ಬದುಕೆಂಬ ಆಯ್ಕೆ!
ಇವತ್ತೇ ಯಾಕೆ ಇಷ್ಟು ನೆನಪಾಗುತ್ತಿದ್ದಾಳೆ?
ಯಾಕೆಂದರೆ ಬೆಂಗಳೂರಿಗೆ ಹೋಗುತ್ತಿದ್ದೇನೆ- ಎರಡು ವರ್ಷಗಳ ನಂತರ...
ಕಾಣಿಸುತ್ತಾಳೆಯೇ?
ಅಂದು..., ಬೆಂಗಳೂರಿಗೆ ಹೋದ ಕೆಲಸ ಮುಗಿಸಿ ಮೆಜೆಸ್ಟಿಕ್‌ನಿಂದ ಅಂಡರ್‌ಗ್ರೌಂಡ್‌ಮೂಲಕ ರೈಲ್ವೇಸ್ಟೇಷನ್‌ಗೆ ಬರುವಾಗ..., ಹೊರ ದಾರಿಯ ಮೆಟ್ಟಿಲಿನಮೇಲೆ ಕಾಲಗಲಿಸಿ ಕುಳಿತಿದ್ದಳು!
ಇವಳೂ....? ಅನ್ನುವ ಪ್ರಶ್ನೆ ಉದಿಸುವಂತಿದ್ದಳು ಹುಡುಗಿ!
ಅವಳ ಮುಖವನ್ನು ನೋಡಿದಾಗಕ್ಷಣ ಬೇಕಾ- ಅನ್ನುವಂತೆ ಹುಬ್ಬು ಕುಣಿಸಿದಳಾದರೂ ನನ್ನ ಕಣ್ಣಿನ ಭಾವ ತಾಕಿದವಳಂತೆ ತಲೆ ತಗ್ಗಿಸಿದಳು!
ಎಷ್ಟಿರಬಹುದು ವಯಸ್ಸು?
ಇಪ್ಪತ್ತು? ಎಷ್ಟೇ ಹೆಚ್ಚೆಂದರೂ ಇಪ್ಪತ್ತೈದು ದಾಟಿರುವುದಿಲ್ಲ.
ಒಂದೇ ನೋಟದಲ್ಲಿ ಯಾರನ್ನೂ ಅಳೆಯಲಾಗುವುದಿಲ್ಲವಾದರೂ..., ಒಳ್ಳೆಯ ಮನೆತನದ ಹುಡುಗಿ ಎಂದೇ ಅನ್ನಿಸಿದ್ದು!!
ಅವಳ ಪಕ್ಕದಲ್ಲಿಯೇ..., ಅವಳು ಕುಳಿತಂತೆಯೇ ಕಾಲಗಲಿಸಿ ಕುಳಿತು...,
“ಹಣಕ್ಕಾಗಿಯೋ ಸುಖಕ್ಕಾಗಿಯೋ?” ಎಂದು ಕೇಳಿದ್ದೆ!
ಅಯೋಮಯವಾಗಿ ನೋಡಿದಳು.
“ಎರಡಕ್ಕಾದರೂ ನಿನಗಿದು ಹೊಂದುವುದಿಲ್ಲ!” ಎಂದು ಹೇಳಿ ಎದ್ದು ಹೊರಟು ಬಂದಿದ್ದೆ!
ಅವಳ ಮಹತ್ವ ಅವಳಿಗಾದರೂ ಗೊತ್ತೋ ಇಲ್ಲವೋ..., ನನ್ನ ಮಾತಿನ ಪ್ರಭಾವ ಎಳ್ಳಷ್ಟಾದರೂ ಬೀರಿದರೆ ಬೀರಲಿ ಅಂದುಕೊಂಡು ಹೇಳಿದ್ದೆ!
ಅಷ್ಟೇ..., ಅವಳ ಮುಖ ಅಚ್ಚಳಿಯದೆ ಮನಸ್ಸಿನಲ್ಲಿ ಉಳಿದುಹೋಯಿತು!!
