ಹಾರಿಣಿ

  

ಹಾರಿಣಿ

*

ಅವಳ ಹೆಸರು ಹಾರಿಣಿ. ವಯಸ್ಸು ನಲವತ್ತು- ಗೊತ್ತು ಆದ್ದರಿಂದ ನಲವತ್ತು! ಮೊದಲ ನೋಟಕ್ಕೆ ಮೂವತ್ತೈದಕ್ಕಿಂತ ಹೆಚ್ಚು ಅನ್ನಿಸುವುದಿಲ್ಲ- ಹಾಗಿದ್ದಾಳೆ!

ಬರಹೇಳಿದ್ದಾಳೆ. ಮನೆಯಲ್ಲಿ ಯಾವುದೋ ಪೂಜೆ.

ತಲುಪಿ ಸಮಯವನ್ನು ನೋಡಿಕೊಂಡೆ. ಸಂಜೆ ಏಳು. ಏಳೂವರೆಯಿಂದ ಒಂಬತ್ತರವರೆಗೆ ಪೂಜೆ. ಪೂಜೆಯಿದೆ ಬಾ ಅಂದಿದ್ದಳು. ಅವಳಿಗೂ ಗೊತ್ತು ಯಾವ ಪೂಜೆಯೆಂದು ನಾನು ಕೇಳುವುದಿಲ್ಲವೆಂದು! ಅವಳೂ ಹೇಳಲಿಲ್ಲ! ಅಥವಾ ಹೇಳಿದ್ದಳ?

ಏನೋ..., ಯಾವ ಪೂಜೆಯೆಂದು ನೆನಪಾಗಲಿಲ್ಲ- ಸೊ ಹೇಳಿಲ್ಲ!

ಗಜಿಬಿಜಿ. ತುಂಬಾ ಜನ ಸೇರಿದ್ದಾರೆ.

ಬರೀ ನೆಂಟರೋ ಅಥವಾ ನನ್ನಂತಾ ಪರಿಚಯದವರು- ಆಸುಪಾಸಿನವರೂ ಇದ್ದಾರೋ ತಿಳಿಯಲಿಲ್ಲ.

ಮನೆಯ ಒಳಕ್ಕೆ ಹೋಗಲೋ ಬೇಡವೋ ಅನ್ನುವ ಯೋಚನೆಯಲ್ಲಿ ನಿಂತಿದ್ದಾಗ..., ಮನೆಯ ಪಕ್ಕದ ಬೇವಿನ ಮರ ಸೆಳೆಯಿತು. ಅದರ ಪಕ್ಕದಲ್ಲೇ ಸೀಬೇಮರ. ಮರದಲ್ಲಿ ಪೂರ್ತಿ ಹಣ್ಣುಗಳು!

ಪೂಜೆಗೆ ಇನ್ನೂ ಅರ್ಧಗಂಟೆಯಿದೆ. ಬಂದಿದ್ದೇನೆ ಅನ್ನಿಸಿ ಹೊರಬರೋಣವೆಂದು ಬಾಗಿಲಕಡೆ ನಡೆದರೆ..., ಬಾಗಿಲ ಬಳಿ ನಿಂತು ನನ್ನನ್ನೇ ನೋಡುತ್ತಿದ್ದಾಳೆ- ಹಾರಿಣಿ!

ಬಿಳಿ ಹೂಗಳಿರುವ ಕಪ್ಪು ಸೀರೆ! ಬೇಲೂರಿನಲ್ಲೋ ಹಳೆಬೀಡಿನಲ್ಲೋ ಸೋಮನಾಥಪುರದಲ್ಲೋ ನೋಡಿದ್ದೇನೆ- ಶಿಲ್ಪಿಗಳು ಕಡೆದು ನಿಲ್ಲಿಸಿರುವ ಹೆಣ್ಣು ಶಿಲ್ಪಗಳನ್ನು- ಅವರು ಇವಳನ್ನು ಕಂಡಿರುವುದಿಲ್ಲ!

ಸ್ವಲ್ಪವೂ ಅಳತೆ ಮೀರದ ಆಕಾರಬದ್ಧ ಶರೀರ... ಅವಳಿಗೆ ಗೊತ್ತು ಅವಳ ಸೌಂಧರ್ಯ- ಏನು ಮಾಡಿದರೆ ಮತ್ತಷ್ಟು ಉಜ್ವಲವಾಗುತ್ತದೆಂದು!

