ಮಾತೃ!
ನೀನು ಹಿಂದುವಲ್ಲ ಅಹಿಂದು, ನಿನ್ನನ್ನು ಅವರು ತುಳಿಯುತ್ತಿದ್ದಾರೆ, ಹಿಂದೂಗಳು ಧರ್ಮಾಂಧರು, ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ನಾಶ ಮಾಡುತ್ತಿದ್ದಾರೆ- ಅನ್ನುವಂತಹ ಹೊಲಸು ರಾಜಕೀಯದ ಆಚೆ ಒಂದು ವೈಯುಕ್ತಿಕ ಜೀವನವಿದೆ.
ಶಾಂತ ಗಂಭೀರವಾದ ಜೀವನವದು.
ಆ ಜೀವನವನ್ನು ಪರಿಪೂರ್ಣವಾಗಿ ಅನುಭವಿಸಿದವನು ನಾನು.
ಇತಿಹಾಸವಾದರೂ, ಮನಶ್ಶಾಸ್ತ್ರವಾದರೂ, ತತ್ತ್ವಚಿಂತನೆಯಾದರೂ ನನಗೆ ನನ್ನದೇ ಆದ ಅಧ್ಯಯನವಿದೆ- ದೃಷ್ಟಿಕೋನವಿದೆ.
ಅದು ರೂಪುಗೊಂಡಿದ್ದು ಹೇಗೆ?
“ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ!” ಎಂದು ಗಾಂಧಿಜಯಂತಿಯ ದಿನ ಮಾಡಬೇಕಾದ ಭಾಷಣವನ್ನು ಬಾಯಿಪಾಟ ಮಾಡುವಾಗ ಅಪ್ಪನ ಪ್ರಶ್ನೆ ತೂರಿಬಂತು…,
“ಹಾಗಿದ್ದರೆ ಸಾವಿರಾರು ಸಂಖ್ಯೆಯಲ್ಲಿ ನೇಣುಗಂಬ ಏರಿದವರು, ಜೈಲುವಾಸ ಅನುಭವಿಸಿದವರು, ಪ್ರಾಣತ್ಯಾಗ ಮಾಡಿದವರು ಯಾರು?”
ಪ್ರಶ್ನಾರ್ಥಕವಾಗಿ ಅಪ್ಪನನ್ನು ನೋಡಿದ್ದೆ.
“ಇಷ್ಟುಮಾತ್ರ ನೆನಪಿರಲಿ…, ಬ್ರಿಟೀಷರನ್ನು ನಡುಗಿಸಿ, ಅಧಿಕಾರಯುತವಾಗಿ ಪಡೆಯಬಹುದಾಗಿದ್ದ ಸ್ವಾತಂತ್ರ್ಯಕ್ಕೂ, ಅವರು ಕೊಟ್ಟ ಭಿಕ್ಷೆ- ಅನ್ನುವಂತಿರುವ ಈ ಸ್ವಾತಂತ್ರ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ಆ ವ್ಯತ್ಯಾಸವೇ ನಿಜವಾದ ಇತಿಹಾಸ!”
ನನ್ನ ಕಣ್ಣಿನಲ್ಲಿನ ಕುತೂಹಲವನ್ನು ಕಂಡು ಹತ್ತಿರ ಕುಳಿತ ಅಪ್ಪ…,
“ಒಂದೇ ದಿನದಲ್ಲಿ ತಿಳಿದುಕೊಳ್ಳುವಂತದ್ದಲ್ಲ ಇತಿಹಾಸ…, ಅದೊಂದು ಮಹಾಸಾಗರ…, ಮೊಘಲರು ಭಾರತಕ್ಕೆ ಬಂದರು ಅನ್ನುವಲ್ಲಿಂದ ಬಾಬರ್ ನಂತರ ಹುಮಾಯೂನ್, ನಂತರ ಅಕ್ಬರ್ ಅನ್ನುವಂತೆ ಔರಂಗಜೇಬನಲ್ಲಿಗೆ ಮುಗಿಯುವ…, ನಂತರ ಬ್ರಿಟೀಷರು- ಅವರಿಂದ ಸ್ವಾತಂತ್ರ್ಯ…, ಅದೂ ಕೂಡ ಒಬ್ಬ ವ್ಯಕ್ತಿಯಿಂದ…, ಅನ್ನುವುದು ಮಾತ್ರವಲ್ಲ ಇತಿಹಾಸ…, ಇದು ಮೂಟೆಯಲ್ಲಿರುವ ರಾಗಿ ಕಾಳುಗಳಲ್ಲಿ ಒಂದೇ ಒಂದು ಕಾಳಿಗೆ ಸಮ! ರಾಜ ಮಹಾರಾಜರ ಹೊರತು, ನಾಯಕರ ಪ್ರಖ್ಯಾತರ ಹೊರತು, ಧರ್ಮಾಧರ್ಮಗಳ ಹೊರತು, ಜಾತಿ ಮತ ಪಂಗಡಗಳ ಹೊರತು ಜನ ಸಾಮಾನ್ಯರ ಇತಿಹಾಸವೊಂದಿದೆ…, ಚೀಲದಲ್ಲಿರುವ ಉಳಿದ ರಾಗಿ ಕಾಳುಗಳ ಇತಿಹಾಸ! ಅದು ನಿಜವಾದ ಇತಿಹಾಸ!” ಎಂದರು.
