ಅವಳೆಂಬ ನಂಬಿಕೆ!

ಅವಳೆಂಬ ನಂಬಿಕೆ!

ಗೋವಾಬೀಚಿನಲ್ಲಿ ಒಂದೇ ಸಮನೆ…, ಯಾವುದೇ ಉದ್ದೇಶವಿಲ್ಲದೆ ಸುತ್ತುತ್ತಿದ್ದೆ- ಕಳೆದೆರಡು ದಿನಗಳಿಂದ. ಒತ್ತಡದ ದಿನಚರಿಯಿಂದ ದೂರ ಹೋಗಿ ಒಂದು ವಾರ ಯಾರ ಸಂಪರ್ಕವೂ ಇಲ್ಲದೆ ನೆಮ್ಮದಿಯಿಂದ ನನ್ನೊಳಗೆ ನಾನಾಗಿ ಕಳೆಯಬೇಕೆಂಬ ಹಂಬಲ. ಅಮ್ಮನಿಗೂ ಎಲ್ಲಿಗೆ ಹೋಗುತ್ತಿದ್ದೇನೆಂದು ಹೇಳಿರಲಿಲ್ಲ. ಇಂತಾ ಕಡೆಗೆ ಎಂದು ನಾನೂ ತೀರ್ಮಾನಿಸಿರಲಿಲ್ಲ. ಟೀ ಬೇಕು ಅನಿಸುವಂತೆ- ಅವಳ ನೆನಪುಗಳು! ಟೈಂಟುಟೈಂ ತಿಂಡಿ- ಊಟ…, ಅಂತೆಲ್ಲ ನೆನಪು ಮಾಡಿ ವಿಚಾರಿಸೋದು…, ಮೆಸಂಜರ್‌ನಲ್ಲಿ ಟಿ ಕಳಿಸುತ್ತಾ ಇದ್ದಿದ್ದು…, ಹೀಗೆ ಹೀಗೆ…, ಮನಸ್ಸಿನಲ್ಲಿ ಏನೋ ಹೇಳಲಾರದ ಭಾವೋದ್ವೇಗ! ಕಾಲೆಳೆದತ್ತ ಹೋದಾಗ ಎದುರಾಗಿದ್ದು ಟೀ ಶಾಪ್…, ಅಲ್ಲಿ ಅದೇ ಅವಳು- ಹತ್ತು ವರ್ಷಗಳ ನಂತರ…!

ಹೀಗೆ…, ಸಮುದ್ರದ ಅಲೆಗಳ ಮೊದಲ ಪ್ಯಾರ ಟಿಪಿಕಲ್ ಭದ್ರನ ಸ್ಟೈಲ್‌ಲಿ ಬರಿ! ಕ್ಲೈಮಾಕ್ಸ್ ನಾನು ಹೇಳುತ್ತೇನೆ!” ಎಂದಳು.

ಬೇಡ!” ಎಂದೆ.

*

ಇದು ಹೀಗೆಯೇ…! ನನ್ನೊಳಗಿನ ಕಥೆಗಾರನ ಕಥೆ!

ಅಕ್ಷರಗಳು ಪದಗಳಾಗಿ, ಪದಗಳು ವಾಕ್ಯಗಳಾಗಿ, ವಾಕ್ಯಗಳು ಘಟನೆಗಳಾಗಿ, ಘಟನೆಗಳೇ ಭಾವಗಳಾಗಿ…!

ನಾನೇ ಬರೆಯಬಾರದೆಂದುಕೊಂಡರೂ ಸಾಧ್ಯವಿಲ್ಲದಷ್ಟು ನನ್ನೊಳಗಿನ ಕಥೆಗಾರ ನನ್ನನ್ನು ಮೀರಿ ಹೋಗಿದ್ದಾನೆ!

ಕಾರಣ…,

ಅವಳು- ಅವಳೆಂಬ ನಂಬಿಕೆ!

ಇನ್ನುಮುಂದೆ ಕಥೆಗಳನ್ನು ಬರೆಯುವುದಿಲ್ಲವೇ ಅಂದೆ- ಅಷ್ಟೆ...!

ಸ್ವಲ್ಪ ದಿನಕ್ಕೆ ಏನೂ ಮಾತನಾಡಿರಲಿಲ್ಲವಾದರೂ…, ಇದ್ದಕ್ಕಿದ್ದಂತೆ ಹೀಗೆ!

