ಆ ಅವಳು!

ಆ ಅವಳು!

*

ಮಧ್ಯರಾತ್ರಿ ಹನ್ನೆರಡುಗಂಟೆಯೋ…, ಒಂದುಗಂಟೆಯೋ….!

ಟ್ರ್ಯಾಕ್ ಪ್ಯಾಂಟ್ ಮಾತ್ರ ಧರಿಸಿ- ಬರಿಮೈಯ್ಯಲ್ಲಿ ಅಂಗಾತನೆ ಮಲಗಿದ್ದೇನೆ.

ಆಕಾಶದಲ್ಲಿ ನಕ್ಷತ್ರಗಳು- ಕ್ಷುಬ್ಧಗೊಂಡ ನನ್ನ ಮನಸ್ಸಿನಂತೆ- ಅರ್ಥವಿಲ್ಲದೆ ಹರಡಿಕೊಂಡಿದೆ.

ಭೋರ್ಗರೆಯುತ್ತಿರುವ ಮಹಾಸಮುದ್ರ.

ಅಮಾವಾಸ್ಯೆಯ ಕತ್ತಲು.

“ಸರ್!” ಎಂದ ಟಿ ಅಂಗಡಿಯ ಹುಡುಗ.

“ನೀನು ಹೊರಡು ಪುಟ್ಟ…, ನಾನೆಷ್ಟೊತ್ತಿರುತ್ತೇನೋ ಗೊತ್ತಿಲ್ಲ…, ಇಲ್ಲೇ ನಿದ್ರೆ ಮಾಡಿದರೂ ಮಾಡಬಹುದು!” ಎಂದೆ.

ಕೈಯ್ಯಲ್ಲಿದ್ದ ಟೀಯನ್ನು ನನ್ನೆಡೆಗೆ ನೀಡಿದ. ಎದ್ದೆ. ಈ ದಿನದ ಕೊನೆಯ ಟೀ…! ಬ್ಲಾಕ್ ಟೀ…! ಕಟ್ಟನ್ ಚಾಯ!

ಕೊಟ್ಟು ಅವನು ಹೊರಟು ಹೋದ. 

ಮನಸ್ಸು ಸ್ತಬ್ಧವಾದಾಗ, ಯೋಚನೆಯ ನರಗಳು ಸತ್ತಂತಾದಾಗ, ಚಿಂತೆಯೇ ಇಲ್ಲವೆನ್ನುವ ಚಿಂತೆ ಹತ್ತಿಕೊಂಡಾಗ…, ಕಡಲಿಗಿಂತ ಉತ್ತೇಜನ ನೀಡುವುದು ಯಾವುದಿದೆ?

ಸದ್ಯಕ್ಕೆ…, ನನ್ನೆದುರಿಗಿನ ಮಹಾಸಾಗರಕ್ಕೆ ನಾನೊಬ್ಬನೇ ಒಡೆಯ!

ಅಲೆಗಳು ಉರುಳುರುಳಿ ಬಂದು ನನ್ನ ಕಾಲನ್ನು ತೋಯಿಸಿ ಮರುಳುವುದಕ್ಕೆ ಅನುಸಾರವಾಗಿ ಒಂದೊಂದೆ ಸಿಪ್ ಟೀ-ಯನ್ನು ಗುಟುಕರಿಸತೊಡಗಿದೆ.

ನಿಧಾನವಾಗಿ ಅವಳು ನನ್ನನ್ನು ಆವರಿಸತೊಡಗಿದಳು.

ಅವಳು…,

ಮನಸ್ಸು ಖಾಲಿಯಾಗಿದೆಯೆನ್ನಿಸಿದಾಗ ದುತ್ತನೆ ಪ್ರತ್ಯಕ್ಷವಾಗಿ ನಾನಿಲ್ಲವಾ? ಅನ್ನುತ್ತಿದ್ದವಳು!

ಅವಳು…,

ಕಥೆಬರಿ…, ಈಗ ಬರೀತೀಯ ನೋಡು- ಎಂದು ಪ್ರೇರೇಪಿಸುತ್ತಿದ್ದವಳು.

