ಧೈರ್ಯ(ದೆವ್ವ!)ಪರೀಕ್ಷೆ!
ಧೈರ್ಯ(ದೆವ್ವ!)ಪರೀಕ್ಷೆ!
*
ಬೆಂಗಳೂರಿನಿಂದ ಹೊರಟಿದ್ದು ತಡವಾಗಿತ್ತು! ಮೈಸೂರು ಬಸ್‌ಸ್ಟ್ಯಾಂಡ್ ತಲುಪಿದಾಗ ರಾತ್ರಿ ಹನ್ನೊಂದೂವರೆ!
ಬಸ್‌ಸ್ಟ್ಯಾಂಡ್‌ನಿಂದ ಹೊರಬಂದಾಗ ಸಿಟಿ ಬಸ್-ನಂಬರ್ 164 ಕಾಣಿಸಿತು!
ಗೌಸಿಯಾ ನಗರ್‌ವರೆಗೆ ಹೋಗಬಹುದು!
ಮೈಸೂರು ತಲುಪುವ ಸಮಯವನ್ನು ಲೆಕ್ಕ ಹಾಕಿದಾಗಲೇ ಅಂದುಕೊಂಡಿದ್ದೆ…, ಇವತ್ತು ಮನೆಗೆ ಆ ಸ್ಮಶಾನದ ಕಡೆಯಿಂದಲೇ ಹೋಗಬೇಕೆಂದು!
ಇಪ್ಪತ್ತು ವರ್ಷಮುಂಚೆ ಧೈರ್ಯಪರೀಕ್ಷೆ ನಡೆಸಿದ ಸ್ಮಶಾನ!
ಕೆಲವೊಂದು ನೆನಪುಗಳು ಹಾಗೆಯೇ…, ಅಷ್ಟು ಸುಲಭದಲ್ಲಿ ಮಾಸುವುದಿಲ್ಲ!
ಬಸ್‌ಸ್ಟ್ಯಾಂಡ್‌ನಿಂದಲೇ ನಡೆದು ಹೋಗಬೇಕಾಗಬಹುದು ಅಂದುಕೊಂಡರೂ ಈ ಬಸ್ ಕಾಣಿಸಿದ್ದು ಖುಷಿಯಾಯಿತು- ಅರ್ಧ ದೂರದ ನಡಿಗೆ ತಪ್ಪಿತು!
ಮುಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ಓಡಿಬಂದು ಹತ್ತಿ ಕುಳಿತೆ. ಪಕ್ಕದಲ್ಲಿ ಹದಿನಾರು- ಹದಿನೇಳು ವರ್ಷದ ಹುಡುಗನೊಬ್ಬ ಬಿಳುಚಿಕೊಂಡವನಂತೆ ಕುಳಿತಿದ್ದ. ಒಬ್ಬನೇ ಹೋಗುತ್ತಿರುವುದರ ಹೆದರಿಕೆಯಿರಬೇಕು!
ಹೆದರಿಕೆ!
ಆ ವಯಸ್ಸಿನಲ್ಲಿಯೇ ನಾನು ನನ್ನ ಧೈರ್ಯಪರೀಕ್ಷೆ ಮಾಡಲು ಮಧ್ಯ ರಾತ್ರಿಯಲ್ಲಿ ಸ್ಮಶಾನದ ಮೂಲಕ ಹಾದು ಹೋಗಿದ್ದು!
ನನ್ನ ಮುಗುಳುನಗು ಅವನು ಸ್ವಲ್ಪ ರಿಲಾಕ್ಸ್ ಆಗುವಂತೆ ಮಾಡಿತು. ಒಂದೆರಡು ಕ್ಷಣ ನನ್ನ ಮುಖವನ್ನೇ ನೋಡಿದ ಅವನ ಮುಖದಲ್ಲಿ ಆಶ್ಚರ್ಯ!
“ನೀವು ದೇವೀಪುತ್ರನಲ್ಲವೇ? ಕಥೆಗಾರ? ನಮ್ಮಮ್ಮ ಫೇಸ್‌ಬುಕ್‌ನಲ್ಲಿ ನಿಮ್ಮ ಫ್ರೆಂಡ್! ನಾನೂ ಆಗಾಗ ನಿಮ್ಮ ಕಥೆಗಳನ್ನು ಓದುತ್ತೇನೆ! ಅದರಲ್ಲೂ ದೆವ್ವದ ಕಥೆಗಳು...” ಎಂದ.
