ಹೃದಯ!
ಹೃದಯ!
೧
ಹೃದಯವನ್ನು ಇಣುಕಿದೆ!
ನನಗೇನೋ ನಾನು ಒಳ್ಳೆಯವನಂತೆಯೇ ಕಂಡೆ!
ಆದರೆ…,
೨
“ಲೋ…!”
“ನ್ತದೆ ನಿಂದು ಸಾವು!”
“ನನಗೋಸ್ಕರ…!”
“ನ್ತ?”
“ಒಂದು ಕಥೆ ಬರಿ!”
“ನಿನಗೋಸ್ಕರವೋ…, ನಿನ್ನ ಕಥೆಯೋ?”
“ಬರೆಯಬಹುದಾದರೆ- ನನ್ನ ಕಥೆಯನ್ನೇ ಬರೆದುಬಿಡು!”
೩
ಯಾವೊಂದು ಹೆಣ್ಣಿನ ಕಥೆಯನ್ನು ಅಷ್ಟು ಸುಲಭದಲ್ಲಿ ಬರೆಯಲಾಗುವುದಿಲ್ಲ!
ಯಾಕೆ?
ಹೊರಗಿನಿಂದ ಕಾಣುವ ಹೆಣ್ಣಲ್ಲ- ಹೃದಯದಿಂದ!
ಆದರೂ….,
೪
“ಅಕೌಂಟ್ ಚೆಕ್ ಮಾಡ್ಕೊ! ಅಮೌಂಟ್ ಹಾಕಿದೀನಿ!” ಎಂದಳು.
ಗೊಂದಲದಿಂದ ನೋಡಿ…,
“ಯಾಕೆ?” ಎಂದೆ.
“ನಿನಗೆ ನೀಡ್ ಇದೆ ಅಂದ್ಯಲ್ಲೋ?!”
“ಅದಕ್ಕೆ?”
ಅವಳೇನೂ ಹೇಳಲಿಲ್ಲ.
“ನೀಡ್ ಇದೆ ಅಂದೆ! ನೀನು ಕೊಡು ಅಂದ್ನ?” ಎಂದೆ.
“ನನ್ಹತ್ರ ಇದ್ರು ನಿನ್ಹತ್ರ ಇದ್ರೂ ಒಂದೇ ಅಲ್ವೇನೋ…?” ಎಂದಳು.
“ನಿನ್ಹತ್ರ ಇರುತ್ತೆ!” ಎಂದೆ.
ಮುಗುಳುನಕ್ಕು…,
“ನಿನ್ನ ಅಗತ್ಯ ನಡೆಯಲಿ!” ಎಂದಳು.
“ಯಾವ ಧೈರ್ಯದಲ್ಲಿ ಕೊಟ್ಟೆ?” ಎಂದೆ.
“ಮೋಸ ಹೋಗುವುದೇ ವಿಧಿಯಾದರೆ ನಾನೇನು ಮಾಡಲಿ? ನಂಬಿದ್ದೇನೆ- ಅಷ್ಟೆ!”
“ಬೇಕೆಂದೇ ಮೋಸ ಮಾಡುವುದಿಲ್ಲ! ಆದರೆ…, ಹೇಗೆ ಮರಳಿಸಲಿ?”
“ದುಡ್ಡಿನ ಚಿಂತೆ ಬಿಡು!” ಎಂದಳು.
“ನಿನಗೋಸ್ಕರ ಏನು ಮಾಡಲೆ?”
“ಮಾಡಿದ್ದೀಯ! ಮಾಡುತ್ತಿದ್ದೀಯ! ಹೀಗೇ ಇದ್ದುಬಿಡು- ಸಾಕು!” ಎಂದಳು.
ಅರ್ಥವಾಯಿತು!
ಪ್ರೇಮ!
ಒಂದಿಷ್ಟು ಪ್ರೇಮಕ್ಕಾಗಿ ಪರಿತಪಿಸುವಾಗ ಅವಳಿಗೆ ನಾನು ಸಿಕ್ಕಿದ್ದೆ!
ಆದರೆ…,
ಆ ಪ್ರೇಮಕ್ಕೆ ಬದಲಾಗಿ ಇದು- ಇದಕ್ಕಾಗಿಯೇ ಪ್ರೇಮ ಎಂದಾಗುತ್ತದೆಯೇ…?
೫
ಬದುಕೊಂದು ಅಲೆ!
ಮನುಷ್ಯನ ಮನಸ್ಸೂ ಅದಕ್ಕೆ ಅನುಗುಣವೇ…!
ಏರಿಕೆಯಲ್ಲಿರುವಾಗ ಒಂದು- ಇಳಿತದಲ್ಲಿರುವಾಗ ಒಂದು!
ಇಲ್ಲಿ ಯಾರು ತಪ್ಪು ಅಥವಾ ಯಾರು ಸರಿ ಅನ್ನುವುದಲ್ಲ ಸಮಸ್ಯೆ!
