ಆತ್ಮಾವಲೋಕನ!
ಕೆಲವೊಮ್ಮೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ! ಈ ಮನುಷ್ಯರು ಯಾಕೆ ಇಷ್ಟೊಂದು ದುಃಖಿತರಾಗಿದ್ದಾರೆ…, ಯಾವಾಗಲೂ ಏನೋ ಕಳೆದುಕೊಂಡವರಂತೆ…, ಪ್ರಪಂಚದಲ್ಲಿರುವ ಅಷ್ಟೂ ದುಃಖ- ವಿಷಾದ ತಮಗೇ ಬಂದಂತೆ…! ಸಂತೋಷದ ಕ್ಷಣಗಳೇ ಹೆಚ್ಚಾಗಿದ್ದರೂ ಅದನ್ನು ಮರೆಮಾಚಿ, 'ವಿಷಾದಿತ' ಅನ್ನಿಸಿಕೊಳ್ಳುವುದು ಏನೋ ದೊಡ್ಡಸ್ತಿಕೆ ಅನ್ನುವಂತೆ…!
ಯಾಕೆ?
ಹಾಗೆಯೇ…,
ಈ ಪ್ರಪಂಚಕ್ಕೇ ಸಂಬಂಧಪಡದವನಂತೆ ನಾನು ಹೇಗೆ ಇಷ್ಟು ಖುಷಿಯಾಗಿ- ನೆಮ್ಮದಿಯಾಗಿ ಬದುಕಿದ್ದೇನೆ?
ತೀರಾ ಆಕಸ್ಮಿಕವಾಗಿ ಇದರಬಗ್ಗೆ ಯೋಚಿಸುವ ಸಂದರ್ಭ ಒದಗಿತು!
ಬೆಳಿಗ್ಗೆ ಮತ್ತು ಸಂಜೆ…, ಅಮ್ಮ ಮಗ ಒಟ್ಟಿಗೆ ಕುಳಿತು ಟಿ ಕುಡಿಯುತ್ತೇವೆ. ಆ ಸಮಯ ನಮ್ಮದು…, ಪ್ರಪಂಚದ ಅಷ್ಟೂ ಆಗುಹೋಗುಗಳ ಬಗ್ಗೆ ಮಾತುಕತೆಯಾಗುತ್ತದೆ. ಕೆಲವೊಮ್ಮೆ ಎರಡುಮೂರು ನಿಮಿಷಕ್ಕೆ ನಮ್ಮ ಮಾತುಗಳು ಮುಗಿದು ಇನ್ನು ಮಾತನಾಡಲು ಏನೆಂದರೆ ಏನೂ ಉಳಿದೇ ಇಲ್ಲವೇನೋ ಅನ್ನಿಸುತ್ತದೆ!
ಮತ್ತೆ ಕೆಲವೊಮ್ಮೆ…, ಮಾತನಾಡಿದಷ್ಟೂ ಮುಗಿಯುವುದೇ ಇಲ್ಲ!
ಹಾಗೇ ಮಾತುಕತೆಯಾಡುತ್ತಿದ್ದಾಗ…, ನನ್ನ ಬದುಕಿನ ನಷ್ಟಗಳ ಬಗ್ಗೆ ಮಾತು ಬಂತು!
ಅದು…, ಹುಟ್ಟಿನಿಂದಲೇ ಶುರುವಾಗಿದ್ದು!!!
ನಾನು ಹುಟ್ಟಿದ ವರ್ಷ…, ಜನಸಂಖ್ಯಾ ನಿಯಂತ್ರಣಕ್ಕೆ ಅನುಗುಣವಾಗಿ ನಿಯಮವೊಂದು ಚಾಲ್ತಿಗೆ ಬಂತು!
ಎರಡಕ್ಕಿಂತ ಹೆಚ್ಚಿನ ಮಕ್ಕಳಾದರೆ…, ಅವರಿಗೆ ಸರಕಾರದ ಅನುಕೂಲತೆಗಳು ಸಿಕ್ಕುವುದಿಲ್ಲ!!!
ಇಬ್ಬರು ಅಕ್ಕಂದಿರ ನಂತರ ನಾನು ಮೂರನೇಯವ!
ನಿಯಮ ಚಾಲ್ತಿಗೆ ಬಂದಿದ್ದು ನಾನು ಹುಟ್ಟಿದ ವರ್ಷವೇ ಆದರೂ…, ಅಲ್ಲೊಂದು ಸ್ವಾರಸ್ಯವಿದೆ!
ನಾನು ಹುಟ್ಟಿದ್ದು ಆಗಸ್ಟ್‌ನಲ್ಲಿ! ನಿಯಮ ಚಾಲ್ತಿಗೆ ಬಂದಿದ್ದು ಸೆಪ್ಟಂಬರ್‌ನಿಂದ!
ನಿಜ ಅರ್ಥದಲ್ಲಿ ಸರಕಾರದ ಆನುಕೂಲ್ಯತೆಗೆ ನಾವು ಅರ್ಹರಾಗಿದ್ದೆವು!
ಆದರೆ ಅದನ್ನು ಕೇಳಿ ಪಡೆಯಬಹುದೆನ್ನುವ ಅರಿವು ಆಗ ಅಮ್ಮನಿಗೋ ಅಪ್ಪನಿಗೋ ಇಲ್ಲವಾಗಿತ್ತು!!
ನಿಜಕ್ಕೂ…, ಸಿಗಬೇಕಾಗಿದ್ದ ರಜೆ, ಸಂಬಳದಂತಾ ಅನುಕೂಲತೆಗಳು ಸಿಗಲಿಲ್ಲ!
