ದಾರಿಯಲ್ಲಿ ಸಿಕ್ಕವಳು!
ಬರೆಯುತ್ತಿರುವ ಕಥೆಗೂ ಅವಳಿಗೂ ಏನೂ ಸಂಬಂಧವಿಲ್ಲ! ಅವಳು ಹೇಳಿದ್ದರಿಂದ ಬರೆಯುತ್ತಿದ್ದೇನೆ ಅನ್ನುವುದಷ್ಟೇ ಈ ಪೀಠಿಕೆಯ ಉದ್ದೇಶ! ಅ-ವ-ಳು ಹೇ-ಳಿ-ದ್ದ-ರಿಂ-ದ ಬರೆದೆ ಅನ್ನುವಲ್ಲಿ ಅವಳಿಗೆ ನಾನು ಕೊಡುವ ಮಹತ್ವವಿದೆ.
ಅಮ್ಮನ ಹೊರತು ಯಾರೊಬ್ಬರಿಗೂ- ಯಾರೊಬ್ಬರ ಮಾತಿಗೂ ಬೆಲೆ ಕೊಡದ ನಾನು 'ಅವಳು' ಹೇಳಿದ್ದರಿಂದ ಕಥೆ ಬರೆಯುತ್ತಿದ್ದೇನೆಂದರೆ….
ಅರ್ಥವಾಯಿತೇ?
ಏನಾದರೂ ಬರೆಯಬೇಕು ಅನ್ನಿಸದಿರುವುದು, ಕಥೆಯೇ ಹೊಳೆಯದಿರುವುದು ಸೋಮಾರಿತನವಾ?
ಅಲ್ಲ- ಕಥೆ ಹೊಳೆದು ಅದನ್ನು ಬರೆಯದೇ ಇರುವುದು ಸೋಮಾರಿತನ!
ಆದ್ದರಿಂದ ಕಥೆ ಬರೆಯಲಿಲ್ಲ ಅನ್ನುವ ಕಾರಣಕ್ಕೆ ನಾನು ಸೋಮಾರಿಯಲ್ಲ!
ಆದರೆ..,
ಕಥೆ ಬರೆಯುವ ಯೋಚನೆಯೇ ಇಲ್ಲದವನಿಗೆ…, ಅವಳು ಹೇಳಿದ ಮಾತ್ರಕ್ಕೆ ಕಥೆ ಹೊಳೆಯುವುದೆಂದರೆ- ಅರ್ಥವೇನು?
ವಿಚಿತ್ರ!
ಅಥವಾ…, ನನ್ನೊಳಗೊಂದು ಕಥೆ ಮೊಳೆತ ಸಮಯದಲ್ಲೇ ಅವಳು ಬರೆಯಲು ಹೇಳಿರಬಹುದ?
ಇನ್ನುಮುಂದೆ ಕಥೆಯೇ ಬರೆಯುವುದಿಲ್ಲ- ಅನ್ನುವಂತೆ ಇದ್ದವನಿಗೆ ಕಥೆ ಬರೆಯಲೊಂದು ನೆಪ…?
ಹಾಗೆಂದು ಅವಳು ಹೇಳಿದಾಗಲೆಲ್ಲಾ ಕಥೆ ಬರೆಯುತ್ತೇನೆಯೇ- ಅನ್ನುವಲ್ಲಿ ಉತ್ತರವಿದೆ!!
ಅದು ಅವಳು ಯೋಚಿಸಬೇಕಾದ ವಿಷಯ!
ಅವಳಮೇಲಿನ ನನ್ನ "ಇದ"ನ್ನು ಪದೇ ಪದೇ ಪರೀಕ್ಷಿಸಬೇಕೋ ಬೇಡವೋ ಅನ್ನುವುದು!
ಹಾಗೆಯೇ…,
ಬರೆಯುತ್ತಿರುವ ಈ ಕಥೆ… ಪರಿಪೂರ್ಣವಾಗಿ- ಕಾಲ್ಪನಿಕ ಸತ್ಯ!
ಇದುವರೆಗೂ ಯಾರೊಂದಿಗೂ ಹೇಳದೆ ಮುಚ್ಚಿಟ್ಟಿದ್ದ "ರಹಸ್ಯ!”
*
ಮೂರುನಾಲ್ಕು ದಿನದ ಸುತ್ತಾಟದ ಕೊನೆಗೆ ಅಕ್ಕನ ಮನೆಗೆ ಹೋಗಿದ್ದೆ- ಭದ್ರಾವತಿಗೆ!
ತಲುಪುವಾಗ ಸಂಜೆ ಏಳು ದಾಟಿತ್ತು.
ಹಾಗೆಂದು ಅಲ್ಲಿ ಉಳಿದು ಮಾರನೆ ದಿನ ಮೈಸೂರಿಗೆ - ಅಮ್ಮನ ಮನೆಗೆ- ಹೊರಡುವವನೇ?
ಅಲ್ಲ! ಅಂದೇ ಹೊರಡಬೇಕು- ಅದು ಪ್ಲಾನ್!
ಪ್ಲಾನ್ ನನ್ನದೇ ಆದ್ದರಿಂದ ಅಕ್ಕನಿಗೂ ಗೊತ್ತು- ಹಠ!
ಆದರೆ ಅವರು ನನ್ನ ಅಕ್ಕ!
ಅಪರೂಪಕ್ಕೆ ಬಂದವನಿಗೆ ಬರಿ ಟಿ ಕೊಟ್ಟು ಕಳಿಸುವವರು ಅಕ್ಕನೇ?
ಊಟ ಮುಗಿಸಿಯೇ ಹೊರಡಬೇಕೆಂಬ ಹಠ ಅವರದ್ದು!
ನೀನೇನೂ ಉಳಿಯಬೇಕಾಗಿಲ್ಲ- ಅನ್ನುವಲ್ಲಿ ನನಗೆ ಮತ್ತೊಂದು ಹಠಕ್ಕೆ ಜಾಗವಿಲ್ಲ!
ಎಲ್ಲಿಗೇ ಆದರೂ ಮೊದಲೇ ಹೇಳಿ ಹೋಗುವ ಜಾಯಮಾನ ನನ್ನದಲ್ಲ!
ಹೇಳದೇ ಕೇಳದೇ ಹೋಗಿ ಗಲಿಬಿಲಿ ಮಾಡುವುದು ನನ್ನ ಹವ್ಯಾಸ!
ಮಗನನ್ನು ಓಡಿಸಿ…, ಚಿಕ್ಕನ್ ತರಿಸಿ…, ಅಕ್ಕ ಗಡಿಬಿಡಿಯಲ್ಲಿ ಅಡಿಗೆ ಮಾಡುವಾಗ ಅವರ ಅಕ್ಕಪಕ್ಕ ಹಿಂದೆಮುಂದೆ ಸುಳಿದು ಮಾತುಕತೆಯಾಡುವುದು ಮಜ!
ಸಹಾಯವಂತೂ ಮಾಡುವುದಿಲ್ಲ!
