ಭೇಟಿ!
೧
ಎಷ್ಟು ದೂರ ಹೋಗಿರಬಹುದು ನಾನು?
ರಸ್ತೆ ಬದಿಯಲ್ಲಿ ಯಾರೋ ಕೈ ತೋರಿಸಿದರು, ಡ್ರಾಪ್ ಬೇಕು ಅನ್ನುವಂತೆ.
ಸಮೀಪ ತಲುಪಿದಾಗಲೇ ತಿಳಿದದ್ದು…, ಹೆಣ್ಣು- ಕಣ್ಣು ಮಾತ್ರ ಕಾಣಿಸುವಂತಾ ಬುರ್ಖಾಧಾರಿ- ಹೆಣ್ಣು!
ಗಾಡಿ ಸ್ಲೋ ಮಾಡಿದೆನಾದರೂ ನಿಲ್ಲಿಸಲೋ ಬೇಡವೋ ಅನ್ನುವ ಗೊಂದಲ.
ನನ್ನ ಗೊಂದಲ ಅರಿತವಳಂತೆ…,
“ತಲೆ ಕೆಡಿಸಿಕೊಳ್ಳಬೇಡಿ…, ನಿಲ್ಲಿಸಿ!” ಎಂದಳು.
ನಿಲ್ಲಿಸಿದೆ.
ಯಾವುದೇ ಮುಜುಗರವಿಲ್ಲದೆ ಬುರ್ಖಾವನ್ನು ಮೊಣಕಾಲಿಗಿಂತ ಮೇಲೆತ್ತಿ- ಜೀನ್ಸ್‌ಪ್ಯಾಂಟ್ ಧರಿಸಿದ್ದಳು- ಆಚೆ ಈಚೆ ಕಾಲು ಹಾಕಿ ಕಂಫರ್ಟ್ ಆಗಿ ಕುಳಿತು…,
“ರೈಟ್!” ಎಂದಳು.
ಮುಂದಕ್ಕೆ ಚಲಿಸಿದೆ.
“ಎಲ್ಲಿಗೆ ಹೋಗಬೇಕು?” ಎಂದು ಕೇಳಿದೆ.
“ನೀವು ಎಲ್ಲಿಗೆ ಹೋಗುತ್ತಿದ್ದೀರೋ ಅಲ್ಲಿಗೆ!” ಎಂದಳು.
ಗೊಂದಲಗೊಂಡೆ. ಚಂಚಲಗೊಂಡೆ. ದುಗುಡಗೊಂಡೆ!
“ನಾನೆಲ್ಲಿಗೆ ಹೋಗುತ್ತಿದ್ದೇನೋ ನನಗೂ ತಿಳಿಯದು…, ಗುರಿಯಿಲ್ಲದ ಪ್ರಯಾಣ!” ಎಂದೆ.
“ಇನ್ನೂ ಒಳ್ಳೆಯದೇ ಆಯಿತು! ನಾನೇನೂ ನಿಮಗೆ ಹೊರೆಯಾಗುವುದಿಲ್ಲ- ನಿಮ್ಮೊಂದಿಗೆ ಬಂದರೆ!” ಎಂದಳು.
“ಒಬ್ಬನೇ ಹೋಗಬೇಕೆಂದುಕೊಂಡವನಿಗೆ ನೀವೊಂದು ಹೊರೆಯೇ…!” ಎಂದೆ.
“ಸರಿ ಗಾಡಿ ನಿಲ್ಲಿಸಿ!” ಎಂದಳು.
ನಿಲ್ಲಿಸಿದೆ.
ಗಾಡಿಯಿಂದ ಇಳಿದು ನನ್ನ ಮುಖವನ್ನೊಮ್ಮೆ ನೋಡಿ…,
“ಹೆದರಿಕೆಯಾ?” ಎಂದಳು.
ಮುಗುಳುನಕ್ಕೆ. ಅವಳಿಗದೇನು ಅರ್ಥವಾಯಿತೋ ಏನೋ…, ಮತ್ತೆ ಗಾಡಿ ಹತ್ತುತ್ತಾ…,
“ಈ ಪ್ರಯಾಣದ ಸಂಪೂರ್ಣ ಖರ್ಚುವೆಚ್ಚ ನನ್ನದು!” ಎಂದಳು.