ಅವಳು…,

ಅವಳ ಮೇಲಿನ ನನ್ನ ನಿಷ್ಠುರತೆಯನ್ನು ನನ್ನಿಂದಲೇ ಕಥೆಯ ರೂಪದಲ್ಲಿ ಬರೆಸುತ್ತಿದ್ದವಳು!

ಅವಳು…,

ನನ್ನ ದಿನಚರಿಯನ್ನು ಪರ್ಫೆಕ್ಟಾಗಿ ತಿಳಿದುಕೊಂಡಿದ್ದವಳು!

ಅವಳು…,

ಪ್ರತಿ ಕ್ಷಣ ನನಗಾಗಿ ತಪಿಸುತ್ತಿದ್ದವಳು.

ನಾನು ಯಾವ ಕ್ಷಣದಲ್ಲಿ ಏನು ಮಾಡುತ್ತಿರುತ್ತೇನೆ, ಎಲ್ಲಿರುತ್ತೇನೆ, ಯಾವ ರೂಪದಲ್ಲಿರುತ್ತೇನೆ ಅನ್ನುವುದು ಅವಳಿಗೆ ಮಾತ್ರ ಗೊತ್ತಿರುತ್ತಿತ್ತು.

ಆ ಅವಳನ್ನು ಅಳಿಸುವುದೆಂದರೆ ನನಗೇನೋ ಮಜ!

ದುಃಖ ಉಮ್ಮಳಿಸಿ, ಕಣ್ಣು ತುಂಬಿ, ಅಳದಿರುವಂತೆ, ಅಳುತ್ತಿಲ್ಲ ಅನ್ನುವಂತೆ ತೋರಿಸಿಕೊಳ್ಳಲು ಅವಳು ಪಡುವ ಪಾಡಿದೆಯಲ್ಲಾ…, ಆಹಾ!

ಆ ಅವಳು ನನ್ನನ್ನಗಲಿ ಇಂದಿಗೆ ಹತ್ತು ವರ್ಷಗಳು!

ಟಿ-ಯನ್ನು ಮುಗಿಸಿ ಲೋಟವನ್ನು ಪಕ್ಕದಲ್ಲಿಟ್ಟು ಪುನಃ ಮಲಗಿದೆ.

ಎರಡೂ ಕೈಗಳನ್ನು ತಲೆಯ ಕೆಳಗಿಟ್ಟು ಆಕಾಶವನ್ನೇ ನೋಡುತ್ತಾ ಮಲಗುವುದರಲ್ಲಿರುವ ಸುಖ ವಿವರಣಾತೀತ!

ನಕ್ಷತ್ರಗಳಂತೆ ಕಾಣಿಸುವ ಉಪಗ್ರಹಗಳು ಆಚೆಗೊಮ್ಮೆ ಈಚೆಗೊಮ್ಮೆ ಚಲಿಸುತ್ತಿದ್ದವು.

ನಕ್ಷತ್ರಗಳ ಮಧ್ಯೆ ಮಂಗಳವೋ ಬುಧನೋ ಶುಕ್ರನೋ ತಿಳಿಯದೆ- ಗ್ರಹಗಳು. ಹೀಗೆ…, ಆಕಾಶವೆಂಬ ಆಶ್ಚರ್ಯವನ್ನೇ ನೋಡುತ್ತಾ ಮಲಗಿದ್ದಾಗ…, ಯಾರೋ ನನ್ನ ಬಳಿಬಂದ ಅನುಭವವಾಯಿತು.

ಲೋಟವನ್ನು ತೆಗೆದುಕೊಂಡು ಹೋಗಲು ಹುಡುಗನೇನೋ ಅಂದುಕೊಂಡೆ. ಆದರೆ ನನಗೆ ಕೊಟ್ಟ ಲೋಟ ನಾಳೆಯಾದರೂ ಸಿಗುತ್ತದೆನ್ನುವ ಗ್ಯಾರಂಟಿ ಅವನಿಗಿದೆ! ಒಮ್ಮೆ ಹೊರಡು ಎಂದಮೇಲೆ ಇರುವವನಲ್ಲ.

