ಕನಸಿನರ್ಥ!

 

ಬೆಳ್ಳಂ ಬೆಳಗ್ಗೆ ಒಂದು ಕನಸು ಮಾರ್ರೆ! ಒಳ್ಳೆಯದ್ದೋ ಕೆಟ್ಟದ್ದೋ ತಿಳಿಯದ ಕನಸು! ಕನಸಿನಲ್ಲಿ…, ನಾನು- ಸುತ್ತಲೂ ಗುಡ್ಡಗಳಿದ್ದು, ಕುರುಚಲು ಕಾಡಿನ ಮಧ್ಯೆ ಏಕಾಂತವಾಗಿದ್ದ ಒಂದು ಪಾಳು ಕಟ್ಟಡದ ಬಳಿ ಇದ್ದೆ. ಒಂದು ಗಂಡು ಒಂದು ಹೆಣ್ಣು…, ಗಂಡ-ಹೆಂಡತಿಯರಿರಬೇಕು! ತಮ್ಮ ಪಾಪುವಿನೊಂದಿಗೆ ನನ್ನ ಸಹಾಯಕ್ಕೆ ಬಂದಿದ್ದರು. ಏನು ಸಹಾಯ ಅಂದರೆ ತಿಳಿಯದು! ಇದ್ದಕ್ಕಿದ್ದಂತೆ ಹೆಂಡತಿ ಪಾಪುವನ್ನು ಎದೆಗೊತ್ತಿಕೊಂಡು ಅಳತೊಡಗಿದಳು! ಏನಾಯಿತು ಏನಾಯಿತು ಎಂದು ನೋಡುತ್ತಾ ಗಂಡನೂ ಅಳತೊಡಗಿದ.

ಪಾಪು ಸತ್ತಿತ್ತು!!

ನನಗೋ ಎದೆಭಾರವಾಗಿ ಗಂಟಲು ಕಟ್ಟಿ ದುಃಖಭಾರದಿಂದ…,

ಅಯ್ಯೋ…, ನನಗಾಗಿ ಬಂದ ಇವರಿಗೆ ಹೀಗಾಯಿತೇ…! ದೇವರು ಅನ್ನುವವನಿದ್ದರೆ ನನ್ನ ಜೀವವನ್ನು ಅದಕ್ಕೆ ನೀಡಿ ಬದುಕಿಸಲಿ!” ಎಂದು ಹೃದಯದಿಂದ ರೋಧಿಸಿದೆ.

ಕಣ್ಣು ಮಂಜಾಯಿತು! ಇದ್ದಕ್ಕಿದ್ದಂತೆ ಮೋಡ ಕಟ್ಟಿ ನಡು ಮಧ್ಯಾಹ್ನದ ಸಮಯ ಸಂಜೆಯಂತಾಯಿತು! ಧಾರಾಕಾರ ಮಳೆ! ಕಣ್ಣು ಕುರುಡಾಗಿ ಕತ್ತಲು ಅನ್ನಿಸಿತೋ ನಿಜವಾದ ಕತ್ತಲಾದ್ದರಿಂದ ಕಣ್ಣು ಕಾಣಿಸಲಿಲ್ಲವೋ…, ಮುಂದಕ್ಕೆ ಹೆಜ್ಜೆ ಹಾಕಿದವ ದೊಪ್ಪನೆ ಕೆಳಕ್ಕೆ ಬಿದ್ದೆ!

ಮಗುವಿನ ಅಳುವಿನ ಶಬ್ದ!!

ಅಷ್ಟೆ ಕನಸು! ಮಗುವಿನ ಅಳುವಿನ ಶಬ್ದ ಅಲರಾಂ! ಎಚ್ಚರಗೊಂಡೆ! ಯಾಕೋ ಕನಸಿಗೆ ಅರ್ಥ ಹುಡುಕಬೇಕು ಅನ್ನಿಸಲಿಲ್ಲ!!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!