“ಬರೀ ದೆವ್ವದ ಕಥೆಗಳಾ…?” ಎಂದು ನಕ್ಕು…,
“ನೀನು ನನ್ನ ಕಥೆಗಳನ್ನು ಓದುವುದು ನಿನ್ನ ಅಮ್ಮನಿಗೆ ಗೊತ್ತಾ?” ಎಂದೆ.
ಇಲ್ಲ ಎನ್ನುವಂತೆ ತಲೆಯಾಡಿಸುತ್ತಾ ಅವನು ನಕ್ಕ ನಗು- ನಾನು ಬರೆದಿರುವ ಮಕ್ಕಳು ಓದಬಾರದ ಕಥೆಗಳನ್ನೂ ಅವನು ಓದಿದ್ದಾನೆ ಅನ್ನುವುದರ ಅರಿವು ನೀಡಿತು!
ಹದಿಹರೆಯದ ವಯಸ್ಸು!!
ನಮ್ಮ ಮಾತಿನಮಧ್ಯೆ ಕಂಡಕ್ಟರ್ ಬಂದು ಟಿಕೆಟ್ ಕೊಟ್ಟು ಹೋದ.
“ಯಾವುದೆಲ್ಲಾ ಕಥೆಗಳು ಓದಿದ್ದೀಯ?” ಎಂದು ಕೇಳಿದೆ.
“ಕನಸು, ಬೆಟ್ಟದ ಸಹಚಾರಿ, ಬೆಟ್ಟದ ಗೊಂದಲ, ಬಾಡಿಗೆ ಮನೆ… ಇನ್ನೂ ಒಂದೆರಡು!” ಎಂದ.
“ನನ್ನಯ್ಯ?” ಎಂದೆ.
ಅದು ನಾನು ಬರೆದ ಕಥೆಗಳಲ್ಲಿ- ಸ್ವಲ್ಪ ಅತಿ ಅನ್ನಿಸುವ ಶೃಂಗಾರರಸದ ಕಥೆ!
ಹುಡುಗನ ಮುಖ- ರಕ್ತ ತೊಟ್ಟಿಕ್ಕುತ್ತದೇನೋ ಅನ್ನುವಷ್ಟು ಕೆಂಪಾಯಿತು! ತಲೆ ತಗ್ಗಿಸಿದ!
ಅವನ ಬೆನ್ನು ತಟ್ಟಿ- ಹಿಂದಕ್ಕೆ ಒರಗಿ ರಿಲಾಕ್ಸ್ಡ್ ಆಗಿ ಕುಳಿತೆ.
“ನೀವು ಬರೆದಿರುವ ದೆವ್ವದ ಕಥೆಗಳು ಪೂರ್ತಿಯಾಗಿ ಇಮ್ಯಾಜಿನೇಷನ್‌ಆ ಅಥವಾ ನಿಮಗೇನಾದರೂ ಅನುಭವವಾಗಿದೆಯಾ?” ಎಂದು ಕೇಳಿದ.
“ನಾನು ಬರೆದಿರುವ ಪ್ರತಿ ಕಥೆಯೂ ನನ್ನ ಅನುಭವವೇ..!” ಎಂದು ಹೇಳಿ ಕಣ್ಣು ಮಿಟುಕಿಸಿದೆ!
ಅವನು ನಾಚಿಕೆಯಿಂದ ನಕ್ಕ. ಒಂದೆರಡು ಕ್ಷಣಗಳ ಮೌನದ ನಂತರ…,
“ದೆವ್ವಗಳು ನಿಜಕ್ಕೂ ಇವೆಯಾ?” ಎಂದು ಕೇಳಿದ.
“ನಿಮ್ಮ ಮನೆ ಎಲ್ಲಿ?” ಎಂದು ಕೇಳಿದೆ.
“ಕಲ್ಯಾಣಗಿರಿ ನಗರ!” ಎಂದ.
“ಮತ್ತೆ ಈ ಬಸ್ ಹತ್ತಿದ್ದೀಯ?” ಎಂದೆ.
