ಬೆಟ್ಟದಲ್ಲಿ ಸಿಕ್ಕವ!

 ಬೆಟ್ಟದಲ್ಲಿ ಸಿಕ್ಕವ!

*

ಕೆಲವೊಂದು ಪರಿಚಯಗಳು ತೀರಾ ಆಕಸ್ಮಿಕ ಮತ್ತು ತುಂಬಾ ಕುತೂಹಲಕಾರಿಯಾಗಿರುತ್ತದೆ.

ಅಷ್ಟು ವರ್ಷದಿಂದ ಬೆಟ್ಟ ಹತ್ತುತ್ತಿದ್ದೇನೆ. ಕೆಲವರು ಪರಿಚಯವೇ ಆಗುವುದಿಲ್ಲ. ಪರಸ್ಪರ ನೋಡಿದರೂ ಪ್ರತಿದಿನ ಅಪರಿಚಿತರಂತೆಯೇ ಇರುತ್ತೇವೆ. ಕೆಲವರು ಮುಗುಳುನಗುವಿಗೆ ಸೀಮಿತ. ಕೆಲವರು ಹಾಯ್ ಹೇಳಿ ಸುಮ್ಮನಾಗುತ್ತಾರೆ. ಕೆಲವೇ ಕೆಲವರು ಮಾತ್ರ…, ಎಲ್ಲಿ ಎರಡುಮೂರು ದಿನದಿಂದ ಕಾಣಿಸಲಿಲ್ಲ ಅಂತಾನೋ…, ಎಷ್ಟು ದಿನದಿಂದ ಹತ್ತುತ್ತಿದ್ದೀರಿ ಅಂತಾನೋ…, ಪ್ರತಿದಿನ ನೋಡ್ತೀನಿ ನೀವು ತುಂಬಾ ಸ್ಪೀಡ್ ಆದ್ದರಿಂದ ಮಾತನಾಡಿಸಲು ಸಾಧ್ಯವಾಗಿರಲಿಲ್ಲ ಅಂತಾನೋ ಮಾತಿಗೆ ಶುರುವಿಡುತ್ತಾರೆ. ನಾನಾಗಿ ನಾನಂತೂ ಯಾರೊಬ್ಬರನ್ನೂ ಮಾತನಾಡಿಸಿದವನಲ್ಲ. ನಿಜ ಹೇಳಬೇಕೆಂದರೆ ಯಾರನ್ನಾದರೂ ಗಮನಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ. ಟಕಟಕನೆ ಹತ್ತಿ ಟುಪುಟುಪು ಇಳಿದು ಹೋಗುವುದಷ್ಟೆ!

ಆದರೆ ಸ್ವಲ್ಪ ದಿನದಿಂದ ಆ ಇಬ್ಬರು ಹುಡುಗರು ನನ್ನ ಗಮನವನ್ನು ಸೆಳೆದಿದ್ದಾರೆ. ನಾನು ಆಶ್ರಮದಬಳಿ ಗಾಡಿನಿಲ್ಲಿಸಿ ಹತ್ತು ನಿಮಿಷದ ವಾರ್ಮಪ್ ಶುರುಮಾಡುವ ಸಮಯಕ್ಕೆ ಸರಿಯಾಗಿ ನನ್ನನ್ನು ದಾಟಿ ಹೋಗುತ್ತಾರೆ- ಗಾಡಿಯಲ್ಲಿ. ಅವರು ಗಾಡಿಯನ್ನು ನಿಲ್ಲಿಸುವುದು ಮೆಟ್ಟಿಲು ಶುರುವಾಗುವ ಜಾಗದಲ್ಲಿ. ನಾನು ಗಾಡಿ ನಿಲ್ಲಿಸುವ ಜಾಗದಿಂದ ಇನ್ನೂರು ಮುನ್ನೂರು ಮೀಟರ್ ದೂರದಲ್ಲಿ- ಬೆಟ್ಟಕ್ಕೆ ಹತ್ತಿರವಾಗಿ. ಅದರಲ್ಲಿ ಹಿಂದೆ ಕುಳಿತಿರುವವನ ರೀತಿ ನೋಡಿದರೆ ಅವರಿಬ್ಬರು ಗಂಡು ಜೋಡಿಗಳೇನೋ ಅನ್ನಿಸುತ್ತದೆ!!