೨
ಸಂಧ್ಯಾ ಸಮಯ. ಮುಳುಗುತ್ತಿದ್ದ ಸೂರ್ಯನ ದಿಕ್ಕಿಗೆ ಗಾಡಿ ಓಡಿಸುತ್ತಿದ್ದೆ. ನಿರ್ಜನ ಪ್ರದೇಶ ಮಾತ್ರವಲ್ಲ ಗಾಢವಾದ ಅರಣ್ಯ ಪ್ರದೇಶ. ತೀರಾ ಇಕ್ಕಟ್ಟಾದ ರಸ್ತೆ. ಎದುರಿನಿಂದ ಕಾರೊಂದು ಬರುತ್ತಿತ್ತು. ನಮ್ಮದು ಬೈಕ್ ಅನ್ನುವ ಕರುಣೆಯೇನೂ ಅವನಿಗಿರಲಿಲ್ಲ. ಜಾಗ ಕೊಡದಿದ್ದರೆ ಡಿಕ್ಕಿ ಹೊಡೆಯುತ್ತೇನೆ ಅನ್ನುವಂತೆ ಬರುತ್ತಿದ್ದ. ನಾನು ರಸ್ತೆಯಿಂದ ಸೈಡಿಗೆ ಗಾಡಿ ಇಳಿಸಿ ಜಾಗ ಬಿಟ್ಟು ಕೊಟ್ಟೆ. ಅದೇನು ಮಾಯವೋ…, ಗಾಡಿ ಆಫ್ ಆಯಿತು. ಎಷ್ಟು ಕಿಕ್ ಕೊಟ್ಟರೂ ಸ್ಟಾರ್ಟ್ ಆಗಲಿಲ್ಲ. ಅವಳು ಕೆಳಗಿಳಿದಳು. ನಾನೂ ಸ್ಟ್ಯಾಂಡ್ ಹಾಕಿ ಕೆಳಗಿಳಿದೆ.
“ಪೆಟ್ರೋಲ್ ಖಾಲಿಯಾಗಿರಬೇಕು!” ಎಂದಳು.
“ಇಲ್ಲ…, ಇನ್ನೂ ಮಿನಿಮಂ ಮುನ್ನೂರು ಕಿಲೋಮೀಟರ್ ಹೋಗುವಷ್ಟು ಇದೆ!” ಎಂದೆ.
“ಮತ್ತೇನಾಯಿತು?” ಎಂದಳು.
ನಾನು ಗಾಡಿಯ ಬಲ ಪಕ್ಕಕ್ಕೆ ಬಂದು ಸ್ಪಾರ್ಕ್‌ಪ್ಲಗ್ ಬಿಚ್ಚಿ ನೋಡಿದೆ. ಸಮಸ್ಯೆಯೇನೂ ಕಾಣಿಸಲಿಲ್ಲ. ಪುನಃ ಫಿಕ್ಸ್‌ಮಾಡಿ ಕಿಕ್ ಕೊಟ್ಟೆ. ಇಲ್ಲ…, ಸ್ಟಾರ್ಟ್ ಆಗುತ್ತಿಲ್ಲ.
ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಒತ್ತೊತ್ತಾಗಿ ಬೆಳೆದಿರುವ ಮರಗಳ ನಡುವೆ ಗುಡಿಯೊಂದು ಕಾಣಿಸಿತು!
ನನ್ನ ಮುಖಭಾವ ಬದಲಾಗಿದ್ದು ಕಂಡು ಅವಳೂ ತಿರುಗಿ ನೋಡಿದಳು.
“ಈ ಕಾಡಿನಲ್ಲಿ ಗುಡಿಯಾ…!” ಎಂದಳು.
ಅದರೆಡೆಗೆ ನಡೆದೆವು.
ಬಾಗಿಲು ಲಾಕ್ ಮಾಡಿತ್ತು!!!
“ಎಂತಾ ಕಾಲ ಬಂತಪ್ಪ! ಇಂತಾ ಕಗ್ಗಾಡಿನಲ್ಲಿ ಗುಡಿಯಿರುವುದೇ ಅದ್ಭುತ! ಅದಕ್ಕೊಂದು ಬಾಗಿಲು- ಬಾಗಿಲಿಗೆ ಲಾಕ್‌ಬೇರೆ!” ಎಂದಳು.