ಈ ವಿಷಯ ಅಮ್ಮ ಹೇಳಿದ ಮೇಲೆ…, ನನ್ನ ಯೋಚನೆಗಳು ಅದಕ್ಕೆ ಅನುಗುಣವಾದ ನನ್ನ ಬದುಕಿನ ಕೆಲವೊಂದು "ನಷ್ಟ"ಗಳೆಡೆಗೆ ಸರಿಯಿತು!
ಎಂಟನೆಯ ತರಗತಿಯವರೆಗೆ ಕೊಡಗಿನ ಸರಕಾರಿ ಶಾಲೆಯಲ್ಲಿ ಓದಿದವ ಒಂಬತ್ತನೇ ತರಗತಿಗೆ ಮೈಸೂರಿಗೆ ಬಂದೆ. ಆಗ ನನಗೆ ಪ್ರಾಥಮಿಕ ಶಾಲೆಯಿಂದ ಲೆಟರ್ ಒಂದು ಬಂತು. ಎರಡು ವರ್ಷ ನಡೆಸಲು ಸಾಧ್ಯವಾಗದೇ ಹೋದ "ಸ್ಕೂಲ್‌ಡೆ"ಯನ್ನು ಈ ವರ್ಷ ನಡೆಸುತ್ತಿದ್ದು…, ಬಂದು ಆ ಎರಡು ವರ್ಷದ ನನ್ನ ಸಾಧನೆಗಳಿಗೆ ಬಂದಿರುವ ಬಹುಮಾನಗಳನ್ನು ಪಡೆದುಕೊಳ್ಳಬೇಕು!!
ಹೋದೆ!
ಪಾಪ…! ನಾನು ಬಂದೇ ಬರುತ್ತೇನೆನ್ನುವ ಅರಿವು ಅವರಿಗಿರಲಿಲ್ಲ.
ನನ್ನನ್ನು ಕಂಡು ಆಶ್ಚರ್ಯವಾಯಿತು!
ಒಂದೊಂದು ಸಬ್ಜೆಕ್ಟ್‌ನಲ್ಲಿ ಅಧಿಕ ಅಂಕ ಪಡೆದುಕೊಂಡವರಿಗೆ ಇಷ್ಟು…, ಒಟ್ಟು ಅಂಕದಲ್ಲಿ ತರಗತಿಗೆ ಮೊದಲು ಬಂದವರಿಗೆ ಇಷ್ಟು ಅನ್ನುವ ಲೆಕ್ಕದಲ್ಲಿ…, ಎರಡು ವರ್ಷ…, ಪ್ರತಿ ಸಬ್ಜೆಕ್ಟ್‌ನಲ್ಲೂ..., ಪ್ರತಿ ತರಗತಿಗೂ…, ಮೊದಲು ಬಂದ ನನಗೆ ಬಹುಮಾನವಾಗಿ ಬಂದಿದ್ದು…, ಇಪ್ಪತ್ತು ರೂಪಾಯಿ!!
ಎರಡನೆ ಸ್ಥಾನ ಬಂದವರಿಗೆ, ಇತರೆ ನನ್ನ ಜ್ಯೂನಿಯರ್‌ಗಳಿಗೆ ಬಂದದ್ದು- ಒಂದು ವರ್ಷಕ್ಕೆ ಸಾವಿರ- ಎರಡು ಸಾವಿರ ರೂಪಾಯಿಗಳು!!!
ಆಮೇಲಾದರೂ ಅದನ್ನು ಪಡೆದುಕೊಳ್ಳಬೇಕೆನ್ನುವ ಯೋಚನೆ ಬರಲಿಲ್ಲ! ಮರಳಿದ್ದೆ!!
ನಂತರ ಹತ್ತನೇ ತರಗತಿಯಲ್ಲಿ…, ನನ್ನ ಪಿಟಿ ಸರ್ ಖಡಾಖಂಡಿತವಾಗಿ ಹೇಳಿದ್ದರು…, ಜಿಲ್ಲಾಮಟ್ಟದ ಕ್ರಿಕೆಟ್ ಸೆಲೆಕ್ಷನ್‌ಗೆ ತಯಾರಾಗು ನೀನು ಸೆಲೆಕ್ಟ್ ಆಗುತ್ತೀಯ ಎಂದು!
ಸೆಲೆಕ್ಷನ್‌ಗೆ ಒಂದು ವಾರ ಮುಂಚೆ ಅಪೆಂಡಿಕ್ಸ್ ಆಪರೇಷನ್ ಆಗಿ ಮಲಗಿದವ ಆಸ್ಪತ್ರೆಯಿಂದ ಮರಳಿದ್ದೇ ಒಂದು ತಿಂಗಳ ನಂತರ!!
ಮುಂದಿನ ವಿಷಯಗಳು ಇನ್ನೂ ತುಂಬಾ ಮಜವಾದದ್ದು!
ಮದುವೆ ಆದಮೇಲೆ ಕೆಲಸಕ್ಕೆ ಸೇರಿದವ ನಾನು!
ಪುಸ್ತಕಗಳನ್ನು ಡಿಜಿಟಲ್ ಪುಸ್ತಕಗಳಾಗಿ ಮಾಡುವ ಕಂಪೆನಿಯಲ್ಲಿ ಕೆಲಸ…, ಮಲಯಾಳಂ ಮತ್ತು ಕನ್ನಡಕ್ಕೆ ನಾನೇ ಪ್ರೂಫ್ ರೀಡರ್ ಆಗಿ…, ಪುಟಕ್ಕೆ ಇಂತಿಷ್ಟು ಅನ್ನುವ ಲೆಕ್ಕದಲ್ಲಿ ನನ್ನ “ಸ್ಯಾಲರಿ!”