ಅದರ ಫಲಿತಾಂಶ…,
ನನ್ನ ತಟ್ಟೆಯಲ್ಲಿ…, ಒಟ್ಟಿಗೆ…, ಈರ, ಭಾರದ್ವಾಜರಿಂದ ಹಿಡಿದು, ಆಂಟನಿ, ಶಫೀಕ್‌ರ ವರೆಗೆ ಪ್ರತಿಯೊಬ್ಬರೂ ಊಟ ಮಾಡಿದ್ದೇವೆ!
ಎಂತಹ ವಿಪರ್ಯಾಸ! ಹೆಸರುಗಳಲ್ಲೆ ಉದ್ದೇಶವಿದೆ!
ನಾನು…, ಶಫೀಕ್ ಆಂಟನಿಯರ ಮನೆಗೆ ಹೋಗಿ ಅವರ ಮನೆಯಲ್ಲಿ ಏನು ಮಾಡಿರುತ್ತಾರೋ ಅದನ್ನು ಯಾವುದೇ ಮುಜುಗರವಿಲ್ಲದೆ ತಿನ್ನಬಲ್ಲೆ- ಅದು ಬೀಫ್ ಆಗಿರಲಿ, ಪೋರ್ಕ್ ಆಗಿರಲಿ!
ನಾನು…, ಈರನ ಮನೆಗೆ ಹೋಗಿ ಅವನ ಮನೆಯಲ್ಲಿ ಏನು ಮಾಡಿರುತ್ತಾರೋ ಅದನ್ನು ಯಾವುದೇ ಮುಜುಗರವಿಲ್ಲದೆ ತಿನ್ನಬಲ್ಲೆ…, ಅದು ಮಟನ್ ಆಗಿರಲಿ, ಚಿಕನ್ ಆಗಿರಲಿ, ಫಿಶ್ ಆಗಿರಲಿ…!
ನಾನು…, ಭಾರದ್ವಾಜನ ಮನೆಗೆ ಹೋಗಿ ಅವನ ಮನೆಯಲ್ಲಿ ಏನು ಮಾಡಿರುತ್ತಾರೋ ಅದನ್ನು ಯಾವುದೇ ಮುಜುಗರವಿಲ್ಲದೆ ತಿನ್ನಬಲ್ಲೆ…, ಅದು ಮೊಸರನ್ನವಾಗಿರಲಿ, ಅನ್ನ ಸಾಂಬಾರ್ ಆಗಿರಲಿ!
ಹಾಗೆಯೇ ಇದೇನನ್ನೂ ಮಾಡದಿರುವ ಸ್ವಾತಂತ್ರ್ಯವೂ ನನಗಿದೆ!
