ಪುಸ್ತಕ!
ಪುಸ್ತಕ!
*
ಟರೆಸಿನ ಮೇಲೆ ಅಂಗಾತ ಮಲಗಿದ್ದೇವೆ. ಬಲಗೈಯ ಹಸ್ತವನ್ನು ತಲೆಯ ಕೆಳಗಿಟ್ಟು ಮಲಗಿರುವ ನನ್ನ ಎಡ ತೋಳಿನಮೇಲೆ ತಲೆಯಿಟ್ಟು ಅವಳು ಮಲಗಿದ್ದಾಳೆ. ಅವಳ ಎಡ ಕಂಕುಳಿನ ಕೆಳಗಡೆಯಿಂದ ಬಳಸಿದ ನನ್ನ ಕೈ ಅವಳ ಹೊಟ್ಟೆಯ ಮೇಲೆ- ಅವಳ ಎರಡೂ ಕೈಗಳೊಂದಿಗೆ ಸಂಭಾಷಣೆ ನಡೆಸುತ್ತಿದೆ!
“ಕಥೆ ಹೇಳ್ತೀಯಾ?” ಎಂದಳು.
“ಇಲ್ಲ" ಎಂದೆ.
“ಹೇಳು, ಪ್ಲೀಸ್!” ಎಂದಳು.
“ಏನು ಹೇಳಲೇ?” ಎಂದೆ.
“ಕಥೆ!” ಎಂದಳು.
“ನನ್ನ ಪುಸ್ತಕಗಳ ಕಥೆ ಹೇಳಲಾ?” ಎಂದೆ.
“ಏನೋ ಒಂದು ಕಥೆ…, ಆ ಕಥೆ ಕೇಳ್ತಾ ಕೇಳ್ತಾ ನಾನು ನಿದ್ದೆ ಮಾಡಬೇಕು!” ಎಂದಳು.
“ಹಾಗಿದ್ದರೆ ಈ ಕಥೆಯೇ ಸರಿ!” ಎಂದೆ.
*
ಬರಹ…, ಹೇಗೆ ನನ್ನ ರಕ್ತದಲ್ಲಿ ಬೆರೆಯಿತೋ ನನಗೆ ತಿಳಿಯದು. ಮುಂಚೆಯಿಂದಲೂ ಕನಸೆಂಬ ಮಾಯಾಲೋಕದಲ್ಲಿ ಬೆಳೆದವನು ನಾನು- ಹೆಚ್ಚು ಸಮಯವನ್ನು ಕಳೆದವನು- ವಿಹರಿಸಿದವನು!
ಕನಸುಗಳು ಯಾವತ್ತಿಗೂ ನನ್ನನ್ನು ಕಾಡಿದೆ- ಕಾಪಾಡಿದೆ!
ಜೊತೆಗೆ…, ಓದು.
ಎಷ್ಟೇ ಓದಿದರೂ ಬರೆಯುವಾಗ- ಯಾರೊಬ್ಬರ ಪ್ರಭಾವ ನನ್ನ ಬರಹದಲ್ಲಿ ಇರಬಾರದೆಂಬ ಹಠ!
ಹಾಗೆಯೇ…, ಎಲ್ಲಿ ನಾನು ಬರೆದದ್ದು ಓದುಗರಿಗೆ ಅರ್ಥವಾಗುವುದಿಲ್ಲವೋ ಅನ್ನುವ ಹೆದರಿಕೆಯೂ!
ಬರೆದೆ…, ಒಂದು ಕಾಲದಲ್ಲಿ…, ಬರೆದು ಜೋಡಿಸುತ್ತಿದ್ದೆನೆ ಹೊರತು, ಏನು ಮಾಡಬೇಕು ಅನ್ನುವ ಅರಿವೇ ನನಗಿರಲಿಲ್ಲ!
ಯಾರೊಬ್ಬರೂ ಓದದೆಯೇ ಅದೆಷ್ಟೋ ವರ್ಷಗಳು ನನ್ನ ಕಥೆಗಳು ಅವಿತುಕೊಂಡಿದ್ದವು.
ಕಾಲೇಜ್ ಮ್ಯಾಗಸಿನ್‌ಗಳಲ್ಲಿ ಬಂದಾಗ ಏನೋ ಉತ್ಸಾಹ, ಏನೋ ಸಾಧನೆ ಮಾಡಿದ ಅನುಭವವಾದರೂ…,
ನನ್ನ ಕಥೆಗಳನ್ನು ಓದಿ ಎಂದು ಯಾರಿಗಾದರೂ ಹೇಳಲು ಮುಜುಗರ!
ಕಾಲೇಜು ಜೀವನ ಮುಗಿಸಿ ಕೆಲಸಕ್ಕೆ ಸೇರಿಕೊಂಡು ಎರಡು ವರ್ಷಗಳಾದಾಗ- 2013ರಲ್ಲಿ…, ನಾನು ಕೆಲಸ ಮಾಡುತ್ತಿದ್ದ ಕಂಪೆನಿಯ ಒಡೆಯ ನನ್ನ ಕಥೆಗಳನ್ನು ಓದಿ ಇಂಪ್ರೆಸ್ ಆದಾಗಲೇ ನನಗೂ ಸ್ವಲ್ಪ ಧೈರ್ಯ ಬಂದಿದ್ದು!
ಅವರು ಅಂದು ಪ್ರಚಲಿತದಲ್ಲಿದ್ದ ಕೆಂಡಸಂಪಿಗೆ ಅನ್ನುವ ಆನ್ಲೈನ್ ಮ್ಯಾಗಸಿನ್‌ಗೆ ಕಥೆ ಕಳಿಸಿಕೊಡಲು ಹೇಳಿದರು.