ಅಲ್ಲಿಂದ ಹೊರಡುವಾಗ ಎಂಟೂವರೆ ದಾಟಿತ್ತು. ಅಕ್ಕ ಅಪ್ಪಿತಪ್ಪಿಯೂ ನಾಳೆ ಹೋಗೋ ಅನ್ನುವವರಲ್ಲ.
ಮತ್ತೆ ಮತ್ತೆ ಮುಖಭಂಗ ಅಷ್ಟು ಶೋಭಾಯಮಾನವಲ್ಲ!
ಟೂವೀಲರ್‌ನಲ್ಲಿ ಟೂರ್ ಹೊರಡುವಾಗಲೇ ಅಮ್ಮನ ಹೊಟ್ಟೆ ಪುಕಪುಕ. ಅದು ಅಕ್ಕನಿಗೆ ತಿಳಿದು ಅಕ್ಕನ ಹೊಟ್ಟೆಯೂ ಪುಕಪುಕ!
ಎಲ್ಲಿಗೆ ಏನು ಅಂತ ತೀರ್ಮಾನಿಸದೆ ಹೊರಡುವ ನನ್ನ ಹೊಟ್ಟೆಯಲ್ಲಾದರೋ ಒಂಥರಾ ಪುಳಕ!
“ಹೋಗಿ ಬರ್ತೀನಿ!” ಎಂದು ಹೇಳಿ ಅಕ್ಕನ ಕಣ್ಣನ್ನು ನೋಡಿದೆ.
ಪಾಪ!
ಅವರ ಹೊಟ್ಟೆಯೊಳಗಿನ ಪುಕಪುಕ ಕಣ್ಣಿನಲ್ಲಿ ಅತಿ ಸ್ಪಷ್ಟವಾಗಿ ಕಾಣಿಸಿತು.
ರಾತ್ರಿ ಪ್ರಯಾಣ…, ಅದೂ ಟೂವೀಲರ್‌ನಲ್ಲಿ…!
ಅವರ ಹೆದರಿಕೆ ನನಗೆ ಅರ್ಥವಾಗುತ್ತದೆ. ಆದರೆ ಆ ಹೆದರಿಕೆಯನ್ನು ಮೀರಿ ಜೋಪಾನವಾಗಿ ನಾನು ಮನೆ ತಲುಪಿದಾಗ ಒಂದು ನಿರಾಳತೆ ಉಂಟಾಗುತ್ತದಲ್ಲಾ…?
ನನಗೆ ಅದು ಮುಖ್ಯ!!
ಅವರಿಗೆಷ್ಟು ನಿರಾಳತೆ ಉಂಟುಮಾಡುತ್ತಿದ್ದೇನೆ…!
ಹೊರಟೆ.
*
ಗಾಡಿ ಓಡಿಸುವಾಗ ನನ್ನ ಸ್ಪೀಡ್‌ಲಿಮಿಟ್ ಗಂಟೆಗೆ ಐವತ್ತು ಕಿಲೋಮೀಟರ್- ದಾಟುವುದಿಲ್ಲ.
ಪ್ರಯಾಣದ ಉದ್ದೇಶವೇ…, ಪರಿಪೂರ್ಣ ಕಂಟ್ರೋಲ್‌ನಿಂದ, ಆಚೆ ಈಚೆ ನೋಡುತ್ತಾ, ಗಾಡಿಯನ್ನು ಓಡಿಸುವುದು!
ಮೂವತ್ತು ಮೂವತ್ತೈದು ಕಿಲೋಮೀಟರ್‌ಗೆ ಒಂದು ಸ್ಟಾಪ್. ಅಲ್ಲೊಂದು ಟಿ, ಹೊಸ ಅನುಭವ, ಹೊಸ ಪರಿಚಯ, ಹೊಸ ಕಥೆಗೇನಾದರೂ ವಿಷಯದ ಹುಡುಕಾಟ!
ರಾಷ್ಟ್ರೀಯ ಹೆದ್ದಾರಿ. ಅಲ್ಲಲ್ಲಿ ಇನ್ನೂ ರಸ್ತೆಯ ಕೆಲಸ ನಡೆಯುತ್ತಿತ್ತು- ರಾತ್ರಿಯಾದರೂ.
ಅಕ್ಕನ ಮನೆಯಿಂದ ಹೊರಟು ಮೂರನೇಯ ಸ್ಟಾಪ್.
ಸಾಲಾಗಿ ನಿಲ್ಲಿಸಿದ ಲಾರಿಗಳನ್ನು ಕಂಡು- ನಿಲ್ಲಿಸಿದ್ದೆ.
ಲಾರಿಗಳು ನಿಲ್ಲಿಸುವಕಡೆ ಟಿ ಚೆನ್ನಾಗಿರುತ್ತದೆ ಅನ್ನುವುದೊಂದು ನಂಬಿಕೆ.
“ಒಂದು ಸ್ಟ್ರಾಂಗ್ ಟೀ…, ಸಕ್ಕರೆ ಕಮ್ಮಿ!” ಎಂದು ಅಂಗಡಿಯವನಿಗೆ ಹೇಳಿ ಸಿಗರೇಟೊಂದನ್ನು ಹಚ್ಚಿ ಸೇದತ್ತಾ ಸುತ್ತಲೂ ನೋಡಿದೆ.
ಲಾರಿ ಡ್ರೈವರ್‌ಗಳು, ಟೂರ್ ಹೋಗುತ್ತಿರುವ ಫ್ಯಾಮಿಲಿ, ನನ್ನಂತೆಯೇ ಗಾಡಿಯಲ್ಲಿ ಬಂದ ಹುಡುಗರು…, ಯಾವುದೇ ಆತುರವಿಲ್ಲದೆ ಟಿ ಕುಡಿಯುತ್ತಾ, ತಿಂಡಿ ತಿನ್ನುತ್ತಾ, ಮೈಮುರಿಯುತ್ತಾ, ಆಕಳಿಸುತ್ತಾ, ರಿಲಾಕ್ಸ್ ಆಗುತ್ತಾ….
“ಟಿ ತಗೋಳ್ಳಿ" ಎಂದು ಅಂಗಡಿಯವ ಹೇಳಿದ್ದು ನನ್ನನ್ನುದ್ದೇಶಿಯೇ ಅನ್ನುವುದು ಅರಿತು, ಟಿ ತೆಗೆದುಕೊಳ್ಳುತ್ತಾ, ಅವನನ್ನು ನೋಡಿ ಮುಗುಳುನಕ್ಕೆ. ಅವ ನಗಲಿಲ್ಲ.
ಟಿಯನ್ನು ಕುಡಿಯದೆ ಅಲ್ಲಿಯೇ ಇಟ್ಟು,
“ಎಷ್ಟು?” ಎಂದೆ.
“ಹದಿನೈದು" ಎಂದ.
ಕೊಟ್ಟು- ಅವನ ಅಂಗಡಿಯಿಂದ ಇನ್ನೊಂದು ಅಂಗಡಿಯಕಡೆಗೆ ಹೆಜ್ಜೆ ಹಾಕಿದೆ.
