ಇತ್ತೀಚಿನ- ಮುಗಿದ ಜಿಜ್ಞಾಸೆಗಳು!

 ಇತ್ತೀಚಿನ- ಮುಗಿದ ಜಿಜ್ಞಾಸೆಗಳು!

*

ಜಿಜ್ಞಾಸೆ ಒಂದು:-

“ನೀವು ದೇವಸ್ಥಾನಕ್ಕೇ ಹೋಗಲ್ವಾ?” ಎಂದು ಕೇಳಿದರು…, ಹೊಸದಾಗಿ ಪರಿಚಯವಾದ ಗೆಳೆಯರೊಬ್ಬರು- ಆಶ್ಚರ್ಯದಿಂದ.

“ಒಬ್ಬನೇ ಹೋಗುವುದಿಲ್ಲ!” ಎಂದೆ.

“ಕಾರಣ?” ಎಂದರು.

“ಅಷ್ಟುದ್ದ ಕ್ಯೂ…! ಹೇಗೋ ಹತ್ತಿರ ತಲುಪಿ ಒಂದು ಸೆಕೆಂಡ್ ಕೂಡ ದರ್ಶನ ಮಾಡಿರುವುದಿಲ್ಲ…, ಮುಂದಕ್ಕೆ ಹೋಗಿ ಎಂದು ತಳ್ಳುತ್ತಾರೆ! ಅದು ಪಿರಿಪಿರಿ ಆಗುತ್ತದೆ. ನಾವು ದೇವಸ್ಥಾನಕ್ಕೆ ಹೋಗುವುದೇ ನೆಮ್ಮದಿಗಾಗಿ ತಾನೆ? ನೆಮ್ಮದಿ ಭಂಗ ಆಗೋಕೆ ಅಲ್ಲವಲ್ಲಾ? ನನಗೋ ಮನಃಸ್ತೃಪ್ತಿ ಆಗುವವರೆಗೂ ನೋಡಬೇಕು!” ಎಂದೆ.

“ನೀವು ಹಾಗೆ ಹೇಳ್ತೀರ? ನನಗೆ ಹೇಗೆ ಗೊತ್ತಾ? ಅಷ್ಟುದ್ದ ಕ್ಯೂ…, ಹೇಗೋ ಹತ್ತಿರ ತಲುಪಿ ದರ್ಶನ ಆಗುತ್ತದೆ. ಅಬ್ಬಾ…, ಇಷ್ಟು ಹೊತ್ತು ಕ್ಯೂ ನಿಂತದ್ದು ಸಾರ್ಥಕವಾಯಿತು- ಕೊನೆಗೂ ದರ್ಶನವಾಯಿತು ಅನ್ನೋ ತೃಪ್ತಿ!” ಎಂದರು.

ಅಲ್ಲವಾ…!

ಮನಸ್ಸು ಜಿಜ್ಞಾಸೆಗೆ ತೊಡಗಿತು…,

ನಾನು ದೇವಸ್ಥಾನಗಳಿಗೆ ಹೋಗದಿರಲು ಇದೊಂದೇ ಕಾರಣವಾ? ದೇವರೆಂದರೆ ಯಾರು? ಯಾಕೆ ದೇವಸ್ಥಾನಕ್ಕೆ ಹೋಗಬೇಕು? ಗೆಳೆಯರೊಂದಿಗೆ ಅಥವಾ ಇತರರೊಂದಿಗಾದರೆ ಹೋಗುತ್ತೇನಲ್ಲ? ಒಬ್ಬನೇ ಹೋಗುವುದಿಲ್ಲ ಅನ್ನುವುದಷ್ಟೇ ವಿಷಯ…, ಯಾಕೆ?

ಚಾಮುಂಡಿ ಬೆಟ್ಟ…, ನನ್ನ ಇಮೋಷನ್ ಅದು!

ಹತ್ತು-ಹದಿನೈದು ವರ್ಷಗಳಿಂಂದ ನಿರಂತರವಾಗಿ ಮೆಟ್ಟಿಲಮೂಲಕ ಹತ್ತುವುದು- ಇಳಿಯುವುದು- ಮಧ್ಯೆ ವ್ಯಾಯಾಮ ಮಾಡುವುದು…, ನನ್ನ ದೈಹಿಕ ಮತ್ತು ಮಾನಸಿಕ ದೃಢತೆಗೆ ಅತಿಮುಖ್ಯ ಕಾರಣ- ಚಾಮುಂಡಿ ಬೆಟ್ಟ.

ನನ್ನ ಎಷ್ಟೆಷ್ಟೋ ಮಾನಸಿಕ ತುಮುಲಗಳಿಗೆ ಉತ್ತರಗಳು ಸಿಕ್ಕಿರುವುದು..., ಮತ್ತೆಷ್ಟೋ ಹುಡುಕಾಟಗಳು ನಡೆದಿರುವುದು ಇಲ್ಲಿಯೇ!

ಹೀಗಿರುವಾಗ…, ಚಾಮುಂಡಿ ಬೆಟ್ಟದಲ್ಲಿ ನಡೆದ ತೀರಾ ಸಣ್ಣ ಅನ್ನಬಹುದಾದ ಎರಡು ಘಟನೆಗಳು ದೇವಸ್ಥಾನಕ್ಕೆ ಹೋಗದಿರಲು ಕಾರಣವಾಯಿತು- ಅನ್ನಬಹುದು!

ಒಂದು:- ಮೆಟ್ಟಿಲಮೂಲಕ ಬೆಟ್ಟ ಹತ್ತಲು ಶುರುಮಾಡಿದರೆ ಒಂಬೈನೂರನೇ ಮೆಟ್ಟಿಲು ದಾಟಿದಮೇಲೆ ಅಲ್ಲೊಂದು ಗುಡಿಯಿದೆ- ಹನುಮಂತನ ಗುಡಿ- ಆ ಗುಡಿಯ ಪಕ್ಕದಲ್ಲಿ ವ್ಯಾಯಾಮ ಮಾಡುವುದು ವಾಡಿಕೆ.

ಒಮ್ಮೆ…, ಹೊಟ್ಟೆಯಮೇಲೆ ಪ್ರಭಾವ ಬೀರುವ ವ್ಯಾಯಾಮವೊಂದು ಮಾಡುತ್ತಿದ್ದೆ. ಅದನ್ನು ಮಾಡುವುದು ಸರಿಯಾಗಿ ದೇವಸ್ಥಾನದ ಕಡೆಗೆ ನನ್ನ ಕಾಲು ಬರುವಂತೆ ಮಲಗಿ!

ಅಂಗಾತನೆ ಮಲಗಿ…, ಕಾಲುಗಳನ್ನು ನೇರವಾಗಿ ಮೇಲಕ್ಕೆ ಎತ್ತಿ ಪುನಃ ಕೆಳಕ್ಕೆ ತಂದು ನೆಲಕ್ಕೆ ತಾಕುವ ಮುಂಚೆ ಪುನಃ ಮೇಲಕ್ಕೆ ಎತ್ತಿ…, ಹೀಗೆ ಮುಂದುವರೆಯುತ್ತದೆ.

