ಪಿಹೆಚ್‌ಡಿ!

 ಪಿಹೆಚ್‌ಡಿ!

*

ನಾವಿಬ್ಬರೂ ಒಂದು ಪ್ರಯಾಣ ಹೊರಟಿದ್ದೆವು. ಶಾಶ್ವತವಾಗಿ ಬೇರ್ಪಡುವುದಕ್ಕಿಂತ ಮುಂಚೆ ಒಟ್ಟಿಗೆ…, ಕೊನೆಯ ಪ್ರಯಾಣ. ದುಃಖವೇನೂ ಇಲ್ಲ. ಸಂತೋಷವೇ. ಕೆಲವೊಂದು ತೀರ್ಮಾನಗಳು ಅನಿವಾರ್ಯ. ಆ ತೀರ್ಮಾನಕ್ಕೆ ಬದ್ಧರಾದಮೇಲೆ- ಭಾವನೆಗಳಿಗೆ ಅರ್ಥವಿಲ್ಲ! 

ಅದು ಯಾವ ಜಾಗವೆಂದು ನಮಗೆ ತಿಳಿಯದು. ಅಲ್ಲಿಗೆ ಹೋಗಬಾರದೆಂದು ನಮ್ಮನ್ನು ತಡೆಯುವವರು ಯಾರೂ ಇರಲಿಲ್ಲ. ಜುಳುಜುಳು ಹರಿಯುತ್ತಿರುವ ನದಿ. ನಾವಿರುವ ದಡದಮೇಲೆ ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳು. ನದಿಯ ಆಚೆ- ಬಯಲು.

ದಡದಲ್ಲಿ…, ನೀರಿಗೆ ಕಾಲು ಇಳಿಬಿಟ್ಟು ಕುಳಿತೆವು. ಅವಳು ನನ್ನ ತೋಳಿಗೆ ಒರಗಿಕೊಂಡಿದ್ದಳು.

“ನಮ್ಮ ತೀರ್ಮಾನ ಸರಿ ಇದೆ ಅಲ್ವಾ?” ಎಂದಳು.

“ಇದಕ್ಕಿಂತ ಪಕ್ವವಾದ ತೀರ್ಮಾನ ಬೇರೆ ಯಾವುದಿದೆ?” ಕೇಳಿದೆ.

“ಅಂದು ನೀನು ನನಗೆ ಸಿಗದಿದ್ದರೆ ಬದುಕು ಏನಾಗಿರುತ್ತಿತ್ತು?” ಎಂದು ಕೇಳಿದಳು.

“ಮುಂಚೆ ಆಗಿದ್ದರೆ ಮತ್ತು ಮುಂದೆ ಆದರೆ ಅನ್ನುವುದು ಬಿಡು. ಅದು ನಮ್ಮ ಪರಿಪೂರ್ಣವಾದ ಭ್ರಮೆ. ಆಗಿದೆ ಅನ್ನುವುದಷ್ಟೇ ನಿಜ! ಆಗದ ವಿಷಯಗಳಬಗ್ಗೆ ಊಹೆಯ ಸಂಭಾಷಣೆ ಯಾಕೆ? ಆದ ಅನುಭವವನ್ನಿಟ್ಟು ಆಗಬೇಕಾದ ವಿಷಯಗಳಬಗ್ಗೆ ಯೋಚನೆ ಮಾಡೋಣ!” ಎಂದೆ.

“ತೀರ್ಮಾನ ತೆಗೆದುಕೊಂಡು ಆಗಿದೆಯಲ್ಲಾ? ಆದ್ದರಿಂದ…, ನಮಗೆ ಸಂಬಂಧಪಡದ ವಿಷಯವೇನಾದರೂ ಹೇಳು! ಏನಿದ್ದರೂ ಕಥೆಗಾರ ನೀನು!” ಎಂದಳು.

ಹೌದು…, ಕಥೆಗಾರ ನಾನು! ಪ್ರತಿಯೊಂದರಲ್ಲಿಯೂ ಕಥೆಗಳನ್ನು ಹುಡುಕುವವ! ಕಥೆಗಳಂತೆ ಹೇಳಲಾಗದ್ದನ್ನೂ ಕಥೆಯಂತೆಯೇ ಹೇಳಬೇಕು ಅಂದುಕೊಳ್ಳುವವ. ಕೆಲವೊಮ್ಮೆ ಏನೂ ತೋಚದಿದ್ದರೂ ಬರೆಯಲೇ ಬೇಕು ಅನ್ನುವ ಹಠದಿಂದ ಏನೇನೋ ಬರೆಯುವವ. ಕೆಲವೊಮ್ಮೆ ಯಾವ ಒತ್ತಡವೂ ಇಲ್ಲದೆ ಆಯಾಚಿತವಾಗಿ ಬರೆಯುವವ. ಮತ್ತೆ ಕೆಲವೊಮ್ಮೆ ವಿಷಯವೊಂದು ಒಳಗಿನಿಂದ ಒದ್ದುಕೊಂಡು ಬಂದು ಬರೆಯಲೇ ಬೇಕೆಂಬ ಒತ್ತಡವಿದ್ದರೂ ಬರೆಯದೆಯೇ ಉಳಿಯುವವ! ಒಟ್ಟಿನಲ್ಲಿ ನಾನು ಏನೇ ಬರೆದರೂ ಅದು ಕಥೆಯಂತೆಯೇ ಇರಬೇಕು ಅನ್ನುವ ಅಲಿಖಿತ ನಿಯಮವನ್ನು ಅಳವಡಿಸಿಕೊಂಡವ!

“ನಮಗೆ ಸಂಬಂಧಪಟ್ಟ- ಪಡದ ವಿಷಯಗಳನ್ನು ಇಟ್ಟುಕೊಂಡು ಕಥೆಯೊಂದು ಬರೆಯಬೇಕು ಅಂದುಕೊಂಡಿದ್ದೇನೆ!” ಎಂದೆ.

ತೋಳಿಗೆ ಒರಗಿಕೊಂಡಿದ್ದ ಅವಳು ನೀರಿನಿಂದ ಕಾಲು ತೆಗೆದು, ನನ್ನ ಮಡಿಲಿನ ಮೇಲೆ ತಲೆಯಿಟ್ಟು…, ಮುದುಡಿ ಮಲಗಿದಳು.

ಕಥೆಯಲ್ಲಿ ನಮಗೆ ಸಂಬಂಧಪಡದೇ ಇರುವ ವಿಷಯ ಯಾವುದು ಅನ್ನುವುದರಮೇಲೆ ಕಥೆಯ ಕ್ಲೈಮಾಕ್ಸ್ ರೂಪುಗೊಂಡಿದೆ!

ಸಾಯಬೇಕೆಂದೇ ಕಾರಿನ ಮುಂದಕ್ಕೆ ಹಾರಿದ್ದಳು. ನಾನು ಕೂಡ ಕಾರಿಗೆ ಯಾವುದಾದರೂ ಟ್ರಕ್ ಗುದ್ದಬಾರದೇ…, ಕಾರು ಯಾವುದಾದರೂ ಪ್ರಪಾತಕ್ಕೆ ಬೀಳಬಾರದೇ…, ಪೆಟ್ರೋಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಳ್ಳಬಾರದೇ ಅನ್ನುವ ಚಿಂತೆಯಲ್ಲಿಯೇ ಗಾಡಿ ಓಡಿಸುತ್ತಿದ್ದೆ!

ಸಾಯಬೇಕೆಂಬ ಚಿಂತೆ ಇತ್ತೆ ಹೊರತು ಸಾಯಿಸಬೇಕೆಂಬ ಚಿಂತೆ ಇರಲಿಲ್ಲವಾದ್ದರಿಂದ ಬ್ರೇಕ್ ಹಾಕಿದೆ!

