Posts

Showing posts from May, 2026

(ಟೈಟಲ್ ಇಲ್ಲದ ಕಥೆ!)

ಗಡಿಬಿಡಿಯಲ್ಲಿ ಓಡಿ ಬಂದೆ. ಬಾಗಿಲ ಕಡೆಯೇ ನೋಡುತ್ತಾ ಕುಳಿತಿದ್ದಾಳೆ. ಹನ್ನೆರಡು ಗಂಟೆಗೆ ತಲುಪುತ್ತೇನೆ ಅಂದಿದ್ದೆ. ಹನ್ನೆಡರು ಗಂಟೆ ಹತ್ತು ಸೆಕೆಂಡ್ ಆಗಿಬಿಟ್ಟಿದೆ! ಮಹಾಪರಾಧ! “Sorry sorry sorryyyy” ಅನ್ನುತ್ತಲೇ ಬಂದೇ..! ಮುಖ ಊದಿಸಿದಳು. ಜೇಬಿನಿಂದ- ಸರ್‌ಪ್ರೈಸ್ ಆಗಿ ಕೊಡಲು ತಂದಿದ್ದ ಡೈಮಂಡ್ ರಿಂಗ್ ಹೊರತೆಗೆದೆ. ಮುಖ ತಿರುಗಿಸಿದವಳನ್ನು ಬಲವಂತದಿಂದ ನನ್ನೆಡೆಗೆ ತಿರುಗಿಸಿ..., “ಐ ಲವ್‌ ಯು! ವಿಲ್‌ಯು ಮ್ಯಾರಿ ಮಿ?” ಎಂದೆ. “ನನ್ನ ಮೇಲೆ ನಿನಗೆ ಒಂದು ಚೂರೂ ಪ್ರೀತಿಯಿಲ್ಲ!” ಎಂದಳು. “ಏನೆ ಹೀಗಂತಿದೀಯ? ಇದುವರೆಗಿನ ನನ್ನ ಪರಿಚಯದಲ್ಲಿ ಹಾಗನ್ನಿಸಿತಾ?” ಎಂದೆ. “ಎಷ್ಟು ಹೊತ್ತಿನಿಂದ ಕಾಯ್ತಿದೀನಿ ಗೊತ್ತಾ?” ಎಂದಳು. “ಕರೆಕ್ಟಾಗಿ ಹನ್ನೆರಡು ಗಂಟೆಗೆ ಬರ್ತೀನಿ ಅಂದಿದ್ನಲ್ಲೆ?” ಎಂದೆ. “ಬಂದ್ಯ?” ಒಂದೇ ಪ್ರಶ್ನೆ! ಹತ್ತು ಸೆಕೆಂಡ್ ತಡವಾಗಿದ್ದನ್ನೇ ಕಾರಣವಾಗಿಸಿದ್ದಾಳೆ! ಏನು ಮಾಡುವುದು? ಅವಳನ್ನೇ ಕೇಳಿದೆ..., “ಸರಿ ಈಗ ಏನ್ ಮಾಡ್ಲಿ? ಏನ್‌ ಮಾಡಿದ್ರೆ ನನ್ನ ಪ್ರೀತೀನ ನಂಬ್ತೀಯ?” ಎಂದೆ. “ನಿನ್ನ ಹೃದಯವನ್ನು ಕೊಡು!” ಎಂದಳು. ಎದೆಯನ್ನು ಬಗೆದು ಹೃದಯವನ್ನು ಹೊರತೆಗೆದು ಕೊಟ್ಟೆ...! “ಇದೆಂತ? ಕೆಂಪು ಬಣ್ಣ ಹಾಕಿದ ಸ್ಪಾಂಜ್ ಕೊಟ್ಟಿದೀಯ? ನಾನು ಕೇಳಿದ್ದು ಹೃದಯ!” ಎಂದಳು. ಮೂಕ ವಿಸ್ಮಿತನಾಗಿ ಕುಸಿದುಬಿದ್ದೆ!

ಪ್ರೇಮ, ವ್ಯಕ್ತಿತ್ವ ಮತ್ತು ನಂಬಿಕೆ!