ಮೊದಲು ಸ್ವಲ್ಪ ಅಡ್ವಾನ್ಸ್ ಕೊಟ್ಟಿದ್ದರು. ಒಪ್ಪಿಕೊಂಡ ಕೆಲಸವನ್ನು ಹೇಳಿದ ಸಮಯಕ್ಕೆ- ಆದಷ್ಟೂ ಪರ್ಫೆಕ್ಟ್ ಆಗಿ ಮುಗಿಸಿ ಕೊಡುವುದು ನನ್ನ ಜಾಯಮಾನ! ಮುಗಿಸಿ ಕೊಟ್ಟೆ ಕೂಡ…, ಆಗ ಒಂದು ವಿಷಯ ನಡೆಯಿತು…!
ನನಗೆ ಕೆಲಸ ಕೊಟ್ಟ ಕಂಪೆನಿಯ ಎಂ.ಡಿ ಆ ಕಂಪೆನಿಯನ್ನ ಬಿಟ್ಟು ಹೋದರು!!
ಆ ಎಂ.ಡಿ ಒಪ್ಪಿದಷ್ಟು ದುಡ್ಡು ಕೊಡಲಾಗುವುದಿಲ್ಲವೆಂದು ಹೇಳಿ…, ಅಡ್ವಾನ್ಸ್ ಎಷ್ಟು ಕೊಟ್ಟರೋ ಅದಕ್ಕಿಂತ ಒಂದು ರೂಪಾಯಿಯೂ ಹೆಚ್ಚು ಕೊಡಲಿಲ್ಲ- ಕಂಪೆನಿ!
ಅಂದರೆ ಹೆಚ್ಚೂ ಕಮ್ಮಿ ಒಂದು ಲಕ್ಷದಷ್ಟು ರೂಪಾಯಿ ಕೊಡಲಿಲ್ಲ….!!!
ಇನ್ನು ಒಂದು ಸಿನೆಮಾದಲ್ಲಿ ಅಸಿಸ್ಟಂಟ್ ಆಗಿ ಕೆಲಸ ಮಾಡಿದ್ದೆ! ನಾಲಕ್ಕೂವರೆ ಕೋಟಿ ಬಜೆಟ್‌ನ ಆ ಸಿನೆಮಾದಲ್ಲಿ ಸ್ಕ್ರಿಪ್ಟ್ ರೈಟಿಂಗ್‌ನಿಂದ ಹಿಡಿದು, ಆಕ್ಟರ್ ಆಗಿ…, ಸಿನೆಮಾ ಮುಗಿಯುವವರೆಗೆ ಒಂದು ದಿನವೂ ಆಬ್ಸೆಂಟ್ ಆಗದೆ ಕೆಲಸ ಮಾಡಿದವ ನಾನೊಬ್ಬನೇ!
ಲೆಕ್ಕದಲ್ಲಿ ಮೂರು ಮೂರೂವರೆ ಲಕ್ಷವಾದರೂ ಕೊಡಬೇಕು! ಒಂದು ರೂಪಾಯಿಯೂ ಬರಲಿಲ್ಲ!!
ಇನ್ನು ವಿವಾಹ ಜೀವನ…! ಮದುವೆಯಾಗಿ ಆರೂವರೆ ವರ್ಷಕ್ಕೆ ಗರ್ಬಿಣಿಯಾದ ಹೆಂಡತಿ…, ಹೆರಿಗೆಗೆಂದು ತವರಿಗೆ ಹೋದವಳು ಮರಳಿ ಬರಲಿಲ್ಲ! ಬಂದಿದ್ದು ಡಿವೋರ್ಸ್ ನೋಟೀಸ್…!
ಸಾಕು! ಇಷ್ಟು ವಿಷಯಗಳು…!
ಹಾಗೆಂದು ಇಷ್ಟನ್ನೇ ಹೇಳಿ ನಿಲ್ಲಿಸಿದರೆ…, ವಿಷಯ…, ಅಯ್ಯೋ ಪಾಪ ಅನ್ನಿಸುವಂತದ್ದು- ನನ್ನ ಬದುಕೇ ಟ್ರಾಜಡಿಯೇನೋ ಅನ್ನುವಂತದ್ದು!!
ಮುಂಚೆ ಕಥೆಗಳಾಗಿ ಇದನ್ನೆಲ್ಲಾ ಬರೆದಿದ್ದೇನೆ ಕೂಡ!
ಆ ಕಥೆಗಳೆಲ್ಲಾ ಇಷ್ಟಕ್ಕೇ ಮುಗಿಯುವುದರಿಂದ…, ಸಿಂಪತಿಗೆ ಕಾರಣವಾಗುವಂತಿದ್ದವು!
ಆದರೆ…, ಆ-ದ-ರೆ…, ಇದೇ ವಿಷಯಗಳನ್ನು ಇನ್ನೊಂದು ದೃಷ್ಟಿಕೋನದಲ್ಲಿ ನೋಡೋಣವಾ...?
ಸರ್ಕಾರದ ಅನುಕೂಲತೆಗಳು ದೊರಕಿದೆಯೋ ಇಲ್ಲವೋ…., “ನಾನು" ಹುಟ್ಟಿದ್ದೇನೆ- ಇದೇ ಅಪ್ಪ ಅಮ್ಮನ ಮಗನಾಗಿ!
