ಓಂ!
ಓಂ!
*
ಯಾರೂ ಹೇಳದ ಕಥೆಯೊಂದನ್ನು ಹೇಳುತ್ತೇನೆ. ಇದು ನಡೆದಿರುವುದು ದೇವರ ಕಾಡಿನಲ್ಲಿ. ದೇವರಲ್ಲಿ ಕಾಡೋ ಕಾಡಿನಲ್ಲಿ ದೇವರೋ…, ಒಟ್ಟು ಕಥೆ ನಡೆದದ್ದು ದೇವರ ಕಾಡಿನಲ್ಲಿ.
ಸುಮಾರು ನೂರು ವರ್ಷ ಮುಂಚೆ ನಡೆದ ಘಟನೆ- ಈಗ ಕಥೆಯಾಗಿದೆ.
ಆಗ ನನಗೆ ಹತ್ತು ವರ್ಷ ವಯಸ್ಸು. ಓಣಂ ಹಬ್ಬಕ್ಕೆ ಹೂ ಕೀಳಲು ಹೋಗಿದ್ದೆ. ಒಬ್ಬನೇ. ಅಷ್ಟೊಂದು ಧೈರ್ಯವಂತನೇನೂ ಅಲ್ಲ. ಆದರೂ ಹೆದರಿಕೆಯ ನೆನಪಿಲ್ಲದೆ ಹೂ ಕೀಳುತ್ತಿದ್ದೆ.
ಹೆದರಿಕೆ ಅನ್ನುವುದು ಸುಮ್ಮನೆ ಬರುವುದಿಲ್ಲ. ಅದಕ್ಕೊಂದು ಕಾರಣವೋ ಏನಾದರೂ ನೆನಪೋ ಉಂಟಾಗಬೇಕು!
ಅದೆರಡೂ ಇಲ್ಲದೆ ಹೂ ಕೀಳುತ್ತಿದ್ದವನಿಗೆ ಆಕಸ್ಮಿಕವಾಗಿ ಆಕಳಿಕೆ ಬಂತು. ನನ್ನರಿವಿಲ್ಲದೆ ಕಣ್ಣು ಮುಚ್ಚಿಕೊಂಡವನಿಗೆ ಗಾಢ ನಿದ್ರೆ.
ನಿದ್ರೆಯಲ್ಲೇನು ಕನಸು ಗೊತ್ತೇ…?
ಅನಂತಶಯನ- ವಿಷ್ಣು.
ನಿದ್ದೆ ಗಾಢವೇ ಆದರೂ ಕಾಣುತ್ತಿರುವುದು ಕನಸು ಅನ್ನುವ ಅರಿವು!
ಪ್ರಶ್ನೆ…! ಛೇ…, ನನಗೇಕೆ ವಿಷ್ಣು ಕನಸಿನಲ್ಲಿ ಬರಬೇಕು? ನಾನು ಶಿವಭಕ್ತನಲ್ಲವಾ?
ನಿಜವೇ…, ನಾನು ಹೇಗೆ ಶಿವಭಕ್ತನಾದೆ?
ಅಂಡಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ ಅನ್ನುವುದು ಒಂದುಕಡೆ, ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಅನ್ನುವುದು ಮತ್ತೊಂದುಕಡೆ!
ಮತ್ತೆ ವ್ಯತ್ಯಾಸವೇನು? ಹೇಗೆ?
ಆ ವಯಸ್ಸಿನಲ್ಲೇ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನೂ, ದೇವೀಭಾಗವತವನ್ನೂ ಓದಿದವನಿಗೊಂದು ಭಯಂಕರ ಗೊಂದಲವಿತ್ತು.
ಕೋಪ ಬರುವ ಹಾಗಿದ್ದರೆ ದೇವರೇಕೆ ದೇವರು?
ಪಾರ್ವತಿದೇವಿಗೆ ಅಸೂಯೆಯಾಗುತ್ತದೆ, ಲಕ್ಷ್ಮಿದೇವಿಗೆ ಕೋಪ ಬರುತ್ತದೆ, ಸರಸ್ವತಿದೇವಿಗೆ ಬೇಸರವಾಗುತ್ತದೆ, ಬ್ರಹ್ಮ ವಿಷ್ಣು ಮಹೇಶ್ವರರು ತಮ್ಮ ತಮ್ಮ ಶ್ರೇಷ್ಠತೆಯನ್ನು ನಿರೂಪಿಸಬೇಕಾಗುತ್ತದೆ.
ಸಾಮಾನ್ಯ ಜನತೆಯ ಕಥೆ!! ಸಾಮಾನ್ಯ ಜನತೆಯ ಮನಸ್ಸಿನ ಬಿಂಬ!!