ಇವತ್ತು ಮತ್ತೆ ಮತ್ತೆ ನೆನಪಾಗಿ..., ರೈಲು ಇಳಿದು ಮೆಜೆಸ್ಟಿಕ್‌ಕಡೆಗೆ ಹೋದೆ... ಅಂಡರ್‌ಗ್ರೌಂಡ್‌ಗೆ ಇಳಿದು ಮೆಜೆಸ್ಟಿಕ್ ತಲುಪುವವರೆಗೂ ಕಣ್ಣು ಹುಡುಕುತ್ತಲೇ ಇತ್ತು- ಸಧ್ಯ... ಇರಲಿಲ್ಲ!
ಹೋದ ಕೆಲಸ ಮುಗಿಸಿ ಮತ್ತದೇ ದಾರಿ..., ಮತ್ತದೇ ಮೆಟ್ಟಿಲು..., ಮತ್ತದೇ ಹುಡುಗಿ!!
ಈಗ ಅವಳನ್ನು ನೋಡಿದರೂ ಹಿಂದನಂತೆ- ಇವಳೂ? ಅನ್ನುವಂತೆ ಇರಲಿಲ್ಲ!
ಅವಳಿಗಂತೂ ನನ್ನ ಗುರುತು ಸಿಗುವ ಹಾಗೇ ಇರಲಿಲ್ಲ! ಎರಡು ವರ್ಷದ ಗಡ್ಡ- ಕೂದಲು! ಬದಲಿಗೆ..., ಅವಳ ಬಲೆಗೆ ಬಿದ್ದ ವಿಟನಂತೆ ಕಾಣಿಸಿದೆನೇನೋ..., ಆಹ್ವಾನದ ನೋಟ!!
ಅಂದಿನಂತೆಯೇ ಅವಳ ಪಕ್ಕ ಕುಳಿತು...,
“ನನ್ನ ನೆನಪಾಗಲಿಲ್ಲ ಅಲಾ?” ಎಂದೆ.
ಅದೇ ಅಯೋಮಯ ನೋಟ!
“ಈಗ ನೀನು..., ಇದಕ್ಕಾಗಿಯೇ ಹುಟ್ಟಿದವಳಂತಿದ್ದೀಯ!” ಎಂದು ಹೇಳಿ ಹೊರಟು ಬಂದೆ.
ಇನ್ನು ಹೇಳಲು ಏನೂ ಇಲ್ಲ!
ಬದುಕು ಅವರವರ ಆಯ್ಕೆ..., ಏನು ಮಾಡಬೇಕು ಏನು ಮಾಡಬಾರದು ಅನ್ನುವುದರೊಂದಿಗೆ..., ದುಃಖವೋ ಸುಖವೋ ನೆಮ್ಮದಿಯೋ ನರಕವೋ..., ಬದುಕು..., ಅವರವರ ಆಯ್ಕೆ!
ಅಷ್ಟೇ ಅವಳು ಯಾವುದೊ ಕಷ್ಟಕ್ಕೆ ಬಿದ್ದು ಈ ದಾರಿ ಹಿಡಿದಿದ್ದರೆ ಪ್ರಶ್ನೆ ಮಾಡಿದವರೊಂದಿಗೆ ಸ್ಪಂದಿಸುತ್ತಿದ್ದಳು ಅವಳು ಎಲ್ಲ ಗೊತ್ತಿದ್ದು ಅದಕ್ಕಾಗಿಯೆ ಇದ್ದಹಾಗೆ ಇದೆ ಅಷ್ಟೇ ಅವರವರ ಬದುಕು ಅವರ ಆಯ್ಕೆ ಕಷ್ಟಕ್ಕೂ ಸುಖಕ್ಕೂ ಅವರವರಿಗೆ ಅವರೇ ಕಾರಣ ಈಗ ಯಾರ ಮಾತತಿಗೂ ಯಾರು ಕಿವಿಕೋಡುವವರು ವಿರಳ...ಮತ್ತೆ ಬದುಕಿನಲ್ಲಿ ನಿಮ್ಮ ಆಯ್ಕೆ ಏನು ಅದು ಬರೆಯಿರಿ ಮತ್ತೆ ಸದ್ಯ ಅವರ ಬದುಕು ಒಂದು ಕಡೆಯಿರಲಿ 🤦
ReplyDelete