ನಾನೇಕೆ ಬರೆಯುತ್ತೇನೆ?
ನಾನೇಕೆ ಬರೆಯುತ್ತೇನೆ?
ಬರೆಯದೇ ಇರಲು ನನ್ನಿಂದ ಸಾಧ್ಯವಿಲ್ಲ- ಆದ್ದರಿಂದ!!
ಎರಡು ತಿಂಗಳು ಪ್ರಯತ್ನಪೂರ್ವಕವಾಗಿ..., ನನ್ನೊಳಗೆ ಯಾವುದೇ ಹೊಸ ವಿಷಯ ಹುಟ್ಟದಂತೆ ನೋಡಿಕೊಂಡೆ! ಹೊರ ಪ್ರಪಂಚದ ಯಾವುದೇ ವಿಷಯವನ್ನು ಆಸಕ್ತಿಯಿಂದ ನೋಡಲಿಲ್ಲ- ಯೋಚಿಸಲಿಲ್ಲ! ಸುತ್ತಾಟಕ್ಕೆ ಹೋಗಲಿಲ್ಲ..., ಯಾರೊಂದಿಗೂ ವಿಷಯಾಧಾರಿತ ಮಾತುಕತೆಯಾಗಲಿಲ್ಲ..., ಚರ್ಚೆಯಿಲ್ಲ- ಯಾರನ್ನೂ ಭೇಟಿಯಾಗಲೂ ಶ್ರಮಿಸಲಿಲ್ಲ...!
ಬರೆಯಬಾರದು- ಅಷ್ಟೇ...!
ಆದರೇನು ಮಾಡುವುದು?
ನನ್ನರಿವಿಲ್ಲದೇ..., ನನ್ನ ಪ್ರಯತ್ನವನ್ನು ಮೀರಿ ಕೆಲವೊಂದು ವಿಷಯಗಳು ನನ್ನೊಳಗೆ ತುಡಿಯುತ್ತಿರುತ್ತದೆ! ಅದನ್ನು ಬರೆಯದೇ ಇರಲು ಶ್ರಮಿಸಿದಷ್ಟೂ..., ಬೇರೆ ಏನನ್ನೂ ಮಾಡಲು ನನಗೆ ಏಕಾಗ್ರತೆಯೇ ಸಿಗುವುದಿಲ್ಲ!
ಇತ್ತೀಚಿನ ದಿನಗಳಲ್ಲಿ ಓದುಗರಿಗಿಂತ ಹೆಚ್ಚು ಬರಹಗಾರರೇ ಇದ್ದಾರೆ! ಈಗ ಬರೆಯುತ್ತಿರುವ ಈ ಬರಹವನ್ನು ಕೂಡ ಸ್ಕ್ರೋಲ್‌ಮಾಡಿ-ನೋಡಿ ಮುಂದಕ್ಕೆ ಹೋಗುತ್ತಾರೆ ಹೊರತು ಓದುವುದಿಲ್ಲ ಅನ್ನುವ ಅರಿವು ನನಗಿದೆ!
ಆದರೂ ಬರೆಯುತ್ತೇನೆ- ಯಾಕೆ?
ನಾನೊಂದು ರೀತಿಯಲ್ಲಿ ಓದುಗರಿಲ್ಲದ ಕಥೆಗಾರ! ಅಥವಾ..., ಓದುಗರು ಒಪ್ಪದ ಕಥೆಗಳನ್ನು ಬರೆಯುವ ಕಥೆಗಾರ!!
ಅಷ್ಟೇ ಉತ್ತರ- ನನ್ನ ಕಥೆಗಳು/ಬರಹಗಳು ಒಳಗಿಟ್ಟುಕೊಳ್ಳಲಾರದ್ದಕ್ಕೆ ಹೊರ ಹಾಕುತ್ತೇನೆ ಹೊರತು- ಯಾರಾದರೂ ಓದಲೆಂದೋ ಓದಲೇ ಬೇಕೆಂದೋ ಅಲ್ಲ! ಓದಿದರೆ- ಓದಿ ಮೆಚ್ಚಿದರೆ, ಬೈದರೆ, ವಿಮರ್ಶೆ ಮಾಡಿದರೆ ಖುಷಿಯೇ ಹೊರತು..., ಓದಲೇ ಬೇಕೆನ್ನುವ ತುಡಿತವೋ ನಿರೀಕ್ಷೆಯೋ ನನಗಿಲ್ಲ!
