿಸಬೇಕು ಅಂದುಕೊಂಡೆ. ಮುಂದಿನ ಸಿನೆಮಾಗೆ ಉಪಯೋಗಕ್ಕೆ ಬರಬಹುದು!

ಕಥೆ ರೆಡಿಯಿದೆ! ಸ್ಕ್ರಿಪ್ಟ್ ವರ್ಕ್ ಆಗಬೇಕು. ಇಲ್ಲಿಯೇ ಯಾಕೆ ಮಾಡಬಾರದು?

ಎರಡು ಮೂರುದಿನ ತೆಗೆದುಕೊಂಡೆವು…, ನಮಗೆ ಬೇಕಾದಂತೆ ಮನೆಯನ್ನು ಸಜ್ಜುಗೊಳಿಸಲು. ಅಲ್ಲಿಯೇ ಉಳಿಯುವುದು ಬೇಕಾಗಿಲ್ಲ…, ಜೊತೆಗೆ… ಅಸಿಸ್ಟೆಂಟ್ ಹುಡುಗರೂ ಇರತ್ತಾರೆ ಅನ್ನುವ ಮಾತಿಗೆ ಒಪ್ಪಿದ ತಮ್ಮ ಅಸಿಸ್ಟೆಂಟ್ ಹುಡುಗರೊಂದಿಗೆ ಬೆಳಗ್ಗೆ ಬಂದು ಸಂಜೆ ಮರಳುತ್ತಿದ್ದ! ನಾಲ್ಕನೇಯ ದಿನ…,

ನಾನಂತೂ ಪರ್ಮನೆಂಟಾಗಿ ಇಲ್ಲಿಯೇ ಉಳಿಯುತ್ತೇನೆ! ಯಾರಿರುತ್ತೀರಿ ಜೊತೆಗೆ?” ಎಂದೆ.

ತಮ್ಮನೂ ಸೇರಿ…, ಯಾರೆಂದರೆ ಯಾರೊಬ್ಬರೂ ಉಳಿಯಲಿಲ್ಲ!

ಎರಡುಮೂರುದಿನ ನನಗೇನೂ ಆಗದಿದ್ದರೆ ಧೈರ್ಯ ಬರುತ್ತದೆ ಅಂದುಕೊಂಡೆ.

ಪೂರ್ವದಂಚಿನಲ್ಲಿ ಸೂರ್ಯ ಪೂರ್ಣವಾಗಿ ಮುಳುಗಿದ್ದ. ಕತ್ತಲು ಪ್ರಪಂಚನ್ನು ಆವರಿಸಿಕೊಳ್ಳುತ್ತಿತ್ತು. ವರಾಂಡದಲ್ಲಿ ಕುಳಿತು ಯೋಚಿಸುತ್ತಿದ್ದೆ. ಯೋಚನೆ…!

ಆತ್ಮಹತ್ಯೆ ಮಾಡಿಕೊಂಡ ಅಪ್ಪ- ಅಮ್ಮನಬಗ್ಗೆ!

ಯೋಚನೆಯಲ್ಲಿರುವಾಗ ಬೆನ್ನ ಹಿಂದೆ ಯಾರೋ ಚಲಿಸಿದಂತಾಯಿತು! ಮೊದಲೇ ಸಂಶಯದಬೀಜ ಮನದಲ್ಲಿ! ತಟ್ಟನೆ ತಿರುಗಿ ನೋಡಿದೆ. ಯಾರೂ ಇಲ್ಲ. ಮನೆಯೊಳಗೆ ಏನೋ ಚಲನೆ.

ಒಬ್ಬನೇ ಇರಬೇಕಾದ ರಿಸ್ಕ್ ತೆಗೆದುಕೊಳ್ಳಬೇಕಾ…? ಅನ್ನಿಸಿತು!

ಎದ್ದು ಮನೆಯೊಳಗೆ ಹೋದೆ. ನಾನು ಯಾವ ಕೋಣೆಗೆ ಹೋಗುತ್ತೇನೋ- ಕತ್ತಲಿರುವ ಪಕ್ಕದ ಕೋಣೆಯಲ್ಲಿ ಶಬ್ದವಾಗುತ್ತಿತ್ತು! ಪ್ರತಿ ಕೋಣೆಯಲ್ಲೂ ಲೈಟ್ ಹಾಕಿದೆ.