ಹಲವು ಕಥೆಗಳನ್ನು ಕಳಿಸಿದರೂ ಅದರ ಸಂಪಾದಕ- ನನ್ನ ಕಂಪೆನಿಯ ಒಡೆಯನ ಮಿತ್ರ- ಯಾವುದನ್ನೂ ಪ್ರಕಟಿಸಲಿಲ್ಲ.
ಕೊನೆಗೆ ನನ್ನ ಕಂಪೆನಿಯ ಒಡೆಯ ಶಿಫಾರಸ್ಸು ಮಾಡಿದರೇನೋ…,
“ಮತ್ತೊಮ್ಮೆ ನಿಮ್ಮ ಕಥೆಗಳನ್ನು ಕಳಿಸಿಕೊಡಿ!” ಎಂದರು ಸಂಪಾದಕ.
ಮೂರು ಕಥೆಗಳನ್ನು ಕಳಿಸಿದೆ. ಒಂದು ಕಥೆ ಪ್ರಕಟವಾಯಿತು!
ನಂತರ ಸುಧ, ತರಂಗ, ಮಯೂರಗಳಿಗೆ ಮೈಲ್‌ಮೂಲಕ ಕಳಿಸಿದರೂ ಯಾವುದೂ ಪ್ರಕಟವಾಗಲಿಲ್ಲ!
ಹಾಗಿದ್ದರೆ ನನ್ನ ಕಥೆಗಳು ಓದಲು ಯೋಗ್ಯವಲ್ಲವೇನೋ…, ಅಷ್ಟೊಂದು ಸ್ಟಾಂಡೇರ್ಡ್ ಇಲ್ಲವೇನೋ ಅನ್ನಿಸಿ ನಿರಾಶನಾದೆ.
ಆದರೂ ಯಾಕೋ ಬರೆಯುವುದನ್ನು ಬಿಡಲಾಗಲಿಲ್ಲ- ಅಥವಾ ಬರಹ ನನ್ನನ್ನು ಬಿಡಲಿಲ್ಲ!
2014ರಲ್ಲಿ ಅಕ್ಕನಂತಾ ಗೆಳತಿಯೊಬ್ಬರು…, ಒಬ್ಬರು ಪ್ರಕಾಶಕರನ್ನು ಪರಿಚಯಮಾಡಿಕೊಟ್ಟು…, ಕಥೆಗಳನ್ನು ಕೊಡಲು ಹೇಳಿದರು.
ಮೂವತ್ತು ಕಥೆಗಳ ಸಂಕಲನ- "ಪತಂಗ" ಹೊರಬಂದಿತು.
ಲೇಖಕನಿಗೆ ಸಂಭಾವನೆಯಾಗಿ ಕೊಟ್ಟಿದ್ದು ಇಪ್ಪತ್ತೈದು ಪುಸ್ತಕಗಳು!
ಸಣ್ಣ ಸಣ್ಣ ಕಥೆಗಳನ್ನು ಬರೆಯುವುದರೊಂದಿಗೆ ಸುಮಾರು 2008ರಿಂದಲೇ ಕಾದಂಬರಿಯೊಂದಕ್ಕೆ ರೂಪುರೇಷೆ ಕೊಡುತ್ತಾ ಬಂದಿದ್ದೆ- ಅಧ್ಯಯನ ನಡೆಸಿದ್ದೆ.
ಸೈಕಲಾಜಿಕಲ್ ಥ್ರಿಲ್ಲರ್ ಕಾದಂಬರಿ- ಕಾಸನೋವ!
ಹೆಣ್ಣುಮಕ್ಕಳನ್ನು ತನ್ನರಿವಿಲ್ಲದೆಯೂ ಅರಿವಿನೊಂದಿಗೆಯೂ ಸೆಳೆಯುವ ಇಬ್ಬರು ಯುವಕರ ಕಥೆ!
ಒಬ್ಬ ಆ ಮನಸ್ತಿತಿಯಿಂದ ಹೊರಬರಲು ಶ್ರಮಿಸುತ್ತಾನಾದರೂ ಇನ್ನೊಬ್ಬನಿಂದ ಹತ್ಯೆಯಾಗುತ್ತಾನೆ!
ಆ ಹತ್ಯೆಯಾಗುವ ಸಂದರ್ಭವೇ ಅವರಿಬ್ಬರ ಮೊಟ್ಟಮೊದಲ ಭೇಟಿಯೂ ಆಗಿರುತ್ತದೆ!!!
ಯಾಕೆ ಹಾಗಾಯಿತು ಎಂದು ಹೇಳುವುದೇ ಕಾಸನೋವ ಕಾದಂಬರಿಯ ವಿಷಯ!
2018ರಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆಯಾದ ಆ ಪುಸ್ತಕದ್ದೇ ಒಂದು ಕಥೆ!
2008ರಿಂದ 2016ರವರೆಗೆ ಸುಮಾರು ಎಂಟುವರ್ಷ ಸಮಯವನ್ನು ತೆಗೆದುಕೊಂಡು ನಾನು ಬರೆದ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಹೊರ ತರುವುದು ಹೇಗೆ?
ನನ್ನ ಕಥೆಯನ್ನು ಪ್ರಕಟಿಸಿದ ಕೆಂಡಸಂಪಿಗೆಯ ಸಂಪಾದಕರನ್ನು ಭೇಟಿಯಾದೆ.
