ದೊಡ್ಡ ಕಥೆ!
ದೊಡ್ಡ ಕಥೆ ! * ಅಂಗಾತನೆ ಮಲಗಿದ್ದೇನೆ - ಮುಳುಗುವುದಿಲ್ಲವಾಗಲಿ ಪೂರ್ತಿಯಾಗಿ ಒದ್ದೆಯಾಗುವಂತೆ ! ಉರುಳುರುಳಿ ಬರುವ ಅಲೆಗಳು ತೋಯಿಸಿ ಮರಳುತ್ತಿದೆ . ನಾಲಕ್ಕು ಗಂಟೆಯ ಬಿಸಿಲು ! ತೀರದ ಮರಳೆಲ್ಲಾ ಹಾರಾಡುವಂತೆ - ಬಿಸಿಗಾಳಿ . ಯಾರೆಂದರೆ ಯಾರೂ ಇಲ್ಲದ ಸಮಯ ! ಒಬ್ಬನೇ… ! ಮಲಗಿದ್ದೇನೆ - ಅಂದೆ . ಮಲಗುವಾಗ ನಾರ್ಮಲ್ ಆಗಿದ್ದೆ . ಮಲಗಿ ಸ್ವಲ್ಪ ಹೊತ್ತಿಗೆ ದೇಹದ ಸತ್ವವೆಲ್ಲಾ ಇಳಿದು ಹೋದಂತೆ - ಹಗುರ ! ದೇಹ ಚಲಿಸದಿದ್ದರೂ ಮನಸ್ಸಿಗೇನು ? ಸಮುದ್ರಕ್ಕಿಂತಲೂ ವಿಶಾಲ ! ಬಿಸಿಲಿನ ಝಳವಾಗಲಿ , ಗಾಳಿಯ ಗಾಢತೆಯಾಗಲಿ , ಅಲೆಗಳ ತೋಯುವಿಕೆಯಾಗಲಿ ಅನುಭವಕ್ಕೆ ಬರುತ್ತಿಲ್ಲ . ಸೂರ್ಯಕಿರಣ ಚುಚ್ಚದಂತೆ ಕಣ್ಣು ಮುಚ್ಚಿದ್ದೇನೆ . ಈ ಅನುಭವವನ್ನು ಹೇಗೆ ವಿವರಿಸುವುದು ? ಅನುಭವಿಸಿಯೇ ಅರಿಯಬೇಕು ಅನ್ನಲೇ - ಅನುಭವಿಸಬಾರದು ಅನ್ನಲೆ ? ಆ ಅವಸ್ತೆಯಲ್ಲಿ ಎಷ್ಟು ಹೊತ್ತಿದ್ದೆನೋ… , “ ಯಾರದು ? ಇಷ್ಟು ಹೊತ್ತಿನಲ್ಲಿ ?” ಎಂದು ಯಾರೋ ಕೇಳಿದರು . ಕಣ್ಣು ತೆರೆದೆ . ಕತ್ತಲು . ಆಕಾಶದ ತುಂಬಾ ನಕ್ಷತ್ರಗಳು . ಸಮುದ್ರದ ಮೊರೆತ . ಕಣ್ಣ ರೆಪ್ಪೆ ಚಲಿಸುತ್ತಿದೆ - ಶಬ್ದ ಬಂದ ದಿಕ್ಕಿಗೆ ತಿರುಗಿದೆ ! ಪರವಾಗಿಲ್ಲ - ಮುಖ ತಿರಗಿಸಬಹುದು ! ಕೈ ಅಲ್ಲಾಡಿಸಲು ಶ್ರಮಿಸಿದೆ - ಕೈಯ್ಯ ಇರವೇ ಇಲ್ಲ ! ಅಂದರೆ ಕುತ್ತಿಗೆಯ ಕೆಳಗೆ - ದೇಹ ಸ್ಪಂದಿಸುತ್ತಿಲ್ಲ . ಹತ್ತಿರ ತಲುಪಿದ್ದ ವ್ಯಕ್ತಿ ಕೈಯ್ಯಲ್ಲಿದ್ದ ದೊಣ್ಣೆಯಿಂದ ನನ್ನ ಎದೆಯನ್ನು ತಿವಿಯು...