ನನ್ನ ನೋಟವನ್ನು ಕಂಡು ನಾಚಿಕೆಯಿಂದ ತಲೆ ತಗ್ಗಿಸಿದಳು- ರವಿಮರ್ಮನೋ ಕಾಳಿದಾಸನೋ ಆಗಬೇಕಿತ್ತು ನಾನು!!

ನೀನು ಹೊರಗೇ ಇರು! ಬೇಕಾದಷ್ಟು ಗಿಡಮರಗಳಿದೆ- ಸುತ್ತಿ ಬಾ! ಒಳಗಿದ್ದರೆ ನನಗೆ ತಲೆಯೆತ್ತಿ ನಡೆಯಲಾಗುವುದಿಲ್ಲ!” ಎಂದಳು.

ಮುಗುಳುನಕ್ಕು ಸೀಬೆ ಮರದಕಡೆಗೆ ನಡೆದೆ. ಐದಾರು ಸೀಬೆ ಹಣ್ಣುಗಳನ್ನು ಕಿತ್ತು..., ಬೇವಿನ ಮರದ ನೆರಳಿಗೆ ಬಂದೆ.

ಯಾಕೋ ತಿಳಿಯದು..., ಬೇವಿನ ಮರವೆಂದರೆ ಏನೋ ಆಕರ್ಷಣೆ ನನಗೆ!

ಅದರ ಕೊಂಬೆಯೊಂದರಮೇಲೆ ಕುಳಿತು ಸೀಬೆ ಹಣ್ಣು ತಿನ್ನುತ್ತಿದ್ದಾಗ...,

ಹಣ್ಣಿನಲ್ಲಿ ಹುಳಗಳಿರುತ್ತದೆ- ಜೋಪಾನ!” ಅನ್ನುವ ಮಾತುಕೇಳಿ ಶಬ್ದ ಬಂದ ಕಡೆ ನೋಡಿದೆ.

ಮನೆಯವರೋ ನೆಂಟರೋ ತಿಳಿಯಲಿಲ್ಲ- ವ್ಯಕ್ತಿಯೊಬ್ಬ ನಿಂತಿದ್ದ.

ಪೂಜೇಗೆ ಬಂದು ಇಲ್ಲೇ ಕುಳಿತಿದ್ದೀರಲ್ಲ..., ಬನ್ನಿ ಒಳಕ್ಕೆ!” ಎಂದು ಹೇಳಿ ತೆಂಗಿನ ಗರಿಗಳನ್ನು ಎಳೆದುಕೊಂಡು ಹೊರಟು ಹೋದ.

ಅರ್ಧತಿಂದ ಹಣ್ಣನ್ನು ನೋಡಿದೆ- ಹುಳಗಳು!!

ಚಿಕ್ಕಂದಿನಿಂದಲೂ ಇದೆಲ್ಲಾ ಅಭ್ಯಾಸವಾಗಿದ್ದರಿಂದ ಅಸಹ್ಯವೇನೂ ಆಗಲಿಲ್ಲ. ಆ ಹಣ್ಣನ್ನು ಎಸೆದು ಬೇರೆಯೊಂದನ್ನು ಅದುಮಿ ಎರಡು ಭಾಗ ಮಾಡಿ ನೋಡಿದೆ- ಹುಳುಗಳು!!

ಯಾವೊಂದು ಹಣ್ಣೂ ತಿನ್ನಲು ಯೋಗ್ಯವಾಗಿರಲಿಲ್ಲ.

ಕೊಂಬೆಯಿಂದ ಇಳಿದು..., ಮರಕ್ಕೆ ಒರಗಿ ನೆಲದಮೇಲೆ ಕುಳಿತೆ..., ಅಷ್ಟೇ ನೆನಪು!

ಭೂಕಂಪವಾ?

ನಾನೇಕೆ ಓಲಾಡುತ್ತಿದ್ದೇನೆಂದು ನೋಡಿದರೆ...,

ಅಂಕಲ್ ಅಂಕಲ್ ಪೂಜೆ ಶುರುವಾಯಿತು ಬರಬೇಕಂತೆ!” ಅನ್ನುತ್ತಿದ್ದರು ಮಕ್ಕಳು- ನನ್ನನ್ನು ಅಲುಗಿಸುತ್ತಾ!

ಪಿಚ್- ಅನ್ನಿಸಿತು!