ಕ್ರೀಚ್ ಅನ್ನುವ ಶಬ್ದದೊಂದಿಗೆ ಕಾರು ನಿಂತಿತು.

ಗುದ್ದಿದೆನಾ? ತಿಳಿಯದು…!

ಹಂಪ್ ಹಾರಿದಂತೆ ಆಗಲಿಲ್ಲವಾದ್ದರಿಂದ ಅವಳ ಮೇಲೆ ಕಾರು ಹತ್ತಲಿಲ್ಲ ಅನ್ನುವುದು ಕನ್‌ಫರ್ಮ್!

ಯಾವುದೇ ಗಡಿಬಿಡಿಯಿಲ್ಲದೆ ಕಾರಿನಿಂದಿಳಿದು ಬರುವಾಗ ಅವಳು ಎದ್ದು ನಿಲ್ಲುತ್ತಿದ್ದಳು.

ಅವಳ ಮುಖದಲ್ಲಿ ಅಪರಾಧಿ ಪ್ರಜ್ಞೆ! ಸತ್ತಿದ್ದರೆ ಅದರ ಅಗತ್ಯವಿರಲಿಲ್ಲ!

“ನೀವೊಂದು ಲಾರಿಯಾಗಿರಬೇಕಿತ್ತು!” ಎಂದೆ.

ಅರ್ಥವಾಗದೆ ನೋಡಿದಳು.

“ಈ ಗೊಂದಲದ ಮುಖದಲ್ಲಿ ತುಂಬಾ ಚಂದ ಕಾಣಿಸುತ್ತಿದ್ದೀರಿ!” ಎಂದೆ.

ಅವಳೇನೂ ಮಾತನಾಡಲಿಲ್ಲ! ಅವಳ ಮುಖವನ್ನೇ ನೋಡುತ್ತಿದ್ದೆ. ಮುಗ್ಧೆ ಅನ್ನಿಸಲಿಲ್ಲ. ಅಪಾರವಾದ ಯಾತನೆ ಅನುಭವಿಸಿದ ಭಾವ- ಈಗ ಬಿದ್ದೋ ಅಥವಾ ಜೀವನ ಜಂಜಾಟದ್ದೋ ತಿಳಿಯಲಿಲ್ಲ.

“ಏನಿದ್ದರೂ ಸಾಯಲು ತೀರ್ಮಾನಿಸಿದವರು! ನನ್ನೊಂದಿಗೆ ಬರುವುದಕ್ಕೆ ಹೆದರುವುದಿಲ್ಲ ಅಂದುಕೊಳ್ಳುತ್ತೇನೆ! ನಾನೂ ಕೂಡ ಸಾಯಬೇಕು ಅಂದುಕೊಂಡೇ ಪ್ರಯಾಣ ಹೊರಟವ! ನಾವೊಂದು ಪ್ರಯೋಗ ಮಾಡಿ ನೋಡೋಣ! ಈ ರಸ್ತೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೋ ಅಲ್ಲಿಯವರೆಗೆ ಒಟ್ಟಿಗೆ ಪ್ರಯಾಣ ಮಾಡೋಣ! ಒಂದೋ ಪೆಟ್ರೋಲ್ ಖಾಲಿಯಾಗಬೇಕು, ಅಥವಾ ಬೆಳಗಾಗಬೇಕು ಅಥವಾ…!” ಎಂದು ನಿಲ್ಲಿಸಿದೆ.

ಕುತೂಹಲದಿಂದ ನೋಡಿದಳು.

“ನಾವಿಬ್ಬರೂ ಸತ್ತಿರಬೇಕು! ಸತ್ತಿಲ್ಲವೆಂದರೆ ಸಾಯಬಾರದವರು ಎಂದೇ ಅರ್ಥ!” ಎಂದೆ.

ಮನುಷ್ಯನ ಮನಸ್ಸೊಂದು ಬ್ರಹ್ಮಾಂಡ! ಅದೆಷ್ಟು ಆಲೋಚನೆಗಳು, ಯೋಚನೆಗಳು, ಚಿಂತೆ ತಕರಾರುಗಳು!

ಸಮುದ್ರವನ್ನೇ ಶಾಯಿಯಯನ್ನಾಗಿ ಮಾಡಿ, ಗಿಡಮರಗಳ ರೆಂಬೆಗಳನ್ನೇ ಲೇಖನಿಯನ್ನಾಗಿ ಮಾಡಿ ಮನುಷ್ಯ ಮನಸ್ಸಿನಬಗ್ಗೆ ಬರೆಯತೊಡಗಿದರೆ…, ಸಮುದ್ರವೆಂಬ ಶಾಯಿ, ರೆಂಬೆಗಳೆಂಬ ಲೇಖನಿ ಮುಗಿದರೂ ಇನ್ನೂ ಏನೋ ಉಳಿದಿರುತ್ತದೆ! ಹಾಗಿರುವ ಮನಸ್ಸನ್ನು ಇದು ಹೀಗೆಯೇ ಎಂದು ನಿರ್ಧರಿಸಬಹುದೇ?

“ಹೆಣ್ಣು ಮಕ್ಕಳು ತುಂಬಾ ಬೇಗ ಮೂವ್‌ಆನ್ ಆಗುತ್ತಾರಂತಲ್ಲ?” ಎಂದೆ.

“ಯಾವ ವಿಷಯದಲ್ಲಿ?” ಎಂದು ಕೇಳಿದಳು!

“ಲೌ ಬ್ರೇಕಪ್ ಆದರೆ…!” ಎಂದೆ.

“ಅದು ಲೌ ಬ್ರೇಕಪ್ ಹೇಗೆ ಆಯಿತು ಅನ್ನುವುದನ್ನು ಡಿಪೆಂಡ್ ಆಗಿದೆ!” ಎಂದಳು.

“ಅಂದರೆ?” ಎಂದೆ.

“ಹುಡಗನಬಗ್ಗೆ ಹುಡುಗಿ ಆಸಕ್ತಿ ಕಳೆದುಕೊಂಡು ಅವಳಾಗಿ ಅವನಿಂದ ದೂರ ಹೋಗಲು ತೀರ್ಮಾನಿಸಿದರೆ…, ಹೆಣ್ಣು ತುಂಬಾ ಬೇಗ ಮೂವ್‌ಆನ್ ಆಗುತ್ತಾಳೆ! ಹುಡುಗ ಡಿಪ್ರೆಷನ್‌ಗೆ ಹೋಗುತ್ತಾನೆ! ಕುಡಿತ, ಸಿಗರೇಟು, ಗಾಂಜ…!” ಎಂದು ನಿಲ್ಲಿಸಿ…, ನನ್ನ ಮುಖವನ್ನೊಮ್ಮೆ ನೋಡಿ…,

“ಅದೇ ಹುಡುಗ ಹುಡುಗಿಯಬಗ್ಗೆ ಆಸಕ್ತಿ ಕಳೆದುಕೊಂಡು ಅವನಾಗಿ ಅವಳಿಂದ ದೂರ ಹೋಗಲು ತೀರ್ಮಾನಿಸಿದರೆ…, ಗಂಡು ತುಂಬಾ ಬೇಗ ಮೂವ್‌ಆನ್ ಆಗುತ್ತಾನೆ! ಹುಡುಗಿ ಡಿಪ್ರೆಷನ್‌ಗೆ ಹೋಗುತ್ತಾಳೆ…, ಆತ್ಮಹತ್ಯೆಯ ಯೋಚನೆ ಬರುತ್ತದೆ!” ಎಂದಳು.

“ಕರ್ಮ! ನಾವೇ ಉದಾಹರಣೆ!” ಎಂದು ನಕ್ಕು…,

“ಮತ್ತೆ ಆ ಡಾಕ್ಟರ್ ಯಾಕೆ ಹಾಗೆ ಸ್ಟೇಟ್‌ಮೆಂಟ್ ಕೊಟ್ಟರು?” ಎಂದೆ.

