ಓಂ!
ಓಂ! * ಯಾರೂ ಹೇಳದ ಕಥೆಯೊಂದನ್ನು ಹೇಳುತ್ತೇನೆ. ಇದು ನಡೆದಿರುವುದು ದೇವರ ಕಾಡಿನಲ್ಲಿ. ದೇವರಲ್ಲಿ ಕಾಡೋ ಕಾಡಿನಲ್ಲಿ ದೇವರೋ…, ಒಟ್ಟು ಕಥೆ ನಡೆದದ್ದು ದೇವರ ಕಾಡಿನಲ್ಲಿ. ಸುಮಾರು ನೂರು ವರ್ಷ ಮುಂಚೆ ನಡೆದ ಘಟನೆ- ಈಗ ಕಥೆಯಾಗಿದೆ. ಆಗ ನನಗೆ ಹತ್ತು ವರ್ಷ ವಯಸ್ಸು. ಓಣಂ ಹಬ್ಬಕ್ಕೆ ಹೂ ಕೀಳಲು ಹೋಗಿದ್ದೆ. ಒಬ್ಬನೇ. ಅಷ್ಟೊಂದು ಧೈರ್ಯವಂತನೇನೂ ಅಲ್ಲ. ಆದರೂ ಹೆದರಿಕೆಯ ನೆನಪಿಲ್ಲದೆ ಹೂ ಕೀಳುತ್ತಿದ್ದೆ. ಹೆದರಿಕೆ ಅನ್ನುವುದು ಸುಮ್ಮನೆ ಬರುವುದಿಲ್ಲ. ಅದಕ್ಕೊಂದು ಕಾರಣವೋ ಏನಾದರೂ ನೆನಪೋ ಉಂಟಾಗಬೇಕು! ಅದೆರಡೂ ಇಲ್ಲದೆ ಹೂ ಕೀಳುತ್ತಿದ್ದವನಿಗೆ ಆಕಸ್ಮಿಕವಾಗಿ ಆಕಳಿಕೆ ಬಂತು. ನನ್ನರಿವಿಲ್ಲದೆ ಕಣ್ಣು ಮುಚ್ಚಿಕೊಂಡವನಿಗೆ ಗಾಢ ನಿದ್ರೆ. ನಿದ್ರೆಯಲ್ಲೇನು ಕನಸು ಗೊತ್ತೇ…? ಅನಂತಶಯನ- ವಿಷ್ಣು. ನಿದ್ದೆ ಗಾಢವೇ ಆದರೂ ಕಾಣುತ್ತಿರುವುದು ಕನಸು ಅನ್ನುವ ಅರಿವು! ಪ್ರಶ್ನೆ…! ಛೇ…, ನನಗೇಕೆ ವಿಷ್ಣು ಕನಸಿನಲ್ಲಿ ಬರಬೇಕು? ನಾನು ಶಿವಭಕ್ತನಲ್ಲವಾ? ನಿಜವೇ…, ನಾನು ಹೇಗೆ ಶಿವಭಕ್ತನಾದೆ? ಅಂಡಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ ಅನ್ನುವುದು ಒಂದುಕಡೆ, ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಅನ್ನುವುದು ಮತ್ತೊಂದುಕಡೆ! ಮತ್ತೆ ವ್ಯತ್ಯಾಸವೇನು? ಹೇಗೆ? ಆ ವಯಸ್ಸಿನಲ್ಲೇ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನೂ, ದೇವೀಭಾಗವತವನ್ನೂ ಓದಿದವನಿಗೊಂದು ಭಯಂಕರ ಗೊಂದಲವಿತ್ತು. ಕೋಪ ಬರುವ ಹಾಗಿದ್ದರೆ ದೇವರೇಕೆ ದೇವರು? ಪಾರ್ವತಿದೇವಿಗೆ ಅಸೂಯೆಯಾಗುತ್ತದೆ, ಲಕ್ಷ್ಮಿದ...