ಪ್ರೇಮ:- ಎಷ್ಟು ಚಂದ ನನ್ನ ಬಂಗಾರಿ! ಅವಳ ಮುಖದ ನೆಮ್ಮದಿ- ನನ್ನ ಗೆಲುವು! ಅಂಗಾತನೆ ಮಲಗಿರುವ ನನ್ನ ಬಲಭಾಗದಲ್ಲಿ, ನನ್ನ ಎದೆಯಮೇಲೆ ತಲೆಯಿಟ್ಟು, ನನ್ನನ್ನು ಅಪ್ಪಿ ಎಷ್ಟು ಶಾಂತವಾಗಿ ನಿದ್ರಿಸುತ್ತಿದ್ದಾಳೆ! ಅವಳ ತಲೆಯಮೇಲೊಂದು ಮುತ್ತು ಕೊಟ್ಟೆ. ನನ್ನ ಬಂಗಾರಿ...., ಅವಳನ್ನು ನಾನು ಕರೆಯುವುದೇ ಹಾಗೆ! ಸುಮಾರು ಹದಿನೈದು ವರ್ಷದ ದಾಂಪತ್ಯ! ಪರಿಚಯ ಸಾಮಾನ್ಯವಾಗಿಯೇ ಆಗಿತ್ತು..., ಸಿನೆಮಾದ ಶೂಟಿಂಗ್‌ ಒಂದರಲ್ಲಿ ಇಬ್ಬರೂ ಅಸಿಸ್ಟಂಟ್ ಡೈರೆಕ್ಟರಾಗಿ ಕೆಲಸ ಮಾಡುತ್ತಿದ್ದೆವು. ಸಿನೆಮಾದಲ್ಲಿದ್ದ ಅಷ್ಟೂ ಜನರೊಂದಿಗಿನ ಅವಳ ಅಕ್ಕರೆ, ಒಲವು, ವಾತ್ಸಲ್ಯಪೂರಿತ ಒಡನಾಟ ನನ್ನನ್ನು ಸೆಳೆದಿತ್ತು. ಪರಿಚಯ..., ಗಾಢ ಪರಿಚಯವಾದಾಗ, ಅವಳಬಗ್ಗೆ ಸಣ್ಣ ಅನುಕಂಪವೂ ಮೂಡುವಂತಾ ನಿಜವೊಂದು ತಿಳಿಯಿತು! ಅವಳು ವಿಧವೆ! ಇಪ್ಪತ್ಮೂರನೇ ವಯಸ್ಸಿಗೆ ಮದುವೆಯಾಗಿ, ಇಪ್ಪತ್ತೈದನೇ ವಯಸ್ಸಿಗೆ ವಿಧವೆಯಾಗಿದ್ದಳು! ಗರ್ಬಿಣಿಯಾದ ತನ್ನ ತಂಗಿಯನ್ನುಆಂಬ್ಯುಲೆನ್ಸ್‌ನಲ್ಲಿ ಹೆರಿಗೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಗುದ್ದಿ ಆಂಬ್ಯುಲೆನ್ಸ್‌ನಲ್ಲಿದ್ದ ಅಷ್ಟೂ ಜನ ಮರಣಿಸಿದ್ದರು! ಇವಳ ಗಂಡ, ಗಂಡನ ತಂಗಿ(ಹೊಟ್ಟೆಯೊಳಗಿದ್ದ ಪಾಪುವೂ!), ತಂಗಿಯ ಗಂಡ- ಆತನ ಅಮ್ಮ ಮತ್ತು ಡ್ರೈವರ್..., ಎಲ್ಲರೂ! ನಾನು ಪರಿಚಯವಾಗುವಾಗ ಅವಳಿಗೆ ಮೂವತ್ತೊಂದು ವರ್ಷ ವಯಸ್ಸು! ನನಗೆ ಇಪ್ಪತ್ತೆಂಟು!! ಅವಳಬಗ್ಗೆ ನನಗಿದ್ದದ್ದು ಆಕರ್ಷಣೆಯ? ಅನುಕಂಪವಾ? ಪ್ರೇಮವಾ? “ನೀನು ನನಗೆ ಬೇ...