ದೇವರು ಹೀಗಿರಲು ಸಾಧ್ಯವೇ?
ಇಲ್ಲ! ನನ್ನ ಪ್ರಕಾರ ಇಲ್ಲವೇ ಇಲ್ಲ! ಇದೆಲ್ಲಾ ಮನುಷ್ಯ ರೂಪಿಸಿದ ಕಥೆಗಳು. ಒಳಿತು ಕೆಡುಕುಗಳನ್ನು ತಿಳಿಸಿ ಹೇಳಲು ಸೃಷ್ಟಿಸಿಕೊಂಡ ಕಲ್ಪನೆಗಳು.
ಸ್ಮೃತಿಗಳು, ಶೃತಿಗಳು, ಪುರಾಣಗಳು, ವೇದಗಳು, ಭಾಗವತಗಳು, ಉಪನಿಷತ್ತುಗಳು, ಬೈಬಲ್- ಖುರಾನ್‌ಗಳು…!
ಎಷ್ಟು ಸಾವಿರ ಗ್ರಂಥಗಳಿರಬಹುದು? ಗ್ರಂಥಗಳ ಉದ್ದೇಶವೇನು?
ನೆಮ್ಮದಿಯ ಬದುಕು!
ಮನುಷ್ಯ ನೆಮ್ಮದಿಯಾಗಿ ಬದುಕುತ್ತಿದ್ದಾನೆಯೇ?
ನಾನು ಮೇಲು ನೀನು ಕೀಳುಗಳೆಂಬ ಗಲಾಟೆಯಿಲ್ಲದ ದಿನಗಳಿದೆಯೇ…?
ನನ್ನ ಈ ಬದುಕಿಗೆ ಮತ್ತೊಬ್ಬರೇ ಕಾರಣ ಅನ್ನುವ ರೋಧನೆಗಳಿಲ್ಲದ ದಿನಗಳಿದೆಯೇ?
ಶಿವನನ್ನು ಆರಾಧಿಸಿದರೇನು ವಿಷ್ಣುವನ್ನು ಆರಾಧಿಸಿದರೇನು? ಅಲ್ಲಾನನ್ನು ನಂಬಿದರೇನು ಕ್ರಿಸ್ತುವನ್ನು ನಂಬಿದರೇನು?
ಮನಶ್ಶಾಂತಿ ಅನ್ನುವುದು ಇದೆಯೇ?
ಇಲ್ಲ!! ಮನಶ್ಶಾಂತಿ ಇಲ್ಲದಿರುವುದಕ್ಕೆ ಕಾರಣವೇ ಆ ನಂಬಿಕೆಗಳು ಅನ್ನುವುದು ವಿಪರ್ಯಾಸ!!
ಇನ್ನು ಕನಸಿನ ವಿಷಯಕ್ಕೆ ಬಂದರೆ…, ಶಂಖಚಕ್ರಗಧಾಪುಷ್ಪಧಾರಿಯಾಗಿ…, ಸಾಗರದ ಮೇಲೆ…, ತರಂಗಗಳಿಗೆ ಅನುಗುಣವಾಗಿ ಓಲಾಡುತ್ತಾ…, ಸುರುಳಿ ಸುತ್ತಿಕೊಂಡಿರುವ ಅನಂತನಮೇಲೆ ಮಲಗಿರುವ ವಿಷ್ಣುವಿನ ಮುಖದಲ್ಲಿ ಮುಗುಳುನಗು!
“ನಗದೆ, ಅಳದೆ, ಕೋಪಿಸಿಕೊಳ್ಳದೆ ನಿರ್ಲಿಪ್ತನಾಗಿ ಇರಲಾಗುವುದಿಲ್ಲವಾ?” ಎಂದೆ.
“ಆನಂದ ಅಂದರೇನೆಂದು ಗೊತ್ತೇನೋ?” ಎಂದ ವಿಷ್ಣುದೇವ.
“ಶಿವ!” ಎಂದೆ.
“ಮತ್ತೆ ನಾನೇಕೆ ನಗುತ್ತಿದ್ದೇನೆ ಎಂದು ಕೇಳಿದರೆ ಏನು ಹೇಳಲಿ?”
ನನಗರ್ಥವಾಗಲಿಲ್ಲ.
“ಶಿವನೆಂದರೆ ನಿನಗೆ ಆನಂದ! ಆದ್ದರಿಂದಲೇ ನಾನು ನಗುತ್ತಿರುವಂತೆ ನಿನಗೆ ಕಾಣಿಸುತ್ತಿದ್ದೇನೆ!” ಎಂದ ವಿಷ್ಣುದೇವ.