ತಲೆತಿರುಗಿಸಿ ನೋಡಲು ಸೋಮಾರಿತನ! ಯಾರೋ ಪಕ್ಕದಲ್ಲಿ ಮಲಗಿದಂತಾದಾಗ ನೋಡದಿರಲಾಗಲಿಲ್ಲ. ನೋಡಿದೆ.

ಯಾರೂ ಇಲ್ಲ! ಇದೇನು ಭ್ರಮೆ ಅಂದುಕೊಂಡು ಪುನಃ ನಕ್ಷತ್ರಗಳನ್ನು ನೋಡತೊಡಗಿದೆ.

ಅವಳು ನನ್ನನ್ನಪ್ಪುವಂತೆ ನಿಧಾನಾಗಿ ಕೈಯೊಂದು ನನ್ನನ್ನು ಬಳಸಿಕೊಂಡ ಫೀಲ್!

ಭ್ರಮೆಯೋ? ಕನಸಿಗೆ ಜಾರಿದೆನೋ? ವಾಸ್ತವವೇನಾ…?

ತಲೆಯ ಹಿಂಬಾಗದಿಂದ ಕೈ ತೆಗೆದು ಪಕ್ಕವನ್ನೊಮ್ಮೆ ಸವರಿನೋಡಿದೆ. ಮರಳಿನ ಹೊರತು ಏನೂ ಇಲ್ಲ.

ಎಷ್ಟೇ ಕತ್ತಲಾದರೂ ತೆರೆದ ಪ್ರದೇಶಗಳಲ್ಲಿ ಕತ್ತಲಿಗೆ ಕಣ್ಣು ಹೊಂದಿಕೊಂಡಾಗ ಕಣ್ಣೇ ಕಾಣಿಸುತ್ತಿಲ್ಲ ಅನ್ನುವ ಅವಸ್ತೆಯಿರುವುದಿಲ್ಲ. ಅದರಲ್ಲೂ ಸಮುದ್ರತೀರದಲ್ಲಿ ಸಮುದ್ರವನ್ನಾಗಲಿ ಅಲೆಗಳನ್ನಾಗಲಿ ಕಾಣಿಸುತ್ತಲೇ ಇಲ್ಲ ಅನ್ನಲಾಗುವುದಿಲ್ಲ.

ಕಣ್ಣು ದಿಟ್ಟಿಸಿ ನೋಡಿದೆ. ಯಾವುದೋ ನೆರಳು- ಗಂಡು ರೂಪದ ನೆರಳೊಂದು ಅಲೆಗಳಮೇಲೆ ನಿಂತಿತ್ತು! ಕೇವಲ ನೆರಳೋ ನಿಜವಾದ ಗಂಡೋ ತಿಳಿಯಲಿಲ್ಲ. ಆತನಿಗಿಲ್ಲದ ಕುತೂಹಲ ನನಗೇಕೆ ಎಂದು- ನೋಡುತ್ತಾ ಮಲಗಿದೆ.

ನಿಧಾನವಾಗಿ ನಿದ್ರೆ ಆವರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಪುನಃ ಕೈಯೊಂದು ನನ್ನನ್ನು ಬಳಸಿದ ಅನುಭವ.

ಏಳಲು ಶ್ರಮಿಸಿದೆ. ಆಗಲಿಲ್ಲ. ಬಲವಾಗಿ ಯಾರೋ ನನ್ನೆದೆಯಮೇಲೆ ಕೈಯ್ಯಿಟ್ಟು ನೆಲಕ್ಕೆ ಅದುಮಿದಂತೆ! ಪಕ್ಕದಲ್ಲಿ ಮಲಗಿ ಅಪ್ಪಿಕೊಂಡಿರುವವಳೊಬ್ಬಳು- ಅದುಮುತ್ತಿರುವವರೊಬ್ಬರು- ಇಬ್ಬರಿದ್ದಾರೆಯೇ?

ಎಷ್ಟು ಸಮಯ ಕಳೆಯಿತೋ…, ನಿದ್ದೆಗೆ ಜಾರಿದೆ!