ಹೇಗೆ ಬರೆಯದಿರಲಿ?

ಅವಳು ಹೇಳಿದಂತೆ ಬರೆಯಲಾರೆ- ಕಥೆ ಬರೆಯದೇ ಇರಲಾರೆ!!

ಇಂದು ಅವಳ ಕಥೆಯೇ ಆಗಿಹೋಗಲಿ!!

ಅವಳನ್ನೇ ನೋಡುತ್ತಾ ಕುಳಿತಿದ್ದೆ. ಅವಳು…, ನಾನು- ಇದೇ ನಾನು ಬರೆಯುತ್ತಿರುವ ಕೊನೆಯ ಕಥೆ- ಎಂದು ಹೇಳಿ ಅವಳಬಗ್ಗೆ ಬರೆದ ಕಥೆಯನ್ನು ಓದುತ್ತಿದ್ದಳು! ಅಲ್ಲ…, ಕಥೆಯಲ್ಲಿ ಮುಳುಗಿದ್ದಳು!

ಯಾವುದೇ ಅಲಂಕಾರವಿಲ್ಲದೆ…, ಸ್ವಲ್ಪ ದೊಗಳೆ ಅನ್ನಿಸುವ ಟಿಷರ್ಟ್- ಅದಕ್ಕೊಪ್ಪುವು ಟ್ರಾಕ್ ಪ್ಯಾಂಟ್ ಹಾಕಿ…, ಬ್ರಹ್ಮದೇವ ತುಂಬಾ ಪುರುಸೊತ್ತಿನ ಸಮಯದಲ್ಲಿ ಅವಳನ್ನು ಸೃಷ್ಟಿಸಿರಬೇಕು! ಬೇಲೂರು ಹಳೆಬೀಡಿನ ಶಿಲಾಬಾಲಿಕೆಯರನ್ನು ನೆನಪಿಸುವಂತೆ…, ಗೋಡೆಗೊರಗಿ ಕಾಲು ನೀಡಿ ಕುಳಿತಿದ್ದಳಾದ್ದರಿಂದ ಎದ್ದು ಕಾಣಿಸುತ್ತಿದ್ದ ಎದೆ- ಒಳವಸ್ತ್ರದ ಅಭಾವದಿಂದ ಕಣ್ಣು ಕುಕ್ಕುತ್ತಿದ್ದ ಕಾಗೆಹಣ್ಣು…!

ತನ್ಮಯತೆಯಿಂದ ಓದುತ್ತಿದ್ದವಳು ಮದ್ಯೆ ಮದ್ಯೆ ನನ್ನನ್ನು ನೋಡುತ್ತಿದ್ದ ನೋಟ…, ಅರಳುತ್ತಿದ್ದ ಕಣ್ಣುಗಳು…, ಬಿರಿಯುತ್ತಿದ್ದ ಮುಗುಳುನಗು…, ಆ ಭಾವ- ಅವಳೊಂದು ಅದ್ಭುತ ನನಗೆ!

ನೀ ಹೀಗೆ ನೋಡುತ್ತಿದ್ದರೆ ನಾ ಹೇಗೆ ಓದುವುದು?” ಎಂದಳು.

ನೀ ಹೀಗೆ ಕೂತಿದ್ದರೆ ನಾ ಹೇಗೆ ನೋಡದಿರುವುದು?” ಎಂದೆ.

ನಾಚಿದಳು. ಉಫ್ ಅನ್ನಿಸಿತು. ತಡೆದುಕೊಳ್ಳಲಾಗಲಿಲ್ಲ…, ಖುರ್ಚಿಯಲ್ಲಿ ಕುಳಿತು ಅವಳು ಓದುವುದನ್ನೇ ನೋಡುತ್ತಿದ್ದವ ಎದ್ದು…, ಮುಂದಕ್ಕೆ ಸರಿದು…, ಅರಳಿದ ತಾವರೆಯಂತಾ ಅವಳ ಮುಖವನ್ನು ಬೊಗಸೆಯಲ್ಲಿ ತೆಗೆದುಕೊಂಡು…, ಅಧೀರಳಾದ ಅವಳ ಕಣ್ಣುಗಳನ್ನೇ ನೋಡುತ್ತಾ…,

ಪ್ರಪಂಚ ಹೀಗೆಯೇ ಸ್ತಬ್ಧವಾಗಬಾರದೇನೆ…? ಕಠಿಣ ಹೃದಯದವ ನಾನೆಂಬ ನಂಬಿಕೆಯನ್ನು ಅಪಮಾನಿಸುವಷ್ಟು- ನನ್ನ ಮನಸ್ಸನ್ನು ಇಷ್ಟೊಂದು ಆರ್ದ್ರವಾಗುವಂತೆ ಮಾಡಿದ- ರಾಕ್ಷಸಿ!” ಎಂದೆ.