ಯಾರೋ ಅಲುಗಾಡಿಸಿದಂತಾಗಿ ಕಣ್ಣು ತೆರೆದೆ. ಅಮ್ಮ ಆತಂಕದಿಂದ ನನ್ನ ಮುಖವನ್ನೇ ನೋಡುತ್ತಿದ್ದರು.
ನಾನು ಕಣ್ಣು ತೆರದದ್ದು ಕಂಡು ಅಮ್ಮನ ಮುಖದಲ್ಲಿನ ನೆಮ್ಮದಿ- ಅಳುವಾಗಿ ಹೊರಬಂದಿತು.
ನಾನು ಭಾರಿ ಗೊಂದಲಕ್ಕೆ ಒಳಗಾದೆ. ನಾನೆಲ್ಲಿದ್ದೇನೆ? ಅಮ್ಮ ಯಾಕೆ ಅಳುತ್ತಿದ್ದಾರೆ…?
ನಂತರ ಗೊತ್ತಾಯಿತು…, ಹೂ ಕೀಳಲೆಂದು ಹೋದವ ಅಲ್ಲಿಯೇ ನಿದ್ದೆ ಮಾಡಿದ್ದೇನೆ! ಎರಡು ದಿನದಿಂದ!!!
*
ಅಂದು ಆ ಕನಸಿನ ಅರ್ಥ ನನಗಾಗಿರಲಿಲ್ಲ. ಹುಡುಕಾಟ ಮುಂದುವರೆದಿತ್ತು. ದೇವರಿದ್ದಾರೆಯೇ ಎಂದು ನಾನು ಹುಡುಕಬೇಕಾಗಿರಲಿಲ್ಲ. ಅಂದು ಅದೇಸ್ಥಳದಲ್ಲಿ ಅಕಾರಣವಾಗಿ ನಿದ್ದೆ ಬಂದಿದ್ದು, ಎರಡು ದಿನ ನಿದ್ರೆ ಮಾಡಿದ್ದು, ಅಸಾಧ್ಯ ತತ್ತ್ವವೊಂದರ ಉಪದೇಶವಾಗಿದ್ದು- ಇದಕ್ಕಿಂತ ಸಾಕ್ಷಿ ಏನು ಬೇಕು?
ಹುಡುಕಾಟ…,
ಆ ತತ್ತ್ವದ- ಶಿವನೆಂದರೆ ನಿನಗೆ ಆನಂದ! ಆದ್ದರಿಂದಲೇ ನಾನು ನಗುತ್ತಿರುವಂತೆ ನಿನಗೆ ಕಾಣಿಸುತ್ತಿದ್ದೇನೆ! ಎಂದು ಹೇಳಿದ ವಿಷ್ಣುದೇವನ ಮಾತಿನ ಅರ್ಥಕ್ಕಾಗಿ!
ಅಲ್ಲವಾ…!?
ಮೊದಲ ಅರ್ಥ…, ಶಿವ ಬೇರೆಯಲ್ಲ ವಿಷ್ಣು ಬೇರೆಯಲ್ಲ!! ಶಿವನೆಂದರೆ ಆನಂದ ಅಂದಾಗ ಶಿವ ಕಾಣಿಸಬೇಕಿತ್ತು! ವಿಷ್ಣು ಕಾಣಿಸಿಕೊಂಡು ಹೇಳುತ್ತಿದ್ದಾನೆ…, ಶಿವನೆಂದರೆ ನಿನಗೆ ಆನಂದ ಆದ್ದರಿಂದ ನಾನು ನಗುತ್ತಿರುವಂತೆ..,. ಅಂದರೆ ಅದೇ ಶಿವ ನಾನು ನಗುತ್ತಿರುವಂತೆ ನಿನಗೆ ಕಾಣಿಸುತ್ತಿದ್ದೇನೆ- ಎಂದು!!
ಶಿವ ಮತ್ತು ವಿಷ್ಣುವಿನ ಜಾಗದಲ್ಲಿ ಅವರವರು ನಂಬುವ ಯಾವ ದೇವರನ್ನು ಬೇಕಿದ್ದರೂ ಕಲ್ಪಿಸಬಹುದು!!
ಎಲ್ಲರೂ ಒಂದೇ…!
ಎರಡನೆಯ ಅರ್ಥ…, ನನ್ನ ಮನಸ್ಸು ಆನಂದದಿಂದ ತುಂಬಿದೆಯಾದ್ದರಿಂದ ದೇವರು ನಗುತ್ತಿರುವಂತೆ ಕಾಣಿಸುತ್ತಿದ್ದಾನೆ! ನನ್ನ ಮನಸ್ಸು ದುಃಖದಲ್ಲಿರುವಾಗ ದೇವರೂ ದುಃಖಿಸುವಂತೆ ಕಾಣಿಸುತ್ತಾನೆ! ನಾನು ವ್ಯಗ್ರನಾಗಿದ್ದಾಗ ದೇವರೂ….! ಪ್ರತಿಯೊಂದೂ ನಮ್ಮ ಮನಸ್ಸನ್ನು ಅವಲಂಬಿಸಿದೆ!!