“ಅದಕ್ಕೇ ನಾನು ದೇವಸ್ಥಾನಗಳಿಗೆ ಹೋಗುವುದಿಲ್ಲ!” ಎಂದೆ.
“ಹಾ…, ಮನುಷ್ಯ ಅವನ ಮಿತಿಗನುಗುಣವಾಗಿ ದೇವರಿಗೂ ನಿಯಮಗಳನ್ನು ರೂಪಿಸುತ್ತಿದ್ದಾನೆ!” ಎಂದಳು.
ನಾನು ಗುಡಿಯನ್ನೊಮ್ಮೆ ಸುತ್ತಿ ಬಂದೆ.
ಇದೇ ಜಾಗದಲ್ಲಿ ಗಾಡಿ ಆಫ್ ಆಗಿದೆಯೆಂದರೆ…, ಇಲ್ಲೇನೋ ಸ್ಥಳಮಹಿಮೆಯಿರಬೇಕು ಅನ್ನಿಸಿತು.
ನನ್ನ ಯೋಚನೆ ತಿಳಿದವಳಂತೆ…,
“ಈ ಜಾಗಕ್ಕೇನೋ ಸ್ಪೆಷಾಲಿಟಿ ಇದೆ ಅನ್ನಿಸ್ತಿದೆ!” ಎಂದಳು.
ಗುಡಿಯ ಬಾಗಿಲು ನಾಲ್ಕು ಅಡಿ ಎತ್ತರ…, ಮೂರು ಅಡಿ ಅಗಲವಿರಬೇಕು- ಅಷ್ಟೆ.
ಬೀಗವನ್ನು ಹಿಡಿದು ಕೆಳಕ್ಕೆ ಜಗ್ಗಿದೆ. ತೆಗೆದುಕೊಂಡಿತು!
ಅವಳ ಮುಖವನ್ನು ನೋಡಿದೆ. ಮುಗುಳುನಕ್ಕಳು.
ಬಾಗಿಲನ್ನು ತೆಗೆದು ಒಳಗೆ ಹೋದರೆ…, ಕಲ್ಲೋ…, ಮಣ್ಣಿನಿಂದ ಮಾಡಿದ ವಿಗ್ರಹವೋ…, ತಾಮ್ರವೋ…, ಕಬ್ಬಿಣವೋ ಅರಿಯದ ಮೂರ್ತಿ- ಹೆಣ್ಣು ರೂಪದ ಮೂರ್ತಿ. ಎರಡು ಅಡಿ ಎತ್ತರ ಇರಬಹುದು.
ಅದ್ಭುತ ಮುಖಕಾಂತಿ. ಆರು ಕೈಗಳು. ಆಕಾರಬದ್ದ ಶರೀರ. ಯಾರಮೇಲೆಯೋ ಕುಳಿತಿರುವಂತೆ. ಕಣ್ಣು ಕಿರಿದುಗೊಳಿಸಿ ಸೂಕ್ಷ್ಮವಾಗಿ ನೋಡಿದೆ. ಸಾಷ್ಟಾಂಗ ಮಲಗಿರುವ ಮನುಷ್ಯರೂಪ!
“ನಿಮಗೇನು ಅನ್ನಿಸುತ್ತಿದೆ?” ಎಂದಳು.
“ಏನೂ ಅನ್ನಿಸುತ್ತಿಲ್ಲ!” ಎಂದೆ.
“ನನಗಂತೂ ತುಂಬಾ ಇಷ್ಟವಾಯಿತು. ಎಷ್ಟು ಚಂದ. ಎಷ್ಟು ಅದ್ಭುತ ಪ್ರದೇಶ. ಏನೋ ಒಂಥರಾ ಫೀಲ್…, ಇಲ್ಲಿಂದ ಹೋಗಲೇ ಮನಸ್ಸು ಬರುತ್ತಿಲ್ಲ!” ಎಂದಳು.
ವಿಗ್ರಹದಿಂದ ಕಣ್ಣು ಕಿತ್ತು ಸುತ್ತಲೂ ನೋಡಿದಾಗ…, ವಿಭ್ರಾಂತಿಗೆ ಒಳಗಾದೆ.
