ವಯಸ್ಸು!
ಕನ್ನಡಿಯ ಮುಂದೆ ನಿಂತು ನೋಡಿಕೊಳ್ಳುತ್ತಿದ್ದೆ. ನಲವತ್ತೊಂದು ವರ್ಷಕ್ಕೇ ಅರ್ಧ ಕೂದಲು ಬೆಳ್ಳಗಾಗಿದೆ. ಹಾಗೆಂದು ದೇಹಾರೋಗ್ಯವೋ…, ಕೂದಲಿಗೆ ಬಣ್ಣ ಹಚ್ಚಿದರೆ ವಯಸ್ಸು ಇಪ್ಪತ್ತೈದಕ್ಕೆ ಇಳಿಯುವಷ್ಟು!
ಬಣ್ಣ ಹಚ್ಚಿಕೊಳ್ಳುವುದಿಲ್ಲ ಅನ್ನುವ ತೀರ್ಮಾನ! ಒಬ್ಬಂಟಿ ಅಲೆಮಾರಿಗೆ ಯಾಕೆ ವಯಸ್ಸನ್ನು ಇಳಿಸುವ ಇರಾದೆ?
ಕನ್ಯಾಕುಮಾರಿಗೆ ಬಂದಿದ್ದೆ. ಪುಸ್ತಕವೊಂದನ್ನು ಬರೆಯಲು..., ಸ್ವಲ್ಪ ದಿನ ಇಲ್ಲಿಯೇ ಇದ್ದು ಇಲ್ಲಿಯ ಜನರಬಗ್ಗೆ, ಇತಿಹಾಸ- ಐತೀಹ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಉದ್ದೇಶ. ಒಂದು ವರ್ಷಕ್ಕೆ ಅನ್ನುವ ಕರಾರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದೆ. ಮೂರುತಿಂಗಳ ಬಾಡಿಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ಬಂದು ತಿಂಗಳು ಕಳೆದಿದೆಯಷ್ಟೆ. ಇನ್ನು ಇಲ್ಲಿ…, ಈ ಮನೆಯಲ್ಲಿ ಇರಲಾಗುವುದಿಲ್ಲ.
ಕಾರಣ ಪಕ್ಕದ ಮನೆ!
ಎಷ್ಟು ವಯಸ್ಸಿರಬಹುದು ಆ ಹುಡುಗಿಗೆ? ಹದಿನಾರು? ಹದಿನೇಳು? ಹದಿನೆಂಟು? ಹತ್ತೊಂಬತ್ತು ದಾಟಿರುವುದಿಲ್ಲ ಅಂದುಕೊಳ್ಳುತ್ತೇನೆ.
ಪಾಪ!
ಯಾರು ಆ ವ್ಯಕ್ತಿ? ಕರುಣೆಯಿಲ್ಲದೆ ಅಷ್ಟೊಂದು ಹೊಡೆದು ಬಡಿದು ಮಾಡುತ್ತಾನಲ್ಲ?
ವ್ಯಕ್ತಿಯನ್ನು ನೋಡಿಲ್ಲ.
ಬಂದ ಎರಡನೆಯ ದಿನದಿಂದಲೇ ಕೇಳಿಸತೊಡಗಿತ್ತು…, ಬೆನ್ನಿಗೆ ಗುದ್ದುವ ಶಬ್ದ! ಕೆನ್ನೆಗೋ ಎಲ್ಲಿಗೋ ಹೊಡೆಯುವ ಶಬ್ದ! ಎಳೆದಾಡುವ ಶಬ್ದ! ಹುಡುಗಿ ಬಾಯಿಬಿಟ್ಟು ಅಳಲಾಗದೆ…, ಅಳು ತಡೆಯಲಾಗದೆ ಒದ್ದಾಡುವ ಅರಿವು ಮೂಡಿಸುವ ಶಬ್ದ! ಬೈಗುಳವೇನೂ ಇಲ್ಲ…, ಹೂಂ ಹಾಂ ಅನ್ನುವ ಹೂಂಕಾರಗಳು ಮಾತ್ರ!
ಅದೊಂದು ಕುಟುಂಬ. ನಾಲ್ಕೈದು ಜನರಿದ್ದಾರೆ ಅಂದುಕೊಳ್ಳುತ್ತೇನೆ.