ಅವಳದ್ದು ಅದೇ ಚಂಚಲ ನೋಟ!

ಅಕ್ಷರವೇ ಬಾರದ ನನ್ನಂತವನನ್ನೂ ಕವಿಯಾಗಿಸುತ್ತೀಯಲ್ಲೇ?!” ಎಂದೆ.

ಅವಳೇನೂ ಮಾತನಾಡಲಿಲ್ಲ. ಎಷ್ಟು ಸಮಯ ಅದೇ ಅವಸ್ತೆಯಲ್ಲಿದ್ದೆವೋ ತಿಳಿಯದು. ಟ್ರಾನ್ಸ್‌ನಿಂದ ಹೊರಬಂದಂತೆ ಅವಳನ್ನು ಬಿಟ್ಟು ಹಿಂದಕ್ಕೆ ಸರಿದು ಖುರ್ಚಿಗೊರಗಿ ಕುಳಿತೆ.

ಹೃದಯ ದಬದಬನೆ ಬಡಿದುಕೊಳ್ಳುತ್ತಿತ್ತು.

ಹೆ--ರಿ-ಕೆ!

ಹೃದಯದಾಳದಿಂದ ಇಷ್ಟಪಟ್ಟಿದ್ದೇನೂ ನನಗೆ ದಕ್ಕುವುದಿಲ್ಲ ಅನ್ನುವ ಕೆಟ್ಟ ಭ್ರಮೆ!?

ಜೀವನದಬಗೆಗಿನ ನಂಬಿಕೆಯನ್ನೇ ಕಳೆದುಕೊಂಡು…, ಒಬ್ಬನೇ ಬದುಕುವುದು ಅಷ್ಟು ಕಷ್ಟವೇ…, ಅನ್ನುವ ಯೋಚನೆಯಲ್ಲಿ…, ಯಾವ ಉದ್ದೇಶವೂ ಇಲ್ಲದ ಬೇಕಾಬಿಟ್ಟಿ ಜೀವನಕ್ಕೆ ಜಾರುತ್ತಿದ್ದ ಸಮಯದಲ್ಲಿ ಸಿಕ್ಕವಳು!

ನನ್ನ ಈ ಭಾವ ಅವಳಿಗೇನೂ ಹೊಸದಲ್ಲ! ಎದ್ದುಬಂದು ನನ್ನೆದುರಿಗೆ ನಿಂತು ಮುಖವನ್ನು ತನ್ನೆದೆಗೆ ಒತ್ತಿಕೊಂಡಳು.

ಕಣ್ಣೀರನ್ನು ತಡೆಹಿಡಿದುಕೊಳ್ಳಲಾಗದ ಏಕೈಕ ಸಂದರ್ಭ!

ಒಲವು…, ವಾತ್ಸಲ್ಯ…, ಪ್ರೇಮ…, ನಿಜಕ್ಕೂ ಆ ಭಾವದ ಅರ್ಥವೇನು?

ನನಗದು ಅಪರೂಪ!

ಈ ನಾನು…, ಅವಳೊಬ್ಬಳಿಗೆ ಮಾತ್ರ ಪರಿಚಿತ!

ಇಷ್ಟು ಕಾಲ ನನ್ನಬಗ್ಗೆ ನನ್ನ ಅರಿವಿಗೆ ಬರದೇ ಇದ್ದ ಒಂದು ಅಪರೂಪದ ವಿಷಯವಿತ್ತು.

ಯಾರು ನನ್ನ ಬದುಕಿಗೆ ಅಂಟಿಕೊಂಡಿರುತ್ತಾರೋ…, ನನ್ನನ್ನು ನಂಬಿರುತ್ತಾರೋ…, ಅವರಿಗೆ ಒಳಿತು ಮಾತ್ರವಾಗಿದೆ! ಅವರಿಂದ ನನಗೇನು..? ಅಂದರೆ…, ಏನೂ ಇಲ್ಲ!”