“ನನಗೆ ಪ್ರಕಾಶಕರು ಗೊತ್ತಿಲ್ಲ!” ಅಂದರು.
ಅಷ್ಟರಲ್ಲಾಗಲೇ ಅವರು ಪ್ರಖ್ಯಾತ ಬರಹಗಾರರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಅವಾರ್ಡ್ ಪಡೆದುಕೊಂಡಿದ್ದರು. ಅವರ ಹಲವು ಪುಸ್ತಕಗಳು ಪ್ರಕಟಣೆಗೊಂಡಿದ್ದವು.
“ಹೋಗಲಿ ನನ್ನ ಕಾದಂಬರಿಯನ್ನೊಮ್ಮೆ ಓದಿ ಏನಾದರೂ ಸಲಹೆ ಕೊಡಬಹುದೇ ಸರ್? ಹಾಗೆಯೇ ಅದಕ್ಕೊಂದು ಮುನ್ನುಡಿಯನ್ನು ಬರೆದುಕೊಡಿ?” ಎಂದೆ.
“ನಿಮ್ಮ ಕಾದಂಬರಿಯ ಪ್ರಿಂಟೌಟ್ ಕೊಡಿ- ನೋಡುತ್ತೇನೆ!” ಎಂದರು.
ಪ್ರಿಂಟೌಟ್ ಕೊಟ್ಟು ನಾಲಕ್ಕು ತಿಂಗಳಾದರೂ ಪ್ರತಿಕ್ರಿಯೆಯಿಲ್ಲವಾದಾಗ ಮತ್ತೊಮ್ಮೆ ಭೇಟಿಯಾದೆ!
“ನೀವು ಮೊದಲು ಕಾದಂಬರಿಯ ಹೆಸರು ಛೇಂಜ್ ಮಾಡಿ! ಏನದು ಕಾಸನೋವ ಗೀಸನೋವ ಅಂತ?” ಎಂದರು.
“ಸರ್…, ಆ ಪುಸ್ತಕಕ್ಕೆ ಬೇರೆ ಹೆಸರು ಕೊಡಲಾಗುವುದಿಲ್ಲ…, ಕಾದಂಬರಿಯಲ್ಲಿಯೇ ಅದಕ್ಕೆ ಕಾರಣವನ್ನು ಹೇಳಿದ್ದೇನೆ!” ಎಂದೆ.
“ನಾನಿನ್ನೂ ಓದಿಲ್ಲ- ಓದಲು ಶುರುಮಾಡಿದಾಗಲೇ ಪಾತ್ರಗಳ ಹೆಸರುಗಳು ಗೊಂದಲಗೊಳಿಸಿತು…, ಹೆಸರುಗಳನ್ನು ಬದಲಿಸಬಹುದೇ?!” ಎಂದರು.
ಏನೂ ಮಾತನಾಡದೆ ಅವರ ಮುಖವನ್ನು ನೋಡಿದೆ.
“ಸರಿ…, ಓದಿ ಹೇಳ್ತೀನಿ ಸ್ವಲ್ಪ ಟೈಂ ಕೊಡಿ!” ಎಂದರು.
ಮತ್ತೊಂದು ನಾಲ್ಕು ತಿಂಗಳ ನಂತರ ಅವರನ್ನು ಭೇಟಿಯಾದೆ.
“ಇನ್ನೂ ಓದಿಲ್ಲ…, ಇನ್ನೊಂದಷ್ಟುದಿನ ಟೈಂಕೊಡಿ!” ಎಂದರು.
ಸ್ವಲ್ಪ ದಿನದ ನಂತರ ಅವರಿಗೆ ಕಾಲ್ ಮಾಡಿದಾಗ…,
“ನೀವು ಕೊಟ್ಟ ಪ್ರಿಂಟೌಟ್ ಎಲ್ಲೋ ಮಿಸ್ಸಾಗಿದೆ…, ಇನ್ನೊಂದು ಕಾಪಿ ಕೊಡಬಹುದ?” ಎಂದರು.
ಕೊಡಲು ಹೋಗಲಿಲ್ಲ. ಆದರೆ ಮುಂದೆ ಏನು ಮಾಡಬೇಕೆಂದೂ ತೋಚಲಿಲ್ಲ.
ಮೊದಲ ಪುಸ್ತಕ "ಪತಂಗ”-ದ ಪ್ರಕಾಶಕರಿಗೆ ಕಾಲ್ ಮಾಡಿದೆ.
“ಇಲ್ಲಾ ಸರ್…, ನಾನೀಗ ಪ್ರಕಾಶನ ನಿಲ್ಲಿಸಿದ್ದೇನೆ.” ಅಂದರು.
ಸ್ವಪ್ನ, ನವಕರ್ನಾಟಕ, ಅಂಕಿತ ಪುಸ್ತಕಗಳ ಕಾಂಟಾಕ್ಟ್ ನಂಬರ್ ಹುಡುಕಿ ಕಾಲ್ ಮಾಡಿದೆ.
ನಾವೀಗ ಹೊಸ ಪುಸ್ತಕಗಳನ್ನು ಪ್ರಕಟಿಸುತ್ತಿಲ್ಲ ಎಂದರು.