ಒಮ್ಮೆ ಇದನ್ನು ಮಾಡುತ್ತಿರುವಾಗ ನನ್ನಂತೆಯೇ ನಿರಂತರವಾಗಿ ಮೆಟ್ಟಿಲು ಹತ್ತುವ ವ್ಯಕ್ತಿಯೊಬ್ಬರು ಕೇಳಿದರು…,

“ಅಲ್ಲ ಸಾರ್…, ಅಷ್ಟೊಂದು ಜಾಗವಿದ್ದರೂ ದೇವಸ್ಥಾನದ ಮುಂದೇಯೇ…, ಅದರಲ್ಲೂ ದೇವರ ಕಡೆಯೇ ಕಾಲು ಬರುವಂತೆ ಮಲಗಿ ವ್ಯಾಯಾಮ ಮಾಡುತ್ತಿದ್ದೀರಲ್ಲ? ಇದು ಸರಿಯಾ?”

“ನನ್ನ ಕಾಲನ್ನು ನೆಲಕ್ಕೆ ತಾಕದಂತೆ ಹಿಡಿದು ಮತ್ತೆ ಮೇಲಕ್ಕೆ ತಳ್ಳುತ್ತಿರುವುದು ಆ ದೇವರೇ..., ಕಾಣಿಸುತ್ತಿಲ್ಲವಾ?” ಎಂದೆ.

ಆತನಿಗೆ ಅರ್ಥವಾಗಲಿಲ್ಲ. ಅದು ಒಳ್ಳೆಯದೇ ಆಯಿತು ಅನ್ನಿಸಿ…, ನಕ್ಕು ಮತ್ತೊಮ್ಮೆ ಹೇಳಿದೆ…,

“ಇಲ್ಲ ಸರ್…, ಬೇರೆ ಎಲ್ಲಿ ಮಲಗಿದರೂ ಮೂತ್ರದ ಸ್ಮೆಲ್ ಬರ್ತಾ ಇದೆ! ದರಿದ್ರದ ಜನ ದೇವಸ್ಥಾನವಿದೆ ಅನ್ನೋದೂ ನೋಡದೆ ಉಚ್ಚೆ ಮಾಡಿ ಹೋಗುತ್ತಾರೆ!” ಎಂದೆ.

“ಓ…, ಹಾಗಿದ್ದರೆ ಸರಿ…, ಆದರೆ ತಲೆಯನ್ನು ದೇವಸ್ಥಾನದ ಕಡೆಗೆ ಮಾಡಬಹುದಲ್ಲ?” ಎಂದರು.

“ಅಲ್ಲಿ ಹರಶಿಣ, ಕುಂಕುಮ, ಕರ್ಪೂರ ಹಚ್ಚಿದ ಮಸಿ- ಇದೆ…, ಜೊತೆಗೆ ಹಿಡಿದುಕೊಳ್ಳಲು ಗ್ರಿಪ್ ಇಲ್ಲ!” ಎಂದೆ.

ಅವರು ಅತೃಪ್ತಿಯಿಂದ ಹೊರಟು ಹೋದರು.

ಅವರು ಹೋದರೂ ನನ್ನ ತಲೆತುಂಬಾ ಅವರಿಗೆ ನಾನು ಕೊಟ್ಟ ಉತ್ತರವೇ ತುಂಬಿತ್ತು!

ದೇವರೇ ಕಾಲನ್ನು ನೆಲಕ್ಕೆ ತಾಕದಂತೆ ಹಿಡಿದು ಮೇಲಕ್ಕೆ ತಳ್ಳುತ್ತಿದ್ದಾರೆ- ಅನ್ನುವ ಮಾತು!

ಅಲ್ಲವಾ…?

ದೇವರಿಲ್ಲದ ಸ್ಥಳವಾವುದಿದೆ?

ಉಚ್ಚೆ ಮಾಡುವಲ್ಲಿ, ಕಕ್ಕಸಿಗೆ ಹೋದರೆ, ನಾವು ತಪ್ಪು ಮಾಡುತ್ತಿದ್ದರೆ, ಒಳಿತು ಮಾಡುತ್ತಿದ್ದರೆ, ಇನ್ನೊಬ್ಬರಲ್ಲಿ, ಬ್ರಹ್ಮಾಂಡದ ಪ್ರತಿಯೊಂದು ಚರಾಚರದಲ್ಲಿ ದೇವರಿದ್ದಾರೆ ಅಂದಮೇಲೆ- ದೇವಸ್ಥಾನಕ್ಕೆ ಹೋಗುವುದರ ಪ್ರಸಕ್ತಿಯೇನು?

ಎರಡು:- ಅದೊಂದುದಿನ ಸಂಜೆ…, ದೇವಸ್ಥಾನದ ಮುಂದಿನಿಂದ ಹಾದುಹೋಗುವಾಗ…, ಯಾರೆಂದರೆ ಯಾರೊಬ್ಬರೂ ಇಲ್ಲದಿರುವುದನ್ನು ಕಂಡು…, ದೇವಸ್ಥಾನದಿಂದ ಹೊರಕ್ಕೆ ಬರುವ ಕಡೆಯಿಂದ- ಒಳಕ್ಕೆ ಹೋಗುವ ಗೇಟಿನೆಡೆಗೆ ಹೋದೆ. ಕಾವಲುಗಾರ ತಡೆದ…, ನನಗೆ ಅಡ್ಡವಾಗಿ ನಿಂತು…,

“ಆಕಡೆಯಿಂದ ಬನ್ನಿ!” ಎಂದ.

“ಯಾಕೆ? ಯಾರೊಬ್ಬರೂ ಇಲ್ಲವಲ್ಲ? ನೀವು ದಾರಿಬಿಡಿ…, ಇದು ಒಳಕ್ಕೆ ಹೋಗುವ ದಾರಿತಾನೆ? ಹೀಗೆ ಹೋಗಿ ಹಾಗೆ ಬಂದುಬಿಡುತ್ತೇನೆ!” ಎಂದೆ.

“ಆಗಲ್ಲ ಸರ್…, ಆಕಡೆಯಿಂದಾನೇ ಬನ್ನಿ!” ಎಂದ.

ಈಗೋ- ಅಹಂ! ಮರಳಿದೆ. ಮರಳುತ್ತಾ…,

“ನಿಮ್ಮ ದೇವರನ್ನು ನೀವೇ ಇಟ್ಟುಕೊಳ್ಳಿ!” ಎಂದೆ.

ಇದನ್ನು ನೋಡುತ್ತಿದ್ದ ಹೂ ಮಾರುವವನೊಬ್ಬ…,

“ಇದ್ಯಾಕೋ…? ಬಿಡೊ ಒಳಕ್ಕೆ…, ಯಾರೂ ಇಲ್ವಲ್ಲ?” ಎಂದ.

