ಕನಸಿನರ್ಥ!
ಬೆಳ್ಳಂ ಬೆಳಗ್ಗೆ ಒಂದು ಕನಸು ಮಾರ್ರೆ ! ಒಳ್ಳೆಯದ್ದೋ ಕೆಟ್ಟದ್ದೋ ತಿಳಿಯದ ಕನಸು ! ಕನಸಿನಲ್ಲಿ… , ನಾನು - ಸುತ್ತಲೂ ಗುಡ್ಡಗಳಿದ್ದು , ಕುರುಚಲು ಕಾಡಿನ ಮಧ್ಯೆ ಏಕಾಂತವಾಗಿದ್ದ ಒಂದು ಪಾಳು ಕಟ್ಟಡದ ಬಳಿ ಇದ್ದೆ . ಒಂದು ಗಂಡು ಒಂದು ಹೆಣ್ಣು… , ಗಂಡ - ಹೆಂಡತಿಯರಿರಬೇಕು ! ತಮ್ಮ ಪಾಪುವಿನೊಂದಿಗೆ ನನ್ನ ಸಹಾಯಕ್ಕೆ ಬಂದಿದ್ದರು . ಏನು ಸಹಾಯ ಅಂದರೆ ತಿಳಿಯದು ! ಇದ್ದಕ್ಕಿದ್ದಂತೆ ಹೆಂಡತಿ ಪಾಪುವನ್ನು ಎದೆಗೊತ್ತಿಕೊಂಡು ಅಳತೊಡಗಿದಳು ! ಏನಾಯಿತು ಏನಾಯಿತು ಎಂದು ನೋಡುತ್ತಾ ಗಂಡನೂ ಅಳತೊಡಗಿದ . ಪಾಪು ಸತ್ತಿತ್ತು !! ನನಗೋ ಎದೆಭಾರವಾಗಿ ಗಂಟಲು ಕಟ್ಟಿ ದುಃಖಭಾರದಿಂದ… , “ ಅಯ್ಯೋ… , ನನಗಾಗಿ ಬಂದ ಇವರಿಗೆ ಹೀಗಾಯಿತೇ… ! ದೇವರು ಅನ್ನುವವನಿದ್ದರೆ ನನ್ನ ಜೀವವನ್ನು ಅದಕ್ಕೆ ನೀಡಿ ಬದುಕಿಸಲಿ !” ಎಂದು ಹೃದಯದಿಂದ ರೋಧಿಸಿದೆ . ಕಣ್ಣು ಮಂಜಾಯಿತು ! ಇದ್ದಕ್ಕಿದ್ದಂತೆ ಮೋಡ ಕಟ್ಟಿ ನಡು ಮಧ್ಯಾಹ್ನದ ಸಮಯ ಸಂಜೆಯಂತಾಯಿತು ! ಧಾರಾಕಾರ ಮಳೆ ! ಕಣ್ಣು ಕುರುಡಾಗಿ ಕತ್ತಲು ಅನ್ನಿಸಿತೋ ನಿಜವಾದ ಕತ್ತಲಾದ್ದರಿಂದ ಕಣ್ಣು ಕಾಣಿಸಲಿಲ್ಲವೋ… , ಮುಂದಕ್ಕೆ ಹೆಜ್ಜೆ ಹಾಕಿದವ ದೊಪ್ಪನೆ ಕೆಳಕ್ಕೆ ಬಿದ್ದೆ ! ಮಗುವಿನ ಅಳುವಿನ ಶಬ್ದ !! ಅಷ್ಟೆ ಕನಸು ! ಮಗುವಿನ ಅಳುವಿನ ಶಬ್ದ ಅಲರಾಂ ! ಎಚ್ಚರಗೊಂಡೆ ! ಯಾಕೋ ಕನಸಿಗೆ ಅರ್ಥ ಹುಡುಕಬೇಕು ಅನ್ನಿಸಲಿಲ್ಲ !!!