ಮತ್ತೇನು ಮಾಡುವುದು ಎಂದು ಗೂಗಲ್‌ನಲ್ಲಿ ಮೈಸೂರಿನ ಪ್ರಕಾಶಕರು ಎಂದು ಸರ್ಚ್ ಕೊಟ್ಟು…, ಉದಯರವಿ ಪ್ರಕಾಶನದಿಂದ ಹಿಡಿದು, ತಾರಾಪ್ರಿಂಟರ್ಸ್‌ವರೆಗೆ ಸುಮಾರು ಹದಿನೆಂಟು ಪ್ರಕಾಶಕರನ್ನು ಭೇಟಿಯಾದರೂ…, ಒಂದೋ ನಾನೇ ಖರ್ಚು ಮಾಡಬೇಕು- ಮೂವತ್ತೈದು ಸಾವಿರ ಖರ್ಚು ಮಾಡಿದರೆ ಐನೂರು ಕಾಪಿ ಪುಸ್ತಕ ಪ್ರಿಂಟ್ ಮಾಡಿ ಕೊಡುತ್ತಾರೆ, ನಲವತ್ತೈದು ಸಾವಿರವಾದರೆ…, ಸಾವಿರ ಕಾಪಿ ಕೊಡುತ್ತಾರೆ!
ಖರ್ಚು ಮಾಡುವುದಿಲ್ಲವಾ…?
ಕಾದಂಬರಿಕಾರನಿಗೆ ಇಪ್ಪತ್ತೈದರಿಂದ ಐವತ್ತು ಕಾಪಿ ಕಾಂಪ್ಲಿಮೆಂಟರಿಯಾಗಿ ಕೊಡುತ್ತಾರೆ!
ಅಷ್ಟು ಕಷ್ಟಪಟ್ಟು ಬರೆದ ಕಾದಂಬರಿಗೆ ಬೆಳಕು ಕಾಣುವ ಯೋಗವಿಲ್ಲವಾ ಅನ್ನುವ ಚಿಂತೆಯಲ್ಲಿದ್ದಾಗಲೇ ಪ್ರಕಾಶಕರೊಬ್ಬರನ್ನು ಭೇಟಿಯಾಗಿದ್ದು.
ಅತ್ಯುತ್ತಮ ವಾಗ್ಮಿ ಆತ! ಮಾತಿನಲ್ಲಿ ಮರುಳು ಮಾಡಿ…,
“ನಲವತ್ತಮೂರು ಸಾವಿರ ಖರ್ಚು ಮಾಡಿ ಸಾಕು…, ಸಾವಿರ ಕಾಪಿ ಪುಸ್ತಕ ಪ್ರಿಂಟ್ ಮಾಡಿ ಕೊಡುತ್ತೇನೆ…, ಅದರಲ್ಲಿ ಮುನ್ನೂರು ಕಾಪಿ ಸರ್ಕಾರವೇ ತೆಗೆದುಕೊಳ್ಳುತ್ತದೆ! ಹಾಕಿದ ದುಡ್ಡು ಬರುತ್ತದೆ! ಉಳಿದಂತೆ ಪುಸ್ತಕ ಮಾರಾಟಕ್ಕೆ ನಾನೂ ಸಹಾಯ ಮಾಡುತ್ತೇನೆ!” ಅಂದಾಗ ಏನೋ ಆಸೆ…!
ಮೂರು ತಿಂಗಳಲ್ಲಿ ಕೊಡುತ್ತೇನೆ ಅಂದವರು ಹತ್ತು ತಿಂಗಳ ನಂತರ ಕೊಟ್ಟರು!
ಅಷ್ಟರಲ್ಲಿ…, ನಲವತ್ತಮೂರು ಸಾವಿರ ಅನ್ನುವುದು ನಲವತ್ತೆಂಟು ಸಾವಿರವಾಯ್ತು! ನಂತರ ಐವತ್ತು ಸಾವಿರವಾಯ್ತು!
ಕೊನೆಗೂ ಪುಸ್ತಕ ದೊರಕಿದಾಗ ಅದನ್ನು ಬಿಡುಗಡೆ ಮಾಡುವ ಯೋಜನೆ!
ಅದೇ ಪ್ರಕಾಶಕರ ಪುಸ್ತಕದೊಂದಿಗೆ ನನ್ನ ಪುಸ್ತಕವೂ ಬಿಡುಗಡೆಯಾದಾಗ…, ಆ ಸಂದರ್ಭದಲ್ಲಿ ಮಾರಾಟವಾದ ನನ್ನ ಪುಸ್ತಕಗಳ ದುಡ್ಡನ್ನು ಬಿಡುಗಡೆಯ ಖರ್ಚಿಗೆಂದು ಅವರೇ ಇಟ್ಟುಕೊಂಡರು- ಸುಮಾರು ಎರಡು ಸಾವಿರ ರೂಪಾಯಿ!
ನಂತರ ಎರಡು ವರ್ಷದಲ್ಲಿ ಅದೆಷ್ಟು ಪುಸ್ತಕ ಮಳಿಗೆಗಳಿಗೆ ಅಲೆದೆ?
ಅದರಲ್ಲಿ ಸ್ವಪ್ನ, ನವಕರ್ನಾಟಕ ಮತ್ತು ಅಂಕಿತ ಪುಸ್ತಕದವರದ್ದು ಒಂದೇ ಮಾತು…,
“ಈಗ ಕಾದಂಬರಿಗಳಿಗೆ ಸ್ಕೋಪ್ ಇಲ್ಲ ಸರ್! ನಾವು ಹೊಸ ಪುಸ್ತಕಗಳನ್ನು ತೆಗೆದುಕೊಳ್ಳುತ್ತಿಲ್ಲ!”