ನಾನು ಆಕಡೆಯಿಂದ ಸುತ್ತಿ ಬರುತ್ತೇನೆ ಅಂದುಕೊಂಡಿದ್ದ ಕಾವಲುಗಾರ…, ಹಾಗೆಯೇ ಹೋಗುವುದನ್ನು ಕಂಡು…,

“ಸಾರ್ ಸಾರ್ ಬನ್ನಿ ಸಾರ್ ಯಾಕ್ ಸಾರ್ ಹಾಗೇ ಹೋಗ್ತಿದೀರ?” ಎಂದ.

“ದೇವರಿಗೆ ನಾನು ಒಳಗೆ ಬರೋದು ಇಷ್ಟ ಇಲ್ವಂತೆ- ತಲೆ ಕೆಡಿಸ್ಕೋಬೇಡಿ…, ನನಗೇನು ಹೋಗಲೇ ಬೇಕು ಅಂತ ಇರಲಿಲ್ಲ…, ಖಾಲಿ ಇದೆಯಲ್ಲ ಅಂತ ಬಂದೆ ಅಷ್ಟೆ!” ಎಂದು ಹೇಳಿ ಹೊರಟು ಹೋದೆ.

ಅಂದಿನಿಂದ ನಾನು ಒಬ್ಬನೇ ಯಾವ ದೇವಸ್ಥಾನಕ್ಕೂ ಹೋಗಿಲ್ಲ!

ಉಳಿದವರೊಂದಿಗೆ ಹೋಗುವಾಗ…, ಕ್ಯೂ ನಿಂತಾಗಲೂ ಬೋರ್ ಹೊಡೆಯುವುದಿಲ್ಲ…, ದರ್ಶನ ಆಗಲೇ ಬೇಕೆನ್ನುವ ಒತ್ತಡವಿಲ್ಲದ್ದರಿಂದ- ಆದ ದರ್ಶನ ತೃಪ್ತಿ ನೀಡುತ್ತದೆ!

ಅಲ್ಲದೆ…, ಆಯಾ ಸ್ಥಳದ ಮಹಿಮೆಯಿಂದಾಗಿ- ಏನಾದರೂ ಒಳಿತಾಗುವ ಹಾಗಿದ್ದರೆ ಆಗಲಿ ಅನ್ನುವ ಚಿಂತೆ!

*

ಜಿಜ್ಞಾಸೆ ಎರಡು:-

“ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿರುವ ಅವರಿಗೆ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದು!” ಎಂದರು.

“ಯಾರು? ಆ ಪುಸ್ತಕ ವ್ಯಾಪಾರಿಯಾ? ತುಂಬಾ ಓವರ್ ಹೈಪ್ ಕೊಡುತ್ತಿದ್ದೀರೇನೋ?” ಎಂದೆ ನಾನು.

“ದುಡ್ಡುಕೊಟ್ಟು ಪುಸ್ತಕ ಕೊಳ್ಳಲು ಇಷ್ಟೊಂದು ಹಿಂಜರಿಯುತ್ತಿರುವ ಕಾಲದಲ್ಲಿ…, ಪುಸ್ತಕ ಕೊಳ್ಳುವಂತೆ ಮಾಡಲು ಇಷ್ಟೊಂದು ಇನ್ವೆಸ್ಟ್‌ಮೆಂಟ್ ಮಾಡುತ್ತಿರುವ ಅವರು ಗ್ರೇಟ್ ತಾನೆ?” ಎಂದರು.

“ಪುಸ್ತಕ ಕೊಳ್ಳುವಂತೆ ಮಾಡಲು!” ಎಂದು ನಿಲ್ಲಿಸಿ ಅವರ ಮುಖವನ್ನೇ ನೋಡುತ್ತಾ…,

“ಹೌದು…, ಅವರು ಗ್ರೇಟ್…, ಅದರಲ್ಲಿ ಎರಡು ಮಾತತಿಲ್ಲ! ಅವರೊಬ್ಬ ಒಳ್ಳೆಯ ಬ್ಯುಸಿನಸ್‌ಮನ್…, ಅವರ ವ್ಯಾಪಾರೀಕರಣವನ್ನು ನಾನು ಮನಸಾರೆ ಮೆಚ್ಚುತ್ತೇನೆ. ಹಾಗೆಂದು ಕನ್ನಡದ ಉಳಿವು ಆತನನ್ನು ಅವಲಂಬಿಸಿದೆಯೆಂದರೆ ಒಪ್ಪಲಾಗದು!” ಎಂದೆ.

“ನಿನ್ನ ಪುಸ್ತಕವನ್ನು ಅವರು ಮಾರಾಟ ಮಾಡಲಿಲ್ಲ ಅನ್ನುವ ಕಾರಣಕ್ಕೆ ಹೀಗೆ ಹೇಳಬಹುದೇ?” ಎಂದರು.

ಜಿಜ್ಞಾಸೆ ಶುರುವಾಯಿತು!

ಆ ಪುಸ್ತಕ ವ್ಯಾಪಾರಿಯ ಬೆಳವಣಿಗೆಯ ಪ್ರಾರಂಭದ ಹಂತದಲ್ಲಿ ಅವರನ್ನು ಕಾಂಟಾಕ್ಟ್ ಮಾಡಿದ್ದೆ.

“ನನ್ನದೊಂದು ಪುಸ್ತಕವಿದೆ ಮಾರಟ ಮಾಡಿ ಕೊಡಬಹುದೇ?” ಎಂದು ಕೇಳಿದ್ದೆ.

“ಅದನ್ನು ನಾನೊಬ್ಬನೇ ನಿರ್ಧರಿಸಲಾಗದು ಸರ್…, ನಮ್ಮದೊಂದು ಐದಾರು ಜನರ ಟೀಂ ಇದೆ…, ಅವರು ಪುಸ್ತಕವನ್ನು ಓದಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ!” ಎಂದರು.

“ಒಳ್ಳೆಯದು…, ನಾನೀಗ ಏನು ಮಾಡಬೇಕು?” ಎಂದೆ.

“ನಿಮ್ಮ ಪುಸ್ತಕವನ್ನು ತಲುಪಿಸಿ" ಎಂದರು.

ತಲುಪಿಸಿದೆ. ತಲುಪಿಸಿದ ನಂತರ…,

“ಪುಸ್ತಕವನ್ನು ತಲುಪಿಸಿದ್ದೇನೆ, ಮಾರಾಟ ಮಾಡಬಹುದೋ ಆಗಲ್ಲವೋ ಹೇಳಿ…!” ಎಂದೆ.

“ಖಂಡಿತಾ ಹೇಳುತ್ತೇನೆ!” ಎಂದರು.

ಆರು ತಿಂಗಳು ಕಾದರೂ ಅವರಿಂದ ಪ್ರತಿಕ್ರಿಯೆ ಬರದೇ ಇದ್ದುದ್ದರಿಂದ ಮತ್ತೊಮ್ಮೆ ನೆನಪಿಸಿದೆ..