ವಾರ್ಮಪ್ ಮುಗಿಸಿ ಮೆಟ್ಟಲಿನಕಡೆ ನಡೆಯುತ್ತೇನೆ. ನನ್ನ ಮನಸ್ಸಿನಲ್ಲಿ ಅವರನ್ನು ಓವರ್‌ಟೇಕ್ ಮಾಡಬೇಕು ಅನ್ನುವ ಹಠದ ಹೊರತು ಇನ್ನೇನೂ ಇರುವುದಿಲ್ಲ! ಸರಿಯಾಗಿ ನಂದಿಯನ್ನು ದಾಟಿ ಎಂಟುನೂರು ಮತ್ತು ಒಂಬೈನೂರು ಮೆಟ್ಟಿಲುಗಳ ಮಧ್ಯೆ ಅವರನ್ನು ನಾನು ದಾಟುತ್ತೇನೆ!

ಆದರೆ ಇಂದೇಕೋ ಮೆಟ್ಟಿಲಿನ ಕಡೆಗೆ ನಡೆಯುತ್ತಿದ್ದವನಿಗೆ ಅವರಿನ್ನೂ ಗಾಡಿಯ ಬಳಿಯಲ್ಲೇ ನಿಂತಿರುವುದು ಕಾಣಿಸಿತು! ಕುತೂಹಲವಾಯಿತು. ಅವರನ್ನೇ ನೋಡುತ್ತಾ ನಡೆಯುವುದು ನನ್ನ ಅಹಂಗೆ ಒಪ್ಪಿತವಲ್ಲವಾದ್ದರಿಂದ ನನ್ನಪಾಡಿಗೆ ನಾನು ಅವರನ್ನು ದಾಟಿ ಹೋಗುವಾಗ…,

“ಹಾಯ್ ಸರ್!” ಎಂದ ಒಬ್ಬ.

ನನ್ನನ್ನೇನಾ ಅನ್ನುವಂತೆ ಆಚೆ ಈಚೆ ನೋಡಿ…,

“ಹಾಯ್!” ಎಂದೆ.

“ಇವತ್ತೊಂದುದಿನ ಒಟ್ಟಿಗೆ ಹತ್ತಬಹುದಾ ಸರ್…, ನೀವು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಕಥೆ ಓದಿದೆ. ಅದರಲ್ಲಿ ಒಂದು ಸಾಲು ಕೆಣಕಿತು- ನನ್ನಯೋಚನೆ ಬಿಡು, ನಿನ್ನದೇನಿದೆ ನೋಡಿಕೋ ಅನ್ನುವ ಸಾಲು! ಅದರಬಗ್ಗೆ ಮಾತನಾಡಬೇಕು!” ಎಂದ.

ಸಾಮಾನ್ಯವಾಗಿ ಬೆಟ್ಟವನ್ನು ನಿಧಾನವಾಗಿ ಹತ್ತುವುದಾಗಲಿ, ನಿಂತು ನಿಂತು ಹತ್ತುವುದಾಗಲಿ ನನಗೆ ಅಸಹನೆಯನ್ನು ಹುಟ್ಟಿಸುವ ವಿಷಯ! ಯಾವ ಕಾರಣವೂ ಇಲ್ಲದೆ ಒಬ್ಬರು- ಒಟ್ಟಿಗೆ ಹತ್ತೋಣವೆಂದೋ…, ಅಥವಾ ಬೇರೆ ಯಾವುದೇ ಕಾರಣವಾಗಿದ್ದರೂ ಕ್ಷಮಿಸಿ ಎಂದು ಹೇಳಿ ಹೊರಟು ಹೋಗುತ್ತಿದ್ದೆನೇನೋ!

ಇಲ್ಲಿ ವಿಷಯ ನನ್ನ ಕಥೆ! ಕಥೆಯಲ್ಲಿನ ಸಾಲು!

ಉತ್ತರವೇನೂ ಹೇಳಲಿಲ್ಲವಾಗಲಿ ನಿಧಾನವಾಗಿ ಹೆಜ್ಜೆ ಹಾಕಿದೆ. ಅವರೂ ನನ್ನೊಂದಿಗೆ ಹೆಜ್ಜೆ ಹಾಕಿದರು!

*

“ನಾನೊಬ್ಬಳು ಹುಡುಗಿಯನ್ನು ಡೀಪ್ ಆಗಿ ಲವ್ ಮಾಡಿದೆ ಸರ್!” ಎಂದ.

“ಪ್ರತಿಯೊಬ್ಬರೂ ಡೀಪ್ ಆಗಿಯೇ ಲವ್ ಮಾಡುವುದು!” ಎಂದೆ.