ನನಗೆ ಆಗ ವ್ಯವಹಾರ ತಿಳಿಯದು. ಅವರೇ ಹೇಳಬಹುದಿತ್ತು, ಸ್ವಲ್ಪ ಪುಸ್ತಕ ಕೊಟ್ಟಿರಿ, ಇಟ್ಟು ನೋಡೋಣ ಎಂದೋ…, ಒಂದು ಪುಸ್ತಕಕ್ಕೆ ಇಷ್ಟು- ನಮಗೆ ಕೊಡಬೇಕು ಎಂದೋ…!
ಯಾರೂ ಹೇಳಲಿಲ್ಲ…, ಅಲೆದಾಟ ನಿಲ್ಲಿಸಿ ಸುಮ್ಮನಾದೆ.
ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ ಮುನ್ನೂರು ಕಾಪಿಯನ್ನು ಅವರಿಗೆ ತಲುಪಿಸಲು ಮತ್ತೊಂದು ಮೂರುಸಾವಿರ ಖರ್ಚು!
ಒಟ್ಟು ಸಾವಿರ ಕಾಪಿ ಪುಸ್ತಕಕ್ಕೆ ಐವತ್ತೈದುಸಾವಿರ!!
ಸುಮಾರು ಮೂರುವರ್ಷಗಳ ನಂತರ ಸರ್ಕಾರದಿಂದ ಬಂದ ಹಣ ನಲವತ್ತೆಂಟು ಸಾವಿರದ ಆರುನೂರು!
ಖರ್ಚು ಮಾಡಿದಷ್ಟು ಅಲ್ಲವಾದರೂ ಏನೋ ತೃಪ್ತಿ.
ಪುಸ್ತಕ ಪ್ರಕಟಣೆಯ ಎರಡುವರ್ಷದ ನಂತರ…, 2020ರಲ್ಲಿ ನನ್ನ ಪುಸ್ತಕದಬಗ್ಗೆ ಮೊಟ್ಟ ಮೊದಲ ಅಭಿಪ್ರಾಯ ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಕೊಡಗಿನ ಕವಯತ್ರಿಯೊಬ್ಬರು! ನಂತರ ಫೇಸ್‌ಬುಕ್ ಗೆಳತಿಯೊಬ್ಬಳು…, ಅದರ ನಂತರ ಹೆತ್ತಮ್ಮನಿಗೂ ಅವರಿಗೂ ವ್ಯತ್ಯಾಸವಿಲ್ಲ ಅನ್ನಿಸುವಷ್ಟು ಅಮ್ಮ ಅನ್ನಿಸಿಕೊಂಡ ವಾತ್ಸಲ್ಯಮಯಿ ತಾಯಿಯೊಬ್ಬರು!
ಈ ಮೂರು ಅಭಿಪ್ರಾಯಗಳ ನಂತರ ನನ್ನ ಪುಸ್ತಕದ ಬೇಡಿಕೆ ಎಷ್ಟು ಹೆಚ್ಚಿತೆಂದರೆ…, ಒಂದೇ ವರ್ಷದಲ್ಲಿ ನೂರಾ ಐವತ್ತು ಪುಸ್ತಕಗಳು ಮಾರಾಟವಾದವು!
2022 ನವೆಂಬರ್‌ನಲ್ಲಿ ನಾನು ವೀರಲೋಕ ಅನ್ನುವ ಪುಸ್ತಕ ಪ್ರಕಾಶಕರನ್ನು ಕಾಂಟಾಕ್ಟ್ ಮಾಡಿದೆ. ಅವರು…,
“ಪುಸ್ತಕ ತಲುಪಿಸಿ, ನಮ್ಮ ಐದು ಜನರ ಟೀಂ ಒಂದಿದೆ, ಅವರು ಓದಿನೋಡಿ ಪುಸ್ತಕ ಮಾರಟಮಾಡಲು ಯೋಗ್ಯವಾಗಿದೆಯೋ ಇಲ್ಲವೋ ಹೇಳ್ತಾರೆ!” ಎಂದರು.
ಒಂದೂವರೆ ವರ್ಷ ದಾಟಿದರೂ ಇನ್ನೂ ಓದುತ್ತಲೇ ಇದ್ದಾರೆ! ಮಧ್ಯೆ ಎರಡು ಬಾರಿ ನೆನಪಿಸಿದೆನಾದರೂ ಪ್ರತಿಕ್ರಿಯೆಯೇನು ಇಲ್ಲ! ಅಥವಾ ನನ್ನ ಪುಸ್ತಕ ಅವರು ಮಾರುವಷ್ಟು ಯೋಗ್ಯವಲ್ಲವೇನೋ ಎಂದು ಸುಮ್ಮನಾದೆ!
ಆದರೆ…,
ಇಲ್ಲಿಯವರೆಗೆ ಸುಮಾರು ಮುನ್ನೂರು ಪುಸ್ತಕಗಳು ಮಾರಾಟವಾಗಿದ್ದು ಕೇವಲ ಓದುಗರಿಂದ ಓದುಗರಿಗೆ ತಲುಪಿ ಅನ್ನುವುದು ನನ್ನ ಅಹಂಕಾರ!!
ನಾನೆಂದೂ ನನ್ನ ಪುಸ್ತಕದಬಗ್ಗೆ ಹೇಳಿಕೊಂಡವನಲ್ಲ, ಮಾರ್ಕೆಟಿಂಗ್ ಮಾಡಿಕೊಂಡವನಲ್ಲ, ಓದಿ ಓದಿ ಎಂದು ದುಂಬಾಲು ಬಿದ್ದವನಲ್ಲ!