“ಸಾರಿ ಸರ್…, ಎಲ್ಲರೂ ತುಂಬಾ ಬ್ಯುಸಿ ಆಗಿದ್ದರು…, ಖಂಡಿತಾ ತಿಳಿಸುತ್ತೇನೆ!” ಅಂದರು.

ಮತ್ತೊಂದು ಆರು ತಿಂಗಳ ನಂತರ…, 

“ಅಟ್ಲೀಸ್ಟ್…, ಮಾರ್ಕೆಟಿಂಗ್ ಮಾಡಲು ಸಾಧ್ಯವೋ ಇಲ್ಲವೋ ಅನ್ನುವುದನ್ನಾದರೂ ಹೇಳಬಹುದಲ್ಲಾ?!” ಎಂದು ಮೆಸೇಜ್ ಮಾಡಿ ಸುಮ್ಮನಾದೆ.

ಅದಕ್ಕೆ ಯಾವ ರಿಪ್ಲೇಯೂ ಬರಲಿಲ್ಲ.

ಇದರಲ್ಲಿ ಅವರನ್ನು ನಾನು ತಪ್ಪು ಹೇಳುವುದಿಲ್ಲ. ಅವರೊಬ್ಬ ವ್ಯಾಪಾರಿ. ಅದರಲ್ಲೂ ಪ್ರಕಾಶಕ. ಪುಸ್ತಕ ವ್ಯಾಪಾರದಿಂದ ಲಾಭ ಮಾಡಲು ಬಂದವರು.

ನಾನು ಪುಸ್ತಕವನ್ನು ತಲುಪಿಸಿದ ನಂತರ…, ಎರಡು ವರ್ಷದ ಅವಧಿಯಲ್ಲಿ…, ಹಲವರ ಪುಸ್ತಕಗಳನ್ನು ಅವರು ಪ್ರಕಟಿಸಿದರು, ಮಾರ್ಕೆಟಿಂಗ್ ಮಾಡಿದರು, ಬೆಳೆದರು.

ಅದರಲ್ಲಿ ಮೊದಮೊದಲು- ಆಲ್ರೆಡಿ ಹೆಸರು ಮಾಡಿದ ಸಾಹಿತಿಗಳೇ ಇದ್ದರು..., ನಂತರ…, ಅವರೊಂದಿಗೆ ತಗ್ಗಿ ಬಗ್ಗಿ ನಡೆಯುವ ಹುಡುಗರು, ಪುಸ್ತಕವನ್ನು ಮಾರಾಟ ಮಾಡಲೇ ಬೇಕೆನ್ನುವ ಒತ್ತಡ ಇದ್ದರವರು, ಹೊಸಬರು- ಇದ್ದರು.

ಇಲ್ಲಿ ಪುಸ್ತಕದ ವ್ಯಾಪಾರವಾಗುವುದು ಮುಖ್ಯ- ಬೆಳೆಯುವುದು ಮುಖ್ಯ.

ಯಾರನ್ನು ಬಳಸಿಕೊಂಡರೆ ಅವರು ಬೆಳೆಯುತ್ತಾರೋ ಅವರನ್ನು ಬಳಸಿಕೊಂಡು ಬೆಳೆದರು.

ಈಗ…, ಪುಸ್ತಕಗಳ ಮಾರಾಟಕ್ಕಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ.

ಬರೆಯುವವರು ತಾವೇ ಬಂದು ತಮ್ಮ ಪುಸ್ತಕಗಳನ್ನು ಓದುಗರಿಗೆ ವ್ಯಾಪಾರ ಮಾಡುವಂತೆ ಮಾಡುವುದು, ಓದುಗ- ಲೇಖಕ ಮುಖಾಮುಖಿಯಾಗುವಂತೆ ಮಾಡುವುದು…, ಒಟ್ಟು- ಪುಸ್ತಕಗಳು ಮಾರಾಟವಾಗಬೇಕು!

ಸಾಹಿತ್ಯಕವಾಗಿ ಅವರ ಸಾಧನೆಯೇನೋ ನನಗೆ ತಿಳಿಯದು. ಒಂದು ಪುಸ್ತಕವನ್ನಾದರೂ ಬರೆದಿದ್ದಾರೋ ಇಲ್ಲವೋ ಅದೂ ತಿಳಿಯದು.

ನನ್ನ ದೃಷ್ಟಿಕೋನ ಇಷ್ಟೇ…, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆಯ- ಸಾಹಿತ್ಯದ ಉಳಿವು ಅನ್ನುವುದು ಕೇವಲ ಒಬ್ಬ ವ್ಯಾಪಾರಿಯನ್ನು ಅವಲಂಬಿಸಿದೆಯಾ ಅನ್ನುವುದು!

ಅದನ್ನು ಹೇಳಲು ಹೋದರೆ ನನ್ನ ಪುಸ್ತಕವನ್ನು ಮಾರಾಟ ಮಾಡದಿರುವುದರಿಂದ- ಅನ್ನುವ ಅರ್ಥ ಬರುತ್ತದೆ ಅನ್ನುವುದೇ ನನಗೆ ಹೊಳೆಯಲಿಲ್ಲ!

ನನ್ನ ಪುಸ್ತಕಗಳ ಮಾರಾಟವೇ ನನ್ನ ಜೀವನದ ಉದ್ದೇಶವಲ್ಲ. ಬರೆದಿದ್ದೇನೆ- ಮಾರಾಟ ಮಾಡುವ ಹಾಗಿದ್ದರೆ ಮಾಡಿಕೊಡಿ ಅನ್ನುವುದಷ್ಟೇ ನನ್ನ ಪಾಯಿಂಟ್!

ಆದರೆ…, ನಾನೆಂಬ ಬರಹಗಾರನಿರುವ ಅರಿವು ಯಾರೊಬ್ಬರಿಗೂ ಇಲ್ಲ.

ಪುಸ್ತಕ ಮಾರಾಟಗಾರನಿಗೆ ಮೊದಲು ಬೇಕಿರುವುದು ಹೆಸರಾಂತ ಬರಹಗಾರರ ಪುಸ್ತಕಗಳು. ಆತ ತನ್ನ ಬೆಳವಣಿಗೆಗೆ ಕಾರಣರಾಗುವವರಿಗೇ ಮೊದಲ ಆದ್ಯತೆ ಕೊಡುವುದು.

ಇಲ್ಲಿ ನಾನೆಂಬ ಪ್ರಸಕ್ತಿಯೇ ಇಲ್ಲ. ಜೊತೆಗೆ…, ನನಗೂ ಅದೇನೂ ಅಂತಾ ವಿಷಯವಲ್ಲ.

ತಲುಪಬೇಕಾದವರನ್ನು ತಲುಪಿದೆ. ಸಿಗಬೇಕಾದ ಮನ್ನಣೆ ಸಿಕ್ಕಿದೆ. ನಾನು ತೃಪ್ತ.