“ಯಾವ ಡಾಕ್ಟರ್? ಏನಂತ ಸ್ಟೇಟ್‌ಮೆಂಟ್?” ಎಂದಳು.

“ಅವರೇನೂ ಎಂಬಿಬಿಎಸ್ ಡಾಕ್ಟರ್ ಅಲ್ಲ! ಅವರೊಬ್ಬ ಸೈಕಾಲಜಿಸ್ಟ್! ಹಾಗಂತ ಅವರ ಡಾಕ್ಟರೇಟ್ ಕೂಡ ಸೈಕಾಲಜಿಯಲ್ಲಿ ಅಲ್ಲ!! ಕಂಪ್ಯೂಟರ್‌ಸೈನ್ಸ್‌ನಲ್ಲಿ ಪಿಹೆಚ್‌ಡಿ ಮಾಡಿ…, ಐದಾರು ಯೂನಿವರ್ಸಿಟಿಗಳಲ್ಲಿ ಸೈಕಾಲಜಿಗೆ ಸಂಬಂಧಪಟ್ಟ ವಿವಿಧ ಕೋರ್ಸ್‌ಗಳನ್ನು ಮಾಡಿ ಸರ್ಟಿಫಿಕೆಟ್ ಪಡೆದುಕೊಂಡಿರುವವರು! ಅವರ ಪ್ರಕಾರ ಲವ್ ಬ್ರೇಕಪ್ ಆದಾಗ ಹೆಣ್ಣು ಮಕ್ಕಳು ಮೂವ್‌ಆನ್ ಆಗುವಂತೆ ಗಂಡು ಮಕ್ಕಳು ಆಗುವುದಿಲ್ಲ- ಅಂತೆ! ಹಾಗೆಯೇ ಗಂಡು ಓಲೈಸುವುದಕ್ಕೆ ಅನುಗುಣವಾಗಿ ಹೆಣ್ಣು ಅವನಿಗೆ ಒಲಿಯುವುದಿಲ್ಲ- ಎಂದರು!” ಎಂದೆ.

“ಅವರ ತಲೆ! ಇದೊಂದು ರಾಂಗ್ ಸ್ಟೇಟ್‌ಮೆಂಟ್! ಗಂಡುಮಕ್ಕಳು ಕೈ ಕೊಟ್ಟರೆ ಹೆಣ್ಣುಮಕ್ಕಳು ಅಷ್ಟು ಸುಲಭವಾಗಿ ಮೂವ್‌ಆನ್ ಆಗುವುದಿಲ್ಲ! ಹಾಗೆಯೇ ಹೆಣ್ಣುಮಕ್ಕಳು ಕೈಕೊಟ್ಟರೆ ಗಂಡುಮಕ್ಕಳು! ಹಾಗೆಯೇ ಓಲೈಸುವುದು- ಒಲಿಯುವುದು ಅನ್ನುವುದು ಹಾಗೆ ಮಾಡುತ್ತಿರುವುದು ಯಾರು- ಯಾರಿಗೆ ಅನ್ನುವುದನ್ನು ಅವಲಂಬಿಸಿದೆ! ಹೇಗೆ ಗಂಡು ಓಲೈಸಿದರೆ ಪ್ರತಿ ಹೆಣ್ಣು ಒಲಿಯುವುದಿಲ್ಲವೋ ಹಾಗೇ ಕೆಲವೊಮ್ಮೆ ಹೆಣ್ಣು ಓಲೈಸಿದರೆ ಗಂಡೂ ಒಲಿಯುವುದಿಲ್ಲ! ಓಲೈಸುವ ಪ್ರಮಾಣಕ್ಕನುಗುಣವಾಗಿ ಒಲಿಯಬೇಕೆಂದಿಲ್ಲ- ಆದರೆ ಅದು ಇಬ್ಬರಿಗೂ ಅನ್ವಯ!” ಎಂದಳು.

“ಇದನ್ನೇ ನಾನವರಿಗೆ ಹೇಳಿದೆ!” ಎಂದೆ.

“ಅದಕ್ಕೆ ಅವರೇನಂದರು?”

“ಅವರು ಅವರ ಮಾತಿಗೆ ಆಧಾರವಾಗಿ ಯಾವುದೋ ಇಂಗ್ಲೀಷ್ ಲೇಖಕರು ಬರೆದ ಕೆಲವು ಪುಸ್ತಕಗಳನ್ನು ರೆಫರೆನ್ಸ್‌ಆಗಿ ಕೊಟ್ಟರು!” ಎಂದೆ.

“ಅದಕ್ಕೆ ನೀನೇನು ಹೇಳಿದೆ?” ಎಂದಳು.

“ನನ್ನ ಅನುಭವದ ಪ್ರಕಾರ ನಿಮ್ಮ ಸ್ಟೇಟ್‌ಮೆಂಟ್ ಸುಳ್ಳು! ನಾನದನ್ನು ನಿಷೇಧಿಸುತ್ತೇನೆ ಎಂದೆ!”

“ಅದಕ್ಕೆ ಅವರೇನೆಂದರು?”

“ರೆಫರನ್ಸ್ ಕೇಳಿದರು! ನನ್ನ ಮಾತಿಗೆ…, ಅನುಭವಕ್ಕೆ- ಆಧಾರವೇನು ಅಂತ!”

ಅವಳು ಕೈಯಿಂದ ಹಣೆ ಬಡಿದುಕೊಂಡು…,

“ಅಲ್ಲ ಮಾರಾಯ…, ಭಾರತದ ಸಂಸ್ಕೃತಿಯೇನು ವಿದೇಶಿಯರ ಸಂಸ್ಕೃತಿಯೇನು!? ಭಾರತದ ಎಜುಕೇಷನ್ ಸಿಸ್ಟಮ್/ಲೆವಲ್ ಏನು ವಿದೇಶಿಯರ ಎಜುಕೇಷನ್ ಸಿಸ್ಟಮ್/ಲೆವಲ್ ಏನು? ಭಾರತದ ಗಂಡಿನ- ಹೆಣ್ಣಿನ ಮಾನಸಿಕ ಸ್ಥಿತಿಯೇನು ವಿದೇಶೀ ಗಂಡಿನ- ಹೆಣ್ಣಿನ ಮಾನಸಿಕ ಸ್ತಿತಿಯೇನು? ನಮ್ಮ ಪುರಾಣಗಳು, ವೇದಗಳು, ಉಪನಿಷತ್ತುಗಳು…, ಸಾವಿರ ಸಾವಿರ ಗ್ರಂಥಗಳನ್ನು ಅಧ್ಯಯನ ಮಾಡುವ ನಾವೆಲ್ಲಿ, ವಿದೇಶಿಯರೆಲ್ಲಿ! ನಮ್ಮ ಮನಸ್ಸು ರೂಪುಗೊಂಡಿರುವ ವಿಧಾನಕ್ಕೂ ವಿದೇಶಿಯರ ಮನಸ್ಸು ರೂಪುಗೊಂಡಿರುವ ವಿಧಾನಕ್ಕು ಸಂಬಂಧವೇನು? ನಮ್ಮ ಶಿವರಾಮ ಕಾರಂತರೊಬ್ಬರ ಕಾದಂಬರಿಯಲ್ಲಿ ಬರುವಷ್ಟು ಮನಃಶ್ಶಾಸ್ತ್ರೀಯ ವಿಷಯಗಳು ವಿದೇಶಿಯನೊಬ್ಬನ ಮನಃಶ್ಶಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕದಲ್ಲಿ ಇರುವುದಿಲ್ಲ- ಅದುಗೊತ್ತ?” ಎಂದಳು.

“ಅವರು ಕಾದಂಬರಿಗಳನ್ನು ಕೇವಲ ಮನರಂಜನೆಗಾಗಿ ಮಾತ್ರ ಓದುವುದಂತೆ!” ಎಂದೆ. ನಕ್ಕಳು.

