ತಣ್ಣನೆಯ ಕ್ರೌರ್ಯ!

 

ತಣ್ಣನೆಯ ಕ್ರೌರ್ಯ!

*

ಅವಳೊಂದು ನೆರಳು.

ನನ್ನರಿವಿಲ್ಲದೆಯೇ ನನ್ನೊಂದಿಗಿರುವ ನೆರಳು.

ಪ್ರತಿಕ್ಷಣದ ಅವಳ ಪ್ರಾರ್ಥನೆಯೇ ನನ್ನ ಸಂರಕ್ಷಣೆ.

ಅವಳ ಪ್ರೇಮವಿಲ್ಲದಿದ್ದರೆ ನಾನಿಲ್ಲ!

ಬದಲಾಗಿ ಅವಳಿಗೆ ನಾನು ಕೊಡುತ್ತಿರುವುದು ಏನು?

ನೋವು…!

ಅದೊಂದು ವಿಚಿತ್ರ ಅನುಭೂತಿ ನನಗೆ!

ಆ ಅನುಭೂತಿಯಿಂದ ನಾನು ಹೊರಬರಬೇಕಿತ್ತು…,

ನನಗಾಗಿ ತಪಿಸುವ...,

ನನ್ನ ಕಥೆಗಳಿಗಾಗಿ ತಪಿಸುವ…,

ಅವಳೆಂಬ ಅನುಭೂತಿಯಿಂದ ನಾನು ಹೊರಬರಬೇಕಿತ್ತು!

ನಿಜವೇ…,

ನಾನು ಬರೆಯದಿದ್ದರೆ ತಪಿಸುವುದು ಅವಳು ಮಾತ್ರ.

ನನ್ನಿಂದ ಒಂದು ಕಥೆ ಬರೆಸಲು ಏನೆಲ್ಲಾ ಕಸರತ್ತು ಮಾಡುತ್ತಾಳೆ…,

ಪಾಪ!

ಸದ್ಯಕ್ಕೆ…,

ಪೀಠಿಕೆಯೊಂದನ್ನು ಹಾಕಿದ್ದಾಳೆ.

ಆ ಪೀಠಿಕೆಯಲ್ಲಿ…,

ನನ್ನೆಡೆಗಿನ ಅವಳ ಪ್ರೇಮವೂ

ಅವಳೆಡೆಗಿನ ನನ್ನ ತಾತ್ಸರವೂ ಇದೆ!

ಆದರದು ಉದ್ದೇಶಪೂರ್ವಕ ಹೇಳಿದ್ದಲ್ಲ!

ಅವಳರಿವಿಲ್ಲದೆ ಅವಳೊಳಗಿನ ನೋವು ಹೊರಬಂದಿದೆ.

ಆ ನೋವಿಗೆ ಕಾರಣ ನಾನೇ- ಗೊತ್ತು!

ಕೆಲವೊಮ್ಮೆ ಹಾಗೆಯೇ…,

ಯಾವ ಪ್ರಯತ್ನವೂ ಇಲ್ಲದೆ ನಮಗೆ ದೊರಕುವ ಪ್ರೇಮ, ವಾತ್ಸಲ್ಯ, ಕಾಳಜಿಗಳ ಮಹತ್ವ…,

ನಮಗೆ ಅರಿವಾಗುವುದೇ ಇಲ್ಲ.

ಅರಿತರೂ…, ತಾತ್ಸರ!

ಅದನ್ನು ಮರಳಿ ಕೊಡಲಾಗದಿದ್ದರೂ…,

ನಮ್ಮಬಗ್ಗೆ ಅವರ ಮನಸ್ಸಿನಲ್ಲಿರುವ ಭಾವಕ್ಕೆ ಗೌರವವನ್ನಾದರೂ ಕೊಡಲು ಕಲಿಯಬೇಕು!

ನನಗದು ಆಗುವುದಿಲ್ಲ!

*

ಓಯ್!” ಎಂದೆ.

ನ್ತ?” ಎಂದ.

ನಾವು ಬ್ರೇಕಪ್ ಆಗೋಣವಾ?” ಎಂದೆ.