ನಾನು ಬರೆದ ಪುಸ್ತಕವನ್ನು ಮಾರಿಯೇ ಬದುಕಬೇಕು ಅಂದುಕೊಂಡವನೂ ಅಲ್ಲ!

ಆದ್ದರಿಂದ…,

ಪುಸ್ತಕಗಳು ಹುಟ್ಟುವುದು ಸಾಹಿತಿಗಳಿಂದ.

ಅದನ್ನು ಕೊಂಡು ಓದುವುದು ಸಾಹಿತ್ಯಪ್ರೇಮಿಗಳಾದ ಓದುಗರು.

ಆ ಓದುಗರಿಗೆ ಸುಲಭವಾಗಿ ಪುಸ್ತಕಗಳು ತಲುಪುವಂತೆ ಮಾಡುವುದಷ್ಟೇ ವ್ಯಾಪಾರಿಯ ಕೆಲಸ!

ಆ ವ್ಯಾಪಾರಿಯನ್ನು…, ಕನ್ನಡವನ್ನು ಉಳಿಸುವವರು ಅನ್ನುವುದಾದರೆ…,

ಸಾಹಿತಿಗಳು- ಬರೆಯದೇ ಇರುವುದೇ ಲೇಸು!

*

ಜಿಜ್ಞಾಸೆ ಮೂರು:-

“ಹಾಗೆ ಹೇಳಿದರೆ ಹೇಗೆ!? ಜವಾಬ್ದಾರಿ ಹೊತ್ತುಕೊಳ್ಳಲಾಗದ ಹೇಡಿ ತೆಗೆದುಕೊಳ್ಳುವ ತೀರ್ಮಾನ ಅದು!” ಎಂದಳು.

“ನಾನ್ಯಾವತ್ತೂ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ ಅಂದಿಲ್ಲವಲ್ಲ?” ಎಂದೆ.

“ಮತ್ತೆ…, ಅಲೆಮಾರಿಯಾಗಿ ಬದುಕುತ್ತೇನೆ ಅಂದರೆ ಏನರ್ಥ?” ಎಂದಳು.

“ಇದೊಳ್ಳೆ ಕಥೆ! ಅಲೆಮಾರಿಯಾಗಿ ಬದುಕುವುದಕ್ಕೂ ಜವಾಬ್ದಾರಿಗೂ ಏನು ಸಂಬಂಧ?” ಎಂದೆ.

“ಈಗೇನೋ ಅಮ್ಮ ಇದ್ದಾರೆ…, ನಂತರ?”

“ಅದನ್ನೇ ಹೇಳಿದ್ದು! ಈಗ ಅಮ್ಮ ಇದ್ದಾರೆ. ಆದ್ದರಿಂದ ಅಮ್ಮನೊಂದಿಗಿದ್ದು ಗುರಿಯೆಡೆಗೆ ಚಲಿಸುತ್ತೇನೆ! ನಾನೇ ಮೊದಲು ಹೋಗುತ್ತೇನೋ ಅಮ್ಮನೇ ಮೊದಲು ಹೋಗುತ್ತಾರೋ ಹೇಗೆ ಹೇಳುವುದು? ನಾನೇ ಹೋದರೆ ಚಿಂತೆಯಿಲ್ಲ! ಅಮ್ಮ ಹೋದರೆ ನಂತರ ನನ್ನ ಜವಾಬ್ದಾರಿಯೇನು?” ಎಂದೆ.

“ಇಲ್ಲ…, ನಿನ್ನ ಯೋಚನೆಯ ಧಾಟಿಯಲ್ಲಿ ಸಮಸ್ಯೆಯಿದೆ!” ಎಂದಳು.

ನಗು ಬಂತು…,

“ನೋಡು ಪುಟ್ಟ…, ಎಲ್ಲರ ಜೀವನವೂ ಒಂದೇ ಟ್ರಾಕ್‌ನಲ್ಲಿ ಇರುವುದಿಲ್ಲ. ಒಬ್ಬೊಬ್ಬರ ಅನುಭವ ಒಂದೊಂದು ರೀತಿಯಲ್ಲಿ ಇರುತ್ತದೆ. ಜೀವನವನ್ನು ಹಾಗೆಯೇ ಒಪ್ಪಿಕೊಳ್ಳುವುದನ್ನು ಕಲಿಯಬೇಕು. ನನಗೊಂದು ಗುರಿಯಿದೆ. ಯಾಕಿದೆ? ಅದನ್ನು ಯಾಕೆ ಸಾಧಿಸಬೇಕು? ಈ ರೀತಿಯ ತುಮುಲಗಳು ಶುರುವಾದರೆ ನಾನು ಗುರಿಯೆಡೆಗೆ ಚಲಿಸುವುದೇ ಇಲ್ಲ! ನಾನೇನೇ ಮಾಡಿದರೂ ಅದು ಅಮ್ಮನಿಗಾಗಿ. ನನ್ನ ಮಗ ಮಾಡಿದ ಎಂದು ಹೇಳಿಕೊಳ್ಳಲು ಹೊರತು…, ಏನನ್ನಾದರೂ ಮಾಡಲೇ ಬೇಕೆನ್ನುವ ಒತ್ತಡವೋ- ಉದ್ದೇಶವೋ 'ಈಗ' ನನಗಿಲ್ಲ!” ಎಂದೆ.

ಅವಳು ಒಪ್ಪದವಳಂತೆ ತಲೆಯಾಡಿಸಿದಳು.

ಜಿಜ್ಞಾಸೆ ಶುರುವಾಯಿತು!

ಯಾರೇನೆಂದರೂ…, ಯಾರು ಒಪ್ಪಿದರೂ ಬಿಟ್ಟರೂ…, ನನ್ನ ಬದುಕಿನಲ್ಲಿ ನಾನು ತೃಪ್ತ!

ಜೀವನದಲ್ಲಿ ನಡೆದ "ಘಟನೆಗಳನ್ನು" ತೆಗೆದುಕೊಂಡರೆ ನಾನಿಷ್ಟು ನೆಮ್ಮದಿಯಾಗಿರಲು ಅವಕಾಶವೇ ಇಲ್ಲ!

ಒಂದೋ ಹುಚ್ಚಾಸ್ಪತ್ರೆಯಲ್ಲಿರಬೇಕಿತ್ತು…, ಇಲ್ಲ- ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು.

ಆದರೆ…, ನನ್ನ ಜೀವನದಲ್ಲಿ ನಾನು ತೃಪ್ತ!

ಕಾರಣ…, ನಾನು ಘಟನೆಗಳನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ!

ನಡೆಯುವ ಪ್ರತಿ ಘಟನೆಗಳಿಗೆ ನಾವು ಜವಾಬ್ದಾರರಲ್ಲ! ನಡೆಯುತ್ತದೆ! ಏನು ಮಾಡುವುದು?

ಹೀಗೆ ನಡೆಯಿತಲ್ಲಾ ಎಂದು ರೋಧಿಸುತ್ತಾ ಕುಳಿತುಕೊಳ್ಳುವುದಾ?

