ಲಕ್ಷ್ಮಿ
ಲಕ್ಷ್ಮಿ
*
“ಬೇಗ ಇನ್ನೂರು ತಲುಪಿಸು!” ಎಂದಳು.
“ನ್ತದೆ…, ಇನ್ನೂರು ಚಪಾತಿ ಮಾಡಬೇಕು ಅನ್ನುವಂತೆ ಹೇಳ್ತಿದೀಯ! ಕಥೆಯೇ…!” ಎಂದೆ.
“ಓ ಭಾರಿ ಕಥೆ! ಎಷ್ಟೋಜನ ಇನ್ನೂರು ಪುಸ್ತಕವೇ ಬರೆಯುತ್ತಿದ್ದಾರೆ…, ಇವನೊಬ್ಬ!” ಎಂದಳು.
“ನನ್ನೊಳಗೆ ಇನ್ನೇನೂ ಇಲ್ಲ- ಬರೆಯಲು!” ಎಂದೆ.
“ಅದನ್ನೇ ಬರಿ- ಯಾಕಿಲ್ಲ- ಅಂತ!” ಎಂದಳು.
ಇವಳು ಹೀಗೆಯೇ…! ನನ್ನ ಲಕ್ಷ್ಮಿ! ಎಲ್ಲರೂ ಬೆಣ್ಣೆಯನ್ನು ನವನೀತ ಎಂದರೆ ಇವಳು ನವನೀತನನ್ನೇ ಬೆಣ್ಣೆ ಅನ್ನುತ್ತಾಳೆ!
“ಇನ್ನುಮುಂದೆ ಕಥೆ ಬರೆಯುವುದಿಲ್ಲ!” ಅಂದಿದ್ದೆ.
“ಇನ್ನೂರು ತಲುಪಿಸಿಬಿಡು- ಆಮೇಲೆ ಬರೆಯಬೇಡ!” ಎಂದಳು.
“ಇನ್ನೂರು ತಲುಪಿದ ತಕ್ಷಣ ನಾನು ಸತ್ತು ಹೋದರೆ ಏನು ಮಾಡ್ತಿ?” ಎಂದೆ.
ಅದೊಂದು ದೊಡ್ಡ ಕಥೆಯಾಯ್ತು!
“ನೀ ಯಾಕೆ ಹೀಗೆ?” ಎಂದಳು.
“ಹೌದು ನಾನು ಹೀಗೇ!” ಎಂದೆ.
“ಅದೇ ಯಾಕೆ?”
“ಯಾಕೆ ಅಂದರೆ? ನಾನಿರುವುದೇ ಹೀಗೆ!” ಎಂದೆ.
“ನನ್ನನ್ನು ನೋಯಿಸುವುದೇ ನಿನ್ನ ಕೆಲಸ!” ಎಂದಳು.
“ನಾನೇನು ಮಾಡಿದೆ?”
“ಕಥೆ ಬರಿ ಅಂದ್ರೆ ಸಾಯೋ ಮಾತು ಯಾಕೆ ಹೇಳ್ತಿ?”
“ಒಳ್ಳೆ ಕಥೆ! ಇನ್ನೂರು ಕಥೆ ಬರೆದ ನಂತರ ಬರೆಯಬೇಡ ಅಂದರೆ ಏನರ್ಥ?”
“ನೀನು ಸಾಯಬೇಕು ಅಂತಾನ? ನಿನಗೆ ಗೊತ್ತಿಲ್ವ ಲಕ್ಷ್ಮೀನ?”
“ಗೊತ್ತು…! ಆಮೇಲೆ ಮುನ್ನೂರು ಅನ್ತಿ!”
“ಕಥೆ ಬರೆಯಲು ಹೇಳಿದ್ದೇ ನಾನು ಮಾಡಿದ ತಪ್ಪು ಅಲಾ?” ಎಂದಳು.
“ಹೋಗಲಿ ಬಿಡು…! ಕಾಂಪ್ರಮೈಸ್ ಆಗೋಣ! ಆಗಾಗ, ಮದ್ಮದ್ಯೆ ಒಂದೊಂದು ಕಥೆ ಬರೆಯುತ್ತಾ ನೂರಾ ತೊಂಬತ್ತೊಂಬತ್ತು ತಲುಪಿಸೋಣ- ಇನ್ನೂರನೆಯದ್ದು ಸಾಯುವ ಸಮಯಕ್ಕೆ ಬರೆಯೋಣ!” ಎಂದೆ.