ಮುಂಚೆ ಡೈರಿ ಬರೆಯುತ್ತಿದ್ದೆ- ಅದರಲ್ಲಿ ನನ್ನ ಪರ್ಸನಲ್ "ವಿಷಯ" ಏನೂ ಇರುತ್ತಿರಲಿಲ್ಲ! ಇದ್ದರೂ ಹತ್ತು ಪರ್ಸೆಂಟ್‌ಗೂ ಹೆಚ್ಚಿರುತ್ತಿರಲಿಲ್ಲ! ಹೊರ ಪ್ರಪಂಚದಬಗೆಗಿನ ನನ್ನ ವಿಶ್ಲೇಷಣೆಗಳು, ಕಲ್ಪನೆಗಳು, ಮಾನಸಿಕ ವಿಮರ್ಶೆಗಳೇ ತುಂಬಿರುತ್ತಿದ್ದವು! ಈಗ ಅದನ್ನೇ ಪಬ್ಲಿಕ್ ಆಗಿ ಕಥೆಗಳ ರೂಪದಲ್ಲಿ ಬರೆಯುತ್ತೇನೆ- ಅಷ್ಟೇ!
ಒಂದು ಸ್ಥಳ, ಒಂದು ಸಂದರ್ಭ, ಒಬ್ಬರೊಂದಿಗಿನ ಸಂಭಾಷಣೆ ನನ್ನೊಳಗೆ ನನ್ನದೇ ಆದ ಅಭಿಪ್ರಾಯಗಳನ್ನು ಮೂಡಿಸುತ್ತದೆ! ಅದನ್ನು ನಾನು ಬರೆಯುತ್ತೇನೆ! ಕೆಲವೊಮ್ಮೆ ಕೆಲವೊಂದು ಗೊಂದಲಗಳು ಮೂಡುತ್ತವೆ- ಅದನ್ನು ಹಾಗೆಯೇ ಬರೆದುಬಿಡುತ್ತೇನೆ! ಆ ಬರಹವನ್ನು ಓದಿದ ಓದುಗರ ಅಭಿಪ್ರಾಯ, ಚರ್ಚೆಯೊಂದಿಗೆ ಗೊಂದಲ ಪರಿಹಾರವಾಗುತ್ತದೆ- ಅದು ಮತ್ತೊಂದು ಬರಹವಾಗುತ್ತದೆ!
ಹರೆಯದಲ್ಲಿ ಪ್ರಪಂಚ ಪೂರ್ತಿ ಕೆಟ್ಟದ್ದಾಗಿಯೇ ಕಾಣಿಸುತ್ತಿತ್ತು- ಆಗಿನ ನನ್ನ ಬರಹಗಳೂ ಅದಕ್ಕೆ ಅನುಗುಣವಾಗಿದ್ದವು! ನಂತರ ತತ್ತ್ವಗಳು, ಆದ್ಯಾತ್ಮ, ಮನಃಶ್ಶಾಸ್ತ್ರ....! ಇತ್ತೀಚೆಗೆ ಅಸಹಜ (ಹಾರರ್ ಅನ್ನಬಹುದೇ?) ಕಥೆಗಳು..., ನಂತರ ಗೆಳೆಯರೊಂದಿಗಿನ..., ಅದರಲ್ಲೂ ಹೆಚ್ಚಾಗಿ ಗೆಳತಿಯರೊಂದಿಗಿನ ಸಂಭಾಷಣೆ, ವಿಶ್ಲೇಷಣೆಗಳು ಕಥೆಗಳಾಗುತ್ತದೆ.
ಇದೆಲ್ಲ ಯಾಕೆ ಬರೆಯುತ್ತೇನೆ?
ನನ್ನೊಳಗೆ ಏನೂ ಉಳಿದಿರಬಾರದು ಅನ್ನುವ ಕಾರಣಕ್ಕೆ!
ಬರೆದು ಹೊರಹಾಕಿಬಿಡಬೇಕು- ಅಷ್ಟೇ ಹೊರತು ಕನ್ನಡದ ಸೇವೆ, ಸಾಹಿತ್ಯ ಸೇವೆ, ಏನೋ ಮಹಾ ಸಾಧನೆ ಅನ್ನುವಂತೆ ಅಲ್ಲ. ನನಗೆ ಗೊತ್ತಿರುವುದೇ ಕನ್ನಡ! ಬರೆದರೆ ಕನ್ನಡದಲ್ಲಿಯೇ ಬರೆಯಬೇಕು! ಬರಹ ರಕ್ತಗತವಾದ್ದರಿಂದ ಬರೆಯದೆಯೂ ಇರಲಾರೆ ಅನ್ನುವಾಗ..., ಈ ಕನ್ನಡಸೇವೆ, ಸಾಹಿತ್ಯ ಸೇವೆ ಅನ್ನುವುದರ ಅರ್ಥ ನನಗಾಗುವುದಿಲ್ಲ!
