೧ ” ಕೀಳಬೇಡವೋ , ಅದು ಗಿಡದಲ್ಲಿದ್ದರೇನೇ ಚಂದ”ಎಂದರು ಅಮ್ಮ . ಹೊಸ್ತಿಲಿನಮೇಲೆ ಕುಳಿತು ನನ್ನ ಚಟುವಟಿಕೆಯನ್ನೇ ಗಮನಿಸುತ್ತಿದ್ದರು ! ಹೂತೋಟದಮಧ್ಯೆ ನಿಂತು ಗಿಡಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದನಾನು , ಆ ಹೂವನ್ನು ಕಂಡು , ಮುದಗೊಂಡು , ಕೀಳಲು ಕೈ ಚಾಚಿದ್ದೆ ! ಅಮ್ಮನ ಮಾತು ಕೇಳಿ , ಅವರತ್ತ ತಿರುಗಿ , ಅಮಾಯಕ ನಗು ನಕ್ಕೆ ! ನಡೆದುಬಂದು ಅವರ ಪಾದದಬಳಿ ಕುಳಿತೆ . ಪ್ರೀತಿಯಿಂದ ತಲೆ ನೇವರಿಸಿದರು . “ ಅಲ್ಲಮ್ಮಾ ... ಒಂದು ಹೂ ಕಿತ್ತರೆ ನಿಮ್ಮ ಗಂಟೇನು ಹೋಗುತ್ತದೆ ?” ಎಂದೆ . “ ನನ್ನ ನಿನ್ನ ಗಂಟೇನೂ ಹೋಗುವುದಿಲ್ಲ . ಆದರೂ ಕೀಳಬೇಡ ಅಷ್ಟೆ . ಪ್ರಕೃತಿಯೊಂದಿಗೆ ಸಂಭಾಷಣೆ ನಡೆಸುವ ನಿನಗೆ ನಾನು ಹೇಳಿಕೊಡಬೇಕೆ ?” ಎಂದರು . ನಕ್ಕೆ . ತಲೆಯೆತ್ತಿ ಅವರ ಮುಖವನ್ನು ನೋಡಿದೆ . ಅಮ್ಮಾ ..... ವ್ಯಕ್ತಿತ್ವದ ಮೇರು ಪರ್ವತ . ಒಂದು ಹೂವನ್ನು ಕಿತ್ತರೆ ದುಃಖಿಸುವ ಈ ತಾಯಿ , ಬದುಕಿಬಂದ ದಾರಿಯನ್ನು ನೆನಸಿಕೊಂಡರೆ ..... ಅಬ್ಬಾ ... ನಾನರಿಯದೆ ನನ್ನ ಕಣ್ಣು ತುಂಬಿತು . “ ಯಾಕೋ ?” ಎಂದರು , ವಾತ್ಸಲ್ಯದಿಂದ ನನ್ನ ತಲೆ ನೇವರಿಸುತ್ತಾ . ಅವರ ಮಡಿಲಿನಲ್ಲಿ ತಲೆಯಾನಿಸಿದೆ . ಕೂದಲನಡುವೆ ಬೆರಳಾಡಿಸಿದರು . ಅವರ ಪಾದವನ್ನು ಮುಟ್ಟಿ , “ ಅಮ್ ಮ್ ಮ್ಮಾ ...” ಎಂದೆ . “ ಏನೋ”ಎಂದರು . ನಾನೇನೂ ಮತನಾಡಲಿಲ್ಲ .... ಕಣ್ಣು ಮುಚ್ಚಿದೆ . “ ಬಂದ ದಾರಿಯನ್ನು ನೆನೆಸಿಕೊಂಡರೆ ಕಣ್ಣು ತುಂಬಿಬರುತ್ತದೆ , ಅಲ್ಲವೇ ಅರ...