ಪ್ರತಿಯೊಬ್ಬರೂ ನನ್ನಿಂದ ನಿರೀಕ್ಷಿಸುವವರೇ! ಅದೇನು ವಿಚಿತ್ರವೋ…, ನನ್ನ ಕಾರಣವಾಗಿ ಅವರವರ ವೈಯಕ್ತಿಕ ಜೀವನ ಉತ್ತಮಗೊಂಡ ನಂತರ ನಿರ್ದಾಕ್ಷಿಣ್ಯವಾಗಿ ನನ್ನಿಂದ ದೂರ ಹೋಗುತ್ತಾರೆ!

ಈ ಒಂದು ಕಾರಣದಿಂದಲೇ ಇರಬೇಕು ಯಾರೂ ಉಳಿಯುವುದಿಲ್ಲವೆನ್ನುವ ಅಭದ್ರತಾ ಭಾವನೆ ನನ್ನಲ್ಲಿ ಬೇರೂರಿದ್ದು!

ಭದ್ರಾ…!” ಎಂದಳು.

ತಲೆಯೆತ್ತಿ ನೋಡಿದೆ.

ನನ್ನ ಬಗ್ಗೆ ಅಪನಂಬಿಕೆಯೇ?” ಎಂದಳು.

ಮುಗುಳುನಕ್ಕೆ. ಅವಳ ಕಣ್ಣುಗಳನ್ನೇ ನೋಡುತ್ತಾ…,

ನಿನಗೊಂದು ರಹಸ್ಯ ಹೇಳಲಾ?” ಎಂದೆ.

ಕುತೂಹಲದಿಂದ ನೋಡಿದಳು.

ಇದುವರೆಗೆ ನನ್ನ ಬದುಕಿಗೆ ಬಂದವರಿಗೆಲ್ಲಾ ನನ್ನಿಂದ ಏನಾದರೊಂದು ಉಪಯೋಗ ಆಗಿಯೇ ಆಗಿದೆ! ಅದರಲ್ಲೂ ಮಾನಸಿಕವಾಗಿ! ಅವರವರ ಮಧ್ಯೆಯಿದ್ದ ತೊಳಲಾಟಗಳು- ಅಂತರಗಳು ನನ್ನಿಂದಾಗಿ- ನನ್ನ ಕಾರಣವಾಗಿ- ಇಲ್ಲವಾಗಿದೆ! ಇಲ್ಲವಾದ ನಂತರ…, ಮತ್ತೆ ನನ್ನ ಕಾರಣವಾಗಿ ಎಲ್ಲಿ ಆ ಸಮಸ್ಯೆಗಳು ಮರುಕಳಿಸುತ್ತದೋ ಎಂದು ಅವರು ದೂರ ಹೋಗಿದ್ದಾರೆ!” ಎಂದು ನಿಲ್ಲಿಸಿ…, ಎರಡುಮೂರುಬಾರಿ ದೀರ್ಘವಾದ ಉಸಿರೆಳೆದುಕೊಂಡು…,

ನಿನಗೆ ನನ್ನಿಂದ ಆ ರೀತಿಯ ಯಾವುದೇ ಉಪಯೋಗವಾಗಿಲ್ಲ! ಇನ್ನೂ…, ಸಮಸ್ಯೆಯೇನಾದರೂ ಆಗಿದೆಯಾ ಅನ್ನುವ ಸಂಶಯವಿದೆ! ಆದರೂ ನನಗಾಗಿ ಅದನ್ನು ಸಹಿಸಿಕೊಂಡಿದ್ದೀಯೇನೋ…?!” ಎಂದು ನಿಲ್ಲಿಸಿದೆ.