ಎದ್ದು ಮನೆಯ ಒಳಕ್ಕೆ ಹೋದೆ.

ಹೋಮ..., ಗಣಪತಿ ಹೋಮವಾ? ಸತ್ಯನಾರಾಯಣ ಪೂಜೆಯಾ?

ಏನೋ ಒಂದು!

ಅವಳು- ಹಾರಿಣಿ- ತನ್ಮಯಳಾಗಿ ಕುಳಿತಿದ್ದಳು. ಅವಳ ಪಕ್ಕ ಆಗಲೆ ಕಂಡ ವ್ಯಕ್ತಿ!

ಯಾರಿರಬಹುದು?

ಆತನಬಗೆಗಿನ ಯೋಚನೆ ಕ್ಷಣಮಾತ್ರ..., ದೃಷ್ಟಿ ನನ್ನರಿವಿಲ್ಲದೆ ಅವಳೆಡೆಗೆ ಸರಿಯಿತು!

ಅವಳಿಂದ ಕಣ್ಣು ತಪ್ಪಿಸಲು ಹರ ಸಾಹಸ ಮಾಡಬೇಕಾಯಿತು!

ಪೂಜೆ ಮುಗಿದು ಎಲ್ಲರೂ ಚದುರಿದಾಗ ನಾನೂ ಎದ್ದು ಹೊರಬಂದೆ.

ಅದೇ ಬೇವಿನ ಮರ ಕರೆಯಿತು!

ಬಾಗಿ ಅದರ ಬುಡದಲ್ಲಿ ಕುಳಿತುಕೊಳ್ಳಬೇಕು...,

ಇನ್ನೂ ಏನ್ ಕೂತ್ಕೋತೀರ? ಬನ್ನಿ- ಫೋಟೋ ಸೆಷನ್ ಶುರುವಾಯಿತು!” ಎಂದ ಆತ- ಅದೇ ವ್ಯಕ್ತಿ!

ಇರಲಿ..., ಒಂದೆರಡು ನಿಮಿಷ ಕೂತು ಬರುತ್ತೇನೆ!” ಎಂದೆ.

ಆತ ಹೊರಟುಹೋದ. ಎಷ್ಟು ಸಮಯ ಕಳೆಯಿತೋ..., ಪುನಃ ಅದೇ ಕರೆ...,

ಅಂಕಲ್ ಅಂಕಲ್ ಬನ್ನಿ ಆಂಟಿ ಕರೆಯುತ್ತಿದ್ದಾರೆ!”

ಮುಗುಳುನಕ್ಕು ಎದ್ದು ನಡೆದೆ. ಮನೆಯ ಮುಂದೆಯೇ ಚಪ್ಪರ. ಒಂದುಕಡೆ ಊಟಕ್ಕೆ ಎಲೆ ಹಾಕುತ್ತಿದ್ದರು. ಒಂದು ಕಡೆ ಫೋಟೋಸೆಷನ್!

ಬನ್ನಿ..., ನಾನೂ ನಿಮ್ಮ ಹತ್ತಿರವೇ ನಿಂತುಕೊಳ್ಳುತ್ತೇನೆ!” ಯಾವ ಕಡೆಯಿಂದ ಬಂದನೋ ಆ ವ್ಯಕ್ತಿ ನನ್ನ ಕೈಹಿಡಿದು ಎಳೆಯುತ್ತಾ ಫೋಟೋ ತೆಗೆಯುತ್ತಿದ್ದಲ್ಲಿಗೆ ನಡೆದ.

ನಾನು ಕೈ ಬಿಡಿಸಿಕೊಳ್ಳಲು ಹೆಣಗುತ್ತಾ ಎಳೆಯಲ್ಪಟ್ಟವನಂತೆ ಅತ್ತ ನಡೆದೆ. ಅಷ್ಟರಲ್ಲಿ...,

ಯಾರಾದರೂ ಒಬ್ಬರು ಬನ್ನಿ- ಸೀಟು ಖಾಲಿಯಿದೆ!” ಎಂದು ಕೂಗುತ್ತಿರುವುದು ಕೇಳಿಸಿತು.

ತಿರುಗಿ ನೋಡಿದೆ- ಬಡಿಸುತ್ತಿರುವವರು ಹೇಳುತ್ತಿದ್ದರು.