ಅವ ಅಯೋಮಯದಿಂದ ನೋಡುತ್ತಿದ್ದಾನೆ ಅನ್ನಿಸಿ ತಿರುಗಿನೋಡಿದೆ.
ಅವ ಟಿ ಚೆಲ್ಲಿ ಲೋಟ ತೊಳೆಯುತ್ತಿದ್ದ!
ಮತ್ತೆ ಟಿ ಬೇಡ ಅನ್ನಿಸಿತು. ಸೇದುತ್ತಿದ್ದ ಸಿಗರೇಟನ್ನು ಅರ್ಧಕ್ಕೆ ಎಸೆದು ಮತ್ತೊಂದು ಹೊತ್ತಿಸಿದೆ!
ಆಗ…, ಲಾರಿಯೊಂದು ಬಂದು ನಿಂತಿತು.
ಅದರಿಂದ ಅಪ್ಸರೆಯೊಬ್ಬಳು ಕೆಳಗಿಳಿದಳು!
ಕೆಂಪುಸೀರೆ, ಕೆಂಪು ಬ್ಲೌಸ್, ಕೆಂಪು ಬಳೆಗಳು, ಕೆಂಪು ಕುಂ-ಕು-ಮ, (ಕುಂಕುಮ ಕೆಂಪೇ ಅನ್ನಬೇಡಿ! ಒಂದು ಫ್ಲೋ!) ಕೆಂಪು ಲಿಪ್‌ಸ್ಟಿಕ್- ಅವಳೂ ಕೆಂಪೋ ಅಥವಾ ಅವಳು ಧರಿಸಿದ ದಿರಿಸಿನಿಂದಾಗಿ ಕೆಂಪಾಗಿ ಕಾಣಿಸುತ್ತಿದ್ದಾಳೋ ಒಟ್ಟು ಲಾರಿಯಿಂದ ಇಳಿದು ತಿರುಗಿದವಳು, ನಾನು ಅವಳನ್ನೇ ನೋಡುತ್ತಿರುವುದು ಕಂಡು- ಅವಜ್ಞೆಯ ನಗು ನಕ್ಕಳು!
ಅವಜ್ಞೆಯ ನಗು ನಗಬೇಕಾದವ ನಾನು!!
ನಗಲಿಲ್ಲ.
ಅವಳನ್ನೇ ನೋಡುತ್ತಿದ್ದೆ.
ಇವಳಿಗೇಕೆ ಈ ಉದ್ಯೋಗ- ಅನ್ನಿಸಿತು. ನಂತರ…, ಇವಳಿಗೆ ಈ ಉದ್ಯೋಗವೇ ಸರಿ ಎಂದೂ ಅನ್ನಿಸಿತು.
ಕಣ್ಣು ಮಿಟುಕಿಸದೆ ಅವಳನ್ನೇ ನೋಡುತ್ತಿರುವುದು ಕಂಡು ಸಮೀಪಕ್ಕೆ ಬಂದಳು. ನನ್ನ ನೋಟ ಬದಲಾಗಲಿಲ್ಲ. ಗೊಂದಲಗೊಂಡಳು. ಏನು ಅನ್ನುವಂತೆ ಹುಬ್ಬು ಕುಣಿಸಿದಳು. ನನ್ನಲ್ಲಿ ಯಾವ ವ್ಯತ್ಯಾಸವೂ ಕಾಣಿಸದ್ದರಿಂದ ನನ್ನನ್ನು ದಾಟಿ, ಟಿ ಅಂಗಡಿಯಕಡೆಗೆ ಹೋದಳು.
ನಾನು ತಿರುಗಿ ನೋಡಿದೆ. ಏನನ್ನಿಸಿತೋ ಏನೋ ಮತ್ತೆ ನನ್ನಬಳಿ ಬಂದಳು.
ಲಾರಿಯಿಂದ ಇಳಿದ ಡ್ರೈವರ್ ನಮ್ಮನ್ನು ದಾಟಿ ಹೋದ. ನನ್ನಬಳಿ ನಿಂತ ಅವಳನ್ನೋ ನನ್ನನ್ನೋ ಅವನು ಮೈಂಡ್‌ಏ ಮಾಡಲಿಲ್ಲ.
ಅವಳೆಡೆಗೆ ನೋಡಿದೆ. ಕಣ್ಣಿನಲ್ಲಿ ತುಂಟತನ!
ಅರ್ಥ ಹೊಳೆದು ಮೊದಲಬಾರಿ ನನ್ನ ಕಣ್ಣಿನ ಭಾವ ಬದಲಾಯಿತು. ಅದು ತಿಳಿದವಳಂತೆ…,
“ಇಲ್ಲೇ ಪಕ್ಕದಲ್ಲೇ ನಮ್ಮ ಮನೆ!” ಎಂದಳು.
“ಅದಕ್ಕೆ?” ಎಂದೆ.
ಒಂದು ಕ್ಷಣ ಗೊಂದಲ. ನಂತರ…,
“ಮನೆವರೆಗೆ ಬಿಟ್ಟು ಕೊಡುತ್ತೀರ?” ಎಂದಳು.
“ಇಲ್ಲ!” ಎಂದೆ.
ಅಯೋಮಯವಾಗಿ ನನ್ನನ್ನು ನೋಡಿ…,
“ಸರಿ! ನಿಮಗೆ ಆಸಕ್ತಿಯಿಲ್ಲ ಅನ್ನುವುದು ಗೊತ್ತಾಯ್ತು. ನಿಜಕ್ಕೂ ಕೇಳುತ್ತಿದ್ದೇನೆ- ಬಿಟ್ಟು ಕೊಡುತ್ತೀರ? ಯಾರಾದರೂ ರೇಪ್ ಮಾಡಿದರೂ ಪರವಾಗಿಲ್ಲ, ದರೋಡೆಮಾಡಿ- ಕೊಲೆ ಮಾಡಿದರೆ ಕಷ್ಟ!” ಎಂದಳು.
“ಅದನ್ನು ನಾನೇ ಮಾಡಿದರೆ?” ಎಂದೆ.
“ನಿಮ್ಮನ್ನು ನೋಡಿದರೆ ಹಾಗೆ ಮಾಡುವವರ ಹಾಗೆ ಕಾಣಿಸುವುದಿಲ್ಲ. ಒಂದುವೇಳೆ ಮಾಡಿದರೆ…, ವಿಧಿ!” ಎಂದಳು.
“ಈಗ ನಾನಿಲ್ಲಿ ಇಲ್ಲ ಅಂದಿದ್ರೆ ಏನು ಮಾಡುತ್ತಿದ್ದಿರಿ?” ಎಂದೆ.
ಒಂದುಕ್ಷಣ ನನ್ನ ಕಣ್ಣನ್ನೇ ದಿಟ್ಟಿಸಿ ನೋಡಿ- ಅವಳಪಾಡಿಗೆ ಹೆಜ್ಜೆ ಹಾಕಿದಳು.
ಹಿಂಬಾಲಿಸಿದೆ!
