ಅಮ್ಮ- ಕಥೆ!
೧ ಚಿಕ್ಕಂದಿನಲ್ಲಿ ನಾನೂ ನನ್ನ ಅಮ್ಮನೊಂದಿಗೆ ಭಿಕ್ಷೆಬೇಡುತ್ತಿದ್ದೆ . ನಮ್ಮದು ಯಾವ ಮತವೆಂದೋ ..., ನಾವು ಯಾವ ಜಾತಿಗೆ ಸೇರಿದವರೆಂದೋ ..., ಏನೂ ತಿಳಿಯದು . ಆದರೆ ಅಮ್ಮ ಬುರ್ಖಾ ಧರಿಸುತ್ತಿದ್ದರು . ನನ್ನ ಕೈಹಿಡಿದು ಮನೆಮನೆಗೆ , ಅಂಗಡಿ ಅಂಗಡಿಗೆ ಭಿಕ್ಷೆಗೆಂದು ಕರೆದೊಯ್ಯುತ್ತಿದ್ದರು . ದಾರಿಯಲ್ಲಿ ಸಿಗುವ ಹಣವಂತರೆದುರೂ ಕೈ ಚಾಚುತ್ತಿದ್ದರು . ಎಷ್ಟೇ ಕಷ್ಟವಾದರೂ ನನ್ನನ್ನು ಓದಿಸಬೇಕೆನ್ನುವುದು ಅಮ್ಮನ ಆಸೆ . ಶಾಲೆಗೆ ಸೇರಿಸಿದರು . ಅಮ್ಮ ಯಾವಾಗಲೂ ಹೇಳುತ್ತಿದ್ದ ಮಾತೊಂದೇ , “ ನನ್ನಿಂದಾಗಿ ನೀನು ತಲೆತಗ್ಗಿಸಬೇಕಾಗಿ ಬರಬಹುದು , ಆದರೆ ನಿನ್ನಿಂದಾಗಿ ನಾನು ತಲೆಯೆತ್ತಿ ನಡೆಯುವಂತೆ ಮಾಡಬೇಕು ” ಅಮ್ಮ ಹಾಗೇಕೆ ಹೇಳುತ್ತಿದ್ದರೋ ಮೊದಲೆಲ್ಲಾ ನನಗೆ ತಿಳಿಯಲಿಲ್ಲ . ಕಾಲಕ್ರಮೇಣ ತಿಳಿಯಿತು . ಒಂದುರಾತ್ರಿ , ಅಮ್ಮ ಕೊಟ್ಟ ಹಾಲು ಕುಡಿಯದೆ ಮಲಗಿದ ನನಗೆ ಯಾರೋ ನರಳುತ್ತಿರುವ ಶಬ್ದ ಕೇಳಿ ಎಚ್ಚರವಾಯಿತು . ಸಮೀಪದಲ್ಲಿ ಅಮ್ಮ ಇಲ್ಲ . ಪಕ್ಕದ ಗೋಡೆಯ ಆಚೆಯಿಂದ ಮುಲುಕುಗಳೂ ನರಳುವಿಕೆಯೂ ನಿಟ್ಟುಸಿರುಗಳೂ ಕೇಳಿಸುತ್ತಿದ್ದವು . ಹೆದರುತ್ತಲೇ ಹೋಗಿ ನೋಡಿದೆ . ಅಮ್ಮನ ಪಕ್ಕದಲ್ಲಿ ಯಾರೋ ಪರಪುರುಷನೊಬ್ಬ ಮಲಗಿದ್ದ . ಅವರಿಗೆ ತಿಳಿಯದಂತೆ ಬಂದು ಮಲಗಿದೆ . ಮಾರನೆಯದಿನ ಅಮ್ಮ ಕೊಟ್ಟ ಹಾಲು ಕುಡಿದು ಮಲಗಿದ್ದರಿಂದ ಎಚ್ಚರವಾಗಲಿಲ್ಲ ...