ಆದರೂ ಓದಿದರು…, ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದರು!
ಪುಸ್ತಕದ ಬಗ್ಗೆ- ಪುಸ್ತಕ ಓದಿ ತಮಗಾದ ಅನುಭವದಬಗ್ಗೆ ಬರೆದು ಫೇಸ್‌ಬುಕ್‌ನಲ್ಲಿ ಹಾಕಿದರು. ಆ ಅಭಿಪ್ರಾಯವನ್ನು ಓದಿದವರು ತಮಗೂ ಪುಸ್ತಕವನ್ನು ಕಳಿಸಿಕೊಡಿ ಎಂದು ಮೆಸೇಜ್ ಮಾಡಿದರು…, ಓದಿ ಇಷ್ಟವಾದವರು ಮತ್ತೊಬ್ಬರಿಗೆ ಸಜೆಸ್ಟ್ ಮಾಡಿದರು…, ಈ ರೀತಿಯಲ್ಲಿ ಪುಸ್ತಕಗಳು ನಿಜವಾದ ಓದುಗರನ್ನು ಸೇರಿದ್ದು ನನ್ನ ಸಾರ್ಥಕತೆ! ಅವರಂತ ಓದುಗರನ್ನು ಪಡೆದ ನಾನು ನಿಜಕ್ಕೂ ಧನ್ಯ!
ಹಲವಾರು ಕಥೆಗಳನ್ನು ಬರೆದಿದ್ದರೂ ಮೊಟ್ಟ ಮೊದಲ ಕಾದಂಬರಿಯಾಗಿ ಕಾಸನೋವಬಗ್ಗೆ ನನಗಿದ್ದ ತುಮುಲ ಒಂದೇ- ನನ್ನ ಬರಹದ ಶೈಲಿ ಹೇಗಿದೆಯೋ ಏನೋ- ಎಂದು!
ಅದಕ್ಕೆ ಓದುಗರು ಕೊಟ್ಟ ಉತ್ತರ…,
ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂತಾ ಪುಸ್ತಕ ಕಾಸನೋವ- ಅನ್ನುವುದು!
ಶೈಲಿಯ ಹೊರತು ಪುಸ್ತಕದಬಗ್ಗೆ ಓದುಗರು ಹೇಳಿದ್ದೇನು?
ಯಾರೊಬ್ಬರೂ ಪುಸ್ತಕ ಕೆಟ್ಟದಾಗಿದೆಯೆಂದೋ ಸ್ಟಾಂಡೇರ್ಡ್ ಇಲ್ಲವೆಂದೋ ಹೇಳಲಿಲ್ಲ. ಕೆಲವರಿಗೆ ಅದರಲ್ಲಿನ ನಚಿಕೇತ ಅನ್ನುವ ಪಾತ್ರ ಇಷ್ಟವಾಯಿತು…, ಅವನು ಅಷ್ಟು ಬೇಗ ಮುಗಿದು ಹೋಗಬಾರದಿತ್ತು ಎಂದರು. ಕೆಲವರಿಗೆ ಚಾರುದತ್ತನ ಅಸಾಮಾನ್ಯ ಮನಶ್ಶಕ್ತಿ ಇಷ್ಟವಾಗಿತ್ತು- ಆದರೆ ಅವನಿಗೆ ನೆಗೆಟಿವ್ ಶೇಡ್ ಕೊಡಬಾರದಿತ್ತು ಎಂದರು. ಇನ್ನು ಕೆಲವರಿಗೆ ವೀರಪುತ್ರ ಹಿಡಿಸಿದ.., ಅವನನ್ನು ತೆರೆಮರೆಯಲ್ಲಿ ಇರಿಸಬಾರದಿತ್ತು…, ಅವನು ಮತ್ತು ಸಿಂಧೂರಿಯ ರೊಮಾನ್ಸ್, ಬಾಂಧವ್ಯ ಮತ್ತಷ್ಟು ವಿವರಿಸಬೇಕಿತ್ತು ಎಂದರು. ಪ್ರತಿಯೊಬ್ಬರೂ ಹೊಗಳಿದ ಪಾತ್ರ ಸಲೀನ..., ಪೂರ್ತಿ ಕಾದಂಬರಿಯನ್ನು ನಿಯಂತ್ರಿಸುವ ಅವಳು ಕೆಲವೇ ಕೆಲವು ಅಧ್ಯಾಯಕ್ಕೆ ಸೀಮಿತಳಾಗಬಾರದಿತ್ತು ಎಂದರು. ಕೆಲವರು ಕೆಲವುಕಡೆ ಗಂಡು ಹೆಣ್ಣಿನ ಸಂಬಂಧ ಎಲ್ಲೆಮೀರಿದೆ ಎಂದರು! ಕೆಲವರು ಸೆಕ್ಸ್ ಸೀನ್‌ಗಳನ್ನು ಮತ್ತಷ್ಟು ವಿಸ್ತರಿಸಿ ಬರೆಯಬೇಕಿತ್ತು ಎಂದರು. ಕೆಲವರು ಸಭ್ಯತೆಯ ಎಲ್ಲೆ ಮೀರಿಲ್ಲ- ಗುಡ್ ಎಂದರು. ಕೆಲವರು ಮೊದಮೊದಲು ಓದುವಾಗ ಸ್ವಲ್ಪ ಇರಿಸುಮುರಿಸಾಯಿತಾದರೂ ಅದು ನಂತರದ ಕಥೆಗೆ ಪೂರಕವಾಗಿದೆ…, ಹಾಗಲ್ಲದೆ ಆ ಘಟನೆಗಳನ್ನು ಹೇಳಲಾಗದಷ್ಟು- ಬೇಕೇಬೇಕೆಂಬ ಅರಿವು ಮೂಡಿತು ಎಂದರು. ಕೆಲವರು ಚೆಸ್ ಆಟದಂತಿದೆ, ಮೈಂಡ್‌ಗೇಮ್ ಎಂದರು. ಕೆಲವರು ಏನೇನು ಎಷ್ಟೆಷ್ಟು ಬೇಕೋ ಅಷ್ಟಷ್ಟೇ ಪ್ರಮಾಣದಲ್ಲಿದ್ದು ಪರ್ಫೆಕ್ಟ್ ಆಗಿದೆ ಎಂದರು. ಕೆಲವರು ಇದು ಸೈಕಾಲಜಿಯಲ್ಲಿ ಡಾಕ್ಟರೇಟ್ ಮಾಡುವವರಿಗೆ ಉಪಯೋಗವಾಗುವ ಪುಸ್ತಕ ಎಂದರು…!