ಟಿ ಅಂಗಡಿಯವ ಕುತೂಹಲದಿಂದ ನಮ್ಮನ್ನೇ ನೋಡುತ್ತಿದ್ದ.
ನೂರು ನೂರೈವತ್ತು ಮೀಟರ್ ದೂರ ನಡೆದಿರಬಹುದು, ಒಂದು ಮನೆ ಕಾಣಿಸಿತು.
ನಿಂತೆ.
ಮನೆಯಲ್ಲಿ ಯಾರೂ ಇಲ್ಲ ಅನ್ನಿಸಿತು. ಅವಳು ಬಾಗಿಲು ತೆಗೆಯುವವರೆಗೆ ಕಾಯುತ್ತಿದ್ದು ಮರಳುವಾಗ…,
“ಪರವಾಗಿಲ್ಲ ಬನ್ನಿ. ಮೊಟ್ಟ ಮೊದಲಬಾರಿ ನಿಜವಾದ ಗಂಡಸನ್ನು ನೋಡುತ್ತಿದ್ದೇನೆ. ನೀವಿಲ್ಲದಿದ್ದರೆ ಆ ಟೀ ಅಂಗಡಿಯವ ಜೊತೆಗೆ ಬಂದು ಬಿಟ್ಟು ಹೋಗುತ್ತಿದ್ದ! ನೀವು ನನ್ನ ಹಿಂಬಾಲಿಸಿ ಬರುತ್ತೀರ ಅನ್ನಿಸಿಯೇ ಬಂದೆ. ನನ್ನಬಗ್ಗೆ ನಿಮಗೆ ಕುತೂಹಲ ಇದೆಯೋ ಇಲ್ಲವೋ…, ನಿಮ್ಮೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕು ಅನ್ನಿಸುತ್ತಿದೆ- ನಿಮಗೆ ಸಮಯವಿದ್ದು- ಸಮಸ್ಯೆಯೇನೂ ಇಲ್ಲದಿದ್ದರೆ!” ಎಂದಳು.
“ಸಮಯವೇನು? ಧಾರಾಳವಾಗಿದೆ. ಸಮಸ್ಯೆ ಆಸಕ್ತಿಯದ್ದು! ನಾನೀಗ ಕಥೆ ಬರೆಯುವುದನ್ನು ನಿಲ್ಲಿಸಿದ್ದೇನೆ! ಆದರೂ ನನ್ನರಿವಿಲ್ಲದೆ ನನ್ನೊಳಗಿನ ಕಥೆಗಾರ ಹುಡುಕಾಟದಲ್ಲಿರುತ್ತಾನೆ. ಅದಕ್ಕೇ ನಿಮ್ಮ ಹಿಂದೆ ಬಂದೆ. ಆದರೆ…, ಅದನ್ನೂ ಮೀರಿ- ಏನೋ ನಿರಾಸಕ್ತಿ!” ಎಂದೆ.
ಮನೆಯ ಹೊರಗಿನ ಲೈಟ್‌ಸ್ವಿಚ್ ಹಾಕಿ ತಿರುಗಿ ನೋಡಿದಳು.
ಅವಳ ಕಣ್ಣಿನಲ್ಲಿ ಆನಂದವಾ?
ಮನೆಯ ಹತ್ತಿರಕ್ಕೆ ಹೋಗಲಾ ಬೇಡವಾ ಅನ್ನುವಂತೆ ನಿಂತಿದ್ದ ನನ್ನ ಬಳಿಗೆ ಬಂದಳು.
ತೀರಾ ಹತ್ತಿರ ನಿಂತು ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿ…,
“ನನ್ನ ಹುಡುಕಾಟದ ಕೊನೆ ನೀವು! ಇನ್ನು ನೆಮ್ಮದಿ! ನಿಮ್ಮ ಅರಿವಿದ್ದೋ ಇಲ್ಲದೆಯೋ ನೀವು ನನಗೆ ಮಾಡಿದ ಸಹಾಯದ ಆಳ ನಿಮಗೆ ಗೊತ್ತಿಲ್ಲ! ಆ ಸಹಾಯ ಮಾಡಿದ ವ್ಯಕ್ತಿಯ ವ್ಯಕ್ತಿತ್ವದ ಆಳ ನನಗೆ ತೃಪ್ತಿ ನೀಡಿದೆ! ಯಾವತ್ತಾದರೂ ನನ್ನ ಬಗ್ಗೆ ಆಸಕ್ತಿಹುಟ್ಟಿ, ತಿಳಿದುಕೊಳ್ಳಬೇಕು ಅನ್ನಿಸಿದರೆ ಬನ್ನಿ!” ಎಂದು ಹೇಳಿ…,
“ಮನಸ್ಸಿನಿಂದ ನಾನು ವೇಶ್ಯೆಯಲ್ಲ- ಅದು ಆಯ್ಕೆ! ಅಷ್ಟು ಮಾತ್ರ ನೆನಪಿರಲಿ! ಗಂಡಸಿನ ಸೋಲಿನಲ್ಲಿ ನನ್ನ ತೃಪ್ತಿಯಿದೆ- ಆತನ ಆತ್ಮಾಭಿಮಾನಕ್ಕೆ ಕೊಡುವ ಒಂದೊಂದು ಪೆಟ್ಟೂ- ನನ್ನ ಗೆಲುವು! ನನ್ನೊಂದಿಗೆ ಸೇರಿದ ಯಾರೊಬ್ಬನೂ ಬೇರೊಂದು ಹೆಣ್ಣಿನೊಂದಿಗೆ ಸೇರಲು ಹಿಂಜರಿಯುತ್ತಾನೆ! ಕೆಲವರು ಸೋಲನ್ನು ಒಪ್ಪಿಕೊಳ್ಳಲಾಗದೆ ರಾಕ್ಷಸರಾಗುತ್ತಾರೆ! ಆಗ ಮಾತ್ರ ಕಷ್ಟ!” ಎಂದು ನಿಲ್ಲಿಸಿ,
“ಮೊಟ್ಟಮೊದಲಬಾರಿ ನಾನು ಯಾರೆಂದು ತಿಳಿದಿದ್ದೂ ಆಸಕ್ತಿವಹಿಸದ ಒಬ್ಬ ಪುರುಷನನ್ನು ನೋಡಿದೆ. ಆ ಪುರುಷನಿಗೆ…, ವೇಶ್ಯೆಯಲ್ಲದ, ನನ್ನೊಳಗಿನ ನಿಜ ಹೆಣ್ಣಿನ ಪ್ರೇಮ ಸೂಚಕವಾಗಿ-” ಎಂದು ನಿಲ್ಲಿಸಿ, ನನ್ನ ಕಣ್ಣುಗಳನ್ನೇ ನೋಡಿ…,
“ನಿಮ್ಮಂತಾ ಗಂಡಸರೂ ಇದ್ದಾರೆನ್ನುವ ಅರಿವು ಮೂಡಿಸಿದ ಕೃತಜ್ಞತೆಯಾಗಿಯಾದರೂ ಇರಲಿ!” ಎಂದು ಹೇಳಿ ನನ್ನ ಮುಖವನ್ನು ಅವಳ ಬೊಗಸೆಗೆ ತೆಗೆದುಕೊಂಡು ಗಾಢವಾಗಿ ಚುಂಬಿಸಿದಳು.