ಒಮ್ಮೆ ರಾತ್ರಿ ಮನೆಯ ಟರಸಿನ ಮೇಲೆ ಹತ್ತಿ ಅಂಗಾತ ಮಲಗಿ ನಕ್ಷತ್ರಗಳನ್ನೂ ಆಗಾಗ ಚಲಿಸುವ ನಕ್ಷತ್ರಗಳಂತೆ ಕಾಣುವ ಉಪಗ್ರಹಗಳನ್ನೂ ನೋಡುತ್ತಿದ್ದೆ. ಪಕ್ಕದ ಟರೆಸಿನಿಂದ ಬಿಕ್ಕಳಿಕೆಯ ಶಬ್ದ. ನಾನಲ್ಲಿ ಮಲಗಿರುವ ಅರಿವು ಆ ಹುಡುಗಿಗೆ ಇರಲಿಲ್ಲವೇನೋ…, ಒಬ್ಬಳೇ ಒಂದು ಮೂಲೆಯಲ್ಲಿ ಮುದುಡಿ ಕುಳಿತು ಮಂಡಿಯಲ್ಲಿ ಮುಖ ಹುದುಗಿಸಿ ಅಳುತ್ತಿದ್ದಳು.
ನಾನು ಚಲಿಸಿದರೆ ಅವಳಿಗೆ ಅಳಲೂ ಅವಕಾಶ ಇಲ್ಲದಂತಾಗುತ್ತದೆಂದು ಹಾಗೆಯೇ ಮಲಗಿದೆ.
ದೂರದಿಂದ ಸಮುದ್ರದ ಮೊರೆತ ಕೇಳಿಸುತ್ತಿತ್ತು.
ಎಷ್ಟು ಸಮಯ ಕಳೆಯಿತೋ ಏನೋ…,
ಎದ್ದು ನಿಂತು ಸುತ್ತಲೂ ನೋಡುತ್ತಿದ್ದ ಹುಡುಗಿ ನನ್ನನ್ನು ಕಂಡಂತೆ…, ಸೂಕ್ಷ್ಮವಾಗಿ ನೋಡುವಂತೆ ಎದ್ದು ಅವರ ಟರಸಿನ ಅಂಚಿಗೆ ಬಂದಳು.
ಸ್ವಲ್ಪ ಸಮಯ ಹಾಗೆಯೇ ಮಲಗಿದ್ದು…, ಎದ್ದು ಕುಳಿತೆ.
ಬೆಚ್ಚಿ ಎರಡು ಹೆಜ್ಜೆ ಹಿಂದಕ್ಕೆ ಹಾಕಿದಳು.
“ಬಯಪ್ಪಡಾದೆ!” ಎಂದೆ ಅವಳಿಗೆ ಮಾತ್ರ ಕೇಳಿಸುವಂತೆ.
ಒಂದು ಮೆನೆಯ ಟರೆಸಿನಿಂದ ಇನ್ನೊಂದು ಮನೆಯ ಟರೆಸಿಗೆ ತುಂಬಾ ಸುಲಭವಾಗಿ ದಾಟಬಹುದಾದಷ್ಟು ಹತ್ತಿರದಲ್ಲಿತ್ತು ಮನೆಗಳು.
ಎದ್ದು ಅವಳ ಹತ್ತಿರಕ್ಕೆ ಹೋಗಿ…,
“ಸಾಪಿಟ್ಯ?” ಎಂದೆ.
ಅವಳು ನನ್ನನ್ನೇ ನೋಡುತ್ತಿದ್ದಳು. ನಂತರ ಏನನ್ನಿಸಿತೋ ಏನೋ ತಿರುಗಿ ನಡೆದಳು…, ಇಳಿದು ಹೊರಟು ಹೋದಳು.
ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದು ಕೆಳಗಿಳಿದು ಬಂದು ಮಲಗಿದೆ!
ನಂತರ ಅವರ ಮನೆಯಲ್ಲಿ ಗಲಾಟೆ ಕೇಳಿಸಿದಾಗಲೆಲ್ಲಾ ನಾನು ಟರೆಸಿನ ಮೇಲಕ್ಕೆ ಹೋಗುತ್ತಿದ್ದೆ. ಅವಳು ಮೇಲಕ್ಕೆ ಬರುವಾಗ…, ಅವಳ ಏಕತಾನತೆಗೆ ಅವಕಾಶ ಒದಗಿಸುವವನಂತೆ ನಾನು ಕೆಳಕ್ಕೆ ಇಳಿಯುತ್ತಿದ್ದೆ.