“ಇಷ್ಟು ಹೊತ್ತಿಗೆ ಕಲ್ಯಾಣಗಿರಿಗೆ ಬಸ್ ಇಲ್ಲ! ಗೌಸಿಯಾ ನಗರಕ್ಕೂ ಇದೇ ಕೊನೆಯ ಬಸ್! ಅಲ್ಲಿ ಇಳಿದರೆ ಅಕ್ಷಯಭಂಡಾರ್‌ಗೆ ಹತ್ತಿರ- ಅಲ್ಲೇ ನಮ್ಮ ಮನೆ!” ಎಂದ.
“ಹಾಗಿದ್ದರೆ ನೀನು ಆ ಸ್ಮಶಾನವನ್ನು ದಾಟಿಯೇ ಹೋಗಬೇಕು!” ಎಂದೆ.
ಹೌದೆನ್ನುವಂತೆ ತಲೆಯಾಡಿಸಿದ.
“ಈಗ ನಾನು ದೆವ್ವದ ಬಗ್ಗೆ ಹೇಳಿದರೆ ನಿನಗೆ ಹೆದರಿಕೆಯಾಗುವುದಿಲ್ಲವಾ?” ಎಂದೆ.
“ನಿಜಕ್ಕೂ ದೆವ್ವ ಇದೆ ಅನ್ನುತ್ತೀರ?” ಎಂದ.
“ದೆವ್ವ ಇದೆಯಾ ಎಂದರೆ ಏನು ಹೇಳುವುದು? ನಡೆದ ಘಟನೆಯೊಂದನ್ನು ಹೇಳಬಲ್ಲೆ! ಆದರೆ ಆ ಘಟನೆ ದೆವ್ವಕ್ಕೆ ಸಂಬಂಧಪಟ್ಟಿದ್ದು ಎಂದು ಹೇಗೆ ತೀರ್ಮಾನಿಸುವುದು? ನಾನೇ ಗೊಂದಲಗೊಂಡಿದ್ದರೂ ಇರಬಹುದು! ಆದರೂ ಅವತ್ತು ನಡೆದದ್ದನ್ನು ನಾನು ನಂಬುತ್ತೇನೆ! ಕೆಲವೊಂದು ಕಾಲ್ಪನಿಕ ಕಥೆಗಳನ್ನು- ವಾಸ್ತವ ಎಂದು ನಂಬಬಹುದೇನೋ ಆಗಲಿ ನಡೆದ ಕೆಲವೊಂದು ಘಟನೆಗಳನ್ನು ಹೇಳಿದರೆ ಯಾರೂ ನಂಬುವುದಿಲ್ಲ! ಆದರೂ ಹೇಳಿಬಿಡುತ್ತೇನೆ! ನಂಬುವುದು ನಂಬದೇ ಇರುವುದು ನಿನಗೆ ಬಿಟ್ಟಿದ್ದು! ಅಲ್ಲದೆ ನಾನೂ ನಿಮ್ಮ ಮನೆಯ ಕಡೆಯಿಂದಲೇ ಹೋಗಬೇಕು- ಅಕ್ಷಯಭಂಡಾರ್‌ದಾಟಿ ವಾಟರ್‌ಟ್ಯಾಂಕ್ಪ್ ಕಡೆಗೆ- ಒಟ್ಟಿಗೆ ಹೋಗಬಹುದು!” ಎಂದು ಅವನ ಮುಖವನ್ನು ನೋಡಿದೆ.
ಒಪ್ಪಿಗೆಯನ್ನು ಮೀರಿದ ಕುತೂಹಲವಿತ್ತು!