“ನಿನ್ನ ಕಾದಂಬರಿಯನ್ನು ಗೇಲಿ ಮಾಡಿದರಾ?” ಎಂದಳು.

“ಇಲ್ಲವೇ…! ನನ್ನ ಕಾದಂಬರಿಯಬಗ್ಗೆ ಹೇಳಿದಾಗ- ಹಾಗಂದರು! ಆದರೆ ವಿಷಯ ಅದಲ್ಲ! ನಿನ್ನಂತೆಯೇ ನಾನೂ ತರ್ಕಬದ್ದವಾಗಿ ವಾದ ಮಂಡಿಸಿದಾಗ ಅವರೇನು ಮಾಡಿದರು ಗೊತ್ತಾ?”

“ಏನು ಮಾಡಿದರು?”

“ನೀವೇ ಸರಿ ಎಂದು ನನಗೆ ಹೇಳಿ ಪಲಾಯನ ಮಾಡಿ..., ಅವನೊಬ್ಬ ಸ್ವಯಂಘೋಷಿತ ಪಂಡಿತ- ಎಂದು ಬೇರೆಯವರಿಗೆ ಹೇಳಿದರು- ನನ್ನಬಗ್ಗೆ!” ಎಂದೆ.

ಹೊಟ್ಟೆ ಹಿಡಿದುಕೊಂಡು ಗಹಗಹಿಸಿ ನಕ್ಕಳು! ಅವಳ ನಗುವನ್ನು ಗಮನಿಸದೆ…,

“ಇದು ನನ್ನ ಎರಡನೆಯ ಅನುಭವ!” ಎಂದೆ. ನಗು ನಿಲ್ಲಿಸಿ…,

“ಮೊದಲ ಅನುಭವ ಹೇಗಿತ್ತು? ಯಾರಿಂದ?” ಎಂದಳು.

ಆಂತ್ರಪಾಲಜಿಯಲ್ಲಿ ಪಿಹೆಚ್‌ಡಿ ಮಾಡಿದ ಡಾಕ್ಟರ್ ಆತ! ಆತನ ಹೆಚ್ಚು ಬರಹಗಳು ಓದುಗರಮಧ್ಯೆ ದ್ವೇಷ ಹುಟ್ಟಿಸುವಂತೆಯೇ ಇರುತ್ತದೆ. ಅವರು ನಿಮ್ಮನ್ನು ತುಳಿಯುತ್ತಿದ್ದಾರೆ, ನಿಮ್ಮ ಏಳಿಗೆ ಅವರಿಗೆ ಇಷ್ಟವಿಲ್ಲ, ನಿಮ್ಮ ಈ ಅವಸ್ಥೆಗೆ ಅವರೇ ಕಾರಣ ಅನ್ನುವಂತೆ…, ಜಾತಿ ಜಾತಿಗಳ ಮಧ್ಯೆ ಭಿನ್ನತೆ ತರುವುದಲ್ಲದೆ…, ಹಿಂದೂ ಅನ್ನುವ ಶಬ್ದವನ್ನು ಇಟ್ಟುಕೊಂಡು…, ಹಿಂದೂಗಳು ಬೌಧರನ್ನು ತುಳಿದರು, ಹಿಂದೂಗಳು ದಲಿತರನ್ನು ತುಳಿದರು, ಹಿಂದೂಗಳಿಗೆ ನಿಯತ್ತಿಲ್ಲ..., ಹಿಂದೂಗಳು ಅಂದುಕೊಂಡಿರುವ ಹೇಡಿಗಳು ನಿಜಕ್ಕೂ ಹಿಂದೂಗಳಲ್ಲ- ತಮ್ಮತನ ಇಲ್ಲದವರು…! ಅವರೊಂದು ಭಯಂಕರ ಭ್ರಮೆಯಲ್ಲಿದ್ದಾರೆ…! ಹೀಗೆ ಹೀಗೆ ಹೀಗೆ…, ಬಹುಸಂಖ್ಯಾತರ ನಂಬಿಕೆಗೆ ಧಕ್ಕೆ ತರುವಂತೆ, ಬಹುಸಂಖ್ಯಾತರ ಮನಸ್ಸಿಗೆ ನೋವಾಗುವಂತೆಯೇ ಅವರ ಬರಹಗಳಿರುತ್ತಿದ್ದವು!

ಅವರನ್ನು ನಾನೊಂದು ಪ್ರಶ್ನೆ ಕೇಳಿದೆ…,

“ಸರ್…, ಹಿಂದೂಗಳೆಂದರೆ ಯಾರು?”

ಆತ ಆಯಾಚಿತವಾಗಿ ಕೊಟ್ಟ ಉತ್ತರ…,

“ಪರ್ಷಿಯಾದ ಕಡೆಯಿಂದ ಬಂದವರು ಸಿಂಧೂನದಿ ಮೂಲವಾಗಿ ಇರುವ ಸ್ಥಳವನ್ನು- ಸಿಂಧೂ ಅನ್ನುವ ಪದದ ಉಚ್ಛಾರಣೆ ಹಿಂದೂ ಎಂದಾಗಿ- ಹಿಂದೂಸ್ಥಾನ್ ಎಂದೂ, ಅಲ್ಲಿ ವಾಸಿಸುವವರನ್ನು ಹಿಂದೂಗಳೆಂದೂ ಕರೆದರು!”

“ಹಾಗಿದ್ದರೆ ಭಾರತೀಯರೆಲ್ಲಾ ಹಿಂದೂಗಳು ಅಂತ ಆಯ್ತು?” ಎಂದೆ.

ಆತನಿಗೆ ಆತನ ತಪ್ಪು ಅರ್ಥವಾಯಿತು! ಆತ ಹಾಕುತ್ತಿದ್ದ ಪೋಸ್ಟ್‌ಗಳಿಗೆ ವಿರುದ್ಧವಾದ ಅಭಿಪ್ರಾಯ ಆತನಿಂದಲೇ ಬಂದಿತ್ತು! ನಿಜ ಗೊತ್ತಿದ್ದೂ ಆತ ಯಾಕೆ ಬಹುಸಂಖ್ಯಾತರ ನಂಬಿಕೆಗೆ ಧಕ್ಕೆ ತರುವ ಸುಳ್ಳು ಪೋಸ್ಟ್‌ಗಳನ್ನೇ ಹಾಕುತ್ತಿದ್ದನೋ ಅರ್ಥವಾಗುವುದಿಲ್ಲ!

ನಂತರ ಆತನನ್ನು ಕಡೆಗಣಿಸಿದೆನಾದರೂ…, ನಾನು ಪ್ರೈಮರಿ ಸ್ಕೂಲಿನಲ್ಲಿ ಓದಿದ ಇತಿಹಾಸವನ್ನು ಆತ ಸ್ವಲ್ಪ ವ್ಯತ್ಯಾಸವಾದ ರೀತಿಯಲ್ಲಿ ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ…,

“ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ವಲಸೆಗಾರರಾದ ಬ್ರಿಟಿಷರ ವಿರುದ್ಧ ಧೀರನಂತೆ ಹೋರಾಡಿದ ಸಿಟಿಸನ್ ಟಿಪ್ಪು ಸುಲ್ತಾನ!”

