ಮಹಾಕಾವ್ಯ
"ಹೇಗಿದೀಯ.., ಇವತ್ತು?" ಎಂದು ಕೇಳಿದೆ.
"ಚೆನ್ನಾಗಿಲ್ಲ!" ಎಂದಳು.
"ನಿನ್ನೆ 90% ಚೆನ್ನಾಗಿದ್ದೆ?
ಇವತ್ತು 100% ಚೆನ್ನಾಗಿರಬೇಕಲ್ಲವಾ...?
ಚೆನ್ನಾಗಿಲ್ಲದಿರುವುದು..,
ಮನಸ್ಸೋ..., ಶರೀರವೋ?" ಎಂದೆ.
"ಎರಡೂ!" ಎಂದಳು.
"ಈಗ ನಾ ಏನು ಹೇಳಬೇಕು?"
"ಏನಾದರೂ ಹೇಳು!"
"ಮನಸ್ಸು ನಿರಾಳವಾಗಲು...,
ನೀನೇ; ಒಂದು ಕವಿತೆ ಬರಿ-ಅದೇ...,
ದೇಹವನ್ನೂ ಹಗುರಗೊಳಿಸುತ್ತದೆ!" ಎಂದೆ.
"ನೀನೇ ಬರಿಪ್ಲೀಸ್!!" ಎಂದಳು.
ಹೇಳಿದ್ದು ಅವಳಾದ್ದರಿಂದ ಎದೆ ಧಗ್ ಎಂದಿತು!
"ನಾ ಕವಿಯಲ್ಲ" ಎಂದೆ.
"ಮತ್ತೇ..., ನಾ ನಿನ್ನ ಕವಿತೆ ಅನ್ನುತ್ತಿದ್ದೆ?" ಅಂದಳು!
ಉಸಿರು ಸಿಕ್ಕಿಕೊಂಡಿತು!
"ನಿನಗಿಂತ ಸಮರ್ಥವಾಗಿ ಪದಗಳನ್ನು ಬಳಸುವವರಾರು?
ನಿನ್ನದೇ ಪದಗಳನ್ನು ತಿರಿಚುತ್ತೇನೆ!" ಎಂದೆ.
ಅವಳು ಮೌನ!
*
ಒಲವು ಮೂಡಿದ್ದು ಅರಿತುಕೊಂಡೆಯಲ್ಲ- ಧನ್ಯ!!
ನ-ನ್ನಿಂ-ದ....,
ಎಷ್ಟೊಂದು ನವಿರು ಪದಗಳು-
ನಿನ್ನ ಕಾರಣವಾಗಿ!
ನನ್ನೆದೆಯ ನೀನೆಂಬ ಕವಿತೆಯ
ಪದಗಳಾಗಲು
ಪ್ರತಿದಿನ ಸಂಜೆ
ತವಕದಿಂದ
ಕಾಯುತ್ತಿದ್ದೀಯೆನ್ನುವ ಅರಿವು
ನನ್ನಹಂಕಾರ!
ಒಲಿದ ಒಲವು
ಕವಿತೆ ಕಟ್ಟುವ ಕಸುವಾಗಿ
ಪ್ರತಿ ಕ್ಷಣ ನಿನ್ನ ಧ್ಯಾನದಲಿ
ಹಡೆದ ಪದಗಳೆಲ್ಲಾ
ಕವಿತೆಗಳಾಗಿ
ನೀ ನಿರಾಳವಾಗುವುದಾದರೆ...,
ಅದೇ...,
ನನ್ನನ್ನೂ ಬದುಕಿಸಲಿ!
ನಿನ್ನ ಕಾರಣವಾಗಿ
ನನ್ನಲ್ಲಿ ಹುಟ್ಟಿದ
ಪದಗಳಾದ್ದರಿಂದ
ನಾ ಬರೆಯುವುದೆಲ್ಲವೂ
ಮಹಾಕಾವ್ಯ!
Comments
Post a Comment