ಮನಃಸ್ಥಿತಿ
ನನ್ನ ಮನೆಯಿಂದ ಯಾರಪ್ಪಾ ಕಾರು ಹತ್ತಿ ಹೋಗುತ್ತಿರುವುದು? ಮನೆ ಅಂದೆನಾ? ಗುಡಿಸಲು..., ಬೆಳಿಗ್ಗೆ ಕಣ್ಣು ಕಾಣದ ಅಮ್ಮನನ್ನು ಒಂದು ಕಡೆ ಕೂರಿಸಿ ಬಂದಿದ್ದೆ-ಭಿಕ್ಷೆಗೆ! ನಾನೂ ತಟ್ಟೆ ಹಿಡಿದು ಸುತ್ತಾಡಿದ್ದೆ! ಸಂಜೆ ಅಮ್ಮನನ್ನು ನಾನೇ ಕರೆದುಕೊಂಡು ಬರಬೇಕು! ಅಲ್ಲಿ ಹೋಗಿ ನೋಡಿದರೆ ಅಮ್ಮ ಇಲ್ಲ! ಮನೆಗೆ ಬಂದರೆ..., ಯಾರೋ ಗಡಿಬಿಡಿಯಲ್ಲಿ ಕಾರು ಹತ್ತಿ ಹೋಗುತ್ತಿದ್ದಾರೆ..., ಹೋಗುತ್ತಿದ್ದಾರೆ ಅಲ್ಲ- ಬರುತ್ತಿದ್ದಾರೆ! ನನ್ನ ನೇರಕ್ಕೆ! ಪಕ್ಕಕ್ಕೆ ಸರಿಯಲು ಸಮಯ ಸಿಗಲಿಲ್ಲ! ಅವರಿಗದರ ಚಿಂತೆಯೂ ಇಲ್ಲದಂತೆ ಗುದ್ದಿ..., ಅಷ್ಟು ದೂರ ಎಗರಿ ಬಿದ್ದ ನನ್ನನ್ನು ಗಮನಿಸುವ ವ್ಯವಧಾನವೂ ಇಲ್ಲದೆ ಹೊರಟು ಹೋದರು! ಬಿದ್ದಲ್ಲಿಂದ ಏಳಲು ಶ್ರಮಿಸಿದೆ. ಕಾಲಿನ ಮೂಳೆ ಮುರಿದಿದೆ ಅನ್ನಿಸಿತು! ಹಾಗೆಯೇ ತೆವಳುತ್ತಾ ಗುಡಿಸಲೊಳಕ್ಕೆ ಬಂದರೆ..., ಸತ್ತು ಬಿದ್ದಿದ್ದಾರೆ ಅಮ್ಮ! ವಸ್ತ್ರಗಳೆಲ್ಲಾ ಅಸ್ತವ್ಯಸ್ತವಾಗಿ- ರೇಪ್ ಆಗಿರುವುದರ ಸ್ಪಷ್ಟ ಸೂಚನೆ! ಈಗ ನನ್ನ ಭಾವನೆ ಏನಿರಬೇಕು? ಕಣ್ಣು ಕಾಣದ..., ಏಡ್ಸ್ ರೋಗಿಯಾದ ಅಮ್ಮ ಹೋಗಿದ್ದೇ ಒಳ್ಳೆಯದೆಂದು ಖುಷಿ ಪಡಲೋ- ಅಮ್ಮ ಹೋದರೆಂದು ದುಃಖಿಸಲೋ? ಅಮ್ಮನನ್ನು ರೇಪ್ ಮಾಡಿದ ಆತನಬಗ್ಗೆ ಕನಿಕರಪಡಲೋ, ಹಾಗೇ ಆಗಬೇಕೆಂದು ಸಂತೋಷಿಸಲೋ?
Comments
Post a Comment