ನಾವು ಮಕ್ಕಳಮುಂದೆ…, ಒಂದೆಂದರೆ ಒಂದೇ ಒಂದು ದಿನವೂ ಜಗಳವಾಡದ..., ಪ್ರೇಮಕ್ಕೆ ಪರ್ಯಾಯವೆನಿಸುವ…, ಆದರ್ಶ ದಂಪತಿಗಳಾದ ಅಪ್ಪ ಅಮ್ಮನ ಮಗನಾಗಿ ನಾನು “ಹುಟ್ಟಿದ್ದೇನೆ!”
ಅವರ ಪ್ರೇಮವೇ ನನ್ನದೂ! ಮೇಲು ಕೀಳೆನ್ನದೆ ಪ್ರತಿಯೊಬ್ಬರನ್ನೂ ಇಷ್ಟಪಡು- ಗೌರವಿಸು ಅನ್ನುವ ಸಂಸ್ಕಾರವನ್ನು ತುಂಬಿಕೊಟ್ಟ ಅಪ್ಪ ಅಮ್ಮನ ಮಗನಾಗಿ ನಾನು ಹುಟ್ಟಿದ್ದೇನೆ…!
ಅದಕ್ಕಿಂತಲೂ ಸಾರ್ಥಕತೆ ಏನಿದೆ?
ಇನ್ನು ಬಹುಮಾನದ ವಿಷಯ…! ಬಹುಮಾನ ಸಿಕ್ಕಿತೋ ಇಲ್ಲವೋ…, ಮೊದಲ ಸ್ಥಾನ ನನ್ನದೇ!!
ಮೊದಲ ಸ್ಥಾನ ಬರುವಷ್ಟು ನಾನು ಸಮರ್ಥ!
ಹಣದಮೇಲೆ, ಬಹುಮಾನದ ಮೇಲೆ, ಹೆಸರು ಅಂತಸ್ತಿನ ಮೇಲೆ ವ್ಯಾಮೋಹ ಹುಟ್ಟದೇ ಇರಲು ಕಾರಣವಾದ ಮೊಟ್ಟ ಮೊದಲ ಘಟನೆ!!
ಇನ್ನು ಕ್ರಿಕೆಟ್‌ಗೆ ಸೆಲೆಕ್ಟ್ ಆಗದೇ ಹೋಗಿದ್ದು…, ಹಾಗೊಮ್ಮೆ ಸೆಲೆಕ್ಟ್ ಆಗಿದ್ದಿದ್ದರೆ…, ಇಷ್ಟರಮಟ್ಟಿಗೆ ಅಪ್ಪ ಅಮ್ಮನೊಂದಿಗೆ- ಇಷ್ಟ ಪಡುವವರೊಂದಿಗೆ ಬದುಕುವ ಅವಕಾಶ ನನಗೆ ಸಿಗುತ್ತಿರಲಿಲ್ಲವೇನೋ?
ಪುಸ್ತಕಗಳ ಪರಿಚಯ ಆಗುತ್ತಿರಲಿಲ್ಲವೇನೋ?
ಈ ವ್ಯಕ್ತಿತ್ವ ರೂಪುಗೊಳ್ಳುತ್ತಿರಲಿಲ್ಲವೇನೋ?
ನಾನೊಬ್ಬ ಕಥೆಗಾರನೇ ಆಗುತ್ತಿರಲಿಲ್ಲವೇನೋ…!!
ಇನ್ನು ಕೆಲಸ…! ಸ್ಯಾಲರಿ ಸಿಗದಿದ್ದರೇನು?
ನಾನು ಉ-ಚಿ-ತ-ವಾ-ಗಿ ಓದಿದ ಪುಸ್ತಕಗಳ ಸಂಖ್ಯೆಯೇ ಸಾಕು ಸಾರ್ಥಕತೆಗೆ!
ಸಿನೆಮಾದ ವಿಷಯ ಇನ್ನೂ ಮಜ! ದುಡ್ಡು ಕೊಡದಿರುವುದರಿಂದಲೂ…, ನನ್ನ ವಿದ್ಯಾಭ್ಯಾಸದ ಕಾರಣವಾಗಿಯೂ…, ಅಲ್ಲಿ ನಾನು ಸ್ವತಂತ್ರನಾಗಿದ್ದೆ! ರಿಕ್ವೆಸ್ಟ್‌ನಂತೆ ಅಲ್ಲದೆ…, ಇದನ್ನೇ ಮಾಡು, ಹೀಗೆಯೇ ಮಾಡು ಎಂದು ದಬಾಯಿಸಿ ಕೆಲಸವನ್ನು ಹೇಳುವವರು ಯಾರೂ ಇರಲಿಲ್ಲ! ಉಳಿದ ಅಸಿಸ್ಟಂಟ್ ಡೈರೆಕ್ಟರ್‌ಗಳಂತಲ್ಲದೆ ನನಗೆ ನನ್ನದೇ ಆದ ಅಸ್ಮಿತೆಯಿತ್ತು!
ಯಾವುದೇ ಒತ್ತಡವಿಲ್ಲದೆ- ಹೇರಿಕೆಯಿಲ್ಲದೆ…, ನನಗೆ ಬೇಕಾದ್ದು ನಾನು ಕಲಿತೆ…!
ಇನ್ನು ಮದುವೆಯ ವಿಷಯ…!