ಒಂದು ದಿನ ಅವರ ಮನೆಯಲ್ಲಿ ಗಲಾಟೆ ನಡೆಯುವಾಗ ನಾನು ಪಾರ್ಸಲ್ ತಂದ ಬಿರಿಯಾಣಿ ಮತ್ತು ಕಬಾಬ್ ಅನ್ನು ಅವರ ಮನೆಯ ಟರಸಿನ ಅಂಚಿನಲ್ಲಿ ಇಟ್ಟೆ. ಅವಳು ಮೇಲಕ್ಕೆ ಬರುವುದು ಕಂಡಾಗ…, ಪಾರ್ಸಲ್‌ನೆಡೆಗೆ ಕೈತೋರಿಸಿ…, ಇಳಿದು ಹೋದೆ!
ಎರಡು ಮೂರು ಸಾರಿ…, ಅವರ ಮನೆಯಲ್ಲಿ ಗಲಾಟೆ ನಡೆದಾಗ…, ನಾನು ಅವಳಿಗೆ ಕಾಣಿಸದಂತೆ ಅವಳನ್ನು ಗಮನಿಸಿದೆ…,
ನನಗಾಗಿ ನೋಡುತ್ತಿದ್ದಾಳೆ- ನಿರಾಸೆಯಿಂದ ಮರಳುತ್ತಿದ್ದಾಳೆ!
ಅವಳಿಗೆ ನನ್ನ ಬಗ್ಗೆ ನಂಬಿಕೆ ಮೂಡಿದೆ ಎಂದು ಅರಿವಾದಾಗ…, ಪ್ರತಿಬಾರಿ ಗಲಾಟೆ ನಡೆದಾಗಲೂ ಟರಸಿನ ಮೇಲಕ್ಕೆ ಹತ್ತಿ…, ನಾನೇ ಅವಳಿಗೆ ಪಾರ್ಸಲ್ ತಂದ ಆಹಾರವನ್ನು ಕೊಡತೊಡಗಿದೆ.
ಮೊದಮೊದಲು ಸ್ವಲ್ಪ ಹಿಂಜರಿದಳಾದರೂ ನಂತರ ಯಾವುದೇ ಮುಜುಗರವಿಲ್ಲದೆ ಕಿತ್ತುಕೊಳ್ಳುವವಳೆಂತೆ ತೆಗೆದುಕೊಂಡು ಅಲ್ಲಿಯೇ ಕುಳಿತು ಗಬಗಬನೆ ತಿನ್ನತೊಡಗುತ್ತಿದ್ದಳು.
ಅವಳು ತಿನ್ನುವ ರೀತಿ ಕಂಡು ಹೊಟ್ಟೆಯೊಳಗೇನೋ ಸಂಕಟ!
“ಎನ್‌ಕೂಡೆ ವರಿಯ?” (ನನ್ನ ಜೊತೆ ಬರ್ತೀಯ?) ಎಂದು ಕೇಳಿದೆ.
ಊಟ ಮಾಡುತ್ತಿದ್ದವಳು ತೆಲೆಯೆತ್ತಿ ನನ್ನನ್ನೇ ನೋಡಿದಳು.
“ಎನಕ್ಕುಂ ಯಾರುಂ ಇಲ್ಲೈ!” (ನನಗೂ ಯಾರೂ ಇಲ್ಲ!) ಎಂದೆ.
ತಿನ್ನುತ್ತಿದ್ದ ಆಹಾರವನ್ನುಅಲ್ಲಿಯೇ ಬಿಟ್ಟು ಎದ್ದು ಟರೆಸನ್ನು ದಾಟಿ ಬಂದು ಎದುರಿಗೆ ನಿಂತುಕೊಂಡಳು- ಆ ಮಾತಿಗಾಗಿ ಕಾಯುತ್ತಿದ್ದವಳಂತೆ!
ಇದು ಅನಿರೀಕ್ಷಿತ ನನಗೆ!!
ಆ ಸಮಯದಲ್ಲಿ ನಾನಲ್ಲದೆ ಯಾರೇ ಆಗಿದ್ದರೂ ಅವಳು ಹಾಗೆ ಮಾಡುತ್ತಿದ್ದಳೇನೋ…? ಆ ನರಕದಿಂದ ಪಾರಾದರೆ ಸಾಕೆನ್ನುವಂತೆ!
ಅವಳ ಟರೆಸಿಗೆ ದಾಟಿ…, ಅವಳು ಅಲ್ಲಿಯೇ ಬಿಟ್ಟ ಆಹಾರವನ್ನು ತೆಗೆದುಕೊಂಡು ಈಚೆ ಬಂದವ…, ಅವಳೊಂದಿಗೆ ಕೆಳಕ್ಕೆ ಬಂದೆ.
ಮಾರನೆಯ ದಿನ ಹೊರಟರೆ ಸಾಕೆ?- ಎಂದು ಯೋಚಿಸಿದೆ.