ನನಗೆ ಮುಖ್ಯ- ನಡೆದ ಘಟನೆಗಳನ್ನು ಹೇಗೆ ತೆಗದುಕೊಳ್ಳಬೇಕು- ಅನ್ನುವುದು ಮಾತ್ರ!

ಕೆಲವೊಂದು ಘಟನೆಗಳನ್ನು ನೋಡೋಣ…,

ಒಂದು:- ಒಂಬತ್ತನೇ ತರಗತಿಗೆ ಕೊಡಗಿನಿಂದ ಮೈಸೂರಿಗೆ ಬಂದೆ. ನಾನು ಓದಿದ ಪ್ರೈಮರಿ ಸ್ಕೂಲಿನಿಂದ ನನಗೊಂದು ಪತ್ರ ಬಂತು. ಇಂತಹ ದಿನ ಸ್ಕೂಲ್‌ಡೆ ನಡೆಯುತ್ತಿದ್ದು…, ಬಂದು, ಆರನೇ ಮತ್ತು ಏಳನೇ ತರಗತಿಯ ಮೊದಲ ಬಹುಮಾನವನ್ನು ಪಡೆದುಕೊಳ್ಳುವುದು!

ನಾನು ಅಲ್ಲಿಯೇ ಇದ್ದಾಗ ಎರಡುಮೂರು ವರ್ಷ ಸ್ಕೂಲ್‌ಡೆಗಳು ನಡೆದಿರಲಿಲ್ಲವಾದ್ದರಿಂದ ಅವರು ಆ ಪತ್ರವನ್ನು ಕಳಿಸಿದ್ದರು.

ಪತ್ರವನ್ನೇನೋ ಕಳಿಸಿದರು…, ಆದರೆ ಮೈಸೂರಿನಲ್ಲಿರುವ ನಾನು ಸ್ಕೂಲ್‌ಡೆಗೆ ಹೋಗುತ್ತೇನೆ ಅನ್ನುವ ಊಹೆ ಅವರಿಗಿರಲಿಲ್ಲ.

ಬಹುಮಾನ ವಿತರಣೆಯ ಸಮಯದಲ್ಲಿ ನನ್ನ ಹೆಸರನ್ನು ಕೂಗಿದಾಗ ಎದ್ದು ಹೋದೆ.

ಶಿಕ್ಷಕರಲ್ಲಿ ಗೊಂದಲ!

ನಾನು ಬರುವುದಿಲ್ಲವೆನ್ನುವ ನಂಬಿಕೆಯಲ್ಲಿ ಅವರು ನನ್ನ ಬಹುಮಾನವನ್ನು ಹಂಚಿಕೊಂಡಿದ್ದರು.

ನನಗಿಂತ ಕೆಳಗಿನ ತರಗತಿಯ ಹುಡುಗರಿಗೆ…, ಒಂದು ವರ್ಷದ ಮೊದಲ ಬಹುಮಾನವೇ ಸಾವಿರ- ಸಾವಿರದ ಐನೂರು ರೂ! ಜೊತೆಗೆ ಶೀಲ್ಡ್‌ಗಳು!

ನನಗೆ ಸಿಕ್ಕಿದ್ದೇನು?

ಆರು ಮತ್ತು ಏಳನೇ ತರಗತಿಗಳೆರಡಕ್ಕೂ ಸೇರಿ ಇಪ್ಪತ್ತು ರೂಪಾಯಿಗಳು!

ಈಗೇನು ಮಾಡಬೇಕು? ಇದನ್ನು ಹೇಗೆ ತೆಗೆದುಕೊಳ್ಳಬೇಕು?

ಎರಡು:- ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಆಗ…, ಕ್ರಿಕೆಟ್ ಮತ್ತು ಫುಟ್‌ಬಾಲ್ ನನಗೊಂದು ರೀತಿಯ ಜೀವನಾಡಿ ಇದ್ದಂತೆ. ತುಂಬಾ ಚೆನ್ನಾಗಿ ಆಡುತ್ತಿದ್ದೆ.

ಆ ಶಾಲೆಯ ಪಿಟಿ ಸರ್ ಹೇಳಿದ್ದರು…,

“ಈವರ್ಷ ಜಿಲ್ಲಾ ಕ್ರಿಕೆಟ್‌ಟೀಂಗೆ ಸೆಲೆಕ್ಷನ್ ನಡೆಯುತ್ತದೆ…, ಮಿಸ್ ಮಾಡಬೇಡ. ಪ್ರಾಕ್ಟೀಸ್ ಮಾಡು…, ಖಂಡಿತಾ ಸೆಲೆಕ್ಟ್ ಆಗುತ್ತೀಯ!”

ನಾನೂ ಪ್ರಾಕ್ಟೀಸ್‌ ಮಾಡಿದೆ…, ಆದರೇನು…, ಸರಿಯಾಗಿ ಸೆಲೆಕ್ಷನ್‌ಗೆ ಒಂದು ವಾರ ಮುಂಚೆ ಅಪೆಂಡಿಕ್ಸ್ ಫೈನಲ್ ಸ್ಟೇಜ್‌ಗೆ ಬಂದು ಆಪರೇಷನ್ ಮಾಡಬೇಕಾಯಿತು!

ಅರ್ಧಗಂಟೆ ತಡವಾಗಿದ್ದರೂ ಉಳಿಯುತ್ತಿರಲಿಲ್ಲ ಅನ್ನುವಷ್ಟರಮಟ್ಟಿಗೆ ಸೀರಿಯಸ್ ಆಗಿತ್ತು.

ಅಪೆಂಡಿಕ್ಸ್ ಬ್ಲಾಸ್ಟ್ ಆಗಿ ಹರಡಿಕೊಂಡಿದ್ದ ಕ್ಯೂವನ್ನು ಹೊರತೆಗೆಯಲು ಹೊಟ್ಟೆಯಲ್ಲಿ ಸಪರೇಟ್ ರಂದ್ರ ಕೊರೆದು ಟ್ಯೂಬ್ ಒಂದನ್ನು ಹಾಕುವಷ್ಟು ಮಟ್ಟಿಗೆ!

ಈಗೇನು ಮಾಡಲಿ? ಇದನ್ನು ಹೇಗೆ ತೆಗೆದುಕೊಳ್ಳಲಿ?

ಮೂರು:- ಈ ಲವ್‌ಫೈಲ್ಯುರ್ ಅನ್ನುವುದಿದೆಯಲ್ಲಾ…, ಅದರಲ್ಲೂ ಹರೆಯದಲ್ಲಿ…! ಅರಗಿಸಿಕೊಳ್ಳುವುದು ತುಂಬಾ ಕಷ್ಟ! ಮಾವನ ಮಗಳೇ…! ಪ್ರಪೋಸ್ ಮಾಡಿದ್ದೆ! ಅವಳು ಒಪ್ಪಿಕೊಂಡಿರಲಿಲ್ಲ.

