ಬೆಟ್ಟ!

 

ಬೆಟ್ಟ!

*

ಸುಮಾರು ಎರಡು ವಾರದ ನಂತರ ಬೆಟ್ಟಕ್ಕೆ ಹೋಗುತ್ತಿದ್ದೇನೆ. ಎಂದಿನಂತೆ ಆಶ್ರಮದ ಗೇಟಿನ ಮುಂದೆ (ಪ್ರತಿದಿನ ನಾನು ಗಾಡಿ ಪಾರ್ಕ್ ಮಾಡುವುದು ಅಲ್ಲಿಯೇ!) ಗಾಡಿ ನಿಲ್ಲಿಸಿ ಸ್ಟ್ಯಾಂಡ್ ಹಾಕುವಾಗ…,

ಏನ್‌ಸಾರ್ ಸ್ವಲ್ಪದಿನ ಕಾಣಲಿಲ್ಲ?” ಎಂದರು ಕಂಬಳಿ ಹೊದ್ದು ಛೇರ್‌ನಲ್ಲಿ ಮುದುಡಿ ಕುಳಿತಿದ್ದ ನೈಟ್ ವಾಚ್‌ಮನ್- ಆಕಳಿಸುತ್ತಾ!

ಒಂದು ಟೂರ್ ಹೋಗಿದ್ದೆ…, ಒಬ್ಬನೇ! ಜೊತೆಗೆ ಸೋಮಾರಿತನ!” ಎಂದು ನಕ್ಕೆ.

ನಾನೇಲ್ಲೋ ಹುಷಾರಿಲ್ಲವೇನೋ ಅಂದುಕೊಂಡೆ…, ಚೆನ್ನಾಗಿದ್ದೀರ ತಾನೆ?” ಎಂದರು.

ಆರಾಮಾಗಿದ್ದೀನಿ…, ನೀವು ಹೇಗಿದ್ದೀರ? ಎಲ್ಲಿ ಇನ್ನೊಬ್ಬರು?” ಎಂದು ವಿಚಾರಿಸಿದೆ.

ಅವರು ರಜ ಸಾರ್…, ಮೂರು ದಿನದಿಂದ ಒಬ್ಬನೇ!” ಎಂದರು.

ಹೆದರಿಕೆ ಆಗಲ್ವಾ?” ಎಂದೆ.

ಎಂತ ಹೆದರಿಕೆ ಸಾರ್…, ಆಶ್ರಮ!” ಎಂದರು. ಮುಗುಳುನಕ್ಕು…,

ಸರಿ ಹೋಗಿ ಬರ್ತೀನಿ…!” ಎಂದು ಹೊರಟೆ.

ಅವರೂ ಮೈಮುರಿಯುತ್ತಾ ಛೇರ್‌ನಿಂದ ಎದ್ದು…,

ಸಾರ್...” ಎನ್ನುತ್ತಾ ಕಂಬಳಿಯನ್ನು ಸರಿಸಿ ಹತ್ತಿರಕ್ಕೆ ಬಂದು…,

ಜೋಪಾನ ಸರ್…, ಮೊನ್ನೆಮೊನ್ನೆ ಬೆಟ್ಟದಲ್ಲಿ ಒಂದು ಮರ್ಡರ್ ಆಗಿದೆ! ಜೊತೆಗೆ ಎರಡು ದಿನದಿಂದ ಚಿರತೆ ಇದೆ ಅಂತ ನ್ಯೂಸು!” ಎಂದರು.

ಎದೆ ಧಗ್ ಅಂದಿತಾ? ಆದರೂ ಅವರ ಮುಖವನ್ನು ನೋಡಿ ಮುಗುಳುನಕ್ಕು…,

ಪ್ರಾಣದ ಮೇಲಿನ ಆಸೆಯನ್ನು ಯಾವತ್ತೋ ಬಿಟ್ಟಿದ್ದೀನಿ! ಸೊ ಹೆದರಿಕೆಯಿಲ್ಲ! ನಡೆಯುವ ಯಾವುದನ್ನೂ ತಡೆಯಲಾಗುವುದಿಲ್ಲ ಅಲ್ವಾ…?” ಎಂದೆ.

ಏನೋ ಸರ್…, ಹೇಳಬೇಕು ಅನ್ನಿಸಿತು ಹೇಳಿದೆ! ಜೋಪಾನ ಹೋಗಿಬನ್ನಿ!” ಎಂದರು.