ಒಂದು ಕ್ಷಣದ ಅವನ ಅಸಹನೆ ನನ್ನ ಗಮನಕ್ಕೆ ಬಂತು. ಮೌನಿಯಾದೆ.

“ನಿಮ್ಮ ಕಥೆಯಲ್ಲಿ ಗಂಡು ಹೆಣ್ಣಿಗೆ ಹೇಳಿದಂತೆ ಇದೆ ಆ ಮಾತುಗಳು! ಆದರೆ ನನ್ನ ಬದುಕಿನಲ್ಲಿ ಅವಳು ನನಗೆ ಹೇಳಿದಳು!” ಎಂದ.

ನಾನೇನೂ ಮಾತನಾಡಲಿಲ್ಲ. ಅವನೇ…,

“ಆದರೂ ಹೇಗೆ ಸರ್…, ನಾವು ಅಷ್ಟು ಪ್ರೀತಿಸುವವರು ಅಥವಾ ನಮ್ಮನ್ನು ಅಷ್ಟು ಪ್ರೀತಿಸುವವರು ಆ ರೀತಿಯ ಮಾತುಗಳನ್ನು ಹೇಗಾದರೂ ಆಡುತ್ತಾರೋ…!” ಎಂದು ಹೇಳಿ ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು…,

“ನಮ್ಮ ಪ್ರೇಮ ಅದಾಗಿ ಅದೇ ಆಗಿದ್ದು ಸರ್! ನಾನೋ ಅವಳೋ ಪ್ರಪೋಸ್ ಮಾಡಿ ಆದ ಪ್ರೇಮವಲ್ಲ! ಶುರುವಿನಲ್ಲಿ ಎಷ್ಟು ಚಂದವಿತ್ತು! ಬರುಬರುತ್ತಾ ಹದಗೆಟ್ಟಿತು! ಕಾರಣ ನಾನೇ ಸರ್! ಅವಳು ಓಪನ್ ಆದಷ್ಟು ನನ್ನಿಂದ ಓಪನ್ ಆಗಲಾಗಲಿಲ್ಲ. ಪದೇ ಪದೇ ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾರದೆ ಹೋದೆ. ಆದರೆ ಅವಳೆಂದರೆ ನನಗೆ ಪ್ರಾಣ ಸರ್! ಅವಳಿಲ್ಲದೆ ಬದುಕಲಾರೆ ಅನ್ನುವಷ್ಟು!” ಎಂದ.

ಇನ್ನೂ ನೂರನೆಯ ಮೆಟ್ಟಿಲನ್ನೂ ದಾಟಿರಲಿಲ್ಲ. ಅವರಿಬ್ಬರೂ ಏದುಸಿರು ಬಿಡಲು ಪ್ರಾರಂಭಿಸಿದ್ದರು. ನನಗಾದರೋ ಉಸಿರಾಟದಲ್ಲಿ ಒಂದು ಪರ್ಸೆಂಟ್ ಕೂಡ ವೇರಿಯೇಷನ್ ಆಗದಷ್ಟು ನಿಧಾನ ಅದು! ಒಂದು ನಿಮಿಷ ನಿಂತು, ಸುಧಾರಿಸಿ ಪುನಃ ಪ್ರಾರಂಭಿಸಿದ…,

“ಆಮೇಲಾಮೇಲೆ ಅವಳಿಗನುಗುಣವಾಗಿ ನಾನು ಬದಲಾದೆ ಸರ್! ಏನೆಂದರೆ ಏನೂ ಮುಚ್ಚಿಡದೆ ಹೇಳುವಷ್ಟು…, ಅವಳ ಯಾವುದೇ ಪ್ರಶ್ನೆಗೆ ಸತ್ಯವಾದ ಉತ್ತರವನ್ನೇ ಕೊಡುವಷ್ಟು! ಆದರೆ ನನಗೆ ವಿರುದ್ಧವಾಗಿ ಅವಳು ಬದಲಾದಳು! ಅಕಾರಣವಾಗಿ ಇರಿಟೇಟ್ ಆಗತೊಡಗಿದಳು…, ನನ್ನ ಮುಖ ನೋಡಿದರೂ ಅಸಹ್ಯ ಅನ್ನುವಷ್ಟು ನನ್ನಿಂದ ದೂರವಾದಳು!” ಎಂದ.