ರಿಸ್ಕ್ ಬೇಡ ಎಂದು ಅವಳೊಂದಿಗೆ ಹೊರಟೆ. ಅಲ್ಲಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಲಾಡ್ಜ್‌ಒಂದರಲ್ಲಿ ಎರಡು ಸಪರೇಟ್ ರೂಂ ಬುಕ್ ಮಾಡಿದೆ. ಅವಳಿಗೆ ಕೊಡಬೇಕಾದ ನಿರ್ದೇಶನಗಳನ್ನು ಕೊಟ್ಟು ಮನೆಗೆ ಮರಳಿದೆ.
ಎರಡುಮೂರುದ ದಿನ ಕಳೆಯಿತು. ಮಧ್ಯೆ ಒಂದು ದಿನ ಪಕ್ಕದ ಮನೆಯವರು ಒಂದು ಫೋಟೋದೊಂದಿಗೆ ಬಂದಿದ್ದರು- ಈ ಹಡುಗಿಯನ್ನು ಎಲ್ಲಾದರೂ ನೋಡಿದ್ದೀರ?- ಎಂದು.
ಇಲ್ಲವೆಂದು ಹೇಳಿದೆ.
ನಂತರ ಮನೆಯನ್ನು ವೇಕೆಟ್ ಮಾಡಿದೆ. ಬಂದ ಅಗತ್ಯ ಮುಗಿಯಿತೆಂದೂ…, ಇನ್ನು ಬೇರೆಡೆಗೆ ಹೋಗಬೇಕಾಗಿರುವುದರಿಂದ ಈ ಮನೆಯ ಅಗತ್ಯವಿಲ್ಲವೆಂದೂ….
ಕೊಡು ಕೊಳ್ಳು ಏನೂ ಇಲ್ಲದೆ…, ಅಡ್ವಾನ್ಸ್‌ಬಗ್ಗೆ ಏನೂ ತಕರಾರಿಲ್ಲದ್ದರಿಂದ- ಸುಲಭವಾಗಿ ಹೊರಟೆ!
ಪ್ರತಿ ದಿನ ಬಂದು ಅವಳಿಗೇನು ಬೇಕೋ ವ್ಯವಸ್ತೆ ಮಾಡಿ ಹೋಗುತ್ತಿದ್ದುದ್ದರಿಂದ ನೆಮ್ಮದಿಯಾಗಿದ್ದಳು.
ಹೋಟೆಲ್ ರೂಮನ್ನು ಕೂಡ ವೇಕೆಟ್ ಮಾಡಿ- ಹೊರಟೆವು.
*
ಐ.ಎ.ಎಸ್. ಆಫೀಸರ್ ಆಗಬೇಕೆಂಬ ಕನಸಂತೆ ಹುಡುಗಿಗೆ! ಸರ್ಕಾರಿ ಶಾಲೆಯಲ್ಲಿ ಪಿಯುಸಿವರೆಗೆ ಓದಿದ್ದಾಳೆ! ಮುಂದಿನ ತಿಂಗಳು ಹದಿನೆಂಟು ತುಂಬುತ್ತದಷ್ಟೆ! ಮನೆಯಲ್ಲಿ ಪ್ರಾರಬ್ಧ! ಐವತ್ತೆರಡು ವರ್ಷದ ವ್ಯಕ್ತಿಗೆ ಮದುವೆಮಾಡಿ ಕೊಟ್ಟಿದ್ದಾರೆ- ಮೂರನೆಯವಳೋ ನಾಲ್ಕನೆಯವಳೋ ಅವಳಿಗೆ ತಿಳಿಯದು!
ಆ ವ್ಯಕ್ತಿಯ ಇಬ್ಬರು ಗಂಡು ಮಕ್ಕಳೂ ಇವಳಿಗಿಂತ ಹಿರಿಯರು! ಅವರಿಗೂ ಮದುವೆಯಾಗಿದೆಯಾದರೂ- ಅವರ ಹೆಂಡತಿಯರಿಗಿಂತ ಈ ಹುಡುಗಿಯೇ ಚಂದ! ಅವಳ ಇಚ್ಛೆಗೆ ಬೆಲೆಯೇ ಇಲ್ಲ. ಗಂಡುಮಕ್ಕಳಿಬ್ಬರೂ ಅವಳನ್ನು ರೇಪ್ ಮಾಡಿದ್ದಾರೆ! ಆದರೆ ಅವಳೇ ಅವರನ್ನು ಸೆಳೆಯುತ್ತಿರುವುದು ಅನ್ನುವಂತೆ- ನರಕ ಅವಳಿಗೆ!