ಸ್ಪಷ್ಟವಾದ ಗುರಿಯನ್ನೂ ಕನಸನ್ನೂ ಹೊಂದಿರುವವರು ಮದುವೆಯಾಗದಿರುವುದು ಒಳ್ಳೆಯದು! ಕೆಡುಕೇ ಆಗುತ್ತದೆಂದಲ್ಲ- ಅದು ರಿಸ್ಕ್ ಎಂದಷ್ಟೇ!
ಅದರಲ್ಲೂ ಯಾರನ್ನೋ ಪ್ರೇಮಿಸಿ, ಮತ್ಯಾರೊಂದಿಗೋ ಎಂಗೇಜ್‌ಮೆಂಟ್ ಆಗಿ- ಬ್ರೇಕಪ್ ಆದವರನ್ನು!
ಅವರಿಗೆ ಯಾವತ್ತಿಗೂ ಮನಸಾರೆ ನಮ್ಮನ್ನು ಇಷ್ಟಪಡಲಾಗುವುದಿಲ್ಲ. ಅದು ಅವರ ತಪ್ಪಲ್ಲ…, ಅಥವಾ ಅವರ ನಿಯಂತ್ರಣದಲ್ಲಿ ಇರುವುದಿಲ್ಲ! ಒಟ್ಟು ಅವರಿಗೆ ನಮ್ಮನ್ನು ಪ್ರೇಮಿಸಲು "ಆಗುವುದಿಲ್ಲ!”
ಮದುವೆಯಾದ ಆರೂವರೆವರ್ಷ ನಾನನುಭವಿಸಿದ ನರಕ…, ಅವಳೂ ಅನುಭವಿಸಿರಬಹುದು ಅನ್ನಿ…,
ಅದರಿಂದ ಮುಕ್ತಿ ಸಿಗುವುದು ಕಮ್ಮಿ ವಿಷಯವೇ?!!!
ಡಿವೋರ್ಸ್ ಅಂದ ತಕ್ಷಣ ಅದು ಭಾರೀ ದುಃಖ ಕೊಡುವ ವಿಷಯ ಅನ್ನುವ ಬಿಂಬವನ್ನು ಕೊಡುತ್ತದೆ…!
ಆದರೆ ಹಾಗಲ್ಲ!
ಡಿವೋರ್ಸ್ ಆಗದೇ ಇದ್ದಿದ್ದರೆ…, ನಾನು ಇಷ್ಟೊಂದು ನೆಮ್ಮದಿಯಾಗಿ ಇರುತ್ತಿರಲಿಲ್ಲ! ನಾನು ಇಷ್ಟೊಂದು ಕಥೆಗಳನ್ನು ಬರೆಯುತ್ತಿರಲಿಲ್ಲ! ನನಗೆ ಇಷ್ಟೊಂದು ಹಿತೈಷಿಗಳು ಸಿಗುತ್ತಿರಲಿಲ್ಲ!
ಇಲ್ಲೊಂದು ವಿಷಯ ಹೇಳಬೇಕು…, ದೈಹಿಕ ವಾಂಛೆಯ ವಿಷಯ…, ಆರೂವರೆ ವರ್ಷ ಮದುವೆಯಾದ ಹೆಂಡತಿಯೊಂದಿಗಿದ್ದರೂ ದೈಹಿಕವಾಗಿ ನಾವು ಸೇರಿರುವುದು ಬೆರಳೆಣಿಕೆಯಷ್ಟುಸಾರಿ ಮಾತ್ರ!
ಯಾಕೋ ಅವಳಿಗೆ ನನ್ನೊಂದಿಗೆ ಸಾಧ್ಯವಾಗುತ್ತಿರಲಿಲ್ಲ ಅನ್ನುವುದು ಒಂದು ಕಾರಣವಾದರೆ…, ನನಗೂ ಅದು ಅಷ್ಟು ಮುಖ್ಯವಲ್ಲ ಅನ್ನುವುದು ಮತ್ತೊಂದು ಕಾರಣ!!
ಅವಕಾಶ ಒದಗಿದಾಗ…, ಯಾಕೆ ಸೇರಬಾರದು- ಅನ್ನುವ ಪ್ರಶ್ನೆಗೆ ಉತ್ತರವಿಲ್ಲವಾದ್ದರಿಂದ ಸೇರಬೇಕು ಹೊರತು…, ಸೇರಲೇ ಬೇಕೆನ್ನುವ ಇಚ್ಛೆ ನನಗಿಲ್ಲ!!
ಆದ್ದರಿಂದಲೇ ಭೇಟಿಯೇ ಸಾಧ್ಯವಿಲ್ಲದಿದ್ದರೂ…, ನನಗಾಗಿ ಪ್ರಾರ್ಥಿಸುವ, ಒಲವು ತೋರಿಸುವ, ನನ್ನ ಸುತ್ತಲೂ ಒಂದು ಸಂರಕ್ಷಣ ವಲಯವನ್ನು ಸೃಷ್ಟಿಸಿರುವ ಆತ್ಮ ಗೆಳತಿಯರನ್ನು ಪಡೆಯುವುದು ನನಗೆ ಸಾಧ್ಯವಾಗಿದ್ದು…!!
ಇನ್ನು ಮಗಳ ವಿಷಯ ಅನ್ನುವಿರಾ…?
ನಾನು ವಾಸ್ತವವನ್ನು ಒಪ್ಪಿಕೊಂಡು ಬಿಟ್ಟಿದ್ದೇನೆ!