ದಟ್ಟವಾದ ಕಾಡು!
ಭ್ರಮೆ ಹುಟ್ಟಿಸುವಂತೆ ಗೋಡೆಯಮೇಲೆ ಚಿತ್ರ ಬಿಡಿಸಿದ್ದಾರೇನೋ ಅಂದುಕೊಂಡು ಗೋಡೆಯನ್ನು ತಡಕುತ್ತಾ ಹೆಜ್ಜೆ ಹಾಕಿದೆ. ಆದರೆ ಗೋಡೆ ಎಟುಕಲೇ ಇಲ್ಲ! ಹೆಜ್ಜೆ ಹಾಕಿದಷ್ಟೂ ಕಾನನದೊಳಕ್ಕೆ ಹೋಗುತ್ತಿದ್ದೆ.
೩
ಕಣ್ಣು ಬಿಡಲು ಶ್ರಮಿಸಿದೆ. ಆದರೆ ಸೂರ್ಯನ ಕಿರಣಗಳು ಕಣ್ಣನ್ನು ಚುಚ್ಚುತ್ತಿದ್ದವು. ನನ್ನ ಮುಖದ ಮೇಲೆ ನೆರಳು ಬೀಳುವಂತೆ ಬಾಗಿದಳು. ಅವಳ ಮಡಿಲಿನಮೇಲೆ ನನ್ನ ತಲೆಯಿತ್ತು!
ಅವಳು ಬಾಗಿದಾಗ…, ಕೂದಲೆಂಬ ಗುಹೆ ನನ್ನ ಮುಖವನ್ನು ಆವರಿಸಿಕೊಂಡಂತಾಯಿತು.
“ಎಂತಾ ನಿದ್ದೆ ಮಾರಾಯರೇ…!” ಎಂದಳು.
ಯಾವುದೇ ಗಡಿಬಿಡಿಯಿಲ್ಲದೆ ಎದ್ದೆ.
ಕಪ್ಪು ಜೀನ್ಸ್- ಬಿಳಿ ಟೀಷರ್ಟ್ ಧರಿಸಿದ್ದಾಳೆ! ಅದ್ಭುತ ಕಳೆಯ ಮುಖ! ಹೊಳಪು ಕಣ್ಣುಗಳು. ಕಪ್ಪು ಬಣ್ಣದ ಹುಡುಗಿ! ಕಡೆದ ಶಿಲ್ಪದಂತಹ ದೇಹ ಸೌಷ್ಠವ!
ಅವಳ ಮುಖವನ್ನೇ ನೋಡಿದೆ. ಮುಗುಳು ನಕ್ಕಳು.
“ಇನ್ನು ಬುರ್ಖಾದ ಅಗತ್ಯವಿಲ್ಲ!” ಎಂದಳು.
ನಾನು ಅವಳನ್ನೇ ನೋಡುತ್ತಿದ್ದೆ. ಅವಳನ್ನೇ ನೋಡುತ್ತಿದ್ದೆ. ಅವಳನ್ನೇ ನೋಡುತ್ತಿದ್ದೆ.
ನಾಚಿಕೆಯಿಂದ ತಲೆ ತಗ್ಗಿಸಿದಳು.
ನಿಧಾನವಾಗಿ ಸುತ್ತಲೂ ನೋಡಿದೆ. ದಟ್ಟಾರಣ್ಯ!
ಹಾಗಿದ್ದರೆ ನಿನ್ನೆ ಕಂಡ ಗುಡಿಯೇನಾಯಿತು?
೪
ಒಂದೇ ಕಿಕ್‌ಗೆ ಗಾಡಿ ಸ್ಟಾರ್ಟ್ ಆಯಿತು. ನನ್ನ ಹೆಗಲನ್ನೇ ಆಧಾರವಾಗಿ ಹಿಡಿದುಕೊಂಡು ಅವಳು ಹತ್ತಿದಳು.
ಎಷ್ಟು ದೂರ ಚಲಿಸಿದೆವೋ ತಿಳಿಯದು…, ಸಮುದ್ರದ ಮೊರೆತ ಕೇಳಲಾರಂಬಿಸಿತು.