ನಾನು ಮೌನವಾಗಿಯೇ ಇದ್ದೆ. ಆದರೆ ಅವನು ತನ್ನ ಮಾತು ಮುಗಿಯಿತು ಅನ್ನುವಷ್ಟು ಮೌನವಾದಾಗ…,

“ಯಾಕೆ ದೂರವಾದರು? ಅಕಾರಣ ಅನ್ನುವ ಹಾಗಿಲ್ಲ! ನೀವು ಹೇಳಿದ ನಿಜಗಳು, ಒಪ್ಪಿಕೊಂಡ ವಿಷಯಗಳು ಅವರಿಗೆ ಇಷ್ಟವಾಗಿರುವುದಿಲ್ಲವೇನೋ?” ಎಂದೆ.

“ಇರಬಹುದು ಸರ್…, ಆದರೆ ನಾನು ಅಂತವನೇ ಅನ್ನುವುದು ಗೊತ್ತಿದ್ದೇ ನನ್ನೊಂದಿಗೆ ಬೆರೆತವಳು…!” ಎಂದು ನಿಲ್ಲಿಸಿ…,

“ಮೊನ್ನೆ ಮೊನ್ನೆ ಸರ್…, ಅವಳಿಗೆ ವಿವರಣೆ ಕೊಟ್ಟೆ…, ಅವಳೆಷ್ಟು ಮುಖ್ಯ, ಅವಳಿಗೆ ನಾನುಕೊಟ್ಟಿರುವ ವ್ಯಾಲ್ಯು, ಪ್ರತಿಕ್ಷಣ ಅವಳನ್ನೇ ನೆನೆದು ಬದುಕುತ್ತಿರುವುದು…, ಎಲ್ಲವನ್ನೂ ಹೇಳಿದೆ ಸರ್! ಅದಕ್ಕೆ ಅವಳೇನು ಹೇಳಿದಳು ಗೊತ್ತಾ ಸರ್…?” ಎಂದು ನಿಲ್ಲಿಸಿದ.

“ನನ್ನಯೋಚನೆ ಬಿಡು, ನಿನ್ನದೇನಿದೆ ನೋಡಿಕೋ- ಅಂದಿರಬೇಕು!” ಎಂದೆ.

“ಅದೇ ಸರ್! ಅದು ಹೇಗೆ ಸಾಧ್ಯ ಸರ್…?” ಎಂದ.

“ಆಮೇಲೇನಾಯ್ತು?” ಎಂದು ಕೇಳಿದೆ.

“ಅವಳು ನನ್ನನ್ನು ಕೊಂದಳು!” ಎಂದ.

“ವ್ಹಾಟ್?” ಎಂದೆ.

“ಹೀಗೆ ತಾನೆ ನೀವು ಕಥೆಯನ್ನು ಮುಗಿಸೋದು?” ಎಂದು ನಕ್ಕ.

ನಾನೂ ನಕ್ಕು…,

“ಹಹ್ಹಹ್ಹಾ…, ಹಾಗೇನಿಲ್ಲ…! ಕೆಲವು ಕಥೆಗಳನ್ನು ಇರುವಂತೆಯೇ ಮುಗಿಸುತ್ತೇನೆ…, ಹೇಳಿ…, ಏನಾಯ್ತು ಆಮೇಲೆ? ನೀವು ಇಂಡಿಪೆಂಡೆಂಟ್ ಆದ್ರಾ?” ಎಂದು ಕೇಳಿದೆ.

“ಹು ಸರ್…, ಅವಳನ್ನು ಕೊಂದುಬಿಟ್ಟೆ!” ಎಂದ.

ಒಂದುಕ್ಷಣ ನನ್ನ ಮಿದುಳು ಸ್ತಬ್ಧವಾಯಿತು! ಪುನಃ ತಮಾಷೆ ಮಾಡುತ್ತಿದ್ದಾನೇನೋ ಅನ್ನುವಂತೆ ನೋಡಿದೆ.

“ನಿಜ ಸರ್…! ಅವಳು ಸತ್ತಿರುವ ವಿಷಯ ಇನ್ನೂ ಯಾರಿಗೂ ಗೊತ್ತಿಲ್ಲ!” ಎಂದ.

“ಮತ್ತೆ ಇವರಿಗೆ?” ಎಂದೆ ನಡುಗುವ ಸ್ವರದಲ್ಲಿ.

“ಯಾ…, ಯಾರು ಸರ್?” ಎಂದ ಅಕ್ಕಪಕ್ಕ ನೋಡುತ್ತಾ…!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!