ಯಾಕೆ?’ ಎಂಬಂತೆ…,

ನನ್ನ ಕಣ್ಣಲ್ಲೇ ನೆಟ್ಟ ದೃಷ್ಟಿ ಚೂರೂ ಬದಲಿಸದೆ…,

ಹುಬ್ಬು ಕುಣಿಸಿದ.

ನನಗೆ ನೀನು ಬೇಡ!” ಎಂದೆ.

ಅವನ ನೋಟವನ್ನು ಎದುರಿಸಲಾರದೆ ನಾನೇ ದೃಷ್ಟಿ ತಪ್ಪಿಸಿದೆ.

ಬಾಯಲ್ಲಿ ಹೇಳಿದ ಮಾತಿಗೂ ಹೃದಿಯದ ಮಾತಿಗೂ ವ್ಯತ್ಯಾಸವಿದೆಯೆಂದು ಅವನಿಗೆ ಗೊತ್ತು!

ಅವನಿಗೆ ಗೊತ್ತು ಅಂತ ನನಗೂ ಗೊತ್ತು!

ಆದರೆ ಅವನು ಅವನೇ…!

ಹು…, ಸರಿ!” ಎಂದ.

ಉಫ್…, ಕ್ರೂರಿ…,

ತಣ್ಣನೆಯ ಕ್ರೌರ್ಯ ಅಂದರೆ ಇದೇನಾ?

ಸೋತೆ!

ಹೋಗಲಿ ಬಿಡು…, ನಿನ್ನ ದ್ವೇಷ ಮಾಡಲಿಕ್ಕೆ ಒಂದೇ ಒಂದು ಕಾರಣವಾದರೂ ಕೊಡು!” ಎಂದೆ.

ಇದೊಳ್ಳೆ ಕಥೆಯಾಯ್ತು! ದ್ವೇಷಿಸಬೇಕಾಗಿರುವುದು ನಿನಗೆ ತಾನೆ? ದ್ವೇಷಿಸಬೇಕು ಅನ್ನಿಸಿದೆಯೆಂದರೆ ಕಾರಣ ಇದ್ದೇ ಇರುತ್ತದೆ! ನೀನೇ ಕಂಡುಕೋ…, ನನ್ನನ್ನೇನು ಕೇಳ್ತೀಯ?” ಎಂದ.

ಮತ್ತೆ ಮೌನ…,

ದೃಷ್ಟಿಯುದ್ಧ!

ಸ್ವಲ್ಪಹೊತ್ತು ಹಾಗೇ ಮುಂದುವರೆದವನ ಮುಖಚರ್ಯೆ ಬದಲಾಯಿತು.

ತಕ್ಷಣ ಗೊತ್ತಾಯ್ತು…,

ಆಕಳಿಕೆ ಬರುತ್ತಿದೆ!

ಗೋಡೆಯ ಮೇಲಿದ್ದ ಗಡಿಯಾರದತ್ತ ಅವನ ಕಣ್ಣು ತಿರುಗುವ ಸೂಚನೆ ಕಂಡಾಗ ಸಿಟ್ಟು ನೆತ್ತಿಗೇರಿತ್ತು…,

ಅವನನ್ನು ದ್ವೇಷಿಸಲು ಇದಕ್ಕಿಂತ ಏನು ಬೇಕು…?

ನನ್ನ ಮೇಲಿನ ಅವನ ಈ ತಾತ್ಸರಕ್ಕೆ ಕಾರಣವೇನು?

…., ಇಷ್ಟು ಪೀಠಿಕೆ ಹಾಕಿ…,

ಕಂಟಿನ್ಯು ಮಾಡು- ನಿನ್ನ ಟಿಪಿಕಲ್ ಶೈಲಿಯಲ್ಲಿ!” ಎಂದಳು.

ನೀನೂ ಕಥೆಗಾರ್ತಿ…, ನೀನೇ ಬರೆದು ಮುಗಿಸು” ಎಂದೆ.

ಅವಳಿಗೆ ಗೊತ್ತು…,

ನನಗಾಗಿ ಪೀಠಿಕೆ ಹಾಕಿದಮೇಲೆ…,

ಅವಳು ಬರೆಯುವುದಿಲ್ಲವೆಂದೂ…,

ನಾನು ಬರೆಯದೇ ಇರಲಾರೆನೆಂದೂ…!!