ನನ್ನನ್ನು ಒಪ್ಪಿಕೊಳ್ಳದಿದ್ದರೂ ನಾನು ಪ್ರಪೋಸ್ ಮಾಡಿದ ನಂತರ ಪ್ರಪೋಸ್ ಮಾಡಿದ ಬೇರೊಬ್ಬನನ್ನು ಒಪ್ಪಿಕೊಂಡಾಗ…, ಉಫ್ ಅನ್ನಿಸಿತು!

ಆದರೂ ಹೀರೋಯಿಸಂ ಬಿಡುವುದಿಲ್ಲವಲ್ಲಾ!

“ನನ್ನ ಪ್ರೇಯಸಿ ನೀನು…, ನಿನ್ನ ಖುಷಿಯೇ ನನಗೆ ಮುಖ್ಯ…, ಯಾವ ಕಾಲಕ್ಕಾದರೂ ನಿನಗಾಗಿ ಇರುತ್ತೇನೆ!” ಎಂದು ಹೇಳಿ ಬಂದಿದ್ದೆ.

ನಂತರವೇನು?

ಪ್ರೇಮಿಸಿದವಳಿಂದ ಹೊರಬರಲು ಗುರಿಯೊಂದನ್ನು ನಿರ್ಧರಿಸಿಕೊಂಡೆ.

ಆ ಗುರಿಯನ್ನು ಸೇರಲು ಪಟ್ಟ ಶ್ರಮ, ಬಿದ್ದ ಪೆಟ್ಟುಗಳು, ಯಾರಿಗೆ ಹೇಳುವುದು?

ಅದರ ದಾರಿಯಲ್ಲಿರುವಾಗ…, ಪ್ರೇಮಿಸಿದವಳಿಗೆ…, ಯಾವ ಕಾಲಕ್ಕಾದರೂ ನಾನು ಇರುತ್ತೇನೆ- ಎಂದು ಹೇಳಿದ ಮಾತೇ ಮುಳುವಾಗಿ…, ಅವಳ ಲೌ ಫೈಲ್ ಆಗಿ…, ಅವಳು ನನ್ನ ಬದುಕಿಗೆ ಬಂದು…, ಗುರಿ ಮತ್ತು ಅವಳ ನಡುವೆ ನಲುಗಿ…, ನನ್ನ ಗುರಿ ಅವಳ ಗುರಿ ಅಲ್ಲವಾಗಿ…, ಒಂದೋ ಅವಳು ಅಥವಾ ಗುರಿ ಅನ್ನುವ ಪರಿಸ್ತಿತಿ ಒದಗಿ…, ಅವಳು ನನ್ನನ್ನು ಬಿಟ್ಟು ಹೋಗಿ…, ಈಗ…, ಹೆತ್ತ ಮಗುವನ್ನು ನೋಡಲೂ ಒಂದೋ ಹೆಂಡತಿಯ ಕಾಲು ಹಿಡಿಯಬೇಕು ಅಥವಾ ಯುದ್ಧ ಮಾಡಬೇಕು ಅನ್ನುವ ಅವಸ್ಥೆ!

ಅದೆರಡೂ ಬೇಡ…, ಅದೆರಡೂ ಮಾಡದೆಯೇ ಮಗಳನ್ನು ನೋಡುವ ಸಂದರ್ಭ ಒದಗಿದರೆ…, ಆ ಸಮಯದಲ್ಲಿ ಸಾಕು- ಮಗಳು…, ಅನ್ನುವ ತೀರ್ಮಾನಕ್ಕೆ ಬಂದು…, ಗುರಿಯೆಡೆಗಿನ ಪ್ರಯಾಣ ಮುಂದುವರೆಸಿದಾಗ…, ನಿಜವಾದ ತುಮುಲ ಶುರುವಾಯಿತು!

ನಾನು ಕೆಲಸ ಮಾಡುತ್ತಿದ್ದ ಕಂಪೆನಿಯವರು- ಮಾಡಿದ ಕೆಲಸಕ್ಕೆ ಸರಿಯಾಗಿ ಸಂಬಳ ಕೊಟ್ಟವರಲ್ಲ!

ಆ ಕೆಲಸವನ್ನು ಬಿಟ್ಟು ಗುರಿಯ ಬೆನ್ನು ಹತ್ತಿದಾಗ…, ಗುರಿ ನನ್ನದಾದ್ದರಿಂದ…, ಬೇಕಿದ್ದರೆ ಮಾಡು- ಇಲ್ಲ ಬಿಡು…, ಅನ್ನುವ ಅವಸ್ಥೆ ಇದ್ದುದ್ದರಿಂದ…, ಬಿಟ್ಟಿಯಾಗಿ ಕೆಲಸ ಮಾಡಬೇಕಾದ ಅವಸ್ಥೆ!

ಅದೆಷ್ಟು ಸಂದರ್ಶನಗಳು, ಅವಮಾನಗಳು, ಏಟುಗಳು…!

ಯಾಕೆ? ಯಾರಿಗಾಗಿ? ಏನು ಜೀವನ?

ಈ ರೀತಿಯ ಯೋಚನೆಗಳೇ…,

ನಾನು ಹೇಗೆ ಯೋಚಿಸಿದರೆ ನೆಮ್ಮದಿಯಾಗಿರುತ್ತೇನೋ ಆ ರೀತಿ ಯೋಚಿಸಲು ಪ್ರೇರಣೆಯಾಯಿತು!

*

ಕೊನೆಯ- ಜಿಜ್ಞಾಸೆ ನಾಲಕ್ಕು:-

ನಾನು ಹೇಗೆ ತೃಪ್ತ?

ಇರುವುದೊಂದು ಪುಟ್ಟ ಜೀವನ. ನನಗೆ ವೈರಿಗಳು ಯಾರೂ ಇಲ್ಲ. ಪ್ರತಿ ಅಂದರೆ ಪ್ರತಿಯೊಂದನ್ನೂ- ಪ್ರತಿಯೊಬ್ಬರನ್ನೂ ನಾನು ಪ್ರೀತಿಸುತ್ತೇನೆ. ನನಗಾಗಿ- ಸಾವಿರಾರು ಪುಸ್ತಕಗಳನ್ನು ಓದಿದೆ. ಹಲವಾರು ಆತ್ಮೀಯರೊಂದಿಗೆ ಒಡನಾಡಿದೆ. ವರ್ತಮಾನವೆಂಬ ಪ್ರತಿ ಕ್ಷಣವನ್ನು ಅನುಭವಿಸಿದೆ. ಮಾತನಾಡಲಾಗದ ಕೀಳರಿಮೆಯಿಂದಾಗಿ ಬರಹವನ್ನು ಶುರುಮಾಡಿ…, ಕಾದಂಬರಿಗಳನ್ನು ಬರೆದೆ, ಕಥೆಗಳನ್ನು ಬರೆದೆ, ಹಲವಾರು ಶುದ್ಧ ಹೃದಯಗಳ ಹಾರೈಕೆಗಳು, ಆಶೀರ್ವಾದಗಳನ್ನು ಪಡೆದು ಕೃತಾರ್ಥನಾದೆ.