ಇನ್ನೂ..., ಪುಸ್ತಕಗಳು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾದರೆ ನನಗೆ ಲಾಭವೇ ಹೊರತು ಕನ್ನಡ ಸೇವೆ ಹೇಗೆ ಅನ್ನುವುದು ಅರ್ಥವೇ ಆಗುವುದಿಲ್ಲ!!
ಓದುಗರು..., ಬರಹಗಾರರನ್ನು ಕ್ಯಾಟಗರೈಸ್ ಮಾಡುವಂತೆ- ಸಸ್ಪೆನ್ಸ್ ಬರೆಯುವವ, ಕೌಟುಂಬಿಕ ಬರೆಯುವವ, ಸಾಮಾಜಿಕ ಬರೆಯುವವ, ಸೈಕಲಾಜಿಕಲ್ ಬರೆಯುವವ- ಅನ್ನುವಂತೆ..., ನಾನು ಕೂಡ ಓದುಗರನ್ನು ಅವರ ಅಭಿಪ್ರಾಯಕ್ಕೆ ಅನುಗುಣವಾಗಿ ವಿಶ್ಲೇಷಿಸುತ್ತಿರುತ್ತೇನೆ!
ಓ ಇವರು ಕೌಟುಂಬಿಕ ಇಷ್ಟಪಡುವವರು, ಇವರಿಗೆ ಸಸ್ಪೆನ್ಸ್ ಬೇಕು, ಇವರಿಗೆ ಥ್ರಿಲ್ಲರ್ ಇಷ್ಟ... ಓ ಇವರು ತುಂಬಾ ಇಮೋಷನಲ್...!
ಎಲ್ಲರನ್ನೂ ತೃಪ್ತಿಪಡಿಸುವಂತೆ ಒಂದೇ ಪುಸ್ತಕದಲ್ಲಿ ಬರೆಯಲಾಗದು! ಕೆಲವೊಮ್ಮೆ ಎಲ್ಲಾ ವಿಷಯಗಳು ಇದ್ದರೂ..., ಸಂದರ್ಭಕ್ಕೆ ತಕ್ಕಂತೆ ಹೆಚ್ಚೋ ಕಡಿಮೆಯೋ ಆಗಿರುತ್ತದೆ! ಅದು ಎಲ್ಲಾ ಓದುಗರನ್ನೂ ತೃಪ್ತಿಪಡಿಸಬೇಕೆಂದಿಲ್ಲ!
ಎರಡೇ ಪುಸ್ತಕದೊಂದಿಗೆ ನನ್ನಲ್ಲಿನ ಸತ್ವ ಮುಗಿಯಿತು ಅನ್ನುವುದು ಬೇರೆ ವಿಷಯ!!
ಇನ್ನೊಂದು ಪುಸ್ತಕ ಬರೆಯಬೇಕೆಂದರೆ ನನಗೆ ಐದಾರು ವರ್ಷವಾದರೂ ಬೇಕು!
ಒಂದು ಕಥಾವಸ್ತು ಮನಸ್ಸಿನಲ್ಲಿ ಮೂಡಿದಾಗ..., ಆ ವಸ್ತುವಿಗೆ ಸಂಬಂಧಿಸಿದ ವಿಷಯಗಳನ್ನು ಕಲೆಹಾಕಬೇಕು, ಅದಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಹೋಗಬೇಕು, ವ್ಯಕ್ತಿಗಳನ್ನು ಪರಿಚಯವಾಗಬೇಕು, ಆ ಸ್ಥಳಕ್ಕೆ ಸಂಬಂಧಿಸಿದ ಭಾಷೆಯ ಕೆಲವೊಂದಾದರೂ ಪದಗಳನ್ನು- ವಾಕ್ಯಗಳನ್ನು ಕಲಿಯಬೇಕು... ಆ ವಸ್ತುವಿಗೆ ಸಂಬಂಧಿಸಿದ ಇತಿಹಾಸದ ಅಧ್ಯಯನವಾಗಬೇಕು... ಹೇಗೆ ಶುರುಮಾಡುವುದು, ಹೇಗೆ ಬೆಳೆಸುವುದು, ಹೇಗೆ ಮುಕ್ತಾಯ ಮಾಡುವುದು ಅನ್ನುವುದರ ಪ್ಲಾನ್ ರೆಡಿ ಮಾಡಬೇಕು...!