ಮೆದುಳಿಗೆ ನುಗ್ಗಿದ ರಕ್ತದ ಒತ್ತಡದಿಂದಾಗಿ ತೂರಾಡಿದೆ.
ನಂತರ ಅಲ್ಲಿ ನಿಂತುಕೊಳ್ಳಲಿಲ್ಲ. ನನ್ನ ಮನಸ್ಸು ಪರಿಪೂರ್ಣವಾಗಿ ನನ್ನ ನಿಯಂತ್ರಣದಲ್ಲಿದೆಯೆನ್ನುವ ನನ್ನ ಅಹಂಕಾರಕ್ಕೆ ಎಲ್ಲಿ ಧಕ್ಕೆ ಬರುವುದೋ ಅನ್ನುವ ಹೆದರಿಕೆಯಿಂದ ಹೊರಟುಬಂದೆ.
*
ಮನೆ ತಲುಪಿದ ಒಂದೆರಡುದಿನ ಒದ್ದಾಡಿದೆ!
ನನ್ನ ಅನುಭವಕ್ಕೆ ಬರದೇ ಇದ್ದಿದ್ದರೆ ಈ ಘಟನೆಯನ್ನು ನಾನು ನಂಬುತ್ತಿದ್ದೆನೆ?
ಈಗಲಾದರೂ ನಿಜವಾಗಿ ನಂಬಿದ್ದೇನೆಯೇ?
ನಂಬದೆ ವಿಧಿಯಿಲ್ಲ! ಬದುಕಿನಲ್ಲಿ ಏನೂ ಸಾಧ್ಯ! ಆ ಸಾಧ್ಯತೆಯಿಂದಾಗಿಯೇ ನನ್ನೊಳಗೊಂದು ತುಮುಲ. ಒಂದು ವಿಚಿತ್ರವಾದ ಕೋರಿಕೆ!
ವ್ಯಕ್ತಿತ್ವವಿರುವ ಹೆಣ್ಣು ಯಾವತ್ತಿಗೂ ನನ್ನ ಆಕರ್ಷಣೆಯೇ…!
ದೈಹಿಕವಾಂಛೆಯನ್ನು ಮೀರಿ ಅವಳಿಗೆ ನಾನು ಇಷ್ಟವಾಗಿದ್ದೇನೆಂದರೆ…, ಉಳಿದ ಬದುಕು ಅವಳೊಂದಿಗೆ ಕಳೆದರೆ ಹೇಗಿರುತ್ತದೆ? ಏನಿದ್ದರೂ ಡಿವೋರ್ಸ್ ಆಗಿ ಒಬ್ಬನೇ ಅಬ್ಬೇಪಾರಿಯಂತೆ ಅಲೆದಾಡುತ್ತಿರುವವ!
ಅವರವರ ಸ್ವಾತಂತ್ರ್ಯ ಉಳಿಸಿಕೊಂಡು ಒಬ್ಬರಿಗೊಬ್ಬರು- ಅನ್ನುವಂತೆ ಬದುಕಲಾಗದೇ?
ಅವಳನ್ನು ತಿಳಿದುಕೊಳ್ಳಬೇಕು, ನನ್ನ ಬದುಕಿಗೆ ಆಹ್ವಾನಿಸಬೇಕು ಅನ್ನುವ ದೃಢನಿಶ್ಚಯದೊಂದಿಗೆ ಹೊರಟೆ.
*
ತಲುಪಿದಾಗ ಸಂಜೆಯಾಗಿತ್ತು. ಮೊನ್ನೆ ನಾನು ಟಿ ತೆಗೆದುಕೊಂಡು ಕುಡಿಯದೇ ಬಿಟ್ಟ ಅಂಗಡಿ- ಆಗತಾನೆ ತೆಗಯುತ್ತಿದ್ದ.
ಅಲ್ಲಿಯೇ ಗಾಡಿ ನಿಲ್ಲಿಸಿ ನಡೆದುಕೊಂಡು ಹೊರಟೆ.
ಅವ್ಯಕ್ತವಾದ ಭಾವನೆಯೊಂದು ಹರಿದಾಡಿ ಎದೆ ದಬದಬನೆ ಬಡಿದುಕೊಳ್ಳುತ್ತಿತ್ತು.
ಹೌದು…, ಮನೆ ನಿರ್ಮಾನುಷ್ಯವಾಗಿದೆ!!
ಎಷ್ಟೋ ಎಷ್ಟೋ ಎಷ್ಟೋ ದಿನಗಳಿಂದ ಅನ್ನುವಂತೆ!
ಇದನ್ನು ಒಪ್ಪಲು ನನ್ನ ಮನಸ್ಸು ತಯಾರಾಗಲಿಲ್ಲ.
ಭ್ರಮೆಗೆ ಒಳಗಾಗುವುದಕ್ಕೂ ಒಂದು ಮಿತಿಯಿಲ್ಲವೇ?
ಹೆಣ್ಣನ್ನು ಕಂಡಂತೆ ಭ್ರಮೆಯಾಗಬಹುದು! ಆದರೆ ಆ ಹೆಣ್ಣು…, ನಿರ್ಮಾನುಷ್ಯವಾದ ಮನೆ ಜನರಿರುವಂತೆಯೂ, ಕರೆಂಟ್ ಹೊತ್ತಿಕೊಳ್ಳುವಂತೆಯೂ ಭ್ರಮೆಯುಂಟಾಗುವಂತೆ ನನ್ನ ಮನಸ್ಸನ್ನು ನಿಯಂತ್ರಿಸುವುದೆಂದರೆ?
ನಾನು ಅಷ್ಟು ದುರ್ಬಲನೆ?
ತಪ್ಪಾದ ಪ್ರಶ್ನೆ!
ನನ್ನ ಮನಸ್ಸು ಅಷ್ಟು ದುರ್ಬಲವೇ?
ಮನೆಯನ್ನೊಮ್ಮೆ ಸುತ್ತಿಬಂದೆ.
ಬಾಗಿಲಿಗೆ ಹಾಕಿದ್ದ ಬೀಗ- ಎಷ್ಟೋ ದಿನದಿಂದ ಬಳಸಿಲ್ಲ ಅನ್ನುವುದನ್ನು ಸಾಬೀತು ಮಾಡುವಂತೆ- ತುಕ್ಕು ಹಿಡಿದಿತ್ತು.
ಅವಳಬಗ್ಗೆ ಹುಟ್ಟಿದ ಆಸಕ್ತಿಗೆ ಉತ್ತರ…, ಟಿ ಅಂಗಡಿಯವನಿಂದ ದೊರಕುತ್ತದೆ ಅನ್ನಿಸಿ- ಗಾಡಿಯಬಳಿಗೆ ಬಂದೆ.