*
ಬಂದು ತಿಂಗಳಾಗಿತ್ತು. ಸ್ವಲ್ಪ ದುಡ್ಡು ಖರ್ಚಾದರೂ ಪರವಾಗಿಲ್ಲ…, ಅವಳು ಓದುತ್ತಿದ್ದ ಶಾಲೆಗೆ ಹೋಗಿ ಹೇಗಾದರೂ ಸರ್ಟಿಫಿಕೆಟ್‌ಗಳನ್ನು ಪಡೆದುಕೊಳ್ಳಬೇಕು ಅನ್ನುವ ಯೋಚನೆಯಲ್ಲಿದ್ದಾಗ…,
ಎದುರಿಗೆ ಬಂದು ನಿಂತಳು.
ಅವಳನ್ನು ನೋಡಿ ಮುಗುಳುನಕ್ಕೆ. ಪರವಾಗಿಲ್ಲ…, ಮುಖದಲ್ಲಿ ಸ್ವಲ್ಪ ಕಳೆ ಬಂದಿದೆ ಅಂದುಕೊಂಡೆ.
“ನಾನು ನಿಮ್ಮನ್ನು ಏನೆಂದು ಕರೆಯಲಿ?” ಎಂದಳು- ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ!
ಖುಷಿಯಾಯಿತು! ಇದುವರೆಗೂ ನಾವು ಪರಸ್ಪರ ಏನೂ ಕರೆದುಕೊಂಡಿರಲಿಲ್ಲ! ಈ ಯೋಚನೆ ನನ್ನ ಮನಸ್ಸಿಗೂ ಬಂದಿತ್ತು…, ಆದರೆ ನನ್ನ ಮನಸ್ಸಿನಲ್ಲಿ ಏನಿದೆ ಅನ್ನುವುದನ್ನು ಹೇಳದೆ-
“ಏನಂತ ಕರೆಯಬೇಕು ಅಂತ ನಿನಗನ್ನಿಸುತ್ತಿದೆ?” ಎಂದು ಕೇಳಿದೆ.
ಮತ್ತಷ್ಟು ಸೂಕ್ಷ್ಮವಾಗಿ ನನ್ನ ಕಣ್ಣುಗಳನ್ನೇ ನೋಡುತ್ತಾ…, ನೀನೇನೆಂದು ಅರಿಯಲು ನನಗಿಷ್ಟು ದಿನ ಸಾಕು ಅನ್ನುವಂತೆ…, ನನ್ನೊಳಗನ್ನು ಸ್ಪಷ್ಟವಾಗಿ ತಿಳಿದವಳಂತೆ…,
“ಅಪ್ಪ!” ಎಂದಳು.
ನನ್ನರಿವಿಲ್ಲದೆ ಕಣ್ಣು ತುಂಬಿತು! ಕೈಯ್ಯಗಲಿಸಿದೆ. ಬೆಕ್ಕಿನ ಮರಿಯಂತೆ ತೆಕ್ಕೆಯೊಳಗೆ ಸೇರಿಕೊಂಡಳು.
“ನೀನು ಐ.ಎ.ಎಸ್ ಆಫೀಸರ್ ಆಗುತ್ತೀ!” ಎಂದೆ- ಅವಳ ತಲೆಯಮೇಲೊಂದು ಮುತ್ತುಕೊಟ್ಟು!
ಹೀಗೆ ಎಷ್ಟು ಹೆಣ್ಣು ಮಕ್ಕಳು ನಲುಗುತ್ತಿದ್ದಾರೋ ಜಗತ್ತಿನಲ್ಲಿ ಹೆತ್ತವರೇ ಮೃಗಗಳು ಕ್ರೂರಿಗಳತoಹ ಮನಸತ್ವಗಳು ಮನೆ ಮಾಡಿಕೊಂಡಿವೆ.. ಮಾತೃತ್ವ ಪಿತೃತ್ವದ ಸ್ವಭಾವಗಳು ಇನ್ನು ಯಾರಲ್ಲೋ ಮೊಲೆತು ಅಂತವಾlರ ಬಾಳಿಗೆ ಬೆಳಕಾಗುತ್ತವೆ ಅಂತಹ ಮನಸತ್ವಗಳು ಮಾನವೀಯತೆಯನ್ನು ಎತ್ತಿ ತೋರುತ್ತವೆ. ತುಂಬಾ ಚಂದದ ಕಥೆ.ಕಥೆಗಾರರೇ...
ReplyDelete