ಜೊತೆಗೆ…, ಗೆಳೆಯರೂ ನನ್ನಂತೆಯೇ ಮಾಡಬೇಕೆಂಬ ಅಭಿಪ್ರಾಯವೂ ನನಗಿಲ್ಲ! ಬೀಫ್ ತಿನ್ನುವವ ಹಂದಿ ತಿನ್ನಬೇಕೆಂದೋ, ಹಂದಿ ತಿನ್ನುವವ ಬೀಫ್ ತಿನ್ನಬೇಕೆಂದೋ, ಸಸ್ಯಹಾರಿ ಮಾಂಸಹಾರ ತಿನ್ನಬೇಕೆಂದೋ, ಮಾಂಸಹಾರಿ ಸಸ್ಯಹಾರಿಯಾಗಬೇಕೆಂದೋ ನಾನು ಹೇಳುವುದಿಲ್ಲ- ಅವರವರ ಸ್ವಾತಂತ್ರ್ಯ!
ಒಬ್ಬ ಮನು, ಒಬ್ಬ ಬುದ್ಧ, ಒಬ್ಬ ಕ್ರಿಸ್ತ, ಒಬ್ಬ ಮಹಮದ್, ಒಬ್ಬ ಶಂಕರ, ಒಬ್ಬ ಬಸವಣ್ಣ, ಒಬ್ಬ ಮಾರ್ಕ್ಸ್..., ಹೀಗೆ ಯಾವ ಒಬ್ಬ ವ್ಯಕ್ತಿ ಮೂಲವಾದ, ಯಾವ ಒಂದು ಗ್ರಂಥಮೂಲವಾದ ಮತವನ್ನೂ ನಾನು ಒಪ್ಪುವುದಿಲ್ಲ.
"ಪ್ರಶ್ನಾತೀತವಾದ" ಯಾವುದನ್ನೂ ಒಪ್ಪುವುದಿಲ್ಲ.
ಅದೆಲ್ಲವನ್ನು ಮೀರಿದ್ದು ನಮ್ಮ ಬದುಕು!
ಇನ್ನು…, ನಾನು ದೈವ ವಿಶ್ವಾಸಿಯಾ? ಯಾರು ದೈವ?
ಪರಿಪೂರ್ಣವಾಗಿ ಟೀಚರ್ ಡಿಪೆಂಡೆಡ್ ಹುಡುಗ ನಾನು.
ಹುಟ್ಟೂರಿನಲ್ಲಿ ಒಂದು ದಿನ ಶಾಲೆಗೆ ಹೋಗಲಾಗಲಿಲ್ಲವೆಂದರೆ…, ಪ್ರತಿ ಟೀಚರ್ ಮಾರನೆಯ ದಿನ ನನಗಾಗಿ ಮತ್ತೆ ಪಾಠ ಮಾಡುತ್ತಿದ್ದರು! ಅವರ ಪರಿಶ್ರಮದಿಂದಾಗಿ ನನಗೂ ಒಳ್ಳೆಯ ಅಂಕಗಳು ಬರುತ್ತಿತ್ತು. ಆದರೆ ಆ ಶಾಲೆಯನ್ನು ಬಿಟ್ಟು, ಅಪರಿಚಿತ ಊರಿನಲ್ಲಿ ಬೇರೆ ಶಾಲೆಗೆ ಸೇರಬೇಕಾಗಿ ಬಂದಾಗ ನನ್ನನ್ನು ಗಮನಿಸುವ ಯಾರೂ ಇರಲಿಲ್ಲ. ಜೊತೆಗೆ ನನಗಿಂತ ಸಮರ್ಥರಾದ ಎಷ್ಟೋ ವಿದ್ಯಾರ್ಥಿಗಳಿದ್ದರು ಕೂಡ.
ಹತ್ತನೇ ತರಗತಿಗೆ ಬಂದಾಗ ಹೇಗೋ ಕಷ್ಟಪಟ್ಟು ಓದಿ ಆವರೇಜ್ ಹುಡುಗ ಅನ್ನಿಸಿಕೊಂಡು ಪರೀಕ್ಷೆಗೆ ಪ್ರಿಪೇರ್ ಆಗುವಾಗ…, ಹೊಟ್ಟೆ ನೋವು ಬಂತು! ಅಪೆಂಡಿಕ್ಸ್! ಪರೀಕ್ಷೆಗೆ ಇನ್ನೂ ಒಂದು ತಿಂಗಳಿರುವಾಗ!