ಆಗತಾನೆ ಹಾಲನ್ನು ಕುದಿಯಲು ಇಟ್ಟಿದ್ದ.
ನಾನು ನಗಲಿಲ್ಲ!
“ಒಂದು ಟಿ" ಎಂದಷ್ಟೆ ಹೇಳಿದೆ.
ಅವ ಮುಗುಳುನಕ್ಕು…,
“ಒಂದೈದ್‌ನಿಮಿಷ ಸರ್…, ಈಗತಾನೆ ಇಟ್ಟಿದೀನಿ!” ಎಂದ.
ಸಿಗರೇಟು ಹಚ್ಚುತ್ತಾ…,
“ಆ ಮನೆಯಲ್ಲಿದ್ದವರಿಗೆ ಏನಾಯಿತು?” ಎಂದು ಕೇಳಿದೆ.
ಅವನ ಮುಖದಲ್ಲಿ ಗೊಂದಲ.
“ಅದೇ…, ರಾತ್ರಿಹೊತ್ತು ನೀವು ಮನೆವರೆಗೆ ಜೊತೆಗೆ ಹೋಗಿ- ಬಿಟ್ಟು ಬರುತ್ತಿದ್ದರಲ್ಲ- ಅವರಿಗೆ!” ಎಂದೆ.
ಅವನ ಮುಖದಲ್ಲಿನ ಭಾವ ಹೆದರಿಕೆಯಾ? ಆಶ್ಚರ್ಯವಾ? ಗೊಂದಲವಾ?
“ಯಾ…, ಯಾರು? ಆ ಸೂಳೆಯ ಮನೆಯವರಿಗಾ? ಮೊನ್ನೆ ನೀವೇನಾ ಆಕಡೆಗೆ ಹೋಗಿದ್ದು?” ಎಂದ.
ಹೌದೆನ್ನುವಂತೆ ತಲೆಯಾಡಿಸಿದೆ.
“ಒಬ್ಬರೇ ಹೋಗೋದು ನೋಡಿದಾಗಲೇ ಅನ್ನಿಸಿತು- ಅವರ ಪರಿಚಯ ನಿಮಗಿದೆ ಅಂತ!” ಎಂದ.
ಅವಳು ಲಾರಿಯಿಂದ ಇಳಿದುಬಂದದ್ದು ನನ್ನೊಬ್ಬನ ಅನುಭವ!! ಲಾರಿ ಡ್ರೈವರ್ ಯಾಕೆ ಮೈಂಡ್ ಮಾಡಲಿಲ್ಲವೋ ಈಗ ತಿಳಿಯಿತು!
“ಅವರ ಪರಿಚಯವೇನೂ ಇರಲಿಲ್ಲಾರೀ…, ಈ ರೋಡಲ್ಲಿ…, ಜಾಸ್ತಿ ಲಾರಿಗಳು ನಿಲ್ಲಿಸೋ ಕಡೆ, ಒಂದು ಖಾಲಿ ಮನೆಯಿದೆ ಅಂತ ಯಾರೋ ಹೇಳಿದ್ದರು! ಆ ಮನೆ ಯಾಕೆ ಖಾಲಿ ಇದೆ ಅಂತ ಹೇಳಲಿಲ್ಲ! ಅದಕ್ಕೆ ಕೇಳಿದೆ!” ಎಂದೆ.
“ಮನೆಯವರು ಅಂತ ಯಾರೂ ಇರಲಿಲ್ಲ ಸರ್…, ಗಂಡ ಹೆಂಡತಿ ಇದ್ದರು…, ಗಂಡ ಅವಳ ಚಿನ್ನವನ್ನೆಲ್ಲಾ ತಗೊಂಡು ಒಂದುದಿನ ಪರಾರಿಯಾದ! ಅವತ್ತಿಂದ ಅವಳು ಸೂಳೆಯಾದಳು!” ಎಂದ.
ಸೂಳೆಯೇ ಯಾಕಾದಳು ಎಂದು ಅವನನ್ನು ಕೇಳಲಿಲ್ಲ. ಕೇಳಿದ್ದು…,
“ಚಿನ್ನವನ್ನೆಲ್ಲಾ ತೆಗೆದುಕೊಂಡು ಪರಾರಿಯಾದ ಅಂತ ಅವಳು ಹೇಳಿದಳೇ?”
“ಹೌದು ಸಾರ್…, ತುಂಬಾ ಹೊಡೆದು ಬಡಿದೂ ಮಾಡ್ತಿದ್ದ. ಒಂದ್‌ದಿನ ತಿರುಗಿಸಿ ಒಂದ್‌ಕೊಟ್ಟಿದಾಳೆ! ಅಣ್ಣ ಅವತ್ತೇ ರಾತ್ರಿ ನಾಪತ್ತೆ!” ಎಂದ.
“ಆಮೇಲೆ ಅವಳಿಗೇನಾಯ್ತು?” ಎಂದು ಕೇಳಿದೆ.
“ಅವಳು ಸೂಳೆಯಾದಳು! ತುಂಬಾ ಓದ್ಕೊಂಡಿರೋ ಹುಡುಗಿ ಯಾಕೆ ಹಾಗೆ ಮಾಡಿದ್ಲೋ ಗೊತ್ತಿಲ್ಲ ಸಾರ್… ಇಲ್ಲಿಂದ ಯಾವುದಾದ್ರೂ ಲಾರಿ ಹತ್ತಿ ಭದ್ರಾವತಿತನ್ಕ ಹೋಗೋಳು, ಅಲ್ಲಿಂದ ಯಾವುದಾದ್ರೂ ಲಾರಿ ಹತ್ತಿ ಇಲ್ಲಿಗೆ ಬರೋಳು! ಇಲ್ಲಿಂದ ಮನೆಗೆ ಹೋಗೋಕೆ ಹೆದರಿಕೆ- ನನ್ನ ಕೇಳೋಳು! ಬಿಟ್ಕೊಡ್ತಿದ್ದೆ!” ಎಂದು ನಿಲ್ಲಿಸಿ ದೀರ್ಘವಾದ ನಿಟ್ಟುಸಿರೊಂದು ಬಿಟ್ಟು. ಟಿ ಕೊಡುತ್ತಾ…,
“ಒಂದ್‌ದಿನ ಯಾವೋನೋ ಲಾರಿಯವನೊಬ್ಬ ನಾನೇ ಬಿಟ್ಕೊಡ್ತೀನಿ ಅಂತ ಜೊತೆಗೆ ಹೋದ ಸರ್! (ಒಂದು ಕೆಟ್ಟ ಪದ ಬಳಸಿ)…. ರೇಪ್ ಮಾಡೋದ್ ಮಾಡ್ದ, ಕೊಲೆ ಯಾಕ್ಸಾರ್ ಮಾಡ್ಬೇಕಿತ್ತು? ಹೆಣ ನಾನೂ ನೋಡ್ದೇ ಸಾರ್…, ಯಪ್ಪ! ಸೂಕ್ಷ್ಮವಾದ ಜಾಗಕ್ಕೆ ರಾಡ್ ಹಾಕಿ, ಎದೆಯೆಲ್ಲಾ ಕಿತ್ತು, ಮುಖಾನ ಕೈಮಾ ಮಾಡ್ಬಿಟ್ಟಿದ್ದ! ತುಂಬಾ ದೊಡ್ಡ ಸುದ್ದಿಯಾಗಿತ್ತು” ಎಂದ.