ಆನಂದಗೊಂಡೆ. ಸಮುದ್ರ…, ಕಡಲು…, ಸಾಗರ…, ಅಬ್ಧಿ…, ನನಗೆ ಯಾವತ್ತಿಗೂ ಒಂದು ಇಮೋಷನ್ ಅದು!
ಅವಳೊ…, ಹರಿಯುವ ನದಿಯಂತೆ ಮಾತನಾಡುತ್ತಲೇ ಇದ್ದಳು! ಆ ನದಿ ಸಾಗರವನ್ನು ಸೇರಿದಂತೆ- ಸಮುದ್ರವನ್ನು ಕಂಡಾಗ ಮಾತು ನಿಲ್ಲಿಸಿದಳು!
ಸ್ವಲ್ಪ ದೂರ ಮರಳಿನಮೇಲೆಯೇ ಓಡಿಸಿಕೊಂಡು ಹೋಗಿ ಒಂದು ಮರದ ನೆರಳಿನಲ್ಲಿ ಗಾಡಿ ನಿಲ್ಲಿಸಿದೆ.
ಇಬ್ಬರೂ ನಡೆಯಲಾರಂಬಿಸಿದೆವು. ಪಾದಗಳು ಮಾತ್ರ ನೆನೆಯುವಷ್ಟು ನೀರಿನಲ್ಲಿ.
“ಸೋ…, ನೀವೊಬ್ಬ ಕಥೆಗಾರ!” ಎಂದಳು.
“ಹಾ…, ಓದುಗರಿಲ್ಲದ ಕಥೆಗಾರ!” ಎಂದೆ.
ಮುಗುಳುನಕ್ಕಳು. ನಂತರ ನನ್ನ ಮುಖವನ್ನು ನೋಡಿ…,
“ನಮ್ಮ ಈ ಭೇಟಿ, ಈ ಪ್ರಯಾಣವನ್ನೂ ಕಥೆಯನ್ನಾಗಿ ಬರೆಯುತ್ತೀರೇನೋ?” ಎಂದಳು.
“ಇಲ್ಲ! ಸದ್ಯಕ್ಕೆ ಕಥೆಗಳನ್ನು ಬರೆಯುವುದಿಲ್ಲ ಅನ್ನುವ ತೀರ್ಮಾನದಲ್ಲಿದ್ದೇನೆ!” ಎಂದೆ.
“ಯಾಕೆ?” ಎಂದಳು.
“ಗೊತ್ತಿಲ್ಲ!” ಎಂದೆ.
೫
ನಡೆಯಲು ಶುರು ಮಾಡಿದಾಗ ನಡುನೆತ್ತಿಯಮೇಲಿದ್ದ ಸೂರ್ಯ ಸಮುದ್ರದಂಚಿನೆಡೆಗೆ ಚಲಿಸುತ್ತಿದ್ದ.
ಒಂದುಕಡೆ ಕುಳಿತೆವು.
“ನಾನೊಂದು ಕಥೆ ಹೇಳಿದರೆ ಬರೆಯುತ್ತೀರ?” ಎಂದಳು.
“ಇಲ್ಲ- ಆದರೂ ಕಥೆ ಹೇಳಿ!” ಎಂದೆ.
“ಒಬ್ಬಳು ಹುಡುಗಿಯಿದ್ದಳು!” ಎಂದಳು.
“ಹು!” ಎಂದೆ.
“ನೀವು ಹೂಗುಡುವುದೇನೂ ಬೇಡ…, ಸುಮ್ಮನೆ ಕೇಳಿಸಿಕೊಳ್ಳಿ ಸಾಕು!” ಎಂದಳು.
ನಾನು ಮುಳುಗುತ್ತಿರುವ ಸೂರ್ಯನನ್ನೇ ನೋಡುತ್ತಾ ಕುಳಿತೆ. ಅವಳು ಕಥೆ ಹೇಳಲಾರಂಬಿಸಿದಳು.