ಇದು ನನ್ನ ಕಷ್ಟ!
ಆದರೆ ಇತ್ತೀಚಿನ ದಿನಗಳಲ್ಲಿ ಎಷ್ಟೋ ಲೇಖಕರು ಬರೆಯುವ ವೇಗವನ್ನು ಕಂಡರೆ ಆಶ್ಚರ್ಯವಾಗುತ್ತದೆ!
ವರ್ಷಕ್ಕೆ ಮೂರೂ ನಾಲಕ್ಕು ಪುಸ್ತಕಗಳು!!
ಕುತೂಹಲವಾಗುತ್ತದೆ..., ಏನು ಬರೆಯುತ್ತಾರೆ ಇಷ್ಟೊಂದು- ಎಂದು! ಕೊಂಡು ಓದಿದಾಗ ಆಗುವ ನಿರಾಸೆ...!
ಹೊಸದೇನೂ ಇರುವುದಿಲ್ಲ..., “ತನ್ನತನ" ಅನ್ನುವುದು ಇರುವುದೇ ಇಲ್ಲ! ಮೊದಲ ಪುಟ ಓದುವಾಗಲೇ ಪರಿಪೂರ್ಣ ಪುಸ್ತಕದಲ್ಲಿ ಏನಿದೆಯೆಂದು ಹೇಳಿಬಿಡಬಹುದು..., ಇನ್ನೂರು- ಮುನ್ನೂರು ಪುಟಗಳ ಪುಸ್ತಕವನ್ನು ಅರ್ಧಗಂಟೆಯ ಒಳಗೆ ಓದಿ ಮುಗಿಸಬಹುದು! ಓದದಿದ್ದರೂ ಆಗುತ್ತದೆ- ಅನ್ನುವಂತ ಪುಸ್ತಕಗಳು!!
ಕೇವಲ ಮಾರಾಟ ಮಾಡಲು ಪುಸ್ತಕ ಬರೆಯುವುದಕ್ಕೂ ನಮ್ಮೊಳಗಿನ ತುಡಿತದಿಂದ ಬರೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ!
ಬರೆಯುವಾಗಲೇ..., 'ಇಷ್ಟು' ಪುಟದ ಪುಸ್ತಕಕ್ಕೆ 'ಇಷ್ಟು' ಖರ್ಚಾಗುತ್ತದೆ! ಪುಸ್ತಕದ ರೇಟು 'ಇಷ್ಟು' ಇಟ್ಟರಾಯಿತು! ಸಾವಿರ ಕಾಪಿ ಪ್ರಿಂಟ್ ಹಾಕಿಸಿದರೆ..., ಮುನ್ನೂರು ಕಾಪಿ ಲೈಬ್ರರಿಗಾಗಿ ಸರ್ಕಾರ ಕೊಂಡುಕೊಳ್ಳುತ್ತದೆ- ಹಾಕಿದ ದುಡ್ಡು ಬಂತು! ನಂತರ ನೂರೈವತ್ತು ಕಾಪಿ ಸಾಹಿತ್ಯ ಪರಿಷತ್ತಿಗೆ..., ಉಳಿದದ್ದು ತಮ್ಮಲ್ಲಿರುವ ಕಾಂಟ್ಯಾಕ್ಟ್‌ಗೆ ಹಂಚಿಬಿಟ್ಟರೆ ಸಾಕು! ಒಂದು ಪುಸ್ತಕದ ದುಡ್ಡು ಕೊಡದಿರುತ್ತಾರ- ಅನ್ನುವ "ಸ್ಟ್ರಾಟಜಿ!”
ಪುಸ್ತಕ ಓದುತ್ತಾರ? ಅಭಿಪ್ರಾ ತಿಳಿಸುತ್ತಾರ?
ಬೇಕಾಗಿಲ್ಲ- ಮಾರಾಟವಾದರೆ ಸಾಕು!!