ಆ ಸುದ್ದಿ ನಾನೂ ಓದಿದ್ದೆ! ಹೆಚ್ಚೂ ಕಮ್ಮಿ ಒಂದು ವರ್ಷವಾದರೂ ಆಗಿರಬೇಕು…
“ಆಮೇಲೆ ಅದರಬಗ್ಗೆ ಏನಾದ್ರೂ ಸುದ್ದಿ? ಆ ಡ್ರೈವರ್‌ಸಿಕ್ಕಿದ್ನ ಹೇಗೆ?” ಎಂದು ಕೇಳಿದೆ.
“ಇಲ್ಲ ಸರ್…, ಎಷ್ಟೋ ಲಾರಿಗಳು ಬರುತ್ವೆ ಹೋಗುತ್ವೆ! ಇಲ್ಲಿ ಸಿಸಿ-ಕ್ಯಾಮೆರಾನೂ ಇಲ್ಲ! ಎಲ್ಲಿಯವನೋ, ಯಾವ ಲಾರಿಯೋ ಒಂದೂ ಗೊತ್ತಾಗ್ಲಿಲ್ಲ!” ಎಂದ.
“ಆ ಮನೆ?” ಎಂದೆ.
“ಆವಾಗಿಂದ ಹಾಗೇ ಇದೆ- ಖಾಲಿ!” ಎಂದ.
ಅಂದರೆ ಅವಳೆಂಬ ಅನುಭವ ನನ್ನೊಬ್ಬನದು!! ಇಲ್ಲದಿದ್ದರೆ ಏನಾದರೂ ಕಥೆಗಳನ್ನುಹೇಳಿರುತ್ತಿದ್ದ!!
ನನ್ನ ಮನದೊಳಗೊಂದು ಸಣ್ಣ ಸಂಶಯ- ನಾನೇ ಯಾಕೆ?
*
ಒಂದುವರ್ಷ ಮುಂಚೆ…, ಹೀಗೆಯೇ…, ನಾನೊಂದು ಪ್ರಯಾಣ ಹೊರಟಿದ್ದೆ. ಆದರೆ ಆಗ ಮೊದಲೇ ಅಕ್ಕನ ಮನೆಗೆ ಹೋಗಿ ಅಲ್ಲಿಂದ ಬೇರೆಲ್ಲೆಲ್ಲಿಯೋ ಸುತ್ತಿ ಬಿಸ್ಲೆ ಘಾಟ್ ದಾರಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೆ. ಮಧ್ಯೆ ಪ್ರಕೃತಿಯ ಅದ್ಭುತವಾದ ಸೌಂಧರ್ಯವನ್ನು ಕಂಡು- ಒಂದೈದು ನಿಮಿಷ ನಿಂತು ಹೊರಡುವುದೆಂದು ರಸ್ತೆಯ ಬದಿಯಲ್ಲಿ ಗಾಡಿ ನಿಲ್ಲಿಸಿದೆ. ರಸ್ತೆಯ ಅಂಚಿನಲ್ಲಿ ಕಟ್ಟೆಯೊಂದನ್ನು ಕಟ್ಟಿದ್ದರು. ಆಚೆ- ನೂರು ಅಡಿಯಾದರೂ ಆಳವಿರಬಹುದಾದ ಪ್ರಪಾತ! ಕಟ್ಟೆಯಮೇಲೆ ಹತ್ತಿ ಕೆಳಕ್ಕೆ ನೋಡಿದೆ. ಬದುಕು ಮುಗಿಸಲು ಕ್ಷಣ ಸಾಕು- ಅನ್ನಿಸಿತು! ಆದರೆ ನಾನು ಬದುಕನ್ನು ಪ್ರೀತಿಸುವವ- ಹೃದಯ ದಬದಬನೆ ಬಡಿದುಕೊಳ್ಳುತ್ತಿದ್ದರೂ ಆ ಥ್ರಿಲ್- ಮಜವಾಗಿತ್ತು! ದೂರದಲ್ಲಿ ಯಾವುದೋ ಗಾಡಿ- ಬಸ್ಸೋ ಲಾರಿಯೋ- ಬರುತ್ತಿರುವ ಶಬ್ದವಾಗಿ ನನ್ನ ಗಾಡಿಯನ್ನೊಮ್ಮೆ ನೋಡಿದೆ. ಆ ಗಾಡಿಗೆ ಹೋಗಲು ದಾರಿ ಸಾಲದು ಅನ್ನಿಸಿ, ಮತ್ತಷ್ಟು ಸೈಡಿಗೆ ಹಾಕಲು- ಕಟ್ಟೆಯಿಂದ ಕೆಳಗಿಳಿದು ನನ್ನ ಗಾಡಿಯಬಳಿಗೆ ಬರುವಾಗ ಲಾರಿಯೊಂದು ನುಗ್ಗಿ ಬರುತ್ತಿತ್ತು. ಅದು ಬರುತ್ತಿರುವ ರೀತಿಯನ್ನು ನೋಡಿ- ಗಾಡಿ ಹೋದರೆ ಹೋಯಿತು ಪ್ರಾಣ ಹೋದರೆ ಕಷ್ಟವೆಂದು ರಸ್ತೆಯ ಪಕ್ಕಕ್ಕೆ ಓಡುವಾಗ ದುಂಡಾದ ಕಲ್ಲೊಂದನ್ನು ತುಳಿದು, ಅದು ರಸ್ತೆಗೆ ಉರುಳಿ, ಬರುತ್ತಿರುವ ಲಾರಿಯ ಮುಂದಿನ ಚಕ್ರ ಅದರಮೇಲೆ ಏರಿ, ಡ್ರೈವರ್‌ನ ಕಂಟ್ರೋಲ್ ತಪ್ಪಿ, ನನ್ನ ಗಾಡಿಗೆ ಗುದ್ದಿತು ಅಂದುಕೊಳ್ಳುವಾಗ- ಒಂದಿಂಚು ವ್ಯತ್ಯಾಸದಲ್ಲಿ ಪ್ರಪಾತಕ್ಕೆ ಮಗುಚಿತು!
ನನ್ನೊಬ್ಬನಲ್ಲಿ ಉಳಿದುಹೋದ ರಹಸ್ಯ! ಕಾರಣ ನಾನಲ್ಲದಿದ್ದರೂ ಒಂದು ಸಣ್ಣ ಕೊರಗಿತ್ತು ಮನಸ್ಸಿನಲ್ಲಿ!
ಆ ಲಾರಿಯೂ- ಡ್ರೈವರೂ ಈ ಲಾರಿಯೂ- ಡ್ರೈವರೂ ಒಂದೇ ಆಗಿದ್ದರೆ?