ಈ ಸಂಶಯ ಅನ್ನುವುದು ಮನವನ್ನು ಪ್ರವೇಶಿಸಿದರೆ ಪಿಶಾಚಿಯಾಗುತ್ತದೆ!

ಗೋಡೆಯಮೇಲೆ ನೆರಳು! ನನ್ನದು ಅಂದುಕೊಳ್ಳೋಣವೆಂದರೆ ನೆರಳಿನ ಮೂಲ ಗೋಡೆಯ ಕೆಳ ಅಂಚು ಹೊರತು ನಾನಲ್ಲ!

ನಿಧಾನವಾಗಿ ಹೆದರಿಕೆ ನನ್ನ ಮನವನ್ನಾಕ್ರಮಿಸಿತು! ಹೊರಡಲೇ ಅಂದುಕೊಂಡೆ- ಹಾಗಂದುಕೊಂಡಿದ್ದೇ ಕಾರಣವೇನೋ… ನಂತರವೇನೂ ಅಸಹಜತೆ ಫೀಲ್ ಆಗಲಿಲ್ಲ!

ಕತ್ತಲು ಮತ್ತಷ್ಟು ಕತ್ತಲಾಗುತ್ತಿತ್ತು! ಕರೆಂಟ್ ಹೋದಾಗ ಮೆನೆಯಿಂದ ಹೊರಬಂದೆ. ಮನೆಯೊಳಗಿರಲು ಹೆದರಿಕೆ!!

ತಿರುಗಿ ಮನೆಯೆಡೆಗೆ ನೋಡಿದಾಗ…, ಒಳಗೆ ಸೆಜ್ಜೆಯಮೇಲೆ ಯಾರೋ ಕುಳಿತಂತೆ!

ಹೊರಡುವುದೇ ಸರಿ ಅಂದುಕೊಂಡಾಗ ಸುತ್ತಲೂ ಏನೋ ವಾಸನೆ. ಈ ವಾಸನೆ ನನಗೆ ಗೊತ್ತು! ಚಿಕ್ಕಂದಿನಲ್ಲಿ ಅಪೆಂಡಿಕ್ಸ್ ಆಪರೇಷನ್ ಮಾಡಲು ನನ್ನನ್ನು ಮಂಪರಿಗೊಳಪಡಿಸಲು ಕೊಟ್ಟ ಕ್ಲೋರೋಫಾಂನ ವಾಸನೆ!!

ಅಲ್ಲಿಯೇ ಕುಸಿದು ಬಿದ್ದೆ!

ಗಾಢ ನಿದ್ರೆಯಲ್ಲಿದ್ದವನಿಗೆ ತಟ್ಟನೆ ಎಚ್ಚರವಾಯಿತು. ಯಾರೋ ಕೂದಲುಗಳ ನಡುವೆ ಬೆರಳಾಡಿಸುತ್ತಿರುವ ಫೀಲ್! ಕಣ್ಣುಬಿಟ್ಟೆ. ಕಪ್ಪು ಆಕಾರವೊಂದು ನನ್ನನ್ನೇ ನೋಡುತ್ತಾ ಕುಳಿತಿದೆ.

ನೀನೂ ಆ ಕಥೆಯನ್ನು ನಂಬುತ್ತೀಯ ಮಗ?” ಅಂದಿತು ಆಕಾರ.

ಯಾ…, ಯಾರು ನೀವು? ಯಾವ ಕಥೆ?” ಏಳಲು ಶ್ರಮಿಸುತ್ತಾ ಗಾಭರಿಯಿಂದ ಕೇಳಿದೆ.

ಲೈಟ್ ಹಾಕುವ ಚಿಂತೆ ಬೇಡ! ನಿನಗೇನೂ ತೊಂದರೆ ಕೊಡುವುದಿಲ್ಲ! ಸ್ವಲ್ಪ ಹೊತ್ತಿದ್ದು ಹೊರಟು ಹೋಗುತ್ತೇನೆ!”

ಧರ್ಮಸಂಕಟಕ್ಕೆ ಒಳಗಾದೆ! ನಂಬಲೋ ಬೇಡವೋ? ಕನಸೋ ನನಸೋ…? ಏನು ಮಾಡಲಿ?