ಊಟ ಮುಗಿಸಿ ಬಂದುಬಿಡುತ್ತೇನೆ!” ಎಂದು ಹೇಳಿ ಆತನಿಂದ ಬಿಡಿಸಿಕೊಂಡು ಬಂದು ಊಟಕ್ಕೆ ಕುಳಿತೆ.

ಊಟವನ್ನು ಮುಗಿಸಿ..., ಆತ ಮತ್ತೆ ಎಲ್ಲಿ ಕಾಣಿಸಿಕೊಳ್ಳುತ್ತಾನೋ ಅನ್ನುವ ಹೆದರಿಕೆಯಿಂದಲೇ ಮನೆಯೊಳಕ್ಕೆ ನಡೆದೆ..., ಹಾರಿಣಿಗೆ ಹೇಳಿ ಹೊರಟುಬಿಡಬೇಕು!

ಮನೆಯಲ್ಲೆಲ್ಲೂ ಹಾರಿಣಿ ಕಾಣಿಸಲಿಲ್ಲ. ಫೋಟೊಸೆಷನ್ ನಡೆಯುತ್ತಿರುವಲ್ಲಿ ನೋಡಿದೆ- ಇಲ್ಲ!

ಏನು ಮಾಡಲಿ?

ಕಾಯಲೋ ಹೋಗಲೋ...!

ಹೊರಡು!” ಅನ್ನುವ ಮಾತು ಕೇಳಿ ತಿರುಗಿ ನೋಡಿದೆ.

ಮುಗುಳುನಗುತ್ತಾ ನಿಂತಿದ್ದಳು ಹಾರಿಣಿ. ಅವಳಿಗೆ ಗೊತ್ತು- ನನಗೆ ಫೋಟೋಗೆ ನಿಂತುಕೊಳ್ಳುವುದು ಇಷ್ಟವಿಲ್ಲವೆಂದು.

ಬಂದಿದ್ದು ಖುಷಿಯಾಯಿತು..., ಕಾಲ್ ಮಾಡುತ್ತೇನೆ- ಸಿಗೋಣ!” ಎಂದಳು.

ಒಂದು ಹಗ್‌ಗಾಗಿ ಮನ ಹಂಬಲಿಸಿತಾದರೂ..., ನಮ್ಮ ನಡುವಿನ ಬಾಂಧವ್ಯ..., ಮದುವೆಯಾಗಬೇಕೆನ್ನುವ ತೀರ್ಮಾನ ಇನ್ನೂ ಪ್ರಪಂಚಕ್ಕೆ ತಿಳಿಯದಾದ್ದರಿಂದ..., ಅತಿ ಕಷ್ಟದಿಂದ ಮನಸ್ಸನ್ನು ನಿಗ್ರಹಿಸಿ ಹೊರಟೆ. ಹೊರಡುವಾಗ ನನ್ನರಿವಿಲ್ಲದೆ ಬೇವಿನ ಮರದೆಡೆಗೆ ನೋಡಿದೆ.

ನಮ್ಮನ್ನೇ ನೋಡುತ್ತಾ ಆತ ನಿಂತಿದ್ದ!

ತಟ್ಟನೆ ತಿರುಗಬೇಡ..., ನಿಧಾನಕ್ಕೆ ತಿರುಗಿ ನೋಡಿ ಹೇಳು- ಯಾರದು? ಬೇವಿನ ಮರದ ಪಕ್ಕ ನಿಂತಿರೋದು?” ಎಂದು ಕೇಳಿದೆ.

ಅವಳು ನಿಧಾನಕ್ಕೆ ತಿರುಗುವಷ್ಟರಲ್ಲಿ ಆತ ನಿಧಾನಕ್ಕೆ ಅಲ್ಲಿಂದ ಮನೆಯ ಹಿಂಬಾಗಕ್ಕೆ ಹೋದ!

ಹೋದ..., ಬಿಡು..., ಹೊರಡ್ತೀನಿ!” ಎಂದು ಹೇಳಿ- ಯಾರೂ ಗಮನಿಸುತ್ತಿಲ್ಲ ಅನ್ನುವುದು ಕಂಫರ್ಮ್ ಮಾಡಿ ಅವಳ ಕೈಯ್ಯನ್ನು ಅದುಮಿ ಹೊರಟೆ.

ಗೇಟು ದಾಟಿದೆನೋ ಇಲ್ಲವೋ...,

ಫೋಟೋನೇ ತೆಗೆಸಿಕೊಳ್ಳಲಿಲ್ಲಾ? ಬನ್ನಿ- ಪ್ಲೀಸ್!” ಎಂದು ಬಲವಂತದಿಂದ ಎಳೆದುಕೊಂಡು ಹೋದ ಆತ.