ಅಪೆಂಡಿಕ್ಸ್ ಒಡೆದು ಕ್ಯೂ ಹೊಟ್ಟೆಯನ್ನೆಲ್ಲಾ ಆವರಿಸಿಬಿಟ್ಟಿತ್ತು. ಹದಿಮೂರು ಒಲಿಗೆಯ ಆಪರೇಷನ್! ಜೊತೆಗೆ ಸಣ್ಣ ರಂದ್ರ ಮಾಡಿ ಕ್ಯೂ ಹೊರಗೆ ತೆಗೆಯಲು ಸಪರೇಟ್ ಟ್ಯೂಬ್- ಬೇರೆ!
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಮಾರನೇಯ ದಿನದಿಂದ ಪರೀಕ್ಷೆ!
ಬರೆದೆ. ಪಾಸ್ ಆಗುತ್ತೇನೆನ್ನುವ ಯಾವ ನಂಬಿಕೆಯೂ ನನಗಿರಲಿಲ್ಲ.
ರಿಸಲ್ಟ್ ನಾಳೆ ಅನ್ನುವಾಗ ನಾನು ಗೆಳೆಯನೊಂದಿಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ, ದೇವಿಯ ದರ್ಶನವನ್ನು ಮಾಡಿ, ಅವನ ಮನೆಗೆ ಹೋದೆ.
ಅದೊಂದು ಕಾಲನಿ! ಅಲ್ಲಿ ಗುಡಿಸಲಿನಂತಾ ಮನೆ! ಸರ್ಕಾರ ಕಟ್ಟಿಸಿ ಕೊಟ್ಟಿದ್ದು!
ನನ್ನನ್ನು ಕಂಡ ಅವನ ಅಮ್ಮನಲ್ಲಿ ಗಡಿಬಿಡಿ! ನಾನು ನೇರವಾಗಿ ಮನೆಯ ಒಳಗೆ ಹೋದಾಗ ಅವರ ಕಣ್ಣಿನಲ್ಲಿ ಆಶ್ಚರ್ಯ- ಆತಂಕ! ಕುರ್ಚಿಗಳಿರಲಿಲ್ಲ. ಚಾಪೆಯೊಂದು ಹಾಸಿ ಕೊಟ್ಟರು. ಅವರ ಮನೆಯಲ್ಲಿ ನಾನು ಏನನ್ನಾದರೂ ಸೇವಿಸುತ್ತೇನೆಯೇ ಅನ್ನುವ ಗೊಂದಲ ಅವರಿಗೆ.
“ಅವನಿಗೇನೂ ಅಂತಾ ಸಮಸ್ಯೆ ಇಲ್ಲ…, ಟಿ-ಗಿಡು!” ಎಂದ ಗೆಳಯ.
ಗೊಂದಲದಿಂದಲೇ ಟಿ ಮಾಡಿ ಕೊಟ್ಟರು ಅಮ್ಮ. ಟಿ ಜೊತೆಗೆ ಕೊಡಲು ಅವರಲ್ಲಿ ಏನೂ ಇರಲಿಲ್ಲ.
“ಊಟ ಮಾಡ್ತೀಯೇನಪ್ಪಾ…?” ಎಂದು ಕೇಳಿದರು.
ಆಗ ಅವರ ಮನೆಯ ಪರಿಸ್ಥಿತಿ ನನಗೆ ತಿಳಿಯದು!
“ಹಸಿವಂತೂ ಇದೆ!” ಎಂದೆ.
ಅಮ್ಮ ಮಗ ಮುಖಾಮುಖ ನೋಡಿಕೊಂಡರು.
“ನಿನ್ನೆಯ ತಂಗಳು…, ನೀವು ಊಟ ಮಾಡ್ತೀರೋ ಇಲ್ವೋ…?” ಎಂದರು ಅಮ್ಮ ಹಿಂಜರಿಯುತ್ತಾ ಮುಜುಗರದಿಂದ!
“ಅಯ್ಯೋ ಕೊಡಿ- ನನ್ನ ಫೇವರಿಟ್ ಅದು- ಗಂಜಿ!” ಎಂದೆ.
ಗೆಳೆಯನನ್ನೂ ಕೂರಿಸಿ ಗಡಿಬಿಡಿಯಿಂದ ಬಡಿಸಿದರು.