ನನಗೆ ಗೊತ್ತು! ಈ ಮನೆಯಲ್ಲಿರಲು ನೀನು ಸ್ವಲ್ಪವಾದರೂ ಧೈರ್ಯ ತೋರಿಸಲು ಕಾರಣ! ಇದು ನಿನ್ನ ಮನೆ ಅನ್ನುವ ಅರಿವು ನಿನಗಿರುವುದು!” ಎಂದಿತು ಆಕಾರ. ಆಶ್ಚರ್ಯವಾಯಿತು.

ಯಾವ ಕಾರಣಕ್ಕೂ ನನ್ನ ಸವತಿಯ ಮಗ- ನಿನ್ನ ತಮ್ಮನನ್ನು ಈ ಮನೆಗೆ ಕರೆತರಬೇಡ!” ಎಂದಿತು.

ಕೆಲವೊಂದು ರಹಸ್ಯಗಳು ರಹಸ್ಯವಾಗಿಯೇ ಇದ್ದರೆ ಎಷ್ಟು ಚಂದ!

ಮುಂಚೆಯಿಂದಲೂ ನನಗಾ ಗೊಂದಲ ಇದ್ದೇ ಇತ್ತು! ಅಮ್ಮ ಯಾಕೆ ನನಗೂ ತಮ್ಮನಿಗೂ ನಡುವೆ ಇಷ್ಟೊಂದು ಬೇಧ ಕಾಣಿಸುತ್ತಿದ್ದಾರೆಂದು! ನನಗೂ ತಮ್ಮನಿಗೂ ಮಧ್ಯೆ ಅತಿಶಯವಾದ ಪ್ರೀತಿಯಿತ್ತಾದರೂ…, ಅಮ್ಮನಿಗೆ ನಾನೆಂದರೆ ಏನೋ ತಾತ್ಸರ! ಕಾರಣವೇ ತಿಳಿಯತ್ತಿರಲಿಲ್ಲ.

ನನಗೆ ಐದು ವರ್ಷ ವಯಸ್ಸಿದ್ದಾಗ ವಿದೇಶದಲ್ಲಿದ್ದ ಅಪ್ಪ ಅಮ್ಮ ಸ್ವದೇಶಕ್ಕೆ ಮರಳಿದ್ದರು. ಅದೇನು ಕಾರಣವೋ ಅಪ್ಪ ಆತ್ಮಹತ್ಯೆ ಮಾಡಿಕೊಂಡರು. ನಾನು ವಿಷ್ವಲ್ ಕಮ್ಯುನಿಕೇಶನ್ ಕೋರ್ಸ್ ಮುಗಿಸಿ ಸಿನೆಮಾದ ಹಿಂದೆ ಬಿದ್ದಿದ್ದೆ. ತಮ್ಮ ಇಂಜಿನಿಯರ್ ಆದರೂ…, ನನಗಿಂತ ಹೆಚ್ಚಿನ ಸಿನೆಮಾ ಹುಚ್ಚಿನಿಂದಾಗಿ ನನ್ನೊಂದಿಗೆ ಸೇರಿದ್ದ.

ಅದು ಅಮ್ಮನಿಗೆ ಇಷ್ಟವಿರಲಿಲ್ಲ. ತಮ್ಮನಿಗೆ ನನ್ನಮೇಲಿನ ಪ್ರೀತಿಯಿಂದಾಗಿ ನನ್ನನ್ನು ಸಹಿಸಿಕೊಂಡಿದ್ದರು ಹೊರತು ಅಮ್ಮನಿಗೆ ನಾನೆಂದರೆ ಇಷ್ಟವೇ ಇರಲಿಲ್ಲ. ಬರುಬರುತ್ತಾ ಅವರ ವರ್ತನೆಯಲ್ಲಿ ಏನೋ ವ್ಯತ್ಯಾಸವಾಗಿ- ಹುಚ್ಚಿಯಾದರು! ಒಂದು ದಿನ ಮನೆಯಲ್ಲಿಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

ನನಗಿನ್ನೂ ನೆನಪಿದೆ. ಫಾರಿನ್‌ನಿಂದ ಬಂದಮೇಲೆ…, ಅಪ್ಪ ಒಮ್ಮೆ ನನ್ನೊಂದಿಗೆ ಈ ಮನೆಗೆ ಬಂದಿದ್ದರು. ಅವರ ಕೈಬೆರಳು ಹಿಡಿದು ಮನೆಯನ್ನೇ ನೋಡುತ್ತಾ ನಿಂತಿದ್ದೆ. ಏನೋ ಸೆಳೆತ!

