ಬೆಕ್ಕಿನ ಮರಿ!

ಬೆಕ್ಕಿನ ಮರಿ!

*

ಅವಳನ್ನೇ ನೋಡುತ್ತಿದ್ದೆ. ಅವಳ ಕೂದಲು…, ನನ್ನ ಇಮೋಷನ್ ಅದು!

ನನ್ನ ಮುಖವನ್ನು ನೋಡಲಾಗದ ನಾಚಿಕೆಯೋ, ಹೆದರಿಕೆಯೋ, ಗೌರವವೋ…, ಯಾವ ಭಾವ ಅದು?

ನನ್ನ ನೋಟವನ್ನು ಎದುರಿಸಲಾಗದೆ ಬೆಕ್ಕಿನ ಮರಿಯಂತೆ ಹಿಂದಕ್ಕೆ ಸರಿದಳು!

ನಾನು ತಿರುಗುವುದಕ್ಕೆ ಅನುಸಾರವಾಗಿ ನನ್ನ ಬೆನ್ನ ಹಿಂದಕ್ಕೆ ಸರಿಯುತ್ತಿದ್ದಳು…!

“ಬಾ ಈಚೆ!” ಎಂದು ಹೇಳಿ ಅವಳನ್ನು ಹಿಡಿದು ಮುಂದಕ್ಕೆ ಎಳೆದೆ.

ಇಲ್ಲ…, ತಲೆ ಎತ್ತುತ್ತಲೇ ಇಲ್ಲ!

ಬೊಗಸೆಯಲ್ಲಿ ಮುಖವನ್ನು ತೆಗೆದುಕೊಂಡು ನೋಡಿದೆ.

ಆ ಚಂಚಲತೆ- ಅಧೀರತೆ…, ಕೊನೆಗೂ ನೋಡಿದಳು!

ನೋಡಬೇಡ ಅನ್ನುವಂತೆ ಕಣ್ಣುಗಳಿಗೆ ಒಂದೊಂದು ಮುತ್ತು ಕೊಟ್ಟೆ!

ಪಬ್ಲಿಕ್ ಆಗಿ!! ಇಬ್ಬರಿಗೂ ಅದರ ಅರಿವೇ ಇರಲಿಲ್ಲ!

“ಹೋ…!” ಅನ್ನುವ ಸುತ್ತಲಿನವರ ಗೇಲಿ ನಮ್ಮನ್ನು ಎಚ್ಚರಿಸಿತು!

ಮತ್ತಷ್ಟು ಮುದುಡಿ ಹಿಂದಕ್ಕೆ ಸರಿದಳು. ನನಗೋ ಅವಳ ಮುಖವನ್ನು ನೋಡುತ್ತಲೇ ಇರಬೇಕೆನ್ನುವ ಆಸೆ!

ಬೆಕ್ಕಿನ ಮರಿ!

ಬೀದಿಬದಿಯ ಟೀ ಅಂಗಡಿ. ಆರ್ಡರ್ ಕೊಟ್ಟಾಗಿದೆ. ಕುದಿಸುತ್ತಿದ್ದಾರೆ. ಹೊರಡುವ ಹಾಗಿಲ್ಲ. ಅವಳೋ ಮುಂದಕ್ಕೆ ಬರುತ್ತಿಲ್ಲ! ನನ್ನ ಅವಸ್ಥೆಯನ್ನು ಏನೆಂದು ಹೇಳುವುದು?

“ಸರಿ…, ಬಾ…, ನಾನೇನೂ ಮಾಡುವುದಿಲ್ಲ!” ಎಂದೆ.

ಹಿಂಜರಿಕೆಯಿಂದ ನಿಧಾನಕ್ಕೆ ಮುಂದಕ್ಕೆ ಬಂದಳು. ನೀಳವಾದ ಕೂದಲು…, ಚಂಚಲ ಕಣ್ಣುಗಳು, ಮೂಗಿನ ಕೆಳಗೆ ಎದ್ದುಕಾಣುವ ರೋಮವಿರುವ ತುಟಿ!

ಮನಸ್ಸು! ಎಷ್ಟು ಕಷ್ಟ!

“ಟೀ!” ಎಂದ ಅಂಗಡಿಯವ.

ಅವಳಿಗೊಂದು ಕೊಟ್ಟು ನಾನೊಂದು ತೆಗೆದುಕೊಂಡು ಕುಡಿಯಲಾರಂಬಿಸಿದೆವು.