ಈ ವಿಷಯಕ್ಕೆ ಸಂಬಂಧಪಟ್ಟಂತೆ ಚಿಕ್ಕಂದಿನಲ್ಲಿ ನಡೆದ ಘಟನೆಯೊಂದು ನೆನಪಾಯಿತು…,

ಚಿಕ್ಕಂದಿನಲ್ಲಿ…, ನಾನಾಗ ಪ್ರೈಮರಿ ಸ್ಕೂಲ್‌ನಲ್ಲಿ ಓದುತ್ತಿದ್ದೆ. ಇತಿಹಾಸದ ಪುಸ್ತಕವನ್ನು ಹಿಡಿದು…,

“ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ…! ಮೈಸೂರು ಅರಸರ ಪಿತೂರಿಯಿಂದಾಗಿ ಅವನು ಬ್ರಿಟಿಷರಿಗೆ ಸೋಲಬೇಕಾಗಿ ಬಂದಿತು!” ಎಂದು ಓದುವಾಗ ಅಪ್ಪ ಕೇಳಿದರು…,

“ಹಾಗಂತ ಇದೆಯಾ ಪುಸ್ತಕದಲ್ಲಿ?”

“ಹೌದು…, ಹಾಗೆಯೇ ಇದೆ!” ಎಂದೆ.

“ಆದರೆ ಇತಿಹಾಸ ಅದಲ್ಲ! ಗಮನವಿಟ್ಟು ಕೇಳು…, ಭಾರತದಲ್ಲಿನ ಮುಸ್ಲಿಮರು ಮೂರು ರೀತಿಯಲ್ಲಿ ರೂಪುಗೊಂಡವರು! ಒಂದು:- ಹೊರಗಿನಿಂದ ಬಂದವರು ಮತ್ತು ಅವರದೇ ಸಂತತಿಗಳು…, ಇದು ಒಂದು ಪರ್ಸೆಂಟ್ ಇದ್ದರೇ ಹೆಚ್ಚು!! ಎರಡು:- ಹೊರಗಿನಿಂದ ಬಂದವರಿಂದ ಇಲ್ಲಿಯವರಿಗೆ ಹುಟ್ಟಿದವರು! ಇದು ನಲವತ್ತು ಪರ್ಸೆಂಟ್ ಅಂದುಕೋ…! ಇನ್ನು ಮೂರು:- ಹೆದರಿಕೆಯಿಂದ ಮತ್ತು ವ್ಯಾಮೋಹದಿಂದ ಕನ್ವರ್ಟ್ ಆದವರು- ಉಳಿದವರು!! ಹೈದರ್ ಆಲಿಯಾಗಲಿ ಟಿಪ್ಪು ಸುಲ್ತಾನ್ ಆಗಲಿ ಎರಡು ಮತ್ತು ಮೂರನೆಯವರಲ್ಲ! ಹಾಗಿದ್ದರೆ ಅವರು ಯಾರು? ಅವರು ಹೇಗೆ ಮೈಸೂರು ಅರಸರಿಂದ ಅಧಿಕಾರ ಕಿತ್ತುಕೊಂಡರು? ಖಿಲ್ಜಿಗಳೊಂದಿಗೆ ಬಂದವರಾಗಬಹುದು, ಮೊಗಲರಾಗಬಹುದು, ಬಹಮನಿಗಳಾಗಬಹುದು…, ಕೆಲವು ಮುಸ್ಲೀಮರು ಮೈಸೂರು ಅರಸರಲ್ಲಿಗೆ ಕೆಲಸ ಹುಡುಕಿಕೊಂಡು ಬಂದರು. ಸೈನಿಕರಾಗಿ ಕೆಲಸಕ್ಕೆ ಸೇರಿದ ಅವರಲ್ಲಿ ಹೈದರ್ ಮತ್ತು ಟಿಪ್ಪು ಕೂಡ ಇದ್ದರು. ಒಂದು ಹಂತದವರೆಗೆ ನಿಯತ್ತಿನಿಂದಿದ್ದ ಅವರು…, ಇಲ್ಲಿಯ ಒಳ ಆಢಳಿತಗಳ ಹುಳುಕುಗಳನ್ನು ಕಂಡುಕೊಂಡರು. ಹೈದರ್ ಅಲಿ ತನ್ನ ಸಹಚರರಿಗೆ ಕೇಳಿದ…, ನೀವೊಬ್ಬ ಕಾಫಿರನಿಗೆ ಗುಲಾಮರಾಗಿರುತ್ತೀರೊ ಅಥವಾ ಮುಸ್ಲಿಮನಿಗೋ? ಮುಸ್ಲಿಮನಾದ ಯಾರೊಬ್ಬರೂ ಮುಸ್ಲಿಮನಲ್ಲದವರ ಕೆಳಗೆ ಗುಲಾಮನಾಗಿರುವುದಕ್ಕೆ ಒಪ್ಪುವುದಿಲ್ಲ! ಹಾಗೆ…, ಮೈಸೂರು ಅರಸರು ನಂಬಿಕೆಯಿಂದ ಕೆಲಸ ಕೊಟ್ಟ ಮುಸ್ಲಿಮರು ಅರಸರ ವಿರುದ್ಧ ತಿರುಗಿ ಬಿದ್ದರು. ಹೈದರ್ ಮತ್ತು ಟಿಪ್ಪುವಿಗೆ ಅಧಿಕಾರ ಸಿಕ್ಕಿದ್ದೇ ಹೀಗೆ! ಹಾಗಿದ್ದರೆ ಮೈಸೂರು ಅರಸರ ಮೊದಲ ಶತ್ರು ಯಾರು? ಬ್ರಿಟಿಷರೋ ಹೈದರ್ ಮತ್ತು ಟಿಪ್ಪುವೋ? ಮೈಸೂರು ಅರಸರು ಬ್ರಿಟಿಷರನ್ನು ಮುಂದೆ ಇಟ್ಟುಕೊಂಡು ಹೈದರ್ ಮತ್ತು ಟಿಪ್ಪುವನ್ನು ನಾಶ ಮಾಡಿದರು. ಆದರೆ ಇತಿಹಾಸತಜ್ಞರು ಅದನ್ನು ತಿರುಚಿ ಮುಸ್ಲೀಮರ ಓಲೈಕೆಗಾಗಿ ಟಿಪ್ಪು ಮತ್ತು ಹೈದರ್‌ರನ್ನು ಹೀರೋಗಳಂತೆ ಬಿಂಬಿಸುತ್ತಿದ್ದಾರೆ! ಹಾಗೆ ಬಿಂಬಿಸಿದ ಮಾತ್ರಕ್ಕೆ ನಿಜ ನಿಜವಲ್ಲದೇ ಆಗುವುದಿಲ್ಲ! ನೆನಪಿಟ್ಟುಕೋ…, ಇದಕ್ಕಿಂತಲೂ ತರ್ಕಬದ್ದವಾದ ಉತ್ತರ ಸಿಗುವವರೆಗೆ ಇದೇ ಇತಿಹಾಸ! ಮತ್ತೊಬ್ಬರ ನಂಬಿಕೆಗಳಿಗೆ ಧಕ್ಕೆ ಬರುತ್ತದೆನ್ನುವ ಕಾರಣಕ್ಕೆ ಈ ಇತಿಹಾಸವನ್ನು ನೀನೇ ನೀನಾಗಿ ಹೇಳುತ್ತಿರಬೇಕು ಎಂದೇನಿಲ್ಲ! ಆದರೆ ಇದಕ್ಕೆ ವಿರುದ್ಧವಾದ…, ಆದರೆ ತರ್ಕಬದ್ದವಲ್ಲದ ಸುಳ್ಳು ಇತಿಹಾಸ ಕಾಣಿಸಿದರೆ ಪ್ರಶ್ನೆಯಂತೂ ಮಾಡಲೇಬೇಕು! ಇದೊಂದು ಉದಾಹರಣೆ ಅಷ್ಟೆ… ಈ ವಿಷಯಕ್ಕೆ ಮಾತ್ರವಲ್ಲ…, ತರ್ಕಬದ್ಧವಲ್ಲ ಅನ್ನಿಸಿದ ಪ್ರತಿಯೊಂದರಬಗ್ಗೆಯೂ ಅದನ್ನು ಪ್ರತಿಪಾದಿಸಿದವರಲ್ಲಿ ಪ್ರಶ್ನೆ ಮಾಡುವ ಹಕ್ಕು ನಿನಗಿದೆ!” ಎಂದರು.

