ಸಾವು!
ಅದೊಂದು ಸಾವು. ಅಗೋಚರ ಸಾವು. ನಿಗೂಢ ಸಾವು. ಹಾಗೊಂದು ಸಾವು ನಡೆದಿರುವ ವಿಷಯ ಯಾರೆಂದರೆ ಯಾರೊಬ್ಬರಿಗೂ ತಿಳಿಯದು!
ಸ್ವಲ್ಪ ದಿನಗಳ ಮುಂಚೆ ಕಥೆಯೊಂದು ಓದಿದೆ. ಓದಿ…, ಬರೆದವನನ್ನು ಮನಸ್ಸಿನಲ್ಲಿಯೇ ವಾಚಾಮಗೋಚರ ಬೈದಿದ್ದೆ. ಇಷ್ಟು ಕೆಟ್ಟದ್ದಾಗಿ ಯಾಕೆ ಕಥೆ ಬರೆಯುತ್ತಾರೋ ಎಂದು.
ಮನಸ್ಸಿನಾಳದಲ್ಲೆಲ್ಲೋ ಕದಲಿಕೆ! ಭೂತಕಾಲಕ್ಕೆ ಚಲಿಸಿದೆ…, ನಾನು ಮೊದಲ ಪುಸ್ತಕ ಬರೆದ ಕಾಲಕ್ಕೆ!
ಆ ಪುಸ್ತಕ ಬರೆಯುವ ಮುಂಚೆ ಸಾವಿರ ಪುಸ್ತಕಗಳನ್ನು ಓದಿದ್ದೆ.
ನಂತರ ಬರಹದ ಹುಚ್ಚು ತಲೆಗೆ ಹಿಡಿದು ಒಂದರ ಹಿಂದೆ ಒಂದರಂತೆ ಕಥೆಗಳು…, ಒಂದು ಹಂತದಲ್ಲಿ…, ಏನು ಬರೆಯಬೇಕೆಂದು ತೋಚದಿದ್ದರೂ ಬಲವಂತವಾಗಿ ಬರೆದೆ.
ಹೀಗೆಯೇ ಎಷ್ಟು ಕಾಲ?
ನಿಜ! ಬರೆಯತೊಡಗಿದಮೇಲೆ ಓದು ನಿಂತಿದ್ದು ಅರಿವಿಗೆ ಬರಲೇ ಇಲ್ಲ!
ಬರಹ ಮುಕ್ಕರಿಸಿದಾಗ ಅರಿವಿಗೆ ಬಂದದ್ದು ಏನು?
ಇದುವರೆಗಿನ ನನ್ನ ಕಥೆಗಳು- ಅದುವರೆಗಿನ ನನ್ನ ಓದಿನ ಫಲ!
ಹಾಗೆ…, ಪುನಃ ಓದು ಶುರುಮಾಡಿದಾಗ ಓದಿದ ಮೊದಲ ಕಥೆ- ಕಥೆಗಾರ ಬೈಯ್ಯಿಸಿಕೊಂಡ ಕಥೆ- ಓದಿನಮೇಲೆ ತಾತ್ಸರ ಹುಟ್ಟುವಷ್ಟು ಕಳಪೆಯಾಗಿತ್ತು.
ಕಥೆಗಾರನ ಹೆಸರು ನೋಡಿದೆ. ಓದು ಎಷ್ಟು ದೂರವಾಗಿತ್ತೆಂದರೆ..., ಬರೆದು ಬರೆದು ತುಂಬಿಸುತ್ತಿದ್ದ ನನ್ನದೇ ಕಥೆಗಳನ್ನು ಓದಿದರೂ ಗುರುತಿಸಲಾರದಷ್ಟು!
ಹಾಗೆ…, ಆ ಸಾವು ಸಂಭವಿಸಿತು…, ನನ್ನೊಳಗಿನ ಕಥೆಗಾರನ ಸಾವು!!!
Comments
Post a Comment