ಇದೊಂದು ರೀತಿಯಲ್ಲಿ ಓದುಗರಿಗೆ ಮಾಡುವ ದ್ರೋಹ! ನಾನೊಬ್ಬ ಓದುಗ..., ದಿನಕ್ಕೆ ನೂರು ಪುಟವಾದರೂ ಓದದಿದ್ದರೆ ನೆಮ್ಮದಿ ಇರುವುದಿಲ್ಲ ಅನ್ನುವಷ್ಟು ಮಟ್ಟಿಗೆ ಓದಿಗೆ ಆಡಿಕ್ಟ್ ಆಗಿರುವ ಓದುಗ! ಹಾಗಿರುವಾಗ- ಓದುವ ಪುಸ್ತಕಗಳೆಲ್ಲಾ ಮುಂಚೆಯೇ ಓದಿರುವಂತೆ ಅನ್ನಿಸಿದರೆ ಹೇಗಾಗಬೇಡ?! ಹೊಸ ಹುಡುಗರು ಏನೋ ಬರೆದಿರುತ್ತಾರೆ ಅಂದುಕೊಂಡು ಓದಿದರೆ..., ಹತ್ತಕ್ಕೆ ಒಂಬತ್ತು ಪುಸ್ತಕಗಳು ಕಾಟಾಚಾರಕ್ಕೆ ಬರೆದಿರುತ್ತಾರೆ! ಒಂದು ಒಳ್ಳೆಯ ಪುಸ್ತಕ ಓದಲು ಒಂಬತ್ತು ಬಾಲಿಶವಾದ ಪುಸ್ತಕಗಳನ್ನು ಓದಬೇಕೆನ್ನುವುದು ಅಸಹನೆಯ ವಿಷಯ! ಒಟ್ಟೊಟ್ಟಿಗೆ ಪುಸ್ತಕಗಳು ಬರುವುದರಿಂದ ಸತ್ವ ಇರುವ ಪುಸ್ತಕಗಳು ತೆರೆಮರೆಗೆ ಹೋಗಿಬಿಡುತ್ತದೆ!
ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ..., ಈ ಒಂದು ವರ್ಷದಲ್ಲಿ ಸುಮಾರು ಇನ್ನೂರು ಪುಸ್ತಕಗಳನ್ನು ಓದಿದೆ! ಅದರಲ್ಲಿ ಹಿಡಿಸಿದ್ದು ಹತ್ತೋ ಹದಿನೈದೋ ಪುಸ್ತಕಗಳು ಮಾತ್ರ- ಹಿಂದಿನ ತಲೆಮಾರು ಬರೆದದ್ದು!!
ಈಗಿನವರು ಬರೆದ ಪುಸ್ತಕಗಳೆಲ್ಲಾ- ಹಿಂದಿನವರ ಜಾಡೇ...! ಹೊಸತೇನೂ ಇಲ್ಲವೇ ಇಲ್ಲ! ಯಾವ ಪುಸ್ತಕವನ್ನು ಓದಿದರೂ ಇದನ್ನು ಮುಂಚೆಯೇ ಓದಿದ್ದೇನೆ ಅನ್ನಿಸತ್ತದೆ! ಎಲ್ಲೋ ಕೆಲವರು ಸ್ವಲ್ಪ ಪ್ರೋತ್ಸಾಹ ಸಿಕ್ಕರೆ ಬೆಳೆಯುವವರಿದ್ದಾರಾದರೂ- ಅವರ ಪುಸ್ತಕಗಳು ತಲುಪಬೇಕಾದವರಿಗೆ ತಲುಪುವುದಿಲ್ಲ- ಅವರು ಮಾರಾಟವೇ ಉದ್ದೇಶವಾಗಿ ಬರೆದವರೂ ಆಗಿರುವುದಿಲ್ಲ!!
ಜೊತೆಗೆ ಈಗಿನವರಿಗೆ..., ಅವರ ಬೆಳವಣಿಗೆಗೋಸ್ಕರ, ಅವರ ಬರಹವನ್ನು ಉತ್ತಮ ಪಡಿಸಲೋಸ್ಕರ ನಾವು ಕೊಡುವ ಸಲಹೆಗಳು- ವಿಮರ್ಶೆಗಳು- ಪುಸ್ತಕದಲ್ಲಿರುವ ನಕಾರಾತ್ಮಕ ಅಂಶಗಳಬಗ್ಗೆ ಹೇಳುವ ಅಭಿಪ್ರಾಯಗಳು ಬೇಕಾಗೂ ಇಲ್ಲ! ಅಭಿಪ್ರಾಯಗಳೇ ಬೇಕಾಗಿಲ್ಲ!! ಅಭಿಪ್ರಾಯ ಹೇಳುವ ಹಾಗಿದ್ದರೆ ಹೊಗಳುವಂತೆ ಮಾತ್ರ ಹೇಳಿ ಅನ್ನುವ ಕ್ಯಾಟಗರಿಯವರು!