“ಆಗ ನಾನು ಸೆಕೆಂಡ್ ಇಯರ್ ಪಿಯುಸಿ ಓದುತ್ತಿದ್ದೆ! ಹೆಚ್ಚೂಕಮ್ಮಿ ನಿನ್ನ ವಯಸ್ಸು! ಮಿಡ್ಲ್ ಎಕ್ಸಾಂ ಕಳೆದ ನಂತರ ಒಂದುದಿನ ನಮ್ಮನ್ನು ಕಾಲೇಜಿನಿಂದ ಟೂರ್ ಕರೆದುಕೊಂಡು ಹೋಗಿದ್ದರು- ಒಂದು ದಿನದ ಮಟ್ಟಿಗೆ ಊಟಿ ಟೂರ್! ಆಗ ನಾನು ಕಾಲೇಜಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದೆ- ಇದೇ ದಾರಿಯಲ್ಲಿ! ಅಂದೂ ಕೂಡ ಬೆಳಿಗ್ಗೆ ಐದು ಗಂಟೆಗೆ ಕಾಲೇಜಿಗೆ ತಲುಪಿ ಅಲ್ಲಿಯೇ ಸೈಕಲ್ ನಿಲ್ಲಿಸಿದ್ದೆ! ಟೂರ್ ಮುಗಿಸಿ ವಾಪಸ್ ತಲುಪಿದಾಗ ರಾತ್ರಿ ಹನ್ನೊಂದೂಕಾಲು- ಹನ್ನೊಂದೂವರೆಯಾಗಿತ್ತು! ಹುಡುಗರೆಲ್ಲಾ ಅಂದು ರಾತ್ರಿ ಕಾಲೇಜಿನಲ್ಲಿಯೇ ಮಲಗಿ ಮಾರನೆ ದಿನ ಬೆಳಿಗ್ಗೆ ಮನೆಗೆ ಹೋಗುವ ತೀರ್ಮಾನ ಮಾಡಿದರಾದರೂ ನನಗೇನೋ ಕೆಟ್ಟ ಕುತೂಹಲ! ಆಗಲೇ ಮನೆಗೆ ಹೋಗಬೇಕು- ಇದೇ ದಾರಿಯಲ್ಲಿ ಅಂತ! ಅಧ್ಯಾಪಕರು ಬೇಡ ಅನ್ನಲಿಲ್ಲ! ಹೊರಟೆ...” ಎಂದು ಹೇಳಿ ನಿಲ್ಲಿಸಿದೆ.
ನಾವು ಇಳಿಯಬೇಕಾದ ಸ್ಟಾಪ್ ತಲುಪಿತ್ತು. ಇಬ್ಬರೂ ಇಳಿದು ನಡಯಲಾರಂಬಿಸಿದೆವು.
“ಇದೇ ದಾರಿಯಲ್ಲಿ…, ಒಬ್ಬನೇ…!” ಎಂದು ಹೇಳಿ ಅವನ ಮುಖವನ್ನು ನೊಡಿದೆ.
ಹೆದರಿದವನಂತೆ ಕಂಡರೂ ಅದನ್ನು ಮೀರಿದ ಕುತೂಹಲವಿತ್ತು! ನಾನೂ ಮುಗುಳುನಕ್ಕು ಸುಮ್ಮನಾದೆ! ಅವನು ಪದೇ ಪದೇ ನನ್ನ ಮುಖವನ್ನು ನೋಡುತ್ತಿದ್ದ.
“ಅಲ್ಲಿಗೆ ತಲುಪಲಿ- ಹೇಳುತ್ತೇನೆ!” ಎಂದೆ.
ಅವನ ನಡಿಗೆಯಲ್ಲಿ ಸಣ್ಣ ಹಿಂಜರಿಕೆ ಕಾಣಿಸಿತಾ ಅನ್ನುವ ಗೊಂದಲವಾಯಿತು. ಅವನಕಡೆ ನೋಡಿದೆ. ಅದೇ ಭಯ ಮಿಶ್ರಿತ ಕುತೂಹಲ! ನಾವು ಆ ಸ್ಮಶಾನವನ್ನು ತಲುಪಿದೆವು. ಸ್ಮಶಾನದ ಎದುರಿಗೆ ಒಂದು ಗ್ರೌಂಡ್ ಇತ್ತು. ಗ್ರೌಂಡಿನ ಮಧ್ಯದಲ್ಲಿ ಮಸೀದಿಯ ಧ್ವಾರದಂತೆ- ಗೋಡೆ!
ಸ್ಮಶಾನದ ಮುಂದೆ- ಸ್ಟ್ರೀಟ್‌ಲೈಟ್ ಒಂದರ ಕೆಳಗೆ ನಿಂತು…,
“ಇಲ್ಲಿಯೇ…, ಇದೇ ಜಾಗದಲ್ಲಿ…, ಆಗಲೂ ಈ ಗ್ರೌಂಡ್ ಹೀಗೆಯೇ ಇತ್ತು! ಆದರೆ ಇಂದಿನಂತೆ ಸ್ಟ್ರೀಟ್‌ಲೈಟ್ ಇರಲಿಲ್ಲ! ಕತ್ತಲು! ನಾನು ಸೈಕಲ್ ತುಳಿದು ಬರುವಾಗ ಹುಡುಗನೊಬ್ಬ- ಒಬ್ಬನೇ- ಗೋಡೆಗೆ ಬೌಲಿಂಗ್ ಮಾಡುತ್ತಿದ್ದ!!ನನಗೆ ಕುತೂಹಲವಾಯಿತು! ಸೈಕಲ್ ನಿಲ್ಲಿಸಿ ಇಳಿದೆ.