“ಮತ್ತೆ…, ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ತನ್ನ ಮಕ್ಕಳನ್ನು ಒತ್ತೆ ಇಡಬೇಕಾಗಿ ಬಂದ ತ್ಯಾಗಿ ಅನ್ನುತ್ತಾರೆ?” ಎಂದು ಕೇಳಿದೆ.

“ಅವನ ತಲೆ ತ್ಯಾಗ! ಒತ್ತೆ ಇಡುವುದು ಹೇಡಿಗಳ ಲಕ್ಷಣ! ವೀರನಾಗಿದ್ದರೆ ಒತ್ತೆಯಿಡುವ ದಯನೀಯ ಸ್ತಿತಿಗಿಂತ ಸಾವು ಮೇಲು ಎಂದು ಹೋರಾಡಿರುತ್ತಿದ್ದ. ಅವನೊಬ್ಬ ಪಲಾಯನ ವಾದಿ!” ಎಂದರು.

ಈ ನೆನಪನ್ನು ಮನದಲ್ಲಿಟ್ಟು ಕೇಳಿದೆ…,

“ಟಿಪ್ಪುವಿನ ಮೂಲ ಯಾವುದು ಸರ್?”

ಈ ಸಾರಿ ಆತ ತಪ್ಪು ಮಾಡಲು ತಯಾರಿರಲಿಲ್ಲ.

“ಸ್ವಯಂಘೋಷಿತ ಇತಿಹಾಸತಜ್ಞರಿಗೆಲ್ಲ ವಿವರಣೆ ಕೊಡಬೇಕಾದ ಅಗತ್ಯವಿಲ್ಲ!” ಎಂದರು.

ಹೇಳುವ ಉತ್ತರ ಅವರ ಬುಡಕ್ಕೇ ಬರಬಹುದೆಂಬ ಅರಿವು ಅವರಿಗಿತ್ತು! ಇದೇ ಪ್ರಶ್ನೆಯನ್ನು ಬೇರೊಬ್ಬ ವ್ಯಕ್ತಿ ಕೇಳಿದ್ದಕ್ಕೆ ವಿದೇಶಿಯರು ಬರೆದ ಕೆಲವು ಪುಸ್ತಕಗಳನ್ನು ರೆಫರೆನ್ಸ್‌ಗೆ ಕೊಟ್ಟಿದ್ದರು ಹೊರತು- ತನ್ನ ಅಭಿಪ್ರಾಯವನ್ನು ಹೇಳಲಿಲ್ಲ!

ಭಾರತದಬಗ್ಗೆ ವಿದೇಶಿಯರು ಬರೆದ ಗ್ರಂಥಗಳನ್ನು ಇಟ್ಟುಕೊಂಡು ಅಧ್ಯಯನ ನಡೆಸಿದರೆ ಪಿಹೆಚ್‌ಡಿ ಸಿಗಬಹುದೇನೋ ನಿಜ ಜ್ಞಾನವಂತೂ ಸಿಗುವುದಿಲ್ಲ!

“ನೀನೊಬ್ಬ ಸ್ವಯಂಘೋಷಿತ ಇತಿಹಾಸಕಾರ/ ಪಂಡಿತ ಎಂದು ಅವರು ಹೇಳಿದ್ದರಿಂದ ನೀನು ಕಳೆದುಕೊಂಡಿದ್ದು ಏನು?” ಎಂದಳು.

“ಹೇಳಿದವರ ಬಗೆಗಿನ- ರೆಸ್ಪೆಕ್ಟ್! ಅವರು ಹೇಳಿದ್ದು ನನ್ನಬಗ್ಗೆ ಅಲ್ಲದೇ ಇರಬಹುದು…, ಬೇರೆ ಯಾರಬಗ್ಗೆಯೋ ಇರಬಹುದು…, ಆದರೆ ನನಗೆಲ್ಲಾ ಗೊತ್ತು- ನಾನೊಬ್ಬ ಪಂಡಿತ/ ಇತಿಹಾಸಕಾರ ಎಂದು ನನಗೆ ನಾನು ಹೇಳಿಕೊಳ್ಳುವುದಕ್ಕೂ- ಅವನೊಬ್ಬ ಸ್ವಯಂಘೋಷಿತ ಪಂಡಿತ/ ಇತಿಹಾಸಕಾರ ಎಂದು ಬೇರೆಯವರು ಹೇಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ನನ್ನಬಗ್ಗೆ ಅವರು ಹಾಗೆ ಹೇಳಬಾರದಿತ್ತು! ಉತ್ತರ ಹೊಳೆಯದಿದ್ದರೆ…, ಇವನನ್ನು ಅರ್ಥಮಾಡಿಸುವುದು ಸಾಧ್ಯವಿಲ್ಲ- ಎಂದು ಅಲ್ಲಿಗೇ ನಿಲ್ಲಿಸಬಹುದಿತ್ತು! ಅವರು ಹಾಗೆ ಹೇಳೀದ್ದಾರೆಂದರೆ…, ಅವರು ಇತರರಿಂದ ಸರ್ಟಿಫಿಕೆಟ್ ಪಡೆದುಕೊಂಡ ಪಂಡಿತರೆಂದೇ ಅರ್ಥ! ಅಥವಾ…, ಇತರರಿಂದ ಸರ್ಟಿಫಿಕೆಟ್ ಪಡೆದುಕೊಂಡಿದ್ದರೂ ಮತ್ತೊಬ್ಬರಿಂದ ಪ್ರಶ್ನಿಸಲ್ಪಟ್ಟ ತಮ್ಮ ವಿದ್ವತ್ತಿನಬಗ್ಗೆ ಸಂಶಯ ಇರುವವರಾಗಿರಬೇಕು!” ಎಂದೆ.