ತಿಂದು ತೇಗಿ ಅಲ್ಲಿಂದ ಹೊರಡುವಾಗ…, ಮಂಡಿಯೂರಿ ಕುಳಿತು ಅಮ್ಮನ ಎರಡೂ ಪಾದಗಳನ್ನು ಪರಿಪೂರ್ಣ ಹಸ್ತದಿಂದ ಮುಟ್ಟಿ…,
“ನಾಳೆ ಪರೀಕ್ಷೆಯಲ್ಲಿ ಪಾಸಾಗಲಿ ಅಂತ ಆಶೀರ್ವಾದ ಮಾಡಿ!” ಎಂದೆ.
ಎಷ್ಟು ಸಣ್ಣ ಕೋರಿಕೆ! ಆ ವಯಸ್ಸಿಗೆ ಅದನ್ನು ಮೀರಿ ಕೇಳಲು ನನಗಾದರೂ ಏನಿತ್ತು?
“ಅಯ್ಯೋ ಪಾಸಾಗ್ತೀಯ ಬಿಡಪ್ಪ…, ನೀನಲ್ಲದೆ ಇನ್ಯಾರು ಪಾಸಾಗ್ತಾರೆ? ಜೀವನದಲ್ಲಿ ಖಂಡಿತಾ ಮುಂದೆ ಬರ್ತೀಯ…, ದೇವರು ಒಳ್ಳೇದು ಮಾಡ್ಲಿ!” ಎಂದು ತಲೆಯಮೇಲೆ ಕೈಯ್ಯಿಟ್ಟು ಆಶೀರ್ವದಿಸಿದರು!
ಅವರ ಕೈ ನಡುಗುತ್ತಿತ್ತು.
ಎದ್ದುನಿಂತು ಅವರ ಮುಖವನ್ನು ನೋಡಿದೆ.
ಕಣ್ಣು ತುಂಬಿದ್ದು ಯಾಕೆ?
ಏನನ್ನಿಸಿತೋ ಏನೋ ಎರಡೂ ಕೈಯ್ಯಿಂದ ನನ್ನ ತಲೆಯನ್ನು ಅವರೆಡೆಗೆ ಬಾಗಿಸಿ ತಲೆಗೊಂದು ಮುತ್ತು ಕೊಟ್ಟು ಕೂದಲ ನಡುವೆ ಬೆರಳಾಡಿಸುತ್ತಾ….,
“ಜೀವನ ಪೂರ್ತಿ ನೆಮ್ಮದಿಯಾಗಿರು ಕಂದ!” ಎಂದರು.
ಇದ್ದೇನೆ!
ಅಂದು ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದರೆ ಅದಕ್ಕೆ ಕಾರಣ ಆ ಅಮ್ಮನ ಆಶೀರ್ವಾದ ಮಾತ್ರ ಅನ್ನುವುದು ಈಗಲೂ ನನ್ನ ದೃಢವಾದ ನಂಬಿಕೆ.
ಜೀವನದಲ್ಲಿ ನಡೆಯಬಾರದ ಸರಣಿ ಘಟನೆಗಳು ಏನೇ ನಡೆದಿರಲಿ, ನಡೆಯಬೇಕಾಗಿರುವುದು ಒಂದೂ ನಡೆಯದೇ ಇದ್ದಿರಲಿ…, ನಾನು ನೆಮ್ಮದಿಯಾಗಿದ್ದೇನೆಂದರೆ ಕಾರಣ…,
ಅಮ್ಮಂದಿರ ಆಶೀರ್ವಾದ!
ಆ ಅಮ್ಮಂದಿರ ಆಶೀರ್ವಾದಕ್ಕೆ ಭಾಜನನಾಗಿದ್ದೇನೆಂದರೆ ಅದಕ್ಕೆ ಕಾರಣ…,
ಕಾಲಾತೀತವಾದ ನನ್ನ ಮಾತೃಭೂಮಿಯ ಸಂಸ್ಕಾರ!
ವ್ಹಾ ಸೂಪರ್ ಕಾದಂಬರಿ ವಿಶ್ವಮಾತೃತ್ವ ಬಿಂಬಿಸುವ ನಮ್ಮ ನೆಲೆಯ ಸಂಸ್ಕೃತಿಯ ಎತ್ತಿರುವ ವಿಷಯ ಈ ಇಂದು ತುನಿಕಿನಲ್ಲಿ ಸಾರುತಿದೆ
ReplyDelete