ಅವಳನ್ನೇ ನೋಡುತ್ತಿರುವ ಅರಿವಾಗಿ ಮತ್ತೆ ಬೆನ್ನ ಹಿಂದಕ್ಕೆ ಸರಿದಳು.

ಟಿ ಕುಡಿದು ಮುಗಿಸಿ ಹೊರಟೆವು.

ಅದೆಷ್ಟು ಕಣ್ಣುಗಳು ನಮ್ಮನ್ನೇ ನೋಡುತ್ತಿದ್ದವೋ…!

“ಹೇಳು…, ಏನು ಮಾಡೋಣ?” ಎಂದೆ.

ನಡೆಯುತ್ತಿದ್ದರೆ ಅವಳಿಗೆ ಸಮಸ್ಯೆಯಿಲ್ಲ! ಕೈಹಿಡಿದು ನಡೆಯುತ್ತಾಳೆ. ಎಷ್ಟುದೂರವಾದರೂ- ನನ್ನೊಂದಿಗಾದರೆ!

“ಗೊತ್ತಿಲ್ಲ!” ಎಂದಳು.

“ಎಷ್ಟು ಹೊತ್ತಿಗೆ ವಾಪಸ್ ಹೋಗಬೇಕು?” ಎಂದು ಕೇಳಿದೆ.

“ಸಂಜೆಯವರೆಗೂ ಸಮಯವಿದೆ!” ಎಂದಳು.

ಏನು ಮಾಡಬಹುದೆಂದು ಯೋಚಿಸಿದೆ.

“ರೂಂ ಬುಕ್ ಮಾಡಲ?” ಎಂದೆ.

ನನ್ನ ಮುಖವನ್ನೊಮ್ಮೆ ನೋಡಿ- ತಲೆ ತಗ್ಗಿಸಿದಳು.

“ಬೇಡ ಬಿಡು!” ಎಂದು ಎಲ್ಲಿಗೆಂದಿಲ್ಲದೆ ಹೆಜ್ಜೆ ಹಾಕಿದೆವು.

ಅವಳ ಸಾನ್ನಿಧ್ಯದಿಂದ ಹೊರಬರಲು ನನಗೆ ಇಷ್ಟವಿರಲಿಲ್ಲ. ಅವಳಿರಬೇಕು ಪ್ರತಿ ಕ್ಷಣ ಅನ್ನುವ ಭಾವ.

ಒಂದು ಪಾರ್ಕ್ ಕಾಣಿಸಿತು. ಒಳಹೊಕ್ಕು ಮರದಡಿಯಲ್ಲಿ ಕುಳಿತುಕೊಂಡೆವು.

“ರೂಂ ಬುಕ್ ಮಾಡಿ!” ಎಂದಳು.

ತಟ್ಟನೆ ಅವಳ ಮುಖವನ್ನು ನೋಡಿದೆ.

“ಇನ್ನು ನಮ್ಮ ಭೇಟಿ ಸಾಧ್ಯವೋ ಇಲ್ಲವೋ…! ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತೆ…, ನನ್ನನ್ನು ಪರಿಪೂರ್ಣವಾಗಿ ನಿಮಗೆ ಸಮರ್ಪಿಸಿಕೊಳ್ಳಬೇಕು ಅಂದುಕೊಂಡಿದ್ದೇನೆ!” ಎಂದಳು.

“ನಿಜ ಹೇಳಬೇಕೆಂದರೆ ರೂಂ ಬುಕ್ ಮಾಡಲ ಅಂದಾಗ ನನಗಾ ಚಿಂತೆ ಇರಲಿಲ್ಲ. ಅಷ್ಟ ದೂರದಿಂದ ಬಂದಿದೀಯ…, ಫ್ರೆಶಪ್ ಆಗಿ, ಸ್ವಲ್ಪ ರೆಸ್ಟ್ ತೆಗೆದುಕೊಂಡು, ನಿನ್ನ ಮುಖವನ್ನೂ ಕೂದಲನ್ನೂ ಕಣ್ಣಾರೆ ನೋಡಿ- ಕಳಿಸಿಕೊಡೋಣವೆಂದು ಕೇಳಿದ್ದು!” ಎಂದೆ.