ಅವಳೇನೂ ಮಾತನಾಡಲಿಲ್ಲ. ನಾನೇ…,

“ನಾವು ಭಾರತೀಯರಿಗೆ ಒಂದು ಧಾರಣೆಯಿದೆ! ವಿದೇಶಿಯರೆಲ್ಲಾ ಭಾರಿ ಬುದ್ದಿವಂತರು- ನಮಗಿಂತ ಶ್ರೇಷ್ಠರು ಎಂದು! ಅವರು ಹೇಳಿದ್ದೇ ವೇದವಾಕ್ಯ! ಅವರು ಹೇಳಿದ್ದರಿಂದ ಅದು ಹಾಗೆಯೇ… ಹೀಗೆ ಹೀಗೆ! ನಾನೋ ಮುಂಚಿನಿಂದಲೂ ಭಾರತಕ್ಕೆ ಸಂಬಂಧಪಟ್ಟ ವಿದೇಶಿಯರ ಬರಹವನ್ನು ನಿಷೇಧಿಸುತ್ತಾ ಬಂದವ. ಹಾಗೆಂದು ವಿನಾಕಾರಣ ನಿಷೇಧಿಸುವುದಿಲ್ಲ. ಮೊದಲ ಆದ್ಯತೆ ನಮ್ಮದೇ ಆದ ಸ್ವಂತ ಅನುಭವಕ್ಕೆ! ಎರಡನೇ ಆದ್ಯತೆ ಪರಂಪರೆಯಾಗಿ ಬಂದ ಅರಿವಿಗೆ! ಮೂರನೇ ಆದ್ಯತೆ ಭಾರತೀಯರ ಬರಹಕ್ಕೆ! ಇದೆಲ್ಲದರ ನಂತರ ನಮ್ಮಬಗ್ಗೆ ಅವರು ಏನು ಬರೆದಿದ್ದಾರೆಂದು ನೋಡಲು ಮಾತ್ರ ವಿದೇಶಿಯರ ಬರಹಗಳು! ಎರಡು ವಿಷಯಗಳನ್ನು ಹೇಳುತ್ತೇನೆ ಕೇಳು…, ಹುಟ್ಟಿದ ಸ್ಥಳದಿಂದಾಗಿ ನಾನೊಬ್ಬ ಕಾಡು ಕುರುಬ. ಕುರುಬರ ಮಧ್ಯೆಯೇ ಬೆಳೆದವನು. ಆ ಸ್ಥಳದ ಕುರುಬರ ಬಗ್ಗೆ ಹೇಳುವುದೂ ಒಂದೇ…, ನನ್ನಬಗ್ಗೆ ಹೇಳುವುದೂ ಒಂದೇ! ಹೀಗಿರುವಾಗ ಒಬ್ಬ ಆಂತ್ರಪಾಲಜಿಯ ಹೆಸರಿನಲ್ಲಿ ಅಲ್ಲಿಗೆ ಬರುತ್ತಾನೆ! ಹೊರಗೆ ನಿಂತು ನಮ್ಮ ರೀತಿನೀತಿಗಳನ್ನು ನೋಡುತ್ತಾನೆ. ಕೊನೆಗೆ ಥೀಸಿಸ್ ಬರೆಯುತ್ತಾನೆ. ಆ ಥೀಸಿಸ್ ಅನ್ನು ಒಪ್ಪಿ ಡಾಕ್ಟರೇಟ್ ಕೊಡುವವರು ಯಾರು? ನಮ್ಮ ನಡುವೆ ಬೆಳೆದವರಾ? ಅಲ್ಲ!! ಆ ಥೀಸಿಸ್ ಓದಿದ ನಾನು- ಇದು ನೀವಂದುಕೊಂಡಂತೆ ಹೀಗಲ್ಲ ಹಾಗೆ- ಅನ್ನುತ್ತೇನೆ! ಅದಕ್ಕೆ ಅವನು ಆಧಾರ ಕೇಳುತ್ತಾನೆ! ಅವನ ಮಾತಿಗೆ ಆಧಾರವಾಗಿ ವಿದೇಶಿಯನೊಬ್ಬನ ಗ್ರಂಥವನ್ನು ಕೊಡುತ್ತಾನೆ! ಹೇಗೆ ಒಪ್ಪುವುದು? ಇನ್ನು ಎರಡನೆಯ ವಿಷಯ…, ನಾನು ಪ್ರತಿಯೊಂದು ಗ್ರಂಥಗಳನ್ನು ಮೀರಿ ಹೋಗಲು ಇಷ್ಟಪಡುವವ! ಪ್ರತಿಯೊಂದರಲ್ಲೂ ತರ್ಕವನ್ನು ಹುಡುಕುವವ! ನಮ್ಮದೇ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಪುಸ್ತಕವೇ ಆಗಲಿ, ನಂಬಿಕೆಗಳಿಗೆ ಸಂಬಂಧಪಟ್ಟ ಪುಸ್ತಕವೇ ಆಗಿರಲಿ, ಪುರಾಣಗಳು, ವೇದಗಳು, ಉಪನಿಷತ್ತುಗಳು, ಕಾದಂಬರಿಗಳು, ಮನೋವೈಜ್ಞಾನಿಕ ಪುಸ್ತಕಗಳು, ತತ್ತ್ವಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳು, ಇತಿಹಾಸ, ಅರ್ಥಶಾಸ್ತ್ರ, ಭೌತ- ರಸಾಯನ- ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳು, ಕೊನೆಗೆ ಆಧ್ಯಾತ್ಮ- ಆತ್ಮಕಥೆಗಳಾದರೂ ಸರಿ…, ಅದರಿಂದ ಹೊರತು ಏನಿದೆ ಎಂದು ಹುಡುಕುವವ! ಅಂತಹ ನನಗೆ ನನ್ನ ತರ್ಕವನ್ನು ಮೀರಿ- ಈ ಗ್ರಂಥದಲ್ಲಿ ಹೀಗಿದೆ ಆದ್ದರಿಂದ ಇದು ಹೀಗೆಯೇ ನೀನೂ ಒಂದು ಆಧಾರ ಗ್ರಂಥವನ್ನು ತೋರಿಸು- ಅಂದರೆ ಒಪ್ಪುವುದು ಹೇಗೆ? ನನ್ನ ಜಾತಿ ಮತ ಧರ್ಮಗಳು ಯಾವುದೆಂದು ಯಾರೊಬ್ಬರಿಗೂ ಗೊತ್ತಿಲ್ಲ, ನನ್ನ ಎಜುಕೇಷನಲ್ ಕ್ವಾಲಿಫಿಕೇಷನ್ ಯಾರೊಬ್ಬರಿಗೂ ಗೊತ್ತಿಲ್ಲ, ನನ್ನ ಓದು ಅಧ್ಯಯನದಬಗ್ಗೆಯೂ ಯಾರೊಬ್ಬರಿಗೂ ಗೊತ್ತಿಲ್ಲ. ಹಾಗಿರುವಾಗ…, ತಮ್ಮ ತತ್ತ್ವಕ್ಕೆ ವಿರುದ್ಧವಾಗಿ ಹೇಳಿದೆ ಅನ್ನುವ ಒಂದೇ ಒಂದು ಕಾರಣಕ್ಕೆ "ಅವನೊಬ್ಬ ಸ್ವಯಂಘೋಷಿತ ಪಂಡಿತ" ಎಂದರೆ ಏನರ್ಥ…? ತಮಗೆಲ್ಲಾ ಗೊತ್ತು…, ತಾವು ಅರ್ಥಮಾಡಿಸುವವರು…, ತಮ್ಮನ್ನು ಅರ್ಥಮಾಡಿಸುವವರು ಯಾರೂ ಇಲ್ಲ…, ಯಾಕೆಂದರೆ ತಮ್ಮ ಬಳಿ ಸರ್ಟಿಫಿಕೆಟ್ ಇದೆ…, ಅವನ ಬಳಿ ಇಲ್ಲ- ಎಂದಾಗುತ್ತದೆ! ಹೌದು ನನ್ನಬಳಿ ಸರ್ಟಿಫಿಕೆಟ್ ಇಲ್ಲ! ಆದರೆ ನೀವು ಹೇಳುತ್ತಿರುವುದು ನನ್ನ ಬಗ್ಗೆ! ಅದು ನೀವು ಹೇಳುವಂತೆ ಇಲ್ಲ- ತಪ್ಪಾಗಿದೆ! ಅಂದರೆ ಒಪ್ಪದೆ…, ಹೇಳುತ್ತಿರುವುದು ನಿನ್ನಬಗ್ಗೆ ಅನ್ನುವುದಕ್ಕೆ ಆಧಾರವೇನು? ಅಂದರೆ ಏನು ಮಾಡುವುದು?” ಎಂದೆ.

“ಅದಿರಲಿ…, ಏನೂ ಅಲ್ಲದ ನೀನು ಅವರಿಗೆ ವಿರುದ್ಧವಾಗಿ ಏನೋ ಹೇಳಿದೆಯೆಂದು ನಿನ್ನನ್ನು ಅವರು ಸ್ವಯಂಘೋಷಿತ ಪಂಡಿತ ಅಂದರು! ಕೇವಲ ನಿನ್ನನ್ನು ಸ್ವಯಂಘೋಷಿತ ಪಂಡಿತ ಅಂದರು ಅನ್ನುವ ಕಾರಣಕ್ಕೆ ಅವರ  ವಿದ್ವತ್ತನ್ನು…, ಪಿಹೆಚ್‌ಡಿಯನ್ನು ಅವಹೇಳನ ಮಾಡುತ್ತಿದ್ದೀಯ? ಕಥೆ ಹೇಳಿದ್ದರ ಉದ್ದೇಶ ಅವರ ತೇಜೋವದೆ ತಾನೆ?” ಎಂದಳು.