ಮುಗುಳುನಕ್ಕಳು. ಬಾಗಿ…, ಪುಟಾಣಿ ಮಕ್ಕಳಿಗೆ ಕೊಡುವಂತೆ ಮುತ್ತೊಂದು ಕೊಟ್ಟು…,

ಹಾಗೇನೂ ಇಲ್ಲವೋ! ನನಗೆ ಜೀವನದಲ್ಲಿ ಅಂತಾ ಸಮಸ್ಯೆಗಳೇನೂ ಇಲ್ಲ! ಮಾನಸಿಕ ತೊಳಲಾಟಗಳು ಯಾರಿಗಿಲ್ಲ ಹೇಳು!? ನೀನದಕ್ಕೆ ಪರಿಹಾರವಾದೆಯೋ ಇಲ್ಲವೋ ನನ್ನ ಮನದೊಳಕ್ಕೆ ಬಂದ ಕಾರಣವಂತೂ ಅದಲ್ಲ…! ಅದೊಂದು ಆಕರ್ಷಣೆ! ನಿನ್ನ ಕಥೆಗಳನ್ನು ಓದುತ್ತಾ…, ನಿನ್ನೊಂದಿಗೆ ಬೆರೆಯುತ್ತಾ ಹೋದಂತೆ ನಿನ್ನೊಳಗಿನ ಮುಗ್ಧ ಕಾಣಿಸಿದನೇ ಹೊರತು ಪ್ರಪಂಚಕ್ಕೆ ನೀನು ಬಿಂಬಿಸಿದ "ಪಕ್ಕಾ ಪ್ರಾಕ್ಟಿಕಲ್ ಭದ್ರ" ಕಾಣಿಸಲೇ ಇಲ್ಲ! ನಿನ್ನನ್ನು ಆದಷ್ಟೂ ಕಂಫರ್ಟ್ ಆಗಿ ಇಟ್ಟುಕೊಳ್ಳಬೇಕು…, ನಿನಗೂ ಭಾವನೆಗಳಿದೆಯೆಂದು ತೋರಿಸಿಕೊಡಬೇಕು…, “ನಿನ್ನ ಭಾವಕ್ಕೆ ತಕ್ಕವರೂ ಇದ್ದಾರೆಂದು" ಅರಿವು ಮೂಡಿಸಬೇಕು ಎಂದಷ್ಟೇ ನನಗಿದ್ದದ್ದು! ಆದರೆ ಈಗ…, ನಿನ್ನಿಂದ ದೂರ ಹೋಗಲಾರದವಳಾಗಿದ್ದೇನೆ- ಯಾವ ಕಾರಣಕ್ಕೂ!” ಎಂದಳು.

*

ನಾನು ಬರೆದ ಪ್ರೇಮ ಕಥೆಗಳೆಲ್ಲಾ ಟ್ರಾಜಡಿಯೇ…! ಕೊನೆಗೆ ಅವಳು ನನ್ನನ್ನು ಬಿಟ್ಟು ಹೋದಳು- ಅನ್ನುವಲ್ಲಿಯೇ ಮುಗಿಯುತ್ತಿತ್ತು! ಅದನ್ನು ಓದಿ ಓದಿ ಅವಳೂ ಅದೇ ಟ್ರಾಕ್‌ನಲ್ಲಿ ಯೋಚಿಸಿದ್ದರ ಪರಿಣಾಮ…, ಗೋವ ಬೀಚು, ಅವಳ ನೆನಪುಗಳೆಲ್ಲಾ! ಅವಳು ನನ್ನೊಳಗೆ- ಅವಳೊಳಗೆ ನಾನು ಎಷ್ಟು ಬೆರೆತಿದ್ದೇವೆನ್ನುವುದಕ್ಕೆ ಉದಾಹರಣೆ! ಅವಳಿಗೇನು…? ನಾನು ಬರೆಯುವುದನ್ನು ನಿಲ್ಲಿಸಬಾರದು! ಹಾಗೆಯೇ…, ಹೆಣ್ಣೊಬ್ಬಳು ನನ್ನ ಬದುಕಿನಲ್ಲಿ ಉಳಿಯುತ್ತಾಳೆ ಎಂದು ಸಾಬೀತು ಮಾಡಬೇಕಿತ್ತು! ಅದಕ್ಕೇ…, ಅವಳು ಹೇಳುವ ಕ್ಲೈಮಾಕ್ಸ್ ಏನೇ ಆಗಿದ್ದರೂ ನಾನದನ್ನು ಹೇಳುವುದು…,

ನೀನು…, ನನ್ನ ಬದುಕಿನಲ್ಲಿ…, ಕ್ಲೈಮಾಕ್ಸ್ ಇಲ್ಲದ ಕಥೆ!”

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!