“ನಿಮ್ಮ ಪ್ರಶ್ನೆಗೆ ಉತ್ತರವಾಗಿ ನಾನಿದನ್ನು ಹೇಳಲಿಲ್ಲ! ನೀವೇನೆಂದು ನನಗೆ ಗೊತ್ತು! ನನ್ನ ಇಚ್ಛೆಯನ್ನು ಹೇಳಿದೆ!” ಎಂದಳು.

“ಮತ್ತೊಮ್ಮೆ ನಮ್ಮ ಭೇಟಿ ಸಾಧ್ಯವಾದರೆ…, ಅಂದು ನಾವು ಪರಸ್ಪರ ಸಮರ್ಪಿಸಿಕೊಳ್ಳೋಣ!” ಎಂದೆ.

ನನ್ನ ಹತ್ತಿರಕ್ಕೆ ಸರಿದು ಕುಳಿತಳು. ನಾನವಳ ಕೂದಲನ್ನು ಸವರಿದೆ. ನನ್ನ ಕಣ್ಣನ್ನೊಮ್ಮೆ ಇಣುಕಿ ನೋಡಿ…,

“ಹೆದರಿಕೆ…, ವಿಧಿಯಬಗ್ಗೆ!” ಎಂದಳು.

“ಹೆದರಿದರೂ ಹೆದರದಿದ್ದರೂ ವಿಧಿಯಂತೆ ನಡೆಯುತ್ತದೆ!” ಎಂದೆ.

“ನೀವೇಕೆ ನನ್ನ ಮದುವೆಯಾಗಬಾರದು? ಯಾಕಿಷ್ಟು ಹಿಂಜರಿಕೆ? ತಡೆ- ಏನು?” ಎಂದಳು.

“ತಡೆ- ನನ್ನ ಮನಸ್ಸು! ಬಂಧನ ನನಗಿಷ್ಟವಿಲ್ಲ! ಕಟ್ಟುಪಾಡು, ಕರ್ತವ್ಯ…, ನನಗೆ ಒಗ್ಗುವುದಿಲ್ಲ! ಅಲೆಮಾರಿಯಾಗಬೇಕು ಅನ್ನುವವನ ಏಕೈಕ ವ್ಯಾಮೋಹ ನೀನು! ನಿನ್ನಿಂದ ಹೊರಬರಲು ಪರದಾಡುತ್ತಿದ್ದೇನೆ!” ಎಂದೆ.

ನಂತರ ಅವಳು ನನಗೆ ಸಹಾಯ ಮಾಡಿದಳು. ಮತ್ತೆಂದೂ ನಮ್ಮ ಭೇಟಿಯಾಗಲಿಲ್ಲ- ಎಂದು ಕಥೆಯನ್ನು ಮುಗಿಸಬೇಕೆನ್ನುವ ಆಸೆ! ಆದರೆ…, ಕಥೆ ಓದಿದ ಅವಳು ಪ್ರಶ್ನೆ ಮಾಡುತ್ತಾಳೆ…,

“ಯಾಕಪ್ಪಾ…? ನಾನು ದೂರ ಹೋಗಬೇಕೆಂದು ಇನ್‌ಡೈರೆಕ್ಟಾಗಿ ಹೇಳ್ತಿದೀಯ?” ಅಂತ.

ಆದ್ದರಿಂದ ಕಥೆಯ ಮುಕ್ತಾಯ ಹೀಗೆ…,

“ನಾನೆಂಬ ವ್ಯಾಮೋಹದಿಂದ ನಿಮಗೆ ಹೊರಬರಲಾಗುತ್ತಿಲ್ಲ ಅನ್ನುವುದು ನನ್ನ ಅಹಂಕಾರ! ನಿಮಗೆ ಸಹಾಯವಾಗುವಂತೆ ದೂರ ಹೋಗಬೇಕು- ಬೇರೆ ಮದುವೆಯಾಗಬೇಕು- ಅಥವಾ ಸಾಯಬೇಕು ಅಂತೆಲ್ಲಾ ಇದೆ! ಆದರೆ ನೀವೆಂಬ ನನ್ನ ವ್ಯಾಮೋಹಕ್ಕೆ ಪರಿಹಾರವೇನು? ನನಗೇನೂ ಅಲೆಮಾರಿಯಾಗಬೇಕೆಂದಿಲ್ಲ!” ಎಂದಳು.

ಈಗ ಬೆಕ್ಕಿನ ಮರಿಯೊಂದಿಗೆ ಅಲೆದಾಡುತ್ತಿದ್ದೇನೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!