ಇದು ನಮ್ಮ ಮನೆಯಾಗಿತ್ತು!” ಎಂದಿದ್ದರು ಅಪ್ಪ!

ಅಲ್ಲಿಂದ ಮರಳಿದಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಮ್ಮ ಏನು ಮಾಡಿದ್ದ? ಅವನಿಲ್ಲದೆ ನಾನೊಬ್ಬ ಹೇಗೆ ಈ ಮನೆಯಲ್ಲಿ ಇರಬಲ್ಲೆ?” ಎಂದೆ.

ಅವನ ಅಮ್ಮನಿಗಾಗಿ! ನನ್ನನ್ನು ಕೊಂದು- ಕಾಂಕ್ರೀಟ್ ಕಟ್ಟೆಕಟ್ಟಿದ ನಿಮ್ಮಪ್ಪ! ಆತ್ಮಹತ್ಯೆ ಮಾಡಿಕೊಂಡ ಅಂದುಕೊಂಡೆಯಾ?” ಎಂದಿತು ರೂಪ. ಗೊಂದಲದಿಂದ ನೋಡಿದೆ.

ನಿನ್ನ ಅಮ್ಮ ಅಂದುಕೊಂಡ ಚಿಕ್ಕಮ್ಮ- ನನ್ನ ಸವತಿ ಸುಮ್ಮನೆ ಹುಚ್ಚಿಯಾದಳು ಅಂದುಕೊಂಡೆಯ?”

ನಾನೇನೂ ಮಾತನಾಡಲಿಲ್ಲ. ಐವತ್ತೊಂದು ವರ್ಷದ ನನ್ನ ಕೂದಲುಗಳ ನಡುವೆ ಬೆರಳಾಡಿಸುತ್ತಿರುವ ಮೂವತ್ತುವರ್ಷದ ಹೆಣ್ಣು ರೂಪ- ನನ್ನ ಅಮ್ಮ!

ಏನಣ್ಣ ಇದು…! ನನ್ನಣ್ಣ ಇಂತಾ ನಿದ್ದೆ ಮಾಡಿದ್ದು ನಾನಿದುವರೆಗೂ ನೋಡಿಲ್ಲ!” ಎಂದ ತಮ್ಮ ನನ್ನನ್ನು ಅಲ್ಲಾಡಿಸುತ್ತಾ!

ನಾನಿನ್ನೂ ಮನೆಯ ಮುಂಬಾಗದ ಗಾರ್ಡನ್‌ನಲ್ಲಿಯೇ ಮಲಗಿದ್ದೆ! ಅವನ ಹಿಂದೆಯೇ ಉಳಿದವರೂ ಬಂದರು.

ಅಂದು ಸಂಜೆ…,

ನೀನಿವತ್ತುಇಲ್ಲೇ ಇರು! ಇರಲೇ ಬೇಕು!” ಎಂದೆ ತಮ್ಮನಿಗೆ. ಅವನು ಆಶ್ಚರ್ಯದಿಂದ ನನ್ನನ್ನೇ ನೋಡುತ್ತಿದ್ದ.

ರಿಕ್ವೆಸ್ಟ್ ಅಲ್ಲ! ಇವತ್ತು ನೀನು ಇರದೇ ಹೋದರೆ…, ಇನ್ನೆಂದೂ ಇಲ್ಲಿಗೆ ಬರಬೇಡ!” ಎಂದೆ.

ಹೆದರಿಕೇನಾ ಅಣ್ಣ?” ಎಂದ.

ಹಾಗೇ ಅಂದುಕೋ!”

ಇಬ್ಬರೂ ಒಂದೇ ಮಂಚದಮೇಲೆ ಮಲಗಿಕೊಂಡೆವು. ಸೆಜ್ಜೆಯಮೇಲಿಂದ ರೂಪವೊಂದು ನಮ್ಮನ್ನೇ ನೋಡುತ್ತಾ ಕುಳಿತಿರುವುದು ಸ್ಪಷ್ಟವಾಗಿ ಅರಿವಿಗೆ ಬಂತು. ತಮ್ಮ ಗಾಢವಾದ ನಿದ್ರೆಯಲ್ಲಿದ್ದ. ನಾನು ನಿಧಾನಾಗಿ ಎದ್ದು ಮನೆಯ ಹಿಂಬಾಗಕ್ಕೆ ನಡೆದೆ- ಬಟ್ಟೆ ಒಗೆಯುವ ಕಟ್ಟೆ ಇದ್ದ ಜಾಗಕ್ಕೆ.