ಕಾನೂನು ಇರುವುದು ಹೀಗೆಯೇ…, ಯಾವ ಕಾರಣಕ್ಕೂ ಮ-ಗ-ಳ-ನ್ನು ಅಪ್ಪನೊಂದಿಗೆ ಬಿಡಲು ಕಾನೂನು ಒಪ್ಪುವುದಿಲ್ಲ!
ಆಗಾಗ ಭೇಟಿಯಾಗುವುದಕ್ಕೆ ಅವಕಾಶವೇನೋ ಕೊಡುತ್ತದೆ!
ಆದರೆ…, ಯಾವುದೋ ಅನಾಥ ಮಗುವಿನಂತೆ ಆಗಾಗ ಭೇಟಿಯಾಗಿ ಮರಳುವ ನೋವಿಗಿಂತ ನೋಡದೆಯೇ ಇರುವ ನೋವನ್ನು ಅಧಿಗಮಿಸುವುದು ನನಗೆ ಸುಲಭ! ಅದು ನನ್ನ ಆಯ್ಕೆ!
ಅಲ್ಲದೆ…, ಇಬ್ಬರು ಅಕ್ಕಂದಿರ…, ನಾಲ್ವರು ಮಕ್ಕಳು…, ಹುಟ್ಟಿದ ನಂತರ ಮೊದಲು ಬಿದ್ದದ್ದು ಅವರ ಅಪ್ಪಂದಿರಿಗಿಂತ ಮುಂಚೆ ನನ್ನ ಕೈಗಳಿಗೆ! ನನ್ನ ತೋಳುಗಳಲ್ಲಿ ಬೆಳೆದವರು ಅವರು…!
ಅವರಿಗೂ ನನ್ನ ಮಗಳಿಗೂ ವ್ಯತ್ಯಾಸವೇನು?
ಇನ್ನು…, ನೆಮ್ಮದಿಗೆ ಕಾರಣವಾದ ಅತಿ ಮುಖ್ಯವಾದ ವಿಷಯಕ್ಕೆ ಬರುತ್ತೇನೆ!
ನನ್ನ ಗುರಿಯ ವಿಷಯ, ನನ್ನ ಕನಸಿನ ಮಾತು…!
ವೈಯುಕ್ತಿವಾಗಿ ನನ್ನ ವಿಷಯದಲ್ಲಿ ಒಂದು ಆಶ್ಚರ್ಯವಿದೆ!
ನಾನಾಗಿ ತೀರ್ಮಾನಿಸಿದ ಯಾವುದೇ ವಿಷಯ ನಡೆಯಬೇಕೆಂದರೂ.., ಅದೇ ವಿಷಯಕ್ಕೆ ಇತರರು ಹಾಕಬೇಕಾದ ಶ್ರಮಕ್ಕಿಂತ ಸಾವಿರ- ಲಕ್ಷ ಪಟ್ಟು ಅಧಿಕ ಶ್ರಮವನ್ನು ನಾನು ಹಾಕಬೇಕು!!
ಆದರೆ…, ನಾನೇನೂ ಅಂದುಕೊಳ್ಳದೇ ಇದ್ದರೆ…, ನನ್ನ ಜೀವನದಷ್ಟು ಸುಲಭವಾದ ಜೀವನ ಯಾರಿಗಿದೆ?!
ಎಷ್ಟೋ ಜನರ ಅಸೂಯೆಗೆ ಕಾರಣವಾದ ಬದುಕು ನನ್ನದು! ಅಷ್ಟು ಸುಲಭ ನನ್ನ ಬದುಕು!
ಅದಕ್ಕೆ ಕಾರಣ…, ನನ್ನ ಅಮ್ಮಂದಿರು, ಅಪ್ಪ, ನನ್ನ ಅಕ್ಕಂದಿರು, ನನ್ನ ಗೆಳಯರು, ಗೆಳತಿಯರು…!
ಅವರ ಮಿತಿಯಲ್ಲಿ…, ನನಗಾಗಿ ಏನನ್ನೂ ಮಾಡಲು ತಯಾರಿರುವ ಅವರನ್ನು ಪಡೆದ ನನ್ನಷ್ಟು ಅದೃಷ್ಟವಂತ ಯಾರಿದ್ದಾರೆ?
ಅಮ್ಮಂದಿರು ಅಂದಿದ್ದೇನೆ…, ಅದೊಂದು- ಹುಟ್ಟಿನೊಂದಿಗೆ ದೇವರು ಕೊಟ್ಟ ವರ ನನಗೆ…!
ಹಲವಾರು ಇಲ್ಲಗಳು ತೃಣ ಸಮಾನವಾಗುವಂತೆ ಅಮ್ಮಂದಿರ ವಾತ್ಸಲ್ಯ, ಹೆತ್ತಮ್ಮನಿಗೂ ಅವರಿಗೂ ವ್ಯತ್ಯಾಸವಿಲ್ಲ ಅನ್ನುವಷ್ಟು- ಆಶೀರ್ವಾದ, ಒಲವು…!
ಎಷ್ಟು ಚಂದ!
ಇಂತಹ ನಾನು…, ನನ್ನ ಈ ಸುಲಭದ ಬದುಕನ್ನೂ ಕಳೆದುಕೊಳ್ಳದೆ…, ನನ್ನ ಕನಸೂ ನಡೆಯುವಂತಾಗಬೇಕೆಂದರೆ…, ನನ್ನ ಇನ್ವೆಸ್ಟ್‌ಮೆಂಟ್…, “ಸಮಯ”- ಮಾತ್ರ!!