ಒಬ್ಬರಂತೂ ಅವರ ಎರಡನೆಯ ಪುಸ್ತಕ ಕೊಡುವಾಗಲೇ ಹೇಳಿದ್ದರು..., ನಿಮ್ಮ ಅಭಿಪ್ರಾಯ ಕೇಳುವುದಿಲ್ಲ- ಎಂದು!!
ಮೊದಲ ಪುಸ್ತಕಕ್ಕೆ ನಾನು ಕೊಟ್ಟ ರಿವ್ಯೂವಿನ ಪರಿಣಾಮ...!
ಪುಸ್ತಕ ಯಾಕೆ ಕೊಟ್ಟರು?
ನಾನು ಕೊಟ್ಟ ನನ್ನ ಪುಸ್ತಕಕ್ಕೆ ಬದಲಾಗಿ...!! ಪುಸ್ತಕಕ್ಕೆ ಪುಸ್ತಕ!
ನನಗೋ..., ನನ್ನ ಪುಸ್ತಕಗಳಬಗ್ಗೆ ಅಭಿಪ್ರಾಯ ಬೇಕು- ಎಷ್ಟು ಕೆಟ್ಟ ಅಭಿಪ್ರಾಯವಾದರೂ!!
ಅವರು ಪುಸ್ತಕವನ್ನು ಓದುವುದೇ ಇಲ್ಲ- ಶೇಖರಿಸಿ ಇಟ್ಟುಕೊಳ್ಳುವುದಷ್ಟೇ!!
ಕೆಲವು ಬರಹಗಾರರ ಒಂದಕ್ಕಿಂತ ಹೆಚ್ಚಿನ ಪುಸ್ತಕ ಓದುವಾಗ ಆಗುವ ಇರಿಟೇಷನ್ ಇದೆಯಲ್ಲಾ...! ಪುಸ್ತಕವನ್ನು ತೂಕಕ್ಕೆ ಹಾಕಲೂ ಮನಸ್ಸು ಬರುವುದಿಲ್ಲ- ಸುಟ್ಟು ಬಿಡಬೇಕು ಅನ್ನಿಸುತ್ತದೆ!!
ಯಾರಿಗೂ ನಿಜ ಬೇಡ! ವಾಸ್ತವ ಬೇಡ! ತಮ್ಮ ಇಚ್ಛೆಗೆ ವಿರುದ್ಧವಾದದ್ದು ಬೇಡವೇ ಬೇಡ!!
ಹಾಗೆಂದು ಉತ್ತಮವಾದ ಪುಸ್ತಕಗಳೇ ಬರುತ್ತಿಲ್ಲವೇ?
ಖಂಡಿತಾ...! ಆ ಪುಸ್ತಕಗಳನ್ನು ಓದುವಾಗ..., ಆ ಲೇಖಕರ ಅಧ್ಯಯನ- ನಿಷ್ಠೆಗಳನ್ನು ನೋಡುವಾಗ..., ಕೊಂಡು ಓದುವ ಓದುಗರಿಗಾಗಿ ಅವರು ಪಟ್ಟ ಶ್ರಮದ ದರ್ಶನವಾದಾಗ..., ನನ್ನರಿವಿಲ್ಲದೆಯೇ ಆ ಲೇಖಕರಬಗ್ಗೆ ಅಭಿಮಾನ ಗೌರವಗಳು ಮೂಡುತ್ತದೆ...
ಇದು..., ಬರಹಗಾರರ ಮತ್ತು ಅವರ ಬರಹವನ್ನು ಓದಿ ಅಭಿಪ್ರಾಯ ಹೇಳುವ ಓದುಗರ ಆತ್ಮಸಾಕ್ಷಿಗೆ ಸಂಬಂಧಿಸಿದ ವಿಷಯ!
ಇತ್ತೀಚಿನ ದಿಗಳಲ್ಲಿ ಪ್ರಶಸ್ತಿಗಳವಿಷಯ ಮಾತನಾಡದಿರುವುದೇ ಒಳ್ಳೆಯದು!
ಇಷ್ಟೇ! ಹೇಳಬೇಕು ಅನ್ನಿಸಿತು- ಹೇಳಿ ಮುಗಿಸಿದೆ!
Comments
Post a Comment