ಅವಳೆಂಬ ವಾರಿಧಿ!
ಬಸ್ಸಿನಿಂದ ಇಳಿಯುತ್ತಿರುವ ಅವಳನ್ನೇ ನೋಡುತ್ತಿದ್ದೆ. ಇಳಿಯುವಾಗಲೇ ಒಮ್ಮೆ ನನ್ನನ್ನು ನೋಡಿದವಳ ಕಣ್ಣಿನ ಹೊಳಪು…, ಇಳಿದು ನನ್ನೆಡೆಗೆ ಹೆಜ್ಜೆ ಹಾಕಿದಳು. ಬೂದಿಬಣ್ಣದ ಸೀರೆ ಎಷ್ಟು ಚಂದಕ್ಕೆ ಉಟ್ಟಿದ್ದಾಳೆಂದರೆ.., ಸೀರೆ ಉಡುವುದರಲ್ಲಿ ಪಿಹೆಚ್‌ಡಿ ಮಾಡಿದ್ದಾಳೇನೋ ಅನ್ನಿಸುವಂತಿತ್ತು! ಹತ್ತಿರಕ್ಕೆ ತಲುಪುತ್ತಿದ್ದಂತೆ ಮುಗುಳುನಗು ಅರಳುನಗುವಾಗಿ…, ಪ್ರಪಂಚವನ್ನು ಮರೆತೆ!
ಸುತ್ತಲಿನ ಪರಿಸರದ ಪರಿವೆಯೇನೂ ನಮಗಿರಲಿಲ್ಲ. ಎರಡೂ ಕೈಯಗಲಿಸಿದೆ- ಗಿಣಿಮರಿಯಂತೆ ತೆಕ್ಕೆಯೊಳಗೆ ಸೇರಿಕೊಂಡಳು. ಬಿಗಿದಪ್ಪಿ ತಲೆಯಮೇಲೊಂದು ಮುತ್ತು ಕೊಟ್ಟೆ.
ಮಾತಿಲ್ಲ. ಮೌನದಷ್ಟು ಅರ್ಥವತ್ತಾದ ಸಂವಹನವಿದೆಯೇ?
ಕೈಕೈಹಿಡಿದು ನಡೆಯತೊಡಗಿದೆವು.
ದೂರದಲ್ಲಿ ಸಮುದ್ರದ ಮೊರೆತ ಕೇಳಿಸುತ್ತಿತ್ತು.
ಇಬ್ಬರ ಮನೆಯಿಂದಲೂ ಸುಮಾರು ಮುನ್ನೂರು ಕಿಲೋಮೀಟರ್ ದೂರದ ಸಮುದ್ರತೀರ!
ನಿಧಾನಕ್ಕೆ ನಡೆಯುವಾಗ…, ಮಧ್ಯೆ…, ಇಬ್ಬರೂ ಹೇಳಿಕೊಂಡಂತೆ, ಒಂದೇ ಸಮಯಕ್ಕೆ ಪರಸ್ಪರ ಮುಖ ನೋಡುವುದು, ಮುಗುಳುನಗುವುದು….
ಇಬ್ಬರ ನಾಡಿಮಿಡಿತ- ಇಬ್ಬರಿಗೂ ಗೊತ್ತು.
ಸಮುದ್ರದ ಸಮೀಪಕ್ಕೆ ತಲುಪುತ್ತಿದ್ದಂತೆ…, ಬೋರ್ಗರೆಯುತ್ತಿರುವ ಅಲೆಗಳು ಅಬ್ಬರಿಸಿ ಬಂದು ಬಂಡೆಗಳಿಗೆ ಅಪ್ಪಳಿಸಿ ನೊರೆನೊರೆಯಾಗಿ ಮರಳುತ್ತಿದ್ದವು.
ನಡು ಮಧ್ಯಾಹ್ನವಾದ್ದರಿಂದ ಅಷ್ಟೊಂದು ಜನಸಂದಣಿಯಿರಲಿಲ್ಲ. ಮರಳಿಗೆ ಕಾಲೂರಿದಾಗ ಕೆಂಡದ ಮೇಲೆ ಕಾಲಿಟ್ಟ ಅನುಭವ…, ಅದರ ಅರಿವು ನಮಗಿರಲಿಲ್ಲ.
ಯಾರಾದರೂ ನಮ್ಮನ್ನೋ ನಾವು ಯಾರನ್ನೋ ಗಮನಿಸಲಿಲ್ಲ. ನಮ್ಮ ಪಾಡಿಗೆ ನಾವು ಸಮುದ್ರದೆಡೆಗೆ ನಡೆಯುತ್ತಿದ್ದೆವು- ಎಲ್ಲವನ್ನೂ ಮುಂಚೆಯೇ ತೀರ್ಮಾನಿಸಿಕೊಂಡಂತೆ!
ಬಿಗಿ ಹಿಡಿದ ಕೈ…, ಹಿಂಜರಿಕೆಯಿಲ್ಲದ ಹೆಜ್ಜೆ…, ಪರಸ್ಪರ ನೋಡುತ್ತಾ ಮುಂದಕ್ಕೆ…, ಮುಂದಕ್ಕೆ…, ಮುಂದಕ್ಕೆ!
ಒಟ್ಟಿಗೆ ಬದುಕಲೋ ಸಾಧ್ಯವಿಲ್ಲ…, ಆದರೆ…, ಅನ್ನುವಂತೆ…, ಎಷ್ಟು ದೂರ ಹೋದೆವೋ…, ಕೈ ಯಾವಾಗ ಸಡಿಲಗೊಂಡಿತೋ…,
ಇನ್ನು ಯಾವಾಗ…, ಯಾರೊಂದಿಗೆ..., ಯಾವತೀರಕ್ಕೆ ಹೋಗಬೇಕೋ ಅನ್ನುವ ಯೋಚನೆಯಲ್ಲಿ…, ಮರಳಿದೆ- ಒಬ್ಬನೇ!
Comments
Post a Comment