ವಾಸ್ತವಗಳನ್ನು ಒಪ್ಪಿ, ಆತ್ಮಸಾಕ್ಷಿಗೆ ಅನುಗುಣವಾಗಿ…, ಯಾವುದೇ ರಿಗ್ರೆಟ್ಇಲ್ಲದೆ ಬುದುಕುತ್ತಿರುವ…, ಇಷ್ಟು ವರ್ಷದ ನನ್ನ ಬದುಕಿನಲ್ಲಿ…,
ನೂರರಷ್ಟು ಫಲಿತಾಂಶ ಬರಲು ಲಕ್ಷದಷ್ಟು ಶ್ರಮ ಅಗತ್ಯ ಅನ್ನುವುದಾದರೆ…,
ತೊಂಬತ್ತು ಭಾಗ ಫಲಿತಾಂಶ ಬಂದಿರುವ ನನ್ನ ಗುರಿಯ ಉಳಿದ ಹತ್ತು ಭಾಗ ನಡೆಯಲು ಮತ್ತಷ್ಟು ಸಮಯ ಬೇಕೇ ಹೊರತು…,
ಗುರಿ ನಡೆಯುವುದಿಲ್ಲ ಅನ್ನುವುದು ಇಲ್ಲ!
ಗುರಿ ಸೇರಲು ಮತ್ತಷ್ಟು ಸಮಯ ಬೇಕು- ಯಾಕೆ ಬೇಕು?
ಇದಕ್ಕೆ ಉತ್ತರ ಇತ್ತೀಚೆಗೆ ಹೊಳೆಯಿತು! ತುಂಬಾ ಮಜವಾದ…, ತೃಪ್ತಿಕರವಾದ ಉತ್ತರ ಅದು!
ಗೆಳೆಯರೊಂದಿಗೋ…, ಒಬ್ಬನೆಯೋ…, ನಾಲ್ಕು ದಿನದ ಟೂರ್ ಹೋದೆ ಅಂದುಕೊಳ್ಳಿ!
ನಾಲ್ಕೂ ದಿನ…, ಅಮ್ಮನಿಗೆ ಒಮ್ಮೆಯೂ ಕಾಲ್ ಮಾಡದೆ…, ಒಂದೂ ಮೆಸೇಜ್ ಮಾಡದೆ ಇರಬಲ್ಲೆ!!!
ಆದರೆ ಐದನೆಯ ದಿನ…, ಅಮ್ಮನನ್ನು ನೋಡದೆ ನನ್ನಿಂದ ಇರಲಾಗುವುದಿಲ್ಲ!!
ನಾನಿಲ್ಲದೆ ಅಮ್ಮ ಇರಬಲ್ಲರೋ ಏನೋ…., ನಾನಂತೂ ಅಮ್ಮನಿಗೆ ಆಡಿಕ್ಟ್ ಆಗಿಬಿಟ್ಟಿದ್ದೇನೆ!
ದೇವಸ್ಥಾನಗಳಿಗೆ ಹೋದಷ್ಟೇ ನೆಮ್ಮದಿ ನನಗೆ ಅಮ್ಮನ ಸಾನ್ನಿಧ್ಯ!
ಗುರಿ ಸಾಧನೆ ನೆಮ್ಮದಿಯೇ- ಖುಷಿಯೇ…,
ಆದರೆ ಅದಕ್ಕಿಂತಲೂ ಅಮ್ಮನೊಂದಿಗೆ ಇರುವುದು ನನಗೆ ಹೆಚ್ಚು ಖುಷಿ ನೆಮ್ಮದಿ ನೀಡುತ್ತದೆ.
ಆದ್ದರಿಂದಲೇ…,
ತುಂಬಾ ಬೇಗ ಗುರಿ ಸೇರುವಂತಾಗಲು ವಾರಗಟ್ಟಲೆ ಹೊರಗೆ ಹೋಗಿ ಶ್ರಮಿಸುವುದಕ್ಕಿಂತ…,
ಸ್ವಲ್ಪ ನಿಧಾನವಾದರೂ ಪರವಾಗಿಲ್ಲ…, ಸಾಧ್ಯವಾದರೆ ಅಂದೇ ಮರಳುವಂತೆಯೋ…, ಎರಡೋ ಮೂರೋ ದಿನ ಇದ್ದು ಮರಳುವಂತೆಯೋ ಪ್ಲಾನ್ ಮಾಡಿ ಗುರಿಯೆಡೆಗೆ ಮುಂದುವರೆಯುತ್ತಿದ್ದೇನೆ!
ಇನ್ನು ಸಂಪಾದನೆಯ ವಿಷಯ…,
ಬದುಕಿನ ಅಗತ್ಯಕ್ಕೆ ದುಡ್ಡು ಅಷ್ಟೇ ಹೊರತು ದುಡ್ಡಿಗಾಗಿ ಬದುಕಲ್ಲ!!
ನನಗೆ ಸಂಪಾದನೆಯಲ್ಲಿ ಆಸಕ್ತಿಯಿಲ್ಲ! ದುಡ್ಡಿನಬಗ್ಗೆ ವ್ಯಾಮೋಹವೂ ಇಲ್ಲ…!
ಹದಿನೈದನೇ ವಯಸ್ಸಿನಿಂದ ಇದುವರೆಗೆ…, ದೈಹಿಕವಾಗಿ, ಮಾನಸಿಕವಾಗಿ ಒಂದು ಡಿಸಿಪ್ಲಿನ್‌ನಲ್ಲಿ ಬದುಕುತ್ತಿರುವ ನನಗೆ ಸಂಪಾದಿಸುವುದು ಅನ್ನುವುದು ಅಷ್ಟು ಕಷ್ಟದ ವಿಷಯವಲ್ಲ!