ತಲುಪುವವರೆಗೆ ಗುರಿಯನ್ನು ಬಿಡುವುದಿಲ್ಲ…, ಗುರಿಯನ್ನು ತಲುಪದಿದ್ದರೆ?

ಮ್ಯಾಗ್ಸಿಮಂ ಶ್ರಮಿಸಿದೆನೆನ್ನುವ ತೃಪ್ತಿ ಇದ್ದೇ ಇರುತ್ತದೆ!

ನಂತರ…?

ಪ್ರಪಂಚ ವಿಶಾಲವಾಗಿದೆ. ಜೀವನವೇನೂ ಅಷ್ಟು ಕಷ್ಟವಲ್ಲ.

ನನಗೇನೂ ಹಣವನ್ನು ಸಂಪಾದಿಸಬೇಕೆನ್ನುವ ವ್ಯಾಮೋಹವಿಲ್ಲ. ನನ್ನ ಯಾವ ಸಂತೋಷವೂ ಹಣವನ್ನು ಡಿಪೆಂಡ್ ಆಗಿಲ್ಲ. ಈಗಿನ ಜೀವನದಲ್ಲಿ ಹಣವನ್ನು ಸಂಪಾದನೆ ಮಾಡಲೇ ಬೇಕೆನ್ನುವ ಒತ್ತಡವೂ ಇಲ್ಲ!

ಮತ್ತೆ?

ಗೊತ್ತಿಲ್ಲ! ಜೀವನವನ್ನು ಅದರ ಪಾಡಿಗೆ ಬಿಡುವುದು…, ಈ ರೀತಿಯ ಕೆಲವೊಂದು ಜಿಜ್ಞಾಸೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದು..., ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು…!

ಇದುವರೆಗಿನ ನನ್ನ ಬದುಕಿನಲ್ಲಿ…, ಆತ್ಮಸಾಕ್ಷಿಯಮುಂದೆ ನಾನು- ತೃಪ್ತ!

ಜಿಜ್ಞಾಸೆಗಳು ಮುಗಿಯುವುದಿಲ್ಲ!

ಜಿಜ್ಞಾಸೆಗಳು ಹುಟ್ಟಿಕೊಂಡಾಗಲೆಲ್ಲಾ ಈರೀತಿಯ ಬರಹಳಲ್ಲಿ ಹೊರಹಾಕಿದ್ದೇನೆ.

ಹೇಳಲು ಬಿಟ್ಟುಹೋದ ಅದೆಷ್ಟೋ ಅನುಭವಗಳಿದೆ…, ಅದೆಷ್ಟೋ ಬರಹಗಳನ್ನು ಪೆಂಡಿಂಗ್ ಇಟ್ಟಿದ್ದೇನೆ.

ಇನ್ನುಮುಂದೆ ಬರೆಯುತ್ತೇನೋ ಇಲ್ಲವೋ…, ಇದನ್ನೂ ಅದೆಷ್ಟು ಸಾರಿ ಹೇಳಿದ್ದೇನೋ?!

ಆದರೂ ಬರೆದಿದ್ದೇನೆ- ಮುಂದೆಯೂ ಬರೆಯಬಹುದು, ಬರೆಯದೆಯೂ ಇರಬಹುದು…!

ಆದರೆ…, ಆದರೆ…, ಯಾಕೋ ಬೆಳಕಿನಿಂದ ಕತ್ತಲಿಗೆ ಹೋಗಬೇಕು ಎಂದೇ ಅನ್ನಿಸುತ್ತಿದೆ.

ಒತ್ತಡವೊಂದು ಉಂಟಾಗುತ್ತಿದೆ.

ಪುಸ್ತಕಮಾರಾಟಗಾರ ಕನ್ನಡದ ಉದ್ದಾರಕ ಎಂದು ಕೇಳುವಾಗ…, ತಮ್ಮ ಪುಸ್ತಕಗಳ ಮಾರಾಟವಾಗಲು ಸಾಹಿತಿ ದಯನೀಯವಾದ ಅವಸ್ಥೆಗೆ ಇಳಿಯುತ್ತಿರುವುದು ನೋಡುವಾಗ..., ಬರೆದ ಬರಹಗಳಿಗೆ ನೆಗೆಟಿವ್ ಅಭಿಪ್ರಾಯ ಬಂದರೆ ಒಪ್ಪದೆ- ಅಭಿಪ್ರಾಯ ಹೇಳಿದವನನ್ನೇ ಕೀಳಾಗಿ ಕಾಣುವುದು ನೋಡಿದಾಗ..., ಪ್ರಶಸ್ತಿಗಳಿಗಾಗಿ- ಹೆಸರಿಗಾಗಿ ಪೈಪೋಟಿ ನಡೆಸುವುದು ನೋಡಿದಾಗ…, ಕೊನೆಗೆ…, ಓದುಗರಿಗಿಂತ ಬರೆಯುವವರೇ ಹೆಚ್ಚಾಗುತ್ತಿರುವುದು ಕಾಣುವಾಗ- ಬರಹ ನಿಲ್ಲಿಸಬೇಕೆಂದೇ ಅನ್ನಿಸುವುದು!

ಆದರೇನು?

ನಾನು ಬರೆಯುವ ಬರಹಗಳಲ್ಲಿ ನನ್ನ ಮಾನಸಿಕ ತುಮುಲಗಳಿರುತ್ತದೆಯೇ ಹೊರತು ಘಟನೆಗಳಿಗೆ ಮಹತ್ವವಿರುವುದಿಲ್ಲ ಅನ್ನುವಲ್ಲಿ- ಬರಹ ತೃಪ್ತಿ ನೀಡಿದೆ!

ಮಾನಸಿಕ ತುಮುಲಗಳಿಗೆ ಬ್ರೇಕ್ ಹಾಕುವ ಹಂತ ಬಂದಿದೆ!

ಅಮ್ಮ- ಗುರಿ- ಅಲೆದಾಟ…, ಇದರ ಹೊರತು ಇನ್ನೇನಿರುತ್ತದೆ ಬರೆಯಲು- ಬಯಲಾಗಲು?

ಆದ್ದರಿಂದ…,

ಮತ್ತೆ ಯಾವಾಗಲಾದರೂ…, ಬರೆಯದೆ ಇರಲಾಗದಿರುವ ಒತ್ತಡವುಂಟಾದರೆ…, ಉಂಟಾದಾಗ- ಕಥೆಗಾರನಾಗಿ ಭೇಟಿಯಾಗೋಣ!

ಅದುವರೆಗೆ…, ಓದುಗನಾಗಿ…, ಆಶೀರ್ವಾದಕ್ಕೆ ತಲೆಬಾಗುವವನಾಗಿ…,

ಇದ್ದೇ ಇರುತ್ತೇನೆ!

ಸ್ವಸ್ತಿ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!