ಅಲ್ಲಿ ಹತ್ತುನಿಮಿಷದ ವಾರ್ಮಪ್ ಮುಗಿಸಿ ಮೆಟ್ಟಲಿನಕಡೆಗೆ ಹೆಜ್ಜೆ ಹಾಕಿದೆ. ಬೆಳಗ್ಗಿನ ಐದುಗಂಟೆ! ಪಾಪಿ ಮನುಷ್ಯ- ಹೇಳದೆ ಸುಮ್ಮನಿರಬಹುದಿತ್ತು! ಹೇಳಿ ಗೊಂದಲಗೊಳಿಸಿದ. ಆದರೆ ಅಹಂ ಹಿಂದಕ್ಕೆ ಹೋಗಲು ಒಪ್ಪುತ್ತಿಲ್ಲ!

ಇವತ್ತು ಮಾಮೂಲಿಗಿಂತ ನಿಶ್ಶಬ್ದವಾಗಿದೆಯಾ ಅನ್ನಿಸಿತು! ಏನೋ ಒಂದು ರೀತಿಯ ದುಗುಡ! ಆತನ ಮಾತಿನ ಪ್ರಭಾವವೇ ಎಂದು ಗೊತ್ತು- ಆದರೂ…!!

ಮೆಟ್ಟಿಲು ಹತ್ತಲು ಶುರುಮಾಡುವಾಗಲೇ…,

ಭೌ!” ಎನ್ನುತ್ತಾ ನಾಯಿಯೊಂದು ಓಡಿಬಂತು- ಏನನ್ನೋ ಕಂಡು ಹೆದರಿದಂತೆ!!

ಹಾಳು ಮನಸ್ಸೇ ಚಂಚಲಗೊಳ್ಳದಿರು! ಈ ಹಾಳು ಕಥೆಗಳು, ನಂಬಿಕೆಗಳಿಂದ ಯಾವ ಕಾಲಕ್ಕೆ ಮುಕ್ತಿಯೋ!!!

ಪ್ರಾಣಿಗಳಿಗೆ ಅತೀಂದ್ರಿಯ ಶಕ್ತಿಯಿದೆಯಂತೆ! ಮನುಷ್ಯನ ಅನುಭವಕ್ಕೆ ಎಟುಕದ ಸುತ್ತಲಿನ ಅಸ್ವಾಭಾವಿಕ ಅತೀಂದ್ರಿಯ ಶಕ್ತಿಯನ್ನು ಅರಿಯುವ ಪ್ರತ್ಯೇಕ ಸಾಮರ್ಥ್ಯವಿದೆಯಂತೆ!

ನಾಯಿ “ಏನನ್ನೋ ಕಂಡು ಹೆದರಿದಂತೆ” ಓಡಿಬಂತು ಅಂದರೆ ಅರ್ಥ ಗೊತ್ತಾಯಿತಲ್ಲಾ?

ಮೆಟ್ಟಿಲು ಹತ್ತಲು ಶುರುಮಾಡುವಾಗಲೇ ಎದೆ ದಬದಬನೆ ಬಡಿದುಕೊಳ್ಳತೊಡಗಿತು! ನನ್ನರಿವಿಲ್ಲದೆ ಬೆವರು…!

ನೂರು ಇನ್ನೂರು ಮುನ್ನೂರು…, ಧಾರಾಕಾರ ಬೆವರು- ಏದುಸಿರು! ಅಕ್ಕಪಕ್ಕದಲ್ಲಿ ಏನೋ ಚಲನೆ! ಅದು ಸಾಮಾನ್ಯವೇ ಆದರೂ ಇಂದೇನೋ ಪ್ರತ್ಯೇಕತೆ ಇರುವಂತೆ!

ಮರಳಲಂತೂ ಅನ್ನಿಸಲೇ ಇಲ್ಲ! ಎಂದಿನಂತೆ ಮುಳ್ಳುಹಂದಿಯೊಂದು ಎಡದಿಂದ ಬಲಕ್ಕೆ ದಬಕ್ಕೆನೆ ಓಡಿತು. ಎರಡು ಸಣ್ಣ ಕಣ್ಣುಗಳು- ಮುಂಗುಸಿಯದ್ದು ಪಳಪಳನೆ ಹೊಳೆಯುತ್ತಿತ್ತು! ಉಸಿರು ನನ್ನ ಕಂಟ್ರೋಲ್‌ಗೆ ಸಿಗದೆ ಗಂಟಲು ಕಟ್ಟತೊಡಗಿತು! ನೀರು ಬೇಕೆ ಬೇಕು ಅನ್ನುವ ಅನ್ನಿಸಿಕೆ! ಆದರೂ ಹುಚ್ಚು ಧೈರ್ಯವೋ ಹಠವೋ…, ಮರಳಬೇಕು ಅನ್ನಿಸಲೇ ಇಲ್ಲ!