ನನ್ನ ಅಷ್ಟು ವರ್ಷದ ಪ್ರಯತ್ನದ ಸಾರ್ಥಕತೆಗೆ ಇನ್ನೇನು ಬೇಕು?
ಕಾಸನೋವ ಓದುಗರನ್ನು ಕಾಡಿದ್ದಂತೂ ನಿಜ!
ಯಾವೊಂದು ಮಾರ್ಕೆಟಿಂಗ್ ಇಲ್ಲದೆ, ಜಾಹೀರಾತಿಲ್ಲದೆ, ಪ್ರೊಫೆಷನಲ್ ಮಾರಾಟಗಾರರ ಸಹಾಯವಿಲ್ಲದೆ ಕೇವಲ ಓದುಗರಿಂದ ಓದುಗರಿಗೆ ತಲುಪಿ, ಮಾರಾಟವಾದ ನನ್ನ ಪುಸ್ತಕಗಳಿಗೆ ಅವರಿಂದ ದೊರೆತ ತೆರೆದ ಮನದ ಅಭಿಪ್ರಾಯವೂ, ಪ್ರೋತ್ಸಾಹವೂ ನನಗೆ ಕೊಟ್ಟ ಆತ್ಮವಿಶ್ವಾಸ ಕಡಿಮೆಯಲ್ಲ!
ಇದರಮಧ್ಯೆ ಕಾಸನೋವ ಪ್ರಕಟವಾದ ಅದೇ ವರ್ಷದಿಂದ…, ಅಂದರೆ 2018ರಿಂದ ರೂಪುರೇಷೆ ಕೊಟ್ಟು ನಾಲಕ್ಕು ವರ್ಷದಲ್ಲಿ ನಾನು ಬರೆದ ಕಾದಂಬರಿ ಭಾಮೆ!
“ನಿನ್ನ ಪ್ರೇಮಿಯನ್ನು ಕೊಲ್ಲಲೇನೆ?” ಎಂದು ನಾಯಕ- ತಾನು ಪ್ರೇಮ ನಿವೇದನೆ ಮಾಡಿದರೂ…, ತನಗಿಂತ ಮೊದಲೇ ಮತ್ತೊಬ್ಬನನ್ನು ಪ್ರೇಮಿಸಿದ್ದ ತನ್ನ ಗೆಳತಿಗೆ ಕೇಳಿದ ಪ್ರಶ್ನೆಯೇ ತಥಾಸ್ತುವಾಗಿ…, ಅವಳ ಪ್ರೇಮಿಯನ್ನು ಕೊಲ್ಲಬೇಕಾಗಿ ಬರುವ ಕಥೆ- ಭಾಮೆ!
ಮೊದಲು ಸಿನೆಮಾಗಾಗಿನ ಸ್ಕ್ರಿಪ್ಟ್ ರೂಪದಲ್ಲಿ ಬರೆದರೂ ನಂತರ ಕಾದಂಬರಿಯಾಗಿ ರೂಪುಗೊಂಡ ಪುಸ್ತಕ!
ಅದನ್ನು ಪ್ರಕಟಿಸುವ ಇಚ್ಛೆಯೋ ಶಕ್ತಿಯೋ ನನಗಿಲ್ಲವೆಂದು ಸುಮ್ಮನಾದರೂ ಗೆಳೆಯರು ಕೊಟ್ಟ ಸಲಹೆಯಂತೆ…, ಖರ್ಚುವೆಚ್ಚವಿಲ್ಲದೆ…, ಪ್ರಕಾಶಕರಿಂದ ನೂರು ಪುಸ್ತಕಗಳ ಕಾಂಪ್ಲಿಮೆಂಟರಿ ಅನ್ನುವ ಕರಾರಿನಲ್ಲಿ ಪುಸ್ತಕರೂಪವಾಗಿ ಹೊರಬಂತು. ಅದರೊಂದಿಗೆ…, ನನ್ನ ಇಪ್ಪತ್ತೈದು ಸಣ್ಣ ಕಥೆಗಳ ಸಂಕಲನವೂ!
ಓದುಗರಿಗೆ ನನ್ನ ಪುಸ್ತಕಗಳು ತಲುಪಿದ ರೀತಿಯಿಂದಲೂ…, ಅವರಿಂದ ನನಗೆ ದೊರೆತ ಅಭಿಪ್ರಾಯ- ಪ್ರೋತ್ಸಾಹಗಳಿಂದಲೂ…, ನನ್ನಲ್ಲಿ ಬೆಳೆದ ಆತ್ಮಾವಿಶ್ವಾಸದಿಂದ ಹೇಳಬಲ್ಲೆ…,
ಒಟ್ಟು ನಾಲಕ್ಕು ಪುಸ್ತಕಗಳನ್ನು ಬರೆದವನು ನಾನು!