“ಸಾಯೋ ಸಮಯ ನಮಗೆ ಹೇಗೆ ಗೊತ್ತಾಗುತ್ತೆ?”
“ಹಾಗಿದ್ರೆ ಈಗ್ಲೆ ಬರೆದು ಸಾಯಿ- ಅಂತಾನ?”
“ನಿನ್ನ ತಲೆ…! ನಾನೀಗ ಸಾಯುತ್ತೇನೆ ಇನ್ನೂರನೆ ಕಥೆ ಈಗಲೇ ಬರೆಯಬೇಕು ಅಂತ ನಿನಗೆ ಹೇಗೆ ಗೊತ್ತಾಗುತ್ತೆ?”
“ಕರ್ಮ! ಹಾಗಿದ್ದರೆ ಇನ್ನೂರನೇ ಕಥೆ ಬರೆಯೋದೇ ಬೇಡ ಬಿಡು- ಈ ಲೆಕ್ಕಾಚಾರದಲ್ಲಿ ನವನೀತನಿಗೆ ಸಾವೇ ಇಲ್ಲದಂತಾಗಲಿ!” ಎಂದೆ.
“ಇನ್ಮುಂದೆ ಕಥೆ ಬರಿ ಅಂತ ಹೇಳಬಾರದು ಅಂತಿದೀಯ….!” ಎಂದಳು.
ಇದು ಮುಗಿಯದ ಕಥೆ!
“ಈಗೇನು…? ಕಥೆ ಬರೆಯಲೋ ಬೇಡವೋ?” ಎಂದೆ.
“ಕಥೆ ಬರೀತೀಯೋ ಇಲ್ವೋ…, ನೀನು ಯಾಕೆ ನನ್ನ ಯಾವ ಪ್ರಶ್ನೆಗಳಿಗೂ ಸರಿಯಾದ ಉತ್ತರ ಹೇಳುವುದಿಲ್ಲ ಎಂದು ಮಾತ್ರ ಹೇಳು!” ಎಂದಳು.
“ಒಂದು ಉದಾಹರಣೆ ಕೊಡು- ಯಾವರೀತಿಯ ಪ್ರಶ್ನೆಗೆ?”
“ಯಾವ ರೀತಿಯ ಆದರೆ ಏನು? ಪ್ರಶ್ನೆಗೆ ಉತ್ತರ!”
“ಸರಿ…, ಯಾವ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ ಅದು ಹೇಳು!” ಎಂದೆ.
“ನಿನ್ನೆ ಬರೆದ ಕತೆ- ಯಾರ ಬಗ್ಗೆ?”
ನಗು ತಡೆದು ಕೊಳ್ಳಲಾಗಲಿಲ್ಲ! ಈ ನನ್ನ ನಗು…, ಎರಡು ದಿನದ ಅವಳ ಮುನಿಸಿಗೆ ಸಾಕು!
“ಆ ಕತೆಯ ಹಿಂದೆ ಯಾರಾದರೂ ಇರಬೇಕು ಅಂತ ಯಾಕೆ ಹೇಳ್ತಿ?”
“ಯಾಕೆಂದರೆ…, ನಿನ್ನ ನನಗೆ ಗೊತ್ತು- ಅದಕ್ಕೆ!” ಎಂದಳು.
“ಅದೇ ಉತ್ತರ…, ಅದಕ್ಕೆ ಉತ್ತರ ಹೇಳುವುದಿಲ್ಲ ಅನ್ನುವ ನಾನು ನಿನಗೆ ಗೊತ್ತಿಲ್ಲವಾ?” ಎಂದು ಕೇಳಿದೆ.
ಅವಳೇನೂ ಮಾತನಾಡಲಿಲ್ಲ. ನಾನೇ ಮುಂದುವರೆಸಿದೆ.