*
ಟಿ- ಲೋಟವನ್ನು ಖಾಲಿ ಮಾಡಿ ಮತ್ತೊಂದು ಸಿಗರೇಟು ಹಚ್ಚಿದೆ.
“ಸಾರ್…, ನಾನು ಅವಳನ್ನು ಮನೆವರೆಗೆ ಬಿಟ್ಟುಕೊಡ್ತಿದ್ದೆ ಅನ್ನೋದು ನಿಮಗೆ ಹೇಗೆ ಗೊತ್ತಾಯ್ತು?” ಎಂದ ಗೊಂದಲದಿಂದ- ಆಗ ನೆನಪಾದವನಂತೆ.
“ಮೊನ್ನೆ ಅವಳೇ ಹೇಳಿದಳು!” ಎಂದೆ.
ಅಯೋಮಯನಾಗಿ ನೋಡಿದ.
ಅವ್ಯಕ್ತವಾಗಿ ಯಾರಾದರೂ ನನ್ನನ್ನು ಆವರಿಸುತ್ತಾರೆ, ತಮ್ಮ ಸಾನ್ನಿಧ್ಯ ತೋರಿಸುತ್ತಾರೆಂದು- ಸಿಗರೇಟು ಸೇದಿ ಮುಗಿಯುವವರೆಗೆ ಕಾದೆ.
ಇಲ್ಲ…, ಯಾವ ಅನುಭವವೂ ಆಗಲಿಲ್ಲ.
ಟಿ ಅಂಗಡಿಯವ ನನ್ನನ್ನೇ ನೋಡುತ್ತಿದ್ದ. ಅವನನ್ನು ಅದೇ ಗೊಂದಲದಲ್ಲಿ ಬಿಟ್ಟು ಮತ್ತೊಮ್ಮೆ ಆ ಮನೆಯಬಳಿಗೆ ಹೋದೆ.
ಇಲ್ಲ…! ಅವಳೊಂದು ಮರೀಚಿಕೆ!
ಇನ್ನು ಹೊಸ ಅನುಭವಗಳಿಗೆ ತೆರೆದುಕೊಳ್ಳಬೇಕಷ್ಟೆ!
ಮರಳಿ ಬಂದು ಗಾಡಿಯಬಳಿಗೆ ಹೋಗುವಾಗ…,
“ಆ ಮನೆ ತಗೋತೀರಾ ಸರ್?” ಎಂದು ಕೇಳಿದ ಟಿ ಅಂಗಡಿಯವ.
“ಯಾವ ಮನೆ?” ಎಂದು ಕೇಳಿ ಅವನನ್ನು ಮತ್ತಷ್ಟು ಗೊಂದಲಕ್ಕೆ ಕೆಡವಿ ಗಾಡಿ ಹತ್ತುವಾಗ…,
‘ಅವಳು' ಫೋನ್ ಮಾಡಿದಳು!
“ಹೊಸ ಕಥೆ ಬರಿ ನವನೀತ- ನನ್ನ ಬೆಣ್ಣೆ!!!”
ಫೋನನ್ನು ನಡುರಸ್ತೆಗೆ ಎಸೆದೆ. ನನ್ನ ಮೇಲಿನ ಅವಳ ‘ಇದ’ನ್ನು ನಾನು ಪರೀಕ್ಷಿಸುವುದೇ ಹೀಗೆ! ಸುತ್ತಾಟದ ಕೊನೆಗೆ ಮನೆ ತಲುಪುವಾಗ ಹೊಸದೊಂದು ಫೋನ್ ಬಂದಿರುತ್ತದೆ- ಅವಳ ಕಡೆಯಿಂದ. ಗೊತ್ತು..., ಪ್ರತಿ ಕ್ಷಣದ ನನ್ನ ಮೇಲಿನ ಅವಳ ಪ್ರೇಮವೇ ನನ್ನ ಸಂರಕ್ಷಣೆ! ಜೀವನದಲ್ಲಿ ಒಮ್ಮೆ ಮಾತ್ರ ಭೇಟಿಯಾಗಿರುವ, ಇನ್ನುಮುಂದೆ ಭೇಟಿಯಾಗುತ್ತೇವೋ ಇಲ್ಲವೋ ತಿಳಿಯದ ಅವಳು ನನ್ನನ್ನು ಆವರಿಸಿಕೊಂಡಿರುವಷ್ಟು ಬೇರೆ ಯಾರೂ ಆವರಿಸಿಕೊಂಡಿಲ್ಲ ಕೂಡ. ಅದಕ್ಕೇ…, ಅವಳೆಂದರೆ ನನಗೆ ಗಮನವೇ ಇಲ್ಲ!!
ಅಮ್ಮ - ಅಕ್ಕನ ಹೊಟ್ಟೆಯ ಪುಕಪುಕ ಮತ್ತಷ್ಟು ಹೆಚ್ಚಿಸಲೆಂಬಂತೆ ಹೊರಟೆ- ಎಲ್ಲಿಗೆಂದಿಲ್ಲದೆ- ಅನ್ನುತ್ತೇನೆ ಹೊರತು ಅವಳ ಹೊಟ್ಟೆಯ ಚಿಂತೆ ನನಗೆ ಬರುವುದೇ ಇಲ್ಲ!!
ಮನೆ ತಲುಪಿ ಅಮ್ಮ ಅಕ್ಕನಿಗೆ ನಿರಾಳತೆ ತರುತ್ತೇನಲ್ಲ?
ಹಾಗೆ…,
ಅವಳು ಹೇಳಿದಮೇಲೆ ಕಥೆ ಬರೆಯುತ್ತೇನಲ್ಲಾ?!!
ತುಂಬಾ ದಿವಸಕ್ಕೆ ನಿಮ್ಮ ಬರಹನೋಡಿ ಚಂದದ ಕಥೆ..ತುಂಬಾ ಖುಷಿ ಆಯಿತು ನಿಮ್ಮ ಸಾಹಿತ್ಯ ಅಚ್ಚಿ ಅಳಿಯದೆ ಜೀವಂತವಾಗಿರಲಿ ಇನ್ನು ಅತ್ಯುತ್ತಮ ಬರಹಗಳ ಮೂಲಕ ಸಮಾಜದ ಅಜ್ಞಾನದ ಕಣ್ಣು ತೆರೆಸಿ ವಾಸ್ತವದ ಕಡೆ ಸಾಗಲಿ ನಿಮ್ಮ ಸಾಹಿತ್ಯ ಪ್ರಿಯರು ಉತ್ತಮ ದಾರಿಯಲ್ಲಿ ಉತ್ತುಂಗಕ್ಕೆ ಏರಲಿ..🌹🌹🌹🌹ಇನ್ನಷ್ಟು ಅದ್ಭುತ ಸಾಹಿತ್ಯ ನಿಮ್ಮಿಂದ ಹೊರಬರಲಿ ಶುಭದಿನ ಕಥೆಗಾರರೇ 🌹🌹
ReplyDelete