“ಅವರು ಸರ್ಟಿಫೈಡ್ ಆದರೆ…, ನಾನು ಅಲ್ಲ! ಅದೇ ವ್ಯತ್ಯಾಸ!” ಎಂದು ನಕ್ಕು…,

“ಹಾಗಂದುಕೊಂಡರೆ ನಾನೇನೂ ಮಾಡಲಾಗುವುದಿಲ್ಲ! ಕಥೆಗಾರನಾಗಿ ಇಷ್ಟಾದರೂ ಬರೆಯದಿದ್ದರೆ ಹೇಗೆ? ನನಗೆ ಸ್ಪಷ್ಟವಾಗಿ ಗೊತ್ತಿಲ್ಲದ್ದ ವಿಷಯವನ್ನು ನಾನು ಯಾವತ್ತಿಗೂ ಮಾತನಾಡಲು ಹೋಗುವುದಿಲ್ಲ! ಪ್ರಶ್ನೆಗಳಮೂಲಕ, ವಿವರಣೆಗಳ ಮೂಲಕ ತಿಳಿದುಕೊಳ್ಳಲಂತೂ ಶ್ರಮಿಸುತ್ತೇನೆ! ನನಗೆ ತಿಳಿಸಿ ಹೇಳುವ ಸಾಮರ್ಥ್ಯವಿಲ್ಲದೆ ಪಲಾಯನ ಮಾಡಿ…, ಮತ್ತೊಂದು ಕಡೆ ನನ್ನಬಗ್ಗೆ ಹಗುರವಾಗಿ ಮಾತನಾಡಿದರೆ ಅವರ ವಿಧ್ವತ್ತಿಗೆ ಅರ್ಥವೇನು? ನನಗೆ ಗೊತ್ತಿರುವ ವಿಷಯವನ್ನಂತೂ ಸ್ಪಷ್ಟವಾಗಿ ಹೇಳುತ್ತೇನೆ! ಒಂದುವೇಳೆ ನನ್ನ ತತ್ತ್ವಕ್ಕೆ-, ತರ್ಕಕ್ಕೆ ವಿರುದ್ಧವಾದ…, ಆದರೆ ಅತಿ ಸ್ಪಷ್ಟವಾದ ತತ್ತ್ವ- ತರ್ಕ ಮತ್ತೊಬ್ಬರಿಂದ ಮಂಡಿಸಲ್ಪಟ್ಟರೆ ನಾನದನ್ನು ಒಪ್ಪುತ್ತೇನೋ ಬಿಡುತ್ತೇನೋ- ಗೌರವವನ್ನಂತೂ ಅರ್ಪಿಸುತ್ತೇನೆ- ಅಗೌರವವನ್ನು ತೋರಿಸುವುದಿಲ್ಲ! ಅವನೊಬ್ಬ ಸ್ವಯಂಘೋಷಿತ ಇತಿಹಾಸಕಾರ/ ಪಂಡಿತ ಅನ್ನುವುದು ವೈಯಕ್ತಿಕ ನಿಂದೆಯಾಗುವುದಿಲ್ಲವಾದರೆ…, ಹೀಗೆ ನಡೆಯಿತು ಎಂದು ಹೇಳುವುದು- ತೇಜೋವಧೆ ಹೇಗಾಗುತ್ತದೆ?” ಎಂದೆ.

“ಅದು ಬಿಡು…, ಒಬ್ಬರು ಮಾನವಶಾಸ್ತ್ರದಲ್ಲಿ, ಒಬ್ಬರು ಕಂಪ್ಯೂಟರ್‌ಸೈನ್ಸ್‌ನಲ್ಲಿ ಪಿಹೆಚ್‌ಡಿ ಮಾಡಿದ್ದಾರೆ! ಅದರ ಬಗ್ಗೆ ನಿನ್ನ ಅಭಿಪ್ರಾಯವೇನು?”

“ಇದರಲ್ಲಿ ನನ್ನ ಅಭಿಪ್ರಾಯದ ಪ್ರಸಕ್ತಿಯೇ ಇಲ್ಲ! ಅವರಬಗ್ಗೆ ನನಗೆ ಅಪಾರವಾದ ಗೌರವವಿದೆ! ಹಾಗೆಂದು ಅವರು ಪಿಹೆಚ್‌ಡಿ ಮಾಡಿದ್ದಾರೆ ಅನ್ನುವ ಒಂದೇ ಒಂದು ಕಾರಣಕ್ಕೆ ಅವರು ಹೇಳಿದ್ದನ್ನೆಲ್ಲಾ ಒಪ್ಪಲಾಗದು! ಒಪ್ಪಿಗೆಯಿಲ್ಲದ ವಿಷಯವನ್ನು ಖಂಡಿತಾ ನಿಷೇಧಿಸುತ್ತೇನೆ ಕೂಡ! ಓದು ಬರಹ ಅಧ್ಯಯನಗಳು ಯಾರೊಬ್ಬರ ಸ್ವತ್ತೂ ಅಲ್ಲ! ಅದು ಮನುಷ್ಯನಲ್ಲಿನ ಸೌಜನ್ಯವನ್ನು ಹೆಚ್ಚಿಸಬೇಕು ಹೊರತು ಅಹಂಕಾರಕ್ಕೆ ಕಾರಣವಾಗಬಾರದು!” ಎಂದೆ.

ನಮ್ಮ ಭೇಟಿಯಾಗಿ ಒಂದು ತಿಂಗಳು ಕಳೆದಿತ್ತು!

“ನಮ್ಮ ವಿಷಯದಲ್ಲೊಂದು ತೀರ್ಮಾನ ಹೇಳು!” ಎಂದಳು.

“ಬಂಧನ ನನಗಿಷ್ಟವಿಲ್ಲ! ಈಗ ನಾವಿಬ್ಬರೂ ಒಂದಾದರೆ…, ನನ್ನ ವಿಷಯದಲ್ಲಿ…, ಅವಳಿಂದ ಹೊರಬರಲು ನೀನು- ಎಂದಾಗುತ್ತದೆ! ನಿನ್ನ ವಿಷಯದಲ್ಲಿ…, ಅವನಿಂದ ಹೊರಬರಲು ನಾನು- ಎಂದಾಗತ್ತದೆ! ಅದು ನನಗೆ ಇಷ್ಟವಿಲ್ಲ! ಇಬ್ಬರೂ ಬದುಕಿಗೆ ಮರಳಿ ಬಂದಿದ್ದೇವೆ! ನಮ್ಮದೇ ರೀತಿಯಲ್ಲಿ ಮುಂದುವರೆಯೋಣ…, ಇಂಡಿಪೆಂಡೆಂಟಾಗಿ ಬದುಕಲಾಗುವುದೇ ಇಲ್ಲ ಅನ್ನಿಸಿದರೆ ಮರಳಿ ಒಂದಾಗೋಣ!” ಎಂದೆ.

ಹಾಗೆ ನಾವೊಂದು ಕೊನೆಯ ಪ್ರಯಾಣ ಹೊರಟೆವು!

ಮಡಿಲಿನಿಂದ ತಲೆಯೆತ್ತಿ ನನ್ನ ಮುಖವನ್ನು ನೋಡಿದಳು.

“ಇದು ಕೊನೆಯ ಪ್ರಯಾಣ ಅಲ್ಲವಾ?” ಎಂದಳು.

ನಾನೇನೂ ಮಾತನಾಡಲಿಲ್ಲ.

“ಈ ಕೊನೆಯ ಪ್ರಯಾಣವನ್ನು ಲೈಫ್‌ಟೈಂ ಮುಂದುವರೆಸಿದರೆ ಹೇಗೆ? ಒಟ್ಟಿಗೆ?” ಎಂದಳು.

ಇದು…, ಮನುಷ್ಯನ ಮನಸ್ಸು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!