ನನಗದರ ಅಗತ್ಯ ಬಂದಿಲ್ಲ ಅನ್ನುವುದಷ್ಟೇ ನಿಜ!
ಸಂಪಾದನೆಯ ಹಿಂದೆ ಬಿದ್ದಿದ್ದರೆ ನಾನಿಷ್ಟು ನೆಮ್ಮದಿಯಾಗಿ ಬದುಕುತ್ತಿರಲಿಲ್ಲ!
ನಮಗೆ ನೆಮ್ಮದಿ ಮುಖ್ಯವಾ ಹಣವಾ?
ಅಷ್ಟೇ…!
ನನ್ನ ಬದುಕು ನನ್ನ ಆಯ್ಕೆ! ನನ್ನ ಆಯ್ಕೆಯಲ್ಲಿ ನಾನು ಸಂತೃಪ್ತ!
ನಾನು ನೆಮ್ಮದಿಯಾಗಿದ್ದೇನೆ! ನನ್ನ ವ್ಯಕ್ತಿತ್ವವನ್ನು ನಾನು ಉತ್ತಮಪಡಿಸಿಕೊಳ್ಳುತ್ತಾ…, ಯಾರಿಗಾದರೂ ನನ್ನ ಅಗತ್ಯವಿದ್ದರೆ ಅವರಿಗೆ ಸ್ಪಂದಿಸುತ್ತಾ…, ಅಗತ್ಯವಿಲ್ಲದವರಿಂದ 'ದೂರವಿದ್ದು' ಅವರ ನೆಮ್ಮದಿಗೆ ಕಾರಣವಾಗುತ್ತಾ…, ಕಳೆದು ಹೋದದ್ದನ್ನು ಅಲ್ಲಿಯೇ ಬಿಟ್ಟು ವರ್ತಮಾನದಲ್ಲಿ ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಬದುಕುತ್ತಿದ್ದೇನೆ!
ಪ್ರಪಂಚವನ್ನು ಉದ್ದಾರ ಮಾಡುವಷ್ಟು ನಾನು ದೊಡ್ಡವನಲ್ಲ…,
ಆದರೆ ನನ್ನನ್ನಂತು ನಾನು ಸುಧಾರಿಸಿಕೊಳ್ಳಬಲ್ಲೆ!
ಇಷ್ಟು ಹೇಳಿದ ನನ್ನನ್ನು…, ಇವನು ಹೀಗೆಯೇ ಎಂದು ನಿರ್ಧರಿಸುವಷ್ಟರಲ್ಲಿ ಮತ್ತೆ ನಾನು ಬದಲಾಗಿರುತ್ತೇನೇನೋ…!
ಬದಲಾವಣೆ ಜಗದ ನಿಯಮ!
ನಮ್ಮಂತೆ ಇತರರಿಲ್ಲ, ನಮ್ಮಂತೆ ಜಗತ್ತಿಲ್ಲ, ಎಂದು ಇತರರನ್ನು ಅರ್ಥಮಾಡಿಕೊಳ್ಳವುದರಲ್ಲೇ…, ದೂಷಿಸುವುದರಲ್ಲೇ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತಲೂ…, ನಮ್ಮಪಾಡಿಗೆ ನಾವು ಬದುಕಿಬಿಡೋಣ!
ನಮ್ಮಿಂದ ಇತರರಿಗೆ ಒಳಿತಾಯಿತಾ…, ಸಂತೋಷ!
ಒಳಿತಾಗಲಿಲ್ಲವಾ?
ಕೆಡುಕುಮಾಡುವುದು ಬೇಡ!
ಹಾಗೆಯೇ…,
ಇತರರಿಂದ ನಮಗಾದ ಕೆಡುಕುಗಳನ್ನು ಮರೆತುಬಿಡೋಣ…,
ಇತರರಿಂದ ನಮಗಾದ ಒಳಿತುಗಳ ಫಲ ಒಳಿತೇ ಆಗುವಂತೆ ಬದುಕನ್ನು ರೂಪಿಸಿಕೊಳ್ಳೋಣ!
ಇದು ಹೇಳುತ್ತಾ ಹೋದರೆ ಮುಗಿಯದ ಕಥೆಯಾದ್ದರಿಂದ…,
ಚಿತ್ರವಿಚಿತ್ರ ಯೋಚನೆಗಳೊಂದಿಗೆ ಮತ್ತೆ ಮತ್ತೆ ಸಿಗುತ್ತಿರೋಣ…!
ಸಧ್ಯಕ್ಕೆ…, ನಾನೇಕೆ ನೆಮ್ಮದಿಯಾಗಿದ್ದೇನೆ, ಹೇಗೆ ಸಂತೋಷವಾಗಿದ್ದೇನೆ ತಿಳಿಯಿತಲ್ಲಾ?
ಸ್ವಸ್ತಿ!
ಚೆನ್ನಾಗಿದೆ ನಿಮ್ಮ ಅತ್ಮಾವಲೋಕನ ಮುಗಿಯದ ಕಥೆ ಇನ್ನು ಸ್ವಲ್ಪ ಮುಂದಕ್ಕೆ ಮಾಡ್ಕೋಬೇಕಿತ್ತು ಮಾಡಿದ್ದರೆ ಚಂದವಿತ್ತೇನೋ.. ಅಲ್ಲಿಗೆ ಯಾಕೆ ನಿಲ್ಲಿಸಿದ್ದು..
ReplyDelete