ನನ್ನ ಹಿಂದೆ ರೂಪ ಇರುವ ಅರಿವಿತ್ತು. ಆದರೂ ತಿರುಗಿ ನೋಡಲಿಲ್ಲ.

ನಿನಗೆ ನಾನು ಮುಖ್ಯವೋ- ಅಪ್ಪ ಚಿಕ್ಕಮ್ಮನಿಗೆ ಹುಟ್ಟಿದ ನನ್ನ ತಮ್ಮನ ಮೇಲಿನ ಸೇಡು ಮುಖ್ಯವೋ?” ಎಂದೆ.

ಏದುಸಿರಿನಂತಾ ಶಬ್ದದ ಹೊರತು- ಮಾತಿಲ್ಲ. ನಾನು ತಿರುಗಲಿಲ್ಲ.

ನೋಡಿದೆಯಲ್ಲಾ…? ಅವನೇ ನನ್ನ ತಮ್ಮ! ಇದ್ದರೆ ಇಬ್ಬರೂ ಇರುತ್ತೇವೆ! ಅವನಿಗೆ ಸಣ್ಣ ರೀತಿಯಲ್ಲಾದರೂ ಏನಾದರೂ ತೊಂದರೆಯಾದರೆ- ಈ ಪ್ರಪಂಚದಲ್ಲಿ ನಿನ್ನನ್ನು ದ್ವೇಶಿಸುವವರಲ್ಲಿ ನನ್ನನ್ನು ಮೀರಿಸುವವರು ಯಾರೂ ಇರುವುದಿಲ್ಲ! ನನಗೆ ಕೆಟ್ಟದಾದರೂ ಸರಿ…, ಅವನಿಗೆ ಒಳಿತು ಮಾತ್ರ ಆಯಿತು ಅಂದುಕೋ…, ನಿನ್ನನ್ನು ನಾನು ಪ್ರೀತಿಸುವಷ್ಟು ಯಾರೂ ಪ್ರೀತಿಸಲಾರರು!” ಎಂದೆ.

ಸರಿಯಾಗಿ ಆರು ತಿಂಗಳ ನಂತರ…, ನನ್ನ ಐವತ್ತೆರಡನೇ ವರ್ಷದ ಹುಟ್ಟಿದ ದಿನ…!

ಅಣ್ಣಾ…! ಎಲ್ಲಾ ಬರೀ ಓಳು ಅಲ್ವಾ? ನನಗೆ ಯಾಕೋ ನಾವು ಈ ಮನೆ ಪರ್ಚೇಸ್ ಮಾಡೋಣ ಅನ್ನಿಸ್ತಿದೆ!” ಎಂದ ತಮ್ಮ.

ತಣ್ಣನೆಯ ಗಾಳಿಯೊಂದು ನಮ್ಮನ್ನು ಸವರಿ ಹೋಯಿತು!

ಧನ್ಯತೆಯಿಂದ ನನ್ನ ಕಣ್ಣು ತುಂಬಿತು!

Comments

  1. ನಿಜವಾದ ಹಾರರ್ ಕಥೆ ಇದು. ಯಾವಾಗಲು ಎಂದಿಗೂ ಅಮ್ಮ ಅಮ್ಮನೇ ಅಮ್ಮತನ ಮಕ್ಕಳ ನೆರಳು. ಭೌತಿಕವಾಗಿ ಇದ್ದರು ಇಲ್ಲದಿದ್ದರೂ... ಕೊನೆಗೆ ಆತ್ಮವಾದರೂ ದೆವ್ವವಾದರೂ. ಮಗನಿಗೋಸ್ಕರಣೆ ಇಷ್ಟು ದಿವಸ ಅಲ್ಲೇ ಕಾದಿದ್ದರೇನೋ ಸತ್ಯವನ್ನು ಹೇಳಲು ಮಗನನ್ನು ತಮ್ಮನಿಂದ ಅಪಾಯವಾಗುತ್ತೇನೋ ಎನ್ನುವ ಹೆದರಿಕೆಲಿ.ಅಣ್ಣಇನ್ನು ಮೊದಲೇ ಹೋಗಬೇಕಿತ್ತು. ತುಂಬಾ ಚಂದದ ಕಥೆ 👌👌🌹🙏

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!