*
ಈಗ…, ನೂರು ವರ್ಷಗಳ ನಂತರ…, ಮತ್ತೊಮ್ಮೆ ಅದೇ ದೇವರ ಕಾಡಿಗೆ ಹೋದೆ.
ಕಾಡು- ಪ್ರಕೃತಿ.
ಆಗತಾನೆ ಚಿಗುರೊಡೆಯುತ್ತಿರುವ ಗಿಡಗಳಿಂದ ಹಿಡಿದು, ಹೂ ಬಿಟ್ಟಿರುವ, ಕಾಯಿ ಹಣ್ಣುಗಳಿಂದ ಸಮೃದ್ಧವಾಗಿರುವ ಗಿಡ ಮರಗಳು! ಎಷ್ಟು ವಿಚಿತ್ರ ಸೃಷ್ಟಿಯ ನಿಯಮಗಳು!
ಅಲ್ಲವಾ…!
ಈ ಪ್ರಕೃತಿ ಹೀಗೆಯೇ ಕಾಣಲು ಕಾರಣರು ಯಾರು?
ಅರಿಯದೆ ನನ್ನೊಳಗೆ ನಗು ಮೂಡಿತು.
ನಮ್ಮ ಅರಿವಿಗೆ ಎಟುಕುವುದನ್ನು ಪ್ರಕೃತಿ ಅನ್ನಬಹುದಾದರೆ ನಮ್ಮ ಅರಿವಿಗೆ ಎಟುಕದೆ ಪ್ರಕೃತಿಯನ್ನು ಚಾಲಯಿಸುವ ಶಕ್ತಿಗೆ ಪುರುಷ ಅನ್ನಬಹುದು!
ಅಂದರೆ ಪುರುಷನ ಅಸ್ಥಿತ್ವ ಪ್ರಕೃತಿ! ಪ್ರಕೃತಿಯ ಅಸ್ಥಿತ್ವ ಪುರುಷ! ಪುರುಷನಿಲ್ಲದೆ ಪ್ರಕೃತಿಯೋ ಪ್ರಕೃತಿಯಿಲ್ಲದೆ ಪುರುಷನೋ ಇಲ್ಲ!
ಮತ್ತೆ ಪ್ರಕೃತಿಪುರುಷರ ನಡುವೆ ಏನು ಮೇಲುಕೀಳಿನಾಟ?
ಅಮ್ಮನ ಸತ್ವವನ್ನು ಹೀರಿ ರೂಪುಗೊಂಡವ ನಾನು! ಅಮ್ಮನ ಹೊಟ್ಟೆಯೊಳಗಿನಿಂದ ಬಂದು, ಅಮ್ಮನ ಎದೆಹಾಲು ಕುಡಿದು ಬೆಳೆದ ಮಾತ್ರಕ್ಕೆ- ಅಪ್ಪನಿಲ್ಲದೆ ನಾನು ಹುಟ್ಟಬಹುದೆ?
ಅಪ್ಪನ ವೀರ್ಯಕಣ ಅಮ್ಮನ ಗರ್ಭಕೋಶದಲ್ಲಿರುವ ಅಂಡಾಣುವನ್ನು ಸೇರಿ- ರೂಪುಗೊಂಡವ ನಾನು…! ಪ್ರತಿಯೊಬ್ಬರೂ ಹೀಗೇ ಹುಟ್ಟಿದವರಾದ್ದರಿಂದ ಮೂಲ ಪ್ರಕೃತಿ ಪುರುಷರು ಯಾರೇ ಆಗಿದ್ದರೂ- ಅವರೇ ನಮಗೆ ದೇವರು- ನಾವೆಲ್ಲರೂ ಒಂದೇ ಮೂಲದವರು!!
ಇನ್ನು…, ಮನುಷ್ಯ ಸಹಜವಾಗಿ…, ಈ ಕಥೆಯ ನಾಯಕನ ವಯಸ್ಸೋ ಅವನು ಯಾರೆಂಬ ಚಿಂತೆಯೋ ಇಲ್ಲದೆ…, ಹೇಳಿರುವ ತತ್ತ್ವವನ್ನು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ನಾನು ಧನ್ಯ! ಯಾಕೆಂದರೆ…, ನಮ್ಮ ಮನಸ್ಸು ಬೇಕಾಗಿರುವುದರೆಡೆಗಿಂತ ಬೇಡದಿರುವುದರೆಡೆಗೇನೇ ಬಾಗುವುದು!
Comments
Post a Comment