ನನ್ನನ್ನು ಕಾಪಾಡಲು ಹಾರಿಣಿ ಅಲ್ಲಿರಲಿಲ್ಲ- ಒಳಗೆಲ್ಲೋ ಸೇರಿಕೊಂಡಿದ್ದಳು.

ಆತ- ನಾನು ಇಬ್ಬರೇ..., ಫೋಟೋ ತೆಗೆಸಿಕೊಂಡು ಹೊರಟೆ!

*

ಇದ್ಯಾವಾಗ ತೆಗೆಸಿಕೊಂಡ್ಯೋ? ಹೇಳಿದ್ರೆ ನಾನೂ ನಿಂತ್ಕೋತಿದ್ನಲ್ಲ?” ಅಂತ ಫೋಟೋ ಒಂದನ್ನು ವಾಟ್ಸಪ್‌ನಲ್ಲಿ ಕಳಿಸಿದಳು ಹಾರಿಣಿ.

ಒಬ್ಬನೇ ನಿಂತಿರುವ ಫೋಟೋ!

ಹೆಗಲೆಮೇಲೆ ಕೈ ಹಾಕಿ ನಿಂತಿದ್ದ ಆತ ಎಲ್ಲಿ ಹೋದ? ಎಡಿಟ್ ಮಾಡಿದ್ದಾರ?

ಆತನನ್ನು ಯಾಕೆ ಕಟ್ ಮಾಡಿದೀಯ?” ಎಂದು ಕೇಳಿದೆ.

ಯಾರನ್ನ?” ಎಂದಳು.

ಅದೇ..., ಬೇವಿನ ಮರದ ಪಕ್ಕ ನಿಂತಿದ್ದ ಅಂದಿದ್ನಲ್ಲ? ಆತ.., ಬಲವಂತವಾಗಿ ಫೋಟೋಗೆ ಎಳೆದುಕೊಂಡು ಹೋದ! ಹೆಗಲ ಮೇಲೆ ಕೈಹಾಕಿ ನಿಂತಿದ್ದ. ನಿಮ್ಮ ಮನೆಯವರೋ, ನೆಂಟರೋ ಇರಬೇಕು ಅಂದುಕೊಂಡಿದ್ದೆ!” ಎಂದೆ.

ಇವರಾ?” ಎಂದು ಫೋಟೋ ಒಂದನ್ನು ಕಳಿಸಿದಳು.

ಹೌದು! ಈತನೇ...!” ಎಂದೆ.

ಮತ್ತೆ ಮೆಸೇಜ್ ಬರಲಿಲ್ಲ- ಕಾಲ್ ಬಂತು!

ಅವಳ ಧ್ವನಿಯಲ್ಲಿ ನಡುಕ ಅತಿ ಸ್ಪಷ್ಟವಾಗಿತ್ತು...,

ಅವರು..., ಅವರು ನನ್ನ ಗಂಡ ಕಣೋ...!” ಎಂದಳು.

ತೀರ್ಕೊಂಡ್ರು ಅಂದಿದ್ಯಲ್ಲೆ?”

ಅದೇ ಅರ್ಥ ಆಗ್ತಿಲ್ಲ! ಫೋಟೋದಲ್ಲಿ ಅವರಿಲ್ಲ ಅಂದ್ರೆ ಅರ್ಥ ಮಾಡ್ಕೋ...!” ಎಂದಳು.

ಪೂಜೆ ನಡೆಯುವಾಗ ನಿನ್ನ ಪಕ್ಕವೇ ಕುಳಿತಿದ್ದರೇ...!” ಎಂದೆ.

ಅತ್ತಲಿಂದ ಮೌನ!