ವ್ಯತ್ಯಸ್ತವಾದ ಮತ್ತು ಬದಲಾದ ಪರಿಸ್ತಿತಿ!
ಆರ್ಥಿಕವಾಗಿ ನಾನು ದರಿದ್ರನಾಗಿದ್ದೆ- ಅವಳು ಸಿರಿವಂತೆ!
ಪ್ರೇಮದಲ್ಲಿ…?
ಹಲವು ವರ್ಷದ ತಪನೆ!
ತನ್ನ ಪ್ರೇಮಿಯಿಂದ ನೊಂದು- ನರಕಮಯ ಬದುಕಿನಿಂದ ಮುಕ್ತಿಹೊಂದಲು ಹೊರಟಿದ್ದಳು!
ಮರಣದಿಂದ ಕಾಪಾಡಿ…,
ತೆರೆದ ಮನದಿಂದ ಸ್ವೀಕರಿಸಿದೆ!
ಆರ್ಥಿಕವಾಗಿ ದೃಢ ಹೊಂದುವಂತೆ ಮಾಡಿದಳು!
ಈಗ…?
ನಾ ಬದಲಾದೆನೆ…?
ಅಲ್ಲ…!
ಪರಿಸ್ತಿತಿ ಬದಲಾಯಿತು!
ಅವಳ ಮೊದಲ ಪ್ರೇಮ ಅವಳಿಗೆ ಮರಳಿ ದೊರೆಯಿತು!
ನನ್ನಿಂದ ದೂರ ಹೋದಳು!
೬
ಆರ್ಥಿಕವಾಗಿ ನಾನು ದೃಢಗೊಂಡಿದ್ದೆ!
ಪ್ರೇಮದಲ್ಲಿ?
ಆಗ…,
ಇವಳ ಪ್ರವೇಶವಾಯಿತು!
ಆರ್ಥಿಕವಾಗಿ ಇವಳು ಬಡವಳೇ… ಆದರೆ ಪ್ರೇಮದಲ್ಲಿ?
ಅನಂತ!
ಮುಳುಗಿಸಿದಳು!
ಅದೊಂದು ಹೃದಯ ದ್ರವ- ಇವಳ ಪ್ರೇಮ!
ಮುಳುಗಿದಷ್ಟೂ ಆಳಕ್ಕೆ ಮುಳುಗಬೇಕೆನ್ನಿಸುವ- ವಿಸ್ತಾರಗೊಳ್ಳುವ ದ್ರವ!
೭
ಬದುಕೊಂದು ಚಂಡಮಾರುತ!
ತನ್ನ ಮೊದಲ ಪ್ರೇಮ ದೊರಕಿದನೆಂದು ಮರಳಿ ಹೋದ ಅವಳ ಪ್ರೇಮ ಅವಳನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸಿತು!
ಅವನಿಗೆ ಉಪಯೋಗಕ್ಕೆ ಬರದ ಅವಳ ಪ್ರೇಮವೂ ಉಳಿಯಲಿಲ್ಲ!
ನನ್ನ ಬಳಿಗೆ ಮರಳಿದಳು!
ಈಗಲೂ ಅವಳಿಗೇನೂ ಹಣದಮೇಲೆ ವ್ಯಾಮೋಹವಿಲ್ಲ!
ಬೇಕಿರುವುದು ಮುಂಚೆ ನನ್ನಿಂದ ದೊರೆತ ಅದೇ ಪ್ರೇಮ!
೮
ನನ್ನೊಳಗೆ ಇಣುಕಿದೆ!
ಏನು ತೀರ್ಮಾನ ತೆಗೆದುಕೊಂಡರೂ ನಾನೇನೂ ಕೆಟ್ಟವನಲ್ಲ!
ಆದರೆ…,
ಇಬ್ಬರನ್ನೂ ಒಳಗೊಳ್ಳುವುದು ಅನ್ನುವುದು…,
ಆ ಇಬ್ಬರು ಹೆಣ್ಣಿಗೆ- ವೈಯುಕ್ತಿಕವಾಗಿ…?
೯
“ಇದು ನನ್ನ ಕಥೆಯೇ?” ಎಂದಳು.
“ನೀನಿಲ್ಲವೇನು?”
“ಇದು ನಾನೂ ಇರುವ ಕಥೆ!” ಎಂದಳು.
“ಹಾ…! ಅವಳೂ ಕಥೆ ಬರೆಯಲು ಹೇಳಿದ್ದಳು!” ಎಂದೆ.
“ಎಲ್ಲಿದ್ದಾಳೆ ಈಗ?”
“ಗೊತ್ತಿಲ್ಲ! ಅವಳಿಗೆ ನೀನೂ…!” ಎಂದೆ.
೧೦
ಈಗ…,
ಪ್ರೇಮ ನಿಜವೇ ಆದರೆ…,
ಇಲ್ಲಿ ನನ್ನ ಧರ್ಮವೇನು?
Comments
Post a Comment