ಕಥೆಯ ಶೀರ್ಷಿಕೆ…, ಇದು ಎಂಥಾ ಪ್ರೇಮವಯ್ಯ!?” ಎಂದಳು.

ಅದು ನೀನು ಬರೆದರೆ…, ನಾನು ಬರೆದರೆ….” ಎಂದು ಅವಳ ಕಣ್ಣುಗಳನ್ನೇ ದಿಟ್ಟಿಸಿದೆ.

ನನ್ನ ನೋಟವನ್ನು ಎದುರಿಸಲಾಗದಿದ್ದರೂ ದೃಷ್ಟಿ ತಪ್ಪಿಸದೆ ಉತ್ತರಕ್ಕಾಗಿ ಕುತೂಹಲದಿಂದ ನೋಡಿದಳು.

ಅವಳ ಮುಗ್ಧ ಮುಖವನ್ನು ಬೊಗಸೆಯಲ್ಲಿ ತೆಗೆದುಕೊಂಡೆ.

ಕಥೆ ಮುಂದುವರೆಸುವ ಮೂಡ್ ಇರಲಿಲ್ಲ.

ಆದರೂ ಅವಳ ಕಥೆಗೊಂದು ಅಂತ್ಯ ಕಾಣಿಸಲೇ ಬೇಕಿತ್ತು…,

ಅವಳಿಂದ ನಾನು ಹೊರಬರಲೇ ಬೇಕಿತ್ತು!

ಮತ್ತಷ್ಟು ಸೂಕ್ಷ್ಮವಾಗಿ ಅವಳ ಕಣ್ಣಿನಾಳಕ್ಕೆ ನೋಡಿದೆ.

ಏನು ಹೇಳುತ್ತೇನೆ ಅನ್ನುವ ಕುತೂಹಲವಿತ್ತೇ ಹೊರತು…,

ನನ್ನ ಕಣ್ಣಿನ ಭಾವ ಅವಳಿಗೆ ತಾಕಲೇ ಇಲ್ಲ!!

ಇನ್ನುಮುಂದೆ ನನ್ನಬಗ್ಗೆ ಕನ್ಸರ್ನ್ ತೋರಿಸಬೇಡ! ನಿನ್ನದೇನಿದೆ ನೋಡಿಕೋ…!” ಎಂದೆ.

ವಿಹ್ವಲಗೊಂಡಳು…,

ಅಯೋಮಯವಾಗಿ ನನ್ನನ್ನು ನೋಡಿದಳು.

ಇಲ್ಲ…, ಈ ನೋವನ್ನವಳು ತಾಳಲಾರಳು!!

ಹೀಗೆಯೇ ಬಿಡುವುದಕ್ಕಿಂತ…,

ಈ ಕಥೆಯನ್ನು ನಾನು ಬರೆದಿದ್ದರೆ ಇದರ ಶೀರ್ಷಿಕೆ…, ತಣ್ಣನೆಯ ಕ್ರೌರ್ಯ!” ಎಂದೆ.

ತಮಾಷೆ ಮಾಡುತ್ತಿದ್ದೇನೋ…,

ಸೀರಿಯಸ್ಸಾಗಿ ಹೇಳುತ್ತಿದ್ದೇನೋ ತಿಳಿಯದೆ ಗೊಂದಲಗೊಂಡಳು.

ಆ ಭಾವದಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಳು.

ಒಂದುಕ್ಷಣ ಚಂಚಲಗೊಂಡರೂ…,

ಇನ್ನುಮುಂದೆ ನನ್ನ ಬದುಕನ್ನು ನಿರ್ಧರಿಸುವ ಯಾರೂ ಇರಬಾರದೆನ್ನುವ ತೀರ್ಮಾನಕ್ಕೆ ಬಂದಿದ್ದರಿಂದ…,

ಮುಂದಕ್ಕೆ ಒಂದಕ್ಷರವೂ ಬರೆಯದೆ…,

ಅವಳ ಕಥೆಯನ್ನು ಮುಗಿಸಿದೆ!!!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!