೬
“ಮುಸ್ಲಿಂ ಹುಡುಗಿ ಅವಳು. ಹುಡುಗನೊಬ್ಬ ಆ ಹುಡುಗಿಯನ್ನು ಪರಿಚಯವಾದ. ಅವನು ಮುಸ್ಲಿಂ ಅಲ್ಲ. ಆದರೆ ಮದುವೆಯಾದರೆ ಮುಸ್ಲಿಂ ಹುಡುಗಿಯನ್ನೇ ಅನ್ನುವುದು ಅವನ ಹಠ. ಆ ಹಠವೂ ಒಂದು ಕಾರಣವಿರಬಹುದು ಅವಳನ್ನು ಪರಿಚಯವಾಗಲು. ಪರಿಚಯ ಪ್ರೇಮಕ್ಕೆ ತಿರುಗಿತು. ಮದುವೆಯಾಗಲು ದಿನಾಂಕವನ್ನೂ ನಿಶ್ಚಯಿಸಿದರು. ಆ ದಿನದಿಂದ ಅವನ ಪತ್ತೆಯಿಲ್ಲ! ಹುಡುಗಿ ಏನು ಮಾಡಬೇಕು?” ಎಂದಳು.
ನಾನೇನೂ ಪ್ರತಿಕ್ರಿಯಿಸಲಿಲ್ಲ.
“ಉತ್ತರ ಹೇಳಿ!” ಎಂದಳು.
“ಕಥೆ ಹೇಳುತ್ತಿರುವುದು ನೀವು! ಕೇಳುಗನಲ್ಲಿ ಪ್ರಶ್ನೆ ಕೇಳುವುದು ತಪ್ಪು! ಹೂಂಗುಡಲೇ ಅವಕಾಶ ಕೊಡದವರು ಹೀಗೆ ಪ್ರಶ್ನೆ ಕೇಳಬಹುದೇ?” ಎಂದೆ.
ಅವಳು ಮೌನವಾದಳು. ಮುಳುಗುತ್ತಿರುವ ಸೂರ್ನನನ್ನೇ ನೋಡುತ್ತಾ ಕುಳಿತೆವು.
ಸೂರ್ಯಾಸ್ತದ ನಂತರ ಎದ್ದೆ. ಕತ್ತಲು ಬೆಳಕಿನ ಆಟ. ಗಾಡಿ ನಿಲ್ಲಿಸಿದ್ದ ಕಡೆಗೆ ನಡೆಯತೊಡಗಿದೆವು.
ನನ್ನಲ್ಲಿ ಯಾವುದೇ ಕುತೂಹಲ ಹುಟ್ಟುವುದಿಲ್ಲವೆನ್ನುವ ಅರಿವಾಯಿತೋ ಏನೋ…,
“ಅವನ ಹುಡುಕಾಟದಲ್ಲಿದ್ದೇನೆ!” ಎಂದಳು.
೭
ಸುತ್ತಾಟ ಸಾಕಾಯಿತು. ಮರಳಲು ತೀರ್ಮಾನಿಸಿದೆ. ಅವಳನ್ನು ಹತ್ತಿಸಿಕೊಂಡ ಜಾಗ ತಲುಪಿದಾಗ ಗಾಡಿ ನಿಲ್ಲಿಸಿದೆ. ಇಳಿದಳು. ಇಬ್ಬರೂ ಅವಳೇ ಕೊಂಡುಕೊಂಡ…, ಒಂದೇ ರೀತಿಯ ಹೊಸ ಬಟ್ಟೆ ಧರಿಸಿದ್ದೆವು.
ಅವಳಲ್ಲಿನ ಚಡಪಡಿಕೆ ಕಂಡು ಗಾಡಿಯಿಂದ ಇಳಿದೆ.
ಹತ್ತಿರಬಂದು ಅಪ್ಪಿಕೊಂಡಳು…!
ಪುನಃ ನಾನು ಗಾಡಿ ಹತ್ತುವಾಗ ಅವಳ ಕಣ್ಣಿನಲ್ಲಿ ಪ್ರಶ್ನೆ ಸ್ಪಷ್ಟವಾಗಿತ್ತು!
“ಅವನು ನೀನೇನಾ?”
ನನಗೋ…,
ಅವಳಿಗೆ ನಾನು ಪ್ರಶ್ನಾತೀತವಾಗಿ ಅರಿವಿಗೆ ಬರಬೇಕಿತ್ತು!
Comments
Post a Comment