ಅವಳನ್ನು ಪರಿಚಯವಾದಾಗ..., ಅವಳ ಭೂತಕಾಲವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿದ್ದಳು..., ಅಕಾಲದಲ್ಲಿ ಮರಣ ಹೊಂದಿದ ಗಂಡನ ಮೇಲಿನ ಪ್ರೀತಿಯಿಂದಾಗಿ ಇದುವರೆಗೆ ಮತ್ತೆ ಮದುವೆಯಾಗದೆ ಉಳಿದಿದ್ದಳು. ನಂತರ ನನ್ನ ಕಾಟ ತಾಳಲಾರದೆ ನನ್ನೊಂದಿಗಿನ ಮದುವೆಗೆ ಒಪ್ಪಿಕೊಂಡಿದ್ದಳು. ಒಮ್ಮೆ ಆತನ ಫೋಟೋ ತೋರಿಸಲು ಬಂದಾಗ...,

ಬೇಡವೇ..., ತುಂಬಾ ಪ್ರೀತಿಸ್ತಿದ್ದೆ ಅಂದಿದೀಯ..., ಆತನ ಮುಖವೇ ನೆನಪಾದರೆ ಕಷ್ಟ!” ಎಂದಿದ್ದೆ.

ಹಾರಿಣಿ..., ಆ ಬೇವಿನ ಮರಕ್ಕೂ ಅವರಿಗೂ ಏನಾದರೂ ಸಂಬಂಧವಿದೆಯೇನೆ?” ಎಂದು ಕೇಳಿದೆ.

ಹುಂ..., ನನ್ನನ್ನು ಸುಡಬೇಡಿ..., ಹೂತು ಆ ಜಾಗದಲ್ಲೊಂದು ಬೇವಿನ ಗಿಡ ನೆಡಿ..., ನಂತರ ಅಲ್ಲಿ ಸಮಾಧಿಯಿದೆ ಅನ್ನುವುದನ್ನೂ ಮರೆತು ಎಂದಿನಂತೆ ಅದರ ಮೇಲೆಲ್ಲಾ ಓಡಾಡಿಕೊಂಡಿರಿ..., ನನ್ನ ಸಮಾಧಿಯಿದೆ ಅನ್ನುವ ಕಾರಣಕ್ಕೆ ಆ ಜಾಗಕ್ಕೆ ಪ್ರತ್ಯೇಕ ಅಸ್ಥಿತ್ವವೇನೂ ಬೇಡ- ಎಂದಿದ್ದರು!” ಎಂದಳು.

*

ಅವಳ ಸೌಂಧರ್ಯ- ಅನ್ನುವುದರ ಅರ್ಥ ಬದಲಾಗಿದೆ. ಮುಂಚಿಗಿಂತ ಚಂದ ಕಾಣಿಸುತ್ತಾಳೆ. ಮುಂಚೆಗಿಂತ ಹೆಚ್ಚಿನ ಪ್ರೀತಿಯಿದೆ. ಅವಳೊಂದಿಗೆ ನಾನಿದ್ದೇನೆ. ಇಬ್ಬರಿಗೂ ಸಂದರ್ಭದ ಪರಿಪೂರ್ಣ ಅರಿವಿದೆ. ಆಗಾಗ ಅವಳ ಮನೆಗೆ ಹೋಗುತ್ತಿದ್ದೇನೆ. ಅದೇ ಬೇವಿನ ಮರದ ಕೆಳಗೆ ಕುಳಿತು ಹುಳವಿಲ್ಲದ ಸೀಬೇಹಣ್ಣು ತಿಂದಿದ್ದೇನೆ. ಮತ್ತೆ ಒಮ್ಮೆಯೂ ಆತನ ದರ್ಶನವಾಗಿಲ್ಲ. ದರ್ಶನವಾದ ದಿನ- ಅವಳ ಬಗೆಗಿನ ನನ್ನ ಅಭಿಪ್ರಾಯ ಬದಲಾಗಿದೆ..., ಅವಳ ಸೌಂಧರ್ಯದೆಡೆಗಿನ ನನ್ನ ಗೌರವಕ್ಕೆ ಕಳಂಕ ತಟ್ಟಿದೆ..., ನನ್ನೊಳಗಿನ ವಾಂಛೆ ಹೆಡೆಬಿಚ್ಚಿದೆ ಎಂದೇ ಅರ್ಥ! ಆತನಮೇಲಿನ ಅವಳ..., ಅವಳ ಮೇಲಿನ ಆತನ ಪ್ರೇಮ ಹಾಗೆಯೇ ಇರಲಿ- ಅದಕ್ಕೆ ಸಾಕ್ಷಿಯಾಗಿ ನಾನು ಹೀಗೆಯೇ- ನನ್ನದೂ ಅಸಾಮಾನ್ಯ ಪ್ರೇಮವೇ- ಅಲಾ?!

Comments

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ದಾರಿಯಲ್ಲಿ ಸಿಕ್ಕವಳು!