ಆರುನೂರನೇ ಮೆಟ್ಟಿಲು ಹತ್ತಿ ರಸ್ತೆಗೆ ಬಂದಾಗ ಎಡಗಡೆ ಏನೋ ರಸ್ತೆ ದಾಟಿ ಕಾಡಿನೊಳಕ್ಕೆ ಹೋದ ಅನುಭವ! ಇನ್ನು ಇಳಿಯುವುದಕ್ಕಿಂತ ಮೇಲಕ್ಕೆ ಹೋಗುವುದೇ ಒಳಿತು ಅನ್ನಿಸಿ ದಬದಬನೆ ನೂರು ಮೆಟ್ಟಿಲು ಹತ್ತಿ ನಂದಿಯಬಳಿಗೆ ಬಂದೆ. ಅಲ್ಲಿ ನಲ್ಲಿಯಬಳಿಗೆ ಹೋಗಲೂ ಹೆದರಿಕೆ! ಹೆ--ರಿ-ಕೆ!!!!! ಆ ಭಾವವೇ ನನ್ನ ಅಹಂ ಅನ್ನು ಧ್ವಂಸ ಮಾಡಿದೆ ಅನ್ನಿಸಿ ಆದದ್ದಾಗಲಿ ಎಂದು ನಲ್ಲಿಯಬಳಿಗೆ ಹೋಗಿ ಹೊಟ್ಟೆತುಂಬಾ ನೀರುಕುಡಿದು ಮುಖಕ್ಕೆ ನೀರು ಎರಚಿಕೊಂಡೆ. ಏನೋ ನಿರಾಳತೆ! ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಅಸ್ವಾಭಾವಿಕವಾಗಿ ಏನೂ ಕಾಣಿಸಲಿಲ್ಲ! ಪುನಃ ಮೆಟ್ಟಿಲು ಹತ್ತಿ ಮೇಲಕ್ಕೆ ಬಂದು ಎಂದಿನಂತೆ ಆಂಜನೇಯನ ಗುಡಿಯಬಳಿ ವ್ಯಾಯಾಮ ಮಾಡಿದೆ. ಆಗಲೂ ಕಾಡಿನೊಳಗೆ ಏನೋ ಚಲನೆ. ಯಾಕೋ ಹೆದರಿಕೆ ಆಗಲಿಲ್ಲ- ಹುಚ್ಚು ಧೈರ್ಯ!

ವ್ಯಾಯಾಮ ಮುಗಿಸಿ ದೇವಸ್ಥಾನವನ್ನು ಒಂದು ಸುತ್ತು ಸುತ್ತಿ ಕೆಳಗಿಳಿಯತೊಡಗಿದೆ. ಅಕ್ಕಪಕ್ಕ ಗಮನಿಸದೆ ದಡದಡನೆ ಕೆಳಗಿಳಿದು ಗಾಡಿಯಬಳಿ ಬಂದೆ. ವಾಚ್‌ಮನ್‌ನನ್ನು ನೋಡಿ ನಕ್ಕು…,

ಇವತ್ತು ಬದುಕಿದೆ! ಇನ್ನು ನಾಳೆ ನೋಡೋಣ!” ಎಂದೆ.

ಏನು ಹೇಳ್ತಿದೀರ ಸಾರ್…? ನೀವು ಗಾಡಿ ನಿಲ್ಲಿಸಿ ಏನೋ ಕೇಳಿದ್ದು ಗೊತ್ತಾಯಿತು! ಆದರೆ ಅರ್ಧ ಮಂಪರಲ್ಲಿದ್ದೆ! ಉತ್ತರ ಕೊಡೋಕೆ ಆಗಲಿಲ್ಲ! ಬೇಜಾರು ಮಾಡ್ಕೊಂಡ್ರೇನೋ ಅಂತ ಕಾಯ್ತಾ ನಿಂತಿದ್ದೆ!!” ಎಂದರು.

ಆತನನ್ನೇ ಸೂಕ್ಷ್ಮವಾಗಿ ನೋಡಿದೆ. ಹೋಗುವಾಗ ಇದ್ದವರಲ್ಲ!! ಆಯೋಮಯನಾಗಿ…,

ಇನ್ನೊಬ್ಬರೆಲ್ಲಿ?” ಎಂದೆ.

ಗೊತ್ತಿಲ್ಲ ಸರ್…, ಮೂರುದಿನ ಮುಂಚೆ ಬೆಟ್ಟಕ್ಕೆ ಹೋಗಿ ಅಲ್ಲಿಂದ ಹಾಗೇ ಬಸ್ಸಲ್ಲಿ ಮನೆಗೆ ಹೋಗಿ ಬರ್ತೀನಿ ಅಂತ ಹೋದವ- ಪತ್ತೇನೇ ಇಲ್ಲ!” ಎಂದರು.

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!