“ಇದೇನು ಇಷ್ಟು ಹೊತ್ತಿನಲ್ಲಿ ಆಡುತ್ತಿದ್ದೀಯಲ್ಲ?” ಎಂದೆ.
“ನಾಳೆ ಸೆಲೆಕ್ಷನ್ ಇದೆ- ಡಿಸ್ಟ್ರಿಕ್ಟ್ ಲೆವೆಲ್‌ಲಿ! ಪ್ರಾಕ್ಟೀಸ್ ಮಾಡುತ್ತಿದ್ದೇನೆ!” ಎಂದ.
“ಗ್ರೇಟ್...” ಎಂದು ಹೇಳಿ ಅವನನ್ನು ಅವನಪಾಡಿಗೆ ಬಿಟ್ಟು ಸೈಕಲ್ ಹತ್ತುವಾಗ ಗೋಡೆಗೆ ಬಿದ್ದ ಬಾಲ್ ನನ್ನ ಬಳಿಗೆ ಬಂದಿತು. ತೆಗೆದು ಅವನಿಗೆ ಕೊಡುವಾಗ- ಅವನ ಕಣ್ಣಿಗೆ ಅಸಾಧ್ಯ ಹೊಳಪು! ಏನೋ ಅಸಹಜತೆ! ಬೇಗ ಬೇಗನೆ ಸೈಕಲ್ ತುಳಿದು ಹೊರಟು ಬಂದೆ. ಮಾರನೇ ದಿನ ಬೆಳಿಗ್ಗೆ ಪೇಪರ್‌ನಲ್ಲಿ ಒಂದು ನ್ಯೂಸ್…, ನಿನ್ನೆ ಸಂಜೆ ಮಂಡಕಳ್ಳಿಯಬಳಿ ಕಾಲೇಜ್ ಬಸ್ ಆಕ್ಸಿಡೆಂಟ್‌ಆಗಿ ಅದರಲ್ಲಿದ್ದ ಅಷ್ಟೂ ಮಕ್ಕಳು ತೀರಿಕೊಂಡಿದ್ದರು! ತೀರಿಕೊಂಡಿದ್ದವರ ಫೋಟೋ ನೋಡಿದರೆ…, ರಾತ್ರಿ ಪ್ರಾಕ್ಟೀಸ್ ಮಾಡುತ್ತಿದ್ದ ಹುಡುಗನೂ ಇದ್ದ!” ಎಂದು ಮಾತು ನಿಲ್ಲಿಸಿ ಮುಂದಕ್ಕೆ ಹೆಜ್ಜೆ ಹಾಕುತ್ತಾ ಜೊತೆಗೆ ಬರುತ್ತಿದ್ದ ಹುಡುಗನ ಮುಖ ನೋಡಿದೆ. ಹೆದರಿ ಪೇಲವವಾಗಿರುತ್ತಾನೆ ಅಂದುಕೊಂಡರೆ ಅವನ ಕಣ್ಣಿಗೆ ಅದೇ ಹೊಳಪು! ಸ್ಟ್ರೀಟ್‌ಲೈಟ್ ದಾಟಿ ಸ್ಮಶಾನದ ಮೈನ್ ಗೇಟಿನ ಕತ್ತಲಿಗೆ ತಲುಪುತ್ತಿದ್ದಂತೆ ಅವನ ರೂಪ ಅವ್ಯಕ್ತವಾಗುತ್ತಾ ಶಬ್ದ ಮಾತ್ರ ಕೇಳಿಸಿತು…,
“ನೀವು ಬಾಲ್ ತೆಗೆದುಕೊಟ್ಟ ಆ ಹುಡುಗನನ್ನು ಮರೆತಿರಾ…?”
Comments
Post a Comment