“ಕಥೆಗಾರ ನಾನು ಎಂದು ಹೇಳಿ ಕಥೆ ಹೇಳಲು ಶುರುಮಾಡಿದ ತಕ್ಷಣ ಓದುಗರಿಗೆ ಇದು ನನ್ನದೇ ಕಥೆ ಅನ್ನಿಸುತ್ತದೆ! ಇಷ್ಟೊಂದು ಅನುಭವಗಳು ಇವನೊಬ್ಬನ ಬದುಕಿನಲ್ಲಿಯೇ ಹೇಗೆ ನಡೆಯಿತು ಎಂದು ಯಾರೂ ಯೋಚಿಸುವುದಿಲ್ಲ. ಆದರೆ ಇದು ನನ್ನ ಪ್ರತಿ ಕಥೆ ಓದುವವರ ವಿಷಯವೇ ಹೊರತು…, ಒಂದೋ ಎರಡೋ ಕಥೆ ಓದಿದವರಿಗೆ ಖಂಡಿತಾ ಇದು ಕಥೆಗಾರನ ಕಥೆ ಎಂದೇ ಅನ್ನಿಸುವುದು!” ನಾನಿನ್ನೂ ಮುಗಿಸಿರಲಿಲ್ಲ…,
“ನನ್ನ ಪ್ರಶ್ನೆಗೂ ನಿನ್ನ ವಿವರಣೆಗೂ ಏನು ಸಂಬಂಧ?” ಎಂದಳು.
“ಅಲ್ಲಿಗೇ ಬರುತ್ತಿದ್ದೇನೆ…, ನಾನು ಹೇಳಿದ್ದು, ನಾನು ಬರೆದದ್ದನ್ನು ಇಟ್ಟುಕೊಂಡು ನೀನು ನನ್ನ ಪ್ರಶ್ನೆ ಮಾಡ್ತಿ! ನಿನ್ನ ನನಗೆ ಗೊತ್ತು- ಅನ್ನುವ ಮಾತು ಯಾಕೆ ಬಂತು ಹೇಳು? ನಾನು ನಿನ್ನಲ್ಲಿ ತೆರೆದುಕೊಂಡಿದ್ದಕ್ಕೆ! ನಾನು ಮುಂಚೆ ನಿನ್ನಲ್ಲಿ ಹೇಳಿದ್ದನ್ನೇ ಇಟ್ಟುಕೊಂಡು ನೀನು ನನ್ನ ಪರೀಕ್ಷೆ ಮಾಡ್ತಿ! ನಾನು ಹೇಳಿದ್ದನ್ನೇ ನೀ ಪ್ರೂ ಮಾಡ್ತಿ! ನಾನು ಹೇಳುವ ಪ್ರತಿ ವಿಷಯ- ನನ್ನ ಕಂಟ್ರೋಲ್ ಅನ್ನು ನಿನ್ನ ಕೈಗೆ ಕೊಟ್ಟಂತೆ ಫೀಲ್ ಆಗುತ್ತೆ!” ಎಂದೆ.
ಇಲ್ಲಿಗೆ…, ಸಧ್ಯಕ್ಕೆ ನನ್ನ ಕಥೆ ಮುಗೀತು!
“ಲಕ್ಷ್ಮೀ…, ಓಯ್ ಲಕ್ಷ್ಮೀ…!” ಎಂದು ಕರೆದೆ.
ಅವಳೇನೂ ಮಾತನಾಡಲಿಲ್ಲ.
“ನಿನ್ನ ಯಾಕೆ ಲಕ್ಷ್ಮಿ ಅಂತ ಕರೀತೀನಿ ಹೇಳು?” ಎಂದೆ.
“ಓ.., ಭಾರಿ…, ನಾನೊಬ್ಬಳೇ ನಿನ್ನ ಸಂಪತ್ತು- ಅನ್ನೋಥರ!” ಎಂದಳು.
ನಗಲಾ ಬೇಡವಾ ಅನ್ನೋ ಡೌಟ್‌ನಲ್ಲಿ…, ಸಧ್ಯದ ಸಂರಕ್ಷಣೆಗಾಗಿ…, ಅವಳಿಗೊಂದು ಮುತ್ತು ಕೊಟ್ಟು ಸುತ್ತಾಟಕ್ಕೆ ಹೊರಟೆ!
Comments
Post a Comment