ಎಷ್ಟು ಹೊತ್ತು ಮಲಗಿದ್ದೆನೋ…!

ಯಾರೋ ಕರೆದಂತಾಗಿ ಕಣ್ಣು ಬಿಟ್ಟೆ. ಸುಡು ಬಿಸಿಲು ಕಣ್ಣನ್ನು ಚುಚ್ಚಿತು!

ಟಿ ಅಂಗಡಿಯ ಹುಡುಗ ಕಾತರದಿಂದ ನನ್ನನ್ನೇ ನೋಡುತ್ತಿದ್ದ.

“ಏನಾಯ್ತು ಸರ್… ಇಂತಾ ನಿದ್ರೆ?” ಎಂದ.

“ಗೊತ್ತಿಲ್ಲವೋ…! ಯಾರೋ ಬಂದು ಜೋಗುಳ ಹಾಡಿದಂತಾಯಿತು!” ಎಂದೆ.

“ಇದೇನು ಸರ್ ಎದೆಮೇಲೆ?” ಎಂದ.

ಐದೂ ಬೆರಳುಗಳು ಸ್ಪಷ್ಟವಾಗಿ ಮೂಡಿರುವ ಹಸ್ತದ ಗುರುತು!

“ಗೊತ್ತಿಲ್ಲವೋ…!” ಎಂದು ಎದ್ದು ಸಮುದ್ರದ ನೀರಿಗಿಳಿದೆ.

ಸ್ವಲ್ಪ ದೂರದಲ್ಲಿ ಏನೋ ತೇಲುತ್ತಿರುವಂತಾಗಿ ಸೂಕ್ಷ್ಮವಾಗಿ ನೋಡಿದೆ.

ತಲೆಬುರುಡೆಯೊಂದು ನನ್ನೆಡೆಗೇ ಹರಿದು ಬಂತು.

ತೆಗೆದುಕೊಂಡು ನೋಡಿದೆ- ಅವನದಿರಬಹುದೇ? ಅಥವಾ ಅವಳದ್ದೋ….?

ಗೊಂದಲ ಬೇಡ ಅನ್ನುವಂತೆ ಮತ್ತೊಂದು ಬುರುಡೆ…!

ಪರಿಪೂರ್ಣ ಪ್ರೇಮದಿಂದ ಆವರಿಸಿಕೊಂಡರೂ, ಪ್ರತಿಕ್ಷಣದ ನಾನೆಂಬ ಅವಳ ಅರಿವಿನಿಂದ ಆಚೆ…, ಒಂದು ದಿನ…, ಅವನೊಂದಿಗೆ ಅವಳನ್ನು ನೋಡಬಾರದ ಅವಸ್ತೆಯಲ್ಲಿ ನೋಡಿದಾಗ…, ಹೃದಯ ಛಿದ್ರವಾಗಿದ್ದು ನಿಜ! ಆದರೆ ನಾನೇನೂ ಅವಳನ್ನು ದೂಷಿಸಲಿಲ್ಲ.., ಅವಳೇ…, ಅವಳ ಆಸೆಗಳನ್ನು ನೆರವೇರಿಸಲಾಗದ ನನ್ನ ಪ್ರೇಮವೋ…, ಪ್ರತಿ ಆಸೆಗಳನ್ನು ನೆರವೇರಿಸಲು ಸಮರ್ಥನಾದ ಅವನೋ ಅನ್ನುವ ತೀರ್ಮಾನದಲ್ಲಿ…, ಇಲ್ಲೇ…, ಇದೇ ಜಾಗದಲ್ಲೇ…, ಹತ್ತುವರ್ಷ ಮುಂಚೆ ಅವನೊಂದಿಗೆ ಕಡಲನ್ನು ಸೇರಿದ್ದು…, ಅಮರ ಪ್ರೇಮಿಗಳೆಂಬ ಹೆಸರನ್ನು ಪಡೆದದ್ದು…!

ಅದರ ಹಿಂದೆ ನಾನಿದ್ದೆನಾ…?

ಹೇಳಲಾರೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!