ಪುಸ್ತಕಮಾಡುವ ಯೋಚನೆಯಿಲ್ಲದಿದ್ದರೂ…, ಇನ್ನೂ ನಾಲಕ್ಕು ಪುಸ್ತಕಗಳಿಗಾಗುವಷ್ಟು ಕಥೆಗಳಿದೆ!
ಇನ್ನುಮುಂದೆ ಕಥೆಗಳನ್ನು ಬರೆಯುತ್ತೇನೋ ಇಲ್ಲವೋ…, ಒಂದೇ ಒಂದು ಕಾದಂಬರಿಯನ್ನು ಬರೆಯಬೇಕೆಂದಿದೆ…!
ಅದಕ್ಕೆ ಕಡಿಮೆಯೆಂದರೂ ಐದರಿಂದ ಹತ್ತುವರ್ಷ ಬೇಕು ಅಂದುಕೊಳ್ಳುತ್ತೇನೆ!
ಅದು…,
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಿರಬೇಕು ಅನ್ನುವುದು- ನನ್ನ ಅತಿ ಸಣ್ಣ ಆಸೆ!
ನೋಡೋಣ…,
*
“ನಾನಿನ್ನು ಕಥೆ ಬರೆಯುತ್ತೇನೋ ಇಲ್ಲವೋ ಎಂದು ನೀನು ಪದೇ ಪದೇ ಹೇಳಬೇಡ! ಕಥೆಗಾರನಲ್ಲದ ನೀನು- ಏನು?” ಎಂದಳು.
ನಾನೇನೂ ಮಾತನಾಡಲಿಲ್ಲ. ಪಕ್ಕಕ್ಕೆ ತಿರುಗಿ ಅವಳ ಮುಖವನ್ನೇ ನೋಡುತ್ತಿದ್ದೆ.
“ಕಥೆ ಬರೆಯದೆ ನಿನ್ನಿಂದ ಇರಲಾಗುವುದಿಲ್ಲವೋ…, ಹೇಗೆ ನಾನು ನೀನಿಲ್ಲದೆ ಇರಲಾರೆನೋ ಹಾಗೆ!” ಎಂದಳು.
“ಕಥೆ ಕೇಳಿ ಬೋರ್ ಹೊಡೆದು ನಿದ್ರೆ ಮಾಡಿರುತ್ತೀಯ ಅಂದುಕೊಂಡರೆ ಫಿಲಾಸಫಿ ಹೇಳ್ತೀಯ?” ಎಂದೆ.
“ನಿಟ್ಟುಸಿರು ಬಿಡುವ ಕಥೆ ಹೇಳಿದರೆ ಹೇಗೆ ನಿದ್ದೆ ಮಾಡುವುದು?” ಎಂದಳು.
ವಿಷಯವನ್ನು ಬದಲಿಸಲು…,
“ನಮ್ಮದು ಯಾವ ರೀತಿಯ ಬಂಧವೇ…?” ಎಂದು ಕೇಳಿದೆ.
“ಯಾವ ರೀತಿಯ ಅಂದರೆ?” ಎಂದಳು.
“ಅಲ್ಲಾ…, ತೊಡೆಯ ಮಧ್ಯೆ ಕೂರಿಸಿ ಕೂದಲಿನ ಸಿಕ್ಕು ಬಿಡಿಸುತ್ತೀಯ…, ನನ್ನ ಕಣ್ಣೆದುರಿಗೇ ಬಟ್ಟೆ ಬದಲಿಸುತ್ತೀಯ…, ಗಂಡು ಹೆಣ್ಣು ಸಂಬಂಧಗಳಬಗ್ಗೆ ತೆರೆದ ಮನದಿಂದ ಮಾತನಾಡುತ್ತೀಯ…, ತೋಳಿನಲ್ಲಿ ತಲೆಯಿಟ್ಟು ಮಲಗಿ ನಕ್ಷತ್ರಗಳನ್ನು ಎಣಿಸುತ್ತೀಯ….!” ನಾನಿನ್ನೂ ಮುಗಿಸಿರಲಿಲ್ಲ…,
“ಹಾಗೊಂದು ಬಂಧಕ್ಕೆ ಹೆಸರಿದೆಯೇನೋ ಪೆದ್ದು ಕಥೆಗಾರನೇ…, ನೀನು ನನ್ನ ಗಂಡು ಗೆಳತಿಯೂ, ನಾನು ನಿನ್ನ ಹೆಣ್ಣು ಗೆಳೆಯನೂ ಆಗಿರುವವರೆಗೆ??” ಎಂದಳು.
ಇದನ್ನೇ ಕಥಾವಸ್ತುವನ್ನಾಗಿಸಿ ಹೇಗೆ ಕಥೆಬರೆಯಲಿ ಅನ್ನುವ ಯೋಚನೆಗೆ ಬಿದ್ದೆ!
ಅವಳು ಮುಗುಳುನಕ್ಕಳು…,
ಬಿಟ್ಟಿರಲಾಗದಿರುವುದೆಂದರೇನೆಂದು ಅರ್ಥವಾಯಿತಾ